ಲಂಕೇಶ್ ನಡೆಸಿದ ರಾಜ್ ಸಂದರ್ಶನ

ಪಿ ಲಂಕೇಶ್ ಅವರ ‘ಈ ನರಕ ಈ ಪುಲಕ’ ಸಿನೆಮಾ ಬರಹಗಳ ಸಂಕಲನವನ್ನು ಲಂಕೇಶ್ ಪ್ರಕಾಶನ ಹೊರತಂದಿದೆ.  ಈ ಸಂಕಲನದ ಒಂದು ಲೇಖನ ನಿಮಗಾಗಿ-

e-naraka

ಶುಕ್ರವಾರ ರಾತ್ರಿ ಡಾ. ಚಿದಾನಂದ ಮೂರ್ತಿಯವರನ್ನು ಕೇಳಿದ್ದೆ; “ಈಗ ಡಾ. ರಾಜಕುಮಾರ್ ಬೆಂಗಳೂರಿನಲ್ಲಿದ್ದಾರೆಯೇ? ಅವರನ್ನು ನೋಡಬೇಕಲ್ಲ?” “ಹೌದು, ನಾನೂ ಅವರನ್ನು ನೋಡಿ ಗೋಕಾಕ್ ಚಳವಳಿಯ ಯಶಸ್ಸಿನ ಬಗ್ಗೆ ಅಭಿನಂದನೆ ಹೇಳಬೇಕು. ಕೊಂಚ ಇರಿ” ಎಂದು ಫೋನ್ ತೆಗೆದುಕೊಂಡು ಜಯರಾಂ, ಲೋಕೇಶ್ ಮುಂತಾದವರಿಗೆ ಫೋನ್ ಮಾಡಿದರು. ಪತ್ರಿಕೆಯವರನ್ನು ನೋಡಲು ರಾಜ್ ಇಷ್ಟ ಪಡುತ್ತಾರೋ ಇಲ್ಲವೋ ಎಂಬ ಆತಂಕ ನಮ್ಮಿಬ್ಬರಿಗೂ ಇತ್ತು. ಶುಕ್ರವಾರ ಸಂಜೆ ಈ ಬಗ್ಗೆ ಗೊಂದಲ ಬಗೆಹರಿಯಲಿಲ್ಲ. ಶನಿವಾರ ಬೆಳಿಗ್ಗೆ, ” ಬನ್ನಿ, ಹೋಗೋಣ” ಎಂದು ಚಿದಾನಂದಮೂರ್ತಿ ಬಂದರು. ಡಾ. ರಾಜ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. ಅಲ್ಲಿಗೆ ಹೊರೆಟೆವು.

ಕೊನೆಗಳಿಗೆಯವರೆಗೆ ನಾನು ಹಿಂಜರಿದೆ. ನನ್ನ ಸಹಾಯಕರೊಬ್ಬರನ್ನು ಕಳಿಸಿ ಕೈ ತೊಳೆದುಕೊಳ್ಳಲು ನೋಡಿದೆ. ಚಿದಾನಂದ ಮೂರ್ತಿಯವರಿಗೆ ಇದನ್ನು ಹೇಗೆ ಹೇಳುವುದೆಂದು ತಿಳಿಯದೆ ಯೋಚಿಸುತ್ತಲೇ ಹೊರಟೆ. ಕನ್ನಿಂಗ್ಹ್ಯಾಂ ರಸ್ತೆ ತಲುಪುತ್ತಿದ್ದಂತೆ ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಗಳೆಲ್ಲಾ ಮಾಯವಾಗತೊಡಗಿದವು. ಚಾಮುಂಡೇಶ್ವರಿ ನಾನು ಬಲ್ಲ ಹಳೇ ಸ್ಟುಡಿಯೋ. ಪರಿಚಯದ ಅಸಂಖ್ಯ ಜನ ಮುಗುಳ್ನಕ್ಕು, ನಮಸ್ಕರಿಸಿ ಸ್ವಾಗತಿಸಿದರು; ಒಂದು ಕ್ಷಣ ಎದೆ ಖುಷಿಯಿಂದ ತುಂಬಿತು; ಆ ಒಳ್ಳೆಯ ಜನರನ್ನು ನೋಡಿದೊಡನೆ ಚಿತ್ರಮಾಡುವ ಹರ್ಷ, ಕಷ್ಟ, ನೋವು, ಶೂನ್ಯತೆಯೆಲ್ಲ ಮನಸ್ಸು ಮುತ್ತಿದ್ದವು; ನನ್ನ ‘ಪಲ್ಲವಿ’ಚಿತ್ರಕ್ಕಾಗಿ ಇಲ್ಲಿ ಕಳೆದ ತಿಂಗಳುಗಟ್ಟಲೆ ಆತಂಕ, ಕಿರಿಕಿರಿ ಮತ್ತು ರೋಮಾಂಚಕ ಕ್ಷಣಗಳೆಲ್ಲಾ ನೆನಪಾದವು.

ಡಾ. ರಾಜ್ ರ ಸಹಾಯಕರು ರಾಜ್ ಶೂಟಿಂಗ್ ನಡೆಸುತ್ತಿದ್ದ ಪ್ಲೋರ್ ತೋರಿಸಿದರು. ಒಳಗೆ ಹೋದರೆ ಅಲ್ಲಿ ಯಾರಿರಬೇಕು? ‘ಸಂಸ್ಕಾರ’ ಚಿತ್ರದ ನಿರ್ವಾಹಕ ನಿರ್ದೇಶಕರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್, ನನ್ನೊಂದಿಗೆ ಎರಡು ಚಿತ್ರದ ಕ್ಯಾಮರಾಮನ್ ಆಗಿದ್ದ ಗೌರಿಶಂಕರ್ ಮತ್ತು ನಾನು ಬಲ್ಲ ಹುಡುಗರು. ಹಾಡೊಂದನ್ನು ಧ್ವನಿವರ್ಧಕ ಚೆಲ್ಲುತ್ತಿತ್ತು. ಮನೆಯಂಗಳದ ಒಂದು ಸೆಟ್. ಎರಡು ಮೂರು ಕುರ್ಚಿಗಳಿದ್ದವು. ಡಾ. ರಾಜ್ ಪ್ರವೇಶಿಸಿ ಸರಿತಾಳನ್ನು ನೋಡಿ ಹುಸಿ ಮುನಿಸು ಸೂಸುತ್ತಾ ಕುರ್ಚಿಯನ್ನು ಕೈಗೆತ್ತಿಕೊಂಡು ದೂರ ಹೋಗಿ ಅದರಲ್ಲಿ ಕೂತು ನಗುವ ಶಾಟನ್ನು ರಿಹರ್ಸಲ್ ಮಾಡುತ್ತಿದ್ದರು.

ಗೌರಿಶಂಕರ್ ಮತ್ತು ಸಿಂಗೀತಂ ಶ್ರೀನಿವಾಸ ರಾವ್ ಶಾಟ್ ನ ರೂಪವನ್ನು ತೀರ್ಮಾನಿಸುತ್ತಿದ್ದರು. ಹಾಡಿನ ಸಾಲುಗಳು ಸೆಟ್ಟನ್ನು ತುಂಬುತ್ತಲೇ ಇದ್ದವು. ನೀಲಿ ಬಣ್ಣ ಮತ್ತು ನಸು ಹಳದಿ ಹೂಗಳ ಸೀರೆಯುಟ್ಟಿದ್ದ ಸರಿತಾ ತನ್ನ ಕ್ರಿಯೆಯನ್ನು ಯೋಚಿಸುತ್ತಾ ಅಭ್ಯಾಸ ಮಾಡಿಕೊಳ್ಳುತ್ತಿದ್ದಳು. ಆಕೆಯ ಸಹಾಯಕಿಯಂತಿದ್ದ ಒಬ್ಬಳು ಹುಡುಗಿ ಮತ್ತು ನೃತ್ಯದ ಮೇಲ್ವಿಚಾರಕಿಯಂತಿದ್ದ ಒಬ್ಬಳು ಚುರುಕಾಗಿ ಓಡಾಡುತ್ತಾ ನಿರ್ದೇಶಕರಿಗೆ ಸಲಹೆ ಕೊಡುತ್ತಿದ್ದರು. ಸರಿತಾ ನಾನು ತಿಳಿದಿದ್ದ ದಪ್ಪಗೆ, ಕುಳ್ಳಗೆ ಅಗಲ ಕಣ್ಣಿನ ಹುಡುಗಿಯಾಗಿದ್ದಳು; ಇವಳ ನಗೆ ಚೆನ್ನಾಗಿದ್ದಂತಿತ್ತು. ಇವಳು ಆಮೇಲಿನ ಶಾಟ್ ಒಂದರಲ್ಲಿ ಮನಕರಗಿಸುವ ಮುಗುಳ್ನಗೆಯೊಂದಿಗೆ ನರ್ತಿಸುತ್ತಾ ರಾಜ್ ಹತ್ತಿರ ಬಂದು ಪ್ರೀತಿ ತೋರಿದಳು.

ಒಂದು ಸಲ ಶಾಟ್ ಅಭ್ಯಾಸ ಮಾಡಿದ ರಾಜ್ ಡಾ. ಚಿದಾನಂದ ಮೂರ್ತಿಗಳನ್ನು ನೋಡಿದೊಡನೆ ನಮ್ಮತ್ತ ಬಂದರು. ನಾನು “ನನ್ನ ಹೆಸರು ಲಂಕೇಶ್” ಅಂದೆ. ಆಗಲೇ ಚಿದಾನಂದ ಮೂರ್ತಿಗಳು, “ನಾನು ಚಿದಾನಂದ ಮೂರ್ತಿ” ಅಂದರು. ರಾಜ್ ಇಬ್ಬರಿಗೂ “ಗೊತ್ತು ಗೊತ್ತು” ಎಂದು ಹೇಳುತ್ತ ಮಾತಾಡತೊಡಗುತ್ತಿದ್ದಂತೆ ಶಾಟ್ ನ ದೀಪಗಳು ಸಿದ್ಧವಾದ್ದರಿಂದ “ಒಂದು ನಿಮಿಷ” ಎಂದು ಹೊರಟರು. “ನಮ್ಮಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗೋದು ಬೇಡ, ಮುಗಿದ ಮೇಲೆ ಬರಬಹುದು” ಎಂದು ನಾವು ಸೂಚಿಸಿದೆವು.

ಅವರು ಚಿತ್ರೀಕರಣದಲ್ಲಿ ಭಾಗವಹಿಸಿದೊಡನೆ ಹಾಡು ಗಟ್ಟಿಯಾಗಿ ಶುರುವಾಯಿತು. ಕ್ಯಾಮರಾ ರೆಡಿ ಇತ್ತು. ಚಿದಾನಂದ ಮೂರ್ತಿಗಳು ಮಾಯಾಬಜಾರನ್ನು ನೋಡುವಂತೆ ನೋಡುತ್ತ, “ಯಾಕೆ ಇಷ್ಟಕ್ಕೇ ನಿಲ್ಲಿಸ್ತಾರಲ್ಲ, ಆಕೆ ಯಾರು, ಇವರು ಯಾರು?” ಎಂದು ನೂರಾರು ಪ್ರಶ್ನೆ ಕೇಳುತ್ತ ಚಿಕ್ಕಮಗುವಿನಂತೆ ನಿಂತರು. ಚಿತ್ರೀಕರಣಕ್ಕೆ ಕಿರಿಕಿರಿಯಾದೀತೆಂದು ನಾನು ಅಲ್ಲಿಂದ ದೂರ ಬಂದು ಪ್ಲೂರ್ ನ ಕತ್ತಲಿನ ಕಡೆಗೆ ಹೋಗಿ ಸಿಗರೇಟ್ ಸೇದುತ್ತಾ ನಿಂತೆ. ಸಂಗೀತ ನಿಂತಿತು. ಶಾಟ್ ಮುಗಿದಿತ್ತು. ರಾಜ್ ದೀಪದ ಜಾಗದಿಂದ ನಾವಿದ್ದ ಕಡೆಗೆ ಬಂದರು.

rajakumar gokak agitationನಾನು ಮುಗುಳ್ನಗುತ್ತಾ, “ಅಭಿನಂದನೆ ಹೇಳ್ತಿದ್ದೇನೆ. ನಿಮ್ಮ ಜಾಥಾ ತುಂಬಾ ಯಶಸ್ವಿಯಾಗಿತ್ತು. ನಿಮ್ಮ ಬಗ್ಗೆ ಕನ್ನಡಿಗರ ವಿಶ್ವಾಸ ಅದ್ಭುತವಾಗಿತ್ತು” ಅಂದೆ. ರಾಜ್ ಅಭಿನಂದನೆಯನ್ನು ಸ್ವೀಕರಿಸುತ್ತಾ ಮುಗುಳ್ನಗುತ್ತಾ, “ಇದೆಲ್ಲಾ ಏನೂಂತ ನನಗೆ ಗೊತ್ತಿರಲಿಲ್ಲ. ಕನ್ನಡದ ಕೆಲಸಕ್ಕಾಗಿ ನಾನು ಬಂದೆ. ಕನ್ನಡಕ್ಕೆ ಅನ್ಯಾಯವಾಗೋದು ನನಗೆ ಸಹಿಸಲಿಲ್ಲ. ಜನರ ಪ್ರೀತಿಯಿಂದ ನಾನು ಮಂತ್ರಮುಗ್ಧನಾದೆ. ಅವರು ನನ್ನನ್ನು ಅಷ್ಟು ಪ್ರೀತಿಸೋದು ನನಗೇ ಗೊತ್ತಿರಲಿಲ್ಲ”ಅಂದರು.

ಯಥಾಪ್ರಕಾರದ ಮಾತಾಡಿ ಅವರ ಅವರ ಮತ್ತು ನನ್ನ ವೇಳೆ ಹಾಳುಮಾಡಲು ನನಗೆ ಇಷ್ಟವಿರಲಿಲ್ಲ. “ಜನರ ಉತ್ಸಾಹ, ಅದ್ಭುತ ಸ್ವಾಗತ ನೋಡಿದ ಮೇಲೆ ನಿಮಗೆ ಅವರು ನಿಮ್ಮಿಂದ ಏನನಾದರೂ ನಿರೀಕ್ಷಿಸಬಹುದು ಅನ್ನಿಸಲಿಲ್ಲವೇ?” ಜನರ ಉತ್ಸಾಹ, ಅದ್ಭುತ ಸ್ವಾಗತ ನೋಡಿದ ಮೇಲೆ ನಿಮಗೆ ಅವರು ನಿಮ್ಮಿಂದ ಏನನಾದರೂ ನಿರೀಕ್ಷಿಸಬಹುದು ಅನ್ನಿಸಲಿಲ್ಲವೇ?” ಅಂದೆ. ಅದು ರಾಜಕೀಯ ಅರ್ಥಗಳುಳ್ಳ ಪ್ರಶ್ನೆ ಎನ್ನುವುದು ಅವರಿಗೆ ತಿಳಿಯಿತು.

“ಅಂದರೆ….?” ಎಂದರು.

ಪ್ರಶ್ನೆ: “ನೀವು ಜನರಿಗೆ ಏನನಾದರೂ ಸಹಾಯ ಮಾಡುವ ಪ್ರಶ್ನೆ…. ಅವರನ್ನು ಮುಂದೆ ತರೋ ವಿಚಾರ”

ಡಾ. ರಾಜ್; ಎಲ್ಲರೂ ನನ್ನನ್ನು ಕೇಳುತ್ತಿದ್ದಾರೆ-ಮುಂದೆ ಏನು ಮಾಡುತ್ತೀರಿ?” ರಾಜಕೀಯಕ್ಕೆ ಇಳಿಯುತ್ತೀರಾ? ಎಂದು. ಕಲೆ ನನ್ನ ಬದುಕು. ಹೇಗೋ ಕಲೆಯ ರಂಗಕ್ಕೆ ಬಂದೆ. ಅಲ್ಲಿ ನಾನು ಏನೂ ದೊಡ್ಡದಕ್ಕೆ ಆಸೆಪಡಲಿಲ್ಲ. ತಿನ್ನಲು ಒಂದು ತುತ್ತು ಅನ್ನ, ಇರಲು ಒಂದು ಮನೆ ಸಾಕು ಎಂದುಕೊಂಡಿದ್ದೆ. ಅದನ್ನು ದೇವರು ನಡೆಸಿದ. ಹಾಗೇ ಬೆಳೆದುಕೊಳ್ಳುತ್ತಾ ಈಗ ನನಗೆ ಕೀರ್ತಿ ಐಶ್ವರ್ಯ ಸಿಕ್ಕಿದೆ. ನನಗೆ ಬಂಗಲೆಗಳಿವೆ. ಅಲ್ಲದೆ ಜನರ ಪ್ರೇಮ ಸಿಕ್ಕಿದೆ-ನನಗೆ ತೃಪ್ತಿ. ನನ್ನನ್ನು ರಾಜಕಾರಣಿಗಳು ಆದರಿಸುತ್ತಾರೆ. ನನಗೆ ಎಲ್ಲಾ ಜನ, ಪಕ್ಷ ಗೌರವಿಸುತ್ತಾರೆ. ಕಲಾವಿದನಾದ ನನಗೆ ಉಳಿದ ಗಲಾಟೆಯೆಲ್ಲಾ ಏಕೆ ಬೇಕು? ಸಾಮಾನ್ಯ ಜನ ನನ್ನ ಚಿತ್ರ ನೋಡಿ ಸಂತೋಷಪಡುತ್ತಾರೆ-ರೈತರು, ಹರಿಜನರು ವಿದ್ಯಾವಂತರು ಎಲ್ಲಾ ಜನ. ಬೆಳಗಾವಿಯಲ್ಲಿ ಕಟ್ಟೀಮನಿಯವರು “ರಾಜ್ಕುಮಾರ್ ಕನ್ನಡಕ್ಕಾಗಿ ರಾಜಕೀಯಕ್ಕೆ ಇಳಿಯಲಿ ” ಎಂದಾಗ ಜನ “ಹೋ, ಬೇಡ ಎಂದರು. ನೋಡಿ, ಹೀಗಿರುವಾಗ ನಾನು ಏನು ಮಾಡಲಿ…..!”

ನಮ್ಮಿಬ್ಬರ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಚಿದಾನಂದ ಮೂರ್ತಿಗಳು ಹೇಳಿದರು: “ನಾನೇ ಇದನ್ನು ನೋಡಿದೆ. ರಾಜಕುಮಾರರು ಮೈಸೂರಲ್ಲಿ ಜಾಥಾ ಮುಗಿಸಿ ಚನ್ನಪಟ್ಟಣಕ್ಕೆ ಬರೋದ್ರಲ್ಲಿದ್ದರು. ನಾನು ಮಿತ್ರರೊಂದಿಗೆ ಮುಂಚೆ ಚನ್ನಪಟ್ಟಣಕ್ಕೆ ಹೋಗಿ ರಾಜ್ ಭಾಷಣಕ್ಕೆ ವ್ಯವಸ್ಥೆ ಮಾಡುತ್ತಿದ್ದಾಗ ಒಬ್ಬಳು ಚಿಕ್ಕ ಹುಡುಗಿ ಹೇಳಿದಳು-“ರಾಜ್ ರನ್ನು ರಾಜಕೀಯಕ್ಕೆ ಕರೆತರಬೇಡಿ” ಅಂತ. “ಅವಳ ಮುಗ್ಧ ಹೇಳಿಕೆ ನೋಡಿ ನನಗೆ ಆಶ್ಚರ್ಯವಾಯಿತು.”

ನಾನು ರಾಜ್ ಮಾತಿಗೆ ಉತ್ತರವಾಗಿ ಹೇಳಿದೆ. “ನೀವು ಜನಕ್ಕೆ ಸಹಾಯ ಮಾಡೋದು ಅಂದ್ರೆ ರಾಜಕೀಯಕ್ಕೆ ಇಳಿಯಲೇಬೇಕು ಅನ್ನೋದು ನನ್ನ ಇಂಗಿತವಲ್ಲ. ಸಾರ್ವಜನಿಕ ಸಂಪರ್ಕದಲ್ಲಿ ನಿಮಗೆ ಮೂರು ರೀತಿಗಳು ಇರಲು ಸಾಧ್ಯ. ಮೊದಲನೆಯದಾಗಿ ನೀವು ನಿಮ್ಮ ಚಿತ್ರಗಳ ಮೂಲಕ ಜನರನ್ನು ರಂಜಿಸಿ ಅವರಿಗೆ ನೆರವಾಗೋದು. ಎರಡನೆಯದಾಗಿ, ನೀವು ಅವರ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡು-ಮೊನ್ನೆಯ ಜಾಥಾದಂತೆ ಅವರ ಮೂಢನಂಬಿಕೆ, ರಾಜಕೀಯದ ಬಗೆಗಿನ ಅಜ್ಞಾನ, ವ್ಯವಸ್ಥೆಯ ಬಗೆಗಿನ ಮುಗ್ಧತೆಯಯನ್ನೆಲ್ಲಾ ಹೋಗಲಾಡಿಸೋದು.

rajakumar puneet ಉದಾಹರಣೆಗೆ ನೀವು ಅವರು ಒಪ್ಪಬೇಕಾದ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಕೊಡಬಹುದು. ಈಗಿನ ರಾಜಕೀಯದ ಬಗ್ಗೆ ತಿಳಿಸಿ ಹೇಳಬಹುದು. ಇದು ಗಾಂಧಿ, ಜೆ.ಪಿ. ಮುಂತಾದವರು ನಾಯಕರಾದ ರೀತಿ. ಅವರೆಂದೂ ಮಂತ್ರಿಗಳಾಗಲು ಪ್ರಯತ್ನಿಸಲಿಲ್ಲ. ಕೊನೆಯದಾಗಿ ನೇರ ರಾಜಕೀಯಕ್ಕಿಳಿದು ಪುಢಾರಿಗಳ ಹಾಗೆ ಚುನಾವಣಾ ರಾಜಕೀಯದಲ್ಲಿ ಮುಳುಗೋದು. ಮೊದಲನೆಯದು, ಮೂರನೆಯದು ನಿಮಗೆ ಇಷ್ಟವಿಲ್ಲದಿದ್ದರೂ ಎರಡನೆಯ ರೀತಿಯಲ್ಲಿ ಸಾರ್ವಜನಿಕ ರಂಗಕ್ಕೆ ಬರಬಹುದಲ್ಲವೇ?”

ನನ್ನ ಪ್ರಶ್ನೆಯ ಬಗ್ಗೆ ಕ್ಷಣ ಯೋಚಿಸಿದರು. ಮತ್ತೆ ಸೆಟ್ ಮೇಲೆ ಬೆಳಕು ವ್ಯವಸ್ಥೆಗೊಳ್ಳತೊಡಗಿತ್ತು. ಕ್ಯಾಮರಾಮನ್ ಗೌರಿ ರೆಡಿಯಾಗಿದ್ದರು.

ರಾಜ್ ಹೇಳಿದರು. “ಅದು ಸರಿ, ಆದರೆ ನಾನು ಎಂದೂ ನನ್ನ ಜೀವನವನ್ನು ಪ್ಲಾನ್ ಮಾಡಿಲ್ಲ. ಅದು ನಡೆಸಿದಂತೆ ಹೋಗಿದ್ದೇನೆ.”

ಅದೇ ಒಂದು ರೀತಿಯಲ್ಲಿ ಒಳ್ಳೆಯದು. ಆದರೆ ನನ್ನ ಪ್ರಕಾರ ಮೊನ್ನೆ ನೀವು ನಡೆಸಿದ ಜಾಥಾದಿಂದ ನಿಮಗೆ ಜನಸಂಪರ್ಕದ ಬಗ್ಗೆ ಇಷ್ಟ ಬಂದಿರಬೇಕು” ಅಂದೆ.

ರಾಜ್ ಶೂಟಿಂಗ್ ಗೆ ಎದ್ದರು. “ಬಂದ್ಬಿಡ್ತೇನೆ” ಎಂದು ಹೊರಟರು. ಹೊಳೆವ ಬಿಳಿಮಲ್ ಅಂಗಿ, ನಶ್ಯ ಬಣ್ಣದ ಕಾರ್ ಡ್ರೈ ಶರಾಯಿ ಹಾಕಿದ್ದ ರಾಜ್ ಚುರುಕಾಗಿ ಕಾಣುತ್ತಿದ್ದರು. ಈ ವ್ಯಕ್ತಿಯ ಯೌವನ ಎಲ್ಲರನ್ನೂ ಚಕಿತಗೊಳಿಸುತ್ತಿತ್ತು. ಇವರಿಗಿಂತ ಮೂರು ವರ್ಷ ಕಿರಿಯರಾದ ಚಿದಾನಂದ ಮೂರ್ತಿ ಅವರ ಚಿಕ್ಕಪ್ಪನಷ್ಟು ವಯಸ್ಸಾಗಿ ಕಾಣುತ್ತಿದ್ದರು.

ಕಾಯುತ್ತಾ ನಾನು ಒಬ್ಬನೇ ಓಡಾಡುತ್ತಿದ್ದಾಗ ಪತ್ನಿ ಪಾರ್ವತಮ್ಮ ಬಂದರು. ಜನ ಮಾತಾಡುತ್ತಿದ್ದ ರೀತಿಯಿಂದ ಪಾರ್ವತಮ್ಮ ಮಹಾ ಜೋರಿನ ಮಹಿಳೆಯಿರಬೇಕೆಂದು ತಿಳಿದಿದ್ದೆ. ಆದರೆ ನನ್ನ ತಿಳಿವು ತಪ್ಪಾಗಿತ್ತು. ನಮ್ಮೂರ ಕರೆಯ ಗಟ್ಟಿ ಹೆಂಗಸಿನಂತೆ ಕಾಣುವ ಪಾರ್ವತಮ್ಮ ಒಳ್ಳೆಯವರು. ಯಾವುದೇ ದೌಲತ್ತಿಲ್ಲದೆ ಮಾತಾಡುವ ವ್ಯವಹಾರ ಜ್ಞಾನವುಳ್ಳ ಹೆಣ್ಣುಮಗಳೀಕೆ. ತುಂಬ ಆಕರ್ಷಕ ಹೆಣ್ಣುಮಗಳು ಕೂಡ. ನನ್ನ ಪರಿಚಯವಾದೊಡನೆ “ನೀವು ಗೊತ್ತು. ಅವಾರ್ಡ್ ಕೊಡುವ ಸಮಾರಂಭದಲ್ಲಿ ನೋಡಿದ್ದೆ” ಎಂದರು. ನಾನು ಅದನ್ನು ನೆನೆದು ಗಟ್ಟಿಯಾಗಿ ನಕ್ಕೆ. “ನಾನು ಬೇಕಂತಲೇ ಮೊನ್ನೆ ನೀವು ಭಾಷಣ ಮಾಡುತ್ತಿದ್ದ ಫೋಟೋ ಹಾಕಿದ್ದೆ, ನೋಡಿದಿರೋ ಇಲ್ಲವೋ” ಅಂದೆ. “ನೋಡಿದೆ… ನಾನು ನಿಮ್ಮ ಪತ್ರಿಕೇನ ಹುಡುಕಿ ತರಿಸಿ ಓದ್ತೇನೆ ಗೊತ್ತಾ?” ಅಂದರು.

“ಜಾಥಾ ಹೇಗಿತ್ತು?” ಅಂದೆ.

ಏನಿಲ್ಲದಿದ್ದರೂ ನಿಮಗೆ ಮೈಚಳಿ ಬಿಟ್ಟು ಮಾತಾಡೋದು ಅಭ್ಯಾಸವಾಯಿತು.” ಅಂತ ನನಗೆ ಯಜಮಾನರು ಹೇಳಿದರು. ನನಗೆ ಭಾಷಣ ಮಾಡೋಕೆ ಬರೋಲ್ಲ, ಬರೀ ಎರಡು ಮಾತು ನಾನಾಡಿದ್ದು”ಎಂದರು ವಿನಯದಿಂದ.

“ನಿಮ್ಮ ಯಜಮಾನ್ರು ರಾಜಕೀಯ ಸೇರೋ ಬಗ್ಗೆ ವಿವಾದ ಎದ್ದಿದೆ?” ಅಂದೆ.

“ನಾವೀಗ ಸುಖವಾಗಿದ್ದೇವೆ. ರಾಜಕೀಯ ಅಂದ್ರೆ ಮೋಸಗೀಸ, ಕುಟೀಲತೆ ಇರುತ್ತೆ, ಅದೆಲ್ಲಾ ನಮಗೇಕೆ ಅಂತ ಅವರ ಅಭಿಪ್ರಾಯ. ಅದು ಸರಿಯಲ್ಲವಾ?” ಅಂದರು ಪಾರ್ವತಮ್ಮ.

ನಾನು ಮಾತು ಬೆಳೆಸಲಿಲ್ಲ. ಸಿನಿಮಾ ಜಗತ್ತಿನ ಬಗ್ಗೆ, ಅಲ್ಲಿ ನಡೆದ ಚಿತ್ರಮಂದಿರಗಳ ಅವ್ಯವಹಾರಗಳ ಬಗ್ಗೆ ಮಾತಾಡಿದರು. ತಾವು ಇನ್ನೊಬ್ಬರಿಂದ ಚಿತ್ರಮಂದಿರ ಹೇಗೆ ಕೇಳ್ತಿದ್ದೇವೋ ಹಾಗೇ ತಮ್ಮ ವಿತರಣೆಯ ಚಿತ್ರಗಳಿಗೆ ಪ್ರಾಮಾಣಿಕವಾಗಿರಲು ನಡೆಸಿರುವ ಪ್ರಯತ್ನ ಹೇಳಿದರು. ಆಮೇಲೆ ಅಶೋಕ್, ಲೋಕೇಶ್, ಭಗವಾನ್ ಜೊತೆಗೆ ತಮಾಷೆಯಾಗಿ ಮಾತಾಡುತ್ತ ಕೂತರು.

rajakumar with chi udayashankarರಾಜ್ ಶಾಟ್ ಮುಗಿಸಿ ಬಂದರು. ನಾವು ಹಿಂದೆ ಬಿಟ್ಟಿದ್ದ ಎಳೆಯನ್ನೇ ಎತ್ತಿಕೊಂಡು ಶುರುಮಾಡಿದೆವು. “ಜನಸಂಪರ್ಕ ಬೆಳೆಸಿ ಜನರಿಗೆ ವಿವೇಕ ಹೇಳಬಹುದು”ಅಂದೆ.

ರಾಜ್ ಕೇಳುತ್ತಿದ್ದರು. ವಿವರ ಬಯಸಿದ್ದರು.

“ನಿಮಗೆ ದೇವರಲ್ಲಿ ಭಕ್ತಿ ಇದೆ ಅಲ್ಲವೇ?” ಅಂದೆ.

“ಹೌದು, ಆದರೆ ನಾವ್ಯಾರೂ ದೇವರನ್ನು ಮನುಷ್ಯರಿಂದ ಹೊರಗೆ ನೋಡುವ ಸಂಭವವೇ ಇಲ್ಲ. ಆದ್ದರಿಂದ ನೀವು ನನಗೆ, ನಾನು ನಿಮಗೆ ದೇವರು. ಭಕ್ತಿ ಅನ್ನೋದು ಒಂದು ಮನಸ್ಥಿತಿ. ದೈವಾಂಶವನ್ನು ಧ್ಯಾನಿಸುವುದರಿಂದ ಪಡೆವ ವಿಚಿತ್ರ ಮನಃಸ್ಥಿತಿ” ಅಂದರು.

“ಹೌದು, ಆದರೆ ಎಷ್ಟು ಜನಕ್ಕೆ ನಿಮ್ಮ ಬಗೆಯ ಚಿಂತನೆ ಇದೆ? ಸಾಮಾನ್ಯನಿಗೆ ಭಕ್ತಿಗೂ ಮೂಢನಂಬಿಕೆಗೂ ವ್ಯತ್ಯಾಸ ತಿಳಿಯೋಲ್ಲ. ಅಂಥವನಿಗೆ ತನ್ನನ್ನು ಶೋಷಿಸುವ ಧಣಿ ದೇವರಂತೆ ಕಾಣ್ತಾನೆ. ಧಣಿಗೆ ಮಾತ್ರ ಅವನು ದೇವರಾಗಿ ಕಾಣೋಲ್ಲ.”

“ಆದರೆ ಅವನ ಕರ್ಮ ಅವರನ್ನು ಹಿಂದಕ್ಕೆ ಎಳೀಬೇಕು.”

“ಎಳಿಯೋಲ್ಲ. ಒಂದು ಪರಂಪರಾಗತ ವ್ಯವಸ್ಥೆಯಲ್ಲಿ ಶೋಷಣೆ ಮತ್ತು ಶೋಷಿಸಲ್ಪಡೋದು ಅಭ್ಯಾಸವಾಗಿ ಹೋಗುತ್ತೆ. ಅಂಥ ತಿಳಿಯದ ಬಡವನಿಗೆ ನಾವು ಬುದ್ಧಿ ಹೇಳಬೇಕಾಗುತ್ತೆ, ಅವನ ಮನಸ್ಸು ಮತ್ತು ಸಾಮಾಜಿಕ ಮಟ್ಟವನ್ನೇ ಬದಲಿಸಲು ಯತ್ನಿಸಬೇಕಾಗುತ್ತೆ. ಆ ವಲಯದಲ್ಲಿ ತಿಳಿದ ನಿಮ್ಮಂಥವರು ಬಡವನಿಗೆ ನೆರವಾಗಬಹುದಲ್ಲವೇ?

ಇದು ಅವರಿಗೆ ಸರಿಯೆನ್ನಿಸಿರಬೇಕು, ಯೋಚಿಸತೊಡಗಿದರು. ನಾನು ಕೇಳಿದ್ದಂತೆ ರಾಜಕುಮಾರ್ ಮನಸ್ಸನ್ನು ಮುಚ್ಚಿಕೊಂಡು ಗೊಡ್ಡಾಗಿಯೇ ಮಾತಾಡುವ ಹಠ ತೊಟ್ಟವರಲ್ಲ. ಆದ್ದರಿಂದ ನಾನು ಬೇಗ ಅವರನ್ನು ಇನ್ನೊಂದು ವಿಚಾರಕ್ಕೆ ಎಳೆದೊಯ್ಯಲು ಮನಸ್ಸು ಮಾಡಿ ಹೇಳಿದೆ, “ನೀವು ತುಂಬಾ ಚೆನ್ನಾಗಿ ಹಾಡ್ತೀರಿ.”

“ಮುಂಚೆ ಕೊಂಚ ಹಿಡಿದು ಹಿಡಿದು ಬರ್ತಿತ್ತು. ಆಮೇಲೆ ಮೈಕ್ ಎದುರು ಸರಾಗವಾಗಿ ಹಾಡೋದು ಅಭ್ಯಾಸವಾಯಿತು. ಬೇಡರ ಕಣ್ಣಪ್ಪ ಚಿತ್ರದಲ್ಲಿ ಹಾಡಲು ಹೋಗಿ ಸರಿಹೋಗಲಿಲ್ಲ” ಅಂದರು.

“ರಂಗಭೂಮಿಯ ನಟನೆಗೂ ಚಿತ್ರದ ನಟನೆಗೂ ವ್ಯತ್ಯಾಸವಿದೆಯಲ್ಲವೇ? ಪ್ರೇಕ್ಷಕರೆದುರು ನಟಿಸುವಾಗ ಸ್ಫೂರ್ತಿ ಬಂದು ನಟನೆ ಕೂಡಲೇ ಉನ್ನತವಾಗುತ್ತೆ, ಇಲ್ಲಿ ಕ್ಯಾಮರಾ ಎದುರು ಶಾಟ್ ಗಳಿಗೆ ನಟಿಸುವಾಗ…”

“ಹೌದು, ನಾನು ಹತ್ತು ವರ್ಷ ಪ್ರಯತ್ನಪಟ್ಟು ಸಿನಿಮಾ ನಟನೆಯನ್ನು ಕಲಿತೆ. ಈಗ ಸಿನಿಮಾ ನಟನೆ, ಹಾಡು ಕೂಡ ಅತ್ಯುತ್ತಮ ಕಲೆಯಾಗಲು ಸಾಧ್ಯ ಅನ್ನಿಸುತ್ತಿದೆ” ಅಂದರು.

“ತಾಂತ್ರಿಕವಾಗಿ ನಾನು ನಿಮ್ಮ ಹಾಡುಗಳನ್ನು ಇಷ್ಟಪಡ್ತೇನೆ. ಆದರೆ ರಾಘವೇಂದ್ರ ಜನರಲ್ಲಿ ಅಗತ್ಯವಲ್ಲದಷ್ಟು ಭಕ್ತಿ ಉಕ್ಕಿಸಿದರೆ ಕೆಟ್ಟದಲ್ಲವೇ?” ಅಂದೆ.

“ಹಾಗಲ್ಲ, ಭಕ್ತಿಯ ಹಾಡನ್ನು ಭಕ್ತಿಯಿಂದ ಹಾಡ್ತೇನೆ” ಅಂದರು.

rajakumar sculpture“ಸರಿ, ಒಂದು ಪ್ರಶ್ನೆ ಕೇಳ್ತೇನೆ, ನಿಮ್ಮನ್ನು ಹೀಯಾಳಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ಉತ್ತರ ಜನಕ್ಕೆ ಉಪಯುಕ್ತವಾಗುತ್ತೆ. ನಾನು ಮಂತ್ರಾಲಯಕ್ಕೆ ಹೋಗಿಲ್ಲ, ಕೇಳಿದ್ದೇನೆ ಅಲ್ಲಿ ಬ್ರಾಹ್ಮಣರಿಗೆ ಬೇರೆ ಜಾಗದಲ್ಲಿ ಶೂದ್ರರಿಗೆ ಬೇರೆ ಜಾಗದಲ್ಲಿ ಊಟ ಹಾಕುವುದು ನಿಜವೇ? ನಿಮಗೆಲ್ಲಿ ಊಟ ಹಾಕ್ತಾರೆ” ಅಂದೆ.

ರಾಜ್ ನಕ್ಕರು, “ನಾನು ಅದನ್ನು ಗಮನಿಸಿಲ್ಲ. ಒಂದು ದೊಡ್ಡ ಹಾಳ್ ನಲ್ಲಿ ಊಟ ಹಾಕ್ತಾರೆ, ಅವರು ಹಾಗೆ ಮಾಡಿದರೆ ಅದು ಅವರ ಕರ್ಮ.” ಎಂದು ನನ್ನ ಪ್ರಶ್ನೆಯಿಂದ ಕೊಂಚ ಆಳಕ್ಕೆ ಹೋಗುತ್ತಾ, ಹೇಳಿದರು. “ನೋಡಿ, ಈಡಿಗ ಜಾತಿಯ ನಾನು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಬೇಕಾಗಿ ಬಂದದ್ದು ಏನನ್ನು ತೋರಿಸುತ್ತದೆ? ಕಲೆ ಅಹಂಕಾರಗಳನ್ನೆಲ್ಲಾ ಮೀರಿದ್ದು. ಅನ್ನೋದಲ್ಲವೇ? ನಿಮಗೊಂದು ವಿಷಯ ಹೇಳ್ತೆನೆ. ರಾಘವೇಂದ್ರನ ಪಾತ್ರಮಾಡಲು ನನಗೆ ಸೂಚಿಸಿದಾಗ ನಾನು ವಿನಯದಿಂದ ಹಿಂಜರಿದೆ. ಆದರೆ ನಾಲ್ಕು ಜನ ನಟರ ಹೆಸರಿನ ಚೀಟಿ ಬರೆದು ಎತ್ತಿದಾಗ ನನ್ನ ಹೆಸರು ಬಂತು. ಆಗ ನಾನು ‘ನಾನೇ ಮಾಡ್ತೇನೆ’ ಎಂದು ದೃಢವಾಗಿ ಹೇಳಿದೆ.”

ಜಾತಿಯ ಪ್ರಶ್ನೆಯನ್ನು ನೆನೆಯುತ್ತಾ ಡಾ. ರಾಜ್, “ಕೆದಕುತ್ತಾ ಹೋದರೆ ಅದು ತಿಪ್ಪೆಗುಂಡಿಯಂತೆ ಆಳ” ಎಂದರು.

“ಸಿನಿಮಾ ಬಗ್ಗೆಯೇ ಮಾತಾಡೋಣ. 1960ರಲ್ಲೆಂದು ಕಾಣುತ್ತೆ, ನಾನು ಮತ್ತು ತೇಜಸ್ವಿ ನೀವು ನಟಿಸಿದ್ದ ‘ಭೂದಾನ’ ಚಿತ್ರವನ್ನು ಶಿವಮೊಗ್ಗೆಯಲ್ಲಿ ನೋಡುತ್ತಿದ್ದಾಗ ನೀವು ಆ ಚಿತ್ರದಲ್ಲಿ ಹೆಚ್ಚು ಮಾತಾಡದಿದ್ದರೂ ಯಾರೋ ಗೊತ್ತಿಲ್ಲದಿದ್ದರೂ ‘ನೋಡಿ ಈತ ಯಾರೋ ಗೊತ್ತಿಲ್ಲ-ಈ ಚಿತ್ರದಲ್ಲಿ ಇವನೇ ನಟ’ ಎಂದರು ತೇಜಸ್ವಿ” ಅಂದೆ.

ರಾಜ್ ಉಲ್ಲಾಸಗೊಂಡು ನಕ್ಕರು.

“ಆ ಚಿತ್ರದಲ್ಲಿ ಮಾತಿಲ್ಲ. ಮಾತುಗಳಿಲ್ಲದ ಕರ್ಣಾಟಕದ ಗಡಿಯನ್ನು ದಾಟಬಲ್ಲಂತಹ ಮೌನದ ಮೂಲಕವೇ ಕಲಾತ್ಮಕ ಚಿತ್ರವಾಗಿ ಭಾರತೀಯರೆಲ್ಲರ ಮನಸ್ಸು ಗೆಲ್ಲುವ ಚಿತ್ರ ಮಾಡಲು ನಿಮಗೆ ಇಷ್ಟವಿಲ್ಲವೇ?” ಅಂದೆ.

ರಾಜ್ ಮುಗುಳ್ನಗುತ್ತಾ, ದೃಢವಾದ ಧ್ವನಿಯಲ್ಲಿ ಹೇಳಿದರು. “ಇಷ್ಟವಿದೆ, ಮಾಡೇ ಮಾಡ್ತೇನೆ”ಅಂದರು.

ಮತ್ತೆ ಅವರಿಗೆ ಕಷ್ಟಕೊಡುವುದು ನನಗಿಷ್ಟವಿರಲಿಲ್ಲ. ಅಷ್ಟರಲ್ಲಿ ಕ್ಲೋಸಪ್ಗಾಗಿ ಬೆಳಕು ಸಿದ್ಧವಾಗಿತ್ತು. ನಮ್ಮ ಚಿತ್ರಗ್ರಾಹಕ ರಾಜಶೇಖರ್ ಚಿತ್ರ ತೆಗೆದುಕೊಂಡಿದ್ದ.

“ಕೊಂಚ ಹೊರಗೆ ಬಂದರೆ ಇನ್ನೆರಡು ಚಿತ್ರ ತಗೋತಾರೆ. ಫ್ಲಾಶ್ ಅನ್ನು ಸದಾ ನಂಬೋಕಾಗೋಲ್ಲ” ಅಂದೆ.

ಮಗುವಿನಂತೆ ರಾಜ್ ಹೊರಗೆ ಬಂದು ಫೋಟೋ ತೆಗೆಸಿಕೊಂಡರು.

“ಕಾಫಿ ತಗೊಳ್ಳಿ” ಅಂದರು, “ತಗೊಂಡೆ” ಅಂದೆ.

“ತಣ್ಣನೆಯ ಪಾನೀಯ?” ಅಂದರು.

“ಬೇಡಿ, ನಾನಿನ್ನು ಬರ್ತೇನೆ” ಎಂದು ಚಿದಾನಂದ ಮೂರ್ತಿಗಳೊಡನೆ ಅಲ್ಲಿಂದ ಹೊರಟೆ.

raj

ರಾಜ್ ರನ್ನು ಸಂದರ್ಶಿಸಲು ಹೋದಾಗ ಆದದ್ದು:

ನನ್ನ ಅಜ್ಞಾನದ ಬಗ್ಗೆ ನನಗೇ ನಾಚಿಕೆಯಾಯಿತು. ಎದುರುನಿಂತು ಚಿರಪರಿಚಿತನಂತೆ ಮುಗುಳುನಗುತ್ತಿದ್ದ ವ್ಯಕ್ತಿಯನ್ನು ಕುತೂಹಲದಿಂದ ಕೇಳಿದೆ, “ತಮ್ಮ ಹೆಸರು ತಿಳೀಲಿಲ್ಲ”

“ಅವರ ಹೆಸರು ಭಗವಾನ್. ದೊರೆ-ಭಗವಾನ್ ಜೋಡಿಯ ಭಗವಾನ್” ಎಂದು ಪಕ್ಕದಲ್ಲಿದ್ದವರು ಹೇಳಿದರು.

“ನಾನು ಪತ್ರಿಕೆಯ ರೆಗ್ಯುಲರ್ ಓದುಗ” ಎಂದು ಮುಂತಾಗಿ ಹೇಳಿದ ಭಗವಾನ್ ಕೂತರು. ಅವರು ಪಾರ್ವತಮ್ಮ, ಲೋಕೇಶ್, ಅಶೋಕ್ ಮುಂತಾದವರೆಲ್ಲ ತಮಾಷೆಯಾಗಿ ಮಾತನಾಡುತ್ತಿದ್ದರು.

ಸಿನಿಮಾಕ್ಕೆ ಹುಡುಗಿಯರನ್ನು ಹುಡುಕುವ ವಿಚಾರ ಬಂತು. ನನಗೇ ಆಶ್ಚರ್ಯವಾಯಿತು. ಪಾರ್ವತಮ್ಮನವರು ಕೂಡ ತಕ್ಕ ತಾರೆಯರಿಗಾಗಿ ತಡಕಾಡುವುದು ನನ್ನಂಥ ಬಡ ನಿರ್ದೇಶಕನಲ್ಲಿ ಸಂತೋಷ ಹುಟ್ಟಿಸಿತು. ಗುರಿ ಶಂಕರ್ ರನ್ನು ಕರೆದು “ಅಂತರಾಳದಲ್ಲಿ ಒಂದು ಹುಡುಗಿ ಇದ್ದಾಳಂತಲ್ಲಾ ಹೇಗಿದ್ದಾಳೆ?” ಅಂದರು.

“ತುಂಬಾ ತೆಳ್ಳಗಿದ್ದಾಳೆ, ಪರವಾಗಿಲ್ಲ” ಎಂದರು ಗೌರಿ.

“ನೀವು ಒಂದು ಪ್ರಕಟಣೆ ಕೊಟ್ಟರೆ ಬೇಕಾದಷ್ಟು ಜನ ಬರಬಹುದು” ಅಂದೆ. ಭಗವಾನ ತಲೆಯಾಡಿಸಿದರು. “ಇಲ್ಲ ಸರಿಯಾದವರು ಸಿಗೋಲ್ಲ. ನಮಗೆ ಪರಿಚಯದವರಲ್ಲೇ ಒಬ್ಬರನ್ನು ಆರಿಸೋದು ಯಾವಾಗಲೂ ಒಳ್ಳೆಯದು” ಅಂದರು.

ಪಾರ್ವತಮ್ಮನವರು ತಮಾಷೆ ಮೂಡಿನಲ್ಲಿದ್ದರು. ಪಕ್ಕದಲ್ಲೊಬ್ಬ ದಪ್ಪಕೋಟು ಹಾಕಿ ಅವರಿಗೆ ನಮಸ್ಕರಿಸಿ ಹೋಗುತ್ತಿದ್ದ. ಅವರನ್ನು ಹಿಂದಕ್ಕೆ ಕರೆದು, “ನಿರ್ದೇಶಕ ರಿದ್ದಾರೆ ನೋಡು” ಅಂದರು. ಆತ ಭಗವಾನರಿಗೆ ನಮಸ್ಕರಿಸಿ ಬಂದ.

“ಇಲ್ಲ ನಾನು ಕರೀಲಿಲ್ಲ” ಎಂದರು ಭಗವಾನ್.

ಆತ ಹೋದ ಮೇಲೆ ಪಾರ್ವತಮ್ಮ ನಗುತ್ತಾ ಅಂದರು, “ದೊಡ್ಡ ಡೈರೆಕ್ಟರ್-ನಟರನ್ನು ಕಳುಹಿಸಿದರೆ ಬೇಡ ಅನ್ನೋದೇ? ಎಲ್ಲರನ್ನೂ ನೆನಪಿಟ್ಟುಕೊಂಡು ಛಾನ್ಸ್ ಕೊಡಬೇಕು” ಅಂದರು.

ಸ್ಟಾರ್ ಹುಡುಕುವ ಬಗ್ಗೆ ತಮಾಷೆಯಾದ್ದರಿಂದ ಅವಿವಾಹಿತ ಅಶೋಕ್ ನೋಡಿ ಭಗವಾನ್ ಹೇಳಿದರು. “ನಾನು ಅಶೋಕ್ ರನ್ನ ಕೇಳುವಂತಿಲ್ಲ. ನಿಜಜೀವನದಲ್ಲಿ ಅವರಿಗೆ ಸ್ಟಾರೊಬ್ಬಳು ಬೇಕಾಗಿದೆ. ಸಿನಿಮಾದಲ್ಲಿ ಕೇವಲ ಹುಡುಗಿ ಬೇಕಾಗಿದೆ” ಅಂದರು. ಎಲ್ಲರೂ ನಕ್ಕರು.

ಸುತ್ತಾ ಹುಡುಗರು ಓಡಾಡುತ್ತಿದ್ದರು. ಅವರಲ್ಲಿ (ನಾನು ಕೇಳಿದ್ದಂತೆ) ಪಾರ್ವತಮ್ಮ ಮತ್ತು ರಾಜ್ ಬಗ್ಗೆ ಭಟ್ಟಂಗಿತನವಾಗಲೀ, ಗುಲಾಮಗಿರಿಯಾಗಲಿ ಇರಲಿಲ್ಲ. ಅವರ ಕೆಲಸ ಅವರು ಮಾಡಿಕೊಂಡಿದ್ದರು. ರಾಜ್ ತಮ್ಮ ಶಾಟ್ ಮುಗಿಸಿ ನಮ್ಮೊಂದಿಗೆ ಕುಳಿತುಕೊಳ್ಳಲು ಬಂದಾಗ ವಿಪರೀತ ಶೆಖೆಯಿತ್ತು. ‘ರೀ’ ಎಂದು ಕೂಗಿದರು. ಅವರು ಎರಡನೇ ಸಲ ಕೂಗಿದಾಗ ಪಾರ್ವತಮ್ಮನವರು ಎದ್ದು “ಏನು ಬೇಕು, ಏನು ಬೇಕು?’ ಅಂದರು. “ಯಾರಾದ್ರೂ ಒಂದು ಫ್ಯಾನ್ ಇತ್ತ ತಂದರೆ ಒಳ್ಳೆಯದು” ಅಂದರು. ಹುಡುಗನೊಬ್ಬ ಬಂದು ಫ್ಯಾನ್ ಇಟ್ಟ.

ರಾಜ್ ಕುಮಾರ್ ಅಶೋಕ್ ಗೆ, “ಹೇಗಿದ್ದೀರಿ ಹುಟ್ಟು ಹೋರಾಟಗಾರರು?” ಎಂದು ತಮಾಷೆ ಮಾಡಿದರು.

“ನಾವೆಲ್ರೂ ಈಗ ‘ಉಟ್ಟು’ ಹೋರಾಟಗಾರರು ತಾನೇ? ಅದು ‘ಪತ್ರಿಕೆ’ಯಲ್ಲಿ ಲಂಕೇಶ್ ತಯಾರಿಸಿದ ಮಾತು” ಎಂದು ಅಶೋಕ್ ನಕ್ಕರು. “ಹೌದಾ?” ಎಂದು ‘ಉಟ್ಟು’ ಹೋರಾಟಗಾರರ ಹಿನ್ನೆಲೆ ಗೊತ್ತಿಲ್ಲದ ರಾಜ್ ಒಂದು ಕತೆ ಹೇಳಿದರು.

” ‘ಸಾಹುಕಾರ’ ನಾಟಕದಲ್ಲಿ ಒಬ್ಬ ಆಚಾರಿ, ಒಬ್ಬ ಮಾರವಾಡಿ ಬರ್ತಾರೆ. ಮಾರವಾಡಿಯ ಪಾರ್ಟನ್ನು ಬಾಲಣ್ಣ ಹಾಕಿದ್ರು. ಆಚಾರಿಯ ಪಾರ್ಟ ಅನ್ನು ನರಸಿಂಹ ರಾಜು ಹಾಕಿದ್ರು. ಇಬ್ಬರೂ ಮಾತನಾಡುತ್ತಿರುತ್ತಾರೆ. ಮಾರವಾಡಿ ಚೀಲವನ್ನು ಆಚಾರಿ ನೆಲದ ಮೇಲಿಟ್ಟು ಕೂತು ಬಿಟ್ಟಿದ್ದಾನೆ. ಆ ಆಚಾರಿಯನ್ನು ಮಾರವಾಡಿ ಚೀಲ ಎಲ್ಲಿ ಹೋಯಿತು? ಅಂತ ಕೇಳಿ ಕೊನೆಗೆ ಆಚಾರಿಯು ಕೆಳಗಿರುವುದನ್ನು ನೋಡಿ, ‘ಉಟ್ರೇ’ಅಂತಾನೆ. ಆಚಾರಿ ಏಳೋಲ್ಲ. ಕೊನೆಗೆ ಮಾರ್ವಾಡಿಗೆ ಸಿಟ್ಟು ಬಂದು ಉಟ್ಟಪ್ಪಾ ಅಂದ್ರೆ ಉಟ್ಬೇಕು ಅಂತ ರೇಗ್ತಾನೆ….”

“ಉಟ್ಟು ಹೋರಾಟಗಾರ ಎಂಬ ಮಾತಿಗೆ ಉಟ್ಬೇಕು ಅನ್ನೋದನ್ನು ಸೇರಿಸಬಹುದು……” ಅಂದು ನಗುತ್ತಾ ಕಥೆ ಮುಗಿಸಿದರು ರಾಜ್.

-ಜುಲೈ 4, 1982

‍ಲೇಖಕರು Admin

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. hemapowar123

    ನಿನ್ನೆ ರಾತ್ರಿಯಿಂದ ಬಿಡದೇ ಓದಿಸಿಕೊಂಡಿದ್ದು, ಲಂಕೇಶರ ಆತ್ಮ ಚರಿತ್ರೆ ’ಹುಳಿಮಾವಿನ ಮರ’ ಲಂಕೇಶರ ವ್ಯಕ್ತಿತ್ವದ ಕುರಿತು ಬೆರೆಗುಗೊಳ್ಳುತ್ತಲೇ ಅವಧಿ ತೆಗೆದರೇ, ಈ ಪೋಸ್ಟ್!!
    ಎಂದಿನಂತೆ ಲಂಕೇಶರ ಗತ್ತಿನ ಶೈಲಿ ಮೆಚ್ಚುಗೆಯಾಗುತ್ತದೆ ಮತ್ತು ರಾಜ್ ಕುಮಾರ್ ರ ಸರಳ ವ್ಯಕ್ತಿತ್ವದ ಪರಿಚಯ ಕೂಡ.

    ಪ್ರತಿಕ್ರಿಯೆ
  2. ಸುಬ್ರಾವ್

    ವ್ಹಾವ್… ಒಳ್ಳೆ ಕಥೆ ಓದಿದಂತಿತ್ತು. ಇದನ್ನು ಇಲ್ಲಿ ಹಾಕಿದ್ದಕ್ಕೆ ಥ್ಯಾಂಕ್ಸ್.

    ಪ್ರತಿಕ್ರಿಯೆ
  3. akshatha

    lankeshara bashe mattu vastu vishayavnnu kattikoduva shaili adestu chenda idhe andre idi lekahana saragavagi odhisikondu hoguvudaste alla bahukala nenapinalliddu nammollage e baraha bere bere roopadalli belleyutta hoguttade. e lekana odidare 82 ralli barediddu antha yaru thane hellutare? e hottina hudugarigu idu nammannu manasinallittukonde rupisida baraha annisabeku hagiruttade lankesh barahagallu.

    ಪ್ರತಿಕ್ರಿಯೆ
  4. raviajjipura

    ಯಾಕೋ ಗೊತ್ತಿಲ್ಲ ಲಂಕೇಶ್ ಎಂದರೆ ಸಾಕು ಓದುವ ತೀವ್ರತೆ ಹೆಚ್ಚಾಗುತ್ತದೆ.
    ಒಂದೇ ಗುಕ್ಕಿನಲ್ಲಿ ಕಣ್ಣೆದುರಿಗಿರುವ ಅವರ ಬರಹ ಓದಿ ಮುಗಿಸಬೇಕು ಅನಿಸುತ್ತದೆ.
    ಅವರ ಬರಹದ ತಾಕತ್ತೇ ಅಂತಹದು.
    ಸಂದರ್ಶನ ಖುಷಿಕೊಟ್ಟಿತು. ಡಾ ರಾಜ್ ಅವರ ಸರಳತೆ, ಲಂಕೇಶ್ ಅವರ
    ಚುರುಕುತನ ಎರಡೂ ಇಷ್ಟ ಆಯ್ತು.
    ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
    ರವಿ ಅಜ್ಜೀಪುರ

    ಪ್ರತಿಕ್ರಿಯೆ
  5. mithuna

    illi raj ravara samdharshanakkintha lakesh
    ravara swa prashamse jaasthee sikka patte pungi ooduththaare
    alla avaru sigaret aadharoo sedali enu bekadaro
    maadi koLLasi adhannu illi prasthutha padisuva
    agathya eniththu thanna dhushatakke saarvajanika oppige
    padeyabekembudhe chee keeLu abhiruci

    ಪ್ರತಿಕ್ರಿಯೆ
  6. ಮಿಥುನ

    ಓದಿದ ಮೇಲೆ ಮನಸ್ಸು ತುಂಬ ಪ್ರಫುಲ್ಲ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: