ನನ್ನೊಳು ನಾ…

ಮಲ್ಲಿಕಾ ಸಾರಾಭಾಯ್ ಸಂದರ್ಶನ

ಇತರರು ತಮ್ಮ ಜೀವನ, ಕೆಲಸದ ದಾಸ್ತಾನು ಪಟ್ಟಿ ಮಾಡಲು ಆತ್ಮಚರಿತ್ರೆಯ ಪ್ರಕಾರವನ್ನು ಬಳಸಿದರೆ; 69 ವರ್ಷದ ನೃತ್ಯಗಾತಿ, ಇತ್ತೀಚೆಗೆ ಬಿಡುಗಡೆಯಾದ ತನ್ನ ಆತ್ಮಚರಿತ್ರೆ In Free Fall: My Experiments withನಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡ ದೇಹ, ಯಾತನೆಗಳನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ನಮ್ಮನ್ನು ಆಳವಾದ ಚಿಂತನೆಗೆ ನೂಕುತ್ತಾಳೆ. ಕ್ಷೇಮ, ಯೋಗ, ಸಾವಧಾನದಿಂದ ಬದುಕಬೇಕು ಎಂದು ಪ್ರತಿಪಾದಿಸುವ ಅವಳಿಂದ ಕಲಿಯಬಹುದಾದದ್ದು ಬಹಳಷ್ಟಿದೆ. ಬಹುಶಃ ಹೋರಾಟಗಳನ್ನು ವಿವರಿಸುವ ಅವಳ ಪ್ರಾಮಾಣಿಕತೆಯನ್ನು ನಾವೆಲ್ಲರೂ ಅನುಕರಿಸಬೇಕು. ಮಲ್ಲಿಕಾ ಸಾರಾಭಾಯ್‌ಗೆ ಪ್ರಾಮಾಣಿಕತೆ ಒಂದು ಮನಸ್ಥಿತಿಯಲ್ಲ, ಅದು ತನ್ನ ಸಹಜ ಒಲವುಗಳತ್ತ ಹೇರಿಕೊಂಡ ನಿರ್ಬಂಧ.

ಯಾವುದೇ ರೀತಿಯ ಆತ್ಮಚರಿತ್ರೆಯು ಅದರ ಕರ್ತೃವಿನಿಂದ ಲಜ್ಜೆಗೆಟ್ಟ ಪ್ರಾಮಾಣಿಕತೆಯನ್ನು ಬಯಸುತ್ತದೆ. In Free Fall: My Experiments with ಓದಿದಾಗ ಅದು ಅಚ್ಚರಿಯ ಹಲವಾರು ವಿಷಯಗಳನ್ನ ಬಹಿರಂಗಪಡಿಸಲು ನಿಮ್ಮನ್ನು ಒತ್ತಾಯಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದಕ್ಕೆ ನಿಮ್ಮನ್ನು ಸಿದ್ಧಗೊಳಿದ್ದು ಯಾವ ಅಂಶ?

ಬದುಕು! ನಿಜ ಹೇಳಬೇಕು, ಪ್ರಾಮಾಣಿಕಳಾಗಿರಬೇಕು ಎನ್ನುವ ಬದ್ಧತೆ. ಏಟು ಬಿದ್ದಾಗಲೆಲ್ಲ ಗಟ್ಟಿಗೊಳ್ಳುವ ಬದಲಿಗೆ ಇನ್ನಷ್ಟು ಸೂಕ್ಷ್ಮಗೊಳ್ಳುತ್ತೇನೆ. ಕೋಮಲತೆ ದೌರ್ಬಲ್ಯವಲ್ಲ ಎಂದು ಹೆಣ್ಣುಮಕ್ಕಳನ್ನು, ಚಿಕ್ಕವರನ್ನು ಆ ದಾರಿಯಲ್ಲಿ ನಡೆಯಲು ಸಹಾಯ ಮಾಡಲು ಬಯಸುತ್ತೇನೆ. ಬದುಕಿನ ಸುಂದರ ಭಾಗವನ್ನು ಮಾತ್ರ ತೆರೆದಿಟ್ಟರೆ; ಅನುಮಾನವಿಲ್ಲ, ಜನರು ಬಾಲಿವುಡ್ ಪ್ಲಾಸ್ಟಿಕ್ ತಾರೆಯಂತೆ ನೋಡುತ್ತಾರೆ. ಪಾರದರ್ಶಕವಾಗಿರುವುದು ಜನರು ನಿಮ್ಮನ್ನು ನಂಬಲು ಅನುವು ಮಾಡಿಕೊಡುತ್ತದೆ. ಬದುಕಿನಲ್ಲಿ ನನಗೆ ನಂಬಿಕೆ ಬಹಳ ಮುಖ್ಯ.

ನಿಮ್ಮ ತಂದೆ, ವಿಕ್ರಮ್ ಸಾರಾಭಾಯ್, ಸ್ವತಂತ್ರ ಭಾರತದ ಅಗ್ರಗಣ್ಯ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರು. ನಿಮ್ಮ ತಾಯಿ ಮೃಣಾಲಿನಿ ಭರತನಾಟ್ಯ ನೃತ್ಯಗಾರ್ತಿ. ಅವರ ಪರಂಪರೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಪ್ಪ-ಅಮ್ಮ – ನಾವು ಅವರ ಮಕ್ಕಳು ಎಂದು ಹೇಳಲು ತುಂಬು ಹೆಮ್ಮೆಪಡುತ್ತಾರೆ ಎಂದು ಭಾವಿಸುತ್ತೇನೆ. ನಮ್ಮನ್ನು ಅವರ ಹಾದಿಯಲ್ಲಿ ಸಾಗುವಂತೆ, ಶ್ರೇಷ್ಠರಾಗುವಂತೆ, ಅನುಕರಿಸುವಂತೆ ಎಂದಿಗೂ ಒತ್ತಡ ಹೇರಲಿಲ್ಲ. ಅವರ ನೈತಿಕತೆಯೇ ನಮ್ಮನ್ನು ಧ್ರುವ ಮರೆಯದಂತೆ ನಡೆಸಿದ್ದು, ನಡೆಸುತ್ತಿರುವುದು. ಸಹೋದರ ಕಾರ್ತಿಕೇಯ, ನಾನು; ನಮ್ಮ-ನಮ್ಮ ಜೀವನ ನೌಕೆಯನ್ನು ಸಾಗಿಲು ನಾವೇ ಹುಟ್ಟು ಹಾಕಿದ್ದೇವೆ. ಇವತ್ತು ಕಾರ್ತಿಕೇಯ ಪರಿಸರ ಪ್ರೇಮಿ. ನಾನು ಕಲೆಯ ಪ್ರೇಮಿ. ಆದರೆ, ನಾವಿಬ್ಬರೂ ಯಾವುದಕ್ಕಾಗಿ ಕೆಲಸ ಮಾಡುತ್ತೇವೆ? ದೇಶಕ್ಕಾಗಿ, ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡುತ್ತೇವೆ. ಅಪ್ಪ ವಿಜ್ಞಾನದ ಮೂಲಕ, ಅಮ್ಮ ಕಲೆಗಳ ಮೂಲಕ ಸಾಧಿಸಲು ಪ್ರಯತ್ನಿಸಿದ ಅದೇ ವಿಷಯಗಳನ್ನು ನಾನು ಪುಸ್ತಕ, ಕಲಾ ಪ್ರದರ್ಶನಗಳ ಮೂಲಕ ಇನ್ನಷ್ಟು ನಿಖರವಾಗಿ ಸಾಧಿಸಲು ಪ್ರಯತ್ನಿಸುತ್ತೇನೆ. ಶಾಸ್ತ್ರೀಯ ನೃತ್ಯದ ಮೂಲಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಮಾತನಾಡಿದ ಮೊದಲ ಶಾಸ್ತ್ರೀಯ ನೃತ್ಯಗಾರ್ತಿ ಅಮ್ಮ. ಈ ಪ್ರಮುಖ ವಿಘಟನೆಯು ಭಾರತೀಯ ನೃತ್ಯಕ್ಕೆ ಹೊಸ ದಿಕ್ಕನ್ನು ನೀಡಿತು. ಅಮ್ಮ; ವರದಕ್ಷಿಣೆ ಸಾವು, ದಲಿತರ ಅಭದ್ರತೆ, ಅನ್ಯಾಯಗಳ ಬಗ್ಗೆ, ಪರಿಸರದ ಬಗ್ಗೆ ಮಾತನಾಡಿದರು. ವಿಚಿತ್ರವೆಂದರೆ, ಈಗ ನಾವಿಬ್ಬರೂ ಅದೇ ವಿಷಯದ ಬಗ್ಗೆ ಮಾತನಾಡುತ್ತೇವೆ. ಆಗಾಗ ಕಾರ್ತಿಕೇಯನ ಹತ್ತಿರ ಹೇಳುತ್ತಿರುತ್ತೇನೆ, ಅಪ್ಪ-ಅಮ್ಮ ಬಹುಶಃ ದೊಡ್ಡದಾಗಿ ನಗುತ್ತಿರಬಹುದು, “ಮಕ್ಕಳು ಅವರು ಬಯಸಿದ್ದನ್ನು ಮಾಡುತ್ತಾರೆ ಎಂದು ಭಾವಿಸಿದ್ರೆ, ಇವರು ನಮಗೆ ಬೇಕಾದುದನ್ನೇ ಮಾಡುತ್ತಿದ್ದಾರೆ!” ಎಂದು.

1949ರಲ್ಲಿ, ನಿಮ್ಮ ಪೋಷಕರು ನೃತ್ಯ, ಪ್ರದರ್ಶನ ಕಲೆಗಳಿಗಾಗಿ ‘ದರ್ಪಣ’ ಎಂಬ ಅಕಾಡೆಮಿಯನ್ನು ಸ್ಥಾಪಿಸಿದರು. ನಿಮ್ಮ ಬಾಲ್ಯ ಸ್ನೇಹಿತರಲ್ಲಿ ಅನೇಕ ತರಗತಿಗಳಿಗೆ ಸೇರಿದರು ಎಂದು ಬರೆಯುತ್ತೀರಿ. ಆ ರೀತಿಯ ಉತ್ಸಾಹ ಇನ್ನೂ ಉಳಿದುಕೊಂಡಿದೆಯೇ?

ಹೌದು, ಖಂಡಿತ ಇದೆ. 10 ವರ್ಷಗಳ ಹಿಂದೆ, ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಿದ್ದರಿಂದ ಇದರಲ್ಲಿ ಪ್ರಗತಿ ಆಗಿದೆ ಎಂದು ಭಾವಿಸುತ್ತೇನೆ. ಆಗಾಗ ಕಣ್ಣಿಗೆ ಬೀಳುತ್ತಿದ್ದ ದೃಶ್ಯ: ಅಮ್ಮಂದಿರು ತಮ್ಮ ಹೆಣ್ಣುಮಕ್ಕಳ ನೃತ್ಯ ತರಗತಿಗಳು ಮುಗಿಯುವುದನ್ನೇ ಕಾಯುತ್ತ, ಅವರೆಕಾಳು ಸುಲಿಯುತ್ತ ಗಾಸಿಪ್ ಮಾಡುತ್ತಿರುತ್ತಿದ್ದರು. ಒಂದು ದಿನ, ಆ ಯೋಚನೆ ಯಾಕೆ ಬಂತೋ ಗೊತ್ತಿಲ್ಲ. ಆ ಅಮ್ಮಂದಿರನ್ನೆಲ್ಲ ಕೇಳಿದೆ, “ನಿಮಗೆ ನೃತ್ಯ ಮಾಡಲು ಇಷ್ಟವೇ?” ಎಂದು. ಅವರು, “ಈ ವಯಸ್ಸಿನಲ್ಲಿ? ನಮ್ಮ ದೇಹವನ್ನು ನೋಡಿ,” ಎಂದರು. “ನೃತ್ಯಗಾತಿಯಾಗಲು ಬಯಸುತ್ತೀರಾ ಎಂದು ಕೇಳುತ್ತಿಲ್ಲ. ನಿಮಗೆ ನೃತ್ಯ ಮಾಡಲು ಇಷ್ಟವೇ?” ಎಂದು ಕೇಳುತ್ತಿದ್ದೇನೆ ಎಂದೆ. ಅವರಲ್ಲಿ ಹಲವರ ಕಣ್ಣುಗಳು ಇದ್ದಕ್ಕಿದ್ದಂತೆ ಮಿನುಗಿದ್ದನ್ನು ಗಮನಿಸಿದೆ. ಅಂದಿನಿಂದ ಅಮ್ಮಂದಿರಿಗಾಗಿ ನೃತ್ಯ ತರಗತಿಗಳನ್ನು ಪ್ರಾರಂಭಿಸಿದೆವು. ಕಳೆದ 12 ತಿಂಗಳುಗಳಲ್ಲಿ, 60 ವರ್ಷದ ಅಮ್ಮಂದಿರು ಪದವೀಧರರಾಗಿದ್ದಾರೆ. ಒಬ್ಬ ಅಮ್ಮ ತನ್ನ ಮಗನ ಮದುವೆಯ ಸಮಯದಲ್ಲಿ ಪದವಿ ಪಡೆದಿದ್ದಾಳೆ. ಅಮ್ಮ-ಮಗಳು ಒಂದೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇದು ನಿಜಕ್ಕೂ ಅದ್ಭುತ ಅನಿಸಿತು!

ಕುಟುಂಬಗಳು ಇದಕ್ಕೆ ಪ್ರತಿಕ್ರಿಯಿಸುವ ರೀತಿಯನ್ನೂ ಗಮನಿಸುತ್ತಿರುತ್ತೇನೆ. ಸ್ವಂತಕ್ಕಾಗಿ ಏನನ್ನಾದರೂ ಮಾಡುವ ಮಹಿಳೆಯರನ್ನು ಅವರು ಎಂದಿಗೂ ನೋಡಿಲ್ಲ. ಮಹಿಳೆಯರು ಕೂಡ ತಮ್ಮ ಇಡೀ ಜೀವನದಲ್ಲಿ ತಮಗೆ ಬೇಕಾದುದನ್ನು ಎಂದಿಗೂ ಮಾಡಿಲ್ಲ. ಅವರ ಗಂಡಂದಿರು ನನ್ನ ಬಳಿ ಬಂದು ಹೇಳುತ್ತಾರೆ, “ಹೊಸಬರೊಟ್ಟಿಗೆ ಜೀವನ ಸಾಗಿಸುತ್ತಿದ್ದೇನೆ ಅಂತ ಅನಿಸ್ತಿದೆ,” ಎಂದು. ನನಗನ್ನಿಸುವಂತೆ; ವಿದ್ಯಾವಂತ ಮೇಲ್ವರ್ಗದ ಭಾರತೀಯ ಮಹಿಳೆಯರು ಇಂದಿಗೂ ಗಂಡ-ಮನೆ-ಮಕ್ಕಳು ಎನ್ನುವ ಕರ್ತವ್ಯಕ್ಕೆ ಬದ್ಧರಾಗಿದ್ದಾರೆ. ನೃತ್ಯವು ಅವರಿಗೆ: ಅವರು ಹೇಳಲು ಬಯಸುವ, ಹೇಳಲು ಎಂದಿಗೂ ಅವಕಾಶ ಇರದ ಸಂಗತಿಯನ್ನು ಬಹಿರಂಗಪಡಿಸಲು ಅವಕಾಶ ನೀಡುತ್ತದೆ. ಇದು ನಿಜಕ್ಕೂ ಖುಷಿ ಕೊಡುವ ಸಂಗತಿ!

ನೃತ್ಯ ನನಗೆ ಒಂದೊಳ್ಳೆ ಚಿಕಿತ್ಸೆಯಂತೆ ಎಂದು ಹೇಳುತ್ತಿರಲ್ಲ, ಹೇಗೆ?
ಖಂಡಿತವಾಗಿ! ದುಃಖದಲ್ಲಿದ್ದಾಗಲೂ, ಸಂತೋಷವಾಗಿದ್ದಾಗಲೂ ನೃತ್ಯ ಮಾಡುತ್ತೇನೆ. ಭರತನಾಟ್ಯವಲ್ಲ, ಕೇವಲ ನೃತ್ಯ. ದೇಹ ನರ್ತಿಸುತ್ತದೆ. ನನ್ನ ಮಕ್ಕಳು ತುಂಬಾ ಚಿಕ್ಕವರಿದ್ದಾಗ, ಶುಭಾ ಮುದ್ಗಲ್ ಅವರ ‘ಮನ್ ಕೆ ಮಂಜೀರೆ’ ಆಗಷ್ಟೇ ಬಂದಿತ್ತು. ಬೇಸರದಲ್ಲಿದ್ದೇನೆ, ಒತ್ತಡಕ್ಕೊಳಗಾಗಿದ್ದೇನೆ ಎಂದು ಗೊತ್ತಾದ ತಕ್ಷಣ ಅವರಲ್ಲಿ ಒಬ್ಬರು ಓಡಿ ಹೋಗಿ ‘ಮನ್ ಕೆ ಮಂಜೀರೆ’ ಪ್ಲೇ ಮಾಡುತ್ತಿದ್ದರು. ಹಾಡು ತುಂಬಾ ಇಷ್ಟವಾಯಿತು ಎಂದರೆ ಮೂಡ್ ಹೇಗಿದ್ದರೂ ಎದ್ದು ಕುಣಿಯುತ್ತಿದ್ದೆ. ಆಕ್ಸಿಟೋಸಿನ್, ಸಹಜವಾಗಿ ಮನಸು ಸ್ಥಿಮಿತಕ್ಕೆ ಬಂದು, ತಲೆಯ ವಜ್ಜೆ ಕಡಿಮೆಯಾಗುತ್ತಿತ್ತು. ಸಂಗೀತ-ನೃತ್ಯ ಈಗಲೂ ಚಿಕಿತ್ಸೆಯ ಹಾಗೇ ಕೆಲಸ ಮಾಡುತ್ತವೆ.

ಪೀಟರ್ ಬ್ರೂಕ್ ನಿರ್ಮಾಣದ ‘ಮಹಾಭಾರತ’ ನಾಟಕದಲ್ಲಿ ಐದು ವರ್ಷಗಳ ಕಾಲ ದ್ರೌಪದಿಯ ಪಾತ್ರವನ್ನು ನಿರ್ವಹಿಸಿದ ನಂತರ, ಮಹಾಕಾವ್ಯವು ಭಾರತಕ್ಕೆ, ಭಾರತೀಯ ಮಹಿಳೆಯರಿಗೆ ಎಷ್ಟು ಪ್ರಸ್ತುತವಾಗಿದೆ ಎಂದು ಭಾವಿಸುತ್ತೀರಿ?
‘ಮಹಾಭಾರತ’ವನ್ನು ದಾಯಾದಿಗಳ ಹತ್ಯೆಯ ಕಥೆಯಾಗಿ ವ್ಯಾಖ್ಯಾನಿಸದಿದ್ದಲ್ಲಿ, ಅದರ ದೊಡ್ಡ ತಾತ್ವಿಕ ಪ್ರಶ್ನೆಗಳಿಂದಾಗಿ ಹಾಗೂ ಹೆಣ್ಣನ್ನು ಹೆಣ್ಣಾಗಿಸುವ ಸ್ತ್ರೀವಾದ, ಹೆಣ್ತನಗಳಿಂದಾಗಿ ಅದು ಎಲ್ಲ ಕಾಲಕ್ಕೂ ಪ್ರಸ್ತುತವೇ. ಉಳಿದಂತೆ: ಇಂದಿನ ದುರ್ಯೋಧನ, ಯುಧಿಷ್ಠರರು ಅದೇ ತಪ್ಪುಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ‘ಮಹಾಭಾರತವು’ ಎಲ್ಲಕಾಲಕ್ಕೂ; ಕೊನೆಯಿಲ್ಲದ, ಸಾರ್ವಕಾಲಿಕ ಸತ್ಯವಾದ ಮನೋಬಲದ ಹೋರಾಟವನ್ನು ಚಿತ್ರಿಸುತ್ತದೆ ಎಂದು ಭಾವಿಸುತ್ತೇನೆ.

ಪೀಟರ್ ಬ್ರೂಕ್ ಮೊನ್ನೆ ಜುಲೈನಲ್ಲಿ ನಿಧನರಾದರು…
ಈ ಬಗ್ಗೆ ಅನೇಕ obituaries ಬರೆದಿದ್ದೇನೆ. ದ್ರೌಪದಿ – ಜೀವನದಲ್ಲಿ ಒಂದು ಪ್ರಮುಖ ತಿರುವು. ಅಮ್ಮ ನನ್ನನ್ನು ನೃತ್ಯಗಾರ್ತಿಯನ್ನಾಗಿ ಮಾಡಿದ್ದರೆ, ಈಗಿನ ನನ್ನನ್ನು ಸೃಷ್ಟಿಸಿದ ಸೃಷ್ಟಿಕರ್ತ ಪೀಟರ್ – ಅವಳು ದಡ್ಡಿಯಂತೆ ಕಾಣುತ್ತಿದ್ದಳೋ, ಮೂರ್ಖಳಂತೆ ವರ್ತಿಸುತ್ತಿದ್ದಾಳೋ ಎಂಬುದರ ಬಗ್ಗೆ ಹೆಚ್ಚು ಗಮನ ನೀಡದೇ, ನಿನ್ನೊಳು ನೀ ಇರು, ನಿನ್ನಂಥಾಗು ಎಂದು; ಆ ಮೂಲಕವೇ ನನ್ನನ್ನು ನಾನು ಸೃಷ್ಟಿಸಿಕೊಳ್ಳಲು ಬಿಟ್ಟ ಛಾತಿವಂತ.

ಬೆಳೆಯುತ್ತಿರುವಾಗ, ಇಂಟರ್ನೆಟ್ ಇಲ್ಲದ ಆ ವಯಸ್ಸಿನಲ್ಲಿ ‘anorexia & bulimia’ದೊಂದಿಗೆ ಹೋರಾಡಿದ್ದೀರಿ. ಅರಿವು ವಿಷಯಗಳನ್ನು ಸರಳಗೊಳಿಸುತ್ತದೆಯೇ, ಹೆಚ್ಚು ಕಷ್ಟಕರವಾಗಿಸುತ್ತದೆಯೇ? ಕಾಯಿಲೆ ಯಾವುದು ಎಂದು ನಿರ್ಣಯಿಸುವುದರಿಂದ ಸಹಾಯ ಆಗತ್ತಾ?
ಇವತ್ತು, ‘anorexia & bulimia’ಗಳನ್ನು ಮಾನಸಿಕ ಕಾಯಿಲೆಗಳು ಎಂದು ಕರೆಯುತ್ತಾರೆ. ನಾನು ಇವುಗಳೊಂದಿಗೆ ಗುದ್ದಾಡುವ ಕಾಲದಲ್ಲಿ ಈ ಪದಗಳು ಅಸ್ತಿತ್ವದಲ್ಲೇ ಇರಲಿಲ್ಲ. ಅವುಗಳಿಂದ ನಾನೇ ಹೊರಬರಬೇಕಾಗಿತ್ತು. ಇಲ್ಲ, ರೋಗ ನಿರ್ಣಯವು ಯಾವುದೇ ಸಹಾಯ ಮಾಡುತ್ತದೆ ಎಂದು ಅನಿಸುವುದಿಲ್ಲ.

ಒಮ್ಮೆ ನಿಮ್ಮನ್ನೇ ಕೇಳಿಕೊಳ್ಳುತ್ತೀರಿ, ನಾನು ದಪ್ಪಗಿದ್ದು ಬದುಕಲು ಬಯಸುತ್ತೀನೋ ಇಲ್ಲ ತೆಳ್ಳಗಾಗಿ ಸಾಯಲು ಬಯಸುತ್ತೀನೋ? ಎಂದು. ಇದೇ ವಿಷಯವನ್ನು ನಿರಂತರವಾಗಿ ತಮ್ಮನ್ನು ತಾವು ಕೇಳಿಕೊಳ್ಳುವ ಜನರಿಗೆ ನಿಮ್ಮ ಸಲಹೆ ಏನು?
ಇದೊಂದು ಮುಠ್ಠಾಳ ಪ್ರಶ್ನೆ. ದೇಹದ ಸಾಧ್ಯತೆಗಳ ಸಂಪೂರ್ಣ ತಿಳಿವಳಿಕೆ ಇಲ್ಲದೇ ಕೇಳಿಕೊಂಡಿದ್ದು. ನನ್ನನ್ನು ಕಂಡುಕೊಳ್ಳಲು ನನ್ನದೇ ಸಮಯ ತೆಗೆದುಕೊಂಡೆ, ಅದೊಂಥರ ಮಜವಾಗಿತ್ತು. ಆದರೆ, ಈ ಪ್ರಶ್ನೆ ಮಾತ್ರ ಮೂರ್ಖತನದ್ದು. ನಮ್ಮನ್ನು ನಾವು ಅಂದವಾಗಿ ಕಾಣುವಂತೆ ಪ್ರಸ್ತುತ ಪಡಿಸಿಕೊಳ್ಳಬೇಕು, ಸೌಂದರ್ಯಶಾಸ್ತ್ರದ ಕುರಿತಾದ ಪ್ರಶ್ನೆಯ ಹೊರತಾಗಿ, ಯಾರೇ ಆಗಲಿ obesity & eating disorders ಹಿಂದಿನ ವೈದ್ಯಕೀಯ ಕಾರಣಗಳನ್ನು ತಿಳಿದಿರಬೇಕು. ಫಿಟ್ ಆಗಿರುವುದಕ್ಕೆ ದೇಹವನ್ನು ದಂಡಿಸುವುದಕ್ಕೆ ಹೋಲಿಸಿದರೆ ಬೊಜ್ಜು ನಮ್ಮ ಅಂಗಾಗಗಳಿಗೆ ಅದಕ್ಕಿಂತ ಕಠಿಣವಾದ ಕೆಲಸವನ್ನು ಮಾಡುವಂತೆ ಮಾಡುತ್ತದೆ ಎಂದು ಅರಿಯುವುದು ಸರಿಯಾದ ತಿಳಿವಳಿಕೆ.

ನಿಮ್ಮ ಪುಸ್ತಕವು ಅಲೋಪತಿ ಔಷಧದ ಮಿತಿಗಳ ಬಗ್ಗೆ ಸಹ ಮಾತನಾಡುತ್ತದೆ. ಹಿಂತಿರುಗಿ ನೋಡಿದಾಗ, ಹೆಚ್ಚು ಸಮಗ್ರವಾದ ಪರ್ಯಾಯ ದಾರಿಗೆ ನೀವು ತೆರೆದುಕೊಂಡ ಯಾವುದಾದರೂ ಘಟನೆ ಇದೆಯೇ?
11 ವರ್ಷದವಳಿದ್ದಾಗ ಮೈಗ್ರೇನ್ ವಿಪರೀತವಾಗಿ ಕಾಡುತ್ತಿತ್ತು. ತುಂಬಾ ನೋವು ಅನುಭವಿಸುತ್ತಿದ್ದೆ. ಅಜ್ಜ ಅಂಬಾಲಾಲ್ ಸಾರಾಭಾಯ್‌ಗೆ, ಜವಳಿ ವ್ಯಾಪಾರದಲ್ಲಿ ಚಾಲ್ತಿಯಲ್ಲಿದ್ದ ಸೋದರ ಸಂಬಂಧಿಯೊಬ್ಬರಿದ್ದರು. ಅವರು ಹೋಮಿಯೋಪತಿ ಮೆಡಿಸಿನ್ ಕೂಡ ಮಾಡುತ್ತಿದ್ದರು. ಈ ತಲೆನೋವಿನಿಂದ ಒದ್ದಾಡುವುದು ನೋಡಲಾರದೆ ಅವರು ಔಷಧ ಕೊಟ್ಟರು, ಮೈಗ್ರೇನ್ ಕಣ್ಮರೆಯಾಯಿತು. ಹಾಗಾಗಿ ಪರ್ಯಾಯ ವೈದ್ಯಕೀಯ ಪದ್ಧತಿ ಎಲ್ಲೋ ಒಂದು ಕಡೆ ಮನಸ್ಸಿನಲ್ಲಿ ಅಚ್ಚೊತ್ತಿರಬೇಕು. ಇನ್ನೊಂದು ವಿಷಯವೆಂದರೆ ಬದುಕು ಸಾಗಿ ಬಂದ ದಾರಿಯುದ್ದಕ್ಕೂ, ಮೆದುಳು ಏನು ಮಾಡಬಹುದು? ದೇಹ, ಮೆದುಳು ಪರಸ್ಪರ ಏನು ಮಾಡಬಹುದು ಎಂಬ ಸಾಧ್ಯತೆಗಳ ಬಗ್ಗೆ ತುಂಬಾ ಯೋಚಿಸಿದ್ದೇನೆ. ಅದರ ಬಗ್ಗೆ ತುಂಬಾ ಆಸಕ್ತಿ. ಅಲ್ಲದೆ, ‘ಪರ್ಯಾಯ’ ಎಂಬ ಪದವೇ ಕುತೂಹಲವನ್ನು ಹೆಚ್ಚಿಸುತ್ತದೆ. ಬದುಕೊಂದನ್ನು ಬಿಟ್ಟು ಬೇರೆ ಎಲ್ಲದಕ್ಕೂ ಪರ್ಯಾಯ ಇದೆ!

ನಮ್ಮ ಶರೀರವನ್ನು ಒಂದು ದೇಗುಲವೆಂದು ಪರಿಭಾವಿಸುವುದಾದರೆ ಬಹಳಷ್ಟು ಅನುಕೂಲಗಳೇನೋ ಉಂಟು. ಎಚ್ಚರ ತಪ್ಪಿದರೆ ಇದೇ ಒಂದು ಗೀಳಾಗುವ ಅಥವಾ ಅತಿಯಾಗುವ ಅಪಾಯವೂ ಉಂಟಲ್ಲವೇ?
ದೇಹವೆಂದರೆ ಬರೇ ಹೊರಗಿನ‌ ಭೌತಿಕ ಶರೀರವಲ್ಲ. ಹೊರಗಿನ ದೇಹದ ಬಗ್ಗೆ ಏನೋ ಮೋಹ ಬೆಳೆಸಿಕೊಳ್ಳಬಹುದು. ಆದರೆ, ಶರೀರದ್ದೇ ಒಂದು ಬಿಡಿಭಾಗವಾಗಿರುವ ಕಿಡ್ನಿಯ ಬಗ್ಗೆ ಹೇಗೆ ಮೋಹ ಬೆಳೆಸಿಕೊಳ್ಳುವುದು? ನಮಗೆ ಹೊರಗೆ ಕಾಣುವುದಷ್ಟೇ ಶರೀರವಲ್ಲ, ಅದಕ್ಕಿಂತ ಮಿಗಿಲಾದುದು. ನಮ್ಮ ಚಂದಕ್ಕೇನೋ ಮೋಹಪರವಶರಾಗಬಹುದು, ಆದರೆ, ನಮ್ಮೊಳಗೆ ಹರಿಯುವ ನೆತ್ತರಿಗೆ?

ದುರ್ಗುಣ, ಸದ್ಗುಣಗಳ ನೀತಿಶಾಸ್ತ್ರದ ಮೂಲಕ ಚಟ, ವ್ಯಸನವನ್ನು ನೋಡಲು ಇದು ಸಹಾಯ ಮಾಡುತ್ತದೆಯೇ?
ದಿನದ ಕೊನೆಗೆ ಒಂದು ಪೆಗ್ ಕುಡಿಯುವುದು ನಿಮಗೆ ಖುಷಿ ಕೊಟ್ಟರೆ ಅದು ಒಳ್ಳೆಯದು. ಆದರೆ, ನಾಲ್ಕನೇ ಅಥವಾ ಐದನೆಯದಕ್ಕಾಗಿ ಹಂಬಲಿಸುವುದು ಮನಸ್ಸು-ದೇಹಕ್ಕೆ ಒಳ್ಳೆಯದಲ್ಲ. ಅದೇ ರೀತಿ ಒಂದು ರಸಗುಲ್ಲ ಒಳ್ಳೆಯದು. 20ನೆಯದ್ದೂ ತಿನ್ನಬೇಕು ಅನಿಸಿದರೆ ಏನೋ ಎಲ್ಲೋ ಹಳಿ ತಪ್ಪಿದೆ ಎಂದರ್ಥ. ಇದು ನೀತಿಶಾಸ್ತ್ರದ ವಿಷಯವಲ್ಲ. ಸಮಾಜವು ಇನ್ನೂ ಅನೈತಿಕವೆಂದು ಭಾವಿಸುವ ನೂರಾರು ಕೆಲಸಗಳನ್ನು ಮಾಡಿದ್ದೇನೆ, ಮುಂದೆಯೂ ಮಾಡುತ್ತಿರುತ್ತೇನೆ. ಏಕೆಂದರೆ ಯಾರಿಗಾಗಿ ಈ ಕೆಲಸ ಮಾಡುತ್ತಿರುವೆನೋ ಆ ಜನರೊಂದಿಗೆ, ನನ್ನೊಳಗೆ ನಾ ಪ್ರಾಮಾಣಿಕವಾಗಿದ್ದೇನೆ. ನೈತಿಕತೆಯ ಬಗ್ಗೆ ಮಾತನಾಡುವ ಜನರು ಸಾಮಾನ್ಯವಾಗಿ ಮಹಾನ್ ಸುಳ್ಳುಗಾರರಾಗಿರುವುದರಿಂದ, ಅವರಂಥಾಗಲು ಇಷ್ಟವಿಲ್ಲ.

ನೀವು ಯೋಗದ ಬಗ್ಗೆ ಹೆಚ್ಚು ಮನವೊಲಿಸುವ ರೀತಿಯಲ್ಲಿ ಬರೆಯುತ್ತೀರಿ. ಇದನ್ನು ಕಟ್ಟುನಿಟ್ಟಾಗಿ ದೈಹಿಕ ವ್ಯಾಯಾಮ ಎಂದು ಭಾವಿಸುವವರು ಅದರ ಇತರ ಕೆಲವು ಪ್ರಯೋಜನಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಇದು ಅಧ್ಯಾತ್ಮಿಕವಾಗಿ ಯೋಚಿಸಲು ಸಹಾಯ ಮಾಡುತ್ತದೆಯೇ?
ಹೌದು, ಖಂಡಿತ. ನಿಮಗೆ ಗೊತ್ತಾ, ನಾನು ಯಾವಾಗಲೂ ಹೇಳುತ್ತಿರುತ್ತೇನೆ ಭರತನಾಟ್ಯವಿದೆ ಮತ್ತು ತರತ್-ನಾಟ್ಯಂ ಇದೆ ಎಂದು. ಗುಜರಾತಿಯಲ್ಲಿ, ತರತ್ ಎಂದರೆ ‘ತುರಂತ್ – ತತ್‌ಕ್ಷಣ’ ಎಂದರ್ಥ. ಮೂರು ತಿಂಗಳಲ್ಲಿ ಸರಿಯಾದ ಬೆಲೆಗೆ ನೃತ್ಯ ಪ್ರಕಾರವನ್ನು ಕಲಿಸುವ ಭರತನಾಟ್ಯ ಶಿಕ್ಷಕರಿದ್ದಾರೆ. ಯೋಗವೂ ಹಾಗೆಯೇ. ನಿನ್ನೆಯಷ್ಟೇ 21 ದಿನಗಳ ಕೋರ್ಸ್ ಮುಗಿಸಿ ಯೋಗ ಶಿಕ್ಷಕರಾದವರೂ ಇದ್ದಾರೆ. ಈಗ ಲೋಕಾರೂಢಿಯಲ್ಲಿ ನಡೆಯುತ್ತಿರುವುದು ಇದೇ. ಇಂತಹವರಿಂದ ಮತ್ತು ಆನ್‌ಲೈನ್‌ನಲ್ಲಿ ಕಲಿಯುವುದಕ್ಕೂ, ಮನಸ್ಸು-ದೇಹವನ್ನು ಏಕತ್ರಗೊಳಿಸುವಂಥ ಶಿಕ್ಷಣ ನೀಡುವ ಶಿಕ್ಷಕರಿಂದ ಕಲಿಯುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮತ್ತೆ, ಇವರೆಡರ ನಡುವಿನ ಕಂದಕ ಕೂಡ ತುಂಬಾ ದೊಡ್ಡದಿದೆ.

ಆಕ್ಟಿವಿಸ್ಟ್ ಆಗಿ, ನೀವು ಸರ್ಕಾರಕ್ಕೆ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸವಾಲು ಹಾಕಿದ್ದೀರಿ. ಹೀಗೆ ದೈತ್ಯರ ಮೇಲೆ ಕಲ್ಲು ಎಸೆಯುವ ಎದೆಗಾರಿಕೆ, ಧೈರ್ಯ ನಿಮಗೆ ಬಂದಿದ್ದು ಹೇಗೆ?
ಅದು ಹಾಗೆ ಸುಮ್ಮನೇ ಬರುವುದಿಲ್ಲ. ಆಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲಾಗದ ಕಾರಣಕ್ಕೆ ಬರುತ್ತದೆ. ಇದು ಯಾಕೆ ಬಂದಿದೆ ಎಂದರೆ ನನಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ದನಿ ಎತ್ತುವ ಅವಕಾಶ ಇದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ನನ್ನಷ್ಟಕ್ಕೇ ಹೇಳಿಕೊಳ್ಳುವುದರಿಂದ ಬಂದಿದೆ. ಅಸ್ತಿತ್ವವನ್ನು ಹತ್ತಿಕ್ಕುವ ಅನ್ಯಾಯದ ಬಗ್ಗೆ ಬಗ್ಗೆ ಏನಾದರೂ ಮಾಡಲೇಬೇಕು ಎನಿಸಿದಾಗ ಬರುತ್ತದೆ. ಹಾಗಂತ ಸುಖಾಸುಮ್ಮನೆ ಹೋರಾಟದ ಕಳಹೆ ಊದಲು ಸಾಧ್ಯವಿಲ್ಲ, ಹಾಗೆ ಮಾಡಿಲ್ಲ ಕೂಡ. ಇನ್ನು ಉಸಿರು ಬಿಗಿಹಿಡಿಯಲು ಸಾಧ್ಯವಿಲ್ಲ ಎನಿಸಿದಾಗಲೆಲ್ಲ ದನಿ ಎತ್ತಿದ್ದೇನೆ.

ಕೊನೆಯದಾಗಿ, ನೀವು ಯಾವಾಗಲೂ ಅಹಿಂಸೆಯ ಆದರ್ಶಗಳಿಂದ ಪ್ರಭಾವಿತರಾಗಿದ್ದೀರಿ. ಮಲ್ಲಿಕಾ ಸಾರಾಭಾಯ್ ಎಂಬ ನಾಗರಿಕಳನ್ನು, ವ್ಯಕ್ತಿಯನ್ನು ರೂಪಿಸುವಲ್ಲಿ ಅಹಿಂಸೆ ವಹಿಸಿದ ಪಾತ್ರವೇನು?
ಒಂದು ಕಡೆ ಗಾಂಧೀಜಿಯ ತತ್ವಶಾಸ್ತ್ರ, ಮತ್ತೊಂದೆಡೆ ಠಾಗೋರರ – ‘ಎಲ್ಲಿ ಭಯವಿಲ್ಲದ ಮನಸ್ಸು ಮುಕ್ತವಾಗಿ ಹಾರುತ್ತಿದೆಯೋ, ಅಲ್ಲಿ ತಲೆ ಎತ್ತಿ ಬಾಳುವ ವಿಶ್ವಾಸವಿರುತ್ತದೆ…’ ಇವೆರಡೂ ನನ್ನ ವಂಶವಾಹಿನಿಯಲ್ಲೇ ಇವೆ. ವ್ಯರ್ಥ ಮಾಡುವುದನ್ನು ದ್ವೇಷಿಸುತ್ತೇನೆ- ಅದು ಸೋರುತ್ತಿರುವ ನಲ್ಲಿಯಾಗಿರಬಹುದು, ಅನ್ನವನ್ನು ಚೆಲ್ಲುವುದಿರಬಹುದು. ಸಾಧ್ಯವಿರುವುದೆಲ್ಲವನ್ನು ಮರುಬಳಕೆ ಮಾಡುತ್ತೇನೆ. ನಾನು ಬೆಳೆದು ಬಂದಿದ್ದು ಕೂಡ ಏನನ್ನೂ ಪೋಲು ಮಾಡದ ಕುಟುಂಬದಿಂದ. ಆದ್ದರಿಂದ ಸಂಯಮ, ಜೈನ ಅಥವಾ ಗಾಂಧಿವಾದ ಬದುಕಿನ ಭಾಗವಾಗಿದೆ. ಅದಲ್ಲದೆ, ಉಲ್ಲಂಘಿಸಲು ಬಯಸದಿದ್ದರೆ, ಹಿಂಸಾತ್ಮಕವಾಗಿರುವ ಅವಶ್ಯಕತೆ ಕೂಡ ಇಲ್ಲ. ತೊಂದರೆ ಏನೆಂದರೆ, ನನ್ನ ನಾಲಿಗೆ ಕತ್ತಿಗಿಂತ ಹರಿತ. ಮನಸಿಗಿಂತ ವೇಗವಾಗಿ ಚಲಿಸುತ್ತದೆ. ಇದರಿಂದ ಬಹಳಷ್ಟು ಜನರನ್ನು ನೋಯಿಸಿದ್ದೇನೆ. ಅನೇಕ ಸಂದರ್ಭಗಳಲ್ಲಿ ಹೋಗಿ, ಕ್ಷಮೆಯಾಚಿಸಿದ್ದೇನೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವವರಿಗೆ ಗೊತ್ತಿದೆ, ನಾನು ಮಾತಾಡಿದ 30 ಸೆಕೆಂಡಿನೊಳಗೆ ಆ ಕುರಿತು ಮನಸಲ್ಲಿ ಏನೂ ಉಳಿದಿರುವುದಿಲ್ಲ ಎಂದು. ಆದರೆ, ಕೆಲವರು ನನ್ನ ನಾಲಿಗೆಯಿಂದಾಗಿಯೇ ದೂರವಾಗಿದ್ದಾರೆ. ಏನೂ ಮಾಡಕ್ಕಾಗಲ್ಲ, ನಾನು ಆಗಿರುವುದೇ ಇದೆಲ್ಲ ಸೇರಿ. ಇದೇ ನನ್ನನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಿಪಿಸುವುದು.

ಕೂಚಿಪೂಡಿ, ಭರತನಾಟ್ಯದಿಂದ; ನಟನೆ, ಆಕ್ಟಿವಿಸಂವರೆಗೆ, ಮಲ್ಲಿಕಾ ಸಾರಾಭಾಯ್ ತಮ್ಮ ಪ್ರಸಿದ್ಧ ಮತ್ತು ಆಸಕ್ತಿದಾಯಕ ಘಟನೆಗಳಿಂದ ತುಂಬಿದ ವೃತ್ತಿಜೀವನದಲ್ಲಿ ಮಾಡಿದ್ದು ಬಹಳ. ಇದು, ಇತ್ತೀಚೆಗೆ ಬಿಡುಗಡೆಯಾದ ಅವರ ಆತ್ಮಚರಿತ್ರೆಯ ಬಗ್ಗೆ, ವೈಯಕ್ತಿಕ-ವೃತ್ತಿಪರ ಮೈಲಿಗಲ್ಲುಗಳು ಕುರಿತು ‘ರೀಡರ್ಸ್ ಡೈಜೆಸ್ಟ್‌’ಗೆ ನೀಡಿದ ಸಂದರ್ಶನದ ಕನ್ನಡ ಅನುವಾದ.

ಅನುವಾದಕರ ಮಾತು

ಪಿ ಲಂಕೇಶ್ 1989ರಲ್ಲಿ ಗ್ರೀಸ್ ದೇಶದಲ್ಲಿ ಹುಟ್ಟಿ ಫ್ರಾನ್ಸಿನಲ್ಲಿ ಬೆಳೆದ ದುರ್ಯೋಧನ, ಆಫ್ರಿಕಾದ ಭೀಷ್ಮ, ಇಂಗ್ಲೆಂಡಿನ ಪೀಟರ್ ಬ್ರೂಕ್, ಭಾರತದ ದ್ರೌಪದಿ, ಆಕೆಯ ಹೆಸರು ಮಲ್ಲಿಕಾ ಸಾರಾಭಾಯ್…

ಈ ಮಹಾಭಾರತದಲ್ಲಿ ಒಬ್ಬಳೇ ಒಬ್ಬರು ಭಾರತ ವ್ಯಕ್ತಿ – ಮಲ್ಲಿಕಾ ಸಾರಾಬಾಯ್. ಎತ್ತರದ ನೃತ್ಯದ ಚಲನೆಯ, ಪ್ರಭೆ ಉಕ್ಕಿಸುವ ಕಣ್ಣುಗಳ ಹುಡುಗಿ ಮತ್ತು ಹೆಂಗಸು ಈಕೆ…
ಎಂದು ಪೀಟರ್ ಬ್ರೂಕ್ ಬಗ್ಗೆ ‘ಮಹಾಭಾರತ’ ನಾಟಕ – ಪಾತ್ರವರ್ಗ ಬಗ್ಗೆ ಬರೆಯುತ್ತಿದ್ದಾಗ ನಾ ತೊಟ್ಟಿಲಲ್ಲಿ ಆಡುತ್ತಿದ್ದೆ.
ಮುಂದೆ ಕನ್ನಡ ಸಾಹಿತ್ಯ ಲೋಕದ ‘ವ್ಯಕ್ತಿ ಚರಿತ್ರೆ’ಗಳಲ್ಲಿ ವಿಹರಿಸಿ ಬಂದಾಗ ಮನಸಲ್ಲಿ ಉಳಿದ ಅನೇಕ ಪಾತ್ರಗಳಲ್ಲಿ ಮಲ್ಲಿಕಾ ಸಾರಾಭಾಯ್ ಕೂಡ ಒಬ್ಬರು. ನನ್ನ ಯಾವ ಬರವವಣಿಗೆಯಲ್ಲೂ ಇವಳನ್ನು ಕರೆದು ತಂದು ಅಳವಡಿಸಿಕೊಳ್ಳಲು ಆಗದೇ ಇರುವಷ್ಟು ಹರವು ಈಕೆಯ ವ್ಯಕ್ತಿತ್ವಕ್ಕಿದೆ ಎನ್ನುವುದು ನನಗೆ ಯಾವತ್ತಿಗೂ ಅಚ್ಚರಿಯ ಸಂಗತಿ.

ಮೇಲಿನ ಸಂದರ್ಶದನಲ್ಲಿ ಆರೋಗ್ಯದ ಕುರಿತಾಗಿ ಮಲ್ಲಿಕಾ ಸಾರಾಭಾಯ್ ಮಾತು:
ಒಂದು ರಸಗುಲ್ಲ ತಿನ್ನುವುದು ಒಳ್ಳೆಯದು. 20ನೆಯದ್ದೂ ತಿನ್ನಬೇಕು ಅನಿಸಿದರೆ ಎಲ್ಲೋ ಏನೋ ಹಳಿ ತಪ್ಪಿದೆ ಎಂದರ್ಥ. ಇದು ನೀತಿಶಾಸ್ತ್ರದ ವಿಷಯವಲ್ಲ ಬದಲಿಗೆ ನೀನು ನಿನ್ನ ಒಳಗನ್ನೂ ಹೊರಗನ್ನೂ ಪರೀಕ್ಷಿಸಿಕೊಳ್ಳುವ ಹೊತ್ತು.
ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಂಡವರೆಲ್ಲ ಒಪ್ಪುವ ಮಾತಿದು. ಎಲ್ಲರಿಗೂ, ಬದುಕಿರುವಷ್ಟು ದಿನ ದೈಹಿಕ-ಮಾನಸಿಕ ಆರೋಗ್ಯ ಈ ಜೀವನದ ಭಾಗವೇ ಆಗಿರುತ್ತದೆ. ಆದರೆ, ಒಳಗಿನಿಂದ ಬಲಿದು ನಮ್ಮದೆಲ್ಲವನ್ನೂ ಖಾಲಿಯಾಗಿಸುವ, ರವಿಯು ಶಶಿಯು ತಂಪು ಬೆಳಕಿನ ಋತುಮಾನಗಳು ಗೊತ್ತಾಗದಂತ ದಿನಗಳೂ ಬಹುತೇಕರ ಬದುಕಿನಲ್ಲಿ ಬರುತ್ತವೆ. ಬದುಕಿಗೆ ಪರ್ಯಾಯಗಳಿಲ್ಲ. ಚಿಕಿತ್ಸೆಗಿದೆ.

ದೈಹಿಕ-ಮಾನಸಿಕ ಕಾಯಿಲೆಗಳ ಕುರಿತು ವೈದ್ಯಕೀಯ ಮಿತಿಗಳಾಚೆಯೂ ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ಅನನ್ಯ ಕಲೆ ಪ್ರತಿ ಜೀವಕ್ಕೂ ಬೇಕು. ಇದೊಂದು ರೀತಿ ನಮ್ಮನ್ನು ನಾವೇ ಸೃಷ್ಟಿಸಿಕೊಂಡಂತೆ. ಎಲ್ಲರೂ ಈ ನಿಟ್ಟಿನಲ್ಲಿ ತಮ್ಮದೇ ಗತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಆದರೆ, ಎದುರಿನವರಿಗೆ ದೇಹವೆಂದರೆ ಬರೇ ಹೊರಗಿನ‌ ಭೌತಿಕ ಶರೀರ ಮಾತ್ರ!
ಈ ಅನುವಾದ ಶುರುಮಾಡಿದ ಸಂಜೆ, ಆಫೀಸಿನಿಂದ ಹೊರಟವಳಿಗೆ ಸಂದರ್ಶನದ …and for the role both feminism and femininity play in the becoming of its women, of India’s women… ಹೇಗೆ ಅನುವಾದಿಸುವುದು ಎಂದು ಯೋಚಿಸುತ್ತ ‘ಒಂದೇ’ ಐಸ್ ಕ್ರೀಂ ತಿನ್ನುತ್ತ ಬರುತ್ತಿದ್ದೆ. ದಾರಿಯಲ್ಲಿ ಸಿಕ್ಕ ಪರಿಚರೊಬ್ಬರು ಡ್ರೆಸ್ ಚೆನ್ನಾಗಿದೆ, ಸಣ್ಣ ಆದ್ರೆ ಇನ್ನೂ ಚೆಂದ ಕಾಣುವೆ. ಇಂತಹ ಕ್ರೇವಿಂಗ್ಸ್ ಕಡಿಮೆ ಮಾಡಿಕೊ ಎನ್ನುವ ಸಲಹೆ ತೂರಿದರು.
ಎಷ್ಟೋ ವರ್ಷಗಳ ನಂತರ ಭೇಟಿಯಾದಾಗಲೂ, ಎದುರಿಗಿನವರ ಮೊದಲ ಪ್ರಶ್ನೆ ಆಗ ಸಣ್ಣಗಿದ್ದೆ, ಆಗ ಕೂದಲು ಎಷ್ಟುದ್ದ ಇತ್ತು… ಇವಕ್ಕೆಲ್ಲ ಸರಳ ಉತ್ತರ ಅಸಾಧ್ಯ!!

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: