ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಮ್ಮ ಚಿತ್ತ ಕಬಿನಿಯತ್ತ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

3

ಬಂಡೀಪುರದ ಅನುಭವ ಆದ ಮೇಲೆ ಮತ್ತೆ ಹುಲಿ ಚಿರತೆ ಹುಡುಕಿಕೊಂಡು ಹೋಗುವವರ ಪಕ್ಷಿ ಪ್ರಪಂಚದ ಬಗೆಗಿನ ಉಪೇಕ್ಷೆಯ ಭಾವ ಕಂಡು ಅವರ ಜೊತೆ ಕಾಡಿನ ಟೂರ್ ಮಾಡಬಾರದೆಂದು ತೀರ್ಮಾನ ಮಾಡಿಯೇ ಬಿಟ್ಟಿದ್ದೆ. ಆದರೂ ನನ್ನ ಗೆಳತಿ ಲತಾ ಕಬಿನಿಗೆ ಹೋಗೋಣವಾ ಎಂದು ಕರೆದ ಕೂಡಲೇ ರೈಟ್ ಎಂದು ನನ್ನ ಮುಂಚಿನ ನಿರ್ಧಾರ ಬದಲಿಸಿ ಹೊರಟುಬಿಟ್ಟೆ. ಅವಳ ಜೊತೆ ಅವಳ ಗೆಳತಿ ವೀಣಾ ಕೂಡಾ ಬಂದಿದ್ದಳು. ಚಿತ್ತವೆಷ್ಟು ಚಂಚಲ, ಹಕ್ಕಿ ಎಂದರೆ ಹಾರಿಯೇ ಹೋಗುವಷ್ಟು, ನನ್ನ ತೀರ್ಮಾನವನ್ನು ನಾನೇ ಉದಾಸೀನ ಮಾಡಿ ಕರೆದರೆ ಎದ್ದು ಓಡಿಹೋಗುವಷ್ಟು ಚಂಚಲವಲ್ಲವೆ.

ನಾವು ಬೆಳಿಗ್ಗೆಯೆ ಹೊರಟಿದ್ದೆವು, ಸಫಾರಿ ಮಧ್ಯಾಹ್ನ ಇದ್ದುದ್ದರಿಂದ ಎಂದಿನಂತೆ ಒಂದು ಎಕ್ಸ್ಟ್ರಾಪ್ಲ್ಯಾನ್ ಸೇರಿಕೊಂಡಿತು. ಭಗವದ್ಭಕ್ತೆಯಾದ ಲತಾ ಚಿಕ್ಕದೇವಮ್ಮನ ಗುಡಿಯಿದೆ ಎಂದು ಕಾರನ್ನು ಗುಡ್ಡಕ್ಕೆ ಏರಿಸಿಸಿದಳು, ಸಾರಥಿಗೆ ಸೂಚನೆ ಇತ್ತು. ದೇವರು ಆಲಯದಲ್ಲಿ ಮಾತ್ರವೆಂದು ನಾನು ಗಟ್ಟಿಯಾಗಿ ನಂಬಿಲ್ಲವಾದ್ದರಿಂದ ಅವರನ್ನು ದೇವಿಯ ಬಳಿಗೆ ಕಳುಹಿಸಿ ನೀವು ಆಶೀರ್ವಾದ ಪಡೆದುಕೊಳ್ಳಿ ಎಂದೆ. ಆ ಗುಡಿಗೆ ಒಂದಷ್ಟು ಮೆಟ್ಟಿಲು ಬೇರೆ ಹತ್ತಿ ಹೋಗಬೇಕಿದ್ದುದು ಒಂದು ಕಾರಣವಾದರೆ, ಅವರು ಬರುವಷ್ಟರಲ್ಲಿ ಅಡ್ಡಾಡಿ ಕ್ಯಾಮೆರಾದ ಕಣ್ಣಿನಿಂದ ನೋಡಬಹುದೆನ್ನುವುದು ಮತ್ತೊಂದು ಕಾರಣವಾಗಿತ್ತು. ಆದರೆ ಹೆಚ್ಚು ನೋಡುವಂತದ್ದು ಅಲ್ಲೇನೂ ಇರಲಿಲ್ಲ. ಕಾಜಾಣ ಬಂತು, ಹೋಯಿತು. ಬಿಡಲಿಲ್ಲ, ಅದನ್ನೇ ತೆಗೆದೆ. ಕೆಳಗಿಳಿಯುವಾಗ ನೋಡಿದರೆ ಅದೇ ಕಾಜಾಣ ಮೇಯುತ್ತಿದ್ದ ಆಡು ಕುರಿಗಳ ಮೈಮೇಲೆಲ್ಲಾ ತಾಂ ತೋಂ ಧಿಮಿ ಧಿಮಿ ತೋಂ ಎಂದು ನೃತ್ಯವಾಡುತ್ತಿದೆ. ಅರೆ ಈ ಕಾಜಾಣಕ್ಕೆ ಮೇಲೆ ಎಷ್ಟು ಸರ್ಕಸ್ ಮಾಡಬೇಕಾಯಿತಲ್ಲ ದೇವಿ ಕೃಪೆಯಿಂದ. 

ಲತಾ ದೇವರಿಗೆ ತನ್ನನ್ನು ತೋರಿಸಿ ದರ್ಶನ ಭಾಗ್ಯ ಕಾಣಿಸಿದ ಬಳಿಕ ಮಧ್ಯಾಹ್ನ ಇನ್ನೂ ಸಮಯ ಇದೆಯೆಂದು ಕಬಿನಿ ಜಲಾಶಯದ ಬಳಿ ಒಂದು ರೌಂಡ್ ಹೊಡೆದರೂ ಹಕ್ಕಿಗಳು ಕಾಣದೆ ಸಮೀಪದ ಕೆರೆಯಲ್ಲೊಂದೆರಡು ಕೊಕ್ಕರೆ ಮಾತ್ರ ಸಿಕ್ಕವು. ಕೊನೆಗೆ ಡಿ.ಬಿ.ಕುಪ್ಪೆ ಆವರಣ ಸೇರಿ ಸಫಾರಿಗೆ ರೆಡಿಯಾದೆವು. ನನ್ನ ಬಹು ಮೇಧಾವಿ ಬೃಹಸ್ಪತಿ ತಲೆಯಲ್ಲಿದ್ದುದು ಹಿಂದಿನ ಸೀಟಿನಲ್ಲಿ ಕೂತರೆ ಚೆನ್ನಾಗಿ ಕಾಣಿಸುತ್ತದೆ, ಫೋಟೋನೂ ತುಂಬಾ ಚೆನ್ನಾಗಿ ತೆಗೆಯಬಹುದು, ಯಾರ ತಲೆಯೂ ಅಡ್ಡಿಯಾಗಲ್ಲ ಎಂದು. ಅದಕ್ಕೆ ಬೇಗ ಒಳನುಗ್ಗಿ ಹಿಂದಿನ ಸೀಟ್ ಆರಿಸಿಕೊಂಡೆ. ಕಾಡಿನಲ್ಲಿ ಸಫಾರಿ ಶುರುವಾದಾಗ ಗೊತ್ತಾಯಿತು, ಹಿಂದಿನ ಸೀಟಿನಿಂದ ಹೆಚ್ಚು ಕಾಣುವುದಿಲ್ಲ, ಬದಲಿಗೆ ಹೆಚ್ಚು ಕುಲುಕಿಸುತ್ತದೆಂದು. ಸಫಾರಿ ಮುಗಿಯುವ ಹೊತ್ತಿಗೆ ನನ್ನಿಡೀ body ಬಾಡಿ ಬಸವಳಿದಿತ್ತು. ಏನು ಕಂಡೀತು ಏನೇನು ಕಂಡೀತೆಂದು ಕಾತರಿಸಿ ಕಾದವರಿಗೆ ಆರೇಳು ಆನೆ, ಜಿಂಕೆಗಳ ಹಿಂಡು ಕಾಣಸಿಕ್ಕಿದವು. ಮರಿಯೊಂದಿಗೆ ನೀವೇನು ಸಫಾರಿ ಮಾಡೋದು ನಾವೂ ಸಫಾರಿ ಮಾಡುತ್ತೇವೆ ಎಂದು ಅಡ್ಡಾಡುತ್ತಿದ್ದ ಗಜಪಡೆ `ಪಾಪ ದೂರದಿಂದ ಬಂದಿದ್ದೀರಿ, ನಾಲ್ಕಾರು ಚಿತ್ರ ತೆಗೆದುಕೊಳ್ಳಿ’ ಎಂದು ಕಾಲಾವಕಾಶ ಕೊಟ್ಟವು. ಕಬಿನಿಯಂಚಿನಲ್ಲಿ ಗಾಡಿ ನಿಲ್ಲಿಸಿದಾಗ ಆಹಾ! ಸಂಜೆಗೆಂಪಿನ ಆ ಚಂದ ಇವತ್ತಿಗೂ ಕಣ್ಣು ಮುಚ್ಚಿದರೂ ಮರೆಯಲಾರದ ಚಿತ್ರವಾಗಿದೆ. ನೀರಿನಲ್ಲಿ ನಡೆದು ಹೋಗುತ್ತಿದ್ದ ಆನೆಹಿಂಡು ಕಪ್ಪುಗುಡ್ಡದ ಹಾಗೆ… ಟೂರ್ ಕಾಸು ಇದರಲ್ಲೇ ಬಂತು ಎಂಬ ತೃಪ್ತಿ.

ರಾತ್ರಿ ಹೆಗ್ಗಡದೇವನಕೋಟೆಯ ಹೊರ ಆವರಣದ ಹೋಟೆಲಿನಲ್ಲಿ ನಮ್ಮನ್ನು ನೆಲೆಗೊಳಿಸಿದರು. ಡ್ರೈವರು ಮಧುಕುಮಾರ ನಂಟರ ಮನೆ ಇಲ್ಲೇ ಇದೆ, ಅಲ್ಲಿಗೇ ಹೋಗ್ತೀನಿ ಎಂದು ಹೊರಟ. ನಮ್ಮ ಪಕ್ಕದ ರೂಮಿನವರು ರಾತ್ರಿಯಿಡೀ ಆಡುತ್ತಿದ್ದ ಜಗಳವೆಷ್ಟು ಜೋರಾಗಿತ್ತೆಂದರೆ ಯಾರೇ ಕೇಳಿದರೂ ಇದು ಪರಮಾತ್ಮನ ಪರಿಣಾಮ ಎನ್ನುವುದು ಸ್ಪಟಿಕ ಸ್ಪಷ್ಟವಾಗಿತ್ತು. ನಾವೋ ಹೆದಹೆದರುತ್ತಾ ಇರುಳನ್ನು ನೂಕಿದೆವು. ಮಂಜುಮಂಜಾಗಿದ್ದ ಹಗಲಿನಲ್ಲಿ ಮತ್ತೊಂದು ಸಫಾರಿಗೆ ಸನ್ನದ್ಧರಾದೆವು. ಹೆಚ್ಚಿಗೇನೂ ಕಾಣಲಿಲ್ಲ. ಜಿಂಕೆ, ಸಂಬಾರ್ ಜಿಂಕೆ, ನವಿಲು ಹೀಗೆ… ಹಕ್ಕಿಗಳಿರಲಿ ಹಕ್ಕಿಗಳ ಕೂಗೂ ಕಾಣೆಯಾಗಿತ್ತು. ನಡುನಡುವೆ ಸಿಟ್ಟೂ ಬರುತ್ತಿತ್ತು. ಸಫಾರಿ ಯಾತನೆ ಮುಗಿಸಿ ಕಬಿನಿ ದಂಡೆಯಲ್ಲಿ ಅಡ್ಡಾಡಿದೆವು. ಕಾಜಾಣಗಳು ಕಾಣಸಿಕ್ಕವು.

ಅಲ್ಲಿ ಕಂಡ ಒಂದು ನೋಟ ಚಿತ್ತದಲ್ಲಿ ಅಚ್ಚೊತ್ತಿದೆ. ಹಕ್ಕಿಗಳು ಮೊಟ್ಟೆ-ಮರಿಗಳ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತವೆ. ಅವಕ್ಕೆ ಸಂಚಕಾರ ಬರದಂತೆ ನೂರಕ್ಕೆ ಸಾವಿರ ಪಟ್ಟು ಕಾವಲು ಕಾಯುವುದನ್ನು ಹಲವು ಸಲ ನೋಡಿದ್ದೇನೆ. ನಮ್ಮ ಮನೆಯಂಗಳದಲ್ಲಿ ಬುಲ್‌ಬುಲ್ ಮರಿ ಮಾಡಿದ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಅದರ ಕಾಳಜಿ ಗಮನಿಸಿದ್ದೆ. ಕಬಿನಿ ಹಿನ್ನೀರಿನ ಮಧ್ಯಾಹ್ನದ ಉರಿಬಿಸಿಲ ಸವಾರಿಯಲ್ಲಿ ಗೂಡಿಗಾಗಿ ಹುಲ್ಲೆಸಳನ್ನು ಹೊತ್ತೊಯ್ದದ್ದನ್ನು ನೋಡುತ್ತಿದ್ದ ಕಣ್ಣುಗಳಿಗೆ ಮರುಕ್ಷಣದಲ್ಲೇ ಕಾಜಾಣವೊಂದು ತನ್ನ ಗೂಡಿಗೆ ದಾಳಿ ಮಾಡಿದ ಹದ್ದನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಾಣಿಸಿತು. ಎಂತಹ ವೈರುಧ್ಯದ ಸನ್ನಿವೇಶಗಳು… ಬದುಕಿನಲ್ಲಿ… ಪ್ರಕೃತಿಯಲ್ಲಿ…! ಆಕ್ರಮಣಕಾರಿ ಹದ್ದಿನ ಎದುರು ಕಾಜಾಣದ ಹೋರಾಟದ ಹಂತಗಳೆಲ್ಲಾ ಬಲಿಷ್ಠರ ಮುಂದೆ ಬಲಹೀನರ ಪಾಡನ್ನು ಪ್ರತಿನಿಧಿಸುವಂತಿತ್ತು. ಆದರೂ ಕಾಜಾಣ ತನ್ನ ಪ್ರತಿಭಟನೆಯನ್ನು ರಿಜಿಸ್ಟರ್ ಮಾಡಿದ್ದು ಮಹತ್ವದ್ದಲ್ಲವೆ. ಆಕಾಶದ ಅಂಗಳದಲ್ಲಿ ನಡೆದ ಘಟನೆಗೆ ಈ ದೂರ ನೋಟದ ಅಷ್ಟೇನು ಸ್ಪಷ್ಟವಲ್ಲದ ಚಿತ್ರಗಳೂ ಸಾಕ್ಷಿಯಾದವು.

ಲತಾಗೆ ಇದ್ದಕ್ಕಿದ್ದಂತೆ ಒಂದು ಐಡಿಯಾ ಬಂತು, ಹತ್ತಿರದಲ್ಲಿ ಬೇಲದಕುಪ್ಪೆ ಕಾಡಿದೆ ಅಲ್ಲಿಗೆ ಹೋಗೋಣ ಎಂದಳು. ಆಗಲೇ ಸಮಯ ಆಗಿತ್ತು, ಆದರೂ ಪ್ರಯತ್ನಿಸುವ ಎಂದು ಸ್ಪೀಡಾಗಿ ಗಾಡಿ ಓಡಿಸಿಸಿಕೊಂಡು ತಲುಪುವಾಗ ನಾಲ್ಕೂವರೆ ಆಗಿತ್ತು. ಹೊರಗೆ ಬರುವ ಸಮಯ ಹತ್ತಿರಕ್ಕೆ ಬಂದಿತ್ತು. ಗೇಟಿನಲ್ಲಿ ಕೂತವರು ಒಳಗೆ ಬಿಡಲ್ಲ ಎನ್ನುತ್ತಿದ್ದರೂ ಲತಾ ತನಗೆ ಗೊತ್ತಿದ್ದ ಅರಣ್ಯಾಧಿಕಾರಿಯ ಹೆಸರು ಹೇಳಿ ಒಪ್ಪಿಸಿದಳು, ಬಾಣದಂತೆ ಕಾರು ಒಳಗೆ ನಡೆಯಿತು. ಇಷ್ಟು ಶರವೇಗದಲ್ಲಿ ಹೋಗುವಾಗ ಏನು ಕಂಡೀತು. ಆದರೆ ನಾಲ್ಕಾರು ಸೀಳುನಾಯಿಗಳು ಕಣ್ಣಿಗೆ ಬಿದ್ದದ್ದೇ ತೃಪ್ತಿ. ಅಲ್ಲೊಂದು ಇಲ್ಲೊಂದು ನವಿಲು ಹಾಜರಾತಿ ಹಾಕಿ ಪರಾರಿಯಾದವು. ಮುಂದೆ ಹೋದರೆ ಅಲ್ಲೊಂದು ದೇಗುಲವಿತ್ತು. ನಮ್ಮ ಭಗವದ್ಭಕ್ತೆಗೆ ಆಂತರ್ಯದಲ್ಲಿದ್ದ ಭಕ್ತಿಯೆಲ್ಲಾ ಥಟಕ್ಕನೇ ಜಾಗೃತವಾಯಿತು. ಮತ್ತೆ ಇನ್ನೇನು, ಅವಳು ಪೂಜೆ ಮಾಡಿಸುವ ವೇಳೆಗೆ ಬೆಳಕು ಜಾರುತ್ತಿತ್ತು, ಅವಳು ಸಾಂಗವಾಗಿ ಪೂಜೆ ಮಾಡಿಸಿದಳು, ನಾನು ಆಚೀಚೆ ಕಣ್ಣು ಆಡಿಸಿ ಏನೊಂದೂ ಕಣ್ಣಿಗೆ ಕಾಣದಲ್ಲ ಎಂದು ಕಂಗಾಲಾದೆ. ನಾವೆಲ್ಲ ಬೇಲದಕುಪ್ಪೆಯಿಂದ ಹೊರಬಂದೆವು, ನಮ್ಮ ನಮ್ಮ ಊರು ಸೇರಿ ಕಬಿನಿಯ ಮೊದಲ ಯಾತ್ರೆ ಮುಕ್ತಾಯವಾಯಿತು ಎಂದು ಘೋಷಿಸಿದೆವು. 

ಸ್ವಲ್ಪ ದಿನಗಳಲ್ಲೇ ಕಬಿನಿಗೆ ಮತ್ತೊಮ್ಮೆ ಹೊರಡುವ ಯೋಜನೆ ರೂಪಿತವಾಯಿತು. ಆದರೀ ಸಲ ನನ್ನ ಜೊತೆಯಾದವಳು ನನ್ನ ತಂಗಿ ರೂಪ. ಕಬಿನಿಯ ಜಂಗಲ್‌ಲಾಡ್ಜಿಗೆ ನನ್ನ ಶಿಷ್ಯ ಗಂಗರಾಜು ಮ್ಯಾನೇಜರಾಗಿದ್ದರು. ಕಬಿನಿಗೆ ಅವಸರದಲ್ಲಿ ಹೊರಡುವ ನಮ್ಮ ತೀರ್ಮಾನ ತಿಳಿಸಿದಾಗ ಗಂಗರಾಜುರವರು `ಬನ್ನಿ ಮೇಡಂ, ವ್ಯವಸ್ಥೆ ಮಾಡುವಾ, ಖಂಡಿತಾ ಕಾಟೇಜ್ ಕೊಡಿಸುತ್ತೇನೆ’ ಎಂದರು. ರಾತ್ರಿ ಉರುಳಿಕೊಳ್ಳಲಿಕ್ಕೆ ಯಾವುದೋ ಒಂದು ನೆಲೆ ಎಂದು ನಿರ್ಧರಿಸಿ ಒಪ್ಪಿ, ಇಬ್ಬರೂ ಎರಡು ಸಫಾರಿ ಒಂದು ಹಾಲ್ಟಿನ ಕಬಿನಿ ದಿಗ್ವಿಜಯಕ್ಕೆ ಹೊರಟೆವು. ಅವಳಿಗೆ ಆನೆ ನೋಡುವ ಆಸೆ. ಅವಳ ಮಕ್ಕಳು ಅವಳಿಗೆ ಪ್ರೀತಿಯಿಂದ ಇಟ್ಟ ಅಡ್ಡಹೆಸರು ಆನೆ. ಏನು ಸಿಗದಿದ್ದರೂ ಪರವಾಗಿಲ್ಲ ಅವಳ ಆಸೆ ಪೂರೈಸಲು ಆನೆ ಸಿಗಲಿ ಎಂದು ಬೇಡಿಕೊಂಡೆ. ಕಾಟೇಜಿನ ಅಕ್ಕಪಕ್ಕ ಗೈಡ್ ಜೊತೆ ಸುತ್ತಾಡಿ ಪ್ರಾಣಿಪಕ್ಷಿ ನೋಡದಿದ್ದರೂ ಗಿಡಮರಗಳನ್ನು ಪರಿಚಯಿಸಿಕೊಂಡೆವು. ತಂಗಿಯೋ ಮೊದಲೇ ಬಾಟ್ನಿ ಲೆಕ್ಚರರ್, ಹಾಗಾಗಿ ಅವಳೂ ಉತ್ಸಾಹದಿಂದ ಹೆಸರು ಹೇಳಿಕೊಂಡು ಅಡ್ಡಾಡಿದೆವು. ಮಧ್ಯಾಹ್ನ ಜಂಗಲ್ ಲಾಡ್ಜಿನ ರುಚಿಕರ ಭೋಜನ ಮುಗಿಸಿ ಸಫಾರಿ ವ್ಯಾನ್ ಏರಿದೆವು. ಅವಳ ಕೈಗೊಂದು ಕ್ಯಾಮೆರಾ ಇತ್ತೆ, ನಾನೂ ಸಿದ್ಧವಾದೆ. ಸಫಾರಿಯ ಆರಂಭದಲ್ಲೇ ಮರವೇರಿ ಕುಳಿತಿದ್ದ ಚಿರತೆ ಕಾಣಿಸಿತು. ಅಂತೂ ಇಂತೂ ಚಿರತೆ ಕ್ಲಿಕ್ಕಿಸಿ ಕಾಡಿನಲ್ಲಿ ಸುತ್ತಾಡುವಾಗ ಹತ್ತಾರು ಕೆನ್ನಾಯಿಗಳು ವಿರಾಮವಾಗಿ ವಿಶ್ರಮಿಸುತ್ತಿದ್ದ ನೋಟವೂ ಲಭ್ಯವಾಗಿ ಕ್ಲಿಕ್ ಆದವು. 

ಮರುದಿನಕ್ಕೆ ಸಫಾರಿ ಹೋಗುತ್ತೀರೋ ಅಥವಾ ದೋಣಿ ಸವಾರಿ ಮಾಡುತ್ತೀರೋ ಎಂದು ಆಫರ್ ಮಾಡಿದರು. ದೋಣಿಯಲ್ಲಿ ಹೋದರೆ ಹಕ್ಕಿಗಳು ಸಿಗದಿದ್ದರೆ ಎಂಬ ಡೌಟು ಕಾಡಿ ಸಫಾರಿಯನ್ನೇ ಆರಿಸಿಕೊಂಡೆವು. ಆನೆಗಳೋ ಆನೆಗಳು. ಅವಳು ಸಂತೃಪ್ತಳು. ಅವಳ ಖುಷಿಯಿಂದ ನನಗೂ ಖುಷಿ. ಬೇಕಾದಷ್ಟು ಪಟಗಳನ್ನು ಇಬ್ಬರೂ ಹಿಡಿದುಕೊಂಡೆವು. ಹಾಗೆ ಸಫಾರಿ ಸವಾರಿ ಸಾಗುತ್ತಿದ್ದಂತೆ ಒಂದೆಡೆ ಜಿಂಕೆಯೊಂದರ ಕಣ್ಣು ತಪ್ಪಿಸುವ ಓಟ ಕಂಡು ನಮ್ಮ ಸಫಾರಿ ಡ್ರೈವರ್ ಗಾಡಿ ನಿಧಾನಿಸಿಸಿದ. ಆಳೆತ್ತರ ಬೆಳೆದಿದ್ದ ಪಾರ್ಥೇನಿಯಂ ನಡುವೆ ಹೊಂಚು ಹಾಕಿ ಕುಳಿತಿದ್ದ ಹೆಣ್ಣು ಹುಲಿಯೊಂದು ಮೆಲ್ಲಮೆಲ್ಲಗೆ ಮೇಲೆದ್ದಿತು. ಹುಲಿ ದರ್ಶನ ಆಯಿತು. ಆನೆ, ಹುಲಿ, ಚಿರತೆ ಎಲ್ಲವೂ ಒಂದೇ ಟೂರಿನಲ್ಲಿ ಕಾಣಸಿಕ್ಕವು. ಇದಕ್ಕಿಂತ ಬೇರೇನೂ ಬೇಕಾಗಿದೆ, ಇಷ್ಟೇನೆ ಸಾಕಾಗಿದೆ ಎಂದು ಹಾಡಿಕೊಳ್ಳಬಹುದಾಗಿತ್ತು. ಆದರೆ ಹೇಗೆ ಹಾಡಲಿ, ನಾನು ಹಕ್ಕಿ ಪ್ರೇಮಿ ಸ್ವಾಮಿ. ಹಕ್ಕಿ ಸಿಗದೇ ಇದ್ದರೆ ಎತ್ತಣ ಖುಷಿ. 

ಮಂಡ್ಯಕ್ಕೆ ಮರಳಿ ಬರುವ ದಾರಿಯಲ್ಲಿ ಎಲ್ಲಿ ಹಕ್ಕಿ ಕಾಣುತ್ತದೋ ಅಲ್ಲೆಲ್ಲಾ ಗಾಡಿಗೆ ಬ್ರೇಕು ಹಾಕುತ್ತಾ ಹೋಗುವುದೆಂದು ನಿರ್ಧರಿಸಿ ಹೊರಟೆವು. ಕಬಿನಿ ಹಿನ್ನೀರಿನ ದಾರಿ ಹುಡುಕಿಕೊಂಡು ತಲುಪಿದರೂ ನೀವೇನೋ ಬಂದಿರಿ, ಆದರೆ ನಾವು ಬರಲ್ಲ ಎಂದು ಅಲ್ಲಿಯೂ ಹಕ್ಕಿಗಳು ಗೈರುಹಾಜರಾಗಿದ್ದವು. ಒಂದು ಹಳ್ಳಿಯ ರಸ್ತೆ ಪಕ್ಕದಲ್ಲಿ ಹಸುಗಳಿಗೆ ನೀರು ಕುಡಿಯಲೊಂದು ತೊಟ್ಟಿ ಕಟ್ಟಿದ್ದರು. ಅದರ ಆಸುಪಾಸಿನ ಕೆಸರಿನಲ್ಲಿ ಕೆಲವು ಮುನಿಯ ಎದುರಾದವು. ಅದಾಗಲೇ ಸಾಕಷ್ಟು ಮುನಿಯಗಳ ಚಿತ್ರ ಸಿಕ್ಕಿದ್ದರೂ ಕಣ್ಣೆದುರಿಗೆ ಕಂಡಾಗ ಬಿಡುವುದುಂಟೆ. ಹಾದಿಯಲ್ಲಿ ಇಳಿದು ಒಂದು ಗಂಟೆ ರಂಗನತಿಟ್ಟಿಗೆ ಭೇಟಿ ಕೊಟ್ಟೆವು. ತಂಗಿಯನ್ನು ಬೋಟಿನಲ್ಲಿ ಕಳಿಸಿ ದಡದಲ್ಲಿ ಕುಳಿತು ಪೆಲಿಕಾನ್ ನೀರನ್ನು ಹೀರುವ ಷಾಟ್ ತೆಗೆಯಲು ಕಾಯ್ದರೂ ಅವು ನೀನೆಷ್ಟು ಕಾಯ್ದರೂ ನಾ ಬರಲ್ಲ ಎಂದು ಹಠ ಹಿಡಿದವರಂತೆ ಬರಲೇ ಇಲ್ಲ, ನಾನೂ ತೆಪ್ಪಗಾದೆ. ಅಲ್ಲಿಗೆ ಕಬಿನಿಯ ದ್ವಿತೀಯ ಯಾತ್ರೆ ಸಂಪನ್ನವಾಯಿತು.

ಮತ್ತೂ ಒಂದು ಕಬಿನಿ ಯಾತ್ರೆಗೆ ಅವಕಾಶ ಕೈಗೂಡಿ ಬಂತು. ಮೊಮ್ಮಗಳಿಗೆ ಪರೀಕ್ಷೆ ಮುಗಿದಿತ್ತು, ಮಹಾಬೋರ್ ಎಂದಳು. ನನಗೆ ಗೊತ್ತಿರುವುದು ಕಾಡಿಗೆ ಕರೆದುಕೊಂಡು ಹೋಗುವುದೊಂದೆ. ಅವಳು ಅಂದದ್ದೇ ತಡ, ಅಷ್ಟೇ ಸಾಕು ಎಂದು ಕಾಯುತ್ತಿದ್ದವಳಂತೆ ಕಬಿನಿ ಕಾಡಿಗೆ ಕರೆದುಕೊಂಡು ಹೊರಟೇಬಿಟ್ಟೆ. ಮ್ಯಾನೇಜರ್ ಗಂಗರಾಜು `ಬನ್ನಿ ಮೇಡಂ ಸಫಾರಿ ವ್ಯವಸ್ಥೆ ಮಾಡಿಕೊಡೋಣ’ ಎಂದು ಭರವಸೆ ಕೊಟ್ಟಿದ್ದರು. ಕಬಿನಿಯ ಹಿನ್ನೀರಿನ ಬಳಿ ನಿಲ್ಲಿಸಿ ನೀರು ನೋಡು ಚಿನ್ನು ಎಂದೆ, ಜೋಪಾನ ಎನ್ನುವ ಎಚ್ಚರಿಕೆಯೊಡನೆ. ಅವಳೂ ಎಚ್ಚರದಿಂದಲೇ ನೋಡಿದಳು, ಒಂದಡಿ ನೀರಿನಲ್ಲಿ ಹೋಗಿ ನೀರಾಟವಾಡಿ ನೂರು ಗ್ರಾಂ ಖುಷಿಯಾದಳು. ಆ ಚಿತ್ರಗಳು ಫ್ರೇಮಿನಲ್ಲಿ ಬಂದವು. 

ಕಬಿನಿ ಕಾಡಿನ ರೋಡಿನಲ್ಲಿ ಏನಾದರೂ ಕಂಡೀತೆ ಎಂದು ಅಷ್ಟು ದೂರ ಸುತ್ತಾಡಿದೆವು. ಬಿಳಿಯೆದೆಯ ಕಿಂಗಣ್ಣ ಮಾತ್ರ ಕಾಣಸಿಕ್ಕಿದ. ಸಫಾರಿ ಸಮಯ ಆಯಿತೆಂದು ಒಳಗೆ ಹೋದೆವು. ಸಫಾರಿ ಶುಲ್ಕ ಪಾವತಿಸಿ ಜೀಪಿಗೇರಿದವು, ಆಸೀನರಾದೆವು. ಒಂದೇ ಸಫಾರಿ. ದುಬಾರಿ ಶುಲ್ಕ ತೆತ್ತು ಜೀಪಿನಲ್ಲಿ ಕೊಂಡೊಯ್ದ ನನ್ನ ಕ್ಯಾಮೆರಾಗಳಿಗೆ ಸ್ವಲ್ಪವೇ ಜವಾಬ್ದಾರಿ. ಅವಳ ಕೈಗೂ ಒಂದು ಕ್ಯಾಮೆರಾ ಕೊಟ್ಟಿದ್ದೆ. ಅವಳೂ ಅದನ್ನು ಜೋಪಾನವಾಗಿ ಹಿಡಿದುಕೊಂಡಿದ್ದಳೆ ವಿನಾ ಬಳಸುವ ಕೆಲಸ ಮಾಡಲೇ ಇಲ್ಲ. ಕಬಿನಿಯ ದಾರಿಯಲ್ಲಿ ರಾಜನಂತೆ ನಡೆದು ಬರುತ್ತಿದ್ದ ಸಲಗವೊಂದು ದರ್ಶನ ನೀಡಿತ್ತು. ಜೊತೆಗಿಷ್ಟು ಜಿಂಕೆ, ಕಾಡೆಮ್ಮೆಗಳು. ಯಾವ ಹಕ್ಕಿಯೂ ಸಿಕ್ಕಲಿಲ್ಲ ಎನ್ನುವ ಬೇಸರಕ್ಕೆ ನಮ್ಮ ರಾಜ್ಯಪಕ್ಷಿ ನೀಲಕಂಠ, ಲೀಲಾ ಬಾ ನಾನಿದ್ದೇನೆ, ಬೇಸರ ಬೇಡ ಎಂದು ಮರದ ಕೊಂಬೆಯ ಮೇಲೆ ಕುಳಿತು ಆಹ್ವಾನಿಸಿ ಮುದ ನೀಡಿತು. ಕಷ್ಟಪಟ್ಟು ಕ್ಯಾಮೆರಾ ಮೇಲೆತ್ತಿ ಕ್ಲಿಕ್ ಮಾಡಿದ್ದು ಇಡೀ ಜೀಪಿನಲ್ಲಿ ನಾನೊಬ್ಬಳೆ. ಉಳಿದವರ ಮುಖದ ಮೇಲೆ ಇದಕ್ಕಾಗಿ ಇವಳು ಕಬಿನಿಯವರೆಗೆ ಬರಬೇಕಿತ್ತೆ ಎಂಬ ಪ್ರಶ್ನಾರ್ಥಕ ನೋಟಕ್ಕೆ ನಾನೂ ನೋಡದಿರುವಳಂತೆ ಕ್ಲಿಕ್ಕಿಸಿಕೊಂಡೆ.

ಮಸುಕು ಮುಸುಕುತ್ತಿದ್ದಂತೆ ಅಲ್ಲೊಂದೆಡೆ ಬ್ಲ್ಯಾಕ್ ಪ್ಯಾಂಥರ್ ಇದೆ ಎಂಬ ವರ್ತಮಾನ ಕಿವಿದೆರೆಗೆ ಬಿತ್ತು. ಗಾಡಿ ನಿಲ್ಲಿಸಿದರೆ ಕಾಣಬಹುದಾದ ಜಾಗದಲ್ಲಿ ಸಫಾರಿ ವ್ಯಾನನ್ನು ಬಿಚ್ಚಿ ತನಗೆ ಬೇಕಾದಂತೆ ಮಾರ್ಪಡಿಸಿ ದೊಡ್ಡ ಮೂವಿ ಕ್ಯಾಮೆರಾ ಹಿಡಿದವನೊಬ್ಬ ಕೂತಿದ್ದ ಕಾರಣ ನಮಗೆ ಅಷ್ಟಾಗಿ ಕಾಣಲಿಲ್ಲವಾದರೂ ಒಮ್ಮೆ ಎದ್ದು ಮೈಕೊಡವಿ ಕುಳಿತಾಗ ಕಪ್ಪುಚಿರತೆಯ ಕ್ಷಣಮಾತ್ರದ ದರ್ಶನ ಲಭ್ಯವಾಯಿತು. ಹೋ ಇದು ಅಂದರೆ ಈ ಕಪ್ಪುಚಿರತೆಯೂ ನನಗೆ ಕಾಣಿಸಿತು ಎಂಬುದೊಂದು ಲಿಸ್ಟಿಗೆ ಸೇರಿತು. ಫೋಟೋ ಹೇಗಿದೆ ಎಂದರೆ ಎಲ್ಲಿದೆ ಎಂದು ನಾನೇ ಹುಡುಕಬೇಕಾದ ಅವಸ್ಥೆಯಲ್ಲಿ ಕ್ಲಿಕ್ಕಾಗಿತ್ತು ಈ ಕರಿಚಿರತೆ. ಅಲ್ಲಿಗೆ ಮೊಮ್ಮಗಳು, ಅಜ್ಜಿಯ ಕಬಿನಿ ಸಫಾರಿ ಹೀಗೆ ಮುಕ್ತಾಯವಾಯಿತು. 

ಮತ್ತೂ ಮತ್ತೊಂದು ಸಲ ಕಬಿನಿ ಯಾತ್ರೆ ಮಾಡುವ ಅವಕಾಶ ಸಿಕ್ಕಿತು. ಆದರೆ ಈ ಸಲ ಜೊತೆಯಾದವಳು ತನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಇಂತದ್ದೊಂದು ಕಾಡಿನ ಟೂರಿಗೆ ಹೊರಟ ನನ್ನ ದೊಡ್ಡಮಗಳು ಡಾ.ತಾರಾ. ಅವಳು ಅವಳ ವೈದ್ಯ ವೃತ್ತಿ ಮತ್ತು ಕುಟುಂಬದ ಆಚೆಗೊಂದು ಲೋಕವಿದೆ ಎನ್ನುವುದರ ಪರಿವೆಯೇ ಇಲ್ಲದಷ್ಟು ತನ್ನದೇ ಆದ ವೃತ್ತದೊಳಗೆ ಇರಬಯಸಿದವಳು, ಯಾವುದನ್ನೂ ಎಂದೂ ಏನನ್ನೂ ಬಯಸದೇ ಇದ್ದ, ಇರುವ ಸಂಪೂರ್ಣ ತೃಪ್ತಳು ಅವಳು. ಹಾಗಾಗಿ ಮಗಳು ಮೊಮ್ಮಗಳ ಜೊತೆ ಕಬಿನಿಯ ಒಂದು ಸಫಾರಿಗೆ ಹೊರಟೆವು. ನಾವು ನಾಲ್ವರೂ ಒಂದೇ ಸಫಾರಿ ಗಾಡಿಗೆ ಹತ್ತಿದೆವು. ಆದರೆ ಇಲ್ಲಿ ಜಾಗ ಸಾಲಲ್ಲ ಎಂದು ನಮ್ಮ ಸಾರಥಿಯನ್ನು ಇಳಿಸಿ ಇನ್ನೊಂದು ಗಾಡಿಗೆ ಕಳಿಸಿದರು, ನಮ್ಮ ಗಾಡಿಗೆ ಬೇರೆ ಒಬ್ಬರನ್ನು ತಂದು ಕೂರಿಸಿದರು. ನಮ್ಮ ಸಾರಥಿಗೆ ಸಾಲದ ಜಾಗದಲ್ಲಿ ಬೇರೆ ಒಬ್ಬರು ಕುಳಿತುಕೊಳ್ಳಲು ಜಾಗ ಹೇಗೆ ಸಾಕಾಯಿತು ಎನ್ನುವ ಲೆಕ್ಕಾಚಾರ ಮಾತ್ರ ಅರ್ಥ ಆಯಿತು, ಆದರೆ ಅರ್ಥ ಆಗಲಿಲ್ಲ.

ನನ್ನ ಮಗಳಿಗೆ ಒಂದು ಕ್ಯಾಮೆರಾ ಕೊಟ್ಟೆ. ಮೊದಲ ಬಾರಿಗೆ dslr ಹಿಡಿದ ಅವಳಿಗೆ ಹೀಗೆ ಕ್ಲಿಕ್ಕಿಸು ಎಂದು ಕೆಲವು ಸೂಚನೆ ಕೊಟ್ಟೆ. ಅವಳೊ ಕಣ್ಣಿಗೆ ಕಂಡ ನವಿಲು, ಕಿಂಗ್‌ಫಿಷರ್, ಸೀಳುನಾಯಿಗೆ ಕ್ಯಾಮೆರಾ ತೋರಿಸಿದಳು. ಅವಂತೂ ಇವಳನ್ನು ನೋಡಿ ನೋಡಿಯೇ ಓಡಲಾರಂಭಿಸಿದ್ದರಿಂದ ಬಂದ ಅಷ್ಟೂ ಫೋಟೊ ಬ್ಲರ್ ಆಗಿದ್ದವು. ಆದರೆ ಅಷ್ಟನ್ನೂ ಜೋಪಾನವಾಗಿ ಒಂದು ಫೋಲ್ಡರಿನಲ್ಲಿ ಹಾಕಿಟ್ಟಿರುವೆ. ಎಂತಹ ಮಧುರ ನೆನಪುಗಳು, ಚಿತ್ರಗಳಾಗದಿದ್ದರೂ ಸರಿಯೆ. ಏಕೆಂದರೆ ದಿನಾ ಬೆಳಿಗ್ಗೆ ನಾನೆಲ್ಲಿಗೆ ಕ್ಯಾಮೆರಾ ಒಯ್ಯಲಿ “ಅಮ್ಮಾ ಜೋಪಾನ, ಜೋಪಾನ” ಎಂದು ಕಳಿಸುವ ಮಗಳಿವಳು. ಅವಳೆನ್ನ ಮಗಳು ಎಂದು ಹೇಳಿಕೊಳ್ಳುವುದೂ ಕೂಡಾ ತಪ್ಪು, ನನ್ನಮ್ಮನೇ ಅವಳು. ನಾನು ಅಮ್ಮ ಆಗಿದ್ದೆ ಎನ್ನುವುದನ್ನು ಮರೆಸಿ ತಾನೆ ನನ್ನನ್ನು ಅಮ್ಮನಿಗಿಂತಲೂ ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುವವಳು. ನಾನು ಇಷ್ಟು ಟೂರುಗಳನ್ನು ಮನೆಯ ಕಡೆಗೆ ಹೆಚ್ಚು ಚಿಂತಿಸದೆ ಸುತ್ತಿ ಬರುತ್ತಿದ್ದೆ ಎಂದರೆ ಅವಳು ನನ್ನ ಜವಾಬ್ದಾರಿಯನ್ನು ತಾನೇ ಹೊತ್ತು ವಯಸ್ಸಾದ ನಮ್ಮನ್ನು ತಾಯಿಯ ಅಂತಃಕರಣದಿಂದ ಪೊರೆಯುವವಳು. ಅಂತಹ ನನ್ನ ಮಗಳು ತೆಗೆದ ಚಿತ್ರ ಹೇಗಿದ್ದರೂ ಮಿಲಿಯನ್ ಡಾಲರ್ ವರ್ತ್ ನನ್ನ ಪಾಲಿಗೆ. 

ಇದರ ಜೊತೆಗೆ ಮತ್ತೊಂದು ಮಜಾ ಏನೆಂದರೆ ನಮ್ಮ ಸಾರಥಿಯನ್ನು ನಮ್ಮ ಗಾಡಿಯಿಂದ ಇಳಿಸಿ ಮತ್ತೊಂದು ಗಾಡಿಗೆ ಹತ್ತಿಸಿದ್ದರಲ್ಲ ಆ ಗಾಡಿಯವರಿಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ವ್ಯಾಘ್ರರಾಯನ ದರ್ಶನವಾಗಿದೆ. ಅವನ ಆಟ-ನೋಟಗಳನ್ನೆಲ್ಲ ಸೆರೆ ಹಿಡಿಯಲು ಇಡೀ ವ್ಯಾನಿನಲ್ಲಿ ಒಬ್ಬರ ಬಳಿಯು ಕ್ಯಾಮೆರಾ ಇರಲಿಲ್ಲ. ಎಲ್ಲರೂ ಮೊಬೈಲ್‌ಗಳಲ್ಲಿ ಕ್ಲಿಕ್ ಮಾಡಿದ್ದಾರೆ. ಇವನೂ ಕೂಡಾ ಮೊಬೈಲಿನಲ್ಲಿ ಫೋಟೊ ತೆಗೆದು ವಿಡಿಯೋ ಮಾಡಿಕೊಂಡು ಕೊನೆಗೆ ಅದರ ಹಿನ್ನೆಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಂದು ತೋರಿಸಿದ. ಉರ್ಕೊಬೇಕೋ ಬೇಡವೋ ಹೇಳಿ. ಇರಲಿ ಅವನಿಗಾದರೂ ಅದೃಷ್ಟ ಇತ್ತಲ್ಲ ಎಂದು ಸಮಾಧಾನಿಸಿಕೊಂಡೆ. ಯಾರಿಗೆ ಯಾವಾಗ ಹೇಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಬಲ್ಲವರಾರು. ಶಿವನೇ ನಿನ್ನಾಟ ಬಲ್ಲೋರು ಯಾರ್ಯಾರು, ಹರನೇ ನಿನ್ನಾಟ ಬಲ್ಲೋರು ಯಾರ್ಯಾರು…

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shreedevi

    ಸೀಳು ನಾಯಿಗಳ ಚಿತ್ರ ಚೆನ್ನಾಗಿದೆ ಮೇಡಂ. ಲೇಖನ ಕಣ್ಣ ಮುಂದೆ ಕಲ್ಪನೆಗಳನ್ನು ಮೂಡಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: