ವಿಕ್ರಮ ಬಿಕೆ ಕಂಡಂತೆ ‘ವೋಲೆ ಸೋಯಿಂಕಾ ವಾಚಿಕೆ’

ವಿಕ್ರಮ ಬಿಕೆ

ವೋಲೆ ಸೋಯಿಂಕ ಅವರನ್ನು ಕನ್ನಡಿಗರಿಗೆ ಹತ್ತಿರವಾಗುವ ಕೆಲಸವನ್ನು ಜ ನಾ ತೇಜಶ್ರೀ ಅವರು ಮಾಡಿದ್ದಾರೆ.  ‘ವೋಲೆ ಸೋಯಿಂಕಾ ವಾಚಿಕೆ ‘ ನಾನು ಓದಿದ ಮತ್ತು ನನಗೆ ಇಷ್ಟ ಆದ ಪುಸ್ತಕ.  ಈ ಪುಸ್ತಕ ನನಗೆ ತೇಜಶ್ರೀ ಅವರ ಶ್ರೇಷ್ಠ  ಬರಹಕ್ಕೆ  ಮತ್ತು ವೋಲೆ ಸೋಯಿಂಕಾರನ್ನು  ಹತ್ತಿರ ಮಾಡಿಸಿದೆ. 

ನೈಜೀರಿಯಾದ ಸಾಂಪ್ರದಾಯಿಕ ಯೋರಬಾ ಪದ್ಧತಿಯ ಪ್ರಕಾರ ಬುಡಕಟ್ಟಿನ ರಾಜನ ಮರಣದ ನಂತರ ರಾಜನ ಮುಖ್ಯ ಸಾರಥಿಯು ಸಾಂಪ್ರದಾಯಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ಸಾವಿನ ನಂತರ ರಾಜನಿಗೆ ಪರಲೋಕದಲ್ಲಿ ಜೀವನ ಸಾಗುತ್ತದೆ. ಅಲ್ಲಿ ರಾಜನಿಗೆ ಸಾರಥಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ರಾಜನ ಸಾವಿನ ಜೊತೆ ಅವನ ಸಾರಥಿಯ ಸಾವು ಆಗಲೇಬೇಕು, ಇದು ನಂಬಿಕೆ. 

ಸಾರಥಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅದು ಅವನ ಕರ್ಮ, ಧರ್ಮ. ಈ ಕರ್ಮ ಅವನಿಗೆ ಜನ್ಮ ಜನ್ಮಾಂತರಗಳಿಂದ ಬರುತ್ತಿದೆಯೇ? ರಾಜ ಸಾಯುವುದು ಅವನ ಇಚ್ಛೆ ಇಂದ. ಸಾರಥಿ ಸಾಯುವುದು ಅನಿವಾರ್ಯ – ಅವನ ಇಚ್ಛೆ ಇರಲಿ/ಇರದಿರಲಿ. ಅವನ ಸಾವು ಬರುತ್ತಿರುವುದು ಅವನ ಸುತ್ತಲೂ ಬದುಕುತ್ತಿರುವ ಜನರ ಆಚರಣೆ ಇಂದ. ಅವನಿಗೆ ಆಚರಣೆಯ ಮೇಲೆ ನಂಬಿಕೆ ಇರಬಹುದು ಆದರೆ ಸಾಯಲು ಇಷ್ಟವಿರದೇ ಇದ್ದರೆ? ಅದು ಕೊಲೆ ಆಗುತ್ತದೆಯೇ? ಸಮಾಜವೇ ಮುಂದೆ ನಿಂತು ಮಾಡಿದ ಕೊಲೆ?! ಒಬ್ಬರೇ ಕೊಂದರೆ ಅಪರಾಧ ಆದರೆ ಸಮಾಜವೇ ಒಂದಾಗಿ ಒಬ್ಬನನ್ನು ಕೊಂದರೆ, ಲೋಕೋದ್ಧಾರವೇ?!

ನನಗೆ ಈ ನಾಟಕ ಓದಬೇಕಾದಾಗ ಪದೇ ಪದೇ ಅನಿಂದಿತ ಘೋಷ್ ಅವರ ಸಮಕಾಲೀನ ನೃತ್ಯದ “ಡಾತಿ” ಡಾನ್ಸ್ ಪ್ರೊಡಕ್ಷನ್ ನೆನಪಾಗುತ್ತಿತ್ತು. ಇದರಲ್ಲಿ ನಾನು ಕೂಡ ಒಬ್ಬ ನೃತ್ಯಗಾರನಾಗಿದ್ದೆ. “ಡಾತಿ” ಪದವು ಎರಡು ನಾಮಪದಗಳನ್ನು ಒಡೆದು ಸೇರಿಸಿ ಸೃಷ್ಟಿಸಿದ್ದು. 

‘ಡಾಕ್ ‘ ನಮ್ಮ ಡೊಳ್ಳು ತರಹದ ಒಂದು ವಾದ್ಯ. ಇದು ಬಂಗಾಲಿ ಜನರು ತಮ್ಮ ಆಚರಣೆಗಳಲ್ಲಿ ಬಹಳ ಉಪಯೋಗಿಸುತ್ತಾರೆ. ದಸರಾ-ದುರ್ಗಾ ಪೂಜೆಯ ದಿನಗಳಲ್ಲಿ ಡಾಕಿಗಳಿಗೆ (ಡಾಕ್ ನುಡಿಸುವವ) ಬಹಳ ಡಿಮ್ಯಾಂಡ್ ಇರುತ್ತದೆ. ಡಾಕ್ ಬಾರಿಸಿದಾಗ ಬಹಳ ಜೋರಾಗಿ ಶಬ್ದ ಬರುತ್ತದೆ. ಇದು ನಮ್ಮ ಡೊಳ್ಳಿನ ಹಾಗೆ ಬಯಲಲ್ಲಿ ನುಡಿಸುವ ವಾದ್ಯ. ದುರ್ಗಾ ಪೂಜೆಯಲ್ಲಿ ಲೋಬಾನದ ಹೊಗೆ, ಬಣ್ಣ , ಡಾಕ್ ಶಬ್ದದ  ಜೊತೆ ಕುಣಿತ ಮಾಡುತ್ತಾ ದುರ್ಗಿಯನ್ನು-ಶಕ್ತಿ ಸ್ವರೂಪಿಣಿಯನ್ನು ಆರಾಧಿಸುತ್ತಾರೆ. 

ಹೌದು ಇದೇನಿದು ನೈಜೀರಿಯಾದ ಒಂದು ಬುಡಕಟ್ಟಿನ ಸಾಂಪ್ರದಾಯಿಕ ಆಚರಣೆಯ ಬಗ್ಗೆ ಮಾತಾಡ್ತಾ ಮಾತಾಡ್ತಾ ಭಾರತದ ಬಂಗಾಲಿ ಜನರ ದುರ್ಗಾ ಪೂಜೆ ಮತ್ತು ಡಾಕಿಗಳ ಬಗ್ಗೆ ನೆನಪಾಯ್ತು ಅಂತೀರಾ? 

ದುರ್ಗಿ ಒಂದು ಹೆಣ್ಣು. ಅವಳನ್ನು ಶಕ್ತಿ ಸ್ವರೂಪಿಣಿಯಾಗಿ ನೋಡುವ, ನಮ್ಮ ನಂಬಿಕೆ ಸಂಪ್ರದಾಯದಲ್ಲಿ ನಾವು ನಾರಿಯರಿಗೆ ಬಹಳ ಗೌರವ ಕೊಡುತ್ತೇವೆ ಎನ್ನುವ ಹೆಮ್ಮೆ ನಮಗಿದೆ. ಆದರೆ ಕೆಲವು ದಶಕಗಳ ಹಿಂದೆ ನಮ್ಮಲ್ಲಿ ಒಂದು ಅನಿಷ್ಟ ಪದ್ಧತಿ ಇತ್ತು. ಆ ಪದ್ಧತಿಯನ್ನು “The Death Of The Kings Horsemen” ನೈಜ ಘಟನೆ ಆಧಾರಿತ ನಾಟಕದಲ್ಲಿ ಬರುವ ಬ್ರಿಟೀಷ್ ಅಧಿಕಾರಿ ಹೇಗೆ ಯೋರೋಬದ ಒಂದು ಮೂಢ ನಂಬಿಕೆಯನ್ನು ನಿಲ್ಲಿಸಿಲು ಪ್ರಯತ್ನಿಸುವನೋ, ಅದೆಷ್ಟೋ ರಾಜನ ಸಾರಥಿಗಳ ಕೊಲೆಯನ್ನು ನಿಲ್ಲಿಸಲು ಪ್ರಯತ್ನಪಟ್ಟನೋ ಹಾಗೆಯೇ ನಮ್ಮಲ್ಲಿಯ ಒಂದು ಆತ್ಮಹತ್ಯೆ ಅಥವಾ ಕೊಲೆಗಳನ್ನು ನಿಲ್ಲಿಸಲು ಜನರು ಪಟ್ಟ ಪ್ರಯತ್ನಗಳು ನೆನಪಾದವು. 

ಈಗ ನಿಮಗೆ ಅರ್ಥ ಆಗಿದೆ ಅನಿಸುತ್ತದೆ. “ಡಾತಿ”ಯಲ್ಲಿನ  ಡಾ ತೆಗೆದು ‘ಸತಿ’ಯಲ್ಲಿನ ‘ತಿ’ಗೆ ಜೋಡಿಸಿ ‘ಡಾತಿ’ ಎಂಬ ಹೊಸ ಹೆಸರು ಸೃಷ್ಟಿಸಿ ಡಾನ್ಸ್ ಪ್ರೊಡಕ್ಷನ್ ಮಾಡಿದ್ದರು. 

ಈ ಪ್ರೊಡಕ್ಷನ್‌ನಲ್ಲಿ ಸತಿ ಸಹಗಮನ ಪದ್ಧತಿಯಲ್ಲಿ ಉಪಯೋಗಿಸುವ ಡಾಕ್ ಶಬ್ದ , ಸತಿ-ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ, ಆಗ  ಒಬ್ಬ ಹೆಣ್ಣಿನ ಮನಸ್ಸಿನಲ್ಲಿ ಆಗುವಂತಹ ಭಾವನೆಗಳನ್ನ ಹಿಡಿದು ನೃತ್ಯರೂಪಕದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿತ್ತು. ಗಂಡನ ಸಾವಿನ ಜೊತೆ ಹೆಂಡತಿಯು ಸಾಯಬೇಕು ಎನ್ನುವ ಆ ಪದ್ಧತಿ. ನೈಜೀರಿಯಾದ ರಾಜನ ಸಾರಥಿ ಹೇಗೆ ರಾಜನ ಸಾವಿನ ಜೊತೆ ಅವನು ಸತ್ತು ರಾಜನ ಪ್ರಯಾಣಕ್ಕೆ ಸಹಾಯ ಮಾಡಬೇಕೋ ಹಾಗೆಯೇ, ಜೀವ ತ್ಯಜಿಸಿ ದೇಹ ಸುಟ್ಟಿಕೊಂಡು ದೇಹ ತ್ಯಜಿಸಿ ಗಂಡನ ಜೊತೆ ಸಾವಿನ ನಂತರ ಕೂಡ ಬದುಕುವ ಆ ಹೆಣ್ಣು ‘ಸತಿ’ ನೆನಪಾದಳು. 

ಸಾರಥಿ ತನ್ನ ಜೀವ ತ್ಯಜಿಸೋವಾಗ, ಒಂದು ದೊಡ್ಡ ಆಚರಣೆ ಆಗುತ್ತೆ. ಜನರಲ್ಲಿ ನಂಬಿಕೆ ಹೆಚ್ಚಿಸುವ ಸಂಭ್ರಮದ ವಾತಾವರಣ ಸೃಷ್ಟಿ ಆಗುತ್ತೆ. ಅಲ್ಲಿ ಡಾಕ್ ತರಹದ ಗ್ಬೇಡು (gbedu) ಎನ್ನುವ ಮದ್ದಲೆ ಮೊಳಗುತ್ತದೆ. ಸಾರಥಿಗೆ ಮತ್ತು ತರಿಸಲು ಟ್ರಾನ್ಸ್ ಮೂಡ್‌ಗೆ ಹೋಗಲು ಶಬ್ಧ , ಹೊಗೆ , ಪಾನ ಎಲ್ಲಾ ಇರುತ್ತದೆ. ‘ಸತಿ’ ತನ್ನ ದೇಹ ತ್ಯಾಗ ಮಾಡುವಾಗ ಅವಳಿಗೆ ಹಲವಾರು ತರಹಗಳಲ್ಲಿ ಇದೇ ರೀತಿ ಟ್ರಾನ್ಸ್ ಮೂಡ್‌ಗೆ ಹೋಗಿಸಲು ಆಚರಣೆಗಳು ನಡೆಯುತ್ತವೆ. ಅವಳು ಬೆಂಕಿಯಲ್ಲಿ ಹಾರೋವಾಗ ನೋವು ತಡೆಯಲಾರದೆ ಅವಳ ಕಿರುಚುವ ಧನಿ ಸುತ್ತಲೂ ತಿರುಗುತ್ತಾ ಕುಣಿಯುತ್ತಾ ಡಾಕಿಗಳು ಸೃಷ್ಟಿಸುತ್ತಿರುವ ಡಾಕ್ ಶಬ್ದದಲ್ಲಿ ಕಳೆದು ಹೋಗುತ್ತದೆ.

ಆಚರಣೆ ನಂಬಿದ ಊರಲ್ಲಿರುವ ಜನರಿಗೆ ‘ಸತಿಯ’ ಸಂದೇಶ(ನೋವಿನ ಕೂಗು/ಅರಚುವಿಕೆ) ಕೇಳಿಸದ ಹಾಗೆ; ಆಚರಣೆಯಲ್ಲಿ ನಂಬಿಕೆಯನ್ನು ಬಲಪಡಿಸುತ್ತಾ ಅವಳು ದುರ್ಗಿ ಆಗುತ್ತಾಳೆ ! ಅದೇ ಹೆಣ್ಣು, ಸತಿ ದುರ್ಗಿ ! 

ನಾವು ಖಂಡಗಳನ್ನು ದಾಟಿ ಬದುಕಿದರೂ ನಮ್ಮ ನಂಬಿಕೆ, ಆಚರಣೆಗಳು ಒಂದೇ ರೀತಿಯಲ್ಲಿದೆ.  ಇಲ್ಲಿ ನಂಬಿಕೆಗೆ ಒಪ್ಪಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸತಿ, ಸಾರಥಿ ಪುಣ್ಯವಂತರು. ನಂಬಿಕೆ ಇರದೆ ಅಥವಾ ಜೀವ ತ್ಯಜಿಸಲು ಇಷ್ಟ ಇರದಿದ್ದರೆ ಕೊಲೆಯಾಗುವ ರಾಜನ ಸಾರಥಿ ಮತ್ತು ಗಂಡನ ಹೆಂಡತಿ ಪಾಪಿಗಳು. ಸಾವಂತೂ ಖಚಿತ, ಆದರೆ ಸಾಯುವವರಿಗೆ ಅವರ ಇಷ್ಟಗಳಿಗೆ ತಕ್ಕಂತೆ ಹೆಸರು ಬರುವುದು.

ಹೆಣ್ಣು ಸತಿ ಸಹಗಮನದಲ್ಲಿ ಸುಟ್ಟು ಬೆಂಕಿಯಾಗಿ ಉರಿದು ಬೂದಿಯಾಗಿಯಾಗುತ್ತಾಳೆ, ದುರ್ಗಿಯನ್ನು ಲೋಬಾನ ಹಾಕಿ ಬೆಂಕಿ ಹಚ್ಚಿ ಪೂಜಿಸುತ್ತಾ ಇರುವಾಗ ಡಾಕಿಗಳು ಡಾಕ್ ಭಾರಿಸುತ್ತ ಇರುತ್ತಾರೆ. ಸಾರಥಿಯ ಎದೆಯಬಡಿತದ ಶಬ್ದ ಯಾರಿಗೂ ಕೇಳಿಸುವುದಿಲ್ಲ ಸಾವಿಗೆ ನೈಜೀರಿಯಾದ ಯೋರೋಬ ಜನರು ಕುಣಿಯುತ್ತಾ ಇರುತ್ತಾರೆ.

ಮೈ ಮರೆಯುತ್ತಾರೆ ಮಂದಿ, ಅರಿವು ಕೆಳೆದುಕೊಳ್ಳುತ್ತಾರೆ ಮಂದಿ. ಇಡೀ ಸಮಾಜವೇ ಟೊಂಕ ಕಟ್ಟಿ ನಿಂತಿರುತ್ತದೆ  ಸಾವು ಆಗಿದ್ದೇ ಸರಿ ಎಂದು ಪದೇ ಪದೇ ಒತ್ತಿ ಒತ್ತಿ ಹೇಳಲು, ಹೇಳಿ ಹೇಳಿ ಆದದ್ದನ್ನು ಸರಿ ಎಂದು ಒಪ್ಪಿಕೊಂದು, ಮರೆತು ಬಿಡುವಂತೆ ಮಾಡಲು. 

‍ಲೇಖಕರು Admin

December 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: