ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿನಯಾ ನಾಯಕ್ ಕವಿತೆ- ಮೌನವಷ್ಟೇ ಬೇಕೀಗ…

ವಿನಯಾ ನಾಯಕ್

ಮಾತಾಡಿ, ಹಾಡಿ, ತೀಡಿ
ನಕ್ಕು ತಂಪಾಗುವದಕ್ಕಿಂತ
ಮೌನವಾಗುಳಿಯುವುದೇ ಪರಮ ಸುಖವೀಗ

ಎಲ್ಲ ಆವಿಯಾಗಿ
ಜಗದಿ ಲೀನವಾಗಿ
ನಿರಾಳವಾಗುವ ಪರಿ ಆಪ್ತವೀಗ

ಕೆಡುಕು ಒಳಿತು
ಒಲವೋ ಬಲವೋ
ಯಾವುದೂ ತಟ್ಟದೀಗ

ನಗುವೂ ಮೂಡದ
ಅಳುವೂ ಬಾರದ
ಅಚಲತೆಯೀಗ

ಪೂರ್ತಿ ಬದುಕಿ, ಮುಗಿಯಿತೆನಿಸಿದಾಗ
ಮನುಷ್ಯರೆಲ್ಲ ಹೀಗೆ ಉಸಿರಾಡುವ ಸಂತರಾಗುತ್ತಾರೆಯೇ?

ನೀವಿದನ್ನು ಜಿಗುಪ್ಸೆ ಎನ್ನಬಹುದು
ಅಥವಾ ಖಿನ್ನತೆ ಎಂದುಬಿಟ್ಟೀರಿ.
ಮೌನ ಉಂಡವರಿಗೆ
ಮಾತು ಹೇಗೆ ರುಚಿಸೀತು?
ದೀರ್ಘ ನೋವು , ದೀರ್ಘ ನಲಿವು
ಎರಡೂ ಕೊಡುವ ಬೇಸರವೊಂದೇ ಅಲ್ಲವೇ?
ಎಲ್ಲ ಮಾಯೆ.

ಹೇಳಿದರೂ ಬರೆದರೂ ರಾಡಿ ರಾದ್ಧಾಂತ.
ಮೌನವಷ್ಟೇ ಬೇಕೀಗ.

‍ಲೇಖಕರು Admin

28 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading