ವರದೇಂದ್ರ ಕೆ ಮಸ್ಕಿ ಓದಿದ ‘ನಿಲುಗನ್ನಡಿ’

ವರದೇಂದ್ರ ಕೆ ಮಸ್ಕಿ

ಮಸ್ಕಿಯಲ್ಲಿ ಅಪರೂಪವಾದ, ಸಾಹಿತ್ಯದ ಸೇವೆಗೆ ತಮ್ಮ ಇಡೀ ಸಂಸಾರವನ್ನೇ ಮುಡಿಪಾಗಿಟ್ಟುಕೊಂಡ ಏಕೈಕ ಕುಟುಂಬವೆಂದರೆ ಅದು ಕೋಡಗುಂಟಿ ಕುಟುಂಬ. ಇಂತಹ ಕುಟುಂಬದ ಮಗಳಾಗಿ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸಾಧನೆಯ ಮಾರ್ಗವನ್ನು ಕಂಡುಕೊಂಡಹವರು ಸಹೋದರಿ, ಶ್ರೀಮತಿ ರೇಣುಕಾ ಕೋಡಗುಂಟಿಯವರು. ಇವರ ಸಾಹಿತ್ಯದ ದಾರಿ ವೈಶಿಷ್ಟ್ಯವಾಗಿದೆ ಮತ್ತು ವಿಸ್ತಾರವಾಗಿದೆ. ಕಥೆ, ಕವನಗಳ ಜೊತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತು ಸಂಶೋಧನೆಯನ್ನೂ ಸಹ ಪ್ರಸ್ತುತ ಕಾಲಮಾನದಲ್ಲಿ ಮಾಡುತ್ತಿರುವುದು ಒಮ್ಮೆ ಸೋಜಿಗವೆನಿಸಿದರೆ ಒಮ್ಮೆ ಇವರು ನಮ್ಮ ಭಾಗದವರು ಎಂಬುದಕ್ಕೆ ಹೆಮ್ಮೆ ಎನಿಸುತ್ತದೆ. ಸಾಹಿತ್ಯದ ಎಲ್ಲ ಮಗ್ಗುಲುಗಳನ್ನು ಕಂಡು ಅದರ ಸವಿಯನ್ನು ಉಂಡು ಓದುಗರಿಗೂ ಹಂಚುತ್ತಿರುವುದು ಖುಷಿ ವಿಚಾರ.

ಒಟ್ಟು 12 ಕಥೆಗಳುಳ್ಳ ಈ “ನಿಲುಗನ್ನಡಿ” ಅಪ್ಪಟ ಮಸ್ಕಿ ಭಾಷೆಯಿಂದ ಕೂಡಿದ ಮಸ್ಕಿಯ ಘಟನಾವಳಿಗಳನ್ನೊಳಗೊಂಡ ಕಥಾ ಹಂದರ. ಗ್ರಾಮೀಣ ಭಾಗದಲ್ಲೇ ಬೆಳೆದರೂ ಕೂಡ ಪುಸ್ತಕ ಭಾಷೆ ಕಲಿತವರು ಮತ್ತೆ ಗ್ರಾಮ್ಯ ಭಾಷೆಯಲ್ಲಿ ಪದಗಳನ್ನು ಪೋಣಿಸುವುದು ಸುಲಭದ ಮಾತಲ್ಲ. ಆದರೆ ಈ ಹನ್ನೆರಡು ಕಥೆಗಳನ್ನು ಓದಿದಾಗ ನಮಗೆ ಮಸ್ಕಿ ಭಾಷೆಯ ಹೊರತಾಗಿ, ಪುಸ್ತಕ ಭಾಷೆಯಾಗಲಿ ಅಥವ ಬೇರೆ ಪ್ರಾಂತ್ಯದ ಪ್ರಾದೇಶಿಕ ಭಾಷೆಯಾಗಲಿ ನಮಗೆ ಕಾಣಸಿಗುವುದಿಲ್ಲ. ಈ ಕಾರಣಕ್ಕೆ , ಅಕ್ಕ ಶ್ರೀಮತಿ ರೇಣುಕಾ ಕೋಡಗುಂಟಿಯವರು ನಮ್ಮ ಮಧ್ಯೆ ವಿಶೇಷವಾಗಿ ಕಾಣುತ್ತಾರೆ. ಗಟ್ಟಿ ಗಿತ್ತಿಯಾಗಿ ಸಾಹಿತ್ಯದ ಬಳಗದಲ್ಲಿ ಉಳಿಯುತ್ತಾರೆ. ನಾನೂ ಮಸ್ಕಿಯವನೇ ಎಂಬ ಕಾರಣಕ್ಕೆ ಕಥೆಗಳು ಮತ್ತಷ್ಟು ಆಪ್ತವಾಗಿ ಬಿಟ್ಟವು. ನಮ್ಮ ಭಾಷೆಯ ಕಥೆಗಳನ್ನು ಓದುವುದೇ ಒಂದು ಮಧುರಾನುಭೂತಿ ನೀಡುವಂತಹುದು. ಏನಿವೆ ಕಥೆಗಳೊಳಗೆ ಎಂದು ಹೊಕ್ಕು ನೋಡಿ ನನ್ನ ಅನುಭವಗಳನ್ನು ಹೆಕ್ಕಿ ನಿಮ್ಮ ಓದಿಗೆ ನೀಡುತ್ತೇನೆ. ಒಮ್ಮೆ ಕಣ್ಣಾಡಿಸಿ.

ಊಹೆಗೆ ದಕ್ಕುವುದಕ್ಕಿಂತ ಅನುಭವಕ್ಕೆ ದಕ್ಕುವುದು ಬಹಳ. ಅನುಭವಿಸಿ ಬರೆದ ಬರಹ ನೈಜವಾಗಿ ಹೊರಬರುತ್ತದೆ ಎಂಬುದಕ್ಕೆ ಉದಾಹರಣೆಯೇ ಈ ಸಂಕಲನದ ಮೊದಲ ಕಥೆ. “ಜಾತ್ರಿ”. ಹೌದು ಈ ಕಥೆ ಓದ್ತಾ ಓದ್ತಾ ಓದುಗ ಜಾತ್ರೆಯಲ್ಲಿ ಕಳೆದುಹೋಗುತ್ತಾನೆ. ಜಾತ್ರಿಯ ಮೆರುಗು, ಸಡಗರದಲ್ಲಿ ಓದುಗ ಲೀನವಾಗುತ್ತಾನೆ. ಇಲ್ಲಿ ಕಥೆಗಾರ್ತಿ ಸ್ವತಃ ಜಾತ್ರಿಯ ಅನುಭವಗಳನ್ನು ಅನುಭವಿಸಿಯೇ ಬರೆದಿರುವುದು ಗೋಚರವಾಗುತ್ತದೆ ಮತ್ತು ಓದುಗನಿಗೆ ಜಾತ್ರೆಯ ಮಜಾ ಈ ಕಥೆಯ ಓದಿನಿಂದಲೂ ಸಿಗುತ್ತದೆ ಎಂಬುದು ಪ್ರಮುಖವಾಗಿ ಗಮನಿಸುವಂತಹುದಾಗಿದೆ.

“ಸೂಲ್ಗಿತ್ತಿ ಯಂಕಮ್ಮ”ಳ ಕಥೆಯಂತೂ ಜೀವ ಕೈಯಲ್ಲಿ ಹಿಡಿದೇ ಓದುವಂತೆ ಇದೆ. ಗೌಡರ(ಸೀತಮ್ಮಳ ಪತಿ) ನಿಟ್ಟುಸಿರಿಗಿಂತ ಹೆಚ್ಚು ಓದುಗರ ನಿಟ್ಟುಸಿರೇ ಸೀತಮ್ಮಳ ಬಾಣಂತನದ ಬಳಿಕ ಜಾಸ್ತಿ ಅನಿಸುತ್ತದೆ. ಹಿಂದೆ ಗ್ರಾಮಗಳಲ್ಲಿ ಸೂಲ್ಗಿತ್ತಿಯರೇ ವೈದ್ಯರು, ಅವರೇ ನಾರಯಣ, ಅವರೇ ಹರಿ. ನಿರಪೇಕ್ಷಿಗಳಾಗಿ ಗರ್ಭಿಣಿಯರ ಬಾಣಂತನ ಮಾಡಿಸುವ ಸೂಲ್ಗಿತ್ತಿಯರೆಂದರೆ ನನ್ನ ಪ್ರಕಾರ ಆ ಗ್ರಾಮ ದೇವತೆಗಳಿದ್ದಂತೆ. ಈ ಸೂಲ್ಗಿತ್ತಿ ಯಂಕಮ್ಮಳೂ ಓದುಗರಿಗೆ ದೇವತೆ ಎನಿಸುತ್ತಾಳೆ, ಮಹಾನ್ ವೈದ್ಯಳೆನಿಸುತ್ತಾಳೆ.

“ಗಟಿವಾಣಿ” ಸಾಬವ್ವ ಬಬ್ಬರ್ಸಿ ಕೊಂದಿದ್ದು ಎನ್ನುವುದಕ್ಕಿಂತ, ಒಬ್ಬ ತಾಯಿ ತನ್ನ ಕರುಳಬಳ್ಳಿನ ಕಾಪಾಡಿಕೊಳ್ಳೋದಕ್ಕೆ ಎಂತಹ ಸಾಹಸಕ್ಕೂ ಕೈ ಹಾಕ್ತಾಳೆ ಎನ್ನುವುದರ ನೈಜ ಸಾಕ್ಷೀ ಈ “ಗಟಿವಾಣಿ”. ಆ ಕ್ಷಣ ಆ ಮಹಾತಾಯಿ ಯಲ್ಲವ್ವನ ಮೈ ಮ್ಯಾಲೆ ಬಂದಿದ್ಲು ಅನ್ನೋದು ನಿಜಕ್ಕೂ ಖರೇನ. “ಯಪ್ಪೋ,, ನಮ್ ಬಾಳೇವಿಗೆ ಬೆಂಕಿ ಇಡಾಕ ಬಂದಿತ್ತು ಆ ಕೋಡಿ, ದಾಳೇವಡಿಲಿ” ಎಂಬ ಮಾತು ತಾಯಿಯ ಆಂತರ್ಯದ ಪ್ರೇಮ, ಆ ಪ್ರೇಮ ಉಳಿಸಿಕೊಳ್ಳೋಕೆ ತಾಯಿ ಮಾಡೋ ಕಠಿಣ ನಿರ್ಧಾರ, ಸೋಜಿಗ ಮತ್ತು ಪ್ರಶಂಸನಿಯ. ಮಸ್ಕಿಯ ನಿಜ ಶರಣರೇ ಆದ ಡಾ ಶಿವಶರಣಪ್ಪ ಇತ್ಲಿ ಅವರು ಮಸ್ಕಿಯ ಸುತ್ಹಳ್ಳಿಯ ಬಡ ಜನರ ಆರಾಧ್ಯ ದೈವ. ಇವರ ಸಮಯೋಚಿತ ನಿರ್ಧಾರದಿಂದ ಸಾಬವ್ವ ಮನೆಮಾತಾದ್ಲು. ಅವರ ಶೌರ್ಯ ಹತ್ಹಳ್ಳಿಗೆ ಪ್ರಸಿದ್ದಿ ಪಡೆದು ಎಲ್ಲಾ ತಾಯಂದ್ರಿಗೆ ಧೈರ್ಯ ರವಾನೆ ಆಯ್ತು ಎಂದರೆ ತಪ್ಪಿಲ್ಲ. ಆಗ ನಾನಿನ್ನೂ ಚಿಕ್ಕೋನು, ದೈವದ ಕಟ್ಟಿಯ ಗಿಡಕ್ಕೆ ನೇತ್ಹಾಕಿದ್ದ ಬಬ್ಬರ್ಸಿನ್ನ ನೋಡೀನಿ, ಅಥವಾ ಕೇಳೀನಿ ಅನ್ಸುತ್ತೆ. ಈ ಕಥೆ ಓದಿ ಆ ನೆನಪು ಸ್ಮೃತಿ ಪಟಲದಲ್ಲಿ ಮರುಕಳಿಸಿತು. ಕಥೆಯ ನಿರೂಪಣೆ ಬಹಳ ಆಪ್ತವೆನಿಸುತ್ತದೆ. ಓದುತ್ತಿದ್ದರೆ ಏನೋ ಸಂತೃಪ್ತ ಭಾವ. ಮನಸ್ಸಿಗೆ ಖುಷಿ ಅನ್ಸುತ್ತೆ.

“ಕೊನಿಸೀರಿ”, ಮನಸಿಗೆ ಕಸಿವಿಸಿ ಉಂಟು ಮಾಡುವ ಕಥೆ. ನಿಜಕ್ಕೂ ಅಲೆಮಾರಿಗಳ ಬದುಕು ಒಮ್ಮೊಮ್ಮೆ ಇಂತಹ ಕ್ರೂರ ಪರಿಸ್ಥಿತಿಗೂ ತಲುಪುತ್ತದೆ ಎನ್ನುವುದಕ್ಕೆ ಉದಾಹರಣೆ ಕೊನಿಸೀರಿ. ಕುರಿಹಟ್ಟಿ ಹಾಕುವವರನ್ನು ಹತ್ತಿರದಿಂದ ಕಂಡ ನಾನು, ಶಾಲಾ ಕಲಿಕೆಯ ಕುರಿತಾದ ಕಷ್ಟಗಳ ಬಗೆಗೆ ಅಷ್ಟೆ ಗಮನಿಸಿದ್ದೆ, ಆದರೆ ಇನ್ನಿತರ ಕೌಟುಂಬಿಕ, ಆರೋಗ್ಯದ ಸಮಸ್ಯೆಗಳ ಅರಿವು ನನಗೆ ಇರಲಿಲ್ಲ. ಈ ಕಥೆಯಲ್ಲಿ ಕೊರೋನಾ‌ ಮಹಾಮಾರಿಯಿಂದ ಬಳಲಿದ ಪಾರವ್ವ ಮಾಳಿಂಗರಾಯ ದಂಪತಿಗಳನ್ನು ನೆನದರೆ ಮನಸು ಸ್ಮಷಾನ ಮೌನಕ್ಕೆ‌ ಶರಣಾಗುತ್ತದೆ. ಇಡೀ ಕುರಿ ಹಟ್ಟಿಯನ್ನೇ ಹೆಂಡತಿಗಾಗಿ ಮಾರಿದ ಮಾಳಿಂಗರಾಯನಿಗೆ ಹೆಂಡತಿಯ ಅಗಲಿಕೆ‌ ತಂದ ನೋವನ್ನು ಕಣ್ಣ ಮುಂದೆ ತಂದ ಕಥೆಗಾರ್ತಿ ರೇಣುಕಾ ಅವರ ಬರವಣಿಗೆ ಬಹಳಷ್ಟು ಗಟ್ಟಿಯಾಗಿದೆ.

“ಜತ್ತಮಿಣಿ”, ಹರಕೆ ಹೊತ್ತು ತೀರಿಸಲಾಗದೆ ಅಸುನೀಗಿದ ತಂದೆ. ತಂದೆಗಿಟ್ಟ ಎಡಿ ಕಾಗೆ ಮುಟ್ಟದ ಕಾರಣಕ್ಕೆ ಹರಕೆ ತೀರಿಸಲು ಒಪ್ಪಿಕೊಂಡ ಮಗನ ಕಥೆ. ಹರಕೆ ತೀರಿಸಲು ಒಂದು ದೇಹ ದಣಿಸಬೇಕು, ಇಲ್ಲವೇ ಹಣ ವ್ಯಯಿಸಬೇಕು. ಹರಕೆ ಹೊರುವಾಗ ಇದಾವುದರ ಪರಿವಿಲ್ಲದೆ ದೇವರಿಗೆ ಬೇಡಿಕೆ ಇಟ್ಟು ಹರಕೆ ಹೊರುವುದು ಹೇಗೆ ಮಾನವನ ಗುಣವೋ ಅದೇ ರೀತಿ ಬೇಡಿಕೆ ಈಡೇರಿದ ನಂತರ, ಹರಕೆ ತೀರಿಸಲು ಹೆಣಗಾಡುವುದು ಒಂದು ರೀತಿಯಾದ ಮಾನವನ ದೌರ್ಬಲ್ಯ. ಇಂತಹ ತಂದೆಯ ಹರಕೆಯನ್ನು ತೀರಿಸಲು ಹೆಣಗಾಡುವ ಬಡ ಮಗನ ಪಾಡಿನ ಕಥೆ ಈ “ಜತ್ತಮಿಣಿ”. ಇದಕ್ಕಾಗಿ ಇರುವ ಹೊಲವನ್ನೇ ಮಾರಲು ನಿಂತ ಈ ಮಗ ಕುಪ್ಪಣ್ಣನ ಸ್ಥಿತಿ ಶೋಚನೀಯವೂ ಹೌದು. ಕಥಾಂತ್ಯಕ್ಕೆ ಆ ಕುಪ್ಪೇರಾಯನ ದಯೆಯಿಂದ ಹಣದ ಅನುಕೂಲವೂ ಆಗಿ ಹೊಲನೂ ಉಳಿತು, ತಂದೆ ಹರಕೆಯೂ ತೀರಿ ಕುಪ್ಪಣ್ಣ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಅಂದಹಾಗೆ “ಜತ್ತಮಿಣಿ” ಎಂದರೇನು ಎಂಬುದೇ ಸಾಮಾನ್ಯ ಓದುಗರಿಗೆ ತಿಳಿಯುವುದಿಲ್ಲ. ಇದರ ಬಗೆಗೆ ತಿಳಿಯಲು ಖಂಡಿತ ಈ ಕಥೆ ಓದಬೇಕು.

ಗೌಡ್ಕಿ, ಗೌಡನ ದರ್ಬಾರ್ ಗೆ ಖಂಡಿತ ಹಿಂದಿನ ಕಾಲದಲ್ಲಿ ಅಥವಾ ಕೆಲವು ಕಡೆ ಈಗಲೂ ಬಡವರು ಬಲಿಪಶುಗಳಾಗಿದ್ದಾರೆ. ನಾಟಕ, ಚಲನಚಿತ್ರಗಳಲ್ಲಿ ಇಂತಹ ದೃಶ್ಯಗಳನ್ನು ಕಂಡಿರುತ್ತೇವೆ. ಆದರೆ ಒಬ್ಬ ಹೆಣ್ಣು ಮನಸು ಮಾಡಿದರೆ ಗೌಡನ ದರ್ಬಾರಿನ ವಿರುದ್ಧ ನಿಂತು ಗೆಲ್ಲಬಹುದೆಂಬುದಕ್ಕೆ ಸಾಕ್ಷಿ ಈ “ತಾಯವ್ವ”. ಹಣದ ವ್ಯಾಮೋಹಕ್ಕೆ ಊರಿನ ರೈತರ ಹೊಲಗಳನ್ನು ಆಂಧ್ರದ ಮಂದಿಗೆ ಮಾರಿಸುವ ಗೌಡನ ಮಸಲತ್ತನ್ನು ಯಥಾವತ್ತಾಗಿ ತಳ್ಳಿದ್ದು ಈ ತಾಯವ್ವ. ಇದಕ್ಕೆ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾದಿದ್ದ ಗೌಡನಿಗೆ ರೇಶನ್ ಅಂಗಡಿಯಲ್ಲಿ. ಕೆಲಸ ಮಾಡಿ ಮಾಡಿ ಬೆರಳು ರೇಖೆಗಳನ್ನೇ ಕಳೆದುಕೊಂಡ ತಾಯವ್ವನಿಗೆ ರೇಶನ್ ಸಿಗದಂತೆ ನಡುನಡುವೆ ಬಾಯಿ ಹಾಕಿ ಅಡ್ಡ ಬಂದವ ಈ ಗೌಡ. ತಾಯವ್ವ ಸುಮ್ಮನಿರುತ್ತಾಳೆಯೇ, ಖಂಡಿತ ಇಲ್ಲ ಗೌಡನ ಮಾತಿಗೆ ಪ್ರತಿ ಮಾತುಗಳನ್ನು ಚಾಟಿ ಏಟಿನಂತೆ ಕೊಟ್ಟು, ಅವನ ಮರ್ಯಾದೆ ಹೋಗುವಂತೆ ಮಾಡುತ್ತಾಳೆ. ಕೊನೆಗೆ ರೇಶನ್ ಪಡೀತಾಳಾ? ಗೌಡನ ಅಹಂ ಇಳಿಯುತ್ತದೆಯೇ ಎಂಬ ಕುತೂಹಲವನ್ನು ಓದುಗರು ಕಥೆ ಓದಿಯೇ ತಣಿಸಿಕೊಳ್ಳಬೇಕು.

“ಏರ್ಪಿನ್ನಾ, ಚೂಜಿ, ಪಿನ್ನಾ” ಬೇಕೇನ್ರೀ…. ಅನ್ನೋ ಕೂಗು ನಮ್ಮ ಮಾಸಂಗಿ ಕಡೆ ಬಹಳ‌ ಇದೆ ನೋಡಿ. ಹೀಗೆ ಮಾರೋಕೆ ಬಂದೋರಲ್ಲಿ ದುಡ್ಡುಕೊಟ್ಟೇ ಮಾಲ್ ಖರೀದಿ ಮಾಡ್ಬೇಕಂತೇನು ಇಲ್ಲ ರಿ. ಹೆಣ್ಣುಮಕ್ಕಳು ಹಿಕ್ಕೆಂಡಾಗ ಉದುರೋ ಕೂದಲು ಕೂಡಿಸಿಟ್ಟು ಅವರಿಗೆ ಕೊಟ್ಟರೆ ಅದಕ್ಕೆ ತಕ್ಕ ಬೆಲೆಗೆ ಮಾಲ್ ಕೊಡ್ತಾರೆ. ಇಂತಹದೊಂದು ಕೂದಲು ಶೇಖರಿಸಿಟ್ಟು ಪ್ಲ್ಯಾಸ್ಟಿಕ್ ಬಕೀಟು ಖರೀದಿಸುವ ಪ್ರಸಂಗದಲ್ಲಿ ನೆರೆಹೊರೆಯ ನಾಗಮ್ಮ ಮತ್ತು ಮಂಜಮ್ಮನ ಸುತ್ತ ಹೆಣೆದ ಕಥೆ ಬಹಳ ಹಾಸ್ಯಾತ್ಮಕವಾಗಿ ಮೂಡಿಬಂದಿದೆ. ಕಥೆಯ ಜೊತೆ ಜೊತೆಗೆ ಹೆಣ್ಣು ಮಕ್ಕಳ ಹೊಡೆದಾಟ, ಬೈದಾಟದ ಗ್ರಾಮ್ಯ ಭಾಗದ ಶಬ್ದ ಬಳಕೆ, ಬರವಣಿಗೆ ಶೈಲಿ ಓದುಗರನ್ನು ಹಿಡಿದಿಡುತ್ತದೆ‌. “ಕೂದಲ ಪುರಾಣ” ಎಂಬ ಶಬ್ದವೇ ತುಟಿ ಅಂಚಲ್ಲಿ ಆಶ್ಚರ್ಯ ಮತ್ತು ನಗುವನ್ನು ಮೂಡಿಸುತ್ತದೆ ಎಂದಾದರೆ ಕಥೆ ನಿಮ್ಮನ್ನು ಮತ್ತಷ್ಟು ನಗಿಸುತ್ತದೆ. ಕೂದಲಿಗಾಗಿ ಹೆಣ್ಮಕ್ಳು ಇಷ್ಟೆಲ್ಲಾ ಬಡಿದಾಡ್ತಾರಾ ಎಂಬುದು ಸೋಜಿಗವಾಗಿಯೇ ಉಳಿಯುತ್ತದೆ. ಮತ್ತೆ ಏನಾಯ್ತು? ಕೂದಲು ಕೊಟ್ಟು ಬಕೀಟು ತಗೊಂಡ್ರಾ? ಜಗಳ ಎಲ್ಲಿಗೆ ಮುಟ್ಟಿತು, ಹಾದಿ ಬೀದಿ ಜಗಳ ಅಂದ್ರೆ ಸುಮ್ನೇನಾ ಮನೆ ಗಂಡಸ್ರಿಗೂ ತಲೆ ನೋವು ತರೋ ವಿಷ್ಯ. ಏನಾಗುತ್ತೆ? ಓದಿ “ಕೂದಲ ಪುರಾಣ”.

ಭಾವುಕತೆಗೆ ಒಳಗಾಗೋದು ಅಂದ್ರೆ ಏನು? ಭಾವುಕರಾಗಿ ಕಣ್ಣಂಚಲ್ಲಿ ನೀರು ಹೇಗೆ ಜಿನುಗುತ್ತದೆ ಎಂದು ಗೊತ್ತಿಲ್ಲವೇ? ಓದಿ “ಪಡಸಾಲಿ”. ಕಥೆ ಎತ್ತ ಸಾಗುತ್ತಿದೆ, ಏನು ತಿರುಳಿದೆ ಈ ಕಥೆಯಲ್ಲಿ ಎಂದು ಯೋಚಿಸುವ ಹಂತದಲ್ಲಿ ಕಥೆ ಮಹತ್ತರವಾದ ತಿರುವು ಪಡೆದುಕೊಂಡು ಓದುಗನನ್ನು ಭಾವಪರವಶನನ್ನಾಗಿಸುತ್ತದೆ. ಮನೆಯ ಪಡಸಾಲಿ ಶಾಲೆಯಾಗಿ ಬದಲಾಗುವ ಹಂತಕ್ಕೆ ಬದಲಾದುದಕ್ಕೆ ಕಾರಣವೇ ಶಿಕ್ಷಣ, ಶಿಕ್ಷಣ ಕಲಿಸಿದ ತಾಳ್ಮೆ, ಸಹನೆ, ಬಂದದ್ದನ್ನು ಸ್ವೀಕರಿಸುವುದು ಎಂದರೆ ತಪ್ಪಿಲ್ಲ. ಅಂತಹ ಅನುಭೂತಿ ನೀಡುವ ಕಥೆ “ಪಡಸಾಲಿ”, ಓದಲೇಬೇಕು ಒಂದ್ಸಲಿ.

“ಮದಿವಿ” ಅಂದ್ರ ಅಯ್ತು. ಯಾರು ಯಾರ ಪಾಲು ಎಂಬುದು ಸ್ವರ್ಗದಲ್ಲೇ ನಿರ್ಧಾರ ಆಗಿರುತ್ತೆ. ಎಷ್ಟೋ ಗಂಡು ಹೆಣ್ಣುಗಳು ಮದುವೆ ಮಂಟಪದಲ್ಲಿ ಬದಲಾಗ್ತವೆ ಎಂಬುದು ನಮಗೆ, ನಿಮಗೆಲ್ಲ ಗೊತ್ತಿರೋ ಮಾತು. ಅಂತಹದ್ದೇ ಒಂದು ಘಟನೆಯ ಪೂರ್ವದಲ್ಲಿ ಆದ ಪ್ರೀತಿ, ಸ್ನೇಹ, ದ್ವೇಷಗಳ ಸಂಗತಿಗಳ ಕಥೆ ಈ “ಮದಿವಿ”. ತವರಿನ ಸಿರಿ(ಹೆಣ್ಣು)ಯನ್ನು ತನ್ನ ಮನೆಗೆ ತಂದುಕೊಳ್ಳಬೇಕೆನ್ನುವ ಬಸ್ಲಿಂಗಮ್ಮ, ಭಾವ(ರುದ್ರಪ್ಪ)ನ ಮೇಲೆ ಆಸ್ತಿ ಹಂಚಿಕೆ ಕಾರಣಕ್ಕೆ ದ್ವೇಷ ಬೆಳಿಸಿಕೊಂಡಿರೋ ಭಾಮೈದ(ಚೆನ್ನಪ್ಪ, ಬಸ್ಲಿಂಗಮ್ಮನ ಗಂಡ), ಇವನ ಗೆಳೆಯ ಸಂಗಪ್ಪ, ಇನ್ನುಳಿದ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿ, ನ್ಯಾಯ ಕೊಟ್ಟ ಕಥೆಗಾರ್ತಿ ವಿಶೇಷ ಎನಿಸುತ್ತಾರೆ. “ಮದಿವಿ” ಮಂಟಪದಲ್ಲಿ ಒಂದ ಸಣ್ಣ ತಮಾಷೆಗಾಗಿ ಮಾಡಿದ ಕೆಲಸ, ಮದುವೆ ಮುರಿಯೋವರೆಗೂ ಎಳೆದೊಯ್ಯುವ ಬೀಗರ ಬಗ್ಗೆ ಏನ್ ಹೇಳೋದು! ಇಂತಹವರು ನಿಜವಾಗಿಯೂ ಇದ್ದರೆ ಆಶ್ಚರ್ಯ ಏನಿಲ್ಲ ಬಿಡಿ. ಅಂತಹ ಘನಂದಾರಿ ಕಾರ್ಯ ಮಾಡಿ ಮದುವೆ ಮುರಿಯೋ ಮಾತಾಡಿದ ಬೀಗ್ರನ್ನ ಬೀಳ್ಕೊಟ್ಟು, ವೈರಿ ಎಂದುಕೊಂಡು ಕೆಂಡ ಕಾರ್ತಿದ್ದ ಹೆಂಡತಿ ತವರಿಂದನೇ ಹೆಣ್ಣು ತರುವ ಅನಿವಾರ್ಯಕ್ಕೆ ಬಿದ್ದ ಚೆನ್ನಪ್ಪನ ಸ್ಥಿತಿ ನಗು ತರಿಸಿದರೆ, ಅಷ್ಟೆಲ್ಲ ದ್ವೇಷ ಮಾಡಿದಾಗ್ಯೂ ಹೆಣ್ಣು ಕೊಡಲು ಒಪ್ಪಿದ ರುದ್ರಪ್ಪ ಮತ್ತು ಅವನ ಹೆಂಡತಿ ಬಗ್ಗೆ ಓದುಗನಿಗೆ ಹೆಮ್ಮೆ ಅನಿಸುತ್ತದೆ.

“ಯಮನಮ್ಮನ ನಾಲಿ”ನ ಹಿನ್ನೆಲೆ ಒಂದು ಹೆಣ್ಣಿನ ಮರಣ, ಗಂಡನ ಸಂಕ್ಪ, ಅನಾಥವಾದ ಮಕ್ಕಳ ಕಥೆ ಮನಕ್ಕೆ ಒಪ್ಪಿಕೊಳ್ಳಲು ಕಹಿ ಎನಿಸುತ್ತದೆ‌. ಮಳೆ ಬಂದಾಗಿನ ಹಳ್ಳಿಯ ಸರಿಯಾದ ರಸ್ತೆಗಳಿಲ್ಲದ, ಅಸುರಕ್ಷಿತ ಪರಿಸ್ಥಿತಿಯ ಅನಾವರಣ ನೋವಿನ ಪಯಣದ ಕಥೆ.

ಮಕ್ಕಳು ಹಾದಿ ತಪ್ಪುತ್ತಾರೆ, ಅದರಲ್ಲೂ ತಂದೆ ಇಲ್ಲದ ಮಕ್ಕಳು ತಪ್ಪು ಹಾದಿ ತುಳಿಯುವುದು ಜಾಸ್ತಿ‌. ಇದಕ್ಕೆ ಪುಷ್ಟಿ ಎಂಬಂತೆ ಮಾಧ್ಯಮಗಳು ಪ್ರಚೋದನೆ ನೀಡುತ್ತವೆ. ಅದರಲ್ಲೂ ನೆಚ್ಚಿನ ನಟರು ನೀಡುವ ಜಾಹಿರಾತಿಗೆ ಮಾರು ಹೋಗಿ ಅವರನ್ನು ಅನುಕರಿಸಿ ದುಶ್ಟಟಕ್ಕೆ ದಾ‌ಸರಾಗುವ ಹುಡುಗರಿಗೇನು ಕಮ್ಮಿ ಇಲ್ಲ. ಅಂತಹ ಒಂದು ನೋವು ನೀಡುವ ಜೊತೆಗೆ ಯುವ ಓದುಗರಿಗೆ ಸರಿ ದಾರಿ ತೋರುವ ಕಥೆ “ತಪ್ಪಿದ ಹಾದಿ”. ಕಥಾ ನಾಯಕ ಯಮ್ನೂರ ತನ್ನ ತಪ್ಪನ್ನು ತಿಳಿದುಕೊಳ್ಳುವ ಹೊತ್ತಿಗೆ ಅವನ ದೇಹ ಸ್ಪಂದಿಸದ ಸ್ಥಿತಿಗೆ ತಲುಪಿದ್ದು ಶೋಚನೀಯವೆನಿಸುವಂತಹ ಕಥಾ ವಸ್ತು ಓದುಗನೆದೆಯಲಿ ಉಳಿಯುತ್ತದೆ.

ಕೊನೆಯ ಆದರೆ ಎಲ್ಲರೂ ಕೊನೆಗೆ ಮಣ್ಣಿಗೇ ಸೇರಬೇಕು. ಮಣ್ಣೇ ನಮಗೆ ಬಾಳು, ಬದುಕು, ಬೆಳಕು ಎಂದು ನಂಬಿರುವ ರೈತರ ಪಾಡು ಈ “ಮಣ್ಣಿನ ಋಣ” ಕಥೆ. ತಂದೆ ಮಾಡಿದ ಸಾಲ ತೀರಿಸಿ ವತ್ತೆ ಇಟ್ಟ ಹೊಲ ಬಿಡಿಸಿಕೊಳ್ಳುವ ನಾಯಕನ ಪಾತ್ರ ಹಿರಿದಾದುದು. ಅದಕ್ಕೆ ಜೊತೆಯಾದವರು ಅವನ ತಾಯಿ ಮತ್ತು ಅವನ ಹೆಂಡತಿ. ಇನ್ನೇನು ಸಿಕ್ಕೇ ಬಿಟ್ಟಿತು ಹೊಲ ಎನ್ನುವಷ್ಟರಲ್ಲಿ ನ್ಯಾಯವಂತ ಗೌಡರ ಸಾವು ಅಡಕತ್ತರಿಗೆ ನೂಕುತ್ತದೆ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಸಾಲ ತೀರಿದರೂ ಹೊಲ ಸಿಗಲಿಲ್ಲ ಎಂಬ ಸಂಕಟದಲ್ಲಿ ಇರುವಾಗ ಗೌಡ್ಸ್ಯಾನಿಯಿಂದ ಹೊಲದ ಪತ್ರ ಸಿಕ್ಕು ಜೀವಕಳೆ ಉಕ್ಕುತ್ತೆ. ಕೇವಲ ಸಿದ್ದಪ್ಪ(ನಾಯಕ)ಗಲ್ಲ ಓದುಗನಿಗೂ ಕೂಡ. ಅಂತಹ ಕಥಾ ಹಂದರ ಓದುಗನನ್ನು ಖುಷಿ, ನೆಮ್ಮದಿಗೆ ನೂಕುತ್ತದೆ.

“ನಿಲುಗನ್ನಡಿ”, ನಿಜವಾಗಿಯೂ ಮಸ್ಕಿಯ ಪರಿಸರಕ್ಕೆ, ಮಸ್ಕಿ ಜನರ ಬದುಕಿನ ಕನ್ನಡಿಯಾಗಿದೆ. ನೋವು, ನಲಿವು, ಸಡಗರವನ್ನೊಳಗೊಂಡ ಒಂದು ಡಜನ್ ಕಥೆಗಳಿಗೆ ಸೂಕ್ತ ಮತ್ತು ಪ್ರಭಾವಯುತವಾದ ಮುನ್ನಡಿಯನ್ನು ಶ್ರೀಮತಿ ಸುನಂದಾ ಕಡಮೆ ಅವರು ಬರೆದಿದ್ದು ಬಹಳ‌ ಅರ್ಥಪೂರ್ಣವಾಗಿದೆ. ಅನೇಕರ ಅಭಿಪ್ರಾಯಗಳುಳ್ಳ ಕಥಾ ಸಂಕಲನ ಓದುತ್ತಾ ಸಾಗಿದರೆ ಒಂದೇ ದಿನದಲ್ಲಿ ಓದಿಸಿಕೊಳ್ಳುವಷ್ಟು ಆಪ್ತವಾದ ನಿರೂಪಣೆ ಇದೆ. ಹತ್ತಾರು ಸಾಹಿತ್ಯದ ಭಾಗಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವ ಅಕ್ಕ, ಶ್ರೀಮತಿ ರೇಣುಕಾ ಕೋಡಗುಂಟಿಯವರು ಹೀಗೆ ಸಾಹಿತ್ಯಿಕವಾಗಿ ಮೇರು ಪರ್ವತದಷ್ಟು ಬೆಳೆಯಲಿ. ಅವರ ಸಾಹಿತ್ಯ ನಿರಂತರವಾಗಿ ನಮ್ಮ ಓದುಗ ಬಳಗಕ್ಕೆ ಸಿಗಲಿ ಎಂದು ಆಶಿಸುತ್ತಾ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.

‍ಲೇಖಕರು Admin

October 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: