ತೆಂಗಿನ ಮರ ಬೆಳೆದ ಪುರಾಣ…

ಎನ್ ಶೈಲಜಾ ಹಾಸನ

ಮನೆಗೊಂದು ಕಲ್ಪತರು ಇರಬೇಕು ಅನ್ನೊದು ಹಿಂದಿನಿಂದಲೂ ಹಿರಿಯರು ಹೇಳುತ್ತಾ ಬಂದಿರುವುದು ಗೊತ್ತೆ ಇದೆ. ನಾನೂ ಕೂಡ ಅದನ್ನು ಮನಸಾರೆ ಒಪ್ಪಿದ್ದೆ. ಹಾಗಾಗಿ ನಾವು ನಿವೇಶನ ಕೊಂಡು ಕೊಂಡಾಗಲೇ ತೆಂಗಿನ ಮರ ನೆಡಬೇಕು ಅಂತ ತೀರ್ಮಾನ ಮಾಡಿಬಿಟ್ಟಿದ್ದೆ. ಮರಗಿಡ ಬೆಳೆಸಿ ಕೈತೋಟ ಮಾಡಲೆಂದೇ ಮನೆಯ ಹಿಂದೆ ಜಾಗ ಬಿಟ್ಟಿದ್ದೆವು. ಆ ತೀರ್ಮಾನದಂತೆ ಮನೆ ಕಟ್ಟುವಾಗಲೆ ತೆಂಗಿನ ಸಸಿ ನೆಡುವ ಪ್ರಯತ್ನ ಮಾಡಿದೆವು. ಆದರೆ ಈಡೇರಿದ್ದು ಮನೆ ಕಟ್ಟಿ ವಾಸಕ್ಕೆ ಬಂದಮೇಲೆ.ಮನೆ ಕಟ್ಟಲು ಶುರುಮಾಡಿದಾಗಿನಿಂದಲೂ ಒಳ್ಳೆಯ ಗಿಡಬೇಕು ಅಂತ ಹುಡುಕಾಟ ನಡೆಸಿದ್ದೆವು.

ನಮ್ಮ ಹುಡುಕಾಟ ನೋಡಿ ನಮ್ಮ ಮನೆಯ ಕಿಟಕಿ ಬಾಗಿಲು ಮಾಡುತ್ತಿದ್ದ ಮರಗೆಲಸದವರು ನಾನು ಒಳ್ಳೆಯ ಸಸಿಗಳನ್ನು ತಂದು ಕೊಡುತ್ತೆನೆ ಅಂತ ಉತ್ಸಾಹದಿಂದ ಹೇಳಿದಾಗ ಒಂದು ಸಮಸ್ಯೆ ಬಗೆಹರಿದಿತ್ತು. ಅವರ ಊರಾದ ಅರಸಿಕೆರೆಯಿಂದ ಸೊಗಸಾದ ಕೆಂದು ಎಳನೀರು ಕೊಡುವ ಎರಡು ಸಸಿಗಳನ್ನು ತಂದೆ ಬಿಟ್ಟರು. ಅವರೆ ಮುತುವರ್ಜಿ ವಹಿಸಿ ಮನೆಯ ಹಿಂಭಾಗದಲ್ಲಿ ನೆಟ್ಟು” ನೋಡಿ ಅಕ್ಕ ಇನ್ನೂ ಏಳೆಂಟು ವರ್ಷಗಳಲ್ಲಿ ಇದು ಕಾಯಿ ಬಿಡುತ್ತದೆ “ಅಂತ ಹೇಳಿದಾಗ ಸಂಭ್ರಮದಿಂದ ಕುಣಿದಾಡುವಂತಾಗಿತ್ತು. ಮರಗಳೆರಡು ಬೇರು ಬಿಟ್ಟು ಚಿಗುರತೊಡಗಿದಾಗ ಮಕ್ಕಳು ಬೆಳೆಯುವಾಗ ಆಗುವ ಸಂತೋಷ ಆಗತೊಡಗಿತು. ಮರಗಳಿಗೆ ಕಾಲಕಾಲಕ್ಕೆ ಬೇಕಾದ ಗೊಬ್ಬರ ಹಾಕುತ್ತಾ, ಪ್ರತಿದಿನ ನೀರು ಹಾಕುತ್ತ ಆರೈಕೆ ಮಾಡುತ್ತಿದ್ದರಿಂದ ತೆಂಗಿನ ಸಸಿಗಳು ನಳನಳಿಸತೊಡಗಿದವು. ದಿನದಿನಕ್ಕೆ ಬೆಳೆಯುತ್ತಾ ಎತ್ತರವಾಗುತ್ತಿದ್ದ ತೆಂಗಿನ ಸಸಿಗಳನ್ನು ನೋಡುವುದೆ ಚೆಂದ.

ನಮ್ಮತ್ತೆರಕೆ ಬೆಳೆದ ಮರದ ಪಕ್ಕ ನಿಂತು ಸಂಸಾರ ಸಮೇತ ಫೋಟೋ ತೆಗಿಸಿಕೊಂಡು ಖುಷಿಯೂ ಪಟ್ಟಾಯಿತು. ತೆಂಗಿನ ಸಸಿ ಬೆಳೆದು ಮರವಾದವು.ಪ್ರತಿನಿತ್ಯ ಅವುಗಳನ್ನು ನೋಡುವುದೆ ಚೆಂದ. ಮರದ ಜೊತೆಗೆ ಪುಟ್ಟ ಕೈತೋಟವನ್ನೂ ಮಾಡಿದ್ದೆವು.ಗುಲಾಬಿ, ಸೇವಂತಿಗೆ, ಕರಿಬೇವು, ವಿಳ್ಳೆದೆಲೆ, ಅಡಿಕೆ, ದಾಸವಾಳ ಹೀಗೆ ಇರುವ ಪುಟ್ಟ ಜಾಗದಲ್ಲೇ ಅನೇಕ ಗಿಡಗಳನ್ನು ಬೆಳೆಸಿ ಸುಂದರ ಕೈತೋಟ ಮಾಡಿಕೊಂಡು ಸಮಯ ಸಿಕ್ಕಾಗಲೆಲ್ಲಾ ಅಲ್ಲಿಯೇ ಕುಳಿತು ಓದುವುದು ಬರೆಯುವುದು ಮಾಡುತ್ತಿದ್ದೆ. ತೆಂಗಿನ ಸಸಿಯೂ ದಿನೆ ದಿನೆ ಬೆಳೆದು ಮರವಾಗಿ ತೊಡಗಿತು.

ಅದೊಂದು ದಿನ ಗಿಡದಲ್ಲಿ ದಸಿನುಗ್ಗಿದ್ದು ಕಂಡು ಸಂತಸದ ಬುಗ್ಗೆ ಉಕ್ಕಿತ್ತು. ಅದನ್ನು ಕಂಡ ಕೂಡಲೆ ಪತಿ ರಾಯರು ಪೂಜಾ ಸಾಮಗ್ರಿಗಳನ್ನು ತಂದು ಸಂಭ್ರಮದಿಂದ ದಸಿ ಹೊರಟ ಮರಕ್ಕೆ ಪೂಜೆ ಸಲ್ಲಿಸಿದರು. ಮಾತ್ತೊಂದು ಮರದಲ್ಲಿಯೂ ದಸಿ ನುಗ್ಗಿತು. ಅದಕ್ಕೂ ಸಂಭ್ರಮದಿಂದ ಪೂಜೆ ಸಲ್ಲಿಸಿ ಮಾತ್ತೊಮ್ಮೆ ಖುಷಿ ಪೆಟ್ಟಾಯಿತು. ಪ್ರತಿದಿನ ಬೆಳಗ್ಗೆ ಸಂಜೆ ತೆಂಗಿನ ಮರವನ್ನು ನೋಡುವುದೆ ಕೆಲಸವಾಯಿತು. ನಮ್ಮ ತೆಂಗಿನ ಮರಗಳಲ್ಲಿ ದಸಿ ಹೊರಟು ಹೂವಾಗಿ ಸಣ್ಣ ಕಾಯಿಗಳಾಗಿ, ಕಾಯಿ ದೊಡ್ಡದಾಗತೊಡಗಿತು. ದೊಡ್ಡದಾಗಿ ಬೆಳೆಯುತ್ತಿದ್ದ ತೆಂಗಿನ ಹೀಚುಗಳು ಕೈಗೆಟಕುವಷ್ಟು ಎತ್ತರದಲ್ಲಿಯೆ ಇತ್ತು. ಅದು ಯಾವಾಗ ದೊಡ್ಡದು ಆಗುತ್ತದೆಯೊ, ನಾವು ಯಾವಾಗ ನಮ್ಮ ಮರದ ಎಳೆನೀರನ್ನು ಕುಡಿಯುತ್ತೆವೆಯೊ, ಕಾಯಿಯನ್ನು ತಿನ್ನುತ್ತೆವೆಯೊ ಅಂತ ಕಾಯುತ್ತಿದ್ದೆವು.

ಒಂದಿಷ್ಟು ದಿನ ಕಳೆಯಿತು. ಇನ್ನೊಂದು ವಾರದಲ್ಲಿ ಎಳೆನೀರು ಕೀಳಬಹುದು ಅಂತ ಅಂದು ಕೊಂಡೆವು. ಬೆಳಗ್ಗೆ ಎದ್ದ ಕೂಡಲೆ ಮರ ನೋಡುವ ಅಭ್ಯಾಸದಂತೆ ಎದ್ದು ಬಂದು ಮರ ನೋಡಿ ಎದೆ ದಸಕ್ಕೆಂದಿತು. ನಮ್ಮ ತೆಂಗಿನ ಮರದ ಮೊದಲ ಫಸಲು ಕಣ್ಣಿಗೆ ಕಾಣದಂತೆ ಮಾಯವಾಗಿತ್ತು. ಅದ್ಯಾರೊ ಕೈಗೆಟುಕುವಂತೆ ಬಿಟ್ಟಿದ್ದ ಎಳೆನೀರನ್ನು ಹತ್ತಡಿ ಕಾಂಪೌಂಡ್ ಹತ್ತಿ ಗೊನೆ ಸಮೇತ ಕದ್ದೊಯ್ದಿದ್ದರು. ಕಾಯಿ ಇರಲಿ ಎಳೆನೀರೂ ಕೂಡ ನಮಗೆ ಲಭ್ಯವಿರಲಿಲ್ಲ. ತೆಂಗಿನ ಮರವನ್ನೆ ನೋಡುತ್ತಾ ನಿಂತಿದ್ದ ನನ್ನ ಹುಡುಕಿಕೊಂಡು ಬಂದ ಗಂಡ, ಅತ್ತೆ, ಬಣಗುಟ್ಟುತ್ತಾ ಇದ್ದ ಮರ ನೋಡಿ “ಅಯ್ಯೋ ನೆನ್ನೆನೆ ಎಳೆನೀರನ್ನ ಕೀಳಬೇಕಿತ್ತು, ಪಾಪಿಗಳು ಒಂದು ಎಳೆನೀರುನ್ನೂ ಬಿಡದೆ ಕಿತ್ತುಕೊಂಡು ಹೋಗಿದ್ದಾರಲ್ಲ ‘ಅಂತ ಬೇಸರಿಸಿಕೊಂಡರು. ನಿರಾಸೆಯಿಂದ ಪೆಚ್ಚಾಗಿ ನಿಂತಿದ್ದ ನನ್ನನ್ನು ನೋಡಿ ಅತ್ತೆ ‘ಹೋಗ್ಲಿ ಬಿಡು, ನಮಗೆ ಲಭ್ಯವಿಲ್ಲ ಬಿಡು” ಒಳಗೆ ಕರೆದೊಯ್ದರು.ಅವತ್ತೆಲ್ಲ ಬೇಸರವೆ ಕಾಡಿತ್ತು.

ಮುಂದೆ ಕೂಡ ನಮಗೆ ತೆಂಗಿನ ಫಲ ದಕ್ಕಿದೆ ಇಲ್ಲ. ತೆಂಗಿನ ಕಾಯಿ ಸ್ವಲ್ಪ ದಪ್ಪ ಆದ್ರು ಸಾಕು, ಅದ್ಯಾವ ಮಾಯಾದಲ್ಲೊ ಮಾಯವಾಗಿ ಬಿಡುತ್ತಿತ್ತು. ಮರ ಬೆಳೆಸೋದು ನಾವು, ಫಲ ತಿನ್ನೋರು ಯಾರೋ ಅಂತ ನನ್ನ ಅಸಮಾಧಾನವನ್ನು ತೋಡಿಕೊಳ್ಳುತ್ತಲೆ ಇದ್ದೆ. ನನ್ನ ಅಸಮಾಧಾನ ದೂರವಾಗುವ ದಿನಗಳೂ ಬಂದು ಬಿಟ್ಟವು. ಮರ ಎತ್ತರೆತ್ತರಕ್ಕೆ ಏರಿದಂತೆಲ್ಲ ನಮ್ಮ ಮರದ ಎಳೆಕಾಯಿಗಳ ಮೇಲೆ ಕಣ್ಣಿಟ್ಟು ಲಪಟಾಯಿಸುತ್ತಿದ್ದ ಕಳ್ಳನಿಗೆ ಅಷ್ಟು ಎತ್ತರದ ಮರ ಹತ್ತಿ ಕಾಯಿ ಕೀಳುವ ದಮ್ಮಿಲ್ಲದೆ ನಮ್ಮ ತೆಂಗಿನ ಮರಗಳು ಗೊನೆ ಗಳಿಂದ ಕಂಗೊಳಿಸತೊಡಗಿದವು.

ದಿನಕ್ಕೆರಡು ಸಲ ನಮ್ಮ ಮೈತುಂಬಿ ಕೊಂಡಿದ್ದ ನಮ್ಮ ತೆಂಗಿನ ಮರಗಳನ್ನು ನೋಡುವುದೆ ಒಂದು ಖುಷಿ ವಿಷಯವಾಗಿತ್ತು. ಈಗ ಕಾಯಿ, ಎಳೆನೀರು ಮರದ ತುಂಬಾ ಇವೆ. ಆದರೆ ಅವು ಸುಲಭವಾಗಿ ನಮ್ಮ ಕೈ ಸೇರಲಿಲ್ಲ. ಎತ್ತರದ ಮರದ ಮೇಲಿದ್ದ ತೆಂಗಿನ ಕಾಯಿಗಳನ್ನು ಧರೆಶಾಹಿಯಾಗಿಸಲು ಕಷ್ಟವಾಗತೊಡಗಿತು. ಈ ನಗರದಲ್ಲಿ ಮರ ಹತ್ತಿ ಕಾಯಿ ಕೆಡವುವವರು ಎಲ್ಲಿ ಸಿಗಬೇಕು. ಅಂತವರನ್ನು ಹುಡುಕಿ ಹುಡುಕಿ ಸಾಕಾಯಿತು.

ಕೊನೆಗೆ ನಮ್ಮ ಯಜಮಾನರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಅಟೆಂಡರ್ ತನ್ನ ಹಳ್ಳಿಯಿಂದ ಕರೆದುಕೊಂಡು ಬಂದು ಕಾಯಿ ಕೀಳುವವನಿಗೆ ಅವನು ಕೇಳಿದಷ್ಟು ಹಣ ನೀಡಿ ಕಾಯಿ ಕೀಳಿಸಿದ್ದಾಯಿತು. ಅವರಿಗೆ ಕಾಯಿ ಕೆಡವಲು ಕೊಟ್ಟ ಕೂಲಿ, ಅವರನ್ನು ಹಳ್ಳಿಯಿಂದ ಕರೆಸಲು ಕೊಟ್ಟ ಬಸ್ ಚಾರ್ಜ್, ಕರೆದು ಕೊಂಡು ಬಂದವನ ಖರ್ಚು ಎಲ್ಲಾ ಸೇರಿದರೆ ಅಷ್ಟೇ ಹಣದಿಂದ ಮರದಿಂದ ಕೆಡವಿಸಿದ ತೆಂಗಿನ ಕಾಯಿಗಿಂತ ಹೆಚ್ಚು ತೆಂಗಿನ ಕಾಯಿ ಕೊಳ್ಳಬಹುದಿತ್ತು. ಕಾಯಿ ಕೀಳಿಸುವಾಗಲಾದರೂ ನೆಮ್ಮದಿ ಇತ್ತಾ.ಅದೂ ಇಲ್ಲ.ಹಿಂದಿನ ಮನೆಯಾಕೆಯ “ನಮ್ಮ ಜಾಗದಲ್ಲಿ ಕಾಯಿ ಬೀಳುವುದಾಗಲಿ, ನಮ್ಮ ಸೈಟಿನ ಕಡೆಯಿಂದ ಮರಕ್ಕೆ ಹತ್ತುವುದಾಗಲಿ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ” ಅನ್ನೊ ಆರ್ಭಟ ಕೇಳಿ ನೆಮ್ಮದಿನೇ ಹಾಳಾಯಿತು.ಅಕ್ಕ ಪಕ್ಕ ಬೀಳಿಸದೆ ಕಾಯಿಕೀಳಿಸುವುದೆಂತು ಅನ್ನೊ ಹೊಸ ಚಿಂತೆ ಶುರುವಾಯಿತು. ಅವತ್ತೆನೊ ಹೋರಾಟ ಮಾಡಿ ಕಾಯಿ ಕೀಳಿಸಿದಾಯಿತು. ಆದರೆ ಮುಂದಾ ಅನ್ನೊ ಪ್ರಶ್ನೆ ಬೃಹದಾಕಾರವಾಗಿ ಕಾಡಿತು.

ಕಾಯಿ ಕೀಳಿಸುವುದರಿಂದ ಹಿಡಿದು ಕಾಯಿ ಸುಳಿಯುವ ತನಕ ಸಮಸ್ಯೆಯ ಮೇಲೆ ಸಮಸ್ಯೆ, ಮಲೆನಾಡಿನ ಪತಿರಾಯರಿಗೆ ಕಾಯಿ ಸುಲಿಯಲು ಬಾರದು, ಒಂದೆ ಸಲ ಯಾರಿಂದಲಾದರು ಸುಲಿಸಿ ಇಟ್ಟು ಕೊಂಡರೆ ತೆಂಗಿನ ಕಾಯಿಗಳು ಹಾಳಾಗುತ್ತದೆ, ನಮ್ಮ ಸಂಸಾರಕ್ಕೆ ಎಷ್ಟು ಕಾಯಿ ಬೇಕು. ವಾರಕ್ಕೆ ನಾಲ್ಕು ಸಾಕು.ಉಳಿದದ್ದನ್ನು ಮನೆಗೆ ಬಂದವರಿಗೆಲ್ಲ ಧಾರಾಳವಾಗಿ ಕೊಟ್ಟು ಕಳುಹಿಸಿದರೂ ಉಳಿಯುತ್ತಿತ್ತು.

ಮನೆಯಲ್ಲಿ ತೆಂಗಿನ ಗಿಡವಿದ್ದರು ಅಡುಗೆಗೆ ಧಾರಾಳವಾಗಿ ಕಾಯಿ ಬಳಸಲು ನನಗೆ ಸಾಧ್ಯವಿಲ್ಲ ಅಂತ ಕೊರಗು ಉಳಿದೆ ಇತ್ತು. ಕಷ್ಟಪಟ್ಟು ಕಾಯಿ ಸುಲಿದು ಕೊಡುತ್ತಿದ್ದ ಪತಿರಾಯರು ಜಾಸ್ತಿ ಬಳಸಬೇಡ ಅಂತ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿ ಬಿಟ್ಟಿದ್ದರು. ಮನೆಯಲ್ಲಿ ಅಷ್ಟೊಂದು ಕಾಯಿ ಇದ್ದರೂ ಸುಲಿಯಲಾರದ ಸಂಕಟಕ್ಕೆ ಸಮುದ್ರಕ್ಕೆ ಹತ್ತಿರವಿದ್ದರೂ ಉಪ್ಪಿಗೆ ಬಡತನ ಅನ್ನುವಂತಾಗಿತ್ತು ನನ್ನ ಪರಿಸ್ಥಿತಿ. ಕಾಯಿ ಸುಲಿಯುವ ಮಿಷನ್ ಇದೆ ಅಂತ ಗೊತ್ತಾದ ಮೇಲೆ ಅದನ್ನೂ ಮುಂದಾಯಿತು. ಕಾಯಿಗೆ ಹಸಿ ಸಿಪ್ಪೆ ಇದ್ದಾಗ ಸುಲಿಯಲು ಸುಲಭ. ಸಿಪ್ಪೆ ಒಣಗಿದರೆ ಇದು ಕೂಡ ಕಷ್ಟ ಅಂತ ಗೊತ್ತಾಗಲು ತುಂಬಾ ದಿನ ಬೇಕಾಗಲಿಲ್ಲ. ತೆಂಗಿನ ಮರ ಬೆಳೆದು ಯಾಕಾದರೂ ಬೆಳೆದೆವಪ್ಪ ಅಂತ ಅನ್ನಿಸಿ ಸಾಕು ಸಾಕಾಯಿತು.

‍ಲೇಖಕರು Admin

October 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: