'ಭೀಮನಮಾವಾಸ್ಯೆ' ಅಂದ್ರೆ ರಾಜಕುಮಾರ್..

ರಾಜ್ ಕುಮಾರ್ ಅಪಹರಣದ ದಿನ..

m r kamala

ಎಂ.ಆರ್. ಕಮಲಾ

ನಾನಾಗ ರಾಮನಗರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ.
ಸಾಮಾನ್ಯವಾಗಿ `ಭೀಮನಮಾವಾಸ್ಯೆ’ಗೆ ಎಲ್ಲ ಕಾಲೇಜುಗಳಲ್ಲಿಯೂ `ವಿವೇಚನಾ ರಜೆ’ ಯನ್ನು ನೀಡುತ್ತಾರೆ. ಪ್ರಯಾಣದ ಖುಷಿಯ ಜೊತೆಗೆ ಬಸ್ಸಿಗಾಗಿ ಕಾದು ಕಾದು ಕಾಲು ನೋವು ಬರುತ್ತಿದ್ದುದರಿಂದ ಇಂತಹ ರಜೆಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತಿದ್ದವು. ರಜೆಯ ಮರುದಿನ ಎಂದಿನಂತೆ ಮನೆಯನ್ನು 6.30 ಕ್ಕೆ ಬಿಟ್ಟು 8.20 ಕ್ಕೆ ಶುರುವಾಗುತ್ತಿದ್ದ ಕಾಲೇಜಿಗೆ ಬಸ್ಸು ಹಿಡಿದೆ.
ಸಮಯ ಪರಿಪಾಲನೆಯ ವಿಷಯದಲ್ಲಿ `ವಿಶ್ವೇಶ್ವರಯ್ಯನವರ ಮೊಮ್ಮಗಳು’ ಎಂದು ಕಾಲೇಜಿನಲ್ಲಿ ನನ್ನನ್ನು ಕುಚೋದ್ಯ ಮಾಡುತ್ತಿದ್ದುದು ಉಂಟು. ಅದಕ್ಕೆ ಕಾರಣವೂ ಇದೆ. ತರಗತಿಯಲ್ಲಿ ಆಗಾಗ್ಗೆ ನಾನು ಎಸ ಎಸ ಎಲ್ ಸಿ ಯಲ್ಲಿ ಓದಿದ್ದ `ಭಾಗ್ಯಶಿಲ್ಪಿ ಎಂ.ವಿಶ್ವೇಶ್ವರಯ್ಯ ‘ ಪುಸ್ತಕದ ಘಟನೆಯೊಂದನ್ನು ವಿದ್ಯಾರ್ಥಿಗಳಿಗೆ ಹೇಳಿ ಶಿಸ್ತನ್ನು ಕಲಿಸುತ್ತಿದ್ದೆ. ಒಮ್ಮೆ ವಿಶ್ವೇಶ್ವರಯ್ಯನವರು ಯಾವುದೋ ಸಭೆಗೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಹೋಗಬೇಕಿತ್ತಂತೆ. ಅವರೆಂದೂ dr raj death 5 aditya kavoorಸಮಯವನ್ನು ಮೀರಿ ಸಭೆಗಳಿಗೆ ಹೋಗುತ್ತಿರಲಿಲ್ಲ. ಆದರೆ ಆ ದಿನ ಕೆಲವರ ವಾಚು 9 ಗಂಟೆ 5 ನಿಮಿಷ ತೋರಿಸುತ್ತಿದ್ದಾಗ ವಿಶ್ವೇಶ್ವರಯ್ಯನವರು ಬಂದರಂತೆ! ತಕ್ಷಣ ಅವರೆಲ್ಲ ವಾಚಿನ ಮುಳ್ಳನ್ನು 9 ಗಂಟೆಗೆ ತಿರುಗಿಸಿ ಇಟ್ಟುಕೊಂಡರಂತೆ! ಈ ನನ್ನ ಕಥೆ ಕೇಳಿ ಕೇಳಿ ವಿದ್ಯಾರ್ಥಿಗಳು ನನ್ನನ್ನು ನೋಡಿದ ತಕ್ಷಣ `ಬಂದರಪ್ಪ, ವಿಶ್ವೇಶ್ವರಯ್ಯನವರ ಮೊಮ್ಮಗಳು’ ಅಂತಿದ್ರು.
ಆ ದಿನ ಬೆಳಗ್ಗೆಯೂ ಹಾಗೇ ಆಯಿತು. ನಾನು, ನನ್ನಂತೆಯೇ ಇದ್ದ ಭೌತಶಾಸ್ತ್ರ ಉಪನ್ಯಾಸಕಿ ಗಾಯತ್ರಿ 8 ಗಂಟೆಗೆ ಕಾಲೇಜು ಸೇರಿದೆವು. ಅಷ್ಟು ಹೊತ್ತಿಗೆ ಆಫೀಸಿನ ಫೋನ್ ಟ್ರಿಣ್ ಟ್ರಿಣ್.. ಯಾರೋ ಉಪನ್ಯಾಸಕರು ತಡವಾಗಿ ಬರುವುದನ್ನು ಹೇಳಲೋ ಅಥವಾ ಒಂದು ದಿನದ ರಜೆಯನ್ನು ಕೇಳಲೋ ಫೋನು ಮಾಡಿರಬೇಕೆಂದು ಕೈಗೆತ್ತಿಕೊಂಡಾಗ ಸುದ್ದಿಯನ್ನು ಕೇಳಿ ಅಪ್ರತಿಭಳಾದೆ.
ಅರ್ಥಶಾಸ್ತ್ರದ ಉಪನ್ಯಾಸಕರು ರಾಜ್ ಕುಮಾರ್ ಅಪಹರಣದ ಸುದ್ದಿಯನ್ನು ನಮಗೆ ತಿಳಿಸಿ ಆದಷ್ಟು ಬೇಗ ಬೆಂಗಳೂರಿಗೆ ವಾಪಸ್ಸು ಬರಲು ಹೇಳಿದ್ದರು. ಪ್ರಾಂಶುಪಾಲರು ಬರುವವರೆಗೂ ನಾವೇನು ಮಾಡುವಂತಿರಲಿಲ್ಲ. 9 ಗಂಟೆಯ ಹೊತ್ತಿಗೆ ಪ್ರಾಂಶುಪಾಲರು ಕರೆಮಾಡಿ `ಮಕ್ಕಳನ್ನು ಮನೆಗೆ ಕಳಿಸಿ ಹೊರಟು ಬನ್ನಿ’ ಎಂದರು.
ನಾನು ಮತ್ತು ಗಾಯತ್ರಿ ಬೆಂಗಳೂರು ತಲುಪಿದರೆ ಸಾಕೆಂದು ಸಿಕ್ಕಿದ ಬಸ್ಸನ್ನು ಹತ್ತಿದೆವು.. ಅಷ್ಟು ಹೊತ್ತಿಗೆಲ್ಲ ಬಸ್ಸುಗಳು ಹಿಂದೂ ಹೋಗಲಾಗದೆ ಮುಂದು ಹೋಗಲಾಗದೆ ದಾರಿಯುದ್ದಕ್ಕೂ ನಿಂತಿದ್ದವು. ಏನೂ ವಿಚಾರ ತಿಳಿಯದ ನಾವು, ಕಂಡಕ್ಟರ್ ಮತ್ತು ಡ್ರೈವರ್ ತಲಾತಟ್ಟಿ ಮಾತನಾಡುತ್ತ ರಾಜ್ ಕುಮಾರ್ ಅಪಹರಣದ ಬಗ್ಗೆ ನಮ್ಮದೇ ಆದ ಕತೆಗಳನ್ನು ಕಟ್ಟಿಕೊಳ್ಳತೊಡಗಿದ್ದೆವು.. ಆಮೆ ನಡಿಗೆಯಲ್ಲಿ ಬಸ್ಸು ಬಿಡದಿಯನ್ನು ಸೇರಿದಾಗ ಮಧ್ಯಾಹ್ನ 2 ಗಂಟೆ. ಅಲ್ಲಿಂದ ಮುಂದೆ ಬೆಂಗಳೂರಿಗೆ ಬಸ್ಸು ಬಿಡುವುದಿಲ್ಲವೆಂದು ಪೊಲೀಸರು ನಿಲ್ಲಿಸಿಬಿಟ್ಟರು.
ಮನೆಗೆ ವಿಷಯ ಮುಟ್ಟಿಸಲು ಆಗೆಲ್ಲ ನಮ್ಮ ಬಳಿ ಮೊಬೈಲ್ ಕೂಡ ಇರಲಿಲ್ಲ. ಅಲ್ಲಿಂದ ಕೆಂಗೇರಿಯವರೆಗೆ ನಡೆದೇ ಹೋಗೋಣವೆಂದು ತೀರ್ಮಾನಿಸಿ ಮುಂದುವರಿದಾಗ ಎಲ್ಲರ ವಿಚಿತ್ರವಾದ ಕಣ್ಣುಗಳು ನನ್ನ ಮತ್ತು ಗಾಯತ್ರಿಯ ಮೇಲೆ ನೆಟ್ಟಿದ್ದವು. ಉಳಿದುಕೊಳ್ಳಲು ನಮಗೆ ಅಲ್ಯಾರ ನೆಂಟರ ಮನೆಯೂ ಇರಲಿಲ್ಲ. ಒಳ್ಳೆಯವರೋ ಕೆಟ್ಟವರೋ ತಿಳಿಯದಿದ್ದರೂ ದಾರಿಯಲ್ಲಿ ಸಿಕ್ಕ ಹುಡುಗರಿಬ್ಬರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಬಾಯಿಗೆ ಬಂದದ್ದೆಲ್ಲಾ ಮಾತನಾಡುತ್ತ ಹೊರಟೆವು.
veerappanಹೀಗೆ ಹತ್ತಾರು ಕಿ.ಮೀ. ನಡೆದಿರಬಹುದು..ಎಲ್ಲೆಲ್ಲೂ ಕೋಲಾಹಲ. ನಿಂತ ವಾಹನಗಳು, ಪರದಾಡುತ್ತಿದ್ದ ಜನಜಂಗುಳಿ. ನಮ್ಮ ಪುಣ್ಯವೋ ಏನೋ ಎಂಬಂತೆ ಕಾರಿನಲ್ಲಿ ಬಂದ ಮಧ್ಯವಯಸ್ಸಿನ ಗಂಡಸೊಬ್ಬ ನಮ್ಮನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಆದರೆ ಆತನ ನೋಟ, ಮಾತು, ರೀತಿ ಯಾವುದು ಸರಿಯಿರಲಿಲ್ಲ. ಧೈರ್ಯ ಮಾಡಿ ಅವನ ಕಾರಿನಲ್ಲೇನೋ ಕೂತೆವು.
ಕ್ಷಣಾರ್ಧದಲ್ಲಿ ಗಾಯತ್ರಿಗೆ ಅದೇನೆನ್ನಿಸಿತೋ! ನಮ್ಮೊಂದಿಗೆ ನಡೆದು ಬರುತ್ತಿದ್ದ ಹುಡುಗನನ್ನು ಕಾರಿನಲ್ಲಿ ಎಳೆದು ಕೂರಿಸಿಕೊಂಡೇ ಬಿಟ್ಟರು. ಕಾರಿನ ಡ್ರೈವರ್ ರೇಗತೊಡಗಿದ. `ಇಲ್ಲ, ಇವನು ನನ್ನ ತಮ್ಮ , ಇವನನ್ನು ಬಿಟ್ಟು ಬರೋದಿಲ್ಲ’ ಎಂದು ಸುಳ್ಳು ಹೇಳಿಯೇಬಿಟ್ಟರು. ಆ ಹುಡುಗನಿಗೆ ಸುಮ್ಮನಿರುವಂತೆ ನಾನು ಸನ್ನೆ ಮಾಡಿದೆ. ಮುಂದಿನ ಸೀಟಿನಲ್ಲಿ ಆಸ್ಪತ್ರೆಗೆ ಹೋಗಬೇಕೆಂದು ನೆವ ಹೇಳಿ ಮತ್ತೊಬ್ಬ ಹುಡುಗನನ್ನು ಕೂರಿಸಿಕೊಂಡೆವು. ದಾರಿಯುದ್ದಕ್ಕೂ ಆತ ನಮ್ಮ ಮೇಲೆ ರೇಗುತ್ತಿದ್ದ. ಹೆಣ್ಣುಮಕ್ಕಳಾಗಿದ್ದರೆ ಪೊಲೀಸರು ಹಿಡಿಯುತ್ತಿರಲಿಲ್ಲ.ಇವರಿಬ್ಬರನ್ನು ಕರೆದು ತರಬಾರದಿತ್ತೆಂದು ಹೇಳುತ್ತ, ನಾವು ಕಂಡು ಕೇಳರಿಯದ ದಾರಿಯಲ್ಲಿ ಕಾರು ಓಡಿಸುತ್ತ ವಿದ್ಯಾಪೀಠಕ್ಕೆ ತಂದು ತಲುಪಿಸಿದ. ದಾರಿಯಲ್ಲಿ ತಮ್ಮನೊಂದಿಗೆ ಮಾತನಾಡಿದಂತೆ ನಾವಿಬ್ಬರು ದೊಡ್ಡ ನಾಟಕವನ್ನೇ ಆಡಿದೆವು.
ವಿದ್ಯಾಪೀಠದಿಂದ ನಾನು ಮೆಜೆಸ್ಟಿಕ್ ಗೆ ನಡೆದು ಬಂದು ನನ್ನ ಸ್ಕೂಟರ್ ತೆಗೆದುಕೊಂಡು ರಾಜಾಜಿನಗರಕ್ಕೆ ಹೋಗಬೇಕಿತ್ತು. ಮೆಜಿಸ್ಟಿಕ್ ತಲುಪಿದಾಗ ಐದೂವರೆ ಗಂಟೆ. `ಸ್ಕೂಟರ್ ಇಲ್ಲೇ ಬಿಟ್ಟು ಬಿಡಿ ಮೇಡಂ, ರಾಜ್ ಕುಮಾರ್ ರಸ್ತೆಯಲ್ಲಿ ಹೋಗುವುದು ಕಷ್ಟ’ ಎಂದು ಜೊತೆಯಲ್ಲಿದ್ದವರು ಹೇಳಿದರು ಕೇಳದೆ ಹೊರಟೆ. ದಾರಿಯುದ್ದಕ್ಕೂ ಟೈರ್ ಗಳಿಗೆ ಬೆಂಕಿ ಹಾಕಿದ್ದರು. ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದರು. ನಾನು ಬೆಂಕಿಯ ನಡುವೆಯೇ ಯಾವುದೋ ಹುಚ್ಚು ಸಾಹಸದಲ್ಲಿ ಮುನ್ನುಗ್ಗುತ್ತಿದ್ದಾಗ ರವಿಚಂದ್ರನ್ ಮನೆಯ ಹತ್ತಿರ ಹತ್ತಾರು ಹುಡುಗರು ನನ್ನ ಸ್ಕೂಟರ್ ನಿಲ್ಲಿಸಿ ಆವಾಜ್ ಹಾಕಿದರು.
`ರಾಜ್ ಕುಮಾರ್ ಜೈ’ `ಕನ್ನಡಕ್ಕೆ ಜೈ ‘ ಎಂದು ಹೇಳು ಎಂದರು. ನಂಗೆ ಕೋಪ ಬಂತು. `ನಾನು ಅನ್ನ ತಿನ್ನುತ್ತಾ ಇರೋದೇ ಕನ್ನಡ ಪಾಠ ಹೇಳಿಕೊಂಡು, ನನ್ಯಾಕೆ ತಡೀತೀರಾ?, ನಾನು ಕನ್ನಡ ಮೇಡಂ’ ಎಂದು ಕಿರುಚಿದೆ. ಆ ಗುಂಪಿನಲ್ಲಿದ್ದ ನನ್ನ ಹಳೆಯ ವಿದ್ಯಾರ್ಥಿಯೊಬ್ಬ `ಅಯ್ಯೋ ನಮ್ಮ ಮೇಡಂ ಕಣರೋ, ಬಿಡರೋ’ ಎಂದು ರೇಗಿದ. ನನ್ನ ಸ್ಕೂಟರ್ ಗೆ ಒಂದು ಕನ್ನಡ ಧ್ವಜ ಸಿಕ್ಕಿಸಿ ಯಾರಾದ್ರೂ ತಡೆದರೆ `ಜೈ ಕರ್ನಾಟಕ ಮಾತೆ’ ಎಂದುಬಿಡಿ ಎಂದ.
ನಾನು ಅಲ್ಲಲ್ಲಿ ಹುಚ್ಚುಚ್ಚಾಗಿ `ಜೈ ಕರ್ನಾಟಕ ಮಾತೆ’ ಎಂದು ಕೂಗಿಕೊಳ್ಳುತ್ತ ಮನೆಯನ್ನು ಸೇರಿದೆ!

‍ಲೇಖಕರು Avadhi

August 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anonymous

    ಅದೇ ದಿನ ನಾನು ಹಾಸನದಲ್ಲಿದ್ದೆ. ಕಾಫಿ ಕುಡಿಯಲು ಹೋದಾಗ ರಾಮೇಗೌಡ್ರು ಹೇಳಿದಾಗ ನಂಬಿರಲಿಲ್ಲ. ರೆಡಿಯೋದಲ್ಲಿ ಪಾರ್ವತಮ್ಮನವರ ಮಾತು ಕೇಳಿ ಮತ್ತು ಉದಯ ಟಿವಿ ಸುದ್ದಿ ನೋಡಿ ಖಚಿತವಾಗಿತ್ತು.

    ಪ್ರತಿಕ್ರಿಯೆ
  2. lalitha sid

    ಕಮಲಾ ನನಗೆ ನಗು ಮತ್ತು ಗಾಬರಿ ಒಟ್ಟೊಟ್ಟಿಗೇ ,,,,, ಸ್ಕೂಟಿಗೆ ಬಾವುಟ ಬಾಯಲ್ಲಿ ಜೈ ಕರ್ನಾಟಕ. ನಿಮ್ಮ ಧೈರ್ಯಕ್ಕೆ ಜೈಜೈ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: