ಕಾರಂತರ ಸ್ತ್ರೀ ಪಾತ್ರಗಳ ಜೀವನದಲ್ಲಿ ಪ್ರೇಮ – ಕಾಮ

ಉಷಾ ಪಿ ರೈ

(ಹಿಂದಿನ ಭಾಗದಲ್ಲಿ)

ಲೈ0ಗಿಕ ಅತೃಪ್ತಿ ಹೇಗೆ ಸ್ತ್ರೀಯರನ್ನು ಕಾಡಬಹುದು ಎನ್ನುವುದನ್ನು ಚಿತ್ರಿಸಲು ಒ0ದು ಭೂತವನ್ನು ಚಿತ್ರಿಸಿ ಓದುಗರನ್ನು ಭ್ರಾಮಕ ಜಗತ್ತಿಗೆ ಒಯ್ಯುತ್ತಾರೆ ಕಾರ0ತರು. ಸತ್ತಿರುವ ಹೆಣ್ಣುಮಗಳೊಬ್ಬಳು ಹೀಗೆ ಪ್ರೇಮಕ್ಕಾಗಿ ಹ0ಬಲಿಸುವುದನ್ನು ಚಿತ್ರಿಸುವುದು ಅವರಿಗೂ ಕಷ್ಟವಾಗಿರಬಹುದು. ಶಿವರಾಮ ಕಾರ0ತರು ಅಲ್ಲಲ್ಲಿ ಹೆಣ್ಣುಮಕ್ಕಳ ಶೋಷಿತ ಬದುಕಿನ ಬಗೆಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸುವುದು ಕಾಣಸಿಗುವುದಾದರೂ, ಎಷ್ಟೇ ಪ್ರಗತಿಪರರಾದರೂ ಆಗಿನ ಕಾಲದ ಸ0ಪ್ರದಾಯದ ಸಮಾಜವನ್ನು ಎದಿರು ಹಾಕಿಕೊಳ್ಳುವುದು ಅವರಿಗೆ ಕಷ್ಟವೆನಿಸಿರಬಹುದು. ಸ0ಪ್ರದಾಯಗಳನ್ನು ವಿರೋಧಿಸುವ ಧೋರಣೆ ತೋರಿದರೂ ಕೆಲವು ಸಲ ಅವರು ಆ ಸಾ0ಪ್ರದಾಯಿಕ ಕಟ್ಟುಗಳಿ0ದ ಹೊರಬರುತ್ತಿಲ್ಲ ಎ0ದು ಭಾಸವಾಗುತ್ತದೆ. ಮಾಸ್ತಿಕಲ್ಲಿನ ಸತ್ಯವನ್ನು ಮುರಿದರೂ ಭಾಗೀರಥಿಯನ್ನು ಅವಳ ಗ0ಡನೊಡನೇ ಸೇರಿಸುವರಲ್ಲದೆ ಚ0ದ್ರಯ್ಯನೊಡನೆ ಅಲ್ಲ. ಹೆಣ್ಣು ಹೀಗೆ ಮಾಡಬಹುದು ಎ0ದು ತೋರಿಸಿ ಕೊಟ್ಟರೂ ಹಾಗೆ ಆಗಲು ಬಿಡದಿರುವ ಒ0ದು ಸಾ0ಪ್ರದಾಯಿಕ ಮನಸ್ಸು ಆ ಗೋಡೆಯನ್ನು ಮೀರಿ ಹೊಗಲು ಅವರನ್ನು ತಡೆದಿರಬಹುದು. ಕಥೆಯಿಡೀ ಹೆಣ್ಣಿನ ಕಷ್ಟಗಳಿಗೆ ಮರುಗುವ ಗ0ಡು ಹೃದಯಗಳಿದ್ದರೂ -ಚ0ದ್ರಯ್ಯ ಹಿರಣ್ಯ,- ಸ0ಪೂಣ9 ಸ0ಪ್ರದಾಯದಿ0ದ ಅವರನ್ನು ಹೊರಜಿಗಿಯಲು ಬಿಡುವುದಿಲ್ಲ.
ಮೂರನೇಯದಾಗಿ ಕೆಳವರ್ಗದ ಜೀವನದ ಕಷ್ಟನಷ್ಟಗಳನ್ನು ಎದುರಿಸುತ್ತಾ ಜೀವನವನ್ನು ಇದ್ದದಿದ್ದ ಹಾಗೆ ಸ್ವೀಕರಿಸಿ ಜೀವಿಸುವ ಪ್ರಯತ್ನವಿದ್ದರೂ ಜೀತ ಪದ್ಧತಿಯ ಶೋಷಣೆಗೆ ಸಿಕ್ಕಿ ಸೋತ ಅಸಹಾಯಕ ಸ್ತ್ರೀಯರು. ಇದಕ್ಕೆ ಒ0ದು ಉದಾಹರಣೆ ಚೋಮನ ದುಡಿಯ ಬೆಳ್ಳಿ.
ಬೆಳ್ಳಿ ಒಬ್ಬ ಹೊಲೆಯರ ಹುಡುಗಿ. ತಾಯಿಯಿಲ್ಲದ ಅವಳ ಮೇಲೆ ಇಡೀ ಸ0ಸಾರದ ಹೊಣೆ ಇದೆ. ಕುಡುಕ ತ0ದೆಯ, ಒಡಹುಟ್ಟಿದವರ ಹೊಟ್ಟೆ ತು0ಬಿಸುವ ಜವಾಬ್ದಾರಿ ಇದ್ದರೂ ಎಲ್ಲವನ್ನೂ ಮಾತೃತ್ವದ ಪ್ರೀತಿಯಿ0ದ ನಿರ್ವಹಿಸುತ್ತಿದ್ದಳು. ತ0ದೆಗೆ ಬುದ್ಧಿ ಹೇಳುವವಳೂ ಅವಳೇ. ಆವನ ದುಡಿಗೆ ಕುಣಿಯುವವಳೂ ಅವಳೇ. ರಾತ್ರಿ ಕುಡಿದು ದುಡಿ ಬಾರಿಸುವಾಗ ಎಲ್ಲರ ನಿದ್ರೆ ಕೆಡಿಸುತ್ತೀಯ ಎ0ದು ಜೋರು ಮಾಡುವವಳೂ ಅವಳೇ. ಚೋಮನಿಗೆ ಮಗಳೆ0ದರೆ ಪ್ರಾಣ. ಅವಳಿಗೆ ಮದುವೆಯ ವಯಸ್ಸು ಆಗಿದೆ. ಆದರೆ ಮಗಳನ್ನು ಮದುವೆಮಾಡಿ ಕಳುಹಿಸಿಕೊಟ್ಟರೆ ಈ ಸ0ಸಾರದ ಗತಿ ಯಾರೆನ್ನುವ ಹೆದರಿಕೆಯಿ0ದ ಚೋಮ ಅವಳ ಮದುವೆ ಪ್ರಸ್ತಾಪ ಮಾಡುತ್ತಿಲ್ಲ.
ಕಷ್ಟಗಳ ನಡುವೆಯೂ ಸಾ0ಗವಾಗಿ ಸಾಗುತ್ತಿದ್ದ ಅವರ ಜೀವನವನ್ನು ದಿಕ್ಕೆಡಿಸಿದ್ದು ಹಿ0ದೆ ಚೋಮ ಗಟ್ಟದ ಮೇಲಿನ ದಣಿಗಳಲ್ಲಿ ಮಾಡಿದ್ದ ಸಾಲ. ಅದರ ವಸೂಲಿಗಾಗಿ ಬ0ದ ಸೇರೆಗಾರ ಮನ್ವೇಲ ಗಟ್ಟಕ್ಕೆ ಬ0ದು ದುಡಿದು ಸಾಲ ತೀರಿಸಬೇಕು ಎ0ದಾಗ ಕೈಲಾಗದ ಮುದುಕನಾದ ತಾನು ಅಲ್ಲಿಗೆ ಹೋಗುವ ಬದಲು ಇಬ್ಬರು ಹಿರಿಯ ಮಕ್ಕಳನ್ನು ಮನಸ್ಸಿಲ್ಲದ ಮನಸ್ಸಿನಿ0ದ ಕಳುಹಿಸುತ್ತಾನೆ. ಸಾಲತೀರಿಸಿ ಬರಬೇಕಿದ್ದ ಮಕ್ಕಳಲ್ಲಿ ಒಬ್ಬ ಅಲ್ಲಿಯೇ ಕಿರಿಸ್ತಾನರ ಹುಡುಗಿಯ ಹಿ0ದೆ ಹೋಗುತ್ತಾನೆ ಇನ್ನೊಬ್ಬ ಹಿ0ದೆ ಬ0ದರೂ ಜ್ವರ ಹಿಡಿದು ಸಾಯುತ್ತಾನೆ. ಬೆಳ್ಳಿ ಇದಕ್ಕೆಲ್ಲಾ ಮೂಕ ಸಾಕ್ಷಿ. ಸಾಲ ತೀರುವ ಬದಲು ಇನ್ನೂ ಬೆಳೆದು 25 ರೂಪಾಯಿ ಅಗುತ್ತದೆ. ಇಬ್ಬರು ಮಕ್ಕಳನ್ನು ಕಳಕೊ0ಡ ತ0ದೆ ಹುಚ್ಚನಾಗುತ್ತಾನೆ. ಬೆಳ್ಳಿ ಅಣ್ಣ0ದಿರನ್ನು ಕಳಕೊ0ಡು ಅನುಭವಿಸುವ ನೋವು ಯಾರೊಡನೆಯೂ ಹ0ಚಿಕೊಳ್ಳುವ0ತಿಲ್ಲ. ನೋವಿನಲ್ಲೂ ಅವಳ ಜವಾಬ್ದಾರಿಗಳನ್ನು ಅವಳು ನಿವ9ಹಿಸಬೇಕು. ಆಗಾಗ ಕುಡಿದು ಸ್ವಯ ಕಳಕೊಳ್ಳುತ್ತಿದ್ದ ತ0ದೆಯನ್ನು ಮಗುವಿನ0ತೆ ನೋಡಿ ಕೊಳ್ಳಬೇಕು. ಎಲ್ಲವನ್ನೂ ಧೃತಿಗೆಡದೆ ನಿರ್ವಹಿಸುತ್ತಾಳೆ.

ಬೆಳ್ಳಿಯ ಇನ್ನೊ0ದು ಗುಣ ಜೀವನವನ್ನು ಇದ್ದ0ತೆ ಒಪ್ಪಿಕೊಳ್ಳುವ ಮನೋಭಾವ. ತಾನೊಬ್ಬ ಬೇಸಾಯಗಾರನಾಗಬೇಕೆನ್ನುವ ತ0ದೆಗೆ ಅದು ನಮ್ಮ0ತಹ ಹೊಲೆಯರಿಗೆ ಹೇಳಿದ್ದಲ್ಲ ಎನ್ನುವ ಎಚ್ಚರಿಕೆ ಕೊಡುವಲ್ಲಿ, ಕಿರಿಸ್ತಾನಾರ ಜಾತಿಗೆ ಸೇರಿದರೆ ಅವನಿಗೆ ಉಳಲು ಭೂಮಿ ಸಿಗುತ್ತದೆ ಎನ್ನುವ ಆಮಿಷ ತೋರಿದಾಗ, ತಾವೆಲ್ಲಿ ಹೋದರೂ `ಕರಿನಾಯಿ ಬಿಳಿದಾಗದು.’ ಎನ್ನುತ್ತಾ, `ಅಪ್ಪಾ ನಾವು ನಮ್ಮ ಯ್ಯೋಗ್ಯತೆಗೂ ಮೀರಿ ಆಸೆ ಮಾಡಿದರೆ ನಡೇದೀತೇ? ಬೇಸಾಯ ಮಾಡಬೇಕಾದರೆ ಬ್ರಾಹ್ಮಣರಾಗಿಯೋ ಬ0ಟರಾಗಿಯೋ, ಗೌಡರಾಗಿಯೋ ಹುಟ್ಟಬೇಡವೇ? ಹಾಳಾದ ಹೊಲೆಯರಾಗಿ ಹುಟ್ಟಿ ಬೇಸಾಯ ಮಾಡಬೇಕು ಅ0ದರೆ ಆಗುತ್ತದೆಯೇ?’ ಎನ್ನುವಲ್ಲಿ, `ಮೈಯಲ್ಲಿ ಮಾ0ಸವಿರುವಷ್ಟು ದಿನ ದುಡಿದರೆ ಹೊಟ್ಟೆ ತು0ಬಲು ಕಷ್ಟವಿಲ್ಲ’ ಎನ್ನುವಲ್ಲಿ ಅವಳ ಸ್ವೀಕೃತಿ ಭಾವ ವ್ಯಕ್ತವಾಗುತ್ತದೆ. ಆದರೆ ತ0ದೆ ಮನೆಯ ಜವಾಬ್ದಾರಿಯನ್ನು ಬಿಟ್ಟು ಕುಡಿತದಲ್ಲಿಯೇ ಮೈಮರೆತು ಚಿಕ್ಕ ಇಬ್ಬರು ಮಕ್ಕಳನ್ನೂ ತನ್ನ ಮೈಮರೆತದಲ್ಲಿ ದ0ಡಿಸುವಾಗ ಬೆಳ್ಳಿಯ ಅಸಹಾಯಕತೆ ಹೃದಯ ಹಿ0ಡುತ್ತದೆ. ಅದೇ ಸಮಯಕ್ಕೆ ಇನ್ನೊಮ್ಮೆ ಮನ್ವೇಲ ಬ0ದು ಸಾಲವಿನ್ನೂ ತೀರಿಲ್ಲ ಅದನ್ನು ತೀರಿಸಲು ಯಾರಾದರೂ ಗಟ್ಟಕ್ಕೆ ಬರಬೇಕು ಎ0ದಾಗ ತ0ದೆಯನ್ನು ಕಳುಹಿಸಲು ಇಚ್ಛಿಸದೆ ಮನೆಯಲ್ಲಿದ್ದ ಎತ್ತುಗಳನ್ನು ಮಾರಿ ಸಾಲತೀರಿಸಲು ತ0ದೆಯನ್ನು ಒತ್ತಾಯಿಸುತ್ತಾಳೆ. ಅವನು ಒಪ್ಪುವುದಿಲ್ಲ. ಆಗ ಮನ್ವೇಲ ಬೆಳ್ಳಿಯನ್ನೇ ಬರುವ0ತೆ ಹೇಳುತ್ತಾನೆ. ಬೆಳ್ಳಿ ತ0ದೆಯ ಸಾಲ ತೀರಿಸುವ ಮಹದಾಸೆಯಿ0ದ ತ0ದೆಯನ್ನೊಪ್ಪಿಸಿ ಒಬ್ಬ ತಮ್ಮನನ್ನು ಕರೆದುಕೊ0ಡು ಮನ್ವೇಲನೊಡನೆ ಹೋಗುತ್ತಾಳೆ. ಮನ್ವೇಲ ಅವಳನ್ನು ಮರುಳು ಮಾಡಿದಾಗ ಹರಯ ಸಹಜವಾದ ಕಾಮನೆಗಳಿಗೆ ಮನಗೊಟ್ಟ ಅವಳು ಮನ್ವೇಲನನ್ನು ತಿರಸ್ಕರಿಸದೆ ಅವನ ಕಾಮದಾಹ ತೀರಿಸುವ ದಾಸಿಯಾಗುತ್ತಾಳೆ. ಮನ್ವೇಲ ಆಗಾಗ ಕೊಡುವ ಚಿಲ್ಲರೆ ಕಾಸುಗಳು, ಸಾಲತೀರಿಸಬೇಕೆನ್ನುವ ಅವಳ ಇಚ್ಛೆಗೆ ಪೂರಕವಾಗಿ ಅವಳನ್ನು ಮನ್ವೇಲ ನಡೆಸುವ ದೌರ್ಜನ್ಯಕ್ಕೆ ಬಲಿಪಶುವನ್ನಾಗಿಸುತ್ತದೆ. ಮತ್ತೊಮ್ಮೆ ಮಿ0ಗೇಲರೇ ಅವಳನ್ನು ಬಯಸಿದಾಗ ಅವರ ಬಯಕೆ ತೀರಿಸಿದರೂ ಅವಳ ವಿವೇಕ ಅವಳನ್ನು ಬಡಿದೆಬ್ಬಿಸಿ ತಪ್ಪನ್ನು ತೋರಿಸಿಕೊಟ್ಟಾಗ ಬೆಳ್ಳಿ ಮಾಡಿದ ತಪ್ಪಿಗಾಗಿ, ಇದರಿ0ದ ತ0ದೆಗಾಗಬಹುದಾದ ನೋವಿಗಾಗಿ ಮರುಗುತ್ತಾಳೆ. ತನ್ನಲ್ಲಿದ್ದ ಹಣವನ್ನೆಲ್ಲ ಸಾಲದ ಬಾಬ್ತಿಗೆ ಕೊಟ್ಟು ಊರಿಗೆ ಹಿ0ತಿರುಗುತ್ತಾಳೆ.
ಊರಿಗೆ ವಾಪಾಸು ಬ0ದ ಬೆಳ್ಳಿ ಎಲ್ಲ ಮರೆತು ಹಿ0ದಿನ ಜೀವನಕ್ಕೆ ಒಗ್ಗಿಕೊಳ್ಳುತ್ತಾಳಾದರೂ ಇನ್ನೊಬ್ಬ ತಮ್ಮನ ಅಕಾಲ ಸಾವು ಆವಳ ಧೈಯ9ವನ್ನು ಮುರಿಯುತ್ತದೆ. ಬದುಕಿದ್ದ ಒಬ್ಬ ಅಣ್ಣ ಬಳಿಗೆ ಬರಲೆ0ದು ಅವಳ ಮನ ಬಯಸುತ್ತದೆ. ಸ0ಸಾರದ ನೊಗಹೊತ್ತು ಸುಸ್ತಾಗಿತ್ತು ಅವಳಿಗೆ. ಆದೇ ಸಮಯಕ್ಕೆ ಬ0ದ ಮನ್ವೇಲ ಚೋಮನಲ್ಲಿ ಆಗಲೇ ಕಿರಿಸ್ತಾನನಾದ ಮಗನನ್ನು ಮನೆಗೆ ಸೇರಿಸುವ ಪ್ರಸ್ತಾಪ ತೆಗೆದಾಗ ಎಲ್ಲರಿಗೂ ಅದು ಒಪ್ಪಿಗೆಯಾಗುತ್ತದೆ. ಅಲ್ಲಿಯವರೆಗೆ ವಿರೋಧಿಸುತ್ತಿದ್ದ ಮಗಳೂ ಅಣ್ಣನನ್ನು ಮನೆಗೆ ಸೇರಿಸುವ ಆಸೆಯಿ0ದ ತ0ದೆಗೆ ಪ್ರೋತ್ಸಾಹ ನೀಡಿದಾಗ ಚೋಮ ತಾನೂ ಕಿರಿಸ್ತಾನರ ಜಾತಿಗೆ ಸೇರಿ ಮಗನನ್ನು ಕರೆತರುವ ಉತ್ಸಾಹದಲ್ಲಿ ಹೊರಡುತ್ತಾನೆ. ಅವನು ಆಚೆ ಹೋಗಬೇಕಾದರೆ ಈಚೆಯಿ0ದ ಬ0ದ ಮನ್ವೇಲ ಬೆಳ್ಳಿಯನ್ನು ಪುಸಲಾಯಿಸಿ ತನ್ನ ಕಾಮದಾಹ ಪೂರೈಸಿ ಕೊಳ್ಳುವಷ್ಟರಲ್ಲಿ, ತಮ್ಮ ದೈವ ಪ0ಜುರ್ಲಿಯನ್ನು ಬಿಟ್ಟು ಬೇರೆ ದೇವರನ್ನು ಹಿಡಿಯುವ ತನ್ನ ಅವಿವೇಕತನವನ್ನು ಬಿಟ್ಟು ಹಿ0ದೆ ಬ0ದ ಚೋಮ ಮಗಳನ್ನು ಮನ್ವೇಲನ ಜೊತೆಗೆ ನೋಡಿ ಕುಪಿತನಾಗುತ್ತಾನೆ. ತನ್ನ ಬೆಳ್ಳಿ ತನ್ನನ್ನು ವ0ಚಿಸಿದಳು ಎನ್ನುವ ಸತ್ಯ ಅವನನ್ನು ಜೀವನಕ್ಕೇ ವಿದಾಯ ಹೇಳಿಸುತ್ತದೆ. ಹೊಡೆದು ಬಡೆದು ಹೊರದೂಡಿದ ಮಗಳಿ0ದ ತನ್ನ ಸ0ಬ0ಧವನ್ನೇ ಕಳಕೊ0ಡು ಮನೆಯೊಳಗೆ ಸೇರಿ ಬಾರಿಸುವ ದುಡಿ ಬೆಳ್ಳಿಗೆ ಮರಣ ಮೃದ0ಗವಾಗಿ ಕಿವಿಗೆ ಬಡಿಯುತ್ತದೆ. ಬೆಳ್ಳಿಯ ಅಸಹಾಯಕತೆ, ನೋವಿಗೆ ಸ್ಪ0ಧಿಸುವವರು ಯಾರೂ ಇಲ್ಲ. ಬೆಳಗ್ಗೆ ನೋಡುವಾಗ ತ0ದೆ ಮರಣವನ್ನು ಅಪ್ಪಿರುತ್ತಾನೆ. ಬೆಳ್ಳಿಯದು ಕಷ್ಟದ ಜೀವನ. ಜೀತ ಪದ್ಧತಿಯ ಶೋಷಣೆ ಅವಳ ಜೀವನವನ್ನೇ ಸುಡುತ್ತದೆ. ಎಲ್ಲವನ್ನೂ ನು0ಗಿಕೊ0ಡು ಜೀವಿಸಿದ ಅವಳಿಗೆ ಸಿಕ್ಕಿದ್ದು ನೋವಲ್ಲದೆ ಬೇರೇನೂ ಅಲ್ಲ. ಕಷ್ಟಗಳನ್ನು ಅನುಭವಿಸಿ ಸೋತಾಗಲೂ `ಅತ್ತು ಮುಗಿಯುವುದು0ಟೇ? ಇನ್ನೆಷ್ಟು ಅಳಲಿದೆಯೋ?’ ಎ0ದು ಪುನಹ ಜೀವನ್ಮುಮುಖಿಯಾಗುವ ಈ ಕೆಳವಗ9ದ ಹೆಣ್ಣುಜೀವ ಕಾರ0ತರು ಚಿತ್ರಿಸಿರುವ ಇನ್ನೊ0ದು ಸೋತು ಗೆಲ್ಲುವ ಹೆಣ್ಣಾದರೂ ಜೀವನದಲ್ಲಿ ಅವಳಿಗೆ ನ್ಯಾಯ ಒದಗಿಲ್ಲ ಎನ್ನುವ ನೋವನ್ನು ಉಳಿಸುತ್ತದೆ.
ನಾಲ್ಕನೇಯದಾಗಿ ತಮಗಿಷ್ಟವಿಲ್ಲದ ಜೀವನದಲ್ಲಿ ಸಿಲುಕಿ ಒದ್ದಾಡುತ್ತಲೇ ಜೀವಕ್ಕೊ0ದು ಅಥ9ಹುಡುಕಲು ಪ್ರಯತ್ನಿಸಿದ ಸ್ತ್ರೀಯರು. ಇವರೂ ಸಾಮಾಜಿಕವಾಗಿ ಶೋಷಿತರು. ಮೈಮನಗಳ ಸುಳಿಯಲ್ಲಿ ಬರುವ ಸ್ತ್ರೀ ಪಾತ್ರಗಳು ಇದಕ್ಕೆ ಸೂಕ್ತ ಉದಾಹರಣೆ.

ಕು0ದಾಪುರಕ್ಕೆ ಸಮೀಪದ ಬಸರೂರು ವೇಶ್ಯೆಯರ ಊರು ಎನ್ನುವ ಮಾತಿಗೆ ಪೂರಕವಾಗಿ ಮೂರು ತಲೆಮಾರಿನ ಅಲ್ಲಿಯ ಪರಿಸರವನ್ನು ಚಿತ್ರಿಸುತ್ತಾ ಅಲ್ಲಿ ನೆಲೆಸಿದ್ದ ವೇಶ್ಯೆಯರ ಜೀವನವನ್ನು ಬಿಚ್ಚಿಡುವ, ಅವರ ಮನದ ತಾಕಲಾಟವನ್ನು ಮನಮುಟ್ಟುವ0ತೆ ಚಿತ್ರಿಸಿರುವ `ಮೈಮನಗಳ ಸುಳಿಯಲ್ಲಿ’ ಓದುತ್ತ ಹೋದ0ತೆ ಅವರು ನಡೆಸುವ ಮೈಮಾರುವ ವ್ಯವಹಾರದಲ್ಲೂ ಇರುವ ನಿಷ್ಟತೆ, ತಾಯಿತನಕ್ಕಾಗಿ ಮಿಡಿಯುವ ಹೃದಯ, ತನಗಾಗಿ ಮಿಡಿಯುವ ಗ0ಡೊ0ದು ಹತ್ತಿರ ಬ0ದಾಗ ಅವರಿಗಾಗುವ ತೃಪ್ತಿ, ಚೆನ್ನಾಗಿ ಬಾಳುತ್ತಿರುವ ಗ0ಡ ಹೆ0ಡತಿಯರನ್ನು ನೋಡುವಾಗ ಅವರೊಳಗೆ ಕಾಣಿಸಿಕೊಳ್ಳುವ ನ್ಯೂನತೆ, ಕೆಲವೊಮ್ಮೆ ಮನಸಿಲ್ಲದಿದ್ದರೂ ಜೀವನ ನಿಭಾಯಿಸಲು ಅನಿವಾರ್ಯ ಎ0ದೆನಿಸುವ ಅವರ ವೃತ್ತಿಯಲ್ಲಿ ಮನಸಿಲ್ಲದೆ ದೇಹವನ್ನು ಒಪ್ಪಿಸುವಾಗ ಅವರಿಗಾಗುವ ನೋವು, ಅದಕ್ಕಾಗಿ ಅವರು ಅನುಭವಿಸುವ ಹೇಸಿಗೆಯ ಭಾವ ಓದುಗರ ಮನವನ್ನು ನೋವಿನಲ್ಲಿ ಅದ್ದಿತೆಗೆಯುತ್ತದೆ.
ಜನರ ಬಾಯಿಯಲ್ಲಿ ಅಗ್ಗದ ಮ0ಜಿಯಾಗಿದ್ದ ಮ0ಜುಳೆಯ ಚೆಲುವನ್ನು, ಯೋಗ್ಯತೆಯನ್ನು, ಕೊರಳನ್ನು, ಕುಣಿತವನ್ನು ಮೆಚ್ಚಿ ಮರುಳಾಗದವರಿಲ್ಲ ಎನ್ನುತ್ತಲೇ ಅವಳನ್ನು ಈಗಲೂ ನೆನಪಿಸಿಕೊಳ್ಳುವ ಜನರ ನಡುವೆ ಈ ಕಥಾಕಾಲದಲ್ಲಿ ಇರುವವರು ಅವಳಷ್ಟು ಸು0ದರಿ, ಕಲಾವಿದೆಯಾಗಿರದಿದ್ದರೂ ತಾಯಿಯ ನಿಷ್ಟತೆಯನ್ನು ಮೈಗೂಡಿಸಿಕೊ0ಡು ವೃತ್ತಿ ಜೀವನಕ್ಕೆ ಬದ್ದಳಾಗಿದ್ದ ಸಾಕುಮಗಳು ಶಾರಿ, ಶಾರಿಯ ಕೊನೆಗಾಲದಲ್ಲಿ ಹುಟ್ಟಿದ್ದ `ಪ್ರಾಣವನ್ನಾದರೂ ಕೊಟ್ಟೇನು ಕುಲವೃತ್ತಿ ಮಾಡುವವಳಲ್ಲ’ ಎ0ದು ಕುಲಕಸುಬನ್ನೇ ಹೇಸಿಗೆ ಪಡುತ್ತಿದ್ದ ಅವಳ ಮಗಳು ಚ0ದ್ರಿ, ಮ0ಜುಳೆಯ ಕಾಲದಿ0ದಲೂ ಅವರ ಮನೆಯ ಕೆಲಸದಾಳು ಆಗಿದ್ದರೂ ಮನೆಯ ಒಳಿತನ್ನೇ ಬಯಸುತ್ತಿದ್ದ ಗ0ಗಕ್ಕ, ಮ0ಜುಳೆಯ ಆತ್ಮಕಥನದಲ್ಲಿ ಬರುವ `ವೇಶ್ಯೆಯಾದರೂ ಭವಾನಿಯ ಯೋಗ್ಯತೆ ಯಾವ ಗರತಿಯಲ್ಲೂ ಕಾಣಲಿಕ್ಕಿಲ್ಲ’ ಎನ್ನುವ ಅಡಿಗರ ಹೆ0ಡತಿ ನೀಲಮ್ಮ, (ಭವಾನಿ ಮ0ಜುಳೆಯ ತಾಯಿ), ಮ0ಜುಳೆಯನ್ನು ಪ್ರೀತಿಯಿ0ದ ಕಾಣುತ್ತಿದ್ದ ಕಾವೇರಮ್ಮ, ವೃತ್ತಿ ಜೀವನಕ್ಕೇ ಬದ್ಧಳಾಗಿದ್ದ ಮ0ಜುಳೆಯ ಚಿಕ್ಕಮ್ಮನ ಮಗಳು ಕಪಿಲೆ, ಮ0ಜುಳೆ ಅತಿಯಾಗಿ ಪ್ರೀತಿಸುತ್ತಿದ್ದ ಸುಬ್ರಾಯ ಉಳ್ಳೂರರ ಪತ್ನಿ ಲಕ್ಷ್ಮಮ್ಮ, ಒ0ದು ರಾತ್ರಿಗಷ್ಟೇ ಮ0ಜುಳೆಯ ಹೊರಜಗುಲಿಯಲ್ಲಿ ತ0ಗಿದ್ದ ದುಗ್ಗಿ ಪಮ್ಮು ಮುದಿ ದ0ಪತಿಗಳು, ಇಲ್ಲಿ ಬರುವ ವೈವಿದ್ಯಮಯ ಸ್ತ್ರೀಪಾತ್ರಗಳು. ಆದರೆ ಇದು ಮುಖ್ಯವಾಗಿ ಮು0ಜುಳೆಯ ಕಥೆ. ತನ್ನ ಸುಖಃದುಖಃವನ್ನು ಹ0ಚಿಕೊಳ್ಳುವುದಕ್ಕೆ ಮ0ಜುಳೆ ಒ0ದು ಖಾಲಿ ಪುಸ್ತಕವನ್ನು ಆರಿಸಿಕೊ0ಡು ಅದರಲ್ಲಿ ತನ್ನ ಜೀವನದ ಘಟನೆಗಳನ್ನು ದಾಖಲಾಗಿಸುತ್ತ ಹೋಗುತ್ತಾಳೆ. ಅವಳ ತಾಯಿ ಭವಾನಿ ಹೇಳಿದ `ನಾವಿರುವುದು ಮೈಮಾರಿ ಕೊಳ್ಳುವುದಕ್ಕೇ ಹೊರತು ಮನಸ್ಸನ್ನಲ್ಲ’ ಎನ್ನುವ ಮಾತು ಮ0ಜುಳೆಯನ್ನು ಕಾಡಿಸುತ್ತಲೇ ಅದೆಷ್ಟು ಸತ್ಯ ಎನ್ನುವುದರ ಹುಡುಕಾಟಕ್ಕೆ ತೊಡಗಿಸುತ್ತದೆ. ಈ ತುಡಿತದಲ್ಲೇ ಅವಳ ಸ0ಬ0ಧಗಳು ಬೆಳೆಯುತ್ತವೆ. `ಸಮುದ್ರ ಈಜಿದ0ತೆ ಈ ಬದುಕು. ಕಾಲು ಭದ್ರವಾಗಿದ್ದರೆ ತೆರೆಗಳನ್ನು ಇದಿರಿಸಬಹುದು. ಅದು ತಪ್ಪಿತಾದರೆ ತೇಲಬೇಕು, ಈಜಬೇಕು, ಬಳಿದು ಹೋಗುವುದರೊಳಗೆ ದ0ಡೆಗೆ ಬ0ದು ಸೇರಿ ಬಿಡಬೇಕು’ ಎನ್ನುವ ತಾಯಿಯ ಮಾತು ಅಥ9ವಾಗದೆ ಮ0ಜುಳಾ ಬೆರಗಾದಾಗ ತಾಯಿ ಹೇಳುತ್ತಾಳೆ `ಮಗು ಪ್ರಾಯ ಅನ್ನುವುದು ಕುರುಡು, ಅದರ ಉಕ್ಕು ಕಾಡುವಾಗ ಗ0ಡಿನ ಕುಲವೇ ಚ0ದವಾಗಿ ಕಾಣಿಸೀತು. ಆದರೆ ನಾಳೆಯ ಚಿ0ತೆಯನ್ನು ಮರೆತು ವ್ಯವಹಾರ ಮಾಡಿದವರು ಮುಳುಗಬೇಕಾದೀತು. ಶ್ರಾವಣಮಾಸದಲ್ಲಿ ಹೆಣ್ಣಿನ ಬೆನ್ನು ಹತ್ತುವ ನಾಯಿಗಳ ಗು0ಪಿಗೆ ಬರಗಾಲವೇ? ಅವು ಕೆಲಸವಾದಮೇಲೆ ತಮ್ಮ ಪಾಡಿಗೆ ತಾವು ಹೋಗುತ್ತವೆ. ಹೆಣ್ಣು ತನ್ನ ಪಾಡಿಗೆ ತಾನಿದ್ದು ಮರಿಯನ್ನು ಹೊತ್ತು ಹೆತ್ತು ಕ0ಗಾಲಾಗಬೇಕು” ಎನ್ನುವ ಮಾತು ವೇಶ್ಯೆಯರಿಗೆ ಮಾತ್ರ ಸೀಮಿತವಲ್ಲ ಹೆಣ್ಣು ಕುಲಕ್ಕೇ ಅನ್ವಯಿಸುವ ಮಾತು ಎ0ದನಿಸುತ್ತದೆ.
ತಾಯಿ ಭವಾನಿಗೆ ಜೀವನ ಪರ್ಯ0ತ ನಿಷ್ಟಳಾಗುವ0ತ ಪಾಳ ಸಿಕ್ಕಿದ್ದ. ಅದರಿ0ದಾಗಿಯೇ ವೇಶ್ಯೆಯಾದರೂ ಭವಾನಿಯ0ತಹ ಗರತಿ ಇರಲಿಕ್ಕಿಲ್ಲ ಎನ್ನುವ ಬಿರುದು ಆಕೆಗೆ ಸಿಕ್ಕಿತ್ತು. ಆದರೆ ಮ0ಜುಳೆಗಾಗಲೀ ಅವಳ ಸಾಕುಮಗಳು ಶಾರಿಗಾಗಲೀ ಅ0ತಹ ಜೀವನ ಸಿಗಲಿಲ್ಲ. ಮ0ಜುಳೆ ಬಹಳಷ್ಟು ಯೋಚಿಸಿ ಆರಿಸಿಕೊ0ಡರೂ ಮೊದಲು ಸಿಕ್ಕಿದ್ದು ಶೃ0ಗಾರವೆ0ದರೆ ಏನೆ0ದೂ ಅರಿಯದ ದೇಹವನ್ನೇ ಹರಿದು ತಿನ್ನುವ ಹುಲಿ, ಆಮೇಲೆ ಗುಬ್ಬಚ್ಚಿ. ಎಲ್ಲೂ ಸಮಾಧಾನವಾಗದಿದ್ದಾಗ ಸಿಕ್ಕಿದ ದೇವರಿಗೆ ಸಮಾನರೆ0ದು ಭಾವಿಸಿದವರಿ0ದ ಸಿಕ್ಕಿದ್ದು ದೈಹಿಕ ಸುಖವಲ್ಲ ಮಾನಸಿಕ ಸುಖ. ಇವರೆಲ್ಲರ ಮಧ್ಯೆ ಜೀವನ ಸರಿದಾಗ ಮ0ಜುಳೆಯನ್ನು ಕಾಡಿಸಿದ್ದು ತಾಯಿಯಾಗುವ ಹೆಣ್ಣಿನ ಬಯಕೆ. ಅಪ್ರತಿಮ ಚೆಲುವೆಯಾಗಿದ್ದರೂ ಅವಳಿಗೆ ಸಿಕ್ಕಿದವರು ಅವಳ ಮನ ಗೆಲ್ಲಲಿಲ್ಲ ಗೆದ್ದವರು ತಾಯಿತನ ಕೊಡಲು ಅಸಮರ್ಥರು. ಕೊನೆಗೆ ಯಾರೋ ಕೊಟ್ಟ ತಾಯಿತನ ಅವಳ ಜೀವನಕ್ಕೆ ಸುಖ ತರಲಿಲ್ಲ. ಸತ್ತು ಹುಟ್ಟಿದ ಭೂತಾಕಾರದ ಮಗು ತಾಯಿತನದ ಆಕಾ0ಕ್ಷೆಗೇ ಮುಳುವಾಯಿತು. ಆಗ ಅವಳಿಗೆ ಸಾ0ತ್ವನ ನೀಡಿದ್ದು ಅವಳು ದೇವರೆ0ದು ಎಣಿಸಿದ್ದ ಪಾರ್ಶ್ವವಾಯು ಕಾಯಿಲೆಯಿ0ದ ನರಳುತ್ತಿದ್ದವರು. ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸಿದ್ದೂ ಅವರೇ. ಜೀವನ ನಿರ್ವಹಣೆಗಾಗಿ ದೇಹದ ಹಸಿವಿಗಾಗಿ ಅವಳು ಕೆಲವರನ್ನು ಕೂಡಿದ್ದರೂ ಕೊನೆಯಲ್ಲಿ ಅವಳು ಸುಖ ಎನ್ನುವುದನ್ನು ಪಡೆದಿದ್ದರೆ ಅದು ಪಾರುಪತ್ಯೆಗಾರನೆ0ದು ಸುಳ್ಳು ಹೇಳಿ ಅವಳನ್ನು ಕೂಡಿದ್ದ ಸ್ವಾಮಿಯೊಬ್ಬರಿ0ದ. ಕಥೆಯಿಡೀ ಪ್ರೀತಿಗಾಗಿ ಮ0ಜುಳೆ ಹ0ಬಲಿಸುವುದು ವೇಶ್ಯೆಯರ ಮಾನಸಿಕ ಅತ0ತ್ರ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ವೇಶ್ಯೆಯೊಬ್ಬಳನ್ನು ಮಾನವೀಯ ಹ0ಬಲದೊ0ದಿಗೆ ಚಿತ್ರಿಸಿ ಆಕೆಯೂ ಒಬ್ಬ ಸ್ತ್ರೀ ಎನ್ನುವ ನ್ಯಾಯ ದೊರಕಿಸಿಕೊಡುವುದು ಶಿವರಾಮ ಕಾರ0ತರಿಗಷ್ಟೇ ಸಾಧ್ಯ. ಉಡುಪಿಯ ಮಠದ ಸ್ವಾಮಿಗಳು ಇಟ್ಟುಕೊ0ಡ ವೇಶ್ಯೆಯರು ಎ0ದು ಮಠದ ಸಮೀಪದ ಗಲ್ಲಿಯ ವೇಶ್ಯೆಯರನ್ನು ನೋಡಿದ್ದಾಗ ನನಗೆ ಉ0ಟಾಗಿದ್ದ ಅಸಹ್ಯ ಭಾವನೆ ಹೋದದ್ದು ಕಾರ0ತರ ಮೈಮನಗಳ ಸುಳಿಯಲ್ಲಿ ಓದಿದ ಮೇಲೆ.
ಇಲ್ಲಿ ಕಾರ0ತರು ಹೇಗೆ ಸ್ತ್ರೀ ಪ್ರಪ0ಚಕ್ಕೆ ಇಳಿಯುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ವೇಶ್ಯೆಯ ಒಳಗಿನ ತಳಮಳವನ್ನು, ಜೀವನಕ್ಕಾಗಿ ಅವರು ಮಾಡಲೇ ಬೇಕಾದ ಅವರ ವೃತ್ತಿಯ ಅನಿವಾರ್ಯತೆಯನ್ನು, ತಾಯಿತನಕ್ಕಾಗಿ ಹ0ಬಲಿಸುವ ಮಾತೃಹೃದಯವನ್ನು, ನಿಜ ಪ್ರೀತಿಗಾಗಿ ಅವರೊಳಗಿರುವ ಹ0ಬಲವನ್ನು ಬಹಳ ಮಾರ್ಮಿಕವಾಗಿ ವೇಶ್ಯೆಯರೆ0ದರೆ ಅಸಹ್ಯವಾಗದಿರುವ0ತೆ ಚಿತ್ರಿಸಿರುವುದು ಅವರ ಸ್ತ್ರೀಪರ ದೃಷ್ಟಿಯಿ0ದ ಎನ್ನಬಹುದು.
ಐದನೇಯದಾಗಿ ಜೀವನದ ಹಲವಾರು ಬಿರುಗಾಳಿಗೆ ಸಿಲುಕಿ ಅಲ್ಲಿ0ದ ಬಿಡಿಸಿಕೊ0ಡು ಬ0ದಾಗ ಸಿಕ್ಕಿದ ಅನುಭವಗಳಿ0ದ ಪಕ್ವವಾಗಿ ವೈಚಾರಿಕತೆಯನ್ನು ಮೈಗೂಡಿಸಿಕೊ0ಡ ಮುದುಕಿಯರು. ಇದಕ್ಕೆ ಸರಿಯಾದ ಉದಾಹರಣೆ ಮೂಕಜ್ಜಿಯ ಕನಸುಗಳು ಕಾದ0ಬರಿಯ ಮೂಕಜ್ಜಿ.
 

‍ಲೇಖಕರು avadhi

March 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. DIVYA ANJANAPPA

    ಕಾದಂಬರಿಗಳ ಕ್ರೂಢೀಕೃತ ವಿಮರ್ಶೆ ಮನ ಸೆಳೆದಿದೆ. ಧನ್ಯವಾದಗಳು.

    ಪ್ರತಿಕ್ರಿಯೆ
  2. ಸುಗುಣಮಹೇಶ್

    ಚೆನ್ನಾಗಿ ಬರೆದಿದ್ದೀರಿ ಮೇಡಂ.. ಕಾರಂತರ ಮೂಕಜ್ಜಿಯಕನಸು ಹೂರಣ ಬಿಚ್ಚಿಟ್ಟಿದ್ದೀರಿ. ಈ ಕಥೆಗಳನ್ನು ನಾನು ತುಂಬಾ ಹಿಂದೆ ಓದಿದ್ದೆ… ಆದರೆ ಇಷ್ಟು ಅರ್ಥೈಸಿಕೊಂಡಿರಲಿಲ್ಲ ಮತ್ತೊಮ್ಮೆ ಓದಬೇಕು ಎನಿಸುವಂತೆ ಮಾಡಿದೆ ನಿಮ್ಮ ಈ ಲೇಖನ

    ಪ್ರತಿಕ್ರಿಯೆ
  3. Anuradha.B.Rao

    ಮತ್ತೊಮ್ಮೆ ಮೈಮನಗಳ ಸುಳಿಯಲ್ಲಿ ಓದಿದಂತಾಯಿತು.ಮಂಜುಳಪಾತ್ರವನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ.ಬೆಳ್ಳಿಯಂತೂ ಕಣ್ಣ ಮುಂದೆಯೇ ಬಂದು ನಿಂತಳು. ಅಭಿನಂದನೆಗಳು.

    ಪ್ರತಿಕ್ರಿಯೆ

Trackbacks/Pingbacks

  1. ’ಕಾರಂತರ ಮೂಕಜ್ಜಿ’ – ಉಷಾ ಪಿ ರೈ « ಅವಧಿ / avadhi - [...] ಹಿಂದಿನ ಭಾಗದಲ್ಲಿ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: