ಜಿ ಎನ್ ನಾಗರಾಜ್ ಅಂಕಣ – ಘ್ರಾಣಕ್ಕೂ ಗುದಕ್ಕೂ ಬೇಧವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಬೇಧವಿಲ್ಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

44

ವಚನಗಳ ದೇಹ ವಿಜ್ಞಾನ, ಬೆಚ್ಚಿ ಬೀಳಿಸುವ ಸಮಾನತೆಯ ಪ್ರಜ್ಞೆ.
ವಚನಗಳ ತತ್ವಶಾಸ್ತ್ರ ಭೌತ ಶಾಸ್ತ್ರವನ್ನೂ ಬೋಧಿಸುತ್ತದೆಯೇ ?
ಶಬ್ದ ಆಕಾಶದ ಗುಣ, ಶಬ್ದ, ಸ್ಪರ್ಶಗಳೆರಡೂ ವಾಯುವಿನ‌ ಗುಣ, ಶಬ್ದ ಸ್ಪರ್ಶ ರೂಪು ಅಗ್ನಿಯ ಗುಣ, ಶಬ್ದ ಸ್ಪರ್ಶ ರೂಪು ರಸ ಅಪ್ಪುವಿನ ಗುಣ ಶಬ್ದ ಸ್ಪರ್ಶ ರೂಪು ರಸ ಗಂಧ ಪೃಥ್ವಿಯ ಗುಣ ಈ ವಚನವನ್ನು ಓದಿದಾಗ ನನ್ನ ಮನಸ್ಸು ಮತ್ತೆ ಹೈಸ್ಕೂಲಿನ ತರಗತಿಯಲ್ಲಿದ್ದೇನೆ.  ಭೌತಶಾಸ್ತ್ರದ ಅಧ್ಯಾಪಕರು‌ ಅನಿಲಗಳ ಗುಣ , ದ್ರವಗಳ ಗುಣ, ಘನ ವಸ್ತುಗಳ ಗುಣಗಳನ್ನು ವಿವರಿಸುತ್ತಿದ್ದಾರೆ ಎನಿಸಿತು.

ಪೃಥ್ವಿ ನಮ್ಮ ಐದು ಇಂದ್ರಿಯಗಳಿಗೂ‌ ಸಂವೇದನೆಯನ್ನು ಒದಗಿಸುವ ಐದೂ ಗುಣಗಳನ್ನು ಹೊಂದಿದೆ. ಆದರೆ ನೀರಿಗೆ ವಾಸನೆಯಿಲ್ಲ. ಆದ್ದರಿಂದ ಕೇವಲ ನಾಲ್ಕು ಗುಣವನ್ನು ಮಾತ್ರ ಹೊಂದಿದೆ. ಹಾಗೇ ಅಗ್ನಿ ಮೂರು, ವಾಯು ಎರಡು, ಆಕಾಶ ಒಂದೇ ಗುಣವನ್ನು ಹೊಂದಿದೆ ಎಂದು ಈ ವಚನ ವಿವರಿಸುತ್ತದೆ. ಇದು ಇಂದಿಗೂ ಕೆಲವು ವ್ಯತ್ಯಾಸಗಳೊಡನೆ ಇಂದಿಗೂ ಪ್ರಸ್ತುತವೆನಿಸುವಂತಿದೆ. ಏಕೆಂದರೆ ಈ ವಿವರಣೆ ಎಲ್ಲ ಮಾನವರ ನಿತ್ಯ  ಅನುಭವವನ್ನು ಆಧರಿಸಿದ್ದು.  ಅಷ್ಟೇ ಅಲ್ಲ.

21 ನೆ ಶತಮಾನದ, ದಿನ ದಿನವೂ ಹೊಸ ಹೊಸ ವೈಜ್ಞಾನಿಕ ಬೆಳವಣಿಗೆಗಳ ವಾತಾವರಣದಲ್ಲಿ ಬೆಳೆದ ಅತ್ಯಾಧುನಿಕ ಯುಗದ ತಲೆಮಾರನ್ನೂ ಬೆಚ್ಚಿ ಬೀಳಿಸುವ, ಬೆರಗು ಮೂಡಿಸುವ ವೈಜ್ಞಾನಿಕ ಚಿಂತನೆ, ವೈಚಾರಿಕತೆ ವಚನಗಳಲ್ಲಿ ಅಡಗಿದೆ. ಅಂದಿನ ಸೀಮಿತ ವೈಜ್ಞಾನಿಕ ಸಾಧನಗಳು, ವಿಧಾನಗಳ ಹಿನ್ನೆಲೆಯಲ್ಲಿ ಸಾಧ್ಯವಿದ್ದ ಸೀಮಿತ ಜ್ಞಾನದ ಆಧಾರದ ಮೇಲೆ ರೂಪಿಸಿಕೊಂಡ ಅವರ ಈ ಚಿಂತನೆಯ ವಿಶಾಲ ಮನೋಭಾವ ಮತ್ತದರ ಸಾಮಾಜಿಕ ಪ್ರಯೋಗ ಆಶ್ಚರ್ಯಕರವಾದದ್ದು.
ಈ ಚಿಂತನೆಯ ಒಂದು ಸೆಳಕು ಹೀಗಿದೆ :
….ಜ್ಞಾನೇಂದ್ರಿಯಗಳಿಗೂ ಕರ್ಮೇಂದ್ರಿಯಗಳಿಗೂ ಬೇಧವಿಲ್ಲ. ಅದೆಂತೆಂದೆಡೆ:
ಶ್ರೋತ್ರಕ್ಕೂ ವಾಕ್ಕಿಗೂ ಬೇಧವಿಲ್ಲ, ಶಬ್ದಕ್ಕೂ ವಚನಕ್ಕೂ ಬೇಧವಿಲ್ಲ;
ತ್ವಕ್ಕಿಗೂ ಪಾಣಿಗೂ ಬೇಧವಿಲ್ಲ,ಸ್ಪರ್ಶಕ್ಕೂ ಆದಾನಕ್ಕೂ ಬೇಧವಿಲ್ಲ ;
ನೇತ್ರಕ್ಕೂ ಪಾದಕ್ಕೂ ಬೇಧವಿಲ್ಲ,ರೂಪಿಗೂ ಗಮನಕ್ಕೂ ಬೇಧವಿಲ್ಲ;
ಜಿಹ್ವೆಗೂ ಗುಹ್ಯಕ್ಕೂ ಬೇಧವಿಲ್ಲ , ಗಂಧಕ್ಕೂ ವಿಸರ್ಜನಕ್ಕೂ ಬೇಧವಿಲ್ಲ ; ….
(ಚನ್ನಬಸವಣ್ಣನವರ ವಚನಗಳು ವಚನ ಸಂಖ್ಯೆ 1085)
ಮೊತ್ತ ಮೊದಲನೆಯದಾಗಿ ಹಿಂದಿನ ಲೇಖನದಲ್ಲಿ ಹೇಳಿದಂತೆ ಮಲಿನವಾದ ಈ  ದೇಹದ ಭಾಗಗಳನ್ನು, ಮಾನವರನ್ನು ಕಾಮನೆಗೆ ಸೆಳೆಯುವ ಇಂದ್ರಿಯಗಳನ್ನು ತುಚ್ಛೀಕರಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಿ ಲೋಕದಿಂದ ಮನಸ್ಸನ್ನು ವಿಮುಖಗೊಳಿಸಿ ಕಣ್ಣು ಮುಚ್ಚಿ ಚಿಂತನೆ ಮಾಡುವುದೇ ಜ್ಞಾನದ ಸಾಧನ. ಅದರಿಂದಲೇ ಧರ್ಮದ, ತತ್ವಶಾಸ್ತ್ರದ ಉಗಮ ಎನ್ನುವ ವೈದಿಕ ಸಿದ್ಧಾಂತ ಎಲ್ಲೆಡೆಯೂ ಪೋಷಿಸಲ್ಪಡುತ್ತಿರುವ ಸಂದರ್ಭ ಅದು. ಆಗ ಇಂದ್ರಿಯಗಳನ್ನು  ಮುಖ್ಯ ಧಾರ್ಮಿಕ ತತ್ವಗಳೆಂದು ಪರಿಗಣಿಸುವುದೇ ಒಂದು ವಿಶೇಷ. ಅದರಲ್ಲಿ ಜ್ಞಾನೇಂದ್ರಿಯಗಳ ಜೊತೆಗೆ ಬದುಕಿನ ನಿತ್ಯ ಕೆಲಸಗಳಿಗೆ ಸಾಧನವಾದ ಕೈ ಕಾಲುಗಳನ್ನು ಧಾರ್ಮಿಕ ತತ್ವಗಳೆಂದು ಪರಿಗಣಿಸುವುದು ವಿಶೇಷದಲ್ಲಿ ವಿಶೇಷ.

ಈ ಕರ್ಮೇಂದ್ರಿಯಗಳಲ್ಲಿ ಅವುಗಳ ಮಾತನಾಡಲೂ ಹೇಸುವ, ಅಸಹ್ಯವೆಂದು ಛೀ ಗುಟ್ಟುವ ಗುಹ್ಯ ಗುದ – ಲೈಂಗಿಕ ಅವಯವಗಳು, ಮಲ ಮೂತ್ರಗಳ ವಿಸರ್ಜನೆಯ ಅವಯವಗಳು ಮುಂತಾದವುಗಳನ್ನು ಧಾರ್ಮಿಕ ತತ್ವಗಳೆಂದು ಪರಿಗಣಿಸುವುದೆಂದರೆ, ಊಹಿಸಲೂ‌ ಸಾಧ್ಯವಿಲ್ಲ.
ಇಂತಹ ಅಚ್ಚರಿಗಳ ಮೇಲಚ್ಚರಿಯಾಗಿ ಈ‌ ವಚನ ಸಾರುತ್ತದೆ ಜ್ಞಾನೇಂದ್ರಿಯಗಳಿಗೂ, ಕರ್ಮೇಂದ್ರಿಯಗಳಿಗೂ ಬೇಧವಿಲ್ಲ ಎಂದು. ಅದರಲ್ಲಿ ಕಿವಿಗೂ ವಾಕ್ ಗೂ ಬೇಧವಿಲ್ಲ, ಕೇಳುವ ಶಬ್ದ, ಆಡುವ ಮಾತು ಒಂದೇ ಸ್ವರೂಪದ್ದು ಎಂದು ಗುರುತಿಸುವುದು, ಅವೆರಡರ ನಡುವಣ ಸಂಬಂಧ ನಿತ್ಯವೂ ಗಮನಕ್ಕೆ ಬರುವುದರಿಂದ  ಸಹಜ ಎಂದು ಭಾವಿಸಬಹುದು. ಆದರೆ ರುಚಿಯನ್ನು ನೋಡುವ ನಾಲಿಗೆ ಮತ್ತು ಮೂತ್ರ ವಿಸರ್ಜಿಸುವ, ಲೈಂಗಿಕ ರಸಗಳನ್ನು ಒಸರುವ ಗುಪ್ತಾಂಗಗಳು ಇವುಗಳ ನಡುವೆ ಬೇಧವಿಲ್ಲ, ವಾಸನೆ ನೋಡುವ ಮೂಗಿಗೂ, ಮಲ ವಿಸರ್ಜನೆ, ಹೂಸಿನ ವಿಸರ್ಜನೆ ಮಾಡುವ ಗುದಕ್ಕೂ ವ್ಯತ್ಯಾಸವಿಲ್ಲ ಎಂಬ ಮಾತು ಇಂದು ಕೂಡಾ ಯಾರಾದರೂ ಕೇವಲ ಮಾತಿಗಾಗಿ ಹೇಳಲೂ ಕೂಡಾ ಎಂಟೆದೆ ಬೇಕು. ಆದರೆ ಧರ್ಮದ ಪ್ರತಿಪಾದಕರು ತಮ್ಮ ಧಾರ್ಮಿಕ ವಿಚಾರಗಳನ್ನು ಪ್ರಸ್ತುತ ಪಡಿಸುವಾಗ ಹಾಗೇ ಹೇಳುವುದೆಂದರೆ !

ಇಂತಹವುಗಳನ್ನು ಕುಶಲ ಕರ್ಮಿಗಳೂ ಸೇರಿದ ಸಾಮಾನ್ಯ ಜನರು ಅರಗಿಸಿಕೊಳ್ಳುವಂತೆ, ಅಂಗೀಕರಿಸುವಂತೆ ಮುಂದಿಟ್ಟದ್ದು ವಚನ ವಿಚಾರಧಾರೆಯ ಮಹತ್ವ. ಇಂತಹ ಅಪೂರ್ವ ಚಿಂತನೆಗಳಿಂದಾಗಿ ಮಲ ಬಾಚುವವರೂ, ಚಪ್ಪಲಿ ಮಾಡುವವರೂ ಅಸ್ಪೃಶ್ಯರೆಂದು ಭಾವಿಸುವ ಭಾವನೆಯನ್ನೇ ಮನಸ್ಸು, ಚಿಂತನೆ ಮತ್ತು ನಿತ್ಯ ಬದುಕಿನಿಂದ ಹೊರಹಾಕಲು ಸಾಧ್ಯವಾಯಿತು.

ಈ ಅಮೋಘ ಚಿಂತನೆಗೆ ಅವರಿಗೆ ಆಧಾರ ಒದಗಿಸಿದ್ದು ಪಂಚ ವಿಂಶತಿ (ಇಪ್ಪತ್ತೈದು) ತತ್ವಗಳು, ಅವುಗಳನ್ನೊಳಗೊಂಡ ಮೂವತ್ತಾರು ತತ್ವಗಳು.

ಪಂಚವಿಂಶತಿ ತತ್ವಗಳು ಅಥವಾ ಇಪ್ಪತ್ತೈದು ತತ್ವಗಳು ಎಂಬ ಪದಗಳನ್ನು 40 ಕ್ಕೂ ಹೆಚ್ಚು ವಚನಕಾರರು 110 ವಚನಗಳಲ್ಲಿ ಬಳಸಿದ್ದಾರೆ. ಮೂವತ್ತಾರು ತತ್ವಗಳು ಎಂಬ ಪದಗಳು ಹಾಗೆಯೇ 34 ಕ್ಕಿಂತ ಹೆಚ್ಚು ವಚನಕಾರರು 96 ವಚನಗಳಲ್ಲಿ ಬಳಸಿದ್ದಾರೆ. (ವಚನ ಸಂಚಯ ಎಂಬ ಜಾಲತಾಣದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅನ್ವೇಷಣೆ ಮಾಡಲು ಒದಗಿಸಿದ ವಿಶೇಷ ಅವಕಾಶ ಬಳಸಿಕೊಂಡು ಮಾಡಿದ ಲೆಕ್ಕಾಚಾರ. vachana.sanchaya.net/vachanas)

ಮೇಲೆ ಉಲ್ಲೇಖಿಸಿದ ಚನ್ನಬಸವಣ್ಣನವರಲ್ಲದೆ  ಬಸವಣ್ಣ, ಅಲ್ಲಮ ಪ್ರಭು, ಸಿದ್ಧಾರಾಮಣ್ಣ , ಅಕ್ಕ ಮಹಾದೇವಿ ಮೊದಲಾದ ಪ್ರಖ್ಯಾತರಲ್ಲದೆ ಉರಿಲಿಂಗ ಪೆದ್ದಿ, ಹಡಪದಪ್ಪಣ್ಣಗಳ ಪುಣ್ಯ ಸ್ತ್ರೀ ಲಿಂಗಮ್ಮ, ಮೋಳಿಗೆಯ ಮಾರಯ್ಯ, ಅಂಬಿಗರ ಚೌಡಯ್ಯ, ವೈದ್ಯ ಸಂಗಣ್ಣ ಮೊದಲಾದನೇಕ ವಚನಕಾರರು ಈ ತತ್ವಗಳ ಉಲ್ಲೇಖ ಮಾಡಿದ್ದಾರೆ. ಹಲವು ವಚನಗಳಲ್ಲಿ ಈ ತತ್ವಗಳನ್ನು ವಿವರವಾಗಿ ಮಂಡಿಸಲಾಗಿದೆ. ಬೆಡಗಿನ ವಚನಗಳಲ್ಲಂತೂ ಈ ತತ್ವಗಳು ಅವುಗಳನ್ನು ಸೂಚಿಸುವ ಸಂಖ್ಯೆಗಳಾಗಿ ವಿವಿಧ ಬಗೆಯ ಒಡಪಾಗಿ ನಮೂದಾಗಿವೆ. ಅಲ್ಲಿ ಸಾಮಾನ್ಯವಾಗಿ ಐದು ಎಂದರೆ ಪಂಚಭೂತ ಅಥವಾ ಐದು ಜ್ಞಾನೇಂದ್ರಿಯ, ಅಥವಾ ಕರ್ಮೇಂದ್ರಿಯ, ಮೊದಲಾದ ಅರ್ಥ ನೀಡುತ್ತವೆ. ನಾಲ್ಕು ಎಂದರೆ ಚಿತ್ತ, ಬುದ್ಧಿ, ಮನಸ್ಸು, ಅಂಹಂ ಎಂಬ  ಅಂತಃಕರಣ ಚತುಷ್ಟಯ ಎಂದೂ, ಇಪ್ಪತ್ತೈದು ಎಂದರೆ ಪಂಚವಿಂಶತಿ ತತ್ವಗಳು ಎಂದೂ ಮೂವತ್ತಾರು ಎಂದರೆ ಮೂವತ್ತಾರು ತತ್ವಗಳೆಂದು ಅರ್ಥ ಮಾಡಿಕೊಂಡು ಅಲ್ಲಿನ‌ ಬೆಡಗನ್ನು ಬಿಡಿಸಿಕೊಳ್ಳಬೇಕು.

ಅದಕ್ಕೆ ಈ ಉದಾಹರಣೆಗಳನ್ನು ಗಮನಿಸಿ :
ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನರಿತು ಮೂವತ್ತಾರು ವೃಕ್ಷಂಗಳ ಮೇಲೆ
ಹಣ್ಣೊಂದೆ ಆಯಿತ್ತು ಕಾಣಾ
ಸಿದ್ಧರಾಮಣ್ಣನವರ ವಚನಗಳು ಸಂಖ್ಯೆ 759.
ಒಂದು ಊರಿಗೆ ಒಂಬತ್ತು ಬಾಗಿಲು,
ಆ ಊರಿಗೆ ಐವರು ಕಾವಲು,
ಆರು ಮಂದಿ ಪ್ರಧಾನಿಗಳು,
ಇಪ್ಪತ್ತೈದು ಮಂದಿ ಪರಿವಾರದವರು ….
ಹಡಪದ ಅಪ್ಪಣ್ಣಗಳ ಪುಣ್ಯಸ್ಯ ಲಿಂಗಮ್ಮ. ವಚನ ಸಂಪುಟ 5 ವಚನ ಸಂಖ್ಯೆ 1308.
ವಚನಗಳಲ್ಲಿ ಇಪ್ಪತ್ತೈದು ತತ್ವಗಳ ವಿವರಣೆ ಮತ್ತಷ್ಟು ವಿಸ್ತಾರವಾಗಿ ದೇಹದ ಒಳ ಅಂಗಗಳು, ನಾಡಿ, ವಾಯುಗಳೆಂಬ ಕ್ರಿಯೆಗಳನ್ನೂ ಒಳಗೊಂಡಿದೆ.
” ಪ್ರಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚ ತತ್ವದ ವಿವರಮಂ ಪೇಳ್ವೆ :
ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇದಸ್ಸು ಮಜ್ಜೆ ಎಂಬ ಸಪ್ತ ಧಾತುವಿನ ಇರವು
ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚ ಜ್ಞಾನೇಂದ್ರಿಯಗಳಿಂದ ಶರೀರವೆನಿಸಿಕೊಂಬುದು.
ಶಬ್ದ ರೂಪು ಗಂಧ ರಸ ಸ್ಪರ್ಶ ಎಂಬ ಪಂಚ ವಿಷಯಗಳು
ವಾಕು ಪಾಣಿ ಪಾದ ಪಾಯು ಗುಹ್ಯವೆಂಬೀ ಕರ್ಮೇಂದ್ರಿಯಗಳು
ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು”
ಇವುಗಳ ಜೊತೆಗೆ ಈ ವಚನ  ದಶವಾಯು, ದಶನಾಡಿಗಳನ್ನೂ ಹೆಸರಿಸುತ್ತದೆ. ವಚನಗಳ ಈ ವಿವರಣೆಗಳು ಇದೊಂದು ಅಂದಿನ ವೈದ್ಯಕೀಯ ವಿವರಣೆಯೋ , ಅಂದು ವ್ಯಾಪಕವಾಗಿ ಪಸರಿಸಿದ್ದ ತಾಂತ್ರಿಕ ಪಂಥದ ತತ್ವಗಳೋ ಅಥವಾ ಯೋಗ ಶಾಸ್ತ್ರದ ವಿವರಣೆಯೋ ಎನ್ನುವಂತಿವೆ.
ಸರ್ವಾಂಗವೂ ಲಿಂಗವೇ –
ಬಸವಣ್ಣನವರು
ಎನ್ನ‌ ಕಾಲೇ ಕಂಬ
ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ ಎಂದು ಬಿಂಬಿಸಿದ ವಚನ ಬಹಳ ಪ್ರಸಿದ್ಧ.
ಹಲವು ವಚನಕಾರರು  ದೇಹವೇ ದೇಗುಲ ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ. ದೇಹದ ಅಂಗಗಳನ್ನು ಧಾರ್ಮಿಕ ತತ್ವಗಳನ್ನಾಗಿಸಿದ ಮೇಲೆ ದೇಹವೇ ದೇಗುಲ ಎಂಬ ಭಾವನೆ ಮೊಳೆತು ಜನಪ್ರಿಯವಾದದ್ದು ಸಹಜವೇ.  ಇದರ ಫಲವಾಗಿ ಎಲ್ಲರೂ ಜಾತಿ ಲಿಂಗ ಬೇಧವಿಲ್ಲದೆ ಅಂಗದ ಮೇಲೆ‌ ಲಿಂಗ ಧರಿಸುವ ಇಷ್ಟ ಲಿಂಗ ಪದ್ಧತಿ ಬೆಳೆಯಿತು.

ಇದು ಅಂಗಗಳನ್ನು ತತ್ವಗಳನ್ನಾಗಿ ಪರಿಗಣಿಸಿದ್ದರ ಮುಂದುವರಿಕೆ ಎನ್ನಬಹುದು. ಆದರೆ ವಚನಕಾರರು ಇನ್ನೂ ಮುಂದುವರೆದಿದ್ದಾರೆ. ಅವರು ದೇಹವೇ ದೇಗುಲ ಮಾತ್ರವಲ್ಲ ದೇಹದ ಎಲ್ಲ ಅಂಗಗಳೂ ಲಿಂಗಗಳೇ. ಒಟ್ಟಿನಲ್ಲಿ ಸರ್ವಾಂಗವೂ ಲಿಂಗವೇ ಎಂಬ ನಿಲುಮೆಗೆ ಬಂದರು. ದೇಹದ ಪ್ರತಿ ಅಂಗವೂ ದೈವದ ಸ್ಥಾನವೇ ಎಂದು ಭಾವಿಸಿದರು.

ಇದನ್ನು ಇಂದಾದರೂ ಊಹೆ ಮಾಡಿಕೊಳ್ಳಲು ಸಾಧ್ಯವೇ ?
“ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು” ಇದು ಬಹಳಷ್ಟು ವಚನಗಳ ಅಂತರಂಗದಲ್ಲಿ ಹರಿವ ಭಾವನೆ.‌ ದೇಹದ ವಿವಿಧ ಭಾಗಗಳನ್ನು ಹೆಸರಿಸುತ್ತಾ ತಲೆಯಿಂದ ಆರಂಭಿಸಿ ಹಣೆ, ಬಲಗಿವಿ ಎಡಗಿವಿ ಎಡ ಬಲ ಕಣ್ಣು, ಕತ್ತು, ಭುಜ, ಮೊಳಕೈ, ಮುಂಗೈ ಅಂಗೈ, ಹೃದಯ, ಬೆನ್ನು, ನಾಭಿ ಗುಹ್ಯ ಗುದ ತೊಡೆ, ಕಾಲು, ಪಾದ ಉಂಗುಷ್ಟ, ಅಂಗಾಲು ಎಲ್ಲ ಸ್ಥಾನಗಳಲ್ಲಿಯೂ ವಿವಿಧ ಹೆಸರಿನ ರುದ್ರರಿದ್ದಾರೆ ಎಂದು ಹೆಸರಿಸಿದ್ದಾರೆ.

ಈ ರೀತಿ ಹೆಸರಿಸುವುದರ ವಿಲಕ್ಷಣ ರೀತಿ ಎಂದರೆ “ಗುಹ್ಯದಲ್ಲಿ ವಿಷ್ಣು ಪ್ರಿಯನೆಂಬ ರುದ್ರನಾಗಿ ನಿಂದಾತ ಬಸವಣ್ಣನಯ್ಯಾ, ಗುದದಲ್ಲಿ ಬ್ರಹ್ಮ ಪ್ರಿಯನೆಂಬ ರುದ್ರನಾಗಿ ನಿಂದಾತ ಬಸವಣ್ಣನಯ್ಯಾ” ಎನ್ನುತ್ತದೆ ಒಂದು ವಚನ. ಹೀಗೆ ಗುದ, ಗುಹ್ಯಗಳು ರುದ್ರನ ಅವಾಸ ಸ್ಥಾನ, ಬಸವಣ್ಣನ ಆವಾಸ ಸ್ಥಾನ ಎಂದು ಹೆಸರಿಸುವುದು ಯಾವುದೇ ಅಂಗ ಅಸಹ್ಯಕರವಲ್ಲ. ಯಾವುದೇ ಅಂಗ ಬೇರಾವುದೇ ಅಂಗಕ್ಕಿಂತ ಕೀಳಲ್ಲ ಎಂಬ ಸಮಾನತಾ ತತ್ವ ಇವುಗಳಲ್ಲಿಯೂ  ಮೆರೆದಿದೆ.
ಮತ್ತೊಂದು ವಚನ
“ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದೆಡೆ :
ಶ್ರೀ ಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಗಳಿಂದ ಪ್ರಕಾಶಿಸುತ್ತಿಹುದು.” ಎಂದು ದೇಹದ ವಿವಿಧ ಅಂಗಗಳು ಲಿಂಗವಾಗುವ ಪರಿಯ ಬಗ್ಗೆ ವಿವರಿಸುತ್ತದೆ.

ಕೇವಲ ಅಂಗ ತತ್ವಗಳನ್ನು‌ ಮಾತ್ರವಲ್ಲ ಸಪ್ತ ಧಾತುಗಳೆಂದು ಹೆಸರಿಸುವ ದೇಹದೊಳಗಿನ ಅಂಗಾಂಶಗಳನ್ನು (tissues) ಕೂಡಾ ಲಿಂಗಗಳೆಂಬ ಭಾವನೆಯನ್ನು ಮೂಡಿಸುತ್ತದೆ ಅದೇ ವಚನದ ಮುಂದುವರಿಕೆ :
” ತ್ವಕ್ ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ,
ಮಾಂಸಮಯವಾಗಿಹುದು ಮಕಾರ,
ಮೇಧೋಮಯವಾಗಿಹುದು ಶಿಕಾರ,
ಅಸ್ಥಿಮಯವಾಗಿಹುದು ವಾಕಾರ,
ಮಜ್ಜಾಮಯವಾಗುಹುದು ಯಕಾರ,
ಇಂತೀ ಷಡ್ಧಾತುವೇ ಷಡಕ್ಷರಮಯವಾಗಿ, ಅವೇ ಲಿಂಗಗಳಾಗಿ,
ಒಳಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು “….
ದೇಹದೊಳಗಳ ಮೂಳೆ,ಮಾಂಸ, ರಕ್ತ,ಕೊಬ್ಬು ಮೆದುಳುಗಳೆಲ್ಲ ನಮಃ ಶಿವಾಯ ಎಂಬ ರೂಪಾಗುತ್ತವೆ ಎಂಬುದು ಈ ವಚನದ ಭಾವ.
ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ, ಸಿದ್ಧರಾಮಣ್ಣನವರೂ ಸೇರಿದಂತೆ ಹಲವು ಹತ್ತು ವಚನಕಾರರು ಸರ್ವಾಂಗವೆಲ್ಲವೂ ಲಿಂಗ ಎಂಬ ಭಾವನೆಯನ್ನು    ತಮ್ಮ ವಚನಗಳಲ್ಲಿ ವಿವಿಧ ರೂಪದಲ್ಲಿ ಬಿಂಬಿಸಿದ್ದಾರೆ. 

ಹೀಗೆ ಅಂಗಗಳು ಮಾತ್ರವಲ್ಲದೆ ಅಂಗಾಂಶಗಳೂ ಲಿಂಗವೆಂದು ಪರಿಗಣಿಸಿದುದಲ್ಲದೆ ಅವುಗಳ ‘ಸಂಚವ’ – ಅವುಗಳ ರಚನೆ ,ಕಾರ್ಯವನ್ನು ತಿಳಿಯಬೇಕೆನ್ನುತ್ತಾಳೆ, ಹಡಪದ ಅಪ್ಪಣ್ಣಗಳ ಪುಣ್ಯ ಸ್ತ್ರೀ ಲಿಂಗಮ್ಮ :
“ಕಾಯವೆಂಬ ಕದಳಿಯ ಹೊಕ್ಕು
ಜೀವಪರಮರ ನೆಲೆಯನರಿದು,
ರಸ,ರುಧಿರ,ಮಾಂಸ,ಮಜ್ಜೆ,ಮಿದುಳು,ಅಸ್ಥಿ,ಶುಕ್ಲ
ಈ ಸಪ್ತ ಧಾತುಗಳ ಸಂಚವ ತಿಳಿದು …”
ಬಾಲಸಂಗಯ್ಯ ಎಂಬ ಶರಣನ ಮತ್ತೊಂದು ವಚನ ಈ ಸಪ್ತ‌ಧಾತುಗಳು ಒಂದರಿಂದ ಮತ್ತೊಂದು ವಿಕಾಸಗೊಂಡ ಪರಿಯನ್ನು ಆಸಕ್ತಿಕರವಾಗಿ ವಿವರಿಸುತ್ತದೆ : 
ಇನ್ನು ಪಿಂಡದ ಉತ್ಪತ್ಯಮೆಂತೆಂದೊಡೆ :
ಈ ಪೃಥ್ವಿಯಲ್ಲಿ ಅನ್ನ ಉತ್ಪತ್ಯವಾಯಿತ್ತು,
ಆ ಅನ್ನದಲ್ಲಿ ರಸ ಉತ್ಪತ್ಯವಾಯಿತ್ತು,
ಆ ರಸದಲ್ಲಿ ರುಧಿರ ಉತ್ಪತ್ಯವಾಯಿತ್ತು,
ಆ ರುಧಿರದಲ್ಲಿ ಮಾಂಸ ಉತ್ಪತ್ಯವಾಯಿತ್ತು,
ಆ ಮಾಂಸದಲ್ಲಿ ಮೇದಸ್ಸು ಉತ್ಪತ್ಯವಾಯಿತ್ತು,
ಆ ಮೇದಸ್ಸಿನಲ್ಲಿ ಅಸ್ಥಿ ಉತ್ಪತ್ಯವಾಯಿತ್ತು,
ಆ ಅಸ್ಥಿಯಲ್ಲಿ ಮಜ್ಜೆ ಉತ್ಪತ್ಯವಾಯಿತ್ತು,
ಆ ಮಜ್ಜೆಯಲ್ಲಿ ಶುಕ್ಲ ಉತ್ಪತ್ಯವಾಯಿತ್ತು. “
ದೇಹದೊಳಗಿನ‌ ಅಂಗಾಂಶಗಳು ವಿಕಾಸಗೊಳ್ಳುವ ಈ ಪರಿ ಗರ್ಭದೊಳಗಣ ಭ್ರೂಣ ವಿವಿಧ ಹಂತಗಳಲ್ಲಿ ವೃದ್ಧಿಯಾಗುತ್ತಾ ಬರುವ ವಿಧಾನವನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಫಲ ಎಂಬಂತೆ ಕಾಣುತ್ತದೆ.

ಅಂಗಾಂಶಗಳ ವಿಕಾಸದ ಬಗ್ಗೆ ಮಾತ್ರವಲ್ಲ,  ಶರಣರ ವಚನಗಳು ತಮ್ಮ ಅಂತರಾಳದಲ್ಲಿ ಪಂಚವಿಂಶತಿ ಅಂಗತತ್ವಗಳ ವಿಕಾಸವನ್ನೂ ಹುದುಗಿಸಿಕೊಂಡಿವೆ. ಪಂಚಭೂತಗಳು, ಪಂಚ ತನ್ಮಾತ್ರೆಗಳು, ಪಂಚ ಜ್ಞಾನೇಂದ್ರಿಯಗಳು, ಅಂತಃಕರಣ ಚತುಷ್ಟಯಂಗಳು, ಪಂಚ ಕರ್ಮೇಂದ್ರಿಯಗಳು ಇವುಗಳೆಲ್ಲ ಒಂದರಿಂದ ಮತ್ತೊಂದು ಪಂಚೀಕರಣ ಎಂಬ ವಿಧಾನದಲ್ಲಿ ವಿಕಾಸವಾದ ಕ್ರಿಯೆಯನ್ನು ತಿಳಿಸುತ್ತವೆ.
ಇದೊಂದು ಆದಿಮ ವಿಕಾಸವಾದ. ಪ್ರತಿಯೊಂದು ಅಂಗವನ್ನೂ ಸೃಷ್ಟಿ ಕರ್ತನೊಬ್ಬ ತಾನೊಬ್ಬ ಶಿಲ್ಪಿ ಎಂಬಂತೆ ಸೃಷ್ಟಿಸಿದ ಎಂಬ ಬಹು ಜನಪ್ರಿಯವಾದ ನಂಬಿಕೆಗೆ ಬಹಳ ಭಿನ್ನವಾದ ಈ ವಿಕಾಸವಾದದ ಬಗ್ಗೆ ಮುಂದಿನ ಲೇಖನದಲ್ಲಿ.

ಈ ವಿಕಾಸವಾದದ ಒಂದು ಅವಶ್ಯಕ ತತ್ವವಾಗಿ ಸಾವು ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆಯೂ ವಚನಕಾರರು ತಮ್ಮದೇ ತಿಳುವಳಿಕೆಯನ್ನು ರೂಪಿಸಿಕೊಂಡಿದ್ದಾರೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

February 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: