ಪಂಡಿತ ರಾಜೀವ ತಾರಾನಾಥ್‌.. 91ರ ಉಮೇದಿನಲ್ಲಿ ಉಸ್ತಾದ್‌

 ಜಿ ಪಿ ಬಸವರಾಜು

90 ಎಂದರೆ ಎಲ್ಲ ದೆವ್ವಗಳೂ ಮೈ ಏರಿ ಕುಳಿತಿರುತ್ತವೆ. ಕಣ್ಣು ಮಕರು ಮಕರು; ಕಿವಿ ಮಂದ ಮಂದ; ಮರೆವು ಕವುಚಿಕೊಂಡು ಮೈಮೇಲೆ ಬಿದ್ದಿರುತ್ತದೆ. ನಾಲಗೆ ಹೊರಳದೆ, ಮಾತು ತೊದಲುತ್ತ, ದಾರಿ ತಪ್ಪಿ, ಎಲ್ಲವೂ ದಿಕ್ಕಾಪಾಲಾಗಿರುತ್ತದೆ.

ಆದರೆ ಇಲ್ಲಿ ನೋಡಿ: ೯೧ರ ಪಂಡಿತ ರಾಜೀವ ತಾರಾನಾಥರ ಕುದುರೆ ಹೇಗೆ ಓಡುತ್ತಿದೆ. ಅದು ಕಾಡು ಕುದುರೆ. ಕೆನೆಯುವುದು, ಓಡುವುದು ಅದರ ಸಹಜ ಗುಣ. ಉಮೇದು ಕಣಕಣದಲ್ಲಿ. ನೋಟ ಹರಿತ; ಮಾತು ಚೂಪು; ನಾಲಗೆ ರುಚಿಯ ಕಡೆಗೇ ಹರಿದಾಡುವುದು. ಎಲ್ಲವೂ ಖಡಕ್‌. 91 ನ್ನು ತಿರುಗಿಸಿದರೆ 19. ಈ ಹತ್ತೊಂಬತ್ತರ ಹರೆಯವೇ ಈ ರಾಜೀವರಿಗೆ.

ಮೂರನೇ ವರ್ಷದಿಂದಲೇ ತಂದೆ ಕಲಿಸಿದ ಪಾಠಗಳು: ಬೆಳಗ್ಗೆ 4 ಗಂಟೆಗೇ ಎದ್ದು ಕುಳಿತುಬಿಡುತ್ತಾರೆ. ಜಗತ್ತೆಲ್ಲ ತಣ್ಣಗೆ ಮಲಗಿರುತ್ತದೆ.  ಬೆಳಗಿನ ತಾಜಾ ಗಾಳಿ ನಿರಾತಂಕವಾಗಿ ಸುಳಿದಾಡುತ್ತದೆ. ಅಂಗಳದ ಹೂವು ಅರಳಿ ಸುಗಂಧವ ಸೂಸುತ್ತವೆ. ಬೀದಿ ಖಾಲಿ ಖಾಲಿ; ಊರೂ ಖಾಲಿ ಖಾಲಿಯಾದಂತೆ; ಸದ್ದುಗದ್ದಲವಿಲ್ಲದ ಮೌನ ಒಳಗೂ ಹೊರಗೂ ತುಂಬಿಕೊಳ್ಳುತ್ತದೆ. ಇಡೀ ರಾತ್ರಿ ಬೊಗಳಿ ಸುಸ್ತಾದ ನಾಯಿಗಳು ಮುದುರಿಕೊಂಡು ಮಲಗಿವೆ-ಮೌನ ಅವುಗಳನ್ನು ತಟ್ಟಿ ಮಲಗಿಸಿದೆ.

ಪಂ. ರಾಜೀವರ ಮನಸ್ಸು ಹರಿದಾಡುತ್ತದೆ. ರಾಗಗಳ ಹಿಡಿದಾಡಿಸುತ್ತದೆ. ತೋಡಿಯೊ, ಆಹಿರ್‌ ಭೈರವವೊ ಸದ್ದಿಲ್ಲದೆ ಹೆಜ್ಜೆ ಹಾಕುತ್ತ ಇಷ್ಟಿಷ್ಟೆ ಹತ್ತಿರವಾಗುತ್ತದೆ. ಗುಣು ಗುಣಿಸುತ್ತ ಒಳಹೊಕ್ಕು ಇಡಿಯಾಗಿ ಆವರಿಸುತ್ತದೆ. ತುಂಬಿ ಹೊರಹೊಮ್ಮಿ  ಚಾಚುತ್ತ ಚಾಚುತ್ತ ಎಲ್ಲವನ್ನು ತಬ್ಬಲು ನೋಡುತ್ತದೆ; ಹಗುರಾಗಿ ಮೇಲೆ ಮೇಲೆ ತೇಲುತ್ತ, ಬಾನು ತುಂಬುತ್ತ ಆಕಾಶದ ಖಾಲಿ ಕ್ಯಾನ್‌ವಾಸಿಗೆ ಬಣ್ಣ ಬಳಿಯುತ್ತದೆ. ನಿಧಾನಕ್ಕೆ ತಟ್ಟಿ ಸೂರ್ಯ ಚೈತನ್ಯವನ್ನು ಏಳಿಸುತ್ತದೆ.

ಮುಪ್ಪಿನ ನೆನಪೂ ಹತ್ತಿರ ಸುಳಿಯದಂತೆ ಪಂಡಿತ ರಾಜೀವರನ್ನು ಸಂಗೀತ ಪೊರೆಯುತ್ತದೆ. ಅದೇ ಲವಲವಿಕೆಯಿಂದ, ಉಲ್ಲಾಸದಿಂದ, ಉಮೇದಿನಿಂದ, ʼಏಳೋʼ ಎನ್ನುತ್ತಾರೆ ರಾಜೀವ್‌. ಹರೆಯದ ಶಿಷ್ಯನಿಗೆ ನಿದ್ದೆಯ ಮಂಪರು ಕವಿದಿದೆ. ಎಲ್ಲಿಯ ಬೆಳಗೊ, ಎಲ್ಲಿಯ ಸಂಗೀತವೊ. ಸುಖನಿದ್ದೆಯಲ್ಲಿ ಎಂಥ ಕನಸೊ. ಅದನ್ನೆಲ್ಲ ಒರೆಸಿ ಹಾಕಿ ಮತ್ತೆ ಅದೇ ಮೊಳಗು: ʼಏಯ್‌ ಏಳೊ.ʼ

ಬೆಳಗಿನ ಕಾಫಿ ಕುಡಿದು, ಮೆಲ್ಲಗೆ ಎದ್ದು ನಾಲ್ಕು ಹೆಜ್ಜೆ ನಡೆದಾಡಿ ರಿಯಾಜ್‌ ಕೋಣೆಗೆ ಬಂದರೆ, ಸರೋದ್‌ ನಗುತ್ತದೆ. ಶ್ರುತಿ ಸ್ವರ ಹಿಡಿಯುತ್ತದೆ. ಎಲ್ಲವೂ ಸರಿಯಿದೆಯೆಂದು ತಿಳಿದು ಒಮ್ಮೆ ಸುತ್ತ ನೋಡಿ ರಾಜೀವ್‌ ಸರೋದನ್ನು ನಿಧಾನಕ್ಕೆ ಎತ್ತಿಕೊಂಡು ಮೈದಡವುತ್ತಾರೆ. ಸಂಗೀತಕ್ಕೆ ಅಷ್ಟು ಸಾಕು. ನಾದದ ನದಿಯೊಂದು ಹಿಗ್ಗಿನಲಿ ಹರಿಯುತ್ತದೆ; ಬೆಳಗಾಗುತ್ತದೆ; ಕಾಲ ಮೈಮುರಿದು ಮೇಲೆದ್ದು, ಲೋಕವನ್ನು ದಿನದ ದುಡಿಮೆಯ ಹಾಡಿಗೆ, ಮುಗಿಯದ  ಪಾಡಿಗೆ ದೂಡುತ್ತದೆ..

ರಾಗಗಳ ತೊಟ್ಟಿಲಲ್ಲಿ ತೂಗಿಕೊಂಡು ಮೈಮರೆತ ರಾಜೀವ್‌, ಮೇಲೆದ್ದು ಮತ್ತೊಂದು ಮಜಲಿಗೆ ಜಾರುತ್ತಾರೆ. ಈಗ ನಗುವ ಸರದಿ ಹಾಲಿನಲ್ಲಿರುವ ಅವರ ʼಲೇಜಿಬಾಯ್‌ʼ ದು. ಅಲ್ಲಿ ರಾಜೀವರ ದರ್ಬಾರು ಸುರುವಾಗುತ್ತದೆ. ಅದು ರಾಜ ದರ್ಬಾರಲ್ಲ; ಸಂಗೀತ, ಸಾಹಿತ್ಯ, ಲೋಕ ಚಿಂತೆಯ ಸಾವಿರ ಸಂಗತಿಗಳ ದರ್ಬಾರು. ಪೇಪರಿನ ಹುಡುಗ, ಹೂವು ತರುವ ಹುಡುಗಿ, ಕಾರಿನ ಡ್ರೈವರ್‌, ʼತಿಂಡಿ ಏನು ಮಾಡಲಿʼಎಂದು ಅಡಿಗೆ ಮನೆಯಿಂದ ಬರುವ  ಸಾವಿತ್ರಮ್ಮ, ಜೇಮ್ಸ್‌ ಜಾಯ್‌ನ ಕಾದಂಬರಿಗಳು ಕಾವ್ಯ ಏಕಲ್ಲ ಎಂದು ಕೇಳುವ ನಮ್ಮ ಪೋಸ್ಟ್‌ ಕಲೋನಿಯಲ್‌ ಕೃಷ್ಣ, ʼಕಾಫಿ ಆಯ್ತೇʼ ಎಂದು ಬರುವ ಮೈಸೂರಿನ ಮಂದಿ.

ಒಂದಿಷ್ಟು ಬೇಳೆ ತಗೊ, ಚೆನ್ನಾಗಿ ಬೇಯಿಸು, ತೊವ್ವೆ ಮಾಡು, ಹುಣುಸೆ ಹಣ್ಣು ಇದೆಯಲ್ಲಾ, ಚೆನ್ನಾಗಿ ಹಿಂಡು…. ರಾಜೀವ್‌  ಅವರ ಪಾಕಶಾಸ್ತ್ರ ಎಂದರೆ ಎಲ್ಲ ನಾಲಿಗೆಗಳಲ್ಲೂ ನೀರಾಡಬೇಕು. ಒಂದು ಕಾಲದಲ್ಲಿ ಅವರೇ ಅದ್ಭುತವಾದ ಚಿಕನ್‌ ಮಾಡಿ ಅತಿಥಿಗಳಿಗೆ ಬಡಿಸುತ್ತಿದ್ದರು. ಈಗ ಹೇಗೆ ಮಾಡಬೇಕೆಂಬುದನ್ನು  ಒಂದಿಷ್ಟೂ ಆಚೆ ಈಚೆ ಆಗದಂತೆ ಹೇಳಿ ಮಾಡಿಸುತ್ತಾರೆ.

ಅವರಿಗೆ ರೊಟ್ಟಿ ಬದನೆಕಾಯಿ ಎಣ್‌ಗಾಯಿ ಬಹಳ ಇಷ್ಟ. ಖಡಕ್‌ ಕಾರ ಇನ್ನೂ ಇಷ್ಟ. ಕಣ್ಣಲ್ಲಿ ನೀರು ಸುರಿಯಬೇಕು (ಬೇರೆಯವರಿಗೆ). ಉಪ್ಪಿನ ಕಾಯಿ, ಚೆಟ್ನಿಪುಡಿ, ಮೇಲೆ ಎಣ್ಣೆ. ನಾಲಿಗೆ ನಲಿದಾಡುವ ರುಚಿಗೆ ʼಆಹಾʼ ಎನ್ನುತ್ತಾರೆ. ತಾವು ಹುಟ್ಟಿದ ತುಂಗಭದ್ರಾ ತೀರದ ಕನ್ನಡ ಅವರ ನಾಲಿಗೆಯ ಮೇಲೆ ಈಗಲೂ ಕುಣಿಯುತ್ತದೆ. ರಾಯಚೂರಿನ ಸಂಸ್ಕೃತಿ ಅವರ ನರನಾಡಿಗಳಲ್ಲಿ ಹರಿದಾಡುತ್ತದೆ.

ರಾಜೀವರಿಗೆ ಎಷ್ಟು ಭಾಷೆ ಬರುತ್ತವೆ ಎನ್ನುವ ಪ್ರಶ್ನೆ ಎಳಸು ಪ್ರಶ್ನೆ. ನೆಲದಾಳಕ್ಕೆ ಇಳಿದು, ಸಂಸ್ಕೃತಿಯ ಬೇರುಗಳನ್ನು ಮುಟ್ಟಿ ಮಾತಾಡಿಸಿ, ಭಾಷೆಯೊಡನೆ ಆಡುವ ರಾಜೀವರಿಗೆ ಭಾಷೆ ಎನ್ನುವುದು ಕೇವಲ ಮಾತುಕತೆಗೆ ಇರುವ ಸಾಧನವಲ್ಲ. ಅದು ಜನರೊಂದಿಗೆ ಬೆರೆಯುವ, ಅವರ ಕಷ್ಟ ಸುಖಗಳಿಗೆ ಕಿವಿಗೊಡುವ ಸಾಧನ.

ಕನ್ನಡ ಭಾಷೆ ತನ್ನ ಮೂಲಸ್ವರೂಪದ ಅನೇಕ ಪದಗಳನ್ನು ಕಳೆದುಕೊಂಡಿದೆ. ಅದೇ ತಮಿಳು ಎಂಥ ಪ್ರಭಾವಗಳು ಎದುರಾದಾಗಲೂ ತನ್ನ ಭಾಷೆಯನ್ನು ಕಳೆದುಕೊಂಡಿಲ್ಲ; ಅದರ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡಿಲ್ಲ. ಭಾಷೆ, ಸಂಸ್ಕೃತಿ, ಜನಜೀವನ ಎಲ್ಲದರಲ್ಲೂ ತನ್ನತನವನ್ನು ಉಳಿಸಿಕೊಂಡ ಹೆಗ್ಗಳಿಗೆ ತಮಿಳಿಗೆ ಎನ್ನುವ ರಾಜೀವರಿಗೆ ತಮಿಳಿನ ಮೇಲೆ ಒಂದಿಷ್ಟು ಪ್ರೀತಿ ಹೆಚ್ಚು. ಅವರ ತಾಯಿ ತಮಿಳು ಸೆಲ್ವಿ ಎಂಬುದು ಬೇರೆಯೇ ಮಾತು. 

2

ಲತಾ ಮಂಗೇಶ್ಕರ್‌ ಹಾಡುತ್ತಾರೆ. ಅದು ಸಂಗೀತ. ಗಂಗೂಬಾಯಿಯವರೂ ಹಾಡುತ್ತಾರೆ. ಅದೂ ಸಂಗೀತವೇ. ಗಂಗೂಬಾಯಿಯವರದು ಅಭಿಜಾತ (ಕ್ಲಾಸಿಕಲ್‌) ಸಂಗೀತ. ಈ ಎರಡು ಸಂಗೀತಗಳ ನಡುವೆ ಇರುವ ವ್ಯತ್ಯಾಸ ಎಂಥದು? ಪ್ರಶ್ನೆ ಸರಳವಾಗಿದ್ದರೂ, ಉತ್ತರ ಸುಲಭದ್ದಲ್ಲ. ಅದೂ ತಿಳಿಯುವ ಹಾಗೆ ಹೇಳುವುದು ಇನ್ನೂ ಕಷ್ಟದ ವಿಚಾರ. ರಾಜೀವ್‌ ಅದನ್ನು ಸಾಧ್ಯವಾದಷ್ಟೂ ಕೆಳಗಿಳಿಸಿ, ಎಲ್ಲರಿಗೂ ತಿಳಿಯುವ ರೀತಿಯಲ್ಲಿ ವಿವರಿಸುತ್ತಾರೆ:

ಲತಾ ಮಂಗೇಶ್ಕರ್‌ ಅವರದು ಒಂದು ಚೀಟಿ; ಬಣ್ಣದ ಕಾಗದ. ಇದು ನೂರು ರೂಪಾಯಿ, ಇದು ಸಾವಿರ ರೂಪಾಯಿ ಎಂದು ಅವರು ಹೇಳಬಹುದು. ಅವರ ಹಾಡನ್ನು ಕೇಳುವವನಿಗೆ ಅದು ನೂರು ರೂಪಾಯಿ ಅಲ್ಲ, ಸಾವಿರವೂ ಅಲ್ಲ, ಅದೊಂದು ಬಣ್ಣದ ಕಾಗದ ಅಷ್ಟೆ. ಗಂಗೂಬಾಯಿಯವರ ಕಾಗದ, ಸಂಗೀತ ಹಾಡುವವರಿಗೂ ಕೇಳುವವರಿಗೂ ಒಂದೇ ಬೆಲೆಯದು. ನೂರು ರೂಪಾಯಿ ಎಂದರೆ ಇಬ್ಬರಿಗೂ ಅದು ನೂರು ರೂಪಾಯಿಯೇ. ಅಲ್ಲಿ ಚೌಕಾಶಿಗೆ ಅವಕಾಶ ಇಲ್ಲ. ಚಲಾವಣೆಯಲ್ಲಿರುವ ನೋಟು. ಇತರರಿಗೂ ಅದು ನೂರು ರೂಪಾಯಿಯೇ. ಅಭಿಜಾತ ಸಂಗೀತ ಹೀಗಿರುತ್ತದೆ. ಹಾಡುವವರಿಗೆ ಮತ್ತು ಕೇಳುವವರಿಗೆ ಸಮಾನ ಅಧಿಕಾರ ಇರೋದು ಅಭಿಜಾತ ಸಂಗೀತದಲ್ಲಿ. ಅದಕ್ಕಾಗಿಯೇ ಅಭಿಜಾತ ಸಂಗೀತ ಸವೆಯೋದಿಲ್ಲ.

ಅಭಿಜಾತ ಎಂದಕೂಡಲೇ ಅದು ಕಟ್ಟುಪಾಡು. ಈ ಕಟ್ಟುಪಾಡನ್ನು ಒಪ್ಪಿಕೊಂಡೇ ಮುಂದೆ ಸಾಗಬೇಕು. ರಸ್ತೆಗಿಳಿದ ಕೂಡಲೇ ನೀವು ಕಟ್ಟುಪಾಡುಗಳಿಗೆ ಒಳಗಾಗುತ್ತೀರಿ. ನೀವು ರಸ್ತೆ ನಿಯಮಗಳನ್ನು ಒಪ್ಪಿಕೊಳ್ಳಲೇ ಬೇಕು; ಪಾಲಿಸಲೇ ಬೇಕು; ಇಲ್ಲವಾದರೆ ಚಟ್ನಿ ಆಗುತ್ತೀರಿ. ಈ ನಿಯಮಗಳನ್ನು ಒಪ್ಪಿಕೊಂಡು, ನಿಮ್ಮ ಸ್ವಾತಂತ್ರ್ಯವನ್ನು ಬಳಸಿ ಏನು ಮಾಡುತ್ತೀರಿ ಎನ್ನುವುದು ಮುಖ್ಯ. ತ್ಯಾಗರಾಜರು ಹಾಡಿದರು. ನಾನು ಹಂಗೇ ಹಾಡಬೇಕು. ತ್ಯಾಗರಾಜರ ತಿರುವಯ್ಯಾರಿನಲ್ಲಿ ಇಡೀ ಊರೇ ಹಂಗೆ ಹಾಡುತ್ತೆ. ಯಾವುದೋ ಕಾಲದಲ್ಲಿ, ಕಲ್ಯಾಣಿ ರಾಗದಲ್ಲಿ ತ್ಯಾಗರಾಜರು ಹಾಡಿದರು. ಅದು ಹಾಗೇ ಇರುತ್ತೆ. ರಾಗ ಸಂಗತಿಗಳು ಹಾಗೇ ಇರಬೇಕು. ಅದರೊಳಗೇ ತನ್ನತನ ಚಾಚುತ್ತ ಹೋಗಬೇಕು. ಅದೇ ಅಭಿಜಾತ ಸಂಗೀತ. ಕಟ್ಟುಪಾಡು ಇರುತ್ತವೆ. ಸ್ವಾತಂತ್ರ್ಯ ಕೂಡಾ ಇರುತ್ತೆ. ಅದನ್ನು ಬಳಸಿಕೊಂಡು, ಕಟ್ಟುಪಾಡನ್ನು ಇಟ್ಟುಕೊಂಡು, ನೀನು ಹೇಗಿರುತ್ತಿ, ಏನು ಮಾಡುತ್ತಿ, ಎಲ್ಲಿಗೆ ತಲುಪುತ್ತಿ ಅನ್ನೋದು ಮುಖ್ಯ. ಅದೇ ತನ್ನತನ ಉಳಿಸಿಕೊಳ್ಳುವ ಸವಾಲೂ ಹೌದು.

ರಾಜೀವ್‌ ಹಾಡುತ್ತಾರೆ. ವಾರದಲ್ಲಿ ಒಂದು ದಿನ ಸಂಗೀತವನ್ನು ಕಲಿಸುತ್ತಾರೆ. ಆನ್‌ಲೈನ್‌ ಕ್ಲಾಸು ಅದು. ತಮ್ಮ ಗುರು ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ (ಖಾನ್‌ ಸಾಬ್‌) ಅವರ ಬಳಿ ೩೦-೪೦ ವರ್ಷ್ಗಗಳಷ್ಟು ದೀರ್ಘ ಕಾಲ ಸಂಗೀತ, ಸರೋದ್‌ ಕಲಿತ ಶಿಷ್ಯರಿಗೆ ರಾಜೀವ್‌ ಸಂಗೀತ ಹೇಳಿಕೊಡುತ್ತಾರೆ. ಇದು ದುಡ್ಡಿಗಾಗಿ ಅಲ್ಲ. ತನ್ನಲ್ಲಿರುವ ವಿದ್ಯೆಯನ್ನು ಇತರರೊಂದಿಗೆ, ವಿಶೇಷವಾಗಿ ಗುರುಬಂಧುಗಳ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಮಾತ್ರ ಈ ಪಾಠ.

ಬೇರೆಯ ಸಂದರ್ಭದಲ್ಲಿ, ಅವರಿಗೆ ಲಹರಿ ಬಂದಾಗ ಹಾಡುತ್ತಾರೆ; ತಮ್ಮ ಮತ್ತು ತಮ್ಮ ಎದುರಿಗೆ ಕುಳಿತವರ ಸಂತೋಷಕ್ಕೆ. ಹಾಡುವ ವಿದ್ವಾಂಸರು ತಮ್ಮೆದುರು ಕುಳಿತು ಹಾಡಿದಾಗಲೂ ರಾಜೀವ್‌ ಹಾಡುತ್ತಾರೆ. ಹಾಡಿನ ಗತಿಯನ್ನು, ಚಲನೆಯನ್ನು ಸ್ವಲ್ಪವೇ ಸ್ವಲ್ಪ ಬದಲಾಯಿಸಿದರೆ ಆಗುವ ಪರಿಣಾಮಗಳನ್ನು ತೋರಿಸಲು ಹಾಡುತ್ತಾರೆ.ಇದು ಕೇವಲ ಹಾಡುಗಾರಿಕೆಯಾಗಿರುವುದಿಲ್ಲ. ಬಹುದೊಡ್ಡ ತಿರುವನ್ನು ತೋರಿಸಿಕೊಡುವ ಸಂಗೀತದ ಸೂಕ್ಷ್ಮ ಅಂಗವಾಗಿರುತ್ತದೆ.

3

ರಾಜೀವರಿಗೆ ಇನ್ನೊಂದು ಪ್ರಿಯವಾದ ಸಂಗತಿ ಎಂದರೆ ಕಾವ್ಯ. ಅವರು ಇಂಗ್ಲಿಷ್‌ ಪ್ರೊಫೆಸರ್‌ ಆಗಿದ್ದ ಕಾಲದಲ್ಲಿ ಅವರು ಕಾವ್ಯವನ್ನು ಅರ್ಥೈಸುತ್ತಿದ್ದ ರೀತಿ ಬಹಳ ಅದ್ಭುತವಾಗಿತ್ತು ಎಂದು ಹೇಳುವ ಅವರ ಶಿಷ್ಯರು ಕೆಲವರಾದರೂ ಇದ್ದಾರೆ. ಮೈಸೂರಿನ ಕಾಫಿ ಹೌಸ್‌ ಚರ್ಚೆಯಲ್ಲಿ ರಾಜೀವ್‌ ಅವರ ಮಾತುಗಳಿಗೆ ಬಹಳ ಬೆಲೆ ಇತ್ತೆಂಬುದು ಹಲವರ ನೆನಪಿನಲ್ಲಿ ಉಳಿದಿದೆ. ಅಡಿಗರ ಕಾವ್ಯ, ಅನಂತಮೂರ್ತಿಯವರ ಕತೆ, ಕಂಬಾರರ ಕವಿತೆ, ಕಾರ್ನಾಡರ ನಾಟಕ ಹೀಗೆ ಯಾವುದೇ ಚರ್ಚೆಗೆ ಒಂದು ಪೂರ್ಣರೂಪ ಸಿಕ್ಕುತ್ತಿದ್ದುದು ರಾಜೀವರ ಮಾತುಗಳಿಂದ.

ಈಗಲೂ ರಾಜೀವರ ಕೈಗೆ ಸಿಕ್ಕುವ ಪುಸ್ತಕಗಳಲ್ಲಿ ಎಲಿಯಟ್‌, ಏಟ್ಸ್‌, ಆಡೆನ್‌, ಎಜ್ರಾಪೌಂಡ್‌, ಫಿಲಿಪ್‌ ಲಾರ್ಕಿನ್‌, ವಿಲಿಯಂ ಕಾರ್ಲೊಸ್‌ ವಿಲಿಯಂ, ವ್ಯಾಲೆಸ್‌ ಸ್ವೀವನ್ಸ್‌ ಮೊದಲಾದ ಆಧುನಿಕರ ಕೃತಿಗಳು ಮುಖ್ಯವಾದವು.

ನಮ್ಮಲ್ಲಿ ಸಾಹಿತ್ಯ ಎನ್ನುವ ಅಥವಾ ಗದ್ಯ ಎನ್ನುವ ಶಬ್ದವೇ ಇರಲಿಲ್ಲ. ಬಾಣಭಟ್ಟನ ಕಾದಂಬರಿಯನ್ನು ನಾವು ಗದ್ಯ ಎನ್ನುವುದಿಲ್ಲ. ಕಾವ್ಯ ಎನ್ನುತ್ತೇವೆ. ಗದ್ಯ ಪದ್ಯ ಎಲ್ಲವನ್ನೂ ಕಾವ್ಯ  ಒಳಗೊಂಡಿರುತ್ತೆ.

ನೋಟದ, ಭಿತ್ತಿಯ, ಶಬ್ದಗಳ, ಓಟದ ಒಂದು ಧಾಟಿ ಕಾವ್ಯ. ಧಾಟಿಯೇ ಅನುಭವ; ಅನುಭವವೇ ಧಾಟಿ. ಇವೆರಡೂ ಒಂದಾಗದಿದ್ದಾಗ ನಮಗೆ ಗೊತ್ತಾಗುತ್ತೆ. ಏನು ಅನುಭವ, ಏನು ಧಾಟಿ ಎಂದು ಕೇಳಿದರೆ ನಾವು ಹೇಳುವುದಿಲ್ಲ. ಹೇಳುವ ಕೆಲ್ಸ ಕವಿಯದೂ ಅಲ್ಲ. ಒಂದು ರೀತಿಯ ಅಮಲಿನಲ್ಲಿ ಕವಿ ಬರೀತಾನೆ. ಅದು ಸಂಪೂರ್ಣ ಅಮಲೂ ಅಲ್ಲ, ಅದೊಂದು ಶಿಸ್ತೂ ಹೌದು. ಶಿಸ್ತು-ಅಮಲೂ ಎರಡೂ ಒಟ್ಟಾಗಿ, ಭಾಷೆಯ ಮೇಲಿನ ಹಿಡಿತದಲ್ಲಿ ಆಗುವ ವಿಶಿಷ್ಟ ಅನುಭವವೇ ಕಾವ್ಯ.

ಕವಿ ದೊಡ್ಡ ವಿಷಯವನ್ನೇನೂ ಹೇಳಲ್ಲ. ಬೇರೆ ಏನೋ ಮಾಡ್ತಾ ಇರ್ತಾನೆ. ಶಬ್ದಗಳ ಜೋಡಣೆ, ಅಲ್ಲಿ ಹುಟ್ಟುವ ಮ್ಯಾಜಿಕ್‌ ನೋಡಿ ಅವನಿಗೇ ಸೋಜಿಗ. ಫಿಗರೇಟಿವ್‌ ಲಾಂಗ್ವೇಜ್‌ ಅಂತರಾಲ್ಲ, ಅದೇ. ಶಬ್ದಗಳ ಜೋಡಣೆಯ ಮ್ಯಾಜಿಕ್ಕೇ ಕಾವ್ಯ.

ಲಾರೆನ್ಸನ ರೇನ್‌ಬೊ ಇದೆಯಲ್ಲ, ಅದನ್ನು ಕಾವ್ಯ ಓದಿದ ಹಾಗೆ ಓದಬೇಕು. ಅದು ಕಾವ್ಯ.

ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ ರಾಮನ ಕತೆಯನ್ನು ಹೇಳುವ ಒಂದು ಪದ್ಯವನ್ನು ಓದಿ ತೋರಿಸಿದರು ರಾಜೀವ್.‌ ಜನರ ಮಾತಿಗೆ ತಾನು ಬೆಲೆಕೊಟ್ಟೆ ಎಂಬ ಅಮಲಿನಲ್ಲಿ, ತಾನು ರಾಜಾರಾಮ ಎಂಬ ಅಮಲಿನಲ್ಲಿ ಸೀತೆಯನ್ನು ಕಾಡಿಗಟ್ಟಿದ ರಾಮ. ರಾಮನ ಅಮಲನ್ನು, ಕಠೋರ ನಿಲುವನ್ನು ಹೇಳುತ್ತ ಹೇಳುತ್ತ, ಅಪರಾಧಿಯ ಜಾಗದಲ್ಲಿ ನಿಲ್ಲಿಸಿದರೂ ರಾಜೀವ್‌ ಕೊನೆಗೊಂದು ಮಾತು ಹೇಳಿದರು: ʼರಾಮ ಕೆಟ್ಟವನಲ್ಲ.ʼ

ಇಂಥ ಪದ್ಯಗಳನ್ನು ಓದುವಾಗ ಸಾಮಾನ್ಯವಾಗಿ ನಾವೆಲ್ಲ ರಾಮ ಕೆಟ್ಟವನು ಎಂಬ ಭಾವನೆಯನ್ನು ತುಂಬಿಕೊಂಡೇ ಓದುತ್ತೇವೆ. ಓದಿದ ನಂತರವೂ ಇದೇ ಭಾವದಲ್ಲಿಯೇ ಇರುತ್ತೇವೆ. ರಾಜೀವ್‌ ಆಡಿದ ಮಾತು, ʼರಾಮ ಕೆಟ್ಟವನಲ್ಲʼ ಬಹಳ ಕಾಲ ಮನಸ್ಸಿನಲ್ಲಿ ಉಳಿಯಿತು; ಮತ್ತೆ ಮತ್ತೆ ಮೇಲೆ-ಕೆಳಗೆ ಆಡಿ ಕೊರೆಯುತ್ತಲೇ ಹೋಯಿತು. ಇಂಥ ಮಾತುಗಳನ್ನು ಹೇಳುವುದು, ಕಾವ್ಯದ ಜೀವನಾಡಿಯನ್ನು ಹಿಡಿಯುವುದು ರಾಜೀವರ ವಿಶೇಷ, ಹೆಚ್ಚುಗಾರಿಕೆ.

ಕವಿಯಾದವನು  ರೆಟರಿಕ್‌ ಮಾತುಗಳನ್ನಾಡುತ್ತ ಮಾಮೂಲಿ ಮಾತುಗಳಿಗೆ ಇಳಿದುಬಿಡುತ್ತಾನೆ. ರೆಟರಿಕ್‌ನಲ್ಲಿ ನಾವು ಬಹಳ ಹೊತ್ತು ಇರುವುದಕ್ಕೆ ಆಗಲ್ಲ, ಮಾಮೂಲಿತನಕ್ಕೆ ಬರಲೇ ಬೇಕು. ಅಲ್ಲಿಯೇ ನಮ್ಮ ಬದುಕು ಸರಾಗ. ಕವಿ ಎಲ್ಲಿಯೋ ಎತ್ತರಕ್ಕೆ ಏರಿ ಮತ್ತೆ ಕೆಳಗಿಳಿದು, ಮಾಮೂಲಿತನಕ್ಕೆ ಬಂದು ಬಿಡುತ್ತಾನೆ. ಇದೇ ಕಾವ್ಯದ ಹೆಚ್ಚುಗಾರಿಕೆ ಎನ್ನುವುದನ್ನು ತೋರಿಸಿಕೊಡುತ್ತಾರೆ ರಾಜೀವ್‌.

4

ರಾಜೀವರಿಗೆ ಸಿಟ್ಟೇಕೆ ಬರುತ್ತದೆ? ರಾಜೀವರನ್ನು ಬಹಳಷ್ಟು ಜನ ಮಹಾ ಕೋಪಿಷ್ಟ ಎಂದೇ ತಿಳಿದಿದ್ದಾರೆ. ನಿಜ, ರಾಜೀವರಿಗೆ ಥಟ್ಟನೆ ಕೋಪ ಬರುತ್ತದೆ. ತಮ್ಮ ಸಂಗೀತ ಕಛೇರಿ ನಡೆಯುವಾಗ, ಸರೋದ್‌ ಜೊತೆ ಅನುಸಂಧಾನ ನಡೆಸುತ್ತ ಬೇರೊಂದು ಲೋಕದಲ್ಲೇ ವಿಹರಿಸುವಾಗ ಮೈಕ್‌ ಕೆಟ್ಟು ಹೋದರೆ ರಾಜೀವ್‌ ಅವರಿಗೆ ಥಟ್ಟನೆ ಸಿಟ್ಟು ಬರುತ್ತದೆ. ಮೈಕ್‌ ಸರಿಮಾಡಲೆಂದು ಸ್ವಲ್ಪ ಹೊತ್ತು ಸುಮ್ಮನಿರುತ್ತಾರೆ. ಸರಿಮಾಡುವುದರ ಬದಲು ಅದನ್ನು ಇನ್ನಷ್ಟು ಕೆಡಿಸಿದಾಗ ಅವರು ಉರಿಯುತ್ತಾರೆ. ʼತೆಗೆದುಬಿಡು ಮೈಕು, ನಾನು ಹಾಗೆಯೇ ಬಾರಿಸುತ್ತೇನೆʼ ಎನ್ನುತ್ತಾರೆ. ಈ ಉರಿಯ ಬಿಸಿ ಕೇಳುಗರಿಗೂ ತಟ್ಟುತ್ತದೆ.

ಸಂಗೀತ ಎತ್ತರಕ್ಕೆ ಏರಿದ ಹೊತ್ತಿನಲ್ಲಿ ಸರೋದ್‌ ತಂತಿ ತುಂಡಾದರೆ, ರಾಜೀವ್‌ ಅತ್ಯಂತ ತಾಳ್ಮೆಯಿಂದ ಹೊಸ ತಂತಿಯನ್ನು ಜೋಡಿಸುತ್ತಾರೆ, ಒಂದಿಷ್ಟೂ ಗಲಿಬಿಲಿ ಇಲ್ಲದೆ. ಸಂತನ ಸಮಾಧಾನದಲ್ಲಿಯೇ ಅವರು ತಮ್ಮ ಕೆಲಸದಲ್ಲಿ ತನ್ಮಯರಾಗುತ್ತಾರೆ. ನಂತರ ಮೊದಲಿದ್ದ ಸ್ಥಿತಿಗೆ ಏರಿ ರಾಗವನ್ನು ಒಲಿಸಿಕೊಳ್ಳಲು ಹವಣಿಸುತ್ತಾರೆ.

ಇದಿಷ್ಟೆ ಅಲ್ಲ. ಖಾಸಗೀ ಮಾತುಕತೆಯಲ್ಲಿಯೂ ಅವರಿಗೆ ಸಿಟ್ಟು ಬರುತ್ತದೆ. ಎದುರಾಳಿ ತಿರುಳಿಲ್ಲದ ಮಾತನಾಡಿದರೆ, ಹದತಪ್ಪಿ ಮಾತನಾಡಿದರೆ, ಕಾರಣವಿಲ್ಲದೆ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ಬಗ್ಗೆ ದ್ವೇಷಪೂರಿತ ಮಾತುಗಳನ್ನಾಡಿದರೆ ರಾಜೀವರ ಕೋಪ ಭುಗಿಲೇಳುತ್ತದೆ. ʼಎದ್‌ ಹೋಗಯ್ಯ ಆಚೆಗೆʼ ಎನ್ನುವ ಮಟ್ಟಕ್ಕೂ ಅವರು ಹೋಗುತ್ತಾರೆ. 

ರಾಜೀವರ ಬೇಕು ಬೇಡಗಳಲ್ಲಿ ಹೊಯ್ದಾಟವಿಲ್ಲ. ನಿಖರ, ನೇರ, ಸರಳ. ಈ ಬೇಕು ಬೇಡಗಳಲ್ಲಿ ಅವರು ಆತ್ಯಂತಿಕ ತುದಿಗೂ ಹೋಗುವುದುಂಟು. ಅದು ಅವರ ಸಹಜ ಗುಣ.

ಹದವಾದ ಸಂಗೀತಕ್ಕೆ ಅವರ ಕಿವಿ ತಾನೇತಾನಾಗಿ ತೆರೆದುಕೊಳ್ಳುತ್ತವೆ. ಸಂಗೀತದ ಗುಣಮಟ್ಟವನ್ನು ಅಳೆಯಲು (ಅವರು ಶ್ರೇಷ್ಠ, ಕನಿಷ್ಠ ದ ಮಾತು ಆಡುವುದಿಲ್ಲ; ಅದು ಇಷ್ಟ, ಇಷ್ಟವಾಗದ ಸಂಗೀತ ಎಂದು ಮಾತ್ರ ಹೇಳುತ್ತಾರೆ.) ರಾಜೀವರಿಗೆ ಕಿವಿಯೇ ಪ್ರಮಾಣ. ಊಟದ ರುಚಿಗೆ ನಾಲಗೆಯೇ ಪ್ರಮಾಣ. ಸುಖಕರ ನೋಟಕ್ಕೆ ಕಣ್ಣೇ ಪ್ರಮಾಣ. ಬಿಚ್ಚು ಮನಸ್ಸೇ ಬದುಕಿಗೆ ಪ್ರಮಾಣ.

ಅವರ ಅಳತೆ-ಪ್ರಮಾಣಗಳ ಮೇಲೆ ಇತರರೂ ನಂಬಿಕೆ ಇಡುವಂತೆ ಇನ್ನೂ ಅವರ ಆರೋಗ್ಯ ಗಟ್ಟಿಯಾಗಿದೆ.

‍ಲೇಖಕರು Admin

October 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: