ಸುಗತ ಬರೆಯುತ್ತಾರೆ: ಲಿಂಕನ್ ಎಂಬ ಗುಂಗಿನ ಕತೆ

ಸುಗತ ಶ್ರೀನಿವಾಸರಾಜು

ವಿಜಯ ಕರ್ನಾಟಕದಿಂದ

ಆಸ್ಕರ್ ಪ್ರಶಸ್ತಿ ಸಮಾರಂಭದ ಕೆಲವು ದಿನಗಳ ಮುಂಚೆ ನಾನು ‘ಲಿಂಕನ್’ ಸಿನೆಮಾ ನೋಡಿದೆ. ಇದು ಅಮೇರಿಕದ 16ನೆಯ ಅಧ್ಯಕ್ಷ ಅಬ್ರಹಾಂ ಲಿಂಕನ್‌ನ (1809 ? 1865) ಅಧ್ಯಕ್ಷಾವಧಿಯ ಚಾರಿತ್ರಿಕ ಘಟ್ಟದ ಸುತ್ತ ಹೆಣೆದಿರುವ ಸಿನೆಮಾ. ತೆರೆಯ ಮೇಲೆ ಕಾಣುವ ಲಿಂಕನ್‌ನ ಮಾತಿನ ಮದುಗತಿಯನ್ನು, ಧಾವಂತವಿಲ್ಲದ ನಡೆಯನ್ನು ಹೋಲುವ ಹಿರಿಯರಾದ ಸರ್ದಾರ್ ಚಿರಂಜೀವಿ ಸಿಂಘ್ ನನ್ನ ಜೊತೆಯಲ್ಲಿದ್ದರು. ಆ ಸಿನೆಮಾ ನೋಡನೋಡುತ್ತ, ನೋಡಿದ ಮೇಲೂ ಒಂದು ಗುಂಗಿಗೆ ಸಿಕ್ಕಿಕೊಂಡೆ. ಒತ್ತಡದ ಬದುಕನ್ನು ಬದುಕುವ, ನಡೆಯಬೇಕಾದ ಜಾಗದಲ್ಲೆಲ್ಲಾ ಓಡುವ, ಓಡಿ ಮುಗ್ಗರಿಸುವ ನಮಗೆ, ಗುಂಗಿಗೆ ಬೀಳುವುದು, ಇಷ್ಟಪಟ್ಟ ವಿಚಾರದೊಂದಿಗೆ, ಪ್ರೀತಿಸುವವರೊಂದಿಗೆ ಒಂದು ಕಲ್ಪಿತ ಅನಂತತೆಯಲ್ಲಿ ತೇಲಾಡುವುದು ಈಚಿನ ದಿನಗಳಲ್ಲಿ ಬಹಳ ದುಬಾರಿಯಾದ ಸಂಗತಿ.

ಲಿಂಕನ್‌ನ ವ್ಯಕ್ತಿತ್ವದ ಪ್ರಭೆ ಯಾರನ್ನಾದರೂ ಗುಂಗಿಗೆ ತಳ್ಳದೆ ಇರದು. ಬಹಳ ಹಿಂದೆ, ಮೊದಲ ಬಾರಿಗೆ ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ ಸಿನೆಮಾ ನೋಡಿದಾಗ, ಮತ್ತೆ ಅನೇಕ ಬಾರಿ ಅದು ಚಿಕ್ಕಪರದೆಯ ಮೇಲೆ ಪ್ರಸಾರಗೊಂಡಾಗ, ಇಂತಹುದೇ ಆದ ಒಂದು ಗುಂಗಿಗೆ ಬಿದ್ದದ್ದು ಬಹಳ ತಾಜಾ ನೆನಪು. ದಶಕಗಳ ಹಿಂದೆ, ಎಂದೂ ಚಿತ್ರಮಂದಿರಕ್ಕೆ ಹೋಗದ ನನ್ನ ಪೋಲಿಸ್ ಅಧಿಕಾರಿ ತಾತ, ‘ಗಾಂಧಿ’ ಸಿನೆಮಾ ನೋಡಿ ಬಂದು ಅನೇಕ ದಿನ ತಮ್ಮ ಬೆತ್ತದ ಕುರ್ಚಿಯ ಮೇಲೆ ಸ್ಥಂಭೀಭೂತರಾಗಿ ಕೂತಿರುತ್ತಿದ್ದರು. ಗೋಡೆ ದಿಟ್ಟಿಸುತ್ತಿದ್ದ ಅವರ ಕಣ್ಣುಗಳಿಂದ ಅನೇಕ ಬಾರಿ ನೀರು ಜಿನುಗುತ್ತಿದ್ದದ್ದು ಕಂಡು ನನಗೆ ತುಂಬ ಸೋಜಿಗವಾಗಿತ್ತು. ಅವರು ಕೊಂಚ ಸುಧಾರಿಸಿಕೊಂಡ ಮೇಲೆ, ಪ್ರತಿ ಸಂಜೆ ರಾಮ ಭಜನೆಯೊಂದಿಗೆ ಗಾಂಧಿಗೆ ಪ್ರಿಯವಾದ ‘ವೈಷ್ಣವ ಜನತೋ…’ ಹಾಡುವ ಪರಿಪಾಠವನ್ನು ಮನೆಯ ಮಕ್ಕಳಿಗೆ ಕಡ್ಡಾಯ ಮಾಡಿದ್ದರು.
ಸಿನೆಮಾ ನೋಡುವವರಿಗೆ ಮಾತ್ರವಲ್ಲ, ಚರಿತ್ರೆಯ ದಂತಕತೆಗಳಾದ ಈ ದೈತ್ಯ ವ್ಯಕ್ತಿತ್ವಗಳೊಳಗೆ ಹೊಕ್ಕು, ಅವರ ಪಾತ್ರವನ್ನು ಪರದೆಯ ಮೇಲೆ ನಿರ್ವಹಿಸುವ ನಟರಿಗೂ ಈ ಗುಂಗಿನ ಜಾಡು ತಪ್ಪಿದ್ದಲ್ಲ. ಲಿಂಕನ್ ಪಾತ್ರಕ್ಕಾಗಿ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಗಳಿಸಿದ ಮರುಗಳಿಗೆ ಡೇನಿಯಲ್ ಡೇ-ಲೆವಿಸ್ ಆಡಿದ ಮಾತುಗಳನ್ನು ಕೇಳಿಸಿಕೊಳ್ಳಿ: ”ನನ್ನ ಮುಂದೆ ಈಗ ಯಾವ ಪಾತ್ರಗಳೂ ಇಲ್ಲ. ನಾನು ಒಂದೆರಡು ವರುಷ ಯಾವುದೇ ಪಾತ್ರ ನಿರ್ವಹಿಸಬಾರದು ಎಂದು ತೀರ್ಮಾನಿಸಿದ್ದೇನೆ. ಈ ಲಿಂಕನ್ ಪಾತ್ರವನ್ನು ನಾನು ಎಂದೂ ಮೀರದೆ ಹೋಗಬಹುದು ಎಂಬ ಭಯ ನನಗಿದೆ. ನಾನು ಮತ್ತೊಂದು ಪಾತ್ರ ನಿರ್ವಹಿಸಲೇಬೇಕಾದ ಸಂದರ್ಭದಲ್ಲಿ, ಆ ಪಾತ್ರ ಯಾವುದಾಗಿರಬೇಕು ಎಂಬುದು ಸದ್ಯಕ್ಕೆ ನನ್ನ ಊಹೆಗೂ, ಕಲ್ಪನೆಗೂ ಮೀರಿದ್ದು.” ಗಾಂಧಿಯ ಪಾತ್ರಧಾರಿಯಾಗಿದ್ದ ಬೆನ್ ಕಿಂಗ್‌ಸ್ಲೇ ಕೂಡ ಹೀಗೇ ಒಂದು ಸಂದರ್ಶನದಲ್ಲಿ ಮಾತನಾಡಿದ್ದು ನೆನಪು. ‘ಗಾಂಧಿ’ ನಂತರ ಅವನು ಸ್ಪೀಲ್‌ಬರ್ಗ್‌ನ ‘ಶಿಂಡ್ಲರ್ಸ್ ಲಿಸ್ಟ್’ ನಂತಹ ದೊಡ್ಡ ಸಿನೆಮಾಗಳಲ್ಲಿ ನಟಿಸಿದರೂ ‘ಗಾಂಧಿ’ ಅವನನ್ನು ಬೆಂಬಿಡಲಿಲ್ಲ. ಭಕ್ತನ ಅನೇಕ ಪಾತ್ರಗಳಲ್ಲಿ ನಮ್ಮವರೇ ಆದ ರಾಜ್‌ಕುಮಾರ್ ಹೇಗೆ ಕಡೆಯವರೆಗೂ ಅವರ ಅಭಿಮಾನಿಗಳಿಗೆ ವಿನಮ್ರ ಭಕ್ತನ ಪ್ರತಿರೂಪವಾಗಿಯೇ ಉಳಿದರೋ, ಹಾಗೆಯೇ ಕಿಂಗ್‌ಸ್ಲೇ ಕೂಡ ಗಾಂಧಿ ಪ್ರಭಾವವಲಯವನ್ನು ಬಹಳ ಕಾಲ ಮೀರಲಾಗಲಿಲ್ಲ. ಅವನು ಪರದೆಯ ಮೇಲೆ ಯಾವುದೇ ಸಿನೆಮಾದ ಪಾತ್ರಧಾರಿಯಾಗಿ ಬಂದರೂ ನಾವು ಮೊದಲು ಪ್ರತಿಕ್ರಿಯಿಸುವುದು ‘ಗಾಂಧಿ ಬಂದ’ ಎಂದು. ‘ಇನ್‌ವಿಕ್ಟಸ್’ ಸಿನೆಮಾದಲ್ಲಿ ಮಂಡೇಲಾನ ಪಾತ್ರದಲ್ಲಿ ಕಾಣಿಸಿಕೊಂಡ ಮೋರ್ಗನ್ ಫ್ಹ್ರೀಮನ್ ನ ಪರದಾಟ ಇದಕ್ಕಿಂತ ಬೇರೆ ಇರಲಾರದು, ಆದರೆ ಆತನ ಮಾತು ನಾನು ಕೇಳಿಸಿಕೊಂಡಿಲ್ಲ.
ಯೋಚನೆ ಮಾಡುತ್ತಾ ಹೋದಂತೆ, ಆಳದಲ್ಲಿ, ನನ್ನ ಗುಂಗಿಗೆ ಕಾರಣವಾದದ್ದು ಡೇ-ಲೆವಿಸ್‌ನ ಪಾತ್ರಾಭಿನಯವಾಗಲಿ ಅಥವ ಸಿನೆಮಾ ಒಂದು ಕಲೆಯಾಗಿ ಸಷ್ಟಿಸುವ ಮೋಹಕತೆಯಾಗಲಿ ಅಲ್ಲ. ಬದಲಿಗೆ, ಅಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವಿಷಯ: ಕರಿಯರ ಗುಲಾಮಗಿರಿಯನ್ನು ಅಂತ್ಯಗೊಳಿಸಲು ಅಮೇರಿಕದ ಸಂವಿಧಾನಕ್ಕೆ ಐತಿಹಾಸಿಕ 13ನೆಯ ತಿದ್ದುಪಡಿಯನ್ನು ತರುವ ವಿಚಾರ ಮತ್ತು ಅದರ ಸುತ್ತ ನಡೆಯುವ ಚರ್ಚೆ, ನಾಟಕ, ದಗಲುಬಾಜಿತನ, ದ್ವೇಷ ಹಾಗೂ ಆಮಿಷದ ಆಟ. ಭಾರತದಲ್ಲಿ ಯಾವುದೇ ದೊಡ್ಡ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಸಂಯುಕ್ತ ಸರಕಾರವೊಂದು ಪಡುವ ಪಡಿಪಾಟಲನ್ನು ಅರಿತಿರುವ ನಮಗೆ ಇದಾವುದೂ ಹೊಸತಲ್ಲ. ಆದರೆ ಲಿಂಕನ್‌ನ ದಢ ನಂಬಿಕೆ, ರಾಜಕೀಯ ಚಾಣಾಕ್ಷ್ಯತನ ಮತ್ತು ಹಠವೆನ್ನಿಸಬಹುದಾದ ಖಚಿತತೆ ಅಚ್ಚರಿ ಹುಟ್ಟಿಸುತ್ತವೆ.
ಲಿಂಕನ್ ಕುರಿತು ಹೊರಬಂದಿರುವ ಅನೇಕ ಪುಸ್ತಕಗಳು, ಜೀವನ ಚರಿತ್ರೆಗಳನ್ನೂ ಒಳಗೊಂಡಂತೆ ಆತನ ಕುರಿತು ಎಲ್ಲರೂ ಒಪ್ಪುವ ಒಂದು ವಿಷಯ ಎಂದರೆ ಆತನ ಸಂಕೀರ್ಣ ವ್ಯಕ್ತಿತ್ವ. ‘ಲಿಂಕನ್ ಬಗೆಗಿನ ಪುಸ್ತಕಗಳ ಬಗ್ಗೆ ಹೇಳಬೇಕಾದ ಸ್ವಾರಸ್ಯಕರ ವಿಷಯವೆಂದರೆ, ಅಮೇರಿಕಾದ ವಾಷಿಂಗ್ಟನ್‌ನಲ್ಲಿರುವ ಫೋರ್ಡ್ ಥಿಯೇಟರ್ ಸೆಂಟರ್‌ನಲ್ಲಿ ಮೂರು ಮಹಡಿಯಷ್ಟು, ಮೂವತ್ತನಾಲ್ಕು ಅಡಿ ಎತ್ತರಕ್ಕೆ ಆತನ ಕುರಿತಾಗಿ ಬಂದಂತಹ ಸುಮಾರು ಹದಿನೈದು ಸಾವಿರ ಪುಸ್ತಕಗಳನ್ನು ಜೋಡಿಸಲಾಗಿದೆ. ಇದನ್ನು ‘ಲಿಂಕನ್ ಟವರ್’ ಎಂದು ಕರೆಯುತ್ತಾರೆ’. ನಾನು ಮೂರು ವರ್ಷಗಳ ಹಿಂದೆ ಓದಿದ ಡಾರಿಸ್ ಕೀಯರ್ನ್ಸ್ ಗುಡ್‌ವಿನ್‌ಳ ‘ಟೀಮ್ ಆಫ್ ರೈವಲ್ಸ್: ದಿ ಪೊಲಿಟಿಕಲ್ ಜೀನಿಯಸ್ ಆಫ್ ಅಬ್ರಹಾಂ ಲಿಂಕನ್’ ಎಂಬ ಪುಸ್ತಕದಲ್ಲಿ ಲಿಂಕನ್‌ನ ವ್ಯಕ್ತಿತ್ವದ ವೈರುಧ್ಯಗಳನ್ನು ಆಕೆ ಹೀಗೆ ಚಿತ್ರಿಸುತ್ತಾಳೆ: ”ಸರಳ ಆದರೆ ಸಂಕೀರ್ಣ, ಚಾಣಾಕ್ಷ್ಯ ಆದರೆ ಪಾರದರ್ಶಕ, ಮದು ಆದರೆ ಹಠವಾದಿ.” ಇವುಗಳ ಜೊತೆ ಆತ ಅತ್ಯುತ್ತಮ ವಾಗ್ಮಿ ಎಂಬುದನ್ನು ಮರೆಯಬಾರದು. ಆತ ಆಧುನಿಕ ದಷ್ಟಾಂತಗಳ ಮೂಲಕ ಮಾತನಾಡುತ್ತಿದ್ದ. ಇದು ಕೆಲವರಿಗೆ ಒಗಟಾಗಿ, ಹಲವರಿಗೆ ಹೊಳಹು ಆಗಿ ತೋರುತ್ತಿತ್ತು. ಆತ ಹೀಗಿದ್ದರಿಂದಲೇ ಬಹುಶಃ ಅವನ ಮಂತ್ರಿಮಂಡಲದಲ್ಲಿ ಆತನ ವಿರುದ್ಧ ನೇರವಾಗಿ ಅಧ್ಯಕ್ಷಗಿರಿಗೆ ಸೆಣಸಾಡಿದ ತುಂಬ ಪ್ರತಿಭಾವಂತರನ್ನು, ತೀಕ್ಷ್ಣಮತಿಗಳನ್ನು ಸೇರಿಸಿಕೊಂಡು, ಅವರನ್ನು ಸಂಭಾಳಿಸುವುದಲ್ಲದೆ, ಅವರ ನಡುವೆ ಉತ್ತಮನಾಗಿ ಬೆಳೆಯುತ್ತಾನೆ. ಅವರ ಗೌರವವನ್ನು ಸಂಪಾದಿಸುವುದಲ್ಲದೆ, ಗುಲಾಮಗಿರಿಗೆ ಅಂತ್ಯ ಹಾಡಿ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಖಾತ್ರಿಗೊಳಿಸುತ್ತಾನೆ. 2008ರಲ್ಲಿ ಅಮೇರಿಕದ ಮೊದಲ ಕರಿಯ ಅಧ್ಯಕ್ಷನಾದ ಬರಾಕ್ ಒಬಾಮ ಲಿಂಕನ್‌ನ ಈ ಮೇಲ್ಪಂಕ್ತಿಯನ್ನು ಮುಂದುವರಿಸಿ, ಆತನ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ಳನ್ನು ತನ್ನ ಮಂತ್ರಿಮಂಡಲದಲ್ಲಿ ವಿದೇಶಾಂಗ ಸಚಿವೆಯಾಗಿ ನೇಮಿಸುತ್ತಾನೆ. ಗುಡ್‌ವಿನ್ ಹೇಳುವ ಹಾಗೆ ಲಿಂಕನ್ ದಯೆ, ಸೂಕ್ಷ್ಮತೆ, ಅಂತಃಕರಣ, ಪ್ರಾಮಾಣಿಕತೆ ಮತ್ತು ಪರಾನುಭೂತಿಯ ತನ್ನ ಸಾಮರ್ಥ್ಯವನ್ನು ರಾಜಕೀಯದ ಮೂಲಸರಕಾಗಿ, ಅಸ್ತ್ರಗಳಾಗಿ ಬಳಸುತ್ತಾನೆ.
ಲಿಂಕನ್‌ನ ಮಾತಿನಲ್ಲಿ ಬದುಕನ್ನು ಪುಷ್ಟಿಗೊಳಿಸುವಂತಹ ಹಾಸ್ಯಪ್ರಜ್ಞೆ ಇತ್ತು ಎಂದು ಹೇಳುತ್ತಾರೆ. ಆದರೆ ಖಿನ್ನತೆಯ ವ್ಯಾಧಿ ಕೂಡ ಅಂಟಿಕೊಂಡಿತ್ತು ಎಂದು ಕೆಲವರ ಅಭಿಪ್ರಾಯ. ಇದು ಅವನ ವ್ಯಕ್ತಿತ್ವದ ವೈರುಧ್ಯದ ಅಧ್ಯಯನಕ್ಕೆ ಮತ್ತಷ್ಟು ಸಾಮಗ್ರಿ ಒದಗಿಸುತ್ತದೆ. ಗುಡ್‌ವಿನ್ ಪ್ರಕಾರ ಲಿಂಕನ್‌ಗೆ ಇದ್ದ ಖಿನ್ನತೆಯು ಅವನು ಅಧ್ಯಕ್ಷನಾಗುವ ಬಹಳ ಮುಂಚೆಯೇ ಇಲ್ಲವಾಗಿತ್ತು. ವಿಷಣ್ಣತೆ ಅಥವ ಮ್ಲಾನತೆ (melancholy) ಲಿಂಕನ್‌ನ ವ್ಯಕ್ತಿತ್ವದ ಸ್ಥಾಯಿಭಾವ. ಅವಳ ವಾದದ ಪ್ರಕಾರ: ”ಆತನಲ್ಲಿ ವಿಷಣ್ಣತೆಯ ಸ್ವಭಾವ ಮನೆಮಾಡಿತ್ತು. ಇದು ಆತನ ಬಾಲ್ಯದ ಬಳುವಳಿಯಾಗಿದ್ದಿರಬಹುದು. ವಿಷಣ್ಣತೆಗೂ, ಖಿನ್ನತೆಗೂ ವ್ಯತ್ಯಾಸ ಇದೆ. ವಿಷಣ್ಣತೆ ಕಾಹಿಲೆಯಲ್ಲ. ಯಾವುದೋ ಒಂದು ಕಾರಣದಿಂದ ಹುಟ್ಟುವಂತದ್ದೂ ಅಲ್ಲ. ಅದು ಒಬ್ಬರ ವ್ಯಕ್ತಿತ್ವದ ಭಾಗ. ಕಲಾವಿದರಲ್ಲಿ, ಬರಹಗಾರರಲ್ಲಿ ಇದು ಅವರ ಸಜನಶೀಲತೆಯ ಮೂಲಸೆಲೆ ಎಂದು ಗುರುತಿಸುವುದುಂಟು.” ಗುರುದತ್, ಮೀನಾಕುಮಾರಿಯವರ ಸಿನೆಮಾಗಳನ್ನು ನೋಡಿದವರಿಗೆ ಈ ವಿಷಣ್ಣತೆ ಅಥವ ಮ್ಲಾನ-ಭಾವ-ಸಂಚಾರ ಯಾವುದೆಂದು ಸುಲಭವಾಗಿ ಅರ್ಥವಾಗುತ್ತದೆ.
ಗುಲಾಮಗಿಯನ್ನು ತೊಡೆದುಹಾಕುವಂತಹ 13ನೆಯ ತಿದ್ದುಪಡಿ ಮಂಡಿತವಾಗುವುದು ಲಿಂಕನ್‌ನ ಅಧ್ಯಕ್ಷಾವಧಿಯ ಮೊದಲ ಅವಧಿ ಮುಗಿದು ಎರಡನೆಯ ಅವಧಿಗೆ ಕಾಲಿಡುವ ಮುನ್ನ. ಆಗ ಅಮೇರಿಕ ಸಂಯುಕ್ತ ಸಂಸ್ಥಾನವೇ ಛಿದ್ರಗೊಳ್ಳುವಂತಹ ಸನ್ನಿವೇಶ ಏರ್ಪಟ್ಟಿರುತ್ತದೆ. ಅಮೇರಿಕದ ಉತ್ತರ ರಾಜ್ಯಗಳು ಮತ್ತು ದಕ್ಷಿಣದ ಹನ್ನೊಂದು ರಾಜ್ಯಗಳ ನಡುವೆ ಅಂತರ್ಯುದ್ಧ ನಡೆಯುತ್ತಿರುತ್ತದೆ. ಹತ್ತಿಯನ್ನು ಹೇರಳವಾಗಿ ಬೆಳೆಯುತ್ತಿದ್ದ ಈ ಹನ್ನೊಂದು ರಾಜ್ಯಗಳು ವಿಭಜನೆಯ ಮಂತ್ರವನ್ನು ಜಪಿಸುತ್ತಿರುತ್ತವೆ. ಈ ಯುದ್ಧದ ಕೇಂದ್ರ ವಿಷಯವಾಗಿ ಕರಿಯರ ಗುಲಾಮಗಿರಿಯನ್ನು ಮುಂದುವರಿಸಬೇಕೇ, ಬೇಡವೇ ಎಂಬ ಪ್ರಶ್ನೆ ಎದುರಿಗಿರುತ್ತದೆ. ಲಿಂಕನ್ ಮತ್ತು ಅವನ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದ ಸಮಯದಲ್ಲಿ ಗುಲಾಮಗಿರಿಯ ಬಗ್ಗೆ ಒಂದು ತಟಸ್ಥ ನಿಲುವು ಹೊಂದಿರುತ್ತಾರೆ. ಗುಲಾಮಗಿರಿ ಇದ್ದ ಪ್ರಾಂತ್ಯಗಳಲ್ಲಿ ಅದನ್ನು ಮುಂದುವರಿಯಲು ಬಿಟ್ಟು ಬೇರೆ ಪ್ರಾಂತ್ಯಗಳಿಗೆ ಹರಡದಂತೆ ನೋಡಿಕೊಳ್ಳುವುದು ಅವರ ಧ್ಯೇಯವಾಗಿರುತ್ತದೆ. ಆದರೆ 1863ರ ಹೊತ್ತಿಗೆ, ಯುದ್ಧದ ರಣತಂತ್ರದ ಭಾಗವಾಗಿ, ಗುಲಾಮಗಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ‘ವಿಮೋಚನೆಯ ಘೋಷಣೆ’ಯನ್ನು (Emancipation Proclamatio)ಹೊರಡಿಸುತ್ತಾನೆ. ಈ ಘೋಷಣೆ ನಿಜಾರ್ಥದಲ್ಲಿ ಜಾರಿಗೆ ಬರಬೇಕಿದ್ದರೆ ಅಮೇರಿಕದ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿರುತ್ತದೆ. ನಮ್ಮಲ್ಲಿ ಇರುವ ಹಾಗೆ ಈ ತಿದ್ದುಪಡಿ ಸಾಧ್ಯವಾಗಬೇಕಾದರೆ ಅಮೇರಿಕದ ಎರಡೂ ಸಂಸದೀಯ ಮನೆಗಳ ಮೂರನೆಯ ಎರಡು ಭಾಗದಷ್ಟು ಸದಸ್ಯರು ಅದನ್ನು ಅಂಗೀಕರಿಸಬೇಕಾಗಿರುತ್ತದೆ. ಆದರೆ ಈ ಮಸೂದೆ ಮಂಡಿಸಿದ ಸಂದರ್ಭದಲ್ಲಿ (ಜನವರಿ 1865) ರಿಪಬ್ಲಿಕನ್ ಪಕ್ಷಕ್ಕೆ ಅಮೇರಿಕದ ಕೆಳಮನೆಯಲ್ಲಿ ಬಹುಮತ ಇರುವುದಿಲ್ಲ. ಚುನಾವಣೆ ಆಗಷ್ಟೆ ನಡೆದಿದ್ದ ಕಾರಣ ಮಾರ್ಚ್ ಮೊದಲ ವಾರದ ಹೊತ್ತಿಗೆ ಪಕ್ಷಕ್ಕೆ ಬಹುಮತ ಏರ್ಪಡುವುದು ಖಚಿತವಾಗಿರುತ್ತದೆ.
ಹೀಗಿದ್ದರೂ, ಲಿಂಕನ್ ತಾನು ಎರಡನೆ ಬಾರಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ಮತ್ತು ಕೆಳಮನೆಯಲ್ಲಿ ಬಹುಮತ ಏರ್ಪಡುವ ಮುನ್ನ ಗುಲಾಮಗಿರಿಯನ್ನು ಅಂತ್ಯಗೊಳಿಸುವ ಮಸೂದೆಯನ್ನು ಮಂಡಿಸಿ, ಗೆಲುವು ಸಾಧಿಸಬೇಕು ಎಂದು ಪಣ ತೊಡುತ್ತಾನೆ. ಅವನ ಹೆಂಡತಿ ಮತ್ತು ಸಹಚರರು ಈ ಸಾಹಸಕ್ಕೆ ಕೈಹಾಕುವುದು ಬೇಡ ಎಂದು ಸಲಹೆ ಇತ್ತರೂ ಅವನು ಅದನ್ನು ನಿರ್ಲಕ್ಷಿಸುತ್ತಾನೆ. ಅಮೇರಿಕದ ದಿಕ್ಕು ದೆಸೆಯನ್ನೇ ಬದಲಾಯಿಸುವ, ಲಕ್ಷಾಂತರ ಜನಕ್ಕೆ ಸ್ವಾತಂತ್ರ್ಯವನ್ನು ತರುವ ಈ ಮಸೂದೆಯು ‘ಒಂದು ಪಕ್ಷದ ಜಯ’ವಾಗಿ ಪರಿಗಣಿಸಲ್ಪಟ್ಟಲ್ಲಿ, ಅದು ಚರಿತ್ರೆಯ ಕಣ್ಣಲ್ಲಿ ತೆಳುವಾಗಿ ಕಾಣಿಸಿಕೊಳ್ಳುತ್ತದೆ; ಹಾಗಾಗಿ ಇದಕ್ಕೆ ರಿಪಬ್ಲಿಕನ್ಸ್ ಮತ್ತು ಡೆಮೋಕ್ರಾಟ್ಸ್ ಎರಡೂ ಪಕ್ಷಗಳ ಸಹಮತ (ಚಿಜಿಚ್ಟಠಿಜಿಚ್ಞ ಠ್ಠಟ್ಟಠಿ) ಇತ್ತು ಎಂದು ಮುಂದಿನ ಜನಾಂಗಳು ತಿಳಿಯುವುದು ಲಿಂಕನ್‌ಗೆ ಮುಖ್ಯವಾಗಿತ್ತು. ಈ ಹಠಕ್ಕೆ ಬಿದ್ದು ತನ್ನ ಸಹಚರರ ಮುಂದೆ ಹೀಗೆ ಹೇಳುತ್ತಾನೆ: ”ನಾನು ಅಮೇರಿಕಾದ ಅಧ್ಯಕ್ಷ. ಸಂವಿಧಾನ ನನಗೆ ಅಗಾಧವಾದ ಅಧಿಕಾರವನ್ನು ತೊಡಿಸಿದೆ. ಗುಲಾಮಗಿರಿಯನ್ನು ಅಂತ್ಯಗೊಳಿಸುವ ಈ ಮಸೂದೆ ಲಕ್ಷಾಂತರ ಜನರ ಭವಿಷ್ಯವನ್ನು ಒಮ್ಮೆಗೆಯೇ ಬದಲಿಸಿ ಬಿಡುತ್ತದೆ, ಎಲ್ಲ ಕಾಲಕ್ಕೂ ಬದಲಿಸಿ ಬಿಡುತ್ತದೆ. ಈಗ ಬಂದಿಯಾಗಿರುವ ಗುಲಾಮರ ಭವಿಷ್ಯ ಮಾತ್ರವಲ್ಲ, ಅವರಿಗೆ ಮುಂದೆ ಹುಟ್ಟಬಹುದಾದ ಮಕ್ಕಳ ಭವಿಷ್ಯವನ್ನೂ ನಿರ್ಧರಿಸುವ ಶಕ್ತಿ ಈ ಮಸೂದೆಗಿದೆ. ಇಂತಹ ಚಾರಿತ್ರಿಕ ಮಸೂದೆಗೆ ನೀವು ನನಗೆ ಕೆಲವು ಮತಗಳನ್ನು ತರಲಾರಿರೇ? ಈ ಮತಗಳನ್ನು ಹೇಗೆ ಹೊಂದಿಸುತ್ತೀರಿ ಎಂಬುದನ್ನು ನಾನು ನಿಮಗೇ ಬಿಡುತ್ತೇನೆ. ಆದರೆ, ನಿಮಗೆ ನೆನಪಿರಲಿ, ನಾನು ಅಮೇರಿಕದ ಅಧ್ಯಕ್ಷ. ನನ್ನ ಬಳಿ ಅಗಾಧವಾದ ಅಧಿಕಾರವಿದೆ. ಈ ಮತಗಳನ್ನು ನೀವು ನನಗೆ ತಂದೊಪ್ಪಿಸುತ್ತೀರಿ ಎಂಬ ನಂಬಿಕೆ ನನಗಿದೆ.”
‘ಅಗಾಧ ಅಧಿಕಾರ’ ಎಂಬ ಲಿಂಕನ್‌ನ ಮಾತು ಕೊಂಚ ಗಲಿಬಿಲಿಯನ್ನು ಉಂಟುಮಾಡುವುದು ಸಹಜ. ಆದರೆ, ಇದು ಅವನ ಅಹಂಕಾರದ ಮಾತಾಗಿರಲಿಲ್ಲ. ಅವನ ಮಾತಿನ ಅರ್ಥ ‘ನನ್ನ ಅಧಿಕಾರವನ್ನು ಬಳಸಿಯಾದರೂ ಸರಿ, ಈ ಮಸೂದೆಯನ್ನು ಗೆಲ್ಲಿಸಬೇಕು’ ಎಂಬುದು. ಅವನು ಹಾಗೇ ಮಾಡುತ್ತಾನೆ ಕೂಡ. ಅಡ್ಡಗೋಡೆಯ ಮೇಲೆ ಕುಳಿತಿದ್ದ ಡೆಮೋಕ್ರಾಟ್ ಪಕ್ಷದ ಪ್ರತಿನಿಧಿಗಳನ್ನು ಹಲವು ರೀತಿಯ ಆಮಿಷ ಒಡ್ಡಿ, ವೈಯಕ್ತಿಕ ಪಣತೊಟ್ಟು, ಮಸೂದೆಯ ಜಯವನ್ನು ಗಟ್ಟಿಗೊಳಿಸುತ್ತಾನೆ.
ಒಳ್ಳೆಯ ಕಾರ್ಯಕ್ಕಾಗಿ, ಸರ್ವಜನ ಹಿತಕ್ಕಾಗಿ ಅಧಿಕಾರ ಕೊಂಚ ಅಡ್ಡದಾರಿ ತುಳಿದರೂ ಪರವಾಗಿಲ್ಲ; ಧ್ಯೇಯ ದೊಡ್ಡದಾದಾಗ ಮಾರ್ಗವನ್ನು ಕೊಂಚ ಪಳಗಿಸಬೇಕಾದರೂ ಅದು ನೈತಿಕ ಹೊರೆಯಾಗುವುದಿಲ್ಲ ಎಂಬುದು ಲಿಂಕನ್‌ನ ನಂಬಿಕೆಯಾಗಿತ್ತು ಎಂದನಿಸುತ್ತದೆ. ಅವನು ಸತ್ತು ನಾಲ್ಕು ವರ್ಷಗಳ ನಂತರ ಹುಟ್ಟಿದ ಗಾಂಧಿಗೆ ‘ಮಾರ್ಗ’ ಬಹಳ ದೊಡ್ಡ ಸಂಗತಿಯಾಗಿ ಅವರ ಸಿದ್ಧಾಂತದಲ್ಲಿ ರೂಪುಗೊಳ್ಳುತ್ತದೆ.

‍ಲೇಖಕರು G

March 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Sumangala

    ಕಳೆದ ಭಾನುವಾರ ನೋಡಿದ ಲಿಂಕನ್ ಸಿನಿಮಾ ನನ್ನನ್ನೂ ಗುಂಗಿನಂತೆ ಆವರಿಸಿದೆ, ನನಗಿಂತ ಮೊದಲೇ ಡೌನ್ಲೋಡ್ ಮಾಡಿ ನೋಡಿದ್ದ ಮಗ ಡೇ-ಲೆವಿಸ್ ಕುರಿತು ಹೇಳುತ್ತಲೇ ಇದ್ದ. ನಿಜ, ಡೇ ಲೆವಿಸ್ ಅಭಿನಯ ಅದ್ಭುತವಾಗಿದೆ, ಲಿಂಕನ್ ಮತ್ತು ಅವ ಬೇರೆ ಎಂದೆನ್ನಿಸುವುದೇ ಇಲ್ಲ. ಹೆಚ್ಚಿನ ವೇಳೆ ತಲೆ ಬಗ್ಗಿಸಿಯೇ ಇರುವ, ಮೃದುಮಾತಿನ, ಆಗೀಗ ಹಾಸ್ಯ, ನಿದರ್ಶನಗಳ ಮೂಲಕ ಎದುರಿನವರನ್ನುಸ್ವಲ್ಪ ಗಲಿಬಿಲಿಗೆ ತಳ್ಳುವ ಲಿಂಕನ್ ಈ ಮಸೂದೆ ಗೆಲ್ಲುತ್ತಾನಾ ಎಂಬ ಅನುಮಾನ ಬಂದರೂ ಆತನ ನಿಲುವಿನಲ್ಲಿ, ಧ್ವನಿಯಲ್ಲಿ ಇರುವ ಖಾಚಿತ್ಯ, ಮಸೂದೆಯ ಕುರಿತು ಇರುವ ದೂರದೃಷ್ಟಿ, ಆ ದೃಢತೆಯನ್ನು ಪ್ರೇಕ್ಷಕನಿಗೆ ದಾಟಿಸುವಲ್ಲಿ ನಿರ್ದೇಶಕ ಮತ್ತು ಡೇ-ಲೇವಿಸ್ ಇಬ್ಬರೂ ಗೆದ್ದಿದ್ದಾರೆ. ಮಸೂದೆಯನ್ನು ಕೇವಲ ಆಡಳಿತ ಪಕ್ಷದ ಬಹುಮತದಿಂದ ಅನುಮೋದಿಸದೇ,ಎರಡೂ ಪಕ್ಷದ ಸಹಮತವಾಗಿ ಅನುಮೋದಿಸುವದಕ್ಕೆ ಇದ್ದ ಚಾರಿತ್ರಿಕ ಮಹತ್ವವನ್ನು ಅರಿತೇ ಲಿಂಕನ್ ಮತಗಳನ್ನು ಹೇಗಾದರೂ ತಂದೊಪ್ಪಿಸಿ ಎಂದು ಡೆಮಾಕ್ರಟ್ ಪಕ್ಷದದ ಪ್ರತಿನಿಧಿಗಳನ್ನು ಆಮಿಷವೊಡ್ಡಲು ತನ್ನವರಿಗೆ ಪರೋಕ್ಷವಾಗಿ ಹೇಳುತ್ತಾನೆ. ಆ ಸಂದರ್ಭ, ಲಕ್ಷಾಂತರ ಜನರ ಬದುಕನ್ನು ಎಂದೆಂದಿಗೂ ಬದಲಿಸಬಲ್ಲ, ತಲೆಮಾರುಗಳ ನಂತರಕ್ಕೂ ಒಳ್ಳೆಯದಾಗಬಲ್ಲ ಒಂದು ಜನಹಿತ ಕಾರ್ಯಕ್ಕಾಗಿ ಮಾರ್ಗದಲ್ಲಿ ಹೊಂದಾಣಿಕೆ ಮಾಡಿಕೊಂಡರೂ, ಗುಲಾಮಗಿರಿಯನ್ನು ಪೋಷಿಸುವ & ಪಾಲಿಸುವ ಅನೈತಿಕತೆ, ಕ್ರೌರ್ಯವನ್ನು ಕೊನೆಗಾಣಿಸಲು ಈ ಹೊಂದಾಣಿಕೆಯಲ್ಲಿ ತಪ್ಪೇನಿಲ್ಲ ಎನ್ನಿಸುತ್ತದೆ. ಲಿಂಕನ್ ಮತ್ತೆ ಮತ್ತೆ ಕಾಡುತ್ತಾರೆ…

    ಪ್ರತಿಕ್ರಿಯೆ
  2. kum.veerabhadrappa

    sugatha srinivasaraju avara lekhana tumba istavayitu, hadinydu divasagala hinde eradu sala nodida aparoopada chitra’lincoln’ nodi adara gunginallidde, adu poorna arthavaadaddu sugata lekhana odida balika, sugata avarige dhanyavaadagalu

    ಪ್ರತಿಕ್ರಿಯೆ
  3. na.damodara shetty

    sugatharu vishayada ola praveshisuva, adakke aadhaaragalannu thandu ponisuva krama ishtavaaguttade.

    ಪ್ರತಿಕ್ರಿಯೆ
  4. narayan raichur

    linkan lokakke nammannella link maadutta -Gandhi chitradondige sameekarisutta sugatha visista niroopana shailiyondige gamana saledu oduganannu tamma tekkege tegedu -kolluva reeti mudakoduttade ; Linkan-na chala bidada Horaatavoo chitrada gattitanakkee nidarshanavaagi kadutta achchottuttade… Good !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: