ವಿನಯ್ ಮಾಧವ್ ‘ಕ್ರೈಮ್’

ಜೋಗಿ

ಪೇಪರ್ ಓದುವವರು ಮೊದಲು ಓದುವುದು ಸೆಕೆಂಡ್ ಪೇಜ್ ಅನ್ನುತ್ತಿದ್ದರು ವೈಯನ್ಕೆ. ಅದು ಸುಳ್ಳೇನೂ ಆಗಿರಲಿಲ್ಲ. ರಾಜಕಾರಣದಲ್ಲಿ ಗಾಢವಾದ ಆಸಕ್ತಿ ಉಳ್ಳವರನ್ನು ಬಿಟ್ಟರೆ ಮಿಕ್ಕ ಮಧ್ಯಮ ವರ್ಗದ ಸತ್ರ್ಪಜೆಗಳಾದ ನಾವೆಲ್ಲ ಮೊದಲು ಕೈಗೆತ್ತಿಕೊಳ್ಳುತ್ತಿದ್ದದ್ದು ಕ್ರೈಮ್ ಪೇಜನ್ನೇ. ಅದರಲ್ಲಿ ಬರುತ್ತಿದ್ದ ಸ್ಟ್ರೇಂಜರ್ ದ್ಯಾನ್ ಫಿಕ್ಷನ್ ಥರದ ಸುದ್ದಿಗಳು ಮಧ್ಯಮ ವರ್ಗದ ನೈತಿಕತೆಯ ಆಧಾರಸ್ತಂಭಗಳು ಎನ್ನಬಹುದು.

ಮಲಮಗಳಿಂದ ತಾಯಿಯ ಕೊಲೆ, ಒಂಬತ್ತನೇ ತರಗತಿ ಹುಡುಗನಿಂದ ಬ್ಯಾಂಕ್ ದರೋಡೆ, ಗಂಡನ ವೃಷಣ ಹಿಚುಕಿ ಕೊಂದ ಪತ್ನಿ, ಮಾವನನ್ನು ಕೊಚ್ಚಿ ಕೊಂದ ಅಳಿಯ- ಮುಂತಾದ ಸುದ್ದಿಗಳು ಸಮಾಜ ಎಷ್ಟು ಕೆಟ್ಟಿವೆ ಎಂಬುದನ್ನು ಹೇಳುತ್ತಲೇ, ನಾವೆಲ್ಲ ಎಷ್ಟು ಸಂಭಾವಿತರು ಎಂಬ ಹುಸಿಗರ್ವವನ್ನೂ ನಮ್ಮಲ್ಲಿ ತುಂಬುತ್ತಿದ್ದವು.

ಈ ಕ್ರೈಮ್ ಪೇಜು ಅತ್ಯಂತ ರೋಚಕವಾಗಿ ಕಾಣುತ್ತಿದ್ದದ್ದು ಅಲ್ಲಿ ಬರುತ್ತಿದ್ದ ಸುದ್ದಿಗಳಿಂದ. ಅಂಥ ಸುದ್ದಿಗಳಿಲ್ಲದೇ ಹೋದಾಗ ಕ್ರೈಮ್ ಸ್ಚೋರಿಗಳನ್ನು ಹ್ಯೂಮನ್ ಇಂಟರೆಸ್ಟ್ ಸ್ಟೋರಿಗಳಾಗಿ ಬದಲಾಯಿಸುವ ಪ್ರಯತ್ನವನ್ನೂ ಕೆಲವರು ಮಾಡಿದರು. ‘ಪೆನ್’ ಚೆನ್ನಾಗಿದ್ದ ಕೆಲವು ಅಪರಾಧ ವರದಿಗಾರರು ಎಂಥಾ ಡಲ್ ಸ್ಟೋರಿ ಇದ್ದರೂ ಅದನ್ನು ರೋಚಕವಾಗಿಸುತ್ತಿದ್ದರು.

ಕಾನೂನಿನ ಆಳ ಬಲ್ಲ ಪತ್ರಕರ್ತರು ಸುದ್ದಿಯ ಮತ್ತೊಂದು ಆಯಾಮವನ್ನು ಓದುಗರ ಮುಂದಿಡುತ್ತಿದ್ದರು. ಹೀಗಾಗಿ ಕ್ರೈಮ್ ಪೇಜು ಪತ್ರಿಕೆಯ ಪ್ರಮುಖ ಪುಟವಾಗಿ ಕ್ರಮೇಣ ಸ್ಥಾನ ಪಡೆಯಿತು. ಸಿನಿಮಾ, ಕ್ರೈಮ್ ಮತ್ತು ಕ್ರಿಕೆಟ್- ಎಂಬ 3ಸಿಗಳು ಮಾರಾಟವಾಗುತ್ತದೆ ಎಂಬುದು ಖಾತ್ರಿಯಾಯಿತು.

ಅಂಥ ಕ್ರೈಮ್ ಜಗತ್ತಿನಲ್ಲಿ ನಾನೂ ಅಲ್ಪಸ್ವಲ್ಪ ಅಲೆದಾಡಿದವನೇ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ದಿನಕ್ಕೆ ಒಂದಾದರೂ ಕ್ರೈಮ್-ಗೆ ಸಾಕ್ಷಿಯಾಗಬೇಕಾಗಿತ್ತು. ಆ ಪತ್ರಿಕೆಯ ಬಲದಿಂದಾಗಿ ಅನೇಕ ಪೊಲೀಸ್ ಅಧಿಕಾರಿಗಳ ಪರಿಚಯವೂ ಆಗಿತ್ತು. ಅವರೆಲ್ಲ ಕ್ರೈಮ್ ಲೋಕದ ಕತೆಗಳನ್ನು ಹೇಳುತ್ತಿದ್ದರು. ಅವು ರೋಚಕತೆಯನ್ನು ಮೈಗೂಡಿಸಿಕೊಂಡು ಪ್ರಕಟವಾಗುತ್ತಿದ್ದವು. ಅದಕ್ಕೂ ಮುಂಚೆ ಮಲ್ಲಿಕಾರ್ಜುನಯ್ಯ ನಡೆಸುತ್ತಿದ್ದ ಪೊಲೀಸ್ ನ್ಯೂಸ್ ಕೂಡ ಪೊಲೀಸರ ಸಾಹಸಗಳನ್ನೂ ಕ್ರಿಮಿನಲ್ಲುಗಳ ಚರಿತ್ರೆಯನ್ನು ನಮ್ಮ ಮುಂದಿಡುತ್ತಿತ್ತು.

ನಾನೀಗ ಹೇಳಹೊರಟಿದ್ದು ವಿನಯ್ ಮಾಧವ್ ಬರೆದಿರುವ ಅರ್ಧಸತ್ಯ ಕಥಾಸಂಕಲನದ ಕುರಿತು. ಕ್ರೈಮ್ ಜಗತ್ತಿನ ಸುದ್ದಿಗಳೆಲ್ಲ ಅರ್ಧಸತ್ಯವೇ. ಅದಕ್ಕೆ ಕಾರಣ ವರದಿಗಾರನೂ ಅಲ್ಲ, ಪೊಲೀಸರೂ ಅಲ್ಲ. ಎಷ್ಟೋ ಅಪರಾಧಗಳ ನಿಜವಾದ ಕಾರಣ ಕೊನೆಗೂ ಗೊತ್ತಾಗುವುಗಿಲ್ಲ.. ಲಂಕೇಶರು ಬರೆದ ಹಾಗೆ ಹೆಣ್ಣು, ಜೂಜು ಮತ್ತು ಯುದ್ಧ ಮನುಷ್ಯಲೋಕದ ಎಲ್ಲ ಪಾತಕಗಳಿಗೂ ಕಾರಣ. ಈ ಮೂರನ್ನು ಮೀರಿದ ಕಾರಣಗಳೂ ಎಷ್ಟೋ ಸಲ ಇರುವುದುಂಟು. ರಾಜಕಾರಣ ಅಂಥದ್ದರಲ್ಲಿ ಒಂದು. ಪವರ್ ಎಂಬುದು ಮಾಯೆಯೂ ಹೌದು, ಜೂಜೂ ಹೌದು, ಕದನವೂ ಹೌದು.

ವಿನಯ್ ಮಾಧವ್ ತಾನು ಕಂಡ ಕತೆಗಳನ್ನು ಇಲ್ಲಿ ಅವು ಹೇಗೆ ನಡೆಯಿತೋ ಹಾಗೆ ನಿರೂಪಿಸುತ್ತಾ ಹೋಗಿದ್ದಾರೆ. ಅವರೊಳಗಿನ ಪತ್ರಕರ್ತ ಇಲ್ಲಿ ಕೊಂಚ ಹಿಂದಕ್ಕೆ ನಿಂತು, ಕತೆಗಾರ ಮುಂದೆ ಬಂದಿದ್ದಾನೆ. ಹೀಗಾಗಿಯೇ ವರದಿಗೆ ಇಲ್ಲಿ ಕಥಾರೂಪ ಪ್ರಾಪ್ತವಾಗಿದೆ. ಅಲ್ಲದೇ, ವಾಸ್ತವನನ್ನು ಕತೆಯಾಗಿಸುವಾಗ ಒಬ್ಬ ನುರಿತ ಕತೆಗಾರ ಬಳಸುವ ಎಲ್ಲ ಸೂತ್ರಗಳನ್ನೂ ವಿನಯ್ ಬಹಳ ಅಚ್ಚುಕಟ್ಟಾಗಿಯೇ ಬಳಸಿದ್ದಾರೆ. ಈ ಘಟನೆಗಳು ಗೊತ್ತಿದ್ದವರಿಗೆ ಇವು ವಾಸ್ತವ, ಗೊತ್ತಿಲ್ಲದವರಿಗೆ ಕಾಲ್ಪನಿಕ.

ಹೀಗೆ ಏಕಕಾಲಕ್ಕೆ ವರ್ತಮಾನವೂ ಚರಿತ್ರೆಯೂ ಆಗುವಂತೆ ಬರೆಯುವುದು ಕಷ್ಟದ ಕೆಲಸ. ಅದರಲ್ಲಿ ವಿನಯ್ ಗೆದ್ದಿದ್ದಾರೆ ಅನ್ನುವುದೇ ಅವರು ಕತೆಗಾರ ಅನ್ನುವುದಕ್ಕೂ ಸಾಕ್ಷಿ. ಉದಾಹರಣೆಗೆ ಸುಮಾರು ಎಪ್ಪತ್ತು ಪುಟ ಹಬ್ಬಿರುವ ಮೊದಲ ಕತೆ ಅರ್ಧಸತ್ಯ ಅಪರಾಧಿಗಳನ್ನೂ ಅಪರಾಧವನ್ನೂ ಬಯಲು ಮಾಡುವ ಹೊತ್ತಿಗೇ, ಅದರ ಬೆನ್ನುಬಿದ್ದಿರುವ ಪತ್ರಕರ್ತನ ಸ್ಥಿತಿಯ ದರ್ಶನವನ್ನೂ ಮಾಡಿಸುತ್ತದೆ. ಅಧ್ಯಾತ್ಮದ ಮಾತಾಡುವಾಗ ಇಲ್ಲಿ ಕಾಣುವುದೆಲ್ಲ ಸತ್ಯವಲ್ಲ, ಇದೆಲ್ಲ ಲೀಲ ಅನ್ನುತ್ತಾರಲ್ಲ, ಅಂಥದ್ದೇ ಅನುಭವ ಎಷ್ಟೋ ಸಲ ಅಪರಾಧಕ್ಕೆ ಮುಖಾಮುಖಿಯಾದ ಪತ್ರಕರ್ತನಿಗೂ ಆಗುತ್ತದೆ.

ದಾರಿತಪ್ಪಿಸುವ ಪ್ರಕರಣಗಳು, ಪಿಗ್ಗಿ ಬೀಳಿಸುವ ಪೊಲೀಸರು, ಗೋಜಲುಗೊಳಿಸುವ ಎಫ್ಐಆರ್-ಗಳು, ಸಂದಿಗ್ಥತೆಗೆ ಸಿಲುಕಿಸುವ ಆಫ್-ದಿ-ರೆಕಾರ್ಡ್ ಮಾತುಗಳು, ಅಪರಾಧಿ ಹೇಳುವ ಕಡುಸತ್ಯ, ಇವೆಲ್ಲವನ್ನೂ ಮೀರಿದ ಆದರೆ ಎಂದೂ ಕಾಣಿಸದ ಮಹಾಶಕ್ತಿ- ಹೀಗೆ ಒಂದು ಅಪರಾಧವನ್ನು ಏನೆಲ್ಲ ನಿಯಂತ್ರಿಸುತ್ತಿರುತ್ತದೆ ಅನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ ಅನ್ನುವ ಸತ್ಯವನ್ನು ನಮಗೆ ಬಹಳ ಸ್ಪುಟವಾಗಿ ವಿನಯ್ ತೋರಿಸಿಕೊಟ್ಟಿದ್ದಾರೆ.

ತನ್ನ ಕಣ್ಮುಂದೆಯೇ ಇರುವ ಸತ್ಯ ಕೂಡ ಕಾಣದೇ ಹೋಗುವ ಪ್ರಸಂಗದ ಪ್ರಮೋಷನ್, ಮಹಾನ್ ಸಾಧನೆ ಮಾಡಿದೆ ಎಂದು ಬೀಗುವ ಹೊತ್ತಿಗೇ ಅದು ಮತ್ತೊಬ್ಬರ ಪಿತೂರಿ ಎಂದು ಗೊತ್ತಾಗುವ ದುರ್ಭರ ಕ್ಷಣ, ಗೆಲುವು ಕೂಡ ಪೂರ್ವನಿಯೋಜಿತ ಎಂದು ಅರಿವಾಗುವ ಘಳಿಗೆಗಳು ಈ ಪುಸ್ತಕದಲ್ಲಿವೆ.

ಕ್ರೈಮ್ ಕುರಿತ ಬರಹಗಳು ಅಪರಾಧವನ್ನು ವೈಭವೀಕರಿಸುತ್ತವೆ . ನಂತರ ಅದನ್ನು ಬೇಧಿಸುವ ಅಧಿಕಾರಿಯನ್ನು ವೈಭವೀಕರಿಸುತ್ತವೆ. ಇಲ್ಲಿ ಅವೆರಡೂ ಆಗಿಲ್ಲ. ದೂರದಿಂದ ನಿಂತು ನಿರ್ವಿಕಾರವಾಗಿ ಒಂದು ಘಟನೆಯನ್ನು ದಾಖಲಿಸುವಂತೆ ಈ ಕತೆ ಸಾಗುತ್ತದೆ. ಕತೆಯ ಪಾತ್ರವೇ ಆಗಿದ್ದರೂ ವಿನಯ್ ಕತೆಯನ್ನು ನಿಯಂತ್ರಿಸುವುದಿಲ್ಲ ಅನ್ನುವುದೇ ಈ ಕತೆಗಳ ನಿಜವಾದ ಗೆಲುವು.

‍ಲೇಖಕರು Admin

January 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: