ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹೊರಳಿ ಮರಳಿ ಚೋಪ್ತಾ – ಮಂಡಲಕ್ಕೆ: ಭಾಗ-1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

13.1

ಭಾಗ-1 ಮೋನಾಲಿನ ಮಾಯೆ

ಮೋನಾಲ್… ಮೋನಾಲ್… `ಚೆಲುವಾಂತ ಚೆನ್ನಿಗನೇ ನಲಿದಾಡು ಬಾ ಈ ಕ್ಯಾಮರಾ ಒಳಗೆ ಸೆರೆಯಾಗು ಬಾ…’ ಈ ಮೋಹಕ ಚೆನ್ನಿಗರಾಯ ಆಯಸ್ಕಾಂತದಂತೆ ಹಕ್ಕಿಲೋಕದ ಸಮಸ್ತರನ್ನು ಸೆಳೆಯುತ್ತದೆ. ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಸುತ್ತಾಡುವ ನವಿಲಿನಂತೆ ಕಾಣುವ, ಆದರೆ ನವಿಲಲ್ಲದ ಮೋನಾಲಿನ ಆಕರ್ಷಣೆ ನನ್ನನ್ನು ಸೆಳೆಯದೆ ಬಿಟ್ಟೀತೆ. ಸತ್ತಾಲಿನ ಮೊದಲ ಪ್ರವಾಸ ಮುಗಿಸಿದ ಬಳಿಕ ಮತ್ತೊಂದು ಹಕ್ಕಿ ಪಯಣಕ್ಕೆ ಕಾಯುತ್ತಿದ್ದೆ. ಖುಷ್ಬೂ `ಅಮ್ಮಾ ನಾವು ಚೋಪ್ತಾಕ್ಕೆ exclusive tour ಹೋಗೋಣ’ ಎಂದು ಆಹ್ವಾನಿಸಿದರು. 2017ರ ಅಕ್ಟೋಬರ್ ಮಧ್ಯಭಾಗದಲ್ಲಿ ಹೊಸ 600mm ಲೆನ್ಸ್ ಕೈಸೇರಿತ್ತು. ಕೈಗೆ ಬರುವಷ್ಟರಲ್ಲಿ ಕೇಂದ್ರದ ಜಿ.ಎಸ್.ಟಿ ಕೃಪೆಯಿಂದ 60,000 ರೂಪಾಯಿ ಹೆಚ್ಚು ತೆತ್ತೆ. ಲೆನ್ಸ್ ಸಿಕ್ಕಿದ್ದೇ ತಡ ಏನೋ ಸಾಧಿಸಿಯೇ ಬಿಡುತ್ತೇನೆ ಎನ್ನುವಷ್ಟು ಉತ್ಸಾಹದ ಬುಗ್ಗೆಯಾಗಿದ್ದೆ. ಖುಷ್ಬೂ ಕರೆದದ್ದಕ್ಕೆ ಕಾಯುತ್ತಿದ್ದವಳಂತೆ ರೈಟ್ ಎಂದು ಚೋಪ್ತಾದ ಮೋನಾಲ್ ಯಾತ್ರೆಗೆ ಸಿದ್ಧವಾದೆ. ಏನನ್ನಾದರೂ ಸಾಧಿಸುವುದು ಸಲಕರಣೆ ಉಪಕರಣೆಗಳ ಮೂಲಕ ಮಾತ್ರ ಅಲ್ಲ, ಅವನ್ನು ಬಳಸಿಕೊಳ್ಳುವ ಆಳ ಅರಿತ ಸಾಧನಾ ಮಾರ್ಗದಿಂದ ಎಂಬ ಸತ್ಯ ಗೊತ್ತಿದ್ದರೂ ಅರಿವಿಗೆ ಮರವೆಯ ಪರದೆ ಕವಿಯುತ್ತಿರುತ್ತದೆ. ಅರಿವು ಮರೆವಿನ ನಡುವೆ ತಾನೆ ಬದುಕಿನ ಓಟ.

ಹಕ್ಕಿ ಪ್ರವಾಸವನ್ನು ನಾನು ಯಾತ್ರೆ ಎನ್ನುತ್ತೇನೆ. ಎಲ್ಲರೂ ಯಾತ್ರೆಗೆ ಹೋಗುವುದು ಭಗವಂತನ ದರ್ಶನಕ್ಕೆ. ನಾನಿನ್ನೇನು? ಹಕ್ಕಿದೇವರ ದರ್ಶನಕ್ಕೆ ತಾನೆ ಹೋಗುವುದು. ಚೋಪ್ತಾಗೆ ಹೋಗುವುದು ಉಳಿದವರು ಹೋಗುವ ದೇವರ ಯಾತ್ರೆಯ ದಾರಿಯಲ್ಲೆ. ಚೋಪ್ತಾಗೆ ಕೇದಾರನಾಥ ಇರುವುದು ಕೇವಲ 75 ಕಿ.ಮೀ ದೂರದಲ್ಲಿ, ಕೇದಾರನಾಥ್ ಅಭಯಾರಣ್ಯದಲ್ಲೆ ಚೋಪ್ತಾ ಇದೆ. ಹಾಗಿದ್ದ ಮೇಲೆ ಇದು ಒಂದು ತರಹಕ್ಕೆ ಯಾತ್ರೆಯೆ ತಾನೆ.

ಬೆಂಗಳೂರಿನಿಂದ ಲೋಹದ ಹಕ್ಕಿಯೇರಿ ದೆಹಲಿ ತಲುಪಿ ಖುಷ್ಬೂ ರಾಹುಲ್ ಮನೆ ಸೇರಿದೆ. ರಾಹುಲ್ ತನ್ನ ತಂದೆಗೆ ಪರಿಚಯಿಸಿದ ತಕ್ಷಣ `ನೀವು ರಾಷ್ಟ್ರಪತಿಗಳ ಜೊತೆ ಇರುವ ಫೋಟೋ ನೋಡಿದೆ. ನೀವು ಸೆಲಿಬ್ರಿಟಿ ಎಂದರು ಹಿರಿಯರು. ಅರೆ! ನಾನೂ ಸೆಲಿಬ್ರಿಟಿಯೆ ಎಂದು ಅವಾಕ್ಕಾದೆ. ಮರುದಿನ ಬೆಳಿಗ್ಗೆ ದೆಹಲಿಯಿಂದ ನಾಲ್ಕುನೂರಕ್ಕೂ ಹೆಚ್ಚು ಕಿ.ಮೀ ದೂರದ ಚೋಪ್ತಾದ ದಾರಿ ಹಿಡಿದೆವು. ೧೨-೧೪ ಗಂಟೆಗಳ ಸತತ ಪ್ರಯಾಣ. ಕೆಲವೆಡೆ ಗಂಟೆಗೆ ೨೦ ಕಿ.ಮೀ ವೇಗ ಮೀರಲಾರದ ರಸ್ತೆಯ ಅವ್ಯವಸ್ಥೆ. ನಿಲ್ಲಿಸಿ, ಬನ್ನಿರಿ ಎಂದು ಎಷ್ಟೇ ಕೂಗುತ್ತಿದ್ದರೂ ನಿಲ್ಲಿಸದೆ ಹರಿದ್ವಾರ, ಹೃಷಿಕೇಶ ದಾಟಿದೆವು. ಉತ್ತರಾಖಂಡದ ಕಡೆಗೆ ಹೊರಡುತ್ತಿದ್ದಂತೆ ಬೆಟ್ಟಗುಡ್ಡಗಳು ಎದುರಾದವು. ನದಿಗಳು ಎದುರುಗೊಂಡವು. ಗುಡ್ಡಗುಡ್ಡಗಳೆ ಝರಿಝರಿದು ಜಾರಿದ land slideಗಳು ಎದೆ ನಡುಗಿಸಿದವು. ದೇವಪ್ರಯಾಗ, ರುದ್ರಪ್ರಯಾಗಗಳೂ ಸರಿದವು. ಆಳದಾಳದ ಕಣಿವೆಗಳಲ್ಲಿ ಹರಿಯುತ್ತಿದ್ದ ದೇವನದಿಗಳಲ್ಲಿ ಹಸಿರು ಪ್ರತಿಬಿಂಬಿಸಿ ನದಿಗಳ ನೋಟ ನಯನಮೋಹಕವಾಗಿತ್ತು. ಅಲ್ಲಲ್ಲಿ ಜಲಪಾತಗಳೂ ಇದ್ದವು. ದೇವಭೂಮಿ ಎಂದಾದರೆನ್ನಿ, ಅಲ್ಲವೆಂದಾದರೆನ್ನಿ. ಕಣ್ತುಂಬುವ ನೋಟವಿತ್ತು. ಆದರೆ ನದಿಗಳ ದಡದಲ್ಲಿ ಅಡ್ಡಾದಿಡ್ಡಿಯಾಗಿ ಹುಟ್ಟಿಕೊಂಡ ಊರು, ಊರವರ-ಯಾತ್ರಿಕರ ಸೌಕರ್ಯಕ್ಕಾಗಿ ನಾಯಿಕೊಡೆಗಳಂತೆ ತಲೆಯೆತ್ತಿದ ಕಾಡಿನ, ಪರ್ವತದ ಎದೆ ಸೀಳಿದ ಸೌಕರ್ಯಗಳು. ಚಾರ್‌ಧಾಮ್ ರಸ್ತೆಯ ಅಗಲೀಕರಣಕ್ಕೆ ಗುಡ್ಡಗುಡ್ಡಗಳನ್ನು ಕಡಿಕಡಿದು ಉರುಳಿಸುತ್ತಿದ್ದ ನೋಟ ಸಂಕಟ ತರುತ್ತಿತ್ತು. ಪ್ರಕೃತಿಯೇ ದೇವನ ಆಗರವಾಗಿರುವಾಗ ದೇವರು ಇನ್ನೆಲ್ಲೋ ಹೀಗೆಯೇ ಇರುವುದೆಂದು ಅಲ್ಲಿಗೆ ಹೋಗುವವರ ಅನುಕೂಲಕ್ಕಾಗಿ ಆಗುತ್ತಿದ್ದ ಅನಾಹುತ ನೋಡುತ್ತಾ ಉಸಿರು, ನಿಟ್ಟುಸಿರುಗಳ ನಡುವೆ ಪಯಣ ಸಾಗಿತು.

ಇರುಳ ಕತ್ತಲು ಕಣ್ಣಿಗೆ ದಟ್ಟವಾಗಿಳಿದ ಹೊತ್ತಿಗೆ ಚೋಪ್ತಾ ಮುಟ್ಟಿದೆವು. ಹೊರಗಿನದ್ದೇನು ಕಾಣುತ್ತಿರಲಿಲ್ಲ, ಕಾರಣ ಚೋಪ್ತಾದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಬೆಳಗಾಗುವ ತನಕ ಅಳಿಯನ ಕುರುಡು ಕಾಣುತ್ತಿರಲಿಲ್ಲ. ಸೋಲಾರ್ ಬೆಳಕನ್ನು ಆ ಶಿಶುಪಾಲನೆಂಬ ಮಾಲೀಕ ಒಂದು ಗಂಟೆಗೆ ಮಾತ್ರ ಕೊಡುತ್ತಿದ್ದ, ಕ್ಯಾಮೆರಾ ಬ್ಯಾಟರಿಗಳನ್ನು ಛಾರ್ಜು ಮಾಡಿಕೊಳ್ಳಲೆಂದು. ಇರುಳೆನ್ನುವುದು ಕತ್ತಲಿನಿಂದಲೇ ಕೂಡಿರುತ್ತದೆನ್ನುವುದು ಮನಕ್ಕಿಳಿಯಿತು. ರೆಪ್ಪೆಗಳು ಆಲಿಗಳನ್ನು ಅಪ್ಪಿಕೊಳ್ಳುವ ಮುನ್ನ ರಾಹುಲ್ ಸೂಚನೆ ಕೊಟ್ಟರು ಬೆಳಿಗ್ಗೆ ಐದು ಗಂಟೆಗೆ ಸಿದ್ಧವಾಗಬೇಕು ಎಂದು.

ಐದು ಗಂಟೆಗೆ ನಾವು ಎದ್ದದ್ದೇನೋ ನಿಜ, ಆದರೆ ರೆಡಿಯಾಗೋದು ಹೇಗೆ? ಸ್ನಾನದ ಮಾತಿರಲಿ, ಕೊನೆಯ ಪಕ್ಷ ಮುಖಕ್ಕೆ ನೀರು ಕಾಣಿಸಿದಂತೆ ಮಾಡಿ ತೊಳೆದು ಸಿದ್ಧವಾಗಿ ಬಟ್ಟೆ ಬದಲಿಸಿ ಸಲಕರಣೆ ಸಿದ್ಧಪಡಿಸಿಕೊಳ್ಳುವುದು ತಾನೆ. ಆದರೆ ನೀರು ಕೈಯಿಟ್ಟರೆ ಕೊರೆಯುತ್ತಿತ್ತು, ಅದನ್ನು ಮುಖದ ಮೇಲೆ ಸಿಂಪಡಿಸುವುದನ್ನು ನೆನೆಸಿಕೊಳ್ಳುವುದೆ ದುಸ್ಸಾಧ್ಯವಾಗಿತ್ತು. ಶಿಶುಪಾಲ ಮಹಾರಾಜ ಕೊಟ್ಟ ಉಗುರು ಬೆಚ್ಚಗಿನ ಒಂದೊಂದು ಲೋಟ ನೀರನ್ನೇ ಬಳಸಿ ಮುಖ ಮಾರ್ಜನಿಸಿದೆವು. ಬಟ್ಟೆ ಎನ್ನುವುದಕ್ಕೆ wildlife photography tourಗಳಲ್ಲಿ ಇತರ ಪ್ರವಾಸಗಳಲ್ಲಿ ಕೊಡುವಷ್ಟು ಪ್ರಾಮುಖ್ಯತೆ ಇಲ್ಲ. ಸಾಧ್ಯವಾದಷ್ಟು ಪ್ರಾಣಿಪಕ್ಷಿಗಳಿಗೆ ನಮ್ಮ ಪತ್ತೆ ಹಚ್ಚಲು ಸಾಧ್ಯವಾಗದ ಆವರಣಕ್ಕೆ ಹೊಂದಿಕೊಳ್ಳುವಂತದ್ದೆ ಆಗಿರಬೇಕು. ಬಟ್ಟೆಯ ಸಿದ್ಧತೆ ಮಹತ್ವದ್ದಲ್ಲ, ಅಗತ್ಯವಿರುವ ಬಣ್ಣ ಎನ್ನುವುದನ್ನು ಹೊರತುಪಡಿಸಿ. ತುಂಬಾ ಮುಖ್ಯವಾದದ್ದು ಕ್ಯಾಮೆರಾ, ಲೆನ್ಸ್, ಬ್ಯಾಟರಿ, ಟ್ರೈಪಾಡ್ಗಳನ್ನು ಸೂಕ್ತವಾಗಿ ಸಜ್ಜುಗೊಳಿಸುವುದು.

ಚೋಪ್ತಾದ ಮೊದಲ ಪಯಣ. ಇಲ್ಲಿ ಸಿಕ್ಕುವ ಅನುಭವ ಹೊಸತು, ಹಕ್ಕಿಗಳೂ ಬಹುತೇಕ ಹೊಸವೇ. ಸಿದ್ಧರಾದೆವು. ಖುಷ್ಬೂ exclusive tour ಎಂದಿದ್ದರೂ ಕೊನೆಯ ಗಳಿಗೆಯಲ್ಲಿ ದೆಹಲಿಯ ವಿಪರೀತೋತ್ಸಾಹಿ ಛಾಯಾಗ್ರಾಹಿ ಆನಂದ್ ಎಂಬ ಸರ್ದಾರ್ ಜೊತೆಗೂಡಿದ್ದರು.  ಬೆಳಿಗ್ಗೆ ನಮ್ಮ ಅಸ್ತ್ರಗಳ ಜೊತೆ ಫೀಲ್ಡಿಗೆ ಇಳಿದೆವು, ಫೀಲ್ಡಿಗೆ ಅಂದರೆ ರೋಡಿಗೆ ಎಂದೇ ಚೋಪ್ತಾದ ಅರ್ಥ. ಉದ್ದಕ್ಕೂ ಪರ್ವತಗಳ ಸಾಲು ಒಂದೆಡೆಯಾದರೆ ಮತ್ತೊಂದೆಡೆ ಆಳದ ಕಣಿವೆಗಳ ಇಳಿಜಾರು. ಇನ್ನು ರಸ್ತೆ ಬದಿಯ ೨-೩ ಅಡಿ ಜಾಗವೇ ಫೀಲ್ಡು. ಅತ್ತ ಇತ್ತ ಬದಿಯಿಂದ ವಾಹನಗಳು ಬಂದರೆ ನಮ್ಮ ಉಪಕರಣಗಳನ್ನು ಎತ್ತಿಕೊಂಡು ಕಣಿವೆಗೆ ಬೀಳದ ಹಾಗೆ ನಿಂತು ದಾರಿ ಮಾಡಿಕೊಡಬೇಕು.

ಮೊದಲ ದಿನ ಹೊರಟೆವು ಇನ್ನೂ ಆರು-ಆರೂವರೆಯ ಮಸಕು ಬೆಳಕು, ಹಕ್ಕಿ ಬಂದ ಮೇಲೆ ಹೋಗುವುದಲ್ಲ. ಹಕ್ಕಿ ನೋಡುತ್ತಾ ಇದ್ದಂತೆ ಹೋಗುವುದೂ ಅಲ್ಲ. ಹಕ್ಕಿಗಳು ಓಡಾಡುವ ಜಾಡು ಹಿಡಿದು ಮೊದಲೇ ಅಲ್ಲಿದ್ದು ಸಜ್ಜಾಗಿರಬೇಕು. ಹಾಗೆ ಹೊರಟೆವಲ್ಲಾ, ನಮ್ಮ ಕಣ್ಣಿಗೆ ಮೊದಲು ಕಂಡದ್ದು ಕಣಿವೆಯಲ್ಲಿ ಏರಿ ಬರುತ್ತಿದ್ದ himalayan thar. ಎದೆ ನಡುಗಿಸುವಂತಿದ್ದ ಏರು ದಾರಿಯಲ್ಲಿ ಅಷ್ಟೇ ಜೋಪಾನವಾಗಿ ಹೆಜ್ಜೆಯಿರಿಸುತ್ತಾ ಬರುತ್ತಿದ್ದ ಪರಿಯೇ ಸೋಜಿಗ. ಮೇಕೆ ಜಾತಿಗೆ ಸೇರಿದ ಥಾರ್‌ಗಳ ಕೋಡುಗಳು ಸುರುಳಿಯಂತೆ ಹಿಂಭಾಗಕ್ಕೆ ತಿರುವಿಕೊಂಡಿರುವುದೇ ಸೊಗಸು. ನಿರಾಯಾಸವಾಗಿ ಹಿಮಾಲಯದ ಬೆಟ್ಟಗುಡ್ಡಗಳಲ್ಲಿ ಹತ್ತಿಳಿಯುತ್ತವೆ. ನೆತ್ತಿಯ ಮೇಲೆ snow pigeonಗಳು ಹಾರಿಹೋದವು. ನಮ್ಮ ಕಣ್ಣೆಲ್ಲಾ ಅವು ಎಲ್ಲಿ ಇಳಿಯುತ್ತವೆ ಎನ್ನುವುದರತ್ತ ಇದ್ದವು, ನಂತರ ಹಿಂಬಾಲಿಸಲು. ಆದರೆ ಅವು ನಮ್ಮನ್ನು ಕೇರ್ ಮಾಡದೆಯೇ ಬೆಟ್ಟದ ನೆತ್ತಿಯ ಬಳಿ ಇಳಿದು ಕೂತವು. ಅವುಗಳ ಪಾಡಿಗೆ ಬಿಟ್ಟು ನಾವು ಅಲ್ಲಿಂದ ಮುಂದೆ ಒಂದು ತಿರುವಿನಲ್ಲಿ ತಿರುಗಿದೆವು.

ರಾಹುಲ್ ಬಾಯಿ ಮೇಲೆ ಬೆರಳಿಟ್ಟು ಮೌನದ ಸಂಕೇತ ಮಾಡಿದರು. ರಸ್ತೆಯ ಅಂಚಿನಲ್ಲೊಂದು ಥಾರ್ ಇತ್ತು. ನೋಡ ನೋಡುತ್ತಿದ್ದಂತೆ ಥಾರ್ ಪಕ್ಕದಲ್ಲಿ ನಿಧಾನವಾಗಿ ಮೊನಾಲ್ ಕೆಳಗಿಳಿದು ಬಂದಿತು. ಓಹ್ ಬಣ್ಣಗಳ ಸ್ವರ್ಗದ ಹಕ್ಕಿಯಂತಿತ್ತು. ಎರಡನ್ನೂ ಪ್ರತ್ಯೇಕವಾಗಿ ತೆಗೆಯಲಿಕ್ಕೆ ಆಗದ ರೀತಿಯಲ್ಲಿದ್ದವು. ಮೋನಾಲ್ ನಿಧಾನವಾಗಿ ಕೆಳಗಿಳಿದು ಬಂತು, ನಾವು ಅವೆರಡಕ್ಕೂ ಎಷ್ಟು ಹತ್ತಿರದಲ್ಲಿದ್ದೆವು ಎಂದರೆ ನಮ್ಮ ದೊಡ್ಡ ದೊಡ್ಡ ಉಪಕರಣಗಳನ್ನು ಬಳಸಲೂ ಸಾಧ್ಯವಿರಲಿಲ್ಲ. ೧೦೦-೪೦೦ನಲ್ಲಿ ನಾಲ್ಕಾರು ಚಿತ್ರ ತೆಗೆದೆ. ಆದರೆ ಅದಕ್ಕೆ ಹಾಕಿದ್ದ ಕ್ಯಾಮೆರಾ 700D, ಮಸುಕು ಬೆಳಕಿನಲ್ಲಿ ಚಿತ್ರ ಬಂದರೂ noice ಹೆಚ್ಚಿತ್ತು. ಮೋನಾಲ್ ಮತ್ತೊಂದು ಕಡೆಗೆ ಹೋಯಿತು. ಥಾರ್ ಮೇಲೆ ಹತ್ತಿ ಹೋಯಿತು. ಕಣ್ಣೆದುರು ಬಂದ ಅಪೂರ್ವ ದೃಶ್ಯಕ್ಕೆ ಸಮರ್ಪಕ ದಾಖಲೆ ಸಿಗಲಿಲ್ಲ.

ನಾವು ಇನ್ನೊಂದು ತಿರುವಿನ ಬಳಿ ಬಂದೆವು. ಕೆಳಗಿನಿಂದ ಮೊನಾಲ್ ಹತ್ತಿ ಬರುತ್ತಾ ಇದೆ. ಕೆಳಗೆ ಹೆಣ್ಣು ಮೊನಾಲ್ ಇತ್ತು. ಜೊತೆಗೆ yellow martin ಕೂಡಾ ಇತ್ತು. ಮಾರ್ಟಿನ್‌ನ ನಾಲ್ಕಾರು ಚಿತ್ರ ತೆಗೆದು ಮೊನಾಲ್ ಕಡೆಗೆ ಕಣ್ಣಿಟ್ಟೆವು. ಆನಂದ್ ಬಿಟ್ಟು ಉಳಿದವರದ್ದೆಲ್ಲ ದೊಡ್ಡ ಲೆನ್ಸುಗಳೆ, ರಾಹುಲ್, ಆನಂದ್ ರಸ್ತೆಯ ಒಂದು ಬದಿಗೆ ನಿಂತರು ನಾನು ಖುಷ್ಬೂ ಮತ್ತೊಂದೆಡೆ. ರಾಹುಲ್ ಆಗ ಸ್ವಲ್ಪ ಹೊತ್ತಿನ ಹಿಂದಷ್ಟೆ ಹೇಳಿದ್ದ `ಈ ಜಾಗದಲ್ಲಿ ಮೋನಾಲ್ ಚಿತ್ರ ತೆಗೆಯಬೇಕು. This is my dream place’ ಎಂದು. ಅದೇ ಜಾಗಕ್ಕೆ ಗಂಡು ಮೊನಾಲ್ ನಿಧಾನವಾಗಿ ಹತ್ತಿ ಬರುತ್ತಿದೆ, ಮೇವು ಹುಡುಕಿ ಮೇಯುತ್ತಾ. ಸೂರ್ಯ ಹಿತಮಿತವಾದ ಕಿರಣ ಸೂಸಿ ಹೊನ್ನ ಬೆಳಕನ್ನು ಬೀರಿದ್ದ. ಮೌನಕ್ಕೆ ಶರಣಾಗಿ ಕಾಯುತ್ತಿದ್ದೆವು ಕ್ಯಾಮೆರಾ ಸೆಟ್ ಮಾಡಿ. ತನ್ನಿಚ್ಛೆಯಂತೆ ನಿರ್ಭಿಡೆಯಿಂದ ಹತ್ತಿ ಬರುತ್ತಿದ್ದ ಮೊನಾಲ್ ಮೆಲ್ಲಮೆಲ್ಲನೆ ಬಂತು… ಬರತೊಡಗಿತು. ಕ್ಯಾಮೆರಾದ ಕ್ಲಿಕ್ ಕ್ಲಿಕ್ ಬಿಟ್ಟರೆ ಮತ್ತೊಂದು ಸದ್ದಿಲ್ಲ. ಮೇಲೆ ಬಂದ ಮೋನಾಲ್ ಎದುರಿನ ಗುಡ್ಡಕ್ಕೆ ಹಾರಿ ಅಂತರ್ಧಾನವಾಯಿತು. ಎಲ್ಲರ ಮೊಗ ಅರಳಿ ಹೊಂದಾವರೆಯಾಗಿತ್ತು. ನಾನು ತೆಗೆದ ನೂರಾರು ಷಾಟ್ಗಳಲ್ಲಿ ೧೦-೨೦ ಕ್ಲಿಕ್‌ಗಳು ಸಮಾಧಾನ ನೀಡುವ ಕ್ಲಿಕ್‌ಗಳಿದ್ದವು.

ರಾಹುಲ್ `ಅಮ್ಮಾ ನೀವು ತುಂಬಾ ಲಕ್ಕಿ, ಕೆಲವರು ಎರಡು ಮೂರು ಸಲ ಚೋಪ್ತಾ ಟೂರ್ ಮಾಡಿದರೂ ಇಂತಹ ಷಾಟ್ ಸಿಕ್ಕಿಲ್ಲ. ಮೊದಲ ಟೂರ್‌ನ ಮೊದಲ ದಿನದ ಮೊದಲ ಸೆಷನ್ನಿಗೆ ಹೀಗೆ ಮೊನಾಲ್ ನಿಮ್ಮ ಕೈಗೆ ದಕ್ಕಿದೆ, ನಮಗೆ ಪಾರ್ಟಿ ಕೊಡಿ’ ಎಂದ. `ಆಯಿತಪ್ಪಾ ಕೊಡಿಸೋಣ’ ಎಂದೆ ಫುಲ್ ಖುಷಿಯಿಂದ. ಆ ಸೆಷನ್ ಚಂದವಾಗಿ ಸಂಪನ್ನವಾಗಿ ಶಿಶುಪಾಲನ ಗ್ರೀನ್‌ವ್ಯೂ ರಿಸಾರ್ಟಿಗೆ ಮರಳಿದೆವು.

ಶಿಶುಪಾಲನು ಮೈದಾಹಿಟ್ಟು ಬಳಸಿಯೇ ಚಪಾತಿ, ಪರೋಟಾ ಮಾಡಿಯೇ ಸಿದ್ಧ ಎಂಬುದರ ಅರಿವಿದ್ದ ಖುಷ್ಬೂ ಹಿಂದಿನ ದಿನ ಬರುವಾಗಲೆ ಗೋಧಿಹಿಟ್ಟು ತರಕಾರಿ ಕೊಂಡು ತಂದಿದ್ದರು. ನಾವು ಎಷ್ಟೇ ಸಲ ಹೋಗಿರಲಿ, ಏನೇ ತಿಂದಿರಲಿ, ರುಚಿ ಅನ್ನುವುದು ಇದಕ್ಕಿಂತ ಭಿನ್ನವಾಗಿದೆ ಎನ್ನುವುದನ್ನು ಲೋಕದ ಯಾವ ಮಾಪನಗಳ ಮೂಲಕ ಅಳೆಯಲಾಗದ ಶಿಶುಪಾಲದ ಅಡುವ ರುಚಿ ವ್ಯತ್ಯಾಸ ಇರುತ್ತಿರಲಿಲ್ಲ. ಆಗಾಗ್ಗೆ ಅವ ಯಾವಾಗಲೋ ತಂದಿಟ್ಟಿದ್ದ ಚಾಕಲೇಟ್, ಚಿಪ್ಸ್ ತಿಂದು ನಮ್ಮ ನಾಲಗೆಯ ರುಚಿ ಸತ್ತಿಲ್ಲವೆಂದು ಕನ್ಫರ್ಮಿಸಿಕೊಳ್ಳುತ್ತಿದ್ದೆವು. ಬೈಯ್ದುಕೊಂಡೇ ತಿನ್ನುತ್ತಿದ್ದರೂ ಅದನ್ನು ಜೋರಾಗಿ ಹೇಳುತ್ತಿರಲಿಲ್ಲ. ಹಾಗೆ ಬೈದದ್ದು ಕಿವಿಗೆ ಬಿದ್ದರೆ ನಮ್ಮ ಹೊಟ್ಟೆಪಾಡಿಗೆ ಕಷ್ಟ ಆಗುತ್ತಿತ್ತು. ಆ ದ್ವಾಪರ ಯುಗದಲ್ಲಿ ಕೃಷ್ಣನಿದ್ದ, ಶಿಶುಪಾಲನ ನೂರು ತಪ್ಪುಗಳ ಬಳಿಕ ಶಿಕ್ಷೆ ಕೊಡಲು. ಈಗ ಚೋಪ್ತಾದಂತಹ ಜನ ವಿದೂರ ಸ್ಥಳದಲ್ಲಿ ಆ ಕೃಷ್ಣನೂ ಶಿಶುಪಾಲ ಸಾವಿರ ತಪ್ಪುಗಳನ್ನು ಮಾಡಿದರೂ ಮಾಫ್ ಮಾಡಿ `ಪರೋಟಾ ದೇದೊ ಭೈಯ್ಯಾ, ಮಖನ್ ದೇದೋ ಶಿಶುಪಾಲ್ ಎಂದೇ ಅನ್ನಬೇಕಿತ್ತು.

ಚೋಪ್ತಾದಂತಹ ಜಾಗಗಳಲ್ಲಿ ಬೆಳಿಗ್ಗೆ ಮರಗಟ್ಟುವ ಚಳಿ ಇದ್ದರೂ ಒಮ್ಮೆ ಬಿಸಿಲು ಬಂದ ಬಳಿಕ ಅದು ಭಯಂಕರ ಸುಡುಸುಡು ಬಿಸಿಲಾಗಿರುತ್ತಿತ್ತು. ಹಾಗಾಗಿ ಬೆಳಿಗ್ಗೆ ೯-೯.೩೦ ಒಳಗೆ ಸೆಷನ್ ಮುಗಿದರೆ ಮತ್ತೆ ೩-೩.೩೦ಯ ಬಳಿಕವೇ ಮುಂದಿನ ಸೆಷನ್ ಮಾಡಬೇಕಿತ್ತು. ತಿಂಡಿ ಮುಗಿಸಿದ ಬಳಿಕ ಇಳಿ ಇಳಿಜಾರಿನಲ್ಲಿ ಇಳಿದು ನಿಂತಾಗ ಒಂದೆರಡು ಹೊಸ ಹಕ್ಕಿ ಕಣ್ಣಿಗೆ ಬಿದ್ದವು. ರಾಹುಲ್ wren babbler, alpine accenter ಎಂದ. ನಂತರದ ಒಂದೆರಡು ಗಂಟೆ ಅವೂ ವಿರಾಮವಾಗಿ ಅಲೆದು ನಾವೂ ಅವೆರಡರ ಹಿಂದೆಯೇ ಅಲೆದಲೆದು ನಾನಾ ನಮೂನೆಯಾಗಿ ಕ್ಲಿಕ್ ಮಾಡಿಕೊಂಡೆವು.

ಊಟದ ಬಳಿಕ ಮತ್ತೆ ಮಧ್ಯಾಹ್ನದ ಸೆಷನ್ ಶುರುವಾಯಿತು. ನನ್ನ ಟಾರ್ಗೆಟ್ ಮುಗಿದಿತ್ತು. ಅದಕ್ಕಿಂತ ಚಂದವಾಗಿ ಮೋನಾಲ್ ಸಿಕ್ಕಲ್ಲಿ ಮಾತ್ರ ಕ್ಲಿಕ್, ಇಲ್ಲದಿದ್ದರೆ ಬೇಡವೆಂದು ನಿರ್ಧರಿಸಿದ್ದೆ. ನನ್ನ ಈ ತೀರ್ಮಾನ ಅಭಾವ ವೈರಾಗ್ಯದ್ದು ಎನ್ನುವುದರ ಅರಿವಿತ್ತು. ಮೋನಾಲ್ ಎದುರಿಗೆ ನಿರ್ಧಾರ ಉಳಿಯುವುದರ ಬಗ್ಗೆ ಭಾರಿ ಡೌಟು. ಆದ್ದರಿಂದ ಮಾತಿಲ್ಲದೆ ಅವರೊಡನೆ ಗಾಡಿಯೇರಿದೆ. ರಾಹುಲ್ ಮುಂದಿನ ಹುಡುಕಾಟದ ಗುರಿ koklass pheasant. ಚೋಪ್ತಾದ ಆ ಬದಿ ಈ ಬದಿಗಳಲ್ಲಿ ಹತ್ತಾರು ಕಿ.ಮೀ ದೂರ ಹೋಗುವುದು, ಮಧ್ಯೆ ಮಧ್ಯೆ ಗಾಡಿ ನಿಲ್ಲಿಸುವುದು, ರಾಹುಲ್, ಆನಂದ್ ಇಬ್ಬರೂ ಈ ಕಡೆ ಕೂಗು ಕೇಳಿತು, ಆ ಕಡೆ ಕೂಗು ಕೇಳಿತೆಂದು ಇಳಿಜಾರಿನಲ್ಲಿ ಇಳಿದು ಹುಡುಕುತ್ತಿದ್ದರು. ನಾವಿಬ್ಬರೂ ಗಾಡಿಯಲ್ಲೇ ತಪಸ್ಸು ಮಾಡುವುದು. ಮೂರು ಸೆಷನ್ ಹೀಗೆ ತಳ್ಳಿದರೂ ಕೋಕ್ಲಾಸ್ ಕಣ್ಣಿಗೆ ಬೀಳಲಿಲ್ಲ. ಆದರೊಮ್ಮೆ ಕೋಕ್ಲಾಸ್ ಹೆಣ್ಣು ಟಾರ್ ರೋಡಿನ ಮೇಲೆ ರಾಜಾರೋಷವಾಗಿ ರೋಡ್ ಕ್ರಾಸ್ ಮಾಡಿತು. ಗಂಡಿಗೇನು ಬಿಗುಮಾನವೋ ನಮ್ಮ ನೋಟಕ್ಕೆ ಬೀಳುವ ಕೃಪೆ ಮಾಡಲೇ ಇಲ್ಲ.

ಒಂದು ಬೆಳಿಗ್ಗೆ ಪಂಚ ಕೇದಾರಗಳಲ್ಲಿ ಒಂದಾದ, ವಿಶ್ವದ ಅತ್ಯಂತ ಎತ್ತರದಲ್ಲಿರುವ ತುಂಗಾನಾಥಕ್ಕೆ ಹೊರಟೆವು. ಬೀಳುತ್ತಿದ್ದ ಮಂಜಿನ ನಡುವೆ ಮೆಟ್ಟಿಲು ಹತ್ತುವುದು, ಕುದುರೆ ಏರುವುದು ಪ್ರಯಾಸದಾಯಕ. ಟೀಮಿನವರು ಧೈರ್ಯ ತುಂಬಿ ಕರೆದುಕೊಂಡು ಹೋದರು. ನಾನು ಕುದುರೆಯೇರಿ ಸವಾರಿ ಮಾಡುವುದು, ಉಳಿದವರು ಚಾರಣ ಮಾಡುವುದು ಎಂದಾಯ್ತು. ಒಂದು ಕುದುರೆಯೂ ಬಂದಿತು. ನಿಜವಾಗಿಯೂ ಈ ಸವಾರಿ ಗಿವಾರಿ ನನಗೆ ಅಪರಿಚಿತ ಪದ. ಚಿಕ್ಕಂದಿನಲ್ಲಿ ರಜಾಕ್ಕೆ ಹೋದಾಗ ನಮ್ಮಜ್ಜಿ ಮನೆಯ ಎಮ್ಮೆ ಮೇಲೆ ಸವಾರಿ ಮಾಡಿರಬಹುದೇನೋ, ಮನೆಯಲ್ಲಿ ಸಾಕಷ್ಟು ಎಮ್ಮೆಗಳು ಇದ್ದುದರಿಂದ. ಅದು ಕೂಡಾ ನೆನಪಿನಂಗಳಕ್ಕೆಷ್ಟು ತಿವಿದರೂ ನೆನಪಿಗೆ ಬರಲಿಲ್ಲ. ಏಕೆಂದರೆ ಅಜ್ಜಿಯ ಮನೆಯ ಯಾವ ಹೆಣ್ಣುಮಕ್ಕಳೂ ಎಮ್ಮೆ ದನ ಹೊಡ್ಕೊಂಡು ಹೊಲಗದ್ದೆ ಗೋಮಾಳದತ್ತ ಹೋಗುವ ಅಭ್ಯಾಸವೇ ಇರಲಿಲ್ಲ. ಆದ್ದರಿಂದ ನನ್ನ ವಿಚಾರವೂ ಬಹುಶಃ ನೈ ನೈ. ಆದ್ದರಿಂದ ಧೈರ್ಯ ತುಂಬಿದರೂ ನನ್ನೆದೆಯಲ್ಲಿ ಭಯದ ಅವಲಕ್ಕಿ ಕುಟ್ಟುತ್ತಲೇ ಇತ್ತು. ಬೀಳುವೆನೆಂಬ ಭಯವಲ್ಲ, 100% out ಆದರೆ ಸಮಸ್ಯೆ ಇಲ್ಲ, ಬದಲಾಗಿ ಏನಾದರೂ ಮುರಿದುಕೊಂಡು ಅಲ್ಲಿಂದ ನನ್ನನ್ನು ನನ್ನೂರಿಗೆ ಸಾಗಿಸುವ ಕಷ್ಟ ಅಲ್ಲದೆ, ಜೀವನವಿಡೀ ಉಳಿದವರಿಗೆ ತೊಂದರೆ ಕೊಡುತ್ತಾ ಬದುಕುವ ಭಯ. ನನ್ನ ಜೀವನದ ಪಾಲಿಸಿ ಇದ್ದಷ್ಟು ದಿನ ಸೈ ಸೈ, ಆಮೇಲೆ right about turn ಜೈ ಜೈ ಎಂದು back to ಕಾಲರಾಯನ pavilion. ಅದರಲ್ಲೂ ಹೀಗೆ ಹಕ್ಕಿ ಹಿಂದೆ ಅಲೆಯಲು ಹೋಗಿ ಮುರಿದುಕೊಂಡು ಮೂಲೆ ಸೇರಿದಳು ಅನ್ನೋ ಮಾತು ಕೇಳೋದು ಕಡುಕಷ್ಟ ಕಷ್ಟ. ಮೂಲೆ ಸೇರಿದ ಬದುಕು ಕಷ್ಟಾತಿಕಷ್ಟ, ಊಹಾತೀತ. ಆದ್ದರಿಂದ ಆದಷ್ಟೂ ಅಪಾಯ ತಂದುಕೊಳ್ಳಲು ಮುಂದಾಗದಿದ್ದರೂ ಕೆಲವು ಸಲ ಬಿಡಲಾಗದು, ಬಿಡಲಾಗದು ಹಕ್ಕಿಗಳ ಚಿತ್ರ ಹಿಡಿಯುವುದನ್ನು ಬಿಡಲಾಗದು ಹೋಗುವುದನ್ನು.

ಆಸೆ ಬಿಡಲ್ವೆ, ತುಂಗಾನಾಥದ ಬುಡದಲ್ಲಿ ಎಲ್ಲರೂ ಸೇರಿದೆವು. ಎಲ್ಲ ಸೇರಿ ಹೈಟ್ ವೈಟಿದ್ದ ಮಜಭೂತಾದ ಕುದುರೆ ಆರಿಸಿ ಕರೆತಂದರು. ಅದರ ಮಾರ್ಗದರ್ಶಿ ನನ್ನನ್ನು ನೋಡಿ ತನ್ನ ಕುದುರೆ ಈ ಯಮ್ಮನ್ನ ಹೊರೋದು ಡೌಟು ಅನ್ನುವ ಮುಖ ಮಾಡಿದ. ಕುದುರೆ ಹತ್ತುವುದು ಕೂಡಾ ನನಗೆ ಬೆಟ್ಟ ಹತ್ತಿದಷ್ಟೆ ಸಾಹಸಮಯ. ಒಂದು ಕಟ್ಟೆ ಮೇಲೆ ಹತ್ತಿ ನಿಂತು ಕುದುರೆಯ ಮೇಲೇರಿ ವಿರಾಜಮಾನಳಾದೆ. `ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು… ಟುಕುಕ್ ಟುಕುಕ್’ ಎನ್ನುವಂತೆ `ಧೈರ್ಯದಿಂದ ಕುದುರೆ ಹತ್ತಿ ಮೆರೆವ ಹೆಣ್ಣು ನಾನು ಟುಕುಕ್ ಟುಕುಕ್’ ಎಂದು ಹೊರಡಲು ಸನ್ನದ್ಧಳಾದೆ. ಸವಾರಿ ಮಾರ್ಗದರ್ಶಿ ದಾರಿಯುದ್ದಕ್ಕೂ ಒಂದು ಕೈಯಲ್ಲಿ ಹಗ್ಗ, ಮತ್ತೊಂದು ಕೈಯಲ್ಲಿ ಸಿಗರೇಟು ಸೇದುತ್ತಲೆ ನನ್ನನ್ನು, ಹೊತ್ತ ಕುದುರೆಯನ್ನೂ ಮುನ್ನಡೆಸಿದ, ಕೆಲವು ಸಲ ಲಗಾಮಿನ ಹಗ್ಗ ಕೈಬಿಟ್ಟು ತನ್ನ ಪಾಡಿಗೆ ಬರುವಾಗ ನನಗೋ ಹೃದಯ ಬಾಯಿಗೆ ಬಂದಷ್ಟು ಆತಂಕ. `ಪಕಡೋ ರಸ್ಸಿ ಪಕಡೋ’ ಎಂದೇ ಕಿರುಚುತ್ತಿದ್ದೆ. ಅದಕ್ಕಾತ `ಹೆದರಬೇಡಿ ಕುದುರೆಗೆ ಹತ್ತಿ ಅಭ್ಯಾಸ ಇದೆ’ ಎನ್ನುತ್ತಾ ನನ್ನ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಕೊಡದೆ ಹಾಗೆ ನಡೆದ. ಕಡಿದಾದ ಸವೆದು ಜಾರಿ ಬೀಳುವಂತಿದ್ದ ಮೆಟ್ಟಿಲು, ಮೆಟ್ಟಿಲುಗಳ ಪಕ್ಕದಲ್ಲಿ ನಡೆಸಿಕೊಂಡು ಹೋಗುವಾಗ ನನಗೂ ಸೂಚನೆ ನೀಡುತ್ತಿದ್ದ, ಮುಂದಕ್ಕೆ ಭಾರ ಬಿಡಬೇಡಿ, ಹಿಂದಕ್ಕೆ ಒರಗಬೇಡಿ… ಹೀಗೆ ಒದ್ದಾಡಿಕೊಂಡು ಜೀವ ಕೈಯ್ಯಲ್ಲಿಡಿದು ಸಾಗುತ್ತಿದ್ದಾಗ ಆತನಿಗೆ ಚಹಾ ಕುಡಿಯಬೇಕೆನಿಸಿ ಬಿಡೋದೆ. ಚಹಾ ಪೆಟ್ರೋಲ್ ಬೀಳದಿದ್ದರೆ ಮುಂದೆ ಸಾಗೆನೆಂದು ಚಾ ದುಖಾನಿನ ನಿಲ್ಲಿಸಿ ಚಾಯ್ ಕೊಡಿಸಿ, ಕುದುರೆಗೆ ರೆಸ್ಟ್ ಬೇಕು ಇಳಿಯಿರಿ ಎಂದ. ಇಳಿಯಲೂ ಹತ್ತಿದಷ್ಟೆ ಕಸರತ್ತು ಮಾಡಿ ಇಳಿದೆ. ಹಯವನ್ನೊಂದು ಕಡೆ ಕಟ್ಟಿ ಟೀ ಕುಡಿಯಲು ಹೋದ. ಗಿರಿ ಏರುತ್ತಿದ್ದ ಆತಂಕದ ನಡುವೆಯೂ ಮೋಜೆನಿಸಿದರೂ ನನ್ನನ್ನು ಹೊತ್ತು ತಂದ ಕುದುರೆಗೆ ಅದೆಷ್ಟು ಆಯಾಸವೋ! ಸುಸ್ತಾಗಿದ್ದ ಕುದುರೆಯ ಏದುಸಿರ ಬಿಸಿ ಆವಿಯಾಗಿ ಹೊರಗಿನ ಮಂಜಿನಲ್ಲಿ ಲೀನವಾಗುತ್ತಿತ್ತು. ಪಾಪದ ಕುದುರೆ. ಅದರ ತಿದಿಯುಸಿರಿನ ಒಂದು ಪಟ ಹಿಡಿದೆ.

ಹಯಪಥಿಕ ಸಾವಕಾಶವಾಗಿ ಮಾಲಕಿಯ ಜೊತೆ ಮಾತಾಡುತ್ತಾ ಇಪ್ಪತ್ತೈದು ರೂಪಾಯಿನ ಒಂದು ಲೋಟ ಚಾಯ್ ಹೀರಿದ ಸೊರ್ರೆನ್ನುತ್ತ. ಸುತ್ತಮುತ್ತಣ ಗಿಡ ಮರಗಳಲ್ಲಿ ಹಕ್ಕಿ ಕಂಡಾವೆ ಎಂದು ಕಣ್ಣಿನಲ್ಲೆ ಸರ್ವೆ ಮಾಡಿದರೂ ಮನದೊಳಗೆ ಕಾಡುತ್ತಿದ್ದ ಸಮಸ್ಯೆ ಮತ್ತೆ ಅಶ್ವಾರೂಢಳಾಗುವ ಬಗೆ ಹೇಗೆಂದು. ಚಾ ಕುಡಿದು ದೇಹ ಬೆಚ್ಚಗೆ ಮಾಡಿಕೊಂಡು ಸವಾರಿ ಮುನ್ನಡೆಸಲು ಸನ್ನದ್ಧನಾದ. ನಾನು ಏನು ಮಾಡೋದು? ಚಾ ದುಖಾನಿನಿಂದ ಕುರ್ಚಿ ಪಡೆದು ಹತ್ತಿ ಹಯಾಸೀನಳಾದೆ. ಮಾರುದೂರ ಮುನ್ನಡೆಯುವಷ್ಟರಲ್ಲಿ ಮಂಜು ಸುರಿಯಿತು. ಹಯವನ್ನು ನಿಲ್ಲಿಸಿ `ಕುದುರೆಗೆ ಕಾಲು ಜಾರುತ್ತದೆ, ಮುಂದೆ ಹೋಗಲು ಖಡಾಖಂಡಿತವಾಗಿ ಆಗುವುದೇ ಇಲ್ಲ, ಕೆಳಗಿಳಿಯಿರಿ’ ಎಂದು ಹೇಳಿ ಹಯಪಥಿಕ ಅಖೈರಾಗಿ ಷರಾ ಬರೆದೇಬಿಟ್ಟ. ನಮ್ಮ ತಂಡದವರು ಬರುವತನಕ ನಾನು ಅಲ್ಲೇ ಕುಳಿತೆ ಅಶ್ವಸವಾರಿ ಮುಗಿಯಿತೆಂಬ ನಿರಾಳದಲ್ಲಿ. ಸುತ್ತ ಮುತ್ತ ನೋಡುತ್ತೇನೆ ಹರಯದವರಿಂದ ಹಿಡಿದು ನಡುವಯಸಿನವರು, ಅದನ್ನೂ ದಾಟಿದವರು ಕೈಯ್ಯಲ್ಲೊಂದು ಕೋಲು ಹಿಡಿದು ಸಲೀಸಾಗಿ ಹತ್ತಿ ಬರುತ್ತಾ ಇದ್ದಾರೆ, ಇಳಿಯುವವರೂ ಸಲೀಸಾಗಿ ಇಳಿಯುತ್ತಿದ್ದಾರೆ. ಆ ದಾರಿ ಅವರಿಗೆ ಅಷ್ಟೇನೂ ಛಾಲೆಂಜ್ ಅನ್ನಿಸದಂತೆ ಹತ್ತುತ್ತಿದ್ದಾರೆ, ಇಳಿಯುತ್ತಿದ್ದಾರೆ. ಆದರೆ ಕುದುರೆಯೇರಿ  ಬಂದ ನನಗೆ ಓಹೋ ಹಿಮಾಲಯ, ತುಂಗಾಲಯ ಎಂದೂ ಖುಷಿಯಿಂದ ಹಾಡಲಾಗದಂತಹ ಏರಿನ ಇಳುಕಿನ ಇಕ್ಕಟ್ಟು. ತಲೆ ಎತ್ತಲೂ ಭಯ, ತಲೆ ತಿರುಗೀತು ಎಂದು.

ಅಷ್ಟು ಹೊತ್ತಿಗೆ ರಾಹುಲ್-ಖುಷ್ಬೂ ಅಲ್ಲಿಗೆ ಬಂದರು. ಹಯಪಥಿಕನ ಕಾರಣ ಕೇಳಿ ಖುಷ್ಬೂ ಅವನೊಡನೆ ವಾಗ್ಯುದ್ಧ ಮಾಡಿ `ಬಿಸಿಲು ಬರುತ್ತಿದೆ, ಹಿಮ ಕರಗುತ್ತಾ ಇದೆ ನಡೆ ನಡೆ’ ಎಂದು ಗದರಿಸಿದರು. ಮತ್ತೆ ಕುದುರೆ ಹತ್ತಿಸಿ ತುಂಗಾನಾಥದ ಒಕ್ಕಡೆಯ ಟುಕುಟುಕು ಸವಾರಿ ಕಂಪ್ಲೀಟು ಮಾಡಿಸಿದರು. ಅಂತೂ ಇಂತೂ ಗಿರಿಯೇರಿದೆ ಅಲ್ಲಲ್ಲ ಗಿರಿಯೇರಿಸಿದರು. ಇಷ್ಟೆಲ್ಲಾ ಕಸರತ್ತು ಮಾಡಿ ಹತ್ತಿದ ಮೇಲೆ ತುಂಗಾನಾಥನಿಗೆ ನಮಸ್ಕಾರ ಹಾಕಬೇಡವೆ. ತುಂಗಾನಾಥನಿಗೆ ನಮ್ಮ ನಮಸ್ಕಾರ ಸ್ವೀಕರಿಸುವ ಯೋಗವೇ ಇರಲಿಲ್ಲ. ಏಕೆಂದರೆ ನಾವು ಗಿರಿಯೇರಿದ ಆ ದಿನದಿಂದಲೇ ಅವನನ್ನು winter temple arrest ಮಾಡಿದ್ದರು. ಚಳಿಗಾಲ ಬರುತ್ತಿದ್ದಂತೆ ದೇವಳಕ್ಕೆ ಬೀಗ ಹಾಕಿ ಬಂಧಿಸುತ್ತಾರೆ. ನನಗೇನೂ ಬೇಸರ ಎನ್ನಿಸಲಿಲ್ಲ, ನಾವೂ ಬಂದದ್ದೂ ಆಲಯಕ್ಕೆ, ದರ್ಶನಕ್ಕೆ ಆಗಿರಲಿಲ್ಲ. ಆದರೂ ಸಂಧಿಯಿಂದ ಕಂಡು ಹಾಯ್ ಎಂದೆ. ಕಾಣದ ಅವನು ಜಾವ್ ಜಾವ್ ಎಂದಿರಬೇಕು. ನಾವೇನೋ ಹೊರಟೆವು, ಆದರೆ ತಕ್ಷಣ ಅಲ್ಲ. ಏರಿದ ಆಯಾಸ ಒಂದಿಷ್ಟಾದರೂ ಇಳಿಸಲೇಬೇಕಲ್ಲ. ಹತ್ತಿದವರು ನೆತ್ತಿಯ ಮೇಲೆಯೆ ಇರಲು ಸಾಧ್ಯವೆ. ಹಿಮಾಲಯ ಏರಿದ್ದರೂ ಇಳಿಯಲೇಬೇಕಲ್ಲ, ಇನ್ನು ತುಂಗಾನಾಥ ಬಿಡುತ್ತಾನೆಯೆ?

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: