ಶೃತಿ ಹರಿಹರನ್ ಹೆಸರು ಕೇಳಿ ಒಂದೆಡೆ ಖುಶಿ, ಮತ್ತೊಂದೆಡೆ ಆತಂಕ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ಹರಿವುಮೂಲಕ ರಾಷ್ಟ್ರದ ಗಮನ ಸೆಳೆದ ಇವರು ನಾತಿಚರಾಮಿಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು. 

ಸ್ವಲ್ಪ ಸಮಯ ಯೋಚಿಸಿ ಅವರಿಗೆ ಮೆಸೇಜ್ ಮಾಡಿ ಅವರ ಅನುಮತಿ ಪಡೆದು ನಾನೇ ಅವರಿಗೆ ಕರೆ ಮಾಡಿ ಮಾತಾಡಿದೆ, ಅವರು ಪೇಮೆಂಟಿನ ಬಗ್ಗೆ ಹೇಳಿದ್ದು, ಸಾರ್, ಬರೀ ಹಣಕ್ಕೆ ನಾನು ಪ್ರಾಮುಖ್ಯತೆ ಕೊಡೋದಾದ್ರೆ ಸಿನೆಮಾ ಕಡೆ ತಲೇನೂ ಹಾಕಲ್ಲಾ. ಸೀರಿಯಲ್ ಅಲ್ಲೇ ಒಳ್ಳೇ ಸಂಭಾವನೆ ಸಿಗುತ್ತೆ. ಆದರೆ ನನಗೆ ಉತ್ತಮವಾದ ಕಥೆಯಲ್ಲಿ ನಟಿಸಬೇಕು ಅನ್ನೋ ಆಸೆ ಇದೆ. ನಿಮ್ಮಂತಹ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ನನಗದು ಇನ್ನೂ ಖುಷಿ ವಿಚಾರ. ಆದರೆ ನಿಮ್ಮ ಈ ಸಿನೆಮಾದಲ್ಲಿ ಮಾಡಲು ನನಗೆ ತುಂಬಾನೆ ಆಸಕ್ತಿ ಇದೆ, ಆದ್ರೆ…

ಅಲ್ಲಿಯವರೆಗಿನ ಮಾತುಗಳು ನನಗೆ ಬಲು ಇಂಪಾಗಿ ಕೇಳಿಸುತ್ತಿತ್ತು, ನನ್ನ ಬೇಡಿಕೆಗೆ ಅನುಗುಣವಾಗಿ ಇವರು ಒಪ್ಪುವ ಸಾಧ್ಯತೆ ಇದೆ ಎಂಬ ಆಶಾಭಾವದಲ್ಲಿ, ಯಾವಾಗ ಇವರು ಆದರೆ ಅಂತಂದ್ರೋ, ಮತ್ತೇನು ಕೇಳ್ತಾರೋ ಅಂತ.

ಒಂದು ಮೌನದ ನಂತರ ಅವರೇ ಮುಂದುವರೆಸಿದರು, ಈ ಚಿತ್ರೀಕರಣವನ್ನು ಜನವರಿ 15ರ ನಂತರಕ್ಕೆ ಮುಂದೂಡಲು ಒಪ್ಪುವುದಾದರೆ ನಾನು ನಟಿಸಲು ಸಿದ್ದಳಿದ್ದೇನೆ. ಬೇರೊಂದು ಪ್ರಾಜೆಕ್ಟಿಗೆ ಈಗಾಗಲೇ ಅನುಮತಿ ನೀಡಿದ್ದೇನೆ, ಅದು ಮುಗಿಯುವುದು ಬಹುಶಃ ಜನವರಿ ಹತ್ತಾಗಬಹುದು, ದಯವಿಟ್ಟು ಇದರ ಬಗ್ಗೆ ಯೋಚಿಸಿ ನೋಡಿ ಸರ್, ನನಗಂತೂ ನಿಮ್ಮೊಂದಿಗೆ ಕೆಲಸ ಮಾಡಲು ತುಂಬಾನೇ ಆಸಕ್ತಿ ಇದೆ. ನಿಮ್ಮ ‘ಹರಿವು’ ಸಿನೆಮಾ ಬಗ್ಗೆ ಸಾಕಷ್ಟು ಕೇಳಿದ್ದೇನೆ ಅಂತ ಹೇಳಿದರು.

ಅವರ ಅಷ್ಟು ಅಕ್ಕರೆಯ ಮಾತುಗಳಿಗೆ ಒಪ್ಪಲು ನನಗೆ ಸಾಧ್ಯವಿರಲಿಲ್ಲಾ, ಕಾರಣ ಏನೆಂದರೆ ನನಗೆ ಸಿನೆಮಾ ಈ 2107ರ ಡಿಸೆಂಬರ್ ಅಲ್ಲಿ ತಯಾರಿಸಿದರೆ, ರಾಜ್ಯ ಸರಕಾರ ಕೊಡುವ ಸಬ್ಸಿಡಿಗೆ 2018ರಲ್ಲೇ ಸಲ್ಲಿಸಬಹುದು, ಇಲ್ಲವಾದರೆ 2109ರ ಜನವರಿಯವರೆಗೂ ಕಾಯಬೇಕಾಗುತ್ತದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲೂ ಕೂಡ ಒಂದು ವರ್ಷ ಕಾಯಬೇಕಾಗುತ್ತಲ್ಲಾ ಎಂಬ ಆತಂಕ ನನ್ನದು.

ಆ ನಟಿ ಜನವರಿ ಎಂದ ಕೂಡಲೇ ಇವಿಷ್ಟೂ ತಲೆಯೊಳಗೆ ಬಂತು, ಕೂಡಲೇ ನನ್ನ ಸಮಸ್ಯೆಯನ್ನು ಅವರಿಗೆ ಹೇಳಬೇಕಾದ ಭಾಗವಷ್ಟೇ ಹೇಳಿ ಮುಂದೆ ಜೊತೆಯಲ್ಲಿ ಕೆಲಸ ಮಾಡುವ ಮೇಡಂ. ಥ್ಯಾಂಕ್ಯೂ ಸೋ ಮಚ್ ಅಂತ ಹೇಳಿ ಕಾಲ್ ಕಟ್ ಮಾಡಿದೆ.

ಸರಿ ಮುಂದೆ ಯಾರನ್ನು ಅಪ್ರೋಚ್ ಮಾಡುವುದೂ ಎಂದು ಯೋಚಿಸುತ್ತಿರುವಾಗ ಶೃತಿ ಹರಿಹರನ್ ಬಗ್ಗೆ ಯೋಚನೆ ಬಂದಿತ್ತಾದರೂ, ಆ ಸಮಯದಲ್ಲಿ ಅವರು ತುಂಬಾ ದೊಡ್ಡ ನಟಿಯಾಗಿ ಜನಪ್ರಿಯರಾಗಿದ್ದರು. ಆ ಜನಪ್ರಿಯತೆಯೇ ಅವರನ್ನು ಕೇಳುವುದಕ್ಕೆ ಹಿಂಜರಿಯುವಂತೆ ಮಾಡಿತು. ಶೃತಿ ಹರಿಹರನ್ ಅವರ ಬಗ್ಗೆ ಸಂಧ್ಯಾ ಮೇಡಂ ಹತ್ರ ಪ್ರಸ್ತಾಪಿಸಿದಾಗ ಅವರಿಗೂ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎನಿಸಿತು, ಆದರೆ ನಮ್ಮ ಬಡ್ಜೆಟ್ಟಿನ ಲಿಮಿಟೇಷನ್ ನೆನಪಾಗಿ ಇಬ್ಬರೂ ಸುಮ್ಮನಾದೆವು.

ಈ ಆತಂಕ ನನ್ನದಲ್ಲಾ ನನ್ನ ಕಥೆಗೆ ಹಣ ಹೂಡುವ ನಿರ್ಮಾಪಕರು ಅಷ್ಟು ದಿನಗಳು ಕಾಯಬೇಕಾಗುತ್ತಲ್ಲಾ, ಅಷ್ಟು ತಿಂಗಳು ಹಣವನ್ನು ಸುಮ್ಮನೆ ಇನ್ವೆಸ್ಟ್ ಮಾಡುವುದು ವ್ಯವಹಾರಿಕವಾಗಿ ಅವರಿಗೆ ಸರಿ ಕಾಣುವುದಿಲ್ಲಾ ಎಂಬ ಕಾರಣಕ್ಕಾಗಿ ಸಿನೆಮಾ ನಿರ್ಮಾಣವನ್ನೇ ಮುಂದೂಡುತ್ತಾರೇನೋ ಎಂಬ ಆತಂಕ ನನ್ನದು. (ಈ ವ್ಯವಹಾರದ ಭಾಷೆ ಅರ್ಥವಾಗಿದ್ದು, ಹರಿವು ನಂತರ ಸಿನೆಮಾ ಮಾಡಲು ನಿರ್ಮಾಪಕರಿಗಾಗಿ ಚಪ್ಪಲಿ ಸವೆಸುತ್ತಾ, ಭೇಟಿ ಮಾಡಿದ ನಿರ್ಮಾಪಕರು ನೀಡಿದ ಜ್ಞಾನದ ಅನುಭವದಿಂದ ಬಂದಿದ್ದು, ಆದರೂ ಇಂದಿಗೂ ನನಗೆ ಹಣದ ವ್ಯವಹಾರ ಚತುರತೆ ಇಲ್ಲಾ ಎಂದು ನನ್ನ ಆಪ್ತವರ್ಗದ ಆಪಾದನೆ, ಅದು ಭಾಗಶಃ ಹೌದೂ ಕೂಡ)

ಹೀಗೆ ನಟಿ ಯಾರಾಗಬಹುದು ಎಂದು ಯೋಚಿಸುತ್ತಲೇ ಇದ್ದೆ. ಹೊಸಬರು ನಮಗೆ ಬೇಕಾದ ಲಕ್ಷಣಗಳ ಜೊತೆ ನಮ್ಮ ಕರಾರುಗಳಿಗೆ ಸುಲಭವಾಗಿ ಒಪ್ಪುವುದಕ್ಕೂ ಸಿದ್ದರಿರುತ್ತಾರೆ. ಆದರೆ ನನಗೆ ಸ್ವಲ್ಪ ಜಾಸ್ತೀನೇ ರಿಸ್ಕಿ ಕೆಲಸ, ಕಾರಣ ನಮ್ಮ ಬಡ್ಜೆಟ್ ಮತ್ತು ಚಿತ್ರೀಕರಣದ ದಿನಗಳ ಸೀಮಿತ ಅವಧಿ, ಹಾಗೂ ನಾವು ಸಿಂಕ್ ಸೌಂಡ್ ಬಳಸುತ್ತಿರುವುದರಿಂದ ಸಂಭಾಷಣೆ ಮತ್ತು ನಟನೆ ಯಾವುದರಲ್ಲಿ ಸೈಕಲ್ ಹೊಡೆದರೂ ನನ್ನ ಪ್ರೊಡಕ್ಷನ್ ಪ್ಲಾನಿಂಗ್ ಹೊಡೆಸ್ಕೊಳ್ಳೋ ಆತಂಕ.

ಇದು ಹರಿವು ಸಿನೆಮಾ ಸಮಯದಲ್ಲೇ ಅನುಭವಕ್ಕೆ ಬಂದಿದ್ದರಿಂದ ಈ ಬಾರಿ ನಟನೆಯಲ್ಲಿ ಕ್ಯಾಮೆರಾ ಎದುರಿಸಿ ಅನುಭವವಿಲ್ಲದದವರನ್ನು ಆಯ್ಕೆ ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯಲ್ಲೇ ಇದ್ದೆ.  ಈ ಎಚ್ಚರಿಕೆಯ ಆತಂಕದ ಕಾರಣದಿಂದಲೇ ಹರಿವು ನಂತರ ಮುಹೂರ್ತ ಆಗಿದ್ದ ಸಿನೆಮಾ ನಿಂತು ಹೋಗಿದ್ದು. ಆ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಬೇಕಾಗಿದ್ದ ನಟಿಗೆ ಸಂಭಾಷಣೆ ಒಪ್ಪಿಸಲು ಬಾರದು ಎಂಬ ಕಾರಣಕ್ಕೆ ನಾನು ಆ ನಟಿಯನ್ನು ಬೇಡ ಎಂದು ಹೇಳಿದ್ದಕ್ಕೆ ನಿರ್ಮಾಪಕರು ಸಿನೆಮಾ ಮಾಡುವುದರಿಂದ ಹಿಂದೆ ಸರಿದರು.

ಸಿಂಕ್ ಸೌಂಡ್ ಜೊತೆ ಚಿತ್ರೀಕರಣದ ಫಲಿತಾಂಶ ಅಂತಿಮವಾಗಿ ಎಷ್ಟು ಅದ್ಭುತವಾಗಿ ಬರುತ್ತದೆಯೋ, ಚಿತ್ರೀಕರಣ ಸಮಯದಲ್ಲಿ ಅಷ್ಟೇ ಸಮಸ್ಯೆಗಳನ್ನು ತಂದಿರಿಸುತ್ತೆ. ಇವೆಲ್ಲವನ್ನು ಯೋಚಿಸುತ್ತಾ ಮಲಗಿದ್ದಾಗಲೇ ಸಿನೆಮಾ ಮಾಡಲು ಒಪ್ಪಿದ್ದ ನಿರ್ಮಾಪಕರ ಮೆಸೇಜ್ ಬಂತು, ಸಾಧ್ಯವಾದರೆ ನಾಳೆ ಬೆಳಗ್ಗೆ, ಆಶ್ರಮ ಹತ್ತಿರದ ಎಸ್.ಎಲ್.ವಿ ಬಳಿ ಸಿಗೋಣ. ಸ್ವಲ್ಪ ಮಾತಾಡೋದಿದೆ ಎಂದು ಮೆಸೇಜ್ ಮಾಡಿದ್ದರು. ಸರಿ ಸರ್ ನಾಳೇ ಭೇಟಿಯಾಗೋಣ ಎಂದು ರಿಪ್ಲೇ ಮಾಡಿ ಮಲಗಿದೆ.

ಮರುದಿನ ಅವರು ಹೇಳಿದ ಸಮಯಕ್ಕೆ ಹೋದೆ, ಅವರು ಸಮಯದ ವಿಷಯದಲ್ಲಿ ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯ ಅವರು ಹೇಳಿದ ಸಮಯಕ್ಕೆ ಬಂದರು. ಉಭಯಕುಶಲೋಪರಿ ಮಾತುಕತೆ, ಚಹಾ ವಗೈರೆಗೆಗಳ ನಂತರ ಮುಖ್ಯ ವಿಷಯಕ್ಕೆ ಬಂದರು,

ನಿರ್ಮಾಪಕರು : ಮಂಸೋರೆ, ನನ್ನ ಕೋ ಇನ್ವೆಸ್ಟರ್ ಜೊತೆ ಮಾತಾಡಿದೆ. ಅವರು ಇನ್ವೆಸ್ಟ್ ಮಾಡುವುದಕ್ಕೆ ಸಿದ್ದವಿದ್ದಾರೆ. ಆದರೆ ಅವರದು ಒಂದು ಶರತ್ತಿದೆ, ಅದೇನೆಂದರೆ ಮುಖ್ಯ ಪಾತ್ರವನ್ನು ಮಾಡುವ ನಟಿ known face ಆಗಿರಬೇಕು.

ನನಗೆ ಧಸಕ್ಕೆಂತು, ಇರೋ ಇಪ್ಪತ್ತೈದರಲ್ಲಿ known face ನಟಿಯನ್ನು ಕರೆತಂದರೆ ಅವರಿಗೆ ಎಲ್ಲಾ ಹೋಗುತ್ತೆ ಸಿನೆಮಾ ಮಾಡುವುದು ಹೇಗೆ ಅನ್ನೋದು ನನ್ ಟೆನ್ಷನ್, ಅದನ್ನೇ ಅವರಿಗೂ ಹೇಳಿದೆ,

ನಾನು : ಇರೋ ಬಡ್ಜೆಟ್ಟಲ್ಲಿ ಆಗೋದಿಲ್ಲಾ ಸಾರ್, ಹೆಸರಿರೋ ನಟಿ ಬೇಕೆಂದರೆ ಬಡ್ಜೆಟ್ ಹೆಚ್ಚಾಗುತ್ತೆ ಅಂದೆ.

ನಿರ್ಮಾಪಕರು : ಪರವಾಗಿಲ್ಲಾ, ಅಂತಹ ನಟಿ ಸಿಕ್ಕರೆ ಮಲ್ಟಿಪ್ಲೆಕ್ಸಲ್ಲೂ ಸಿನೆಮಾ ಬಿಡುಗಡೆ ಮಾಡಬಹುದು, ಇನ್ ಫಿಲಂ ಬ್ರಾಂಡಿಂಗ್ ಟ್ರೈ ಮಾಡಬಹುದು.

ನಾನು : extra ಬಡ್ಜೆಟ್ ಎಷ್ಟರವರೆಗೂ ಸಿಗಬಹುದು ಸರ್

ನಿರ್ಮಾಪಕರು : ನೀವು ಹೇಳಿರೋದು ಇಪ್ಪತ್ತೈದು, ಅದಕ್ಕೆ ಇನ್ನೊಂದು ಐದೋ ಹತ್ತೋ ಸಿಗಬಹುದು.

ನಾನು : ಸಾರ್ ಅಷ್ಟು ಸಾಕಾಗಲ್ಲಾ ಸಾರ್, ಅವರ ಪೇಮೆಂಟ್ ಜೊತೆಗೆ ಇನ್ನೊಂದಷ್ಟು ಖರ್ಚುಗಳೂ ಬರುತ್ತೆ.

ನಿರ್ಮಾಪಕರು : ಅವರಿಗೆ ಪೂರ್ತಿ ಪೇಮೆಂಟ್ ಕೊಡುವ ಬದಲು ಶೇರಿಂಗ್ ಬೇಸಿಸ್ ಅಲ್ಲಿ ಮಾಡೋದಿಕ್ಕೆ ಒಪ್ಸಿ, ಅವ್ರು ಒಪ್ಕೊಂಡ್ರೆ ಪ್ರಾಫಿಟ್ ಅಲ್ಲಿ ಇಪ್ಪತ್ತು ಪರ್ಸೆಂಟು ಕೊಡೋಣ.

ನಾನು : ನಿಮ್ ಪ್ರಕಾರ ಯಾರಾಗ್ಬಹುದು ಹೇಳಿ ಸರ್, ನಮ್ಮ ಕಥೆಗೆ ಹಾಗೂ ನಮ್ ಬಡ್ಜೆಟ್ಟಿಗೆ ಸೆಟ್ ಆಗ್ತಾರಾ ಯೋಚ್ನೆ ಮಾಡ್ತೀನಿ .

ನಿರ್ಮಾಪಕರು : ನನಗೆ ಮೊನ್ನೆ ನೀವು ಕಥೆ ಎಳೆ ಹೇಳ್ದಾಗಿಂದ ಆ ಪಾತ್ರಕ್ಕೆ ಶೃತಿ ಹರಿಹರನ್ ಸರಿಯಾಗಿ ಸೂಟ್ ಆಗ್ತಾರೆ, ಅವರನ್ನ ಕೇಳಿ,

ನಾನು ಶೃತಿ ಹರಿಹರನ್ ಹೆಸರು ಕೇಳಿ ಒಂದೆಡೆ ಖುಶಿ ಇನ್ನೊಂದೆಡೆ ಆಶ್ಚರ್ಯ, ಮತ್ತೊಂದೆಡೆ ಆತಂಕದ ಮಿಶ್ರಭಾವದಲ್ಲಿ ನಿಂತೆ, ಮುಂದೇನಪ್ಪಾ ಮಾಡೋದು ಅಂತ.

‍ಲೇಖಕರು ಮಂಸೋರೆ

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: