
-ಸಾ ದಯಾ
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಅವಳಿ ನಾಟಕಗಳ ಕುರಿತು
ಕಳೆದ ಶತಮಾನದ ಎಪ್ಪತ್ತು – ಎಂಬತ್ತರ ದಶಕದಲ್ಲಿ ಕರಾವಳಿಯ ರಂಗ ತಂಡಗಳು ಮುಂಬಯಿ ಮಹಾನಗರಕ್ಕೆ ತಮ್ಮ ನಾಟಕ ತಂಡಗಳೊಂದಿಗೆ ಆಗಮಿಸಲು ಪ್ರಾರಂಭಿಸಿದವು. ಅವುಗಳಲ್ಲಿ ಮುಂಚೂಣಿಯಲ್ಲಿರುವಂತದ್ದು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾ ಸಂಗಮ ತಂಡ. ಡಾಕ್ಟ್ರಾ…. ಭಟ್ರಾ! ನಾಟಕ 400ಕ್ಕೂ ಹೆಚ್ಚು ಯಶಸ್ವಿ ಪ್ರಯೋಗ ಪ್ರಯೋಗಗಳನ್ನು ಕಂಡಿತ್ತು. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ಹಾಗೂ ಗರ್ಲ್ಫ್ ರಾಷ್ಟ್ರಗಳಲ್ಲೂ ಪ್ರಥಮ ಬಾರಿಗೆ ಸೈ ಅನಿಸಿಕೊಂಡ ಈ ಪ್ರಯೋಗದ ನಂತರ ರಂಗಭೂಮಿಯಲ್ಲಿ ಹೊಸ ಹೊಸ ಆವಿಷ್ಕಾರಗಳ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ವಿಜಯಕುಮಾರ್ ಕೊಡಿಯಾಲ್ ಬೈಲ್. ಅವರು ಓರ್ವ ಪ್ರಯೋಗಶೀಲ ನಿರ್ದೇಶಕರು. ಮುಂಬಯಿಯ ಮರಾಠಿ ನಾಟಕಗಳನ್ನು ಅಭ್ಯಾಸಿಸಿ, ಇಲ್ಲಿನ ನಾಟಕದ ನಡೆಯನ್ನು ತಮ್ಮ ನಾಟಕಗಳಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದರು.
ಸದಾ ಬದ್ಧತೆ, ರಂಗ ಶಿಸ್ತು, ಪರಿಶ್ರಮವನ್ನು ತಮ್ಮ ಕಲಾವಿದರಿಂದ ಬಯಸುವ ವಿಜಯಕುಮಾರ್ ಕೋಡಿಯಾಲ್ ಬೈಲ್ ತುಳುನಾಡಿನ ಇತರ ತಂಡಗಳಿಗಿಂತ ಭಿನ್ನ ರೀತಿಯಲ್ಲಿ, ಸಮರ್ಥವಾದ ನಾಟಕಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಇತ್ತೀಚಿನ ಶಿವದೂತ ಗುಳಿಗ (2021), ಹಾಗೂ ಛತ್ರಪತಿ ಶಿವಾಜಿ (2025) ತುಳು ಹಾಗೂ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ ನಾಟಕಗಳು. ಈ ಎರಡೂ ನಾಟಕಗಳು ಉತ್ಕೃಷ್ಟ ತಾಂತ್ರಿಕತೆಯನ್ನು ತುಳು ನಾಟಕರಂಗಕ್ಕೆ ಪರಿಚಯಿಸಿದವು. ನಾಟಕ ರಂಗ ನಿಂತ ನೀರಾಗಬಾರದೆಂದು ಸದಾ ತುಡಿಯುತ್ತಿರುವ ವಿಜಯಕುಮಾರ್, ಶಿವದೂತ ಗುಳಿಗದ ಮೂಲಕ ಹೊಸ ಪ್ರಯೋಗ ಮಾಡಿದರೆ; ಇದೀಗ ಛತ್ರಪತಿ ಶಿವಾಜಿ ನಾಟಕದಲ್ಲೂ ಅದನ್ನು ಮುಂದುವರಿಸಿದರು. ಶಿವರಾಹೀರ್ ಬಾಬಾಸಾಹೇಬ್ ಪುರಂದರೇ ಮರಾಠಿ ರಂಗಭೂಮಿಯ ಓರ್ವ ಸೃಜನಶೀಲ ನಾಟಕಕಾರ. 1978ರಲ್ಲಿ ರಚನೆಗೊಂಡ ‘ಜಾನ್ತಾ ರಾಜ’ ನಾಟಕ ಪುರಂದರೇ ಅವರ ನಿರ್ದೇಶನದಲ್ಲಿ 1985 ರಲ್ಲಿ ಪುಣೆಯಲ್ಲಿ ಪ್ರಥಮ ಪ್ರಯೋಗ ಕಂಡಿತ್ತು. ತೆರೆದ ಬಯಲಲ್ಲಿ ಕಟ್ಟಿದ ಎರಡು – ಮೂರು ಮೇಲ್ಚಾವಣಿಗಳ ಸಾವಿರಾರು ಕಲಾವಿದರು, ಆನೆಗಳು ಕುದುರೆಗಳನ್ನು ನಾವು ಆ ಪ್ರಯೋಗಗಳಲ್ಲಿ ಕಾಣಬಹುದಿತ್ತು. ನಾಲ್ಕೈದು ಸಾವಿರ ಪ್ರೇಕ್ಷಕರನ್ನು ಹೊಂದಿರುತ್ತಿದ್ದ ಈ ನಾಟಕದ ಪ್ರಯೋಗಗಳಲ್ಲಿ ಕಲಾವಿದರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡು ಇರುತ್ತಿದ್ದರು.
ಅಂತಹದ್ದೇ ಅನುಭವಗಳನ್ನು ಕೊಡುವ ನಾಟಕಗಳು ವಿಜಯಕುಮಾರ್ ಅವರ ಶಿವದೂತ ಗುಳಿಗೆ ಹಾಗೂ ಚತ್ರಪತಿ ಶಿವಾಜಿ. ತುಳುನಾಡಿನ ಆರಾಧನಾ ದೈವಗಳಲ್ಲಿ ಒಂದಾದ ಗುಳಿಗ ದೈವದ ಕಥೆಯನ್ನು ಎಲ್ಲೂ ಅಪಚಾರ ವಾಗದಂತೆ ರಂಗಕ್ಕೆ ತಂದಿರುವುದು ಮಾತ್ರವಲ್ಲದೆ ಮುಂಭಾಪುರಿಯ ಹೊಸ ತಲೆಮಾರಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿರುವುದು ಆ ನಾಟಕದ ಹೆಗ್ಗಳಿಕೆ. ಈಗಾಗಲೇ ಸುಮಾರು 800 ಪ್ರಯೋಗಗಳನ್ನು ಕಂಡಿರುವ ಈ ನಾಟಕ ತುಳುರಂಗಭೂಮಿಯಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದೆ.

ಶಿವದೂತ ಗುಳಿಗೆ ಹಾಗೂ ಛತ್ರಪತಿ ಶಿವಾಜಿ ಈ ಎರಡು ನಾಟಕಗಳು ಕೇವಲ ತಾಂತ್ರಿಕವಾಗಿ ಉತ್ಕೃಷ್ಟವಲ್ಲ; ಇಲ್ಲಿನ ಕಲಾವಿದರು ಇತರ ಅವಿಭಜಿತ ದಕ್ಷಿಣ ಕನ್ನಡದಿಂದ ಬರುವ ತಂಡದ ಕಲಾವಿದರುಗಳಂತಲ್ಲ. ಗುಳಿಗನ (ಮೂವರೂ) ಅಬ್ಬರ, ನೆಲವುಲ್ಲ ಸಂಕೆಯ ದರ್ಪ – ಅಹಂ ಎಲ್ಲವು ಪ್ರೇಕ್ಷಕನ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಹದ್ದು; ಮನಸ್ಸಿಗೆ ತಟ್ಟುವಂತದ್ದು. ಇತ್ತೀಚೆಗೆ ಈ ತಂಡದ ಹೊಸ ನಾಟಕ ಛತ್ರಪತಿ ಶಿವಾಜಿ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ಈ ನಾಟಕದ ಜೀಜಾಬಾಯಿಯ ಪಾತ್ರಧಾರಿಯ ರಂಗನಡೆ, ಶಿವಾಜಿ ಬಂದ ನಂತರ ಆಕೆ ವ್ಯಕ್ತಪಡಿಸುವ ದುಗುಡ ಆಕೆಯ ಕನಸು, ಹಾವಭಾವ; ಔರಂಗಜೇಬನ ಗತ್ತು, ಮಾತುಗಾರಿಕೆ, ಅಹಂ ಇವೆಲ್ಲವೂ ನಾಟಕ ನೋಡುಗನಿಗೆ ಚರಿತ್ರೆಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.
ಇಲ್ಲಿ ಗುರುತಿಸಲೇ ಬೇಕಾದ ಇನ್ನೊಂದು ಪಾತ್ರ ಅಫ್ಝಲ್ ಖಾನ್. ಈ ಪಾತ್ರಧಾರಿಯ ಸ್ವರಭಾರ, ಕಣ್ಣಿನಿಂದಲೇ ಮಾತನಾಡುವ ರೀತಿ ಹಾಗೂ ಈ ಪಾತ್ರದ ಒಟ್ಟು ಆಂಗಿಕ ಅಭಿನಯ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಈ ನಾಟಕದ ಶಿವಾಜಿ ಪಾತ್ರಧಾರಿ ಇನ್ನೂ ಒಂದಿಷ್ಟು (ಅಗತ್ಯಕ್ಕಿಂತ ಹೆಚ್ಚು ಅಂಗ ಚಲನೆ) ಸುಧಾರಿಸಿಕೊಳ್ಳುವ ಅಗತ್ಯವಿದೆ. ಇಲ್ಲಿ ಬರುವ ಶಿವಾಜಿಯ ಬಾಬಾ (ತಂದೆ)ನ ಪಾತ್ರಧಾರಿ ಯಾಕೋ ನಿರೀಕ್ಷೆಯ ಮಟ್ಟದಲ್ಲಿಲ್ಲ; ಇತರ ಪಾತ್ರಗಳ ಎದುರು ಸಪ್ಪೆ ಅನಿಸುತ್ತದೆ. ಎರಡೂ ನಾಟಕಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಎಲ್ಲಾ ಕಲಾವಿದರು ನಿರ್ದೇಶಕರ ಆಶಯಕ್ಕೆ ನ್ಯಾಯ ಒದಗಿಸಿದ್ದಾರೆ. ಎರಡೂ ನಾಟಕಗಳಲ್ಲಿನ ತಾಂತ್ರಿಕತೆ, ಬೆಳಕಿನ ವಿನ್ಯಾಸ ನಾಟಕಗಳಿಗೆ ಹೊಸ ಆಯಾಮ ನೀಡುವಲ್ಲಿ ಯಶಸ್ವಿಯಾಗಿದೆ. ಪಾತ್ರಗಳ ಭಾವನೆಗಳಿಗೆ ತಕ್ಕಂತೆ ಬೆಳಕಿನ ವ್ಯವಸ್ಥೆ ನೀಡಲಾಗಿದ್ದು, ನಾಟಕದ ಗೆಲುವಿಗೆ ಬೆಳಕೂ ಒಂದು ಪಾತ್ರವಾಗಿ ದುಡಿರುವುದನ್ನು ಗಮನಿಸಬಹುದು. ಈ ಎರಡೂ ನಾಟಕಗಳನ್ನು ವೀಕ್ಷಿಸಿದಾಗ ವಿಜಯಕುಮಾರ್ ಕೊಡಿಯಲ್ ಬೈಲ್ ಅವರಿಗೆ ವಿಭಿನ್ನ ರೀತಿಯ ನಾಟಕ ನೀಡುವ ತುಡಿತ ಹಾಗೂ ರಂಗದಲ್ಲಿರುವ ಬದ್ಧತೆಯನ್ನು ನಾವು ಗುರುತಿಸಬೇಕು.
ಇತ್ತೀಚೆಗೆ, ಮುಂಬೈಯಲ್ಲಿ ಹತ್ತು ಛತ್ರಪತಿ ಶಿವಾಜಿ ಹಾಗೂ ಒಂದು ಶಿವದೂತ ಗುಳಿಗೆ ನಾಟಕಗಳನ್ನು ಮಹಾನಗರದ ಹಾಗೂ ಉಪನಗರಗಳಲ್ಲಿ ನೀಡಿರುವ ತಂಡ, ಮುಖ್ಯವಾಗಿ ಇಲ್ಲಿನ ಠಾಣೆಯ ಗಡ್ಕರಿ ಸಭಾಗ್ರದಲ್ಲಿ ಪ್ರಯೋಗಗೊಂಡ ಛತ್ರಪತಿ ಶಿವಾಜಿ ನಾಟಕವನ್ನು ವೀಕ್ಷಿಸಿದ ಏಕನಾಥ್ ಶಿಂದೆ ಇಲ್ಲಿನ ಪಾತ್ರಗಳನ್ನು ಕಂಡು ಹೊಗಳಿದ್ದು; ಅದರಲ್ಲೂ ಜೀಜಾಬಾಯಿ ಮೊದಲಾದ ಪಾತ್ರಗಳನ್ನು ಕುರಿತು ‘ಮಜೇ ಆವಡ್ಳಾ’ ಅಂದಿರುವುದು ಈ ನಾಟಕದ ಯಶಸ್ಸಿಗೆ ಸಾಕ್ಷಿ ಎನ್ನಬೇಕು. ಅದಕ್ಕಿಂತಲೂ ಮುಖ್ಯವಾಗಿ ಕರ್ನಾಟಕ – ಮಹಾರಾಷ್ಟ್ರದ ಸೌಹಾರ್ದತೆಗೆ ಈ ಛತ್ರಪತಿ ಶಿವಾಜಿ ನಾಟಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಂದ ಮಹತ್ವದ ಕೊಡುಗೆಯಾಗಿದೆ.






0 Comments