ರೊಟ್ಟಿ ಕಸ್ತೂರಿ ಮತ್ತು ಮದುವೆಮನೆ ಊಟ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ತವರು ಕಡೆಯ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲ ಕಣ್ಣಲ್ಲಿ ಸಾವಿರ ನಕ್ಷತ್ರಗಳನ್ನು ತುಳುಕಿಸಿಕೊಂಡು, ಎಲ್ಲಿದ್ದರೂ ಓಡಿಬಂದು “ಅಕ್ಕಾ” ಎಂದು ಮಾತಾಡಿಸುತ್ತಿದ್ದ ಹುಡುಗಿಯ ಹೆಸರು ಕಸ್ತೂರಿ ಎಂಬುದು ಬಹಳ ಕಾಲದವರೆಗೂ ನನಗೆ ಗೊತ್ತಿರಲಿಲ್ಲ. ಅಷ್ಟು ಪ್ರೀತಿ, ಕಕ್ಕುಲತೆಯಿಂದ ಮಾತಾಡಿಸಿ ಅದರ ಮೇಲೆಯೂ ನಾನಲ್ಲಿ ಇರುವಷ್ಟು ಹೊತ್ತು ನನ್ನ ಮೇಲೆ ಒಂದು ಪ್ರೇಮದ ಕಣ್ಣಿಟ್ಟುಕೊಂಡು ದೃಷ್ಟಿ ಕೂಡಿದಾಗಲೆಲ್ಲ ಆರಾಧನಾ ಭಾವದಿಂದ ಮತ್ತೊಮ್ಮೆ ಮಗದೊಮ್ಮೆ ಮುಗ್ಧವಾಗಿ ನಗುತ್ತಿದ್ದ ಅವಳು ಯಾರು ಎಲ್ಲಿಯವಳು ಎಂಬ ಕುರಿತಾಗಿ ಮನೆಗೆ ಬಂದ ಮೇಲೆ ಕೂಡ ನಾನು ನನ್ನಲ್ಲೇ ಬಹಳಷ್ಟು ವಿಚಾರ ಮಾಡಿದ್ದಿದೆ .ನಾನೇನಾದರೂ ಅವಳಿಗೆ ಅಪರೋಕ್ಷವಾಗಿಯಾದರೂ ಸಹಾಯ ಮಾಡಿದ್ದು ಉಂಟಾ? ಅಥವಾ ಅಜ್ಜಿ ಮನೆ ಕಡೆ ಊರವಳಾ..? ಹೀಗೆಲ್ಲ …ಹಲವು ಬಗೆಯಲ್ಲಿ.

ಇದು ಹೀಗೇ ನಿರಂತರ ಎರಡು ಮೂರು ವರ್ಷದವರೆಗೆ ಮುಂದುವರೆದು ನೆನಪು ಬಾರಿ ಬಾರಿ ಸೋತಿತು.. ನನಗೆ ಅವಳ ಹೆಸರು, ವಿವರ ಕೇಳುವುದಾಗಲಿಲ್ಲ.. ಅಷ್ಟೊಂದು ಸಂತೋಷ, ಅನುಗಾಲದ ಬಂಧ ಎಂಬ ತರದಲ್ಲಿ ಮಾತಾಡಿಸುತ್ತಿದ್ದ ಅವಳನ್ನು ಯಾರು ನೀನು? ಹೆಸರೇನು ನಿನ್ನದು? ಎಂದು ಎದರಾಬದರಾ ಕೇಳಲಿಕ್ಕಾಗುತ್ತದೆಯೇ..? ಹುಡುಗಿ ತೀರ ಮುಗ್ಧೆಯ ಹಾಗೆ ಕಾಣಿಸುತ್ತಾಳೆ..ಮುಖ ಸಣ್ಣ ಮಾಡಿಕೊಂಡರೆ? ಎಂಬಿಂತವೇ ಕಾರಣಕ್ಕಾಗಿ ಅವಳು ಕಂಡು ಮಾತಾಡಿಸಿದಾಗಲೆಲ್ಲ ಏನನ್ನೂ ಕೇಳದೇ.. 

ಇದೆ !! ತಂಗೀ..!!ಮದುವೆಗೆ ಬಂದಿದ್ಯೇನೇ? ಆರಾಮಲ್ಲೆ? ಮತ್ತೆಂತ ಸಮಾಚಾರವೇ ? ಎಂಬುದೆಲ್ಲ ಮೇಲುಮೇಲಿನ ಕುಶಾಲು ದೇಖರೇಖಿ ವಿಚಾರಿಸಿ ಅವಳು ಸದಾ ತನ್ನ ಎಡಕ್ಕೂ ಬಲಕ್ಕೂ ಅವಚಿಕೊಂಡಿರುತ್ತಿದ್ದ ಭುಜದವರೆಗೆ ಬರುತ್ತಿದ್ದ ಅವಳದೇ ಆಗಿರಬಹುದಾದ ಎರಡು ಮಕ್ಕಳ ಕೆನ್ನೆ ಸವರಿ, ತಲೆ ಅಲುಗಿಸಿ ಬರುತ್ತಿದ್ದೆ.

ಮತ್ತೆ ಮತ್ತೆ ಅಷ್ಟೇ ಅಂತರದಲ್ಲಿ ಅವಳು ಸಿಗುತ್ತ ಹೋದಂತೆ.. ಪ್ರತಿಬಾರಿಯೂ ಅವಳು ಒಂದೆರಡೇ ಸೀರೆಯನ್ನು ನೀಟಾಗಿ ಉಟ್ಟು ಬರುವುದು, ಮಕ್ಕಳನ್ನೂ ಇರುವ ಒಂದೆರಡೇ ಬಟ್ಟೆಯಲ್ಲಿ ಅಚ್ಚುಕಟ್ಟಾಗಿ ಕರೆತರುವುದು, ತನ್ನ ಜಾತಿ, ಮತ, ಪಂಥ ಮೀರಿದ ಮದುವೆಯಲ್ಲೂ ಅನುಮಾನಿಸದೇ, ಅಂಜುಬುರುಕಿಯಂತಿಲ್ಲದೇ ಉಂಡು ಹೋಗುವುದು ಎಲ್ಲ ಕಂಡು “ತಾನು ಮತ್ತು ತನ್ನ ಕೂಸುಗಳ ಒಂದು ಹೊತ್ತಿನ ಊಟಕ್ಕಾಗಿ ಬರುತ್ತಾಳೆ ಇವಳು” ಎಂಬುದು ನನಗೆ ಗುರುತಾಯಿತು.

‘ಉಂಡಾದ ಮೇಲೆಯೂ ನಿಂತು ಇನ್ನಷ್ಟು ಕೊಂಡು ಹೋಗುವೆ’ ಎಂಬ ಅಭಿಲಾಷೆ ಇರಲಿಲ್ಲ ಅವಳಲ್ಲಿ. ತಾನು ಹೀಗೆ ಗುರುತು ಪರಿಚಯವಿಲ್ಲದ ಯಾರುಯಾರದ್ದೋ ಕಾರ್ಯದ ಮನೆಗೆ ಬಂದು ದಿನವೂ ಉಂಡು ಹೋಗುವ ಬಗ್ಗೆ ಯಾರಾದರೂ ಸಣ್ಣದಾಗಿ ತಿಳಿದುಕೊಂಡಾರು ಎಂಬ ಕಡಿಮೆ ಭಾವನೆ ಕೂಡ ಎಂದೂ ಕಂಡದ್ದಿಲ್ಲ ಅವಳ ಮುಖದಲ್ಲಿ. ಅವಳ ಮಕ್ಕಳಲ್ಲೂ ಬಡಿಸಿದ ಊಟವನ್ನು ಯಾವ ‘ಧಾವಂತ, ಹೆಚ್ಚಿನ ಹಪಾಪಿಸುವಿಕೆಯಿಲ್ಲದೇ ಅಚ್ಚುಕಟ್ಟಾಗಿ ಉಂಡು ಎದ್ದು ಸುಮ್ಮನೆ ಹೋಗಿಬಿಡುವ’ ಅದೇ ತರಹದ ಭಾವ.

 ಕಪ್ಪಗಿದ್ದರೂ ಹೊಳೆವ ಚರ್ಮ, ತುಸು ಗಿಡ್ಡವಾದರೂ ಪ್ರಮಾಣ ಬದ್ಧ ಆಕಾರ, ಅಚ್ಚ ಬಿಳಿಯ ಹಲ್ಲು ,ಮೊಣಕಾಲಿನವರೆಗೂ ಬರುತ್ತಿದ್ದ ಒಂದು ಕೂದಲೂ ಆಚೀಚೆಯಾಗದಂತೆ ಹಣೆದ ದಪ್ಪ ಜಡೆ, ಕಡಿಮೆ ಬೆಲೆಯ ಸೀರೆಯನ್ನೂ ಅಚ್ಚುಕಟ್ಟಾಗಿ ಕೊಂಕಿಲ್ಲದಂತೆ ಉಡುವ ಬಗೆ. ಮುಂತಾದ ಕಾರಣಕ್ಕೆ ನನಗೆ ಅವಳನ್ನು ಬಾರಿ ಬಾರಿ ನೋಡಬೇಕು ಅನ್ನಿಸುತ್ತಿತ್ತು.

ಆಕಾರದ ಕಾರಣಕ್ಕೋ, ಆತ್ಮವಿಶ್ವಾಸದ ಕಾರಣಕ್ಕೋ. ‘ಬೆಳೆಯಬಲ್ಲೆ, ಹೊಳೆಯಬಲ್ಲೆ ನಾನು’ ಎಂಬ ಕಣ್ಣ ಜ್ವಲಿಸುವಿಕೆಯ ಕಾರಣಕ್ಕೋ ಅಥವಾ ತಾನು ಇಂಥವಳು ಎಂದು ಕೂಡ ಹೇಳಿಕೊಳ್ಳದೇ ಸಿಕ್ಕಿದ ಸಮಯದಲ್ಲಿ ನನ್ನ ಪ್ರೀತಿಸುವ, ಕಾರಣವಿಲ್ಲದೆ ಕಿಮ್ಮತ್ತು ಕೊಡುವ ಕಾರಣಕ್ಕೋ.. ಹೆಸರೇ ಗೊತ್ತಿಲ್ಲದ ಹುಡುಗಿ ನನ್ನೊಳಗೆ ಬೆಳೆಯುತ್ತ ಹೋದಳು.

ಉಂಬ ಕಾರಣವನ್ನೇ ಪ್ರಮುಖವಾಗಿಟ್ಟುಕೊಂಡು ಬರುವ ಅವಳ ಪರಿಚಯವನ್ನು ಇತರರಲ್ಲೂ ಕೇಳುವುದಾಗಲಿಲ್ಲ ನನಗೆ . ಕೇಳಿದರೆ ಮನಸ್ಸಿಗೆ ಹಿತವಲ್ಲದ, ನಾನು ಇದುವರೆಗೆ ಅವಳ ಬಗ್ಗೆ ಬೆಳೆಸಿಕೊಂಡು ಬಂದ ಆಪ್ತ ಭಾವಕ್ಕೆ ಧಕ್ಕೆಯಾಗುವ ಹಾಗೆ ಅಂದುಬಿಟ್ಟರೆ ಅವರು.. ಹೀಗೆಲ್ಲ ಏನೇನೋ ಶಂಕೆಗಳು.

ಮನೆಯಲ್ಲಿ ಪುಟ್ಟ ಸಮಾರಂಭವಿದ್ದಾಗ ಒಂದೈವತ್ತು ಊಟದ ಅಡಿಗೆ ಮಾಡಿಕೊಳ್ಳುವ ಸಂದರ್ಭವಿದ್ದರೆ ಮೂರು ದಿನ ತಯಾರಿ ಮಾಡಿಕೊಂಡು ನಾನೇ ಮಾಡಿಕೊಳ್ಳುವ ರೂಢಿ ನನಗೆ. ಆದರೆ ಇತ್ತೀಚಿನ ವರ್ಷದಲ್ಲಿ ಜವಾಬ್ದಾರಿ ಹೆಚ್ಚಾಗಿ ಕೆಲಸದವರೂ ಇಲ್ಲದ ಕಾರಣಕ್ಕೆ ಈ ಬಾರಿ “ಅಡುಗೆ ಮಾಡಲು ಯಾರಾದರನ್ನು ಗೊತ್ತು ಮಾಡಿ ಕೊಡು ಭಾಗಕ್ಕ” ಎಂದು ಆಗಾಗ ನನ್ನ ನೆನಪಾದಾಗ ‘ಕಣಗಿಲ್’ ಬಸ್ಸು ಹತ್ತಿಕೊಂಡು ಬೆಳಿಗ್ಗೆ ಬಂದು ನನ್ನ ಹತ್ರ ಅದೂ ಇದೂ ಸುದ್ದಿ ತೋಡಿಕೊಂಡು ಸಂಜೆ ವಾಪಸ್ಸಾಗುವ ‘ಎಡಗೈ ಭಾಗಕ್ಕನಲ್ಲಿ’ ಹೇಳಿದ್ದೆ.

ಅವರು ಇತ್ತೀಚೆಗೆ ನಿವೃತ್ತಿಯಾದ ನಮ್ಮ ತವರು ಮನೆಯ ಕಡೆಯ ಶಿಕ್ಷಕಿ. ಸಂಬಂಧಿ ಅಲ್ಲ. ಸೀರೆ ಉಟ್ಟ ಎಲ್ಲರೂ ಬಲಭುಜಕ್ಕೆ ಬ್ಯಾಗು ಹಾಕಿದರೆ ಇವರು ಎಡಭುಜಕ್ಕೆ ಹಾಕಿ ಬಲಗೈ ಬೀಸುತ್ತ ಸರಸರ ನಡೆಯುತ್ತಾರೆ. ತನ್ನಲ್ಲೇ ತಾನಾದ ಅವರ ವಿಶ್ವಾಸದ ನಡಿಗೆ ಬಲು ಚಂದ. ಹಾಗಾಗಿ ಊರವರ ಬಾಯಲ್ಲಿ ಅವರು ‘ಎಡಗೈ ಭಾಗಕ್ಕ’.

“ನಿನ್ನ ಕೈ ಊಟ  ಉಂಬುವಂಗಾಗೀದೇ. ಜಾಲೀನ ಪುಡಿ ತಿನ್ನುವಂಗಾಗೀದೇ ಅದಕ್ಕೇ ಎದ್ದ್ ಬಂದ್ಬಿಟ್ಟೆ” ಎನ್ನುತ್ತ ಮುಂಜಾನೆ ಎಂಟು ಗಂಟೆಯ ಬಸ್ಸು ಹತ್ತಿ ಆಗಾಗ ಬಂದು ಬಿಡುತ್ತಾಳೆ ಭಾಗಕ್ಕ. ಅವಳು ಬಂದ ಮೇಲೆ ನಾನು ಸಮುದ್ರದ ಧಕ್ಕೆಗೆ ನನ್ನ ಗಂಡನನ್ನು ಓಡಿಸಿ ಅವಳಿಗಿಷ್ಟದ ಮೀನು ತರಿಸಿ ಅಡುಗೆ ಮಾಡಿ ಬಡಿಸುತ್ತೇನೆ. ಅಲ್ಲಿಯವರೆಗೆ ಭಾಗಕ್ಕ ಬೇಡಬೇಡವೆಂದರೂ “ನೀ ಸುಮ್ನೆ ಕೂತ್ಕಳೇ” ಎಂದು ನನ್ನ ದೂಡಿ ಹಾಕಿ… ನಾಲ್ಕೈದು ತೆಂಗಿನಕಾಯಿ ಕೆರೆದು( ತುರಿದು) ಪ್ರಿಡ್ಜಲ್ಲಿಡುತ್ತಾಳೆ. ಕೇಜಿಗಟ್ಟಲೆ ಮೆಣಸು ತೊಟ್ಟು ತೆಗೆದು ಬಿಸಿಲಿಗಿಡುತ್ತಾಳೆ. ಬೆಳ್ಳುಳ್ಳಿ ಸಿಪ್ಪೆ ಸೋಸಿ ಕೊಡುತ್ತಾಳೆ, ರವೆ, ಸಂಬಾರ ಹುರಿದು ಡಬ್ಬತುಂಬುತ್ತಾಳೆ. ನನ್ನ ಎಲ್ಲ ಸಂಕೋಚವನ್ನು ಅಲಕ್ಷ್ಯ ಮಾಡಿ ಸರಭರ ಓಡಿಯಾಡಿ ಏನೇನೋ ಕೆಲಸ ಮಾಡುತ್ತಿರುತ್ತಾಳೆ.

ಇಂಥ ಭಾಗಕ್ಕ” ಅಡುಗೆ ತಾನೇ ? ನೀ ಸುಮ್ನೆ ಕೂತಿರು: ಕಲ್ಲಾಡದಿಂಬದ ಲಕ್ಷ್ಮಣನ ಮಗ ಪರಮೇಸ್ರ ಇದ್ದನಲ್ಲೇ ನಿನ್ನ ಕ್ಲಾಸಮೇಟು.. ಅವನ ಹೆಂಡ್ತಿ ಕಸ್ತೂರಿ. ಚಂದ ಅಡುಗೆ ಮಾಡ್ತಾಳೆ. ಹೋಳಿಗೆ ಮಾಡಿದರಂತೂ ಹನಿ ಹೂರಣ ಹೊರಗೆ ಬರುವುದಿಲ್ಲ. ನಾಲ್ಕು ದಿನವಾದರೂ ಹಾಳಾಗುವುದಿಲ್ಲ. ‘ಕಾಚನಬಟ್ಟಿ’ ಬೆಟ್ಟದ ಹೆಣ್ಣು. ಹಾಳಾದ ಈ ಹುಡ್ಗನ ಮುದಿ ಆಗಿ ಬಂದು ಭಾಳ ವ್ಯೆಥಿ ಪಟ್ಟಳು. ಬಂಗಾರದಂಥ ಹುಡುಗಿ ತಂದು ಎರಡು ಮಕ್ಕಳಾದದ್ದೇ ಎಲ್ಲಿ ದೇಶಾಂತರ ಹೋದ್ನೋ ಗೊತ್ತೇ ಆಗಲಾ ಅಂವ. ಮ್ಯಾಂಗನೀಸ್ ಗಾಡಿ ಹತ್ತಿ ಹೋದಂವ..ಬರದೇssss ಹೋದ..ಜನ ನಾನಾ ಮಾತಾಡಿದರು.

ಪಾಪ ಕಸ್ತೂರಿ ಕಥೆ ಹೇಳೂದಲ್ಲ. ಅಪ್ಪನ ಮನೆ, ಕೊಟ್ಟ ಮನೆ ಎರಡೂ ಕಡೆ ಗಂಜಿಗೂ ತತ್ವಾರ. ಅಂತದ್ದರಲ್ಲಿ ಹಿಳ್ಳೆ ಮಕ್ಕಳ ಕಟ‌್ಕಂಡು ಹ್ಯಾಂಗ್ ದಿಟ್ಟೆಯಾಗಿ ಬದುಕು ಮಾಡಿದಳಂತೀ…? ಮನೆಕೆಲ್ಸ , ಕೊಟ್ಟಿಗೆ ಕೆಲ್ಸ, ಅಡುಗೆ ಕೆಲ್ಸ, ಗದ್ದೆಕೆಲ್ಸ ಎಲ್ಲದಕ್ಕೂ ಕರೆದಕಡೆ ಹೋದಳು. ಕೊಟ್ಟಷ್ಟು ತಂದಳು. ನಿಂಗೊತ್ತಿದೆಯಲ್ಲ ನಮ್ಮ ಸಮುದಾಯದ ಜನ ಯಾರ ಮನೆಗೂ ಕೆಲ್ಸಕ್ಕೆ ಹೋಗುದಿಲ್ಲ ಈಗೊಂದು ಇಪ್ಪತ್ತೈದು ವರ್ಷದಲ್ಲಿ. ಅಂತಾದ್ದರಲ್ಲಿ ಹುಡುಗಿ ಜೀವ ತೆಕ್ಕೊಳ್ಳದೇ, ಯಾರ ಬೆಂಬಲವೂ ಇಲ್ಲದೇ, ನ್ಯಾಯಯುತವಾಗಿ ಚಂದ ರೀತಿಯಲ್ಲಿ ಬದುಕು ಮಾಡ್ತಿರೋದೇ ದೊಡ್ಡ ಇಸ್ಯ….

ಸಣ್ಣ ಸಣ್ಣ ಕಾರಣಕ್ಕೆಲ್ಲ ಈಗಿನವರು ಜೀವ ತೆಕ್ಕೊಂಡು ಹೋಗ್ತಾರೆ. ಸೋತು ಇನ್ನೇನು ಸತ್ತೇ ಹೋಗುವೆ ಎಂಬ ಕೊನೆಯ ಹಂತಕ್ಕಿರುವವರಿಗೂ ಕಸ್ತೂರಿಯ ಉದಾಹರಣೆ ಕೊಟ್ಟು ಬದುಕಿಸಬಹುದು ನೋಡು..”

ಹೀಗೆಲ್ಲ ಅಂದು ಹೊರಟುಹೋದ ಭಾಗಕ್ಕ ಕಾರ್ಯದ ಹಿಂದಿನ ದಿನ ಸಂಜೆಯ ಬಸ್ಸಿಗೆ “ಇವಳೇ ನೋಡು ಕಸ್ತೂರಿ” ಅನ್ನುತ್ತ ತನ್ನ ಜೊತೆ ಕರೆತಂದದ್ದು- ಕಂಡಲ್ಲೆಲ್ಲ ನನ್ನನ್ನು “ಅಕ್ಕಾ” ಎಂದು ಮಾತಾಡಿಸುತ್ತಿದ್ದ ಇದೇ ಹುಡುಗಿಯನ್ನು.

ಗುರುತು ಪರಿಚಯ ಹೆಸರು ಎಲ್ಲವೂ ಸಿಕ್ಕ ಹುಡುಗಿ ಎರಡೂವರೆ ದಿನ ನನ್ನೊಟ್ಟಿಗಿದ್ದು ತಾನೇ ಮನೆಯಾದಳು. “ನನ್ನ ಗುರ್ತು ನಿನಗೆ ಹ್ಯಾಂಗಿತ್ತು ಮೊದಲು ಕಸ್ತೂರಿ..? ಸಿಕ್ಕಲ್ಲೆಲ್ಲ ಮಾತಾಡಿಸ್ತಿದ್ದೆಯಲ್ಲ” ಅಂತ ನಾನು ಅಂದರೆ… “ಅಕ್ಕಾ ಮದುವೆಯಾಗಿ ಬಂದ ವರ್ಷವೇ ನನ್ನ ಗಂಡ ಯಾರದೋ ಮದುವೆಯಲ್ಲಿ ನಿಮ್ಮನ್ನು ತೋರಿಸಿ ‘ಐದನೇತ್ತಿ’ ಇರುವಾಗ ನೀವು ಅವರನ್ನು ಬದುಕಿಸಿದ ಕಥೆ ಹೇಳಿದ್ದರು. ಅದೇ.. ‘ದಿವ್ವದ ಗದ್ದೆ’ ಯ ನೇರಳೆ ಮರದ ಚೂಪು ಕೊಂಬೆಗೆ ಅವರ ಹರಿದ ಚಡ್ಡಿ ಸಿಕ್ಕಿ ಇಳಿಯಲೂ ಆಗದೇ ಮೇಲೇರಲೂ ಆಗದೇ ತೂಗಾಡಿದ ಕಥೆ.

ಬಾಕಿ ಹುಡುಗಿಯರೆಲ್ಲ ಹೆದರಿ ದಿಕ್ಕಾಪಾಲಾಗಿ ಹೋದರೂ ನೀವು ‘ಒಕ್ಕಲ ಬೊಮ್ಮ’ನನ್ನು ಓಡಿ ಹೋಗಿ ಕರೆತಂದು ಅವರನ್ನು ಬದುಕಿಸಿದ ಕಥೆ, ಸ್ವಲ್ಪ ತಡಾ ಆಗಿದ್ದರೆ ಚಡ್ಡಿ ಹರಿದು ಅವರು ಕೆಳಗೆ ಚೀರಿಕಲ್ಲ ಮೇಲೆ ಬಿದ್ದು ಸತ್ತೇ ಹೋಗುತ್ತಿದ್ದರಂತೆ. ಈಗವರು ದೇಶಾಂತರ ಹೋಗಿದ್ರೂ.. ಅಥವಾ ಸತ್ತೇ ಹೋಗಿದ್ರೂ..ಅವರನ್ನು ಅಂದು ನೀವು ಬದುಕಿಸಿದ ಘಟನೆ ನನ್ನಲ್ಲಿ ಇರುವ ಕಾರಣಕ್ಕೆ ಅವರು ಜೀವಂತವಾಗಿ ಇದ್ದಾರೆ ಈಗಲೂ ನನ್ನಲ್ಲಿ.”

 “ಅದೂ ಒಂದು ಕಾರಣ ಆಯ್ತು. ನಂತರ ನಾನು ಮನೆಗೆಲಸಕ್ಕೆ ಹೋಗುವ ಕಾಮತರ ಮನೆಗೆ ಬರುವ ಪೇಪರಿನಲ್ಲಿ ಆಗಾಗ ನಿಮ್ಮ ಕಥೆ, ಕವಿತೆಯೊ. ಅಥವಾ ಬಹುಮಾನ ತಕ್ಕೊಂಡ ನಿಮ್ಮ ಹೆಸರೂವೂ, ಫೋಟೋವೂ ಇರ್ತದೆ ಅಕ್ಕ. ಅದನ್ನು ತಂದು- ಶಾಲೆಯ ಎಲ್ಲ ಕಾರ್ಯಕ್ರಮದಲ್ಲೂ ಭಾಗವಹಿಸಿ ಚಿಕ್ಕಪುಟ್ಟ ಬಹುಮಾನ ತರುವ ನನ್ನ ಮಕ್ಕಳಿಗೆ ತೋರಿಸ್ತೇನೆ ನಾನು. ನೀವು ನಿಮ್ಮ ಅಣ್ಣನ ಹೆಸರಿನಲ್ಲಿ ಊರ ಶಾಲೆಯಲ್ಲಿಟ್ಟ ಬಹುಮಾನ ಕೂಡ ಕಳೆದವರ್ಷ ಮಗಳಿಗೆ, ಈ ಸಲ ಮಗನಿಗೆ ಸಿಕ್ಕಿದೆ. ನೀವು ಪ್ರತಿವರ್ಷ ಹುಷಾರಿ, ಬಡ ಮಕ್ಕಳಿಗಾಗಿ ಊರ ಶಾಲೆಗೆ ಕೊಡುವ ಸ್ಕೂಲ್ ಬ್ಯಾಗು, ಪಟ್ಟಿ- ಪೆನ್ನು, ಕಂಪಾಸ್ ಕೂಡ ನನ್ನ ಮಕ್ಕಳಿಗೇ ಸಿಗುತ್ತಿದೆ ಮೂರು ವರ್ಷದಿಂದ” .ಎಂದವಳು ಹೇಳುತ್ತ ಹೋದಂತೆ
ಏನೂ ಅಲ್ಲ ಅಂದುಕೊಂಡ ನಾವೂ.., ಯಾರಿಗೋ ಏನಾದರೂ ಆಗಿರಬಲ್ಲೆವು ಹೀಗೆ ಪುಟ್ಟದಾಗಿ.

ಎಂಬುದೊಂದು ಸಂಗತಿ ಒಂದು ಸಣ್ಣ ನೆಮ್ಮದಿಯನ್ನು ನನ್ನೊಳಗೆ ಮೂಡಿಸುತ್ತ ಬದುಕ ಕಟ್ಟಿಕೊಳ್ಳುವ ಶ್ರಮದಲ್ಲಿ ಹೆಜ್ಜೆಹೆಜ್ಜೆಗೂ ತೊಡರುಗಾಲಾಗುವ, ಸಣ್ಣಗೆ ಹುಟ್ಟಿ ಸಮೂಹವಾಗಿ ಬೆಳೆವ ಉಳಿದ ಎಲ್ಲ ಕುಗ್ಗಿಸುವ ಸಂಗತಿಗಳಿಗೆ ಬೇಜಾರು, ದುಃಖ ಪಟ್ಟುಕೊಂಡರೂ, ಮೂಕಿಯಂತಿದ್ದುಅವೆಲ್ಲವನ್ನು ಮೀರಿ ನೀತಿಯಲ್ಲಿ ಬದುಕುತ್ತ, ಉರಿ ಬಿಸಿಲಲ್ಲೂ ಹರಿವ ಅಂಗಳದ ಬಸಲೆಯಂತೆ ಹಸಿರಾಗಿ ಹರಿಯುತ್ತಿರುವ ಕಸ್ತೂರಿಯನ್ನು ನೋಡಿ ನಾನೆಷ್ಟು ರಾಶಿ ಇದೆ ಕಲಿಯುವುದು ಅಂತ ನನಗೆ ಅನ್ನಿಸುತ್ತ ಹೋಯ್ತು.

ನನ್ನೊಳಗಿನ ಶಾಲ್ಮಲೆ “ನೋಡಿದೆಯಾ !!… ಕಸ್ತೂರಿಯನ್ನ!!.. ನೀವಿಬ್ಬರೂ ಮತ್ತು ನಿನ್ನಂತೆ ಇರುವ ಸಾವಿರಾರು ಹೆಣ್ಣುಮಕ್ಕಳೂ ನನ್ನದೇ ಕೂಸುಗಳು ಕಣೇ. ನಿನಗೇ ಗೊತ್ತಿಲ್ಲದೇ ಅವಳು ನಿನ್ನಿಂದ ಮುಷ್ಟಿ ಉತ್ಸಾಹವನ್ನು ಹಿಡಿದು ತನ್ನ ಉಡಿಗೆ ಹಾಕಿಕೊಂಡಿದ್ದಳು. ಈಗ ನೀನು ಅವಳನ್ನು ನೋಡಿ ಮತ್ತೂ ಮತ್ತೂ ಹುರುಪಿನವಳಾಗುವುದು ಬಾಕಿ ಇದೆ” ಎನ್ನುತ್ತ ಬೆನ್ನುತಟ್ಟಿದಂತಾಯಿತು ನನಗೆ.

ಈಗೆರಡು ವರ್ಷದಿಂದ ಕಸ್ತೂರಿ ಮನೆಗೆಲಸ ಬಿಟ್ಟು ಅಕ್ಕಿರೊಟ್ಟಿ ಬಡಿದು ಮನೆಮನೆಗೆ, ಹೊಟೇಲುಗಳಿಗೆ ತಲುಪಿಸುತ್ತಿದ್ದಾಳೆ. ಇಲ್ಲಾ ಅವರೇ ಬಂದು ಒಯ್ಯುತ್ತಾರೆ… ನಾಟಿಕೋಳಿ ಸಾರು, ಅಕ್ಕಿ ಹೆಂಚಿನರೊಟ್ಟಿ ನಮ್ಮ ಅಂಕೋಲೆಯ ವಿಶೇಷ.. ದಿನಕ್ಕೆ ಐದುನೂರು ,ಆರುನೂರು ರೊಟ್ಟಿ ಒಬ್ಬಳೆ ಮಾಡುತ್ತಾಳೆ ಕಸ್ತೂರಿ.

ಐದು ಆರು ಸಾವಿರ ರೊಟ್ಟಿ ಮಾಡುವ ಸಂದರ್ಭ ಬಂದರೆ ಬೆಳಂಬಾರದ ಹಾಲಕ್ಕಿ ಹೆಂಗಸರಿಬ್ಬರು ಸಹಾಯಕ್ಕೆ ಬರುತ್ತಾರೆ. ವರ್ಷಕ್ಕೊಮ್ಮೆ ಬರುವ ಬಂಡಿಹಬ್ಬದ ರೊಟ್ಟಿ ಸಲುವಾಗಿ ಎರಡು ತಿಂಗಳ ಮೊದಲೇ ಕಸ್ತೂರಿ ಹತ್ರ ಹೆಸರು ಬರೆಸಬೇಕಾಗುತ್ತದೆ. ನನಗೆ ಕಳೆದವರ್ಷ ಮೂರು ನೂರು ರೊಟ್ಟಿ ಮಾಡಿಕೊಟ್ಟಿದ್ದಳು.

“ಹಬ್ಬದ ಎರಡು ದಿನ ಮೊದಲು ರೊಟ್ಟಿ ಮಾಡಿಕೊಟ್ರೂ ಅಡ್ಡಿಲ್ವೆ ಮಾರಾಯ್ತಿ” ಎನ್ನುತ್ತ ಜನ ಇವಳ ಹತ್ರವೇ ರೊಟ್ಟಿ ಮಾಡಿಸಿ ಒಯ್ಯುತ್ತಾರೆ.. ಊರಿನ ಎಲ್ಲರಿಗೂ ಸ್ವತಃ ಗದ್ದೆಯ ಅಕ್ಕಿ ಇರೋ ಕಾರಣಕ್ಕೆ ಯಾರೂ ಬಿಪಿಎಲ್ ಕಾರ್ಡಿನ ಅಕ್ಕಿಯನ್ನು ಹೆಚ್ಚಿಗೆ ‘ವಾಪರಸು’ದಿಲ್ಲ. ಕಿಲೋಕ್ಕೆ ಒಂದೆರಡು ರೂಪಾಯಿ ಹೆಚ್ಚಿಗೆ ತಕ್ಕೊಂಡು ಕಸ್ತೂರಿಗೆ ಅಕ್ಕಿ ಕೊಟ್ಟು ಬಿಡುವ ಹದಿನೈದಿಪ್ಪತ್ತು ಮನೆಗಳಿವೆ. ಆ ಅಕ್ಕಿ ತೊಳೆದು ಯಾರದೋ ಮನೆ ಟೆರೇಸಿನ ಮೇಲೆ ಒಣಗಿಸಿ  ಹಿಟ್ಟು ಮಾಡಿಸಿ ರೊಟ್ಟಿ ತಟ್ಟಿ ಅವಳೀಗ ‘ರೊಟ್ಟಿ ಕಸ್ತೂರಿ’ ಯಾಗಿದ್ದಾಳೆ.

ಮೊನ್ನೆಯಷ್ಟೇ ನನ್ನ ಹತ್ರ ವಾಹನ ಸಾಲದ ಜಾಮೀನಿಗೆ ಸಹಿ ಹಾಕಿಸಿಕೊಂಡು ಹೋಗಿ ‘ಮೆಸ್ಟ್ರೋ’ ಖರೀದಿಸಿದ್ದಾಳೆ. ನಾಚಿಕೊಂಡು ದೂರವೇ ನಿಲ್ಲುತ್ತಿದ್ದ ಹುಡುಗಿ ಈಗ ಫೋನ್‌ ಮಾಡಿದರೆ ವೆಚ್ಚ, ಲಾಭ ಎಲ್ಲವನ್ನೂ ಸರಸರ ಹೇಳಿ ಕೊಳ್ಳುತ್ತಾಳೆ. ಹೊಸವಸ್ತು ಏನು ಖರೀದಿಸಿದೆ ಎಂಬುದನ್ನೂ ಖುಷಿಯಿಂದ ಹೇಳುತ್ತಾಳೆ.
ಕಸ್ತೂರಿ ಬದುಕುತ್ತಿದ್ದಾಳೆ ಬದುಕಿಸುತ್ತಿದ್ದಾಳೆ ಮತ್ತೆ ಬೆಳೆಯುತ್ತಿದ್ದಾಳೆ.

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Kusuma patel

    ಲೇಖನ ತುಂಬಾ ಚೆನ್ನಾಗಿದೆ ರೇಣುಕಾ ಅವರೆ,

    ಪ್ರತಿಕ್ರಿಯೆ
    • Renuka Ramanand

      ಧನ್ಯವಾದ ಕುಸುಮಾ ಪಟೇಲ್ ಮ್ಯಾಮ್

      ಪ್ರತಿಕ್ರಿಯೆ
  2. Deepa Hiregutti

    ಇಂಥ ಕಸ್ತೂರಿಯ ಮತ್ತು ಅಂಥವರ ಸಂತತಿ ಸಾವಿರವಾಗಲಿ. ಚೆನ್ನಾಗಿದೆ ರೇಣು.

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ಕಸ್ತೂರಮ್ಮ ಸದಾ ಚೆನ್ನಾಗಿರಲಿ. ಅವರ ಹೆಮ್ಮಕ್ಕಳ ಬದುಕು ಸಂಪನ್ನವಾಗಲಿ.

    ಅವರ ರಟ್ಟೆಗಳಲ್ಲಿ ರೊಟ್ಟಿ ಬಡೆಯೊ ಬಲ ಇರುವಾಗಲೇ ಒಂದು ಸಲ ನಮ್ಮನ್ನೆಲ್ಲ ಕರೀರಿ. ಕೋಳಿಸಾರುಂಬ ಯೋಗ್ಯತೆ ಕೇಳಿಬರಲಿಲ್ಲವಾದರೂ ಕೊಬರಿಚಟ್ನಿಯಲ್ಲಿ ಬಾರಿಸಿ ಬಿಡೋಣ.

    ಪ್ರತಿಕ್ರಿಯೆ
  4. ವಾಸುದೇವ ಶರ್ಮಾ

    ಸೊಗಸಾದ ವ್ಯಕ್ತಿ ಚಿತ್ರಣ. ಹಾಗೆಯೇ ಬದುಕ ಸವಾಲನ್ನು ತೆಗೆದುಕೊಂಡು ಧನಾತ್ಮಕ ದೃಷ್ಟಿಕೋನ ಬೆಳೆಸಲು ಪ್ರೋತ್ಸಾಹಿಸುವ ಲೇಖನ.

    ಪ್ರತಿಕ್ರಿಯೆ
  5. ಕಿರಣ ಭಟ್

    ಕಸ್ತೂರಿ ಕಟ್ಟಿಕೊಂಡ ಬದುಕನ್ನು ನೋಡಿದಾಗ ಹೆಮ್ಮೆಯಾಗ್ತದೆ.
    ಹಾಗೇ ಕೊಂಬೆಗೆ ಚೆಡ್ಡಿ ಸಿಕ್ಕಿಸಿಕೊಂಡು ನೇತಾಡ್ತಿದ್ದವನನ್ನು ಬದುಕಿಸಿದ ಹುಡ್ಗಿಗೂ ಒಂದು ಶಹಬ್ಬಾಸ್.

    ಪ್ರತಿಕ್ರಿಯೆ
  6. Renuka Ramanand

    ಕಸ್ತೂರಿ ನನಗಿಂತ ಚಿಕ್ಕವಳು ಲಲಿತಾ ಮ್ಯಾಡಂ…ಬನ್ನಿ ನೀವು ಅಂಕೋಲೆಗೆ…ಧನ್ಯವಾದ ನಿಮ್ಮ ಪ್ರೀತಿಯ ಓದಿಗೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: