ಶವಪೆಟ್ಟಿಗೆ ಹೊತ್ತ ವಾಹನಗಳು ಇಂದಿಗೂ ನನ್ನ ಮುಂದೆ ಹಾದುಹೋಗುತ್ತಿವೆ

Prasad

ಪ್ರಸಾದ್ ನಾಯ್ಕ್ 

ನನ್ನ ಕಣ್ಣೆದುರಿನಲ್ಲೇ ವಾಹನವೊಂದು ಶರವೇಗದಲ್ಲಿ ಸಾಗುತ್ತಿದೆ.

ಅದೊಂದು ಮಜ್ದಾ ಶೈಲಿಯ ವಾಹನ. ನಮ್ಮಲ್ಲಿರುವ ಮಿನಿ-ಟೆಂಪೋಗಳಂತೆ ಹಿಂದಿನ ಭಾಗದಲ್ಲಿ ತೆರೆದ ಜಾಗ. ಕಮ್ಮಿಯೆಂದರೂ ಅದರಲ್ಲಿ ಇಪ್ಪತ್ತು ಜನರಿದ್ದಾರೆ. ಕೆಲವರು ಸುಮ್ಮನೆ ಕುಳಿತಿದ್ದಾರೆ. ಇನ್ನು ಕೆಲವರು ಏನನ್ನೋ ಬಡಬಡಿಸುತ್ತಿದ್ದಾರೆ. ಅವರು ಹಾಡುತ್ತಿದ್ದಾರೋ, ಕೂಗುತ್ತಿದ್ದಾರೋ, ಅರಚುತ್ತಿದ್ದಾರೋ…. ಕಾರಿನಲ್ಲಿ ಕುಳಿತ ನನಗೆ ಕೇಳಿಬರದು.

ಒಂದಿಬ್ಬರು ಮಹಿಳೆಯರು ಕೈಗಳನ್ನು ಜೋಡಿಸುತ್ತಾ ನಿಂತಲ್ಲೇ ಮೆಲ್ಲನೆ ನರ್ತಿಸುತ್ತಿರುವಂತೆ ಹೆಜ್ಜೆ ಹಾಕುತ್ತಿದ್ದಾರೆ. ಅದು ಸಾರ್ವಜನಿಕರ coffinಪ್ರಯಾಣಕ್ಕಾಗಿ ಇರುವ ಟ್ಯಾಕ್ಸಿಯೂ ಅಲ್ಲವಾಗಿದ್ದರಿಂದ ಯಾವುದೋ ಕಾರ್ಮಿಕರ ಗುಂಪೊಂದು ಜೊತೆಯಾಗಿ ಹೋಗುತ್ತಿದೆಯೆಂದು ಯೋಚಿಸಿ ನಾನು ಸುಮ್ಮನಾಗುತ್ತೇನೆ.

 

ಅದು ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನನ್ನ ಮೊದಲ ದಿನ.

ಎರಡನೆಯ ದಿನವೂ ಇದೇ ಕಥೆಯು ಪುನರಾವರ್ತನೆಯಾಗಿತ್ತು. ಅಂಥದ್ದೇ ವಾಹನ, ಬಹುತೇಕ ಅಷ್ಟೇ ಸಂಖ್ಯೆಯ ಜನಸಮೂಹ, ಅವೇ ಹಾವಭಾವಗಳು. ಒಂದೇ ಒಂದು ವ್ಯತ್ಯಾಸವೆಂದರೆ ಈ ಬಾರಿ ವಾಹನದ ಹಿಂಭಾಗದಲ್ಲಿ ಕುಳಿತಿದ್ದ ಆ ಗುಂಪಿನಲ್ಲೊಬ್ಬನ ಕೈಯಲ್ಲಿ ಒಂದು ದೊಡ್ಡದಾದ, ಫ್ರೇಮ್ ಹಾಕಿದ ಭಾವಚಿತ್ರವಿತ್ತು. ಆ ಕಪ್ಪುಬಿಳುಪಿನ ಚಿತ್ರದಲ್ಲಿ ಐದರಿಂದ ಏಳರ ಪ್ರಾಯದ ಮುದ್ದಾದ ಮಗುವೊಂದು ನಗುತ್ತಿದೆ.

ನಾನಿದ್ದ ಕಾರಿನ ಕಿಟಕಿಯ ಗಾಜುಗಳು ಮುಚ್ಚಿದ್ದರಿಂದ ಈ ಬಾರಿಯೂ ಯಾವ ಸದ್ದುಗಳೂ ನನಗೆ ಕೇಳಲಿಲ್ಲ. ವಾಹನವು ಹಿಂದಿನ ದಿನದಂತೆಯೇ ವೇಗವಾಗಿ ನಮ್ಮನ್ನು ದಾಟಿ ಮರೆಯಾಗಿತ್ತು. ಆದರೂ ಕುತೂಹಲಕ್ಕೆಂದು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ದುಭಾಷಿಯಲ್ಲಿ ಆ ವಾಹನದ ಬಗ್ಗೆ ಕೇಳಿದ್ದೆ. ಅವನ ಹೆಸರು ಮಿಗೆಲ್ ಎಂಬೋಸೋ. ಆಗಷ್ಟೇ ಕಾಲೇಜಿನ ವಿದ್ಯಾಭ್ಯಾಸವನ್ನು ಮುಗಿಸಿ ಬಂದಿದ್ದ ತರುಣ. ಒಂದೆರಡು ಸ್ಥಳೀಯ ಭಾಷೆಗಳನ್ನು ಬಿಟ್ಟರೆ ಅಂಗೋಲಾದಲ್ಲಿ ಪೋರ್ಚುಗೀಸ್ ಭಾಷೆಯದ್ದೇ ಪ್ರಾಬಲ್ಯವಿರುವುದರಿಂದ ನನಗೋರ್ವ ದುಭಾಷಿಯನ್ನು ಕೊಡಲಾಗಿತ್ತು. ಪೋರ್ಚುಗೀಸ್ ಇಲ್ಲಿಯ ಆಡಳಿತ ಭಾಷೆಯೂ ಹೌದು.

“ಅಲ್ಲಿ ನಡೆಯುತ್ತಿದ್ದಿದ್ದು ಶವಯಾತ್ರೆ, ಆ ವಾಹನವು ಸ್ಮಶಾನದ ಕಡೆಗೆ ಹೋಗುತ್ತಿದೆ” ಎಂದ ಮಿಗೆಲ್. ವಾಹನದ ವೇಗದಿಂದಾಗಿ ಮತ್ತು ಶವಪೆಟ್ಟಿಗೆಯ ಸುತ್ತಲೂ ಸೇರಿದ್ದ ಜನರಿಂದಾಗಿ ನನಗದು ಕಂಡಿರಲಿಲ್ಲ. ಆದರೆ ಆ ಪುಟ್ಟ ಮಗುವಿನ ಮುದ್ದು ಮುಖವು ನೆನಪಾಗಿ ಮರುಕ ಹುಟ್ಟಿತ್ತು. ಎಂಥಾ ಕಾಕತಾಳೀಯವೋ ಇದು! ಬಂದು ನೆಟ್ಟಗೆ ಎರಡೂ ದಿನವೂ ಆಗಲಿಲ್ಲ. ಆದರೂ ಎರಡು ಶವಯಾತ್ರೆಗಳನ್ನು ನೋಡುವಂತಾಯಿತಲ್ಲಾ ಎಂದು ನಾನು ಹುಬ್ಬೇರಿಸಿದ್ದೆ.

ಆದರೆ ಮುಂದಿನ ದಿನಗಳಲ್ಲಿ ನಡೆದ ಬೆಳವಣಿಗೆಗಳು ನನ್ನನ್ನು ದಂಗಾಗುವಂತೆ ಮಾಡಿದವು. ಒಂದು ವಾರದಲ್ಲಿ ಬರೋಬ್ಬರಿ ಆರು ಶವಯಾತ್ರೆಗಳನ್ನು ನಾನು ನೋಡಿಯಾಗಿತ್ತು. ಅಸಲಿಗೆ ನಾನಿರುವುದು ವೀಜ್ ಎಂಬ ಹೆಸರಿನ ಎಂಬ ಪುಟ್ಟ ಪಟ್ಟಣದಲ್ಲಿ. ವೀಜ್ ನಿಂದ ಅಂಗೋಲಾದ ರಾಜಧಾನಿಯಾಗಿರುವ ಲುವಾಂಡಾಗಿರುವ ದೂರ ಬರೋಬ್ಬರಿ ಮುನ್ನೂರು ಚಿಲ್ಲರೆ ಕಿಲೋಮೀಟರುಗಳು. ವಿಚಿತ್ರವೆಂದರೆ ಈ ಮುನ್ನೂರು ಕಿಲೋಮೀಟರುಗಳ ಮಾರ್ಗಮಧ್ಯದಲ್ಲಿ ಒಂದೇ ಒಂದು ಚಿಕ್ಕ ಪಟ್ಟಣವೂ ನಮಗೆ ಸಿಗುವುದಿಲ್ಲ. ಹತ್ತಿಪ್ಪತ್ತು ಕಿಲೋಮೀಟರುಗಳಿಗೊಂದರಂತೆ ಸಿಗುವ ನಾಲ್ಕೈದು ಮನೆಗಳ ಗುಂಪನ್ನು ಬಿಟ್ಟರೆ ಎಲ್ಲೆಲ್ಲೂ ದಟ್ಟವಾದ ಕಾಡು. ಕಾಡನ್ನು ಸೀಳಿಕೊಂಡು ಬಂದಂತೆ ಕಾಣುವ, ತಲೆಗೂದಲನ್ನು ಮಟ್ಟಸವಾಗಿ ಬಾಚಿ ಬೈತಲೆ ತೆಗೆದಂತಿರುವ ಸರಳ ರೇಖೆಯಂತೆ ನೇರವಾದ ನಿರ್ಜನ ರಸ್ತೆಗಳು. ಮಾರ್ಗಮಧ್ಯದಲ್ಲಿ ಪ್ರಾಣಹೋದರೂ ಕೇಳುವವರಿಲ್ಲ.

ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ ಕಳೆದ ಒಂದು ವಾರದಲ್ಲಿ ಸತ್ತವರೆಲ್ಲಾ ನಾನಿರುವ ವೀಜ್ ಪಟ್ಟಣಕ್ಕೆ ಸೇರಿದವರೇ ಎಂದು ಹೇಳಲು ವಿಶೇಷವಾದ ಬುದ್ಧಿವಂತಿಕೆಯೇನೂ ನನಗೆ ಬೇಕಾಗಿರಲಿಲ್ಲ. ಸಾಲದ್ದಕ್ಕೆ ಮುಂದಿನ ನಾಲ್ಕೈದು ದಿನಗಳಲ್ಲಿ ಕನಿಷ್ಠ ಪಕ್ಷ ಮೂರು ಶವಯಾತ್ರೆಗಳನ್ನಾದರೂ ನೋಡಿದ್ದೆ. “ಏನಾಗುತ್ತಿದೆಯಪ್ಪಾ ಇಲ್ಲಿ? ಜನರು ಯಾಕೆ ಈ ರೀತಿ ಹುಳುಗಳಂತೆ ಪ್ರಾಣ ಬಿಡುತ್ತಿದ್ದಾರೆ?” ಎಂದು ಮಿಗೆಲ್ ನಲ್ಲಿ ಕೇಳಿದ್ದೆ ನಾನು. ನನ್ನ ಕಣ್ಣುಗಳಲ್ಲಿದ್ದ ದಿಗಿಲನ್ನು ಕಂಡ ಆತ ಹತಾಶೆಯ ನಗುವನ್ನು ನಕ್ಕಿದ್ದ. ಆದರೆ ನಾನು ನಗುವ ಸ್ಥಿತಿಯಲ್ಲಿರಲಿಲ್ಲ.

ಕ್ರಮೇಣ ಒಂದೊಂದೇ ಸತ್ಯಗಳು ಅರಿವಾಗತೊಡಗಿದ್ದವು. ಅಸಲಿಗೆ ಒಳ್ಳೆಯ ವೈದ್ಯಕೀಯ ವ್ಯವಸ್ಥೆಯೆಂಬುದೇ ವೀಜ್ ನಲ್ಲಿಲ್ಲ. ಇರುವ ಒಂದೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರ ಮತ್ತು ಆಧುನಿಕ ಉಪಕರಣಗಳ ಕೊರತೆಯಿದೆ. ಬೆರಳೆಣಿಕೆಯ ಕ್ಲಿನಿಕ್ಕುಗಳಿವೆಯಾದರೂ ಖಾಸಗಿ ಸ್ವಾಮ್ಯದ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲ. ಹೀಗಾಗಿ ಉತ್ತಮ ವೈದ್ಯಕೀಯ ಸೌಲಭ್ಯವು ಸಿಗಬೇಕೆಂದಾದರೆ ವೀಜ್ ನಲ್ಲಿರುವ ವ್ಯಕ್ತಿಯೊಬ್ಬ ಸುಮಾರು ಮುನ್ನೂರು ಕಿಲೋಮೀಟರುಗಳಷ್ಟು ದೂರವಿರುವ ಲುವಾಂಡಾಗೆ ಹೋಗಬೇಕು. ಲುವಾಂಡಾ ಹೇಳಿಕೇಳಿ ವಿಶ್ವದಲ್ಲೇ ಅತ್ಯಂತ ದುಬಾರಿ ನಗರ. ಜೀವವನ್ನು ಹಿಡಿದಿಟ್ಟುಕೊಂಡು ಅಲ್ಲಿಯವರೆಗೂ ಹೇಗೂ ತಲುಪಿದರೂ ಅಲ್ಲಿಯ ಖರ್ಚು-ವೆಚ್ಚಗಳನ್ನು ಭರಿಸಲಾಗದೇ ಹಾಗೆಯೇ ಸಾಯುವ ಸಾಧ್ಯತೆಗಳೇ ಹೆಚ್ಚು. ಬಡತನದ ರೇಖೆಗಿಂತಲೂ ಸಾಕಷ್ಟು ಕೆಳಮಟ್ಟದಲ್ಲಿರುವ ಸ್ಥಳೀಯ ವ್ಯಕ್ತಿಯೊಬ್ಬ ಅಂಥಾ ಹುಚ್ಚು ಸಾಹಸಕ್ಕಿಳಿಯಲಾರ.

angloaವೈದ್ಯಕೀಯ ವ್ಯವಸ್ಥೆಯಂಥಾ ಮೂಲಭೂತ ಸೌಕರ್ಯವಿಲ್ಲದೆ ಸಾಯುತ್ತಲೇ ಹೋಗುತ್ತಿರುವ ಇಲ್ಲಿನ ಜೀವನವನ್ನು ಕಂಡು ನಾನು ನಿಜಕ್ಕೂ ದಂಗಾಗಿದ್ದೆ. ಮಲೇರಿಯಾಗಳಂಥಾ ರೋಗಗಳಿಗೆ ತುತ್ತಾಗಿ ಇಲ್ಲಿನ ಜನರು ಸಾಯುತ್ತಿದ್ದಾರೆ. ಏಡ್ಸ್ ಮಿತಿ ಮೀರಿ ಹೋಗಿದೆ. ಮುಖ್ಯವಾಗಿ ನೈರ್ಮಲ್ಯದ ಅರಿವೇ ಇಲ್ಲಿನ ಜನರಲ್ಲಿ ನನಗೆ ಕಾಣಲಿಲ್ಲ. ಇಟ್ಟಿಗೆಗಳಿಂದ, ಆಸ್ಬೆಸ್ಟೋಸ್ ಶೀಟುಗಳಿಂದ ಮಾಡಲ್ಪಟ್ಟಿದ್ದ ಬೆಂಕಿಪೊಟ್ಟಣದಂತಿದ್ದ ಪುಟ್ಟ ಮನೆಗಳ ಸುತ್ತಲೂ ಜಮೆಯಾಗಿದ್ದ ನೀರು, ಕೊಳಚೆ ತ್ಯಾಜ್ಯಗಳು ಸಹಜವಾಗಿಯೇ ಸೊಳ್ಳೆಗಳ ಭದ್ರಕೋಟೆಗಳಾಗಿಬಿಟ್ಟಿದ್ದವು. ವಿದ್ಯುಚ್ಛಕ್ತಿಯ ಸೌಲಭ್ಯಗಳು ಅಂಗೋಲಾದ ಹಲವು ಪ್ರದೇಶಗಳಲ್ಲಿ ಇಂದಿಗೂ ಗಗನಕುಸುಮ. ರಾಜಧಾನಿಯಾಗಿರುವ ಲುವಾಂಡಾ ಮತ್ತು ಬೆರಳೆಣಿಕೆಯ ನಾಲ್ಕೈದು ನಗರಗಳನ್ನು ಬಿಟ್ಟರೆ ಉಳಿದ ಪ್ರದೇಶಗಳನ್ನು ಇಲ್ಲಿನ ಸರ್ಕಾರವು ಮರೆತೇ ಬಿಟ್ಟಂತಿದೆ.

ಕುಡಿಯಲು ಶುದ್ಧವಾದ ನೀರಿಗೂ ಕಷ್ಟಪಡುವ ಸ್ಥಿತಿ ಅಂಗೋಲಾದ ಬಹುಪಾಲು ಜನತೆಯದ್ದು. ಸೂಪರ್ ಮಾರ್ಕೆಟ್ ಗಳ ದುಬಾರಿ ನೀರನ್ನು ಕುಡಿದುಕೊಂಡು ಬದುಕುವ ಸ್ಥಿತಿಯಲ್ಲಿ ಇಲ್ಲಿನ ಜನರಿಲ್ಲ. ಕಲುಷಿತ ನೀರನ್ನು ಕುಡಿದು ಖಾಯಿಲೆಗೆ ತುತ್ತಾಗಿ ಪ್ರಾಣಬಿಟ್ಟವರ ಸಂಖ್ಯೆಯೂ ಇಲ್ಲಿ ಸಾಕಷ್ಟಿದೆ. ಕಳೆದೆರಡು ತಿಂಗಳುಗಳ ಅವಧಿಯಲ್ಲಿ ನೀರಿನ ಬಾಟಲ್ (ಮಿನೆರಲ್ ವಾಟರ್) ಒಂದರ ಬೆಲೆಯು ಬರೋಬ್ಬರಿ ನಾಲ್ಕು ಪಟ್ಟು ಏರಿಕೆಯಾಗಿದೆ ಎಂಬುದು ನಂಬಲೇಬೇಕಾದ ಸತ್ಯ.

1975 ರಲ್ಲಿ ಪೋರ್ಚುಗೀಸ್ ರಿಂದ ಸ್ವಾತಂತ್ರ್ಯವನ್ನು ಪಡೆದ ಈ ದೇಶವು ಮುಂದಿನ ಇಪ್ಪತ್ತೇಳು ವರ್ಷಗಳ ಕಾಲ ಆಂತರಿಕ ಯುದ್ಧದಲ್ಲೇ ಛಿದ್ರವಾಯಿತು. 2002 ರ ಬಳಿಕವಾದರೂ ಆದ ಬದಲಾವಣೆಗಳು ಏನು ಎಂದು ವಿಶ್ಲೇಷಣಾತ್ಮಕವಾಗಿ ನೋಡಿದರೆ ಮಹತ್ವದ್ದೇನೂ ಕಾಣಸಿಗುವುದಿಲ್ಲ. ಆಫ್ರಿಕಾದ ಇತರ ದೇಶಗಳಂತೆಯೇ ಅಂಗೋಲಾವೂ ಕೂಡ ತನ್ನದೇ ಆದ ಸಮಸ್ಯೆಗಳಿಂದ ನರಳುತ್ತಿದೆ. ನೈರ್ಮಲ್ಯದ ಬಗ್ಗೆ ಸ್ಥಳೀಯರಿಗೆ ದುಭಾಷಿಯ ಮಧ್ಯಸ್ಥಿಕೆಯಲ್ಲಿ ತಿಳಿಸಿಕೊಡುತ್ತಿದ್ದಾಗ ಇಂಥಾ ಹಲವು ವಿಚಾರಗಳು ಬೆಳಕಿಗೆ ಬಂದವು.

ಆಂತರಿಕ ಯುದ್ಧದ ಬಳಿಕ ದೇಶದ ಆರ್ಥಿಕ ವ್ಯವಸ್ಥೆಯು ಕೊಂಚ ಮಟ್ಟಿಗೆ ಚೇತರಿಸಿದ್ದು ನಿಜವಾಗಿದ್ದರೂ ಅದರ ಲಾಭವು ಮೇಲ್ವರ್ಗದ ಮಂದಿಗಷ್ಟೇ ಆಗಿದೆ. ಮಿತಿ ಮೀರಿದ ಭ್ರಷ್ಟಾಚಾರ, ಹದಗೆಟ್ಟ ಶಿಕ್ಷಣ ವ್ಯವಸ್ಥೆ, ಮೂಲಭೂತ ಸೌಲಭ್ಯಗಳ ಕೊರತೆ, ಶಿಥಿಲವಾದ ನ್ಯಾಯಾಂಗ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳು ಇನ್ನೂ ಪರಿಹಾರಕ್ಕಾಗಿ ದಾರಿಯನ್ನು ಕಾಯುತ್ತಿವೆ. ಪ್ರಗತಿಯ ನಿಟ್ಟಿನಲ್ಲಂತೂ ಅಂಗೋಲಾವು ಸಾಗಬೇಕಾಗಿರುವ ದಾರಿಯು ಸಾಕಷ್ಟು ದೂರವಿದೆಯೆಂಬುದನ್ನು ಹೇಳಲೇಬೇಕು.

ಅಂಗೋಲಾದ ರಾಷ್ಟ್ರಾಧ್ಯಕ್ಷರಾಗಿರುವ ಜೋಸ್ ಇಕ್ವಾರ್ಡೋಸ್ ದು ಸಾಂತುಸ್ ಕಳೆದ ಮೂವತ್ತೇಳು ವರ್ಷಗಳಿಂದ ಈ ಪ್ರಮುಖ ಸ್ಥಾನದಲ್ಲೇ ಪಟ್ಟಭದ್ರರಾಗಿ ಕುಳಿತಿದ್ದಾರೆ. ಇವರ ಕುಟುಂಬದ ಕಪಿಮುಷ್ಟಿಯಲ್ಲಿರುವ ಮಾಧ್ಯಮ ಮತ್ತು ಟೆಲಿಕಾಂ ಕ್ಷೇತ್ರಗಳು ವಿಶ್ವದ ಇತರ ಟೆಲಿಕಾಂ ಕಂಪೆನಿಗಳಿಗೆ ತಮ್ಮ ಬಾಗಿಲನ್ನು ಮುಚ್ಚಿವೆ. ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವ ಸಮಾಚಾರಗಳನ್ನಷ್ಟೇ ಇಲ್ಲಿನ ಚಾನೆಲ್ ಗಳಲ್ಲಿ ತೋರಿಸಲಾಗುತ್ತದಂತೆ. ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದರೆ ಕಂಡಲ್ಲೇ ಗುಂಡಿಕ್ಕುವ ಸಾಧ್ಯತೆಗಳನ್ನು ಸರ್ಕಾರವು ಈ ಹಿಂದೆಯೇ ತನ್ನ ಜನತೆಗೆ ತೋರಿಸಿಕೊಟ್ಟಿದೆ. ಅಂದ ಹಾಗೆ ಜೋಸ್ ಇಕ್ವಾರ್ಡೋಸ್ ರ ಪುತ್ರಿಯಾದ ಇಸಾಬೆಲ್ ಆಫ್ರಿಕಾ ಖಂಡದ ಏಕಮಾತ್ರ ಮಹಿಳಾ ಬಿಲಿಯನೇರ್.

ಇತ್ತ ದೇಶದ ಜನತೆಯು ಹಾತೆಗಳಂತೆ ಪ್ರಾಣಬಿಡುತ್ತಿದ್ದರೆ ಅತ್ತ ರಾಷ್ಟ್ರಾಧ್ಯಕ್ಷರು ಕಳೆದ ಕ್ರಿಸ್ಮಸ್ ಹಬ್ಬದ ದಿನದಂದು ಪಾಪ್ ತಾರೆ ನಿಕ್ಕಿ ಮಿನಾಝರನ್ನು ಕರೆಸಿ ಸಂಗೀತ ಸಂಜೆಯನ್ನು ಆಯೋಜಿಸಿದ್ದರು. ಬರೋಬ್ಬರಿ ಎರಡು ಮಿಲಿಯನ್ ಡಾಲರ್ ಗಳ ಮೊತ್ತವನ್ನು ಈ ಸಂಗೀತ ಸಂಜೆಗಾಗಿ ಪಾಪ್ ತಾರೆಯ ಜೇಬಿಗಿಳಿಸಿದ್ದರು ರಾಷ್ಟ್ರಾಧ್ಯಕ್ಷರಾದ ಜೋಸ್ ಇಕ್ವರ್ಡೋಸ್. ವಿಪರ್ಯಾಸವೆಂದರೆ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲೂ ಜೋಸ್ ಇಕ್ವರ್ಡೋಸ್ ಎಂಬ ಹೆಸರನ್ನು ಬಿಟ್ಟರೆ ಮತ್ಯಾವ ಪ್ರಭಾವಿ ಹೆಸರುಗಳೂ ಮುಂಚೂಣಿಯಲ್ಲಿ ಕೇಳಿಬರುತ್ತಿಲ್ಲ.

ಅಂಗೋಲಾ ದೇಶಕ್ಕೆ ಕಾಲಿಟ್ಟು ಆರು ತಿಂಗಳುಗಳೇ ಕಳೆದಿವೆ. ಶವಪೆಟ್ಟಿಗೆಯನ್ನು ತುಂಬಿದ ವಾಹನಗಳು ಇಂದಿಗೂ ನನ್ನ ಮುಂದೆ ಹಾದುಹೋಗುತ್ತಿವೆ. ಆದರೆ ಲೆಕ್ಕವಿಡುವುದನ್ನು ನಾನು ಬಿಟ್ಟಿದ್ದೇನೆ.

‍ಲೇಖಕರು admin

August 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Bhagyachikkanna

    ಭಾರತದ ವ್ಯವಸ್ಥೆಯ ಕುರಿತು ಮೂಗು ಮುರಿಯುವವರೆಲ್ಲರೂ ನಿಮ್ಮ ಈ ಲೇಖನ ಓದಬೇಕೆಂಬುದು ನನ್ನ ಆಶಯ. ದೂರ ದೇಶವಾದ ಆ ಪುಟ್ಟ ಅಂಗೋಲ, ಅಲ್ಲಿನ ವ್ಯವಸ್ಥೆ ಬಗ್ಗೆ ಕಣ್ಣಿಗೆಕಟ್ಟುವಂತೆ ವಿವರಿಸಿದ್ದೀರಿ. ಸಹಜತೆ ಇಷ್ಟವಾಯಿತು. ಜನರು ಸುಧಾರಿಸುವ ಹೊರತು, ದೇಶ, ಅಲ್ಲಿನ ವ್ಯವಸ್ಥೆ, ಆಡಳಿತ ಎಂದಿಗೂ ಸುಧಾರಿಸಲಾಗದು ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆ.

    ಪ್ರತಿಕ್ರಿಯೆ
  2. Prasad

    True story… Thank you Bhagya ji for feedback and Avadhi for publishing.
    – Prasad, Republic of Angola

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: