ನನ್ನ ಟಾಪ್ ಟೂ ಪುಸ್ತಕಗಳು…

ರೇಖಾ ಗೌಡ

ಕೆಲವೊಂದು ಕಷ್ಟಗಳನ್ನ ಯಾರೆಂದರೆ ಯಾರಿಗೂ ಹೇಳೋಕ್ಕಾಗಲ್ಲ, ಯಾರೊಂದಿಗೂ ಹಂಚ್ಕೊಳ್ಳೋಕೆ ಆಗೋದಿಲ್ಲ. 

ಅಂಥಾ ಸಮಯದಲ್ಲಿ ಕೆಲವೇ ಕೆಲವರಿಗೆ ಹೆಗಲು ಸಿಗುತ್ತೆ ದಣಿದ ಮನಸ ಒರಗಿಸಲು, ಹೃದಯ ಸಿಗುತ್ತೆ ನೋವ ಬಗೆದು ಹಂಚಿಕೊಳ್ಳಲು! ಎಲ್ಲೋ ಅಪರೂಪಕ್ಕೆ ಯಾರೋ blessed few ಗೆ ಯಾವುದೋ ಶಕ್ತಿಯೇ ಅವರನ್ನ ಹೆಜ್ಜೆ ಹೆಜ್ಜೆಗೂ ಕಾಪಾಡೋ ಮುನ್ನಡೆಸೋ ಅನುಭವ ಆಗುತ್ತೆ!
ಆದರೆ ಎಲ್ಲರಿಗೂ ಹೆಗಲ, ಹೃದಯದ, ಅದ್ಭುತ ಶಕ್ತಿಯ ಅದೃಷ್ಟವಿರಲ್ಲವಲ್ಲ. ಅಂಥವರು ಅನಾಥ ಪ್ರಜ್ಞೆಯಲ್ಲಿ ನರಳಿ, ಕೆರಳಿ, ಹೊರಳಬೇಕಾಗುತ್ತದೆ. ನಮ್ಮನ್ನೂ ಮೀರಿದ ನೋವಿನ ಅಲೆ ಆವರಿಸಿದಾಗ, ಅದು ದಾಟಿ ಹೋಗುವವರೆಗೂ ಕಾಯುವ ಸ್ಥಿತಪ್ರಜ್ಞತೆ, ಗಟ್ಟಿತನ ಸಾಧಿಸಲು ಒಂದೇ ಜನ್ಮದಲಿ ಎಷ್ಟು ಜನುಮ ಎತ್ತಬೇಕು!

ಅದನ್ನು ಮೀರಲು, ನೋವಿನಿಂದಾಚೆ ಬರಲು ಎಲ್ಲರಿಗೂ ಆಗದೆ ಹೋಗಬಹುದು. ನಮ್ಮನ್ನು ನಾವೇ ಸಂಭಾಳಿಸಿ ನಿಂತು ಹೋರಾಡಲು ಅರಿವು, ಧೈರ್ಯ, ಅನುಭವ ಬೇಕಾಗುತ್ತೆ, ಆದ್ರೆ ಒಂದೇ ದಿನಕ್ಕೆ, ಬೇಕೆಂದಾಗ ಅವನ್ನ ಒಗ್ಗೂಡಿಸಕ್ಕೆ ಆಗೋದಿಲ್ಲ ಮತ್ತು ಕಷ್ಟ, ಆಪತ್ತು ಹೇಳಿ ಕೇಳಿ ಬರುತ್ತದಾ? ಹಾಗಾಗೇ, ಅಂಥಾ ಸಮಯದಲ್ಲಿ ನಮಗೆ ದಾರಿ ಕಾಣಿಸೋ, ಅರಿವು ಮೂಡಿಸೋ, ಧೈರ್ಯ, ಭರವಸೆಗಳ ತುಂಬುವ, ಹೃದಯಕೆ ಹುರುಪು ಹೂಡುವ, ಮನಸಿಗೆ ಮುಂಗಡವಾಗಿ ಗೆಲುವು ತುಂಬಿಕೊಡುವ ಪುಸ್ತಕಗಳ ಅವಶ್ಯಕತೆ ಬಹಳವೇ ಇದೆ!

ಅಂಥಾ ಒಂದು ಪುಸ್ತಕ ಆಧ್ಯಾತ್ಮ ಡೈರಿ, ಚೇತನಾ ತೀರ್ಥಹಳ್ಳಿಯವರದ್ದು. ಈ ಮೇಲಿನ ಅಗತ್ಯಗಳನ್ನೆಲ್ಲಾ ಪೂರೈಸುವ ನನ್ನ ಅತ್ಯಂತ ನೆಚ್ಚಿನ ಪ್ಯಾಪಿಲಾನ್ ಪುಸ್ತಕದ (ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆ) ಜೊತೆ ನೆನಪಾಗೋದು ಆಧ್ಯಾತ್ಮ ಡೈರಿ. ಈಗಾಗಲೇ ನಾಲ್ಕು ಜನಕ್ಕೆ ಕೊಟ್ಟಿದ್ದು, ಇನ್ನು ಮೇಲೆ ಪುಸ್ತಕವನ್ನ ಕಾಣಿಕೆಯಾಗಿ ಕೊಡಬೇಕಾದಾಗ ಪ್ರತಿಯೊಬ್ಬರಿಗೂ ಇದನ್ನು ಕೊಡುವ ಆಲೋಚನೆ ಇದೆ. ಪ್ರತಿಯೊಬ್ಬರೂ ಓದಬೇಕಾದ, ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳಬೇಕಾದ ಪುಸ್ತಕ ಇದೆನ್ನಲು ಪುಸ್ತಕದ ಆಳ, ವಿಷಯ ವ್ಯಾಪ್ತಿ, ಬರೆದ ಉದ್ದೇಶ, ಸದಾಶಯವೇ ಸಾಕ್ಷಿ!
ಜೀವನದಲ್ಲಿ ಭರವಸೆ ಕಳೆದುಕೊಂಡಾಗ ಮತ್ತು ಅತೀವ ದುಃಖ ಅಥವಾ ನೋವಾದಾಗ, ಆಳವಾಗಿ ವಿಷಯವನ್ನರಿಯಲೇ ಬೇಕಾದ ಅಗತ್ಯ ಬಿದ್ದಾಗ ಓದಲು ಉತ್ತಮ ಆಯ್ಕೆ ಆಧ್ಯಾತ್ಮ ಡೈರಿ, ಇಂಥಾ ಪುಸ್ತಕಗಳ ನಿಧಾನವಾಗಿ, ಧ್ಯಾನಸ್ಥ ರೀತಿಯಲ್ಲಿ ಓದಿಕೊಳ್ಳಬೇಕು, ತಿರುತಿರುಗಿ ಓದಬೇಕು, ವಿಷಯ ಅರಗಿಸಿಕೊಳ್ಳಲು ಇಲ್ಲವೇ ಅಗತ್ಯವಿದ್ದಾಗ “ಆಗಲು”!

ಗೆಳೆಯನ ಹಾಗೆ, ಗುರುವಿನ ಹಾಗೆ ಉತ್ತಮ ಪುಸ್ತಕಗಳಿದ್ದಾಗ ಯಾರು ಅನಾಥರು? ಅಂಥಾ ಪುಸ್ತಕಗಳ ಸಂಖ್ಯೆ ಮಿಗಿಲಾಗಲಿ, ಪಟ್ಟ ಪಾಡುಗಳ ಹಾಡಾಗಿಸುವ ಹೃದಯವಂತಿಕೆ ಬರಹಗಾರರಲ್ಲಿ ತುಂಬಿ ಬರಲಿ, ಹಾಗೇ ಕುಗ್ಗಿದವರ ಕಣ್ಣಿಗೆ ಕಾಣಲಿ, ಇಲ್ಲವೇ ತಿಳಿದವರು ಕಣ್ಣಿಗೆ ಬೀಳಿಸಲಿ! ಏನೂ ಮಾಡಲಾಗದಿದ್ದಾಗ ಕನಿಷ್ಠ ಇವನ್ನು ತಿಳಿದವರು ಅರ್ಹರಿಗೆ, ಅಗತ್ಯವಿರುವವರಿಗೆ ಕೊಡುವಂತಾಗಲಿ.
ಒಳ್ಳೆ ಪುಸ್ತಕಗಳಿದ್ದೂ ಕಷ್ಟಗಾಲದಲ್ಲಿ ಬಳಸಿಕೊಳ್ಳದಿದ್ದರೆ, ಬಳಸುವ ಮನಸು ಮಾಡದಿದ್ದರೆ? ನಿರ್ಲಕ್ಷ್ಯ ನಿವಾರಣೆಯಾಗಲಿ.

‍ಲೇಖಕರು Admin

April 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: