-ಕಿರಣ ಭಟ್
ಕಡು ಚಳಿಯ ರಾತ್ರಿಯಲ್ಲೂ ಉತ್ಸಾಹದಿಂದ ತುಂಬಿ ತುಳುಕುತ್ತಿದ್ದ ಇಟಲಿಯ ʼರೋಮ್ʼನ ಐತಿಹಾಸಿಕ ಚೌಕ, ‘ಪಿಯಾಜ್ಜಾ ನವೋನಾʼ ಬೆಳಗಿನ ಹೊತ್ತು ಹೇಗಿರಬಹುದು ಎನ್ನೋ ಕುತೂಹಲದಲ್ಲಿ ಕಪ್ಪು ಬೆಣಚುಕಲ್ಲುಗಳ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬರುತ್ತಿದ್ದೆ. ಸೂರ್ಯ ಆಗಲೇ ಸಾಕಷ್ಟು ಮೇಲೆ ಬಂದಿದ್ದ. ವಾತಾವರಣ ಆಹ್ಲಾದಕರವಾಗಿತ್ತು. ಅದಕ್ಕೆ ಇನ್ನಷ್ಟು ಮೆರಗು ನೀಡುವಂತೆ ವಿಶಾಲವಾದ ಚೌಕದ ದೂರದ ಮೂಲೆಯಿಂದ ಇಂಪಾದ ಸಂಗೀತದ ಅಲೆ ಬರತೊಡಗಿತು. ಮೊದಲೇ ಸಂಗೀತದ ಹುಚ್ಚಿನವ ನಾನು. ಕಾಲುಗಳು ಮೋಡಿಗೊಳಗಾದಂತೆ ಸಂಗೀತದ ಜಾಡು ಹಿಡಿದು ಆ ಕಡೆಯೇ ಚಲಿಸತೊಡಗಿದವು.
ಚೌಕದ ಮೂಲೆಯೊಂದರಲ್ಲಿ ಶಿಸ್ತಾಗಿ ಉಡುಪು ಧರಿಸಿದ ಹಿರಿಯರೊಬ್ಬರು ಸ್ವಲ್ಪ ಪುರಾತನದೇ ಎನ್ನಬಹುದಾದ ವಾದ್ಯವೊಂದನ್ನು ನುಡಿಸುತ್ತ ಕುಳಿತಿದ್ದರು. ಅವರಿಗೂ ವಾದ್ಯಕ್ಕೂ ನೆರಳು ನೀಡುವಂತೆ ಒಂದು ಬಿಳಿಯ ಕೊಡೆಯಿತ್ತು. ಎದುರಿಗೆ ನಾಲ್ಕು ಚಕ್ರದ ಟ್ರೇ ಇತು. ಜನ ಅದರಲ್ಲಿ ಕಾಸು ಹಾಕಿದ್ದರು. ಒಂದಿಷ್ಟು ಸಂಗೀತಾಸಕ್ತರು ಪರವಶರಾದಂತೆ ಅವರ ಸುತ್ತ ನಿಂತು ಸಂಗೀತ ಆಸ್ವಾದಿಸುತ್ತ ಕಾಲು ಕುಣಿಸುತ್ತಿದ್ದರು.

ಜೋಬಲ್ಲಿದ್ದ ʼಯೂರೋʼ ಗಳನ್ನು ಅವರೆದುರಿನ ಟ್ರೇ ನಲ್ಲಿ ಹಾಕಿ ನಾನೂ ಕೇಳುತ್ತ ನಿಂತೆ. ಒಂದೆರಡು ಕಂಪೋಸಿ಼ಶನ್ ಮುಗಿದ ಮೇಲೆ ಅವರನ್ನು ಮಾತನಾಡಿಸಿದೆ. ಅವರಿಗೂ ಸುಮಾರಿಗೆ ಇಂಗ್ಲಿಷ್ ಬರುತ್ತಿದ್ದುದರಿಂದ ಕೆಲವು ನಿಮಿಷ ಮಾತನಾಡಲು ಸಾಧ್ಯವಾಯಿತು.
ಪ್ರತಿ ದಿನವೂ ಅದೇ ಚೌಕದಲ್ಲಿ, ರೆಸ್ಟಾರಂಟ್ ಗಳ ತಾರಸಿಯಲ್ಲಿ, ಅವರು ಈ ವಾದ್ಯವನ್ನು ತುಂಬ ವರ್ಷಗಳಿಂದ ನುಡಿಸುತ್ತ ಬಂದಿದ್ದಾರೆ. ಅದೇ ಅವರ ಬದುಕಿನ ಆಧಾರ ಕೂಡ. ಆಕಾರದಲ್ಲಿ ಪಿಯಾನೋ ವನ್ನು ಹೋಲುವ ಈ ವಾದ್ಯಕ್ಕೆ ಎತ್ತರದ ಕಾಲುಗಳು. ಮೇಲೊಂದು ಹರವಾದ ಬೋರ್ಡ್, ಅದಕ್ಕೆ ಹೊಂದಿಸಿದ ಮೂರು ಗುಂಪಿನ ತಂತಿಗಳು. ಈ ವಾದ್ಯದ ಹೆಸರು ʼಸಿಂಬಲಮ್ʼ ತಾಂತ್ರಿಕವಾಗಿಯೂ, ನುಡಿಸುವ ರೀತಿಯಲ್ಲೂ ನಮ್ಮ ’ಸಂತೂರ್ʼಗೆ ಹತ್ತಿರವೆನಿಸಬಹುದಾದ ಇದು ವಿಶಾಲವಾದ ತಂತಿ ವಾದ್ಯ. ‘ಕನ್ಸರ್ಟ್ ಹ್ಯಾಮರ್ಡ್ ಡಲ್ಸಿಮರ್ʼ ಜಾತಿಗೆ ಸೇರಿದ ವಾದ್ಯ ಇದು. ಯುರೋಪಿನ ಜಾನಪದ ಸಂಪ್ರದಾಯಕ್ಕೆ ಸೇರಿದ ಈ ವಾದ್ಯವನ್ನು ಅದರ ಮುಕ್ತ ತಂತಿಗಳ ಮೇಲೆ ಎರಡು ಮ್ಯಾಲೆಟ್ ಗಳಿಂದ ನುಡಿಸಬಹುದು. ಈ ಮ್ಯಾಲೆಟ್ ಗಳೆಂದರೆ ತುದಿಗೆ ಹತ್ತಿ ಕಟ್ಟಿದ ಕೋಲುಗಳು. ಸೂಕ್ಷ್ಮವಾದ ತಂತಿಗಳನ್ನು ಈ ಹ್ಯಾಮರ್ ಗಳಿಂದ ನುಡಿಸಿದಾಗ ಹೊರಡುವ ನಾದ ತುಂಬ ಇಂಪಾದದ್ದು.
ಮೊಟ್ಟ ಮೊದಲ ಬಾರಿಗೆ ನೋಡಿದ ಆಕರ್ಷಕವಾದ ಈ ಪುರಾತನ ವಾದ್ಯದಿಂದ ಹೊರಹೊಮ್ಮಿದ ಸುಮಧುರ ಸಂಗೀತ ಕೇಳುತ್ತ ʼರೋಮ್ʼ ನಲ್ಲಿ ರೋಮಾಂಚನಗೊಂಡಿದ್ದಂತೂ ನಿಜ.







0 Comments