ಪಿ ಚಂದ್ರಿಕಾ ಅಂಕಣ – ಮುರಿದು ಬಿದ್ದ ಮನ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

27

ಪಂಚಕ್ಷರಿ ಕೆಲವು ಕಲಾವಿದರನ್ನು ಮೊದಲ ದಿನದಿಂದ ಜೊತೆಗೆ ಇರಬೇಕೆಂದು ಹೇಳಿ ಇರಿಸಿಕೊಂಡಿದ್ದರು ಅದರಲ್ಲಿ ಪ್ರಸನ್ನ ಶೆಟ್ಟಿ ಮತ್ತು ರಾಮಣ್ಣ ಮುಖ್ಯರು. ರಾಮಣ್ಣ ಹಿರಿಯರು ಮತ್ತು ದೊಡ್ಡ ಕಲಾವಿದರು. ಅವರು ತೆರೆಯ ಮೇಲೆ ಕಾಣಿಸಿದರೆ ಅದೊಂದು ಫೀಲ್ ಕೊಡುತ್ತೆ. ಸಹಜವಾದ ನಟನೆ ಪಾತ್ರದ ಒಳಗೆ ಇಳಿವ ತಾದ್ಯಾತ್ಮ ಆಪ್ತವಾದ ನಿಲುವು ಎಲ್ಲವೂ ಅವರನ್ನು ಕಲಾತ್ಮಕ ಚಿತ್ರಗಳ ಪರ್ಮನೆಂಟ್ ಪಾತ್ರಧಾರಿಯಾಗಿಸಿದೆ.

ಶೂಟಿಂಗ್ ಶುರುವಾಗುವ ಮೊದಲ ದಿನ ಬೆಳಗ್ಗೆ ಐದೂವರೆಗೆ ಎದ್ದು ವಾಕಿಂಗ್ ಮುಗಿಸಿ ಪುನರೂರು ಹೊಟೇಲ್‌ನಲ್ಲಿ ಇನ್ನೂ ಕಾಫಿ ಸಿದ್ಧವಾಗಿರದ ಕಾರಣ ಪಕ್ಕದ ಹೋಟೆಲಿಗೆ ಹೋದೆವು. ಆಗ ಸಮಯ ಬೆಳಗ್ಗೆ ಆರೂವರೆ ಇರಬಹುದು. ಪುನೀತ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗಿ ಹಣೆಗೆ ಕುಂಕುಮ ಇಟ್ಟುಕೊಂಡು ಬಂದಿದ್ದ. ಪುನೀತಾ ಸ್ನಾನ ಇಲ್ಲದೆ ಕಾಫಿಯನ್ನೂ ಕುಡಿಯುವುದಿಲ್ಲವಾ?’ ಎಂದು ರೇಗಿಸಿದೆ. ಇಲ್ಲಮ್ಮಾ ನಮ್ಮ ಮನೆಯಲ್ಲಿ ಅದು ಅಭ್ಯಾಸವಿಲ್ಲ’ ಎಂದಿದ್ದ. ನೀನು ಸಿನಿಮಾ ಫೀಲ್ಡ್ಗೆ ನಾಲಾಯಕ್ಕು’ ಎಂದು ಪುಟ್ಟಣ್ಣ ಜೋರಾಗಿ ನಗಾಡಿದ್ದ. ಆಗಲೇ ಹೋಟೆಲಿನ ಒಳಗೆ ಒಬ್ಬ ವ್ಯಕ್ತಿ ಬಂದರು. ಇವರನ್ನು ತುಂಬಾ ನೋಡಿದ್ದೇನೆ. ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ ಎಂದು ಅಂದುಕೊಳ್ಳುವಾಗಲೇ ಪುನೀತ, ಅಮ್ಮಾ ಇವರು ರಾಮಣ್ಣ ಅಲ್ವಾ?’ ಎಂದಿದ್ದ. ಆಗಲೇ ನನಗೂ ಹೊಳೆದದ್ದು. ನಾವು ಮಾತಾಡುವುದನ್ನು ಅವರು ಕೇಳಿಸಿಕೊಂಡರು ಅನ್ನಿಸುತ್ತೆ; ನಮ್ಮ ಕಡೆಗೆ ನೋಡಿ ನಕ್ಕರು. ಆಪ್ತವಾದ ನಗು.

ಬೆಳಗಿನ ಹಿಮದಂತೆ ಸಿಗ್ಧವಾಗಿತ್ತು. ನಮ್ಮ ಮಾತುಗಳಲ್ಲಿ ನಾವೆಲ್ಲಾ ಒಂದೆಕಡೆಕೆಲಸ ಮಾಡುವವರು ಎಂದು ಅವರಿಗೂ ಅರ್ಥವಾಗಿತ್ತು ಅನ್ನಿಸುವ ಹಾಗಿತ್ತು ಅವರ ನಗು. ನಾವು ಮಾತು ಮತ್ತು ಕಾಫಿಯನ್ನೂ ಮುಗಿಸಿ ಹೊರಟು ನಿಂತಾಗ ಹೋಟೆಲಿನವರು ಬಿಲ್ಲು ಚುಕ್ತ ಆಗಿದೆ’ ಎಂದಿದ್ದರು. ರಾಮಣ್ಣ ನಮ್ಮ ಬಿಲ್ಲನ್ನೂ ಕೊಟ್ಟ್ಟು ಹೋಗಿದ್ದರು. ನಮಗದು ಅಚ್ಚರಿ ಮತ್ತು ಸಂತೋಷ ಎರಡನ್ನೂ ಕೊಟ್ಟಿತ್ತು. ಶೂಟಿಂಗ್‌ನಲ್ಲಿ ಸಿಕ್ಕಾಗ ಒಂದು ಸಣ್ಣ ನಗುವನ್ನು ಬಿಟ್ಟರೆ ಬೇರೆ ಏನೂ ಮಾತೂಕತೆ ನಡೆಯುತ್ತಿರಲಿಲ್ಲ. ಇಡೀ ದಿನ ಕೆಲಸ.

ಸಂಜೆಯ ಹೊತ್ತಿಗೆ ಹೈರಾಣು, ಮಧ್ಯದಲ್ಲಿ ಕಥೆಯ ಕುರಿತು ಚರ್ಚೆ, ತುಂಬಿಸ ಬೇಕಾದ ಫ್ರೇಮಿನ ಜವಾಬ್ದಾರಿ, ಒಂದಿಷ್ಟು ಸಂಬಾಳಿಸುವ ಕೆಲಸ ಇವುಗಳ ಮಧ್ಯೆ ಕಳೆದುಹೋಗುತ್ತಿದ್ದೆವು. ಆದರೂ ರಾಮಣ್ಣ ಅವರನ್ನ ನೋಡಿದಾಗಲೆಲ್ಲಾ ಯಾಕೋ ನನ್ನ ಚಿಕ್ಕಪ್ಪ ನೆನಪಾಗುತ್ತಿದ್ದರು. ಇವರೂ ನನ್ನ ಅವರು ಕರೆದ ಹಾಗೆ ಮಗಳೇ’ ಎಂದು ಇವರೂ ಕರೆಯಲಿ ಎನ್ನಿಸುತ್ತಿತ್ತು. ಹಿಂದೆ ನಕ್ಕುಬಿಡುತ್ತಿದ್ದೆ, ನಾನು ಭಾವಿಸಿದ ತಕ್ಷಣ ಅವರಿಗೆ ಆಪ್ತತೆ ಬಂದು ಬಿಡುವುದು ಸಾಧ್ಯವಿಲ್ಲವಲ್ಲ, ನಾನು ಕಣಲಿಕ್ಕೆ ಇರುವ ಕಾರಣದ ಹಾಗೆೆ ಅವರಿಗೂ ಇರಬೇಕಲ್ಲಾ ಎಂದು.

ದಿನ ಕಳೆದ ಹಾಗೆ ಅವರ ಬಗ್ಗೆ ಬೇರೆಯವರು ಮಾತಾಡಿಕೊಳ್ಳುವುದು ಕೇಳಿ ನನಗೆ ಬೇಸರವಾಗುತ್ತಿತ್ತು. ಕಂಡಾಪಟ್ಟೆ ಕುಡಿದು ರೂಮಿನಲ್ಲಿ ಗಲಾಟೆ ಮಾಡುತ್ತಾರೆ, ಸಿಕ್ಕ ಸಿಕ್ಕ ಹಾಗೆ ಬೈತಾರೆ ಎಂದೆಲ್ಲಾ ಹೇಳುತ್ತಿದ್ದರು. ಅವರು ಏನಕ್ಕೆ ಗಲಾಟೆ ಮಾಡುತ್ತಾರೆ? ಯಾರಾದರೂ ಅವರಿಗೆ ತೊಂದರೆ ಕೊಡುತ್ತಾರಾ? ಎಂದು ಕೇಳಿದ್ದೆ. ಸಮರ್ಪಕವಾದ ಉತ್ತರ ಸಿಕ್ಕಿರಲಿಲ್ಲ. ಚಿಕ್ಕಪ್ಪನಂಥಾ ಅವರು ಜಗಳಗಂಟ ಆಗಲಿಕ್ಕಿಲ್ಲ ಎನ್ನುವುದು ನನ್ನ ನಂಬಿಕೆ.

ಚಂಚಲಾ ಟೀಂ ಬಿಟ್ಟು ಹೊರಟ ಮೇಲೆ ನನ್ನ ರೂಂನಲ್ಲಿ ನಾನೊಬ್ಬಳೆ ಇರುತ್ತಿದ್ದೆ. ಯಾರಾದರೂ ಪಾತ್ರಧಾರಿಗಳು ಹೆಣ್ಣುಮಕ್ಕಳು ಬಂದರೆ ನನ್ನೊಂದಿಗೆ ಉಳಿದುಕೊಳ್ಳುತ್ತಿದ್ದರು. ದಿನಾಗಲೂ ಸೀನ್ ಪೇಪರ್ ಅನ್ನು ಇಟ್ಟುಕೊಂಡು, ನಾಳಿನ ಶೂಟಿಂಗ್‌ಗೆ ಬೇಕಾಗುವ ಎಲ್ಲಾ ಪ್ರಾಪರ್ಟಿಗಳನ್ನು ಲಿಸ್ಟ್ ಮಾಡಿ, ಎತ್ತಿಟ್ಟುಕೊಂಡು ನಂತರ ಮಲಗಲು ಹೋಗುತ್ತಿದ್ದೆವು. ಅವತ್ತೂ ರಾತ್ರಿ ಹೀಗೆ ಪುಟ್ಟಣ್ಣ ಮತ್ತು ಪುನೀತ ಮತ್ತು ನಾನು ಎಲ್ಲಾ ವಸ್ತುಗಳನ್ನು ಎತ್ತಿ ನಮ್ಮ ಬ್ಯಾಗಿನಲ್ಲಿ ಇಡುತ್ತಿದ್ದೆವು. ಸ್ಪೆಷಲ್ ಎಫೆಕ್ಟ್ಗಾಗಿ ಸಾಂಬ್ರಾಣಿ ಹೊಗೆ ಹಾಕುವುದು ಸಿನೆಮಾಗಳಲ್ಲಿ ಸಾಮಾನ್ಯ. ಹಾಗೆಂದುಕೊಂಡೇ ತಂದಿದ್ದ ಬಾಂಡ್ಲಿಗಳು, ಇದ್ದಿಲು, ಸಾಂಬ್ರಾಣಿಯ ಪಟ್ಟಣಗಳು ಮೂಲೆಯಲ್ಲಿ ಬಿದ್ದುಕೊಂಡಿದ್ದವು.

ಮೇಡಂ ಇವನ್ನೆಲ್ಲಾ ಏನು ಮಾಡುವುದು?’ ಎಂದು ಪುನೀತ ಕೇಳಿದ. ಇರು ಪುನೀತ ಕೊನೆಯ ದಿನದ ವರೆಗೂ ಯಾವುದು ಬೇಕು ಯಾವುದು ಬೇಡಾಂತ ಹೇಳೋಕ್ಕಾಗಲ್ಲ. ಡೈರೆಕ್ಟರ್ ಏನಾದ್ರೂ ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ರೆ ಅದಕ್ಕೆ ಸಪೂರ್ಟ್ ಮಾಡಬೇಕಾಗುತ್ತದೆ’ ಎಂದಿದ್ದೆ.
ಪಂಚಾಕ್ಷರಿಗೆ ಕ್ರಿಯೇಟಿವ್ ಆದ ಐಡಿಯಾಗಳು ತುಂಬಾ ಇದ್ದವು. ನಾವು ಶೂಟಿಂಗ್‌ಗಾಗಿ ಜಾಗ ಹುಡುಕಲು ಬಂದಿದ್ದೆವಲ್ಲ ಎಂಥೆಂಥಾ ಜಾಗ ನೋಡಿದ್ದು! ಅಲ್ಲಿ ಸುಮ್ಮನೆ ಕ್ಯಾಮೆರಾ ಇಟ್ಟರೂ ಏನೇನೋ ಹೇಳಿಬಿಡುತ್ತಿದ್ದವು. ಆದರೆ ಸಣ್ಣ ಬಜೆಟ್‌ನ ಸಿನೆಮಾ ದಿನಗಳ ಲೆಕ್ಕದಲ್ಲೇ ಮಾಡಬೇಕಲ್ಲಾ? ಹಾಗಾಗಿಕಥೆ ಬೇಡಿದರೂ ಅದನ್ನು ತೆಗೆಯಲು ಆಗಲೇ ಇಲ್ಲ.

ಹೀಗೆ ನಮ್ಮ ಮಾತುಕತೆ ನಡೆಯುವಾಗಲೇ ಹೊರಗೆ ಜೋರಾಗಿ ಜಗಳ ಶುರುವಾಗಿತ್ತು. ಪುಟ್ಟಣ್ಣ ಈವಯ್ಯನ ಕಿರಿಕ್ಕು ಶುರುವಾಯ್ತು ಎಂದ. ನಮ್ಮ ಟೀಂನಲ್ಲಿ ಮತ್ಯಾರೂ ಕುಡಿದು ಗಲಾಟೆ ಮಾಡುತ್ತಿರಲಿಲ್ಲ. ಹಾಗಾಗಿ ಅದು ರಾಮಣ್ಣನೇ ಎಂದು ನನಗೂ ಅರ್ಥವಾಗಿತ್ತು. ಬಗ್ಗಿ ನೋಡಲು ಹೋದೆ. ಕುಡುಕರ ಸಹವಾಸ ಕಷ್ಟ ಸುಮ್ಮನೆ ಒಳಗಿರಿ ಮೇಡಂ ಎಂದಿದ್ದ ಪುಟ್ಟಣ್ಣ. ನಾನೊಬ್ಬಳೆ ಹೆಂಗಸಾದ್ದರಿಂದ ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದರು.

ಬೆಳಗ್ಗೆ ಎದ್ದು ಪಂಚಾಕ್ಷರಿಯೂ ಅವರ ಬಗ್ಗೆ ಕಂಪ್ಲೇಟ್ ಹೇಳಿದ್ದರು, ಹೋಗಿ ಅಂತ ಹೇಳಬೇಕು ಅಂದುಕೊಂಡಿದ್ದೇನೆ’ ಎಂದು. ಯಾಕೆ ನಿಮ್ಮ ಜೊತೆ ಏನು ಕಿರಿಕ್ಕು ಮಾಡಿಕೊಂಡಿದ್ದಾರೆ’ ಎಂದೆ. ಸ್ಪಷ್ಟವಾಗಿ ಅಲ್ಲದಿದ್ದರೂ `ಆದರೆ ದಿನ ರೂಮಿಗೆ ಬಂದು ಹಾಗೆ ಹೀಗೆ ಎಂದೆಲ್ಲಾ ಹೇಳುತ್ತಾರೆ’ ಎಂದಿದ್ದರು. ನನಗೆ ನೋವಾಗಿತ್ತು. ಗೊತ್ತಿಲ್ಲದ ಹಾಗೆ ನನಗೆ ಅವರೊಂದಿಗೆ ಆಪ್ತತೆ ಬೆಳೆದುಬಿಟ್ಟಿತ್ತು- ಅದೂ ಚಿಕ್ಕಪ್ಪನ ರೂಪದಲ್ಲಿ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: