ದೊಡ್ಡರಂಗೇಗೌಡ ಕಂಡಂತೆ ‘ನೆನಪುಗಳು ಸುಳಿದಾವು’

‘ಪದ್ಮಶ್ರೀ’ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ

ಕಲಬುರಗಿ ಯುವ ಕವಯಿತ್ರಿ ಡಾ.ಶೀತಲ್ ಪ್ರಶಾಂತ್ ಅವರ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ

ದೊಡ್ಡರಂಗೇ ಗೌಡ

ಕವಿಯ ಹೃದಯ ಗಹ್ವರದಿಂದ ಮೂಡಿದ ಆರ್ದ್ರದನಿ ಕವಿತೆ! ಅದು ಆ ಅಂತರಂಗದ ಆರ್ತಧ್ವನಿಯೂ ಹೌದು. ನೊಂದು ಬೆಂದ ಮನದಾಳದ ಮಾತು ಕವಿತೆ. ಕವಯತ್ರಿ ‘ಪಿಯೂಷ’ ಅವರ (ಡಾ. ಶೀತಲ್ ಪ್ರಶಾಂತ್) ಕಿರುಗವಿತೆ ನನ್ನ ಈ ಮಾತಿಗೆ ಒಂದು ನಿದರ್ಶನ.
‘ಹುಡುಕದಿರು ನೀ ನನ್ನ
ಅಲ್ಲಿ.. ಇಲ್ಲಿ.. ಎಲ್ಲಿಯೂ!
ನಿನ್ನ ಕಣ್ಣಲ್ಲೇ ಇರುವೆ
ಜಾರಿದರೂ ಕಂಬನಿ…
ಏನಂತೆ?
ನಿನ್ನೆಲ್ಲ ನೆನಪುಗಳಲ್ಲೇ
ನಾನಿರುವೆʼ

‘ನಿನಗೆ ನಾ ಮೋಸ-
ಮಾಡಿದ ತಪ್ಪಿಗೆ,
ಶಿವನಲ್ಲಿ ಬೇಡುವೆ
ಶಾಪವ!
ಹಾಲಲ್ಲಾದರೂ ಹಾಕಲಿ
ಹಾಲಾಹಲದಲ್ಲಾದರೂ ಹಾಕಲಿ
ಮನಃಪೂರ್ವಕ ಸ್ವೀಕರಿಸುವೆ!’

ಕವಿತೆ ಅಯಾಚಿತ; ಕವಿತೆ ಸ್ವರಚಿತ; ಕವಿತೆ ಭಾವತಾಡಿತ; ಅದು ಹೃದಯಾಂತರಾಳದ ನೈಜ ತುಡಿತ-ಮಿಡಿತ, ಕವಯತ್ರಿ “ಪಿಯೂಷ”ಅವರ ಕಾವ್ಯದಲ್ಲೇ ಉದಾಹರಣೆಗಳಿವೆ:
‘ಮರೆಯಾದ ನೆನಪುಗಳು
ಇಣುಕಿಣುಕಿ ಭೋರ್ಗರೆವ ಜಲಪಾತ!
ಕೆಣಕುವವು ನನ್ನ ಚಿತ್ತ
ಕದಡುವವು, ಇನ್ನೆಲ್ಲಿ ಪ್ರಶಾಂತ?’

ಕಾವ್ಯವೆಂಬುದು ಗಿರಿ ಶೃಂಗದ ಮೇಲೆ ಬೀಸಿ ಬರುವ ತಂಗಾಳಿ; ಮುಂಜಾನೆ ಮೂಡುವ ಹೊನ್ನೇಸರ ಕಿರಣಾವಳಿ! ದುಂಬಿ ಸೋಂಕುವ ಮುನ್ನ ಪಲ್ಲವಿಸುವ ಪುಷ್ಪಾಂಜಲಿ; ಕಾಂತಾರ ಮೆಲ್ಲ ಮೆಲ್ಲನೆ ಪಿಸುಗುಡುವ ಪದಾವಳಿ! ಅಷ್ಟೇ ಏಕೆ ಕವಿ ಹೃದಯ ತುಂಬಿ ಬಂದಾಗ, ಆ ಉನ್ಮಾದದ ಭಾವ ಬೆಳಕು ರಂಗು ರಂಗಿನ ರಂಗೋಲಿ ಬರೆವ ದೀಪಾವಳಿ!

ಕಾವ್ಯದ ಉಗಮ, ಪಲ್ಲವ, ಚೆಲುವಾದ ಆಕಾರ, ಸೊಂಪಾದ ತೂಗು ಬಾಗಿನ ಚಿತ್ತಾರ ಕವಿಗೇ ಸೋಜಿಗ! ಅದಕ್ಕೆ ಬೆಲೆ ಇದೆ ಕವಿಗೆ ಈ ಜಗತ್ತಿನಾಗ! ಹನಿಗವನ ತನಿ ತನಿ ಇದ್ದರೆ ಅದಕೊಂದು ಚೆಂದ! ಅದರೊಳಗೆ ಆಂತರಿಕವಾಗಿ ಇರಬೇಕು ಛಂದ; ತನಗೆ ತಾನೇ ಭಾವದ ಜೊತೆ ಮೂಡಿ ಬರಬೇಕು ಒಂದು ಸೂಕ್ತ ಬಂಧ, ಇಲ್ಲ ಅಂದರೆ ಕವಿತೆ ಏನು ಚೆಂದ? ಅರಿ ಅಕ್ಷರಗಳ ಗುಂಪಲ್ಲ ಕವಿತೆ. ಅದರಲ್ಲಿ ಪ್ರವಹಿಸಬೇಕು ಕವಿ ಭಾವದ ವಿನೂತನ ಸರಿತೆ!

ಕವಿತೆ ಕೇವಲ ವರ್ಣಕ ಅಷ್ಟೇ ಅಲ್ಲ… ವಸ್ತುಕ ಕೂಡ! ಕವಿಗೆ ಗೊತ್ತಿದೆ ವ್ಯಂಗ್ಯ, ವಿಡಂಬನೆ, ಅಣಕ, ಕಟಕಿ, ವಿದಗ್ಧ ಭಾಷೆ! ಕವಿ ಮನಸ್ಸು ಮಾಡಿದರೆ ಬರೆಯಬಲ್ಲ ವೈನೋದಿಕ ಕವಿತೆ, ವಿನೋದ ನಮ್ಮ ಬದುಕಲ್ಲಿದೆ, ಹಾಸ್ಯ ನಮ್ಮ ಪ್ರಜ್ಞೆಯಲ್ಲೇ ಇದೆ- ಶ್ರೀಮತಿ ಶೀತಲ್ ಬರೆಯುತ್ತಾರೆ…

ನನ್ನವನೆಂದು ಬರಸೆಳೆದೆ
ಹೃದಯಕೆ ನೀ ಬರೆ ಎಳೆದೆ!
ಮನೋಜ್ಞ ಇಲ್ಲಿನ ಮಾತುಗಾರಿಕೆ! ಅನುಭವ ಎಂಥವರನ್ನೂ ಕವಿಯಾಗಿಸುತ್ತದೆ ಈ ಜಗ! ಅದೇ ಸೋಜಿಗ.
‘ಮನುಜ ನೋವಿನಲ್ಲಿಯೇ ನಲಿವನ್ನು ಕಲಿಯುತ್ತಾನೆ
ನಲಿವಿನಲ್ಲೇ ನಿನ್ನೆಯ ನೋವನ್ನು ಮರೆಯುತ್ತಾನೆ’
ಬದುಕಿನ ಏಳು-ಬೀಳುಗಳು, ಸುಖ-ದುಃಖಗಳು, ಸರಿ-ತಪ್ಪುಗಳು, ನಗು-ಅಳುಗಳು ಕವಿಯನ್ನು ಬರೆಯಲು ಒತ್ತಾಯಿಸುತ್ತವೆ. ಹೀಗಾಗಿ ಇಲ್ಲಿ ‘ಪಿಯೂಷ’ ಹೆಸರಿಗೆ ಅನ್ವರ್ಥವಾಗಿ ರಸಾನಂದದ ಪಿಯೂಷವನ್ನೇ ರಸಿಕರಿಗೆ ಉಣಬಡಿಸಿದ್ದಾರೆ!

ಇದೇ ಬರವಣಿಗೆಯ ಚೋದ್ಯ, ಮನಸ್ಸಿನ ಒಳಗಿನೊಳಗಿನ ವಿಸ್ಮಯ. ಬದುಕಿನ ಇಂಥ ಸಾವಿರದ ಆಶ್ಚರ್ಯಗಳನ್ನು ವೈದ್ಯ, ಕವಯತ್ರಿ ಡಾ. ಶೀತಲ್ ಪ್ರಶಾಂತ್ ಚಿತ್ರದುರ್ಗದ ಚಿತ್ತವತ್ತಾದ ಕೋಟೆಯಂತೆ ನುಡಿ ಚಿತ್ತಾರಗಳ ಕಟ್ಟುವಂತಾಗಲಿ.

‍ಲೇಖಕರು Admin

October 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: