‘ಗಂಧದ ಗುಡಿ’ ಮುಗಿದ ಮೇಲೆ ನನ್ನಲ್ಲಿ ಮಡುಗಟ್ಟಿದ ಭಾವಗಳು…

ವಿಶ್ವಾಸ್ ಸೊಲಗಿ

ಚಿತ್ರ ಮುಗಿದ ಹಾಗೇ ಕಣ್ಣಂಚಲ್ಲಿ ಒಂದು ಹನಿ ನೀರು- ಖುಷಿಯದ್ದಾ? ದುಃಖದ್ದಾ? ಇನ್ನೂ ತಿಳಿದಿಲ್ಲ.

ಈ ಅನುಭವವನ್ನ ಶಬ್ದಗಳಲ್ಲಿ ಹೇಳೋದು ಹೇಗೆ? ಖುಷಿ, ಖೇದ, ಹೆಮ್ಮೆ, ಅಸಹಾಯಕತೆ, ಆಶ್ಚರ್ಯ ಇತ್ಯಾದಿ ಇತ್ಯಾದಿ ಎಲ್ಲವೂ ‘ಗಂಧದ ಗುಡಿ’ ಮುಗಿದ ಮೇಲೆ ನನ್ನಲ್ಲಿ ಮಡುಗಟ್ಟಿದ ಭಾವಗಳು.

**

ಈ ಚಿತ್ರವನ್ನ ನಾವೇಕೆ ನೋಡಬೇಕು ಅನ್ನೋದಕ್ಕೆ ಒಂದು ಪ್ರಮುಖ ಕಾರಣ ಇದು ಅಪ್ಪು ಅವರ‌ ಕಟ್ಟ ಕಡೆಯ ಚಿತ್ರ. ಆ ವಿಚಾರದಲ್ಲಿ ಇದು ನೋಡಲೇಬೇಕಾದ ಚಿತ್ರ. ಇದೊಂದನ್ನ ಒಂದು ಕ್ಷಣ ಮರೆತು, ಒಂದು ವರ್ಷ ಹಿಂದೆ‌ ಹೋಗಿ, ಅವರು ಇನ್ನೂ ಇದ್ದಾರೆ, ಒಂದೆಡೆ ಕಮರ್ಷಿಯಲ್ ಚಿತ್ರಗಳನ್ನೂ ಮಾಡುತ್ತಿದ್ದಾರೆ, ಜೊತೆಗೆ ಇದನ್ನೂ ಮಾಡಿದ್ದಾರೆ ಎಂದು ಭಾವಿಸೋಣ. ಆಗ ‘ಗಂಧದ ಗುಡಿ’ ಇನ್ನೊಂದು ರೀತಿಯಲ್ಲಿ ವಿಶೇಷವಾಗುತ್ತದೆ.

ಕಮರ್ಷಿಯಲ್ ಚಿತ್ರಗಳ ಜಗತ್ತಿನಲ್ಲಿ, ಜನರಿಗೆ ಇಷ್ಟವಾಗುವ‌ ಸೂತ್ರಸಿದ್ಧ‌ ಚಿತ್ರಗಳ ಓಟದಲ್ಲಿ ಮುಂಚೂಣಿಯಲ್ಲಿರುವ ನಟ, ಗಂಧದ ಗುಡಿಯಂತಹ ಯೋಜನೆಯನ್ನ ಕೈಗೆತ್ತಿಕೊಂಡದ್ದಕ್ಕೇ‌ ಮೊದಲ ಅಭಿನಂದನೆ‌ ಸಲ್ಲಬೇಕು.

ಈ ಚಿತ್ರ‌ ಒಂದು ಪರಿಕಲ್ಪನೆಯಾಗಿಯೇ ನಮ್ಮಲ್ಲಿ ಹಲವರಿಗೆ ಹೊಸತು. ಇಲ್ಲಿ ಪುನೀತ್ ಯಾವುದೇ ಪಾತ್ರವಾಗದೇ ಅವರಾಗಿಯೇ‌ ಇದ್ದಾರೆ. ಮಗುವಿನ ಮುಗ್ಧತೆಯೊಂದಿಗೆ ಕಾಡನ್ನ ಸುತ್ತಿದ್ದಾರೆ. ಒಂದಿಷ್ಟು ಸಂದೇಶಗಳನ್ನು ಕೊಡುತ್ತಾರೆ.  ತೆರೆಯ ಮೇಲೆ ಯಾವುದೇ ಪಾತ್ರವಾಗದೇ ಇದ್ದರೂ, ನಮ್ಮ ಪ್ರೀತಿಗೆ ಪಾತ್ರರಾಗುತ್ತಾರೆ.

ಒಂದು ನಿಮಿಷದ ರೀಲ್‌ಗಳನ್ನು ನೋಡಿ ತಾಳ್ಮೆಗೆಟ್ಟಿರುವ ನಮಗೆಲ್ಲ ಒಂದೂವರೆ ಗಂಟೆ, ಕತೆಯಿಲ್ಲದೇ ಕಾಡುಗಳನ್ನ ತೋರಿಸಿ ಹಿಡಿದಿಟ್ಟುಕೊಳ್ಳುವುದು ಮೇಲ್ನೋಟಕ್ಕೆ ಕಷ್ಟವೆನಿಸಬಹುದು. ಆದರೆ ನಿರ್ದೇಶಕ ಅಮೋಘವರ್ಷ ಮತ್ತವರ ತಂಡ ಅದನ್ನ ಸುಲಭ ಸಾಧ್ಯ ಎನ್ನುವಂತೆ‌ ಮಾಡಿದ್ದಾರೆ. ಅದ್ಭುತ ದೃಶ್ಯಗಳು, ಹಿನ್ನಲೆ ಸಂಗೀತ ಮತ್ತು ಸಂಕಲನ ಇದನ್ನು ಯಾವುದೇ ಕಮರ್ಷಿಯಲ್ ಚಿತ್ರಕ್ಕಿಂತಲೂ ಕಡಿಮೆ ಇಲ್ಲದಂತೆ ಮಾಡಿವೆ. ಇದರ ಜೊತೆಗೆ ಪುನೀತ್ ಮತ್ತು ಅಮೋಘವರ್ಷ ಅವರ ಹಾಸ್ಯಭರಿತ ಸಂಭಾಷಣೆ, ಗಂಭೀರ ಸಂದೇಶಗಳು,‌ ವನ್ಯ ಸಂಪತ್ತಿನ ಬಗೆಗಿನ ಮಾಹಿತಿ ಎಲ್ಲವೂ ಸೇರಿ ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. 

**

ಒಬ್ಬ ನಾಯಕ ನಟನಾಗಿ ಮುಂಚೂಣಿಯಲ್ಲಿದ್ದ ಅಪ್ಪು, ಇಂತಹದೊಂದು ಯೋಜನೆಗೆ ಕೈ ಹಾಕಿದ್ದರೆಂದರೆ, ಅವರು ಈ ಪಟ್ಟಗಳ ಓಟದಿಂದ ಎಷ್ಟು ಮುಂದಿದ್ದರು ಎಂಬುದು ಅರ್ಥವಾಗುತ್ತದೆ. ಅವರಿಗೆ ಯಾವುದೇ ಅಗತ್ಯತೆ ಇಲ್ಲದಿದ್ದರೂ, ನಮಗೆ ಒಂದಿಷ್ಟು ಒಳ್ಳೆಯ ಸಂದೇಶಗಳನ್ನ ನೀಡಲು, ಅದ್ಭುತ‌ ಅನುಭವವನ್ನ ಕೊಡಲು ಇಂತಹ ಚಿತ್ರವನ್ನ ಮಾಡಿದ್ದ ಅವರ ತಲೆಯಲ್ಲಿ ಇನ್ನೂ ಏನೇನೂ ಯೋಜನೆಗಳಿದ್ದವೋ? ಅವುಗಳನ್ನ ನೋಡದೇ ನಾವು ವಂಚಿತರಾಗಿದ್ದೇವೆ ಅಷ್ಟೇ. ನಷ್ಟ ನಮ್ಮದೇ.

**

ಅಪ್ಪು ಸರ್, ನೀವು ಕೊಟ್ಟ ಈ ಕೊನೆಯ ನೆನಪು ಮತ್ತು ನೀವಿನ್ನೂ ಇರಬೇಕಿತ್ತು ಅನ್ನೋ ಖೇದ ಇವೆರಡೂ ನಮ್ಮ ಮನದಲ್ಲಿ ಶಾಶ್ವತ.

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: