ಅಲಕಾ ಜಿತೇಂದ್ರ ಲಹರಿ- ಟ್ರಯಲ್ ರೂಮಿನ ಕಾವಲುಗಾರ್ತಿ….

ಅಲಕಾ ಜಿತೇಂದ್ರ

ಕೆಲವು ದಿನಗಳ ಹಿಂದೆ ಪ್ರಸಿದ್ಧ hypermarket ಒಂದರಲ್ಲಿ ಬಟ್ಟೆಗಳ ಮೇಲೆ ವಿಶೇಷ ರಿಯಾಯತಿ ಇದ್ದಿದ್ದರಿಂದ ಬಟ್ಟೆ ಖರೀದಿಸಲು ಹೋಗಿದ್ದೆ. ಯಾವುದೇ ಬಟ್ಟೆ ಖರೀದಿಸುವ ಮೊದಲು ಟ್ರಯಲ್ ರೂಮಿನಲ್ಲಿ ಅದನ್ನು ಧರಿಸಿ ಅಳತೆ ಸರಿಯಾಗಿದೆಯೋ ಎಂದು ಪರೀಕ್ಷಿಸಿಯೇ ಖರೀದಿಸುವ ಅಭ್ಯಾಸ ನನ್ನದು.

ಈ ಕೊರೋನಾ ಕಾಲದಲ್ಲಿ ಟ್ರಯಲ್ ರೂಮ್ ಗಳೆಲ್ಲಾ ಮುಚ್ಚಿ ಬಟ್ಟೆ ಖರೀದಿಸುವ ಆಸಕ್ತಿಯೂ ಹೊರಟು ಹೋಗಿತ್ತು. ಆದರೆ ಅಂದು ಟ್ರಯಲ್ ರೂಮ್ ತೆರೆದಿದ್ದು ಕಂಡು ಆಶ್ಚರ್ಯವಾಯಿತು, ಖುಷಿಯೂ ಆಯಿತು. ನನಗೆ ಬೇಕಾದ ಬಟ್ಟೆಯನ್ನು ಆರಿಸಿ ಟ್ರಯಲ್ ರೂಮಿನ ಕಡೆಗೆ ನಡೆದೆ. ಅಲ್ಲಿ ಒಬ್ಬಳು ಮಹಿಳೆ ತನ್ನ ಮಗಳಿಗೆ ಕೆಲವು ಡ್ರೆಸ್ ಗಳನ್ನು ಹಾಕಿಸಿ ಅಲ್ಲೇ ಹೊರಗೆ ನಿಂತಿದ್ದ ಗಂಡನಿಗೆ ತೋರಿಸಿ ಸಲಹೆ ಕೇಳುತ್ತಿದ್ದಳು. ಆತನ ಜೊತೆ ಇನ್ನೊಂದು ಪುಟ್ಟ ಮಗುವೂ ಇತ್ತು. ಅಲ್ಲೇ ನಿಂತಿದ್ದ ಟ್ರಯಲ್ ರೂಮಿನ ಕಾವಲುಗಾರ್ತಿ ಆ ಮಗುವನ್ನು ಮಾತನಾಡಿಸತೊಡಗಿದಳು.

ನನ್ನ ಗಮನ ಅವಳೆಡೆಗೆ ಹರಿಯಿತು. ಅವಳನ್ನೇ ದಿಟ್ಟಿಸಿ ನೋಡಿದೆ. ಮುಖ ಚೆಹರೆ, ಹಣೆಯಲ್ಲಿ ಬೊಟ್ಟು ಹಾಗೂ ಹಿಂದಿ ಭಾಷೆ ಮಾತನಾಡುತ್ತಿದ್ದುದರಿಂದ ಈಶಾನ್ಯ ಭಾರತದವಳಿರಬೇಕು ಎಂದುಕೊಂಡೆ. ಆದರೆ ನಂತರ ತಿಳಿಯಿತು ಆಕೆ ನೇಪಾಳೀ ಎಂದು. ಟ್ರಯಲ್ ರೂಮು ಯಾವಾಗ ಖಾಲಿ ಆಗುತ್ತದೆ ಎಂಬ ಆತುರದಲ್ಲಿದ್ದ ನನಗೆ ಅವಳ ಮಾತು ಕೇಳುವ ಆಸಕ್ತಿ ಇಲ್ಲದಿದ್ದರೂ ಶಬ್ದಗಳು ಕಿವಿ ಮೇಲೆ ಬೀಳುತ್ತಿದ್ದವು. ’ನನಗೆ ಹೆಣ್ಣುಮಕ್ಕಳಿಲ್ಲ, ನಿನ್ನ ಅಕ್ಕನನ್ನು ನನಗೆ ಕೊಡು’ ಎಂದು ಆ ಮಗುವನ್ನು ಛೇಡಿಸುತ್ತಿದ್ದಳು.

ನಂತರ ಆ ಗಂಡಸಿನೆಡೆಗೆ ತಿರುಗಿ ತನಗೆ ಇಬ್ಬರು ಗಂಡು ಮಕ್ಕಳೆಂದೂ, ಗಂಡನಿಲ್ಲವೆಂದೂ ಹೇಳತೊಡಗಿದಳು. ಆಕೆ ಒಂದೆರಡು ಮಾತಿಗೋಸ್ಕರವೇ ಹವಣಿಸಿದಂತೆ ಕಾಣುತ್ತಿತ್ತು. ಆದರೆ ಆ ಗಂಡಸಿಗೆ ಅವಳ ಕಥೆ ಕೇಳುವ ಆಸಕ್ತಿ ಇದ್ದಂತಿರಲಿಲ್ಲ. ಆತ ಅಲ್ಲಿಂದ ಮೆಲ್ಲಗೆ ಜಾರಿಕೊಂಡುಬಿಟ್ಟ. ಈಗ ಆಕೆ ನನ್ನೆಡೆಗೆ ತಿರುಗಿ ಮಾತು ಮುಂದುವರಿಸತೊಡಗಿದಳು. ಅಪರಿಚಿತರೊಂದಿಗೆ ಹರಟೆ ಹೊಡೆಯುವ ಅಭ್ಯಾಸವಿಲ್ಲದ ನನಗೆ ಏನು ಮಾತನಾಡಬೇಕೆಂದು ತೋಚಲಿಲ್ಲ. ಅವಳ ವೇಗವಾದ ನೇಪಾಳೀ ಮಿಶ್ರಿತ ಹಿಂದಿ ಅರ್ಥಮಾಡಿಕೊಳ್ಳಲೂ ಕಷ್ಟವಾಗುತ್ತಿತ್ತು. ಆದರೂ ಅವಳಿಗೆ ಬೇಸರವಾಗದಿರಲೆಂದು ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ೫-೧೦ ನಿಮಿಷದ ಮಾತುಕತೆಯಲ್ಲಿ ಆಕೆ ತನ್ನಿಡೀ ಬದುಕನ್ನು ನನ್ನೆದುರು ತೆರೆದಿಟ್ಟಳು. 

ಆಕೆ ೧೬ನೇ ವಯಸ್ಸಿಗೆ ಮದುವೆಯಾಗಿ ೨೧-೨೨ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡವಳು. ಚಿಕ್ಕ ವಯಸ್ಸಿಗೆ ಎರಡು ಗಂಡುಮಕ್ಕಳ ಜವಾಬ್ದಾರಿ ಒಂಟಿ ಹೆಗಲ ಮೇಲೆ ಬಿದ್ದಾಗ ಬದುಕು ಅತಂತ್ರವಾದ ಅನುಭವ. ಆದರೇನು? ದೋಣಿ ಸಾಗಲೇಬೇಕು. ಧೈರ್ಯಮಾಡಿ, ತಾಯಿ ಹೃದಯವ ಕಲ್ಲಾಗಿಸಿ ೭ ತಿಂಗಳ ಮಗುವನ್ನು ತನ್ನ ತಾಯಿಯ ಕೈಯಲ್ಲಿಟ್ಟು ಸಂಪಾದನೆಗಾಗಿ ದೂರದ ಕುವೈಟ್ ಗೆ ಪಯಣ.

೨೦ ವರ್ಷದಿಂದ security uniform ಹಾಕಿಕೊಂಡು hypermarket ನಲ್ಲಿ ಕೆಲಸ ಮಾಡುತ್ತಿರುವ ಆಕೆಯ ಈಗಿನ ಸಂಬಳ ಕೇವಲ ೧೦೦ KD (Rs25,000). ನೇಪಾಳದ ಭೀಕರ ಭೂಕಂಪ ತಾಯಿ, ತಂದೆ, ಗಂಡನ ಮನೆಯವರನ್ನೆಲ್ಲಾ ಕಸಿದುಕೊಂಡಿತು. ಎಲ್ಲಾ ಕಷ್ಟಗಳ ನಡುವೆಯೂ ಮಕ್ಕಳನ್ನು ಓದಿಸಿ, ದೊಡ್ದ ಮಗನಿಗೆ ಮದುವೆಯನ್ನೂ ಮಾಡಿಸಿ, ಈಗ ೪೨ನೇ ವಯಸ್ಸಿಗೆ ಆಕೆ ಒಂದು ಮೊಮ್ಮಗುವಿನ ಅಜ್ಜಿ.

ಟ್ರಯಲ್ ರೂಮು ಖಾಲಿಯಾಗಿತ್ತು. ಆದರೆ ನನ್ನ ಮನಸ್ಸು ಭಾರವಾಗಿತ್ತು; ಒಳಹೊಕ್ಕವರನ್ನೆಲ್ಲಾ ಕನ್ನಡಿ ಎದುರು ನಿಲ್ಲಿಸಿ ಆತ್ಮ ವಿಮರ್ಶೆ ಮಾಡಿಸುವ ಟ್ರಯಲ್ ರೂಮಿನಂತೆ. ಒಳಗೆ ಹೋದ ನನಗೆ ಡ್ರೆಸ್ ನ ಕಡೆಗೆ ಗಮನ ಹರಿಸಲು ಸಾಧ್ಯವಾಗಲೇ ಇಲ್ಲ. ಹೊರಗೆ ಬಂದು ಕಾರಿನಲ್ಲಿ ಕುಳಿತಾಗಲೂ ಮನಸ್ಸಿನ ತುಂಬೆಲ್ಲಾ ಆಕೆಯೇ ತುಂಬಿದ್ದಳು. ಆಕೆಯ ೨೦ ವರ್ಷಗಳ ಒಂಟಿ ಬದುಕಿನ ಹೋರಾಟ, ನೋವು, ದುಃಖಗಳೆಲ್ಲಾ  ಸಿನಿಮಾದಂತೆ ಕಣ್ಣ ಮುಂದೆ ಸುಳಿಯಲಾರಂಭಿಸಿದವು.

ಮದುವೆ, ಮಸಣ, ಮಗು, ಭೂಕಂಪ ಮತ್ತು ಅವಳು; ನನ್ನ ಮನಸ್ಸಿನ ತುಂಬಾ ಹೇಳಿಕೊಳ್ಳಲಾಗದಂಥಾ ಭಾವ. ಅವಳ ಮುಖವನ್ನು, ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಅಲ್ಲಿ ಆಕೆಗೆ ತನ್ನ ಬದುಕಿನ ಕುರಿತು ದೂರುಗಳಿದ್ದವೇ? ಬದುಕು ತನಗೆ ನೀಡಿದ್ದೇ ಇಷ್ಟು ಎಂಬ ಹತಾಶೆ ಇತ್ತೇ? ಅಥವಾ ಇಂಥಾ ಬದುಕನ್ನೂ ಗೆದ್ದುಬಿಟ್ಟೆ ಎಂಬ ಹೆಮ್ಮೆ ಇತ್ತೇ? ಉತ್ತರ ಹೊಳೆಯಲಿಲ್ಲ. ಈ ಬದುಕೇ ಎಷ್ಟು ವಿಚಿತ್ರ. ಟ್ರಯಲ್ ರೂಮಿನಲ್ಲಿ ಬಟ್ಟೆಗಳನ್ನು ಹಾಕಿ ತೆಗೆದು  ಪರೀಕ್ಷಿಸುವಂತೆ ಬದುಕನ್ನೂ ಪರೀಕ್ಷಿಸಲು ಸಾಧ್ಯವಾಗುವಂತೆ ಇದ್ದಿದ್ದರೆ..?

‍ಲೇಖಕರು Admin

October 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾ. ಆಜಾದ್

    ಘಟನೆಗಳು ನಮ್ಮ ಸುತ್ತ ಹಲವು ಘೋಷಿಸುತ್ತವೆ. ನೋಡುತ್ತೇವೆ, ಅಲ್ಲೇ ಸ್ವಲ್ಪ ಸ್ಪಂದಿಸುತ್ತೇವೆ ಅಥವಾ ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಮುನ್ನಡೆಯುತ್ತೇವೆ. ಆದರೆ ಒಬ್ಬ ಸೃಜನಶೀಲ ಅವುಗಳನ್ನು ಅನುಭವಿಸಿ ಒಳಹೊರಗುಘಳ ವಿಶ್ಲೇಷಿಸಿ ಅದಕ್ಕೊಂದು ಚೊಕ್ಕ ಚೌಕಟ್ಟು ನೀಡಿ ಓದುಗರಿಗೆ ಮಂಥನ ಮಾಡಿ ವಿಚಾರಗಳ ವೈಚಾರಿಕತೆಯತ್ತ ಕೊಂಡುಯ್ಯುತ್ತಾನೆ. ಅಲಕಿ ಅಂಥವರ ಸಾಲಿಗೆ ಸೇರಿದವರು. ಒಂದು ಮಾಲ್ ನಲ್ಲಿ ನಡೆದ ಘಟನೆಯ ಸುಂದರ ವೈಚಾರಿಕ ಪರಾಮರ್ಶೆಯನ್ನು ಅವಧಿಗೆ ತಂದಿದ್ದಾರೆ. ಅಭಿನಂದನೆಗಳು ಇಬ್ಬರಿಗೂ.

    ಪ್ರತಿಕ್ರಿಯೆ
  2. ಆಜಾದ್‌ ಐ.ಎಸ್

    ನಮ್ಮ ಸುತ್ತ ವೀಚಾರಿಕ ವಿಚಾರಗಳತ್ತ ಮಂಥಿಸುವಂತಹ ಹಲವು ಘಟನೆಗಳು ಘಟಿಸುತ್ತಲೇ ಇರುತ್ತವೆ, ಹೆಚ್ಚಿನವರು ಕಂಡು ಸ್ಥಳದಲ್ಲೇ ಸ್ಪಂದಿಸಿ ಮರೆತುಬಿಧುವ ಅಥವಾ ತಮಗೇನೂ ಸಂಬಂಧವಿಲ್ಲ ಎಂದು ನಡೆದುಬಿಡುವುದೇ ಸಾಮಾನ್ಯ. ಆದರೆ ಇಂತಹ ಘಟನಾವಳಿಯ ಕಂಡು ಸ್ಪಂದಿಸಿ, ಮಂಥಿಸಿ ಓದುಗರನ್ನು ವೈಚಾರಿಕತೆಯತ್ತ ಸೆಳೆಯುವ ಸೃಜನಶೀಲರು ಅಂತಹ ಘಟನೆಗಳನ್ನು ಹೀಗೆ ಓದುಗರ ಮುಂದೆ ಸರಾಗವಾಗಿ ಓದಿಸಿಕೊಂಡು ಹೋಗುವ, ಮಂಥನಕ್ಕೆ ಎಳೆಯುವ, ವಿಚಾರಮಾಡುವಂತೆ ಲೇಖನಗಳನ್ನು ನೀಡುತ್ತಾರೆ. ಅಂಥವರ ಸಾಲಿಗೆ ಅಲಕಾ ಸೇರುತ್ತಾರೆನ್ನುವುದು ಒಂದೆಡೆ, ಅಂಥವರಿಗೆ ಅವಕಾಶ ಕಲ್ಪಿಸುವ “ಅವಧಿ” ಮಗದೊಂದೆಡೆ. ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: