ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರ್ತಮಾನದ ಅನಾವರಣ – ಕಕ್ಕುಲಾತಿಯ ಕಥೆಗಳು

-ಬಸವರಾಜ ಮುದನೂರ್

ಏಕ ಗುಚ್ಛದಲ್ಲಿರುವ  ಶ್ರೇಷ್ಠ ಗಾಯಕರ ವಿಭಿನ್ನ ಬೆಸ್ಟ್ ಗಜಲ್ ಗಳು ಆಲಿಸಿದಂಥ ದಿವ್ಯಾನುಭೂತಿ ಆವರಿಸಿತು. ‘ತುಮ್ ಕೊ ದೇಖಾ ತೊ ಎ ಖಯಾಲ್ ಆಯಾ…’ ‘ಎ ತೇರಾ ಘರ್ ಎ ಮೇರಾ ಘರ್…’

‘ಪ್ಯಾರ್ ಮುಝ್ ಸೆ ಜೊ ಕಿಯಾ…’ ‘ಯುಂವ್ ಜಿಂದಗಿ ಕೆ ರಾಹ ಮೇ….’ ಪ್ರೀತಿ, ನಿರಾಸೆ, ವರ್ತಮಾನ, ಜಮಾನಾ ಮತ್ತು ಜಿಂದಗಿ ಬಗೆಗಿನ ಗಜಲ್ ಗಳು ನಮಗಾಗಿ ಸೃಜಿಸಿದ ನಮ್ಮದೇ ಹಾಡುಗಳಿವು ಅನ್ನಿಸದಿರದು. ಹಾಗೆಯೇ ಆತ್ಮೀಯ ಗೆಳೆಯ ಸಿದ್ದು ಸತ್ಯಣ್ಣವರ ಅವರ ‘ಒಂದು ತೇಗದ ಕುರ್ಚಿ’ ಕೃತಿಯಲ್ಲಿನ ಏಳಕ್ಕೆ ಏಳು ಕಥೆಗಳು ವಿಭಿನ್ನವಾಗಿವೆ. ಪ್ರತಿ ಕಥೆಗಳೂ ಎಲ್ಲೋ ಕಣ್ಣಾರೆ ಕಂಡಂತೆ, ಕಿವಿಯಾರೇ ಕೇಳಿದಂತೆ, ನಾವೇ ಅನುಭವಿಸಿದಂತೆ ಭಾಸವಾಗುತ್ತವೆ. ಅರ್ಧ ಗಂಟೆ ಗಜಲ್ ಕೇಳಿದಂತೆಯೇ ಒಂದರ್ಧ, ಮುಕ್ಕಾಲು ಗಂಟೆಯಲ್ಲೇ ಎಡೆಬಿಡದೆ ಓದಿಸಿಕೊಳ್ಳುವ ಚಿಕ್ಕ-ಚೊಕ್ಕ ಕೃತಿಯಿದು.

ಪ್ರೀತಿ, ದ್ವೇಷ, ಆಸೆ, ಅಸೂಯೆ, ಅವಮಾನ, ಸಾವು-ನೋವು, ನಿರಾಸೆ, ಬಡತನ, ಕಕ್ಕುಲಾತಿ, ಜಾತಿ ವ್ಯವಸ್ಥೆ, ಜೀವನ ಪಾಠ, ಜೀವನೋತ್ಸಾಹ, ಅಂತ:ಕರಣ, ಮಾನವೀಯ ಮೌಲ್ಯ ಒಳಗೊಂಡಿರುವ ಕಥನಗಳು ಬದುಕಿನ ಸಾರವನ್ನು ಸ್ಪಷ್ಟವಾಗಿ ಹೇಳುತ್ತವೆ. ಪ್ರತಿ ಕಥೆಯಲ್ಲೂ ಒಳಿತಿಗೆ ದೀವಿಗೆ ಹಚ್ಚುವ ಪರಿ ಅದ್ಭುತವಾಗಿ ಒಡಮೂಡಿದೆ. ‘ಹತ್ಯೆ’ ಕಥೆಯಲ್ಲಿ ಮಗು ಕದ್ದ ನರ್ಸ್ ರೇಣುಕಾ, ಪತಿ ಗುಡದಪ್ಪನ ಚಿತ್ರಣ ಕಣ್ಮುಂದೆ ಕಟ್ಟಿದಂತಾಗಿ ಮನಸು ಆರ್ದ್ರಗೊಳ್ಳುತ್ತದೆ. ನರ್ಸ್ ರೇಣುಕಾ ಮಗು ಕದ್ದಿದ್ದು ಅಪರಾಧವೇ ಸರಿಯಾದರೂ ದುಷ್ಟ ಸಮಾಜವೇ ಕೃತ್ಯಕ್ಕೆ ಪ್ರೇರಣೆ. ಬಂಜೆಯೆಂಬ ಪಟ್ಟ ಕಟ್ಟಿದ ಜನರ ಅಮಾನವೀಯ ವರ್ತನೆ ರೇಣುಕಾಳ ಮತಿಭ್ರಮಣೆಗೆ ಕಾರಣ. ಮಕ್ಕಳ ಕಳ್ಳಿಯ ಆರೋಪ ಹೊತ್ತ ರೇಣುಕಾಳ ಸಾವಿಗೆ ಸಮಾಜವೇ ಹೊಣೆ. ದಿಕ್ಕೆಟ್ಟ ಸಮಾಜ ಮತ್ತು ಅಸಹಾಯಕತೆ ನಡುವಿನ ಸಂಘರ್ಷವನ್ನು ನಯವಾಗಿ ಹೆಣೆಯಲಾಗಿದೆ. ‘ಹತ್ಯೆ’ ಕಥನದಿ ಸತ್ಯಾಸತ್ಯತೆಯ ಸೂಕ್ಷ್ಮ ಸಂದೇಶ ಮನುಷ್ಯನ ಸೋಗಲಾಡಿ ಮನಸಿಗೆ ಸಾಣೆ ಹಿಡಿಯುತ್ತದೆ. ಸಿದ್ದು ಓರ್ವ ಸಂವೇದನಾಶೀಲ ಪತ್ರಕರ್ತನಾಗಿ ಕಣ್ಣಾರೆ ಕಂಡ ಘಟನಾವಳಿಗೆ ಅಂತ:ಕರಣದ ಸ್ಪರ್ಶ ನೀಡಿದ್ದಾರೆ‌. ವರ್ತಮಾನದಲಿ ಕುಸಿಯುತ್ತಿರುವ ಮಾನವೀಯ ಮೌಲ್ಯದ ಹೂರಣ ಅನಾವರಣಗೊಳಿಸಿದ ಶೈಲಿ ವಿಶೇಷವಾಗಿದೆ.

ಕೃತಿಯ ಶೀರ್ಷಿಕೆ ಕಥೆಯಾದ ‘ಒಂದು ತೇಗದ ಕುರ್ಚಿ’ ಕಥನವಂತೂ ಶಾರ್ಟ್ ಮೂವಿ ನೋಡಿದ ಅನುಭವ ನೀಡುತ್ತದೆ. ಹಿರೋತನ ಅಥವಾ ದೊಡ್ಡ ಮನುಷ್ಯ ಎಂಬ ಐಕಾನಿಕ್ ವ್ಯಕ್ತಿತ್ವ ಪ್ರತಿಯೊಬ್ಬರನ್ನು ಸೆಳೆಯುತ್ತಲೇ ಇರುತ್ತದೆ. ಇತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲೂ ವಿಲನ್ ಗಳನ್ನೇ ಹಿರೋಗಳಂತೆ ಬಿಂಬಿಸುವ ಪ್ರಯತ್ನ ಹೆಚ್ಚಾಗಿದೆ. ಸಿನೆಮಾ, ಧಾರಾವಹಿಗಳಲ್ಲಂತೂ ವಿಲನ್ ಗಳನ್ನೇ ಹಿರೋಗಳಂತೆ ವಿಜೃಂಭಿಸಿ ವಿಷ ಬೀಜ ಬಿತ್ತುವ ಪರಿಪಾಠ ತೀರ ಹಳೆಯದಾಗಿಬಿಟ್ಟಿದೆ ಬಿಡಿ. ಈ ಕಥೆಯಲ್ಲಿ ಮಾತ್ರ ನಿಜವಾದ ಹಿರೋ ಮಾಲತೇಶ ಕಂಡ ಗೌಡರ ಕುರ್ಚಿಯ ಕನಸು ವಾಸ್ತವ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಕುರ್ಚಿ ಮೋಹಕ್ಕೆ ಮರಳಾಗಿ ಗೌಡನಂತೆ ಊರ ಉಸಾಬರಿ ಮಾಡ ಹೊರಟ ಪತ್ರಕರ್ತನದ್ದು ಕೇವಲ ಆರಂಭ ಶೂರತ್ವವಾಗುತ್ತದೆ. ಪರಸೇಗೌಡರ ಮರಣಾನಂತರ ಆತನ ಮಣ್ಣಿಗೂ ಸಹ ಮಕ್ಕಳು ಬಾರದ ಸ್ಥಿತಿ, ಉರುವಲು ಕಟ್ಟಿಗೆಯಿಲ್ಲದೆ ಮನೆಗೆಲಸದ ದೇವಕ್ಕ ಗೌಡರ ಕುರ್ಚಿಯ ಕಾಲುಗಳನ್ನೇ ಉರುವಲು ಕಟ್ಟಿಗೆಯಾಗಿ ಬಳಸುತ್ತಾಳೆ. ಅದೇ ಕಟ್ಟಿಗೆಯ ಬೆಂಕಿಗೆ ಕಾಯಿಸಿದ ಚಹಾ ಸೇವಿಸಿದ ಮಾಲತೇಶ ಕುರ್ಚಿ ಹುಡುಕಿದಾಗ ದೇವಕ್ಕನಿಂದ ಸಿಕ್ಕ ಉತ್ತರದಿ ನಮ್ಮೊಳಗಿನ ದರ್ಪ, ದೌಲತ್ತು ಮತ್ತು ಗೌಡಕಿ ಗತ್ತಿನ ಮನೋಸ್ಥಿತಿಗೆ ಕೊಳ್ಳಿಯಿಟ್ಟ ಅನುಭವ ಮೂಡುತ್ತದೆ. 

‘ಮನದ ಮರ’ ಕಥನದಲ್ಲಿ ಅಪ್ಪನ ಬಳಿಕ ಆಲದ ಮರವನ್ನೂ ಕಳೆದುಕೊಂಡು ಒಬ್ಬಂಟಿಯಾದ ತಿಮ್ಮಣ್ಣನ ಆರ್ತನಾದ ಮನ ಮಿಡಿಯುವಂತಿದೆ. ಕೊನೆ ಗಳಿಗೆಯಲ್ಲಿ ಮನೆಯೊಳಕ್ಕೆ ಹೆಜ್ಜಿಯಿಟ್ಟ ಪಕ್ಕದ ಮನೆಯ ವೈಶಾಲಿ ಮತ್ತು ಶಾಮಣ್ಣಗೆ ತಿಮ್ಮಣ್ಣ ಕೇಳುವ ‘ಮರ ಉಳೀತಿತ್ತಾ? ಇಲ್ವಾ?’ ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಕೇಳುವ ಪ್ರಶ್ನೆಯಾಗಿದೆ. ಸದಾ ಕಾಡುತ್ತಲೇ ಇರುವ ಪ್ರಶ್ನೆಯಾಗಿ ಉಳಿಯುತ್ತದೆ. ಜೀವ ಮತ್ತು ಪರಿಸರದ ಉಳುವಿಗೆ ಮಾನವೀಯ ಗುಣ ಉಳಿಯಬೇಕಿದೆ. ಜೀವಪರತೆ ಉಳಿದರೆ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆ ಉಳಿದೀತು. ಮನುಷ್ಯತನ ಕಳೆಯುತ್ತ ಹೋದರೆ, ಗಿಡಮರಗಳು ಕಡಿಯುತ್ತ ಸಾಗಿದರೆ ಗಾಳಿ, ನೀರು, ಭೂಮಿ, ಜೀವಜಂತುವೂ ಉಳಿಯದೆಂಬ  ಪರಿಕಲ್ಪನೆಯನ್ನು ಈ ಕಥನದ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

‘ಮಂಜವ್ವ’ ಕಥೆ ಈ ಕಾಲದ ದಾಂಪತ್ಯದ ನ್ಯೂನತೆಗಳನ್ನು ಬಿಂಬಿಸುವ ಮೂಲಕ ನಿಷ್ಠೆಯ ಸರಳ ಜೀವನದ ಅರ್ಥವನ್ನು ಸೂಚ್ಯವಾಗಿ ಹೇಳುತ್ತದೆ. ‘ರಾಮನ ತ್ರಾಸು’ ಕಥನದಲ್ಲಿ ಸಿದ್ದಯ್ಯ ಮತ್ತು ರಾಮನ ನಡುವಿನ ಜಿದ್ದಾಜಿದ್ದಿ, ಜಾತಿ ವ್ಯವಸ್ಥೆ ಹಚ್ಚುವ ಕಿಡಿ ನಮ್ಮ ನಡುವಿನ ಅನೇಕ ವಾಸ್ತವ ಘಟನಾವಳಿಗಳನ್ನು ನೆನಪಿಸುತ್ತದೆ. ‘ಸೂರಿಕೆರೆಯಲ್ಲಿ’, ‘ಹಂದಿಗೊಂಬೆ’ ಕಥನಗಳು ಸೇರಿದಂತೆ ಪ್ರತಿ ಕಥನಗಳಲ್ಲೂ ನಯ ನಾಜೂಕಾಗಿ ಒಳಿತನ್ನೇ ಸಾರುವ, ಕವಲು ದಾರಿಯ ವ್ಯವಸ್ಥೆಯನ್ನು ಸರಿದಾರಿಗೆ ತರುವ ಲೇಖಕನ ಪ್ರಯತ್ನ, ಚಾಕಚಕ್ಯತೆ ಉತ್ತಮವಾಗಿ ಮೂಡಿದೆ. ಯಾವುದನ್ನೂ ನೇರವಾಗಿ ಹೇಳದೆ ಓದುಗರನ್ನು ಒಂದು ಗುಂಗಿನಲ್ಲಿ ಮುಳುಗಿಸಿ ಚಿಂತನೆಗೆ ಹಚ್ಚುವ ನಿರೂಪಣೆಯ ನೈಪುಣ್ಯತೆ ಶ್ರೇಷ್ಠತೆಯಿಂದ ಕೂಡಿದೆ. ಕೃತಿಯ ಪ್ರತಿ ಕಥನಗಳಲ್ಲೂ ಗದಗದ ಗ್ರಾಮೀಣ ಭಾಷಾ ಸೊಗಡು ಹಾಸು ಹೊಕ್ಕಿರುವುದು ಕಥೆಗಳ ಜೀವಾಳವಾಗಿದೆ.

ಸುಮಾರು ಒಂದು ವರ್ಷ ಕಾಲ ಕೋಟೆನಾಡಿನಲ್ಲಿ ಮಾಧ್ಯಮ ಪ್ರತಿನಿಧಿಯಗಾಗಿ ಕೆಲಸ ಮಾಡಿದ ಸಿದ್ದು ಸತ್ಯಣ್ಣವರ ಎಲ್ಲರೊಳಗೊಂದಾಗುವ ಹಿರಿಗುಣ ಅನುಕರಣೀಯ. ಎನಗಿಂತ ಕಿರಿಯರಿಲ್ಲ

ಎಂಬ ಬಸವಣ್ಣನ ತತ್ವಾದರ್ಶ ಮೈಗೂಡಿಸಿಕೊಂಡಿರುವ ಸಿದ್ದು ಸತ್ಯಣ್ಣವರ ವಿನಯತೆ, ವಿಧೇಯತೆ ಮಾದರಿ. ತನ್ನತನಕ್ಕೆ ಧಕ್ಕೆ ಬಂದರೆ ಬೆಂಕಿ ಬಿರುಗಾಳಿ ಆಗುವ ಪರಿಯೂ ಅಷ್ಟೇ ಭಯಂಕರ. ಅಪರೂಪದ ಮಿತ್ರ ಸಿದ್ದು ಸತ್ಯಣ್ಣವರ ದುರ್ಗದ ಪರಿಸರಕ್ಕೆ ಹೊಂದಿಕೊಂಡಿದ್ದು ಅನೇಕ ಗೆಳೆಯರ ಜತೆ ಉತ್ತಮ ಒಡನಾಟ ಹೊಂದಿದ್ದ. ಕೋಟೆ-ಕೊತ್ತಲು, ಜೋಗಿಮಟ್ಟಿ, ಚಂದ್ರವಳ್ಳಿ ಗಿರಿಧಾಮಗಳನ್ನು ಸುತ್ತುತ್ತ ಹಾಯಾಗಿದ್ದನು. ಆದರೆ ಅದೇನು ತಕಲೀಪ್ ಇತ್ತೋ ಏನೋ ಗೊತ್ತಿಲ್ಲ. ಏಕಾಏಕಿ ‘ನಂಗ ಈ ಕೆಲಸ ಸಾಕಾಗ್ಯಾದ ಸರ್ರ. ನಮ್ಮೂರಿನ ಕಡೆಗೇ ಹೊಕ್ಕೀನಿ’ ಅಂದ ಗಳಿಗೆ ನಮಗೇಕೋ ಬೇಡ ಅನ್ನಲಾಗಲಿಲ್ಲ. ಸ್ನೇಹಿತರೆಲ್ಲ

ಸೇರಿ ಬೀಳ್ಕೊಟ್ಟೆವು. ಆದರೀಗ ಸಿದ್ದು ಸತ್ಯಣ್ಣವರಗೆ ಇಲ್ಲಿಯೇ ಉಳಿಸಿಕೊಳ್ಳಬೇಕಿತ್ತು. ಇಂಥ ಅಪರೂಪದ ಕಥೆಗಾರ ದುರ್ಗ ತೊರೆಯಲು ಅಷ್ಟು ಸುಲಭವಾಗಿ ಬಿಟ್ಟು ಕೊಡಬಾರದಿತ್ತು ಎಂದೆನಿಸುತ್ತಿದೆ.

(ಸಿದ್ದು ಸತ್ಯಣ್ಣವರ ಅವರ ‘ಒಂದು ತೇಗದ ಕುರ್ಚಿ’ ಕಥಾ ಸಂಕಲನ ಒಟ್ಟು 84 ಪುಟಗಳಿದ್ದು ‘ಅಮೂಲ್ಯ ಪುಸ್ತಕ’ ಪ್ರಕಟಿಸಿದೆ. ‘ಅಂತ:ಕರಣ ಸೃಜಿಸಿದ ಕಥೆಗಳು’ ಎಂಬುದಾಗಿ ರಘುನಾಥ ಚ.ಹ. ಅವರು ಮುನ್ನುಡಿ ಬರೆದಿದ್ದಾರೆ.)

‍ಲೇಖಕರು Admin

3 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading