ಜೋಗಿಯವರ ಹೊಸ ಕೃತಿ ‘ನಾನು ಬಡವ’

ಎಸ್ಕೆ ಶಾಮಸುಂದರ

ನನ್ನ ಹಲವು ಪುಸ್ತಕಗಳಿಗೆ ಮುನ್ನುಡಿ ಬರೆಯಲು ನಿರಾಕರಿಸಿದ ಕಟುಮಧುರ ಆಖ್ಯಾನದ S K Shama Sundar ನನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅದೇ ಈ ಕೃತಿಗೆ ಬಂದಿರುವ ಮೊದಲ ಪ್ರಶಸ್ತಿ.

ಅಮ್ಮ ಎಂಬ ಶಬ್ದ ಕೇಳಿದ ತಕ್ಷಣ ಬೆಚ್ಚಗೆ ಬೆಚ್ಚಿಬೀಳುವ ನನಗೆ ಅವಳ ಕುರಿತ ಅನುಭಾವದ ಒಂದು ಇಡೀ ಪುಸ್ತಕ ಓದು ಎಂದರೆ ಹೇಗನಿಸಿರಬೇಡ? ಬಡತನದ ಬಗ್ಗೆ ದಿವ್ಯ ತಿರಸ್ಕಾರ ಇರುವ ನನಗಂತೂ ಇಡೀ ಹಸ್ತಪ್ರತಿಯನ್ನು ಒಂದೇ ಏಟಿಗೆ ಓದಿ ಕೆಳಗಿಡುವುದು ಎಷ್ಟು ಕಷ್ಟವಾಯಿತು ಎಂದು ಬರೆದರೆ ನಿಮಗೆಷ್ಟು ಅರ್ಥವಾಗುತ್ತದೆ. ಮನೆಯೆ ಮೊದಲ ಪಾಠಶಾಲೆ ಎಂದರು. ಗ್ರಂಥಾಲಯವಿಲ್ಲದ ವಿಶ್ವವಿದ್ಯಾನಿಲಯದ ಕುಲಪತಿ ಅಮ್ಮ ಎಂದು ನಮಗೆ ಅರಿವಾಗುವ ಹೊತ್ತಿಗೆ ಅನೇಕ ಪದವಿಗಳು ನಮ್ಮ ಹೆಗಲೇರಿರುತ್ತವೆ.

ನಾವು ಹಿಂತಿರುಗಿ ನೋಡುವುದೇ ಇಲ್ಲ. ತಿರುಗಿ ನೋಡಿದರೆ ಅಮ್ಮನ ಮುಖದಲ್ಲಿನ ಸುಕ್ಕುಗಳು ಮಾತ್ರ ಕಣ್ಣಿಗೆ ಬಿದ್ದಹಾಗೆನಿಸುತ್ತದೆ. ಸುಕ್ಕುಗಳ ಹಿಂದೆ ಸದ್ದಿಲ್ಲದೆ ಬಿಕ್ಕುವವಳು ಇದ್ದಾಳೆ ಎಂದು ಕಲ್ಪಿಸಿಕೊಂಡರೆ ಇನ್ನಷ್ಟು ಭಯವಾಗುತ್ತದೆ.ಬೌದ್ಧಿಕ ಬಡತನ, ವೈಚಾರಿಕ ದಾರಿದ್ರ್ಯ, ಸಂಪತ್ತಿನ ಕೊರತೆಗಳ ಬಗ್ಗೆ ಯಾವ ಹಿಂಜರಿಕೆ, ಅಂಜಿಕೆ ಇಲ್ಲದೆ ಆರಾಮವಾಗಿ ಓದಿಕೊಳ್ಳುವ ನನಗೆ ಈ ಪುಸ್ತಕದ ಓದು ಸುಖವಾಗಿ ಕಂಗೆಡಿಸಿದೆ. ಅಮ್ಮನ ಬದುಕು ಅದರ ಪಾಡಿಗೆ ಅದು ಸಾಗುತ್ತಿದ್ದಾಗ ಎಳೆತನದ ಜಾಡುಹಿಡಿದು ಹೊರಟ ಲೇಖಕನ ಬಾಳದಾರಿಗೆ ನಂಬಿಕೆಯೊಂದು ಸಿಕ್ಕಂತೆನಿಸಿದೆ.

ಅಮ್ಮ ಒಂದು ದೊಡ್ಡ ಹಲಸಿನಹಣ್ಣು. ಬಿಡಿಸಿಕೊಂಡಷ್ಟೂ ತೊಳೆ. ಬಿಡಿಸಿದ ತೊಳೆಗಳನ್ನು ತೊಳೆತೊಳೆಯಾಗಿ ತೊಳೆದ ಬಾಳೆಲೆ ಮೇಲೆ ಹರಡಿಟ್ಟಿರುವ ಇಂಥ ಕೃತಿಯನ್ನು ನಾನೂ ಬರೆಯಬಹುದಲ್ವಾ ಎಂದೆನಿಸಿದರೆ ಅಮ್ಮನ ಕರುಣೆ ನಿಮ್ಮ ಮೇಲೆ ಸದಾ ಇರುತ್ತದೆ ಎಂದೇ ಅರ್ಥ . ಇದು ಮರದಿಂದ ಕಿತ್ತ ಹಣ್ಣಲ್ಲ. ತಂತಾನೇ ಕೆಳಗುರುಳಿ ಹುಲ್ಲಿನ ಮೇಲೆ ಬಿದ್ದು ಹೊಟ್ಟೆಬಿರಿದುಕೊಂಡ ಒಂದು ಹಲಸಿನ ಹಣ್ಣಿನ ಕತೆ. ಮಾಗಿದ ಮಗನೊಬ್ಬ ಹಣ್ಣು ಕುರಿತು ಬರೆದುಕೊಂಡ ಅಮ್ಮನ ಚರಿತೆ.

ಬಡತನವೇ ಮೂರ್ತಿವೆತ್ತಂತೆ ಇಲ್ಲಿ ಅವತರಿಸಿರುವ ಅಮ್ಮ ಯಾವತ್ತೂ ಇಲ್ಲಗಳ ಬಗ್ಗೆ ಅಲವತ್ತುಗೊಂಡುದುದಕ್ಕೆ ಉದಾಹರಣೆ ಇಲ್ಲ. ಅವಳಿಗೂ ಬೇಕುಬೇಡಗಳೆಂಬುವುವು ಇರಲಿಲ್ಲವೇ ಎಂದರೆ ಅವನ್ನೆಲ್ಲ ಹೇಳಲಾಗುವುದಿಲ್ಲ, ಹೇಳಿ ಪೂರೈಸುವುದಕ್ಕೂ ಆಗುವುದಿಲ್ಲ. ನಾನು ಬಡವ, ನಾನೇ ಸುಖಿ ಎನ್ನುತ್ತಲೇ ಚಿತ್ರಿಸಲಾಗದ ಚಿತ್ರಗಳನ್ನು ಅದು ಹೇಗಿತ್ತೋ ಹಾಗೆ ಚಿತ್ರಿಸಲು ಪ್ರಯತ್ನಿಸಿದ್ದೇನೆ ಎಂದು ಜೋಗಿ ಇಲ್ಲೊಂದ್ಕಡೆ ಹೇಳಿದ್ದಾರೆ. ಎಲ್ಲರ ಅಮ್ಮಂದಿರೂ ಎಲ್ಲೋ ಒಂದು ಕಡೆ ಶಾರದಮ್ಮನೇ ಆಗಿರುತ್ತಾರೆ.

ತಾವು ಕಂಡ ಶಾರದಮ್ಮನನ್ನು, ಅಂತರಂಗದ ತಿಳಿನೀರ ಕೊಳದಲ್ಲಿ ಕಾಪಿಟ್ಟುಕೊಂಡಿರುವ ಅಮ್ಮನನ್ನು, ತಮ್ಮ ಬಾಲ್ಯದ ಬಡತನದೊಟ್ಟಿಗಿನ ಆಟಪಾಠ, ಕಲಿಕೆ, ಸವಿಯೂಟಗಳ ನೆನಹುಗಳನ್ನು ಹೃದಯ ಬಸಿದುಕೊಂಡು ಬರೆದಿದ್ದಾರೆ, ಜೋಗಿ. “ಏನೇ ಬರೆದರೂ ಅದೂ ಬರೀ ಪ್ರತಿಬಿಂಬ ಮಾತ್ರ. ಅಮ್ಮನ ಫೋಟೋ ತೆಗೆದು ತೋರಿಸಿದಂತೆ ಅಷ್ಟೇ. ಬರೀತಾ ಬರೀತಾ ನಾನು ಎಷ್ಟು ದುರ್ಬಲ ಅನ್ನೋದು ಗೊತ್ತಾಗುತ್ತಾ ಹೋಯಿತು” ಎನ್ನುವುದು ಅವರ ಶರಾ. ಬರಹವನ್ನು ಚೆಂದಗಾಣಿಸುವುದಕ್ಕೆ ಹೋಗಿಲ್ಲ ಎಂಬ ತಪ್ಪೊಪ್ಪಿಗೆ ಈ ಕೃತಿಯ ಶ್ರೀಮಂತಿಕೆ.

ಜೋಗಿ ಅವರಿಗೆ ಇನ್ನೊಬ್ಬ ತಾಯಿ ಇದ್ದಾಳೆ. ಅವಳೆಲ್ಲಿರುತ್ತಾಳೋ ಇವರಲ್ಲಿರುತ್ತಾರೆ. ಇವರೆಲ್ಲಿರುತ್ತಾರೋ ಅವಳಲ್ಲಿ ಇದ್ದೇ ಇರುತ್ತಾಳೆ. ಕತೆಯಾಗಿ, ಕಾದಂಬರಿಯಾಗಿ ನಿತ್ಯ ಕಾಯುವ ಅಮ್ಮನಾಗಿ ಬಿಡದೆ ಪೊರೆಯುತ್ತಿರುತ್ತಾಳೆ. ಈ ಪುಸ್ತಕದಲ್ಲಿ ಅವಳೇ ಕರುಣಿಸಿದ ಐದು ಕತೆಗಳೂ ಇದಕ್ಕೆ ಸಾಕ್ಷಿಯಾಗಿ ಅಚ್ಚಾಗಿವೆ. ಬುದ್ದಿ ಭಾವಗಳ ಎರಕವೇ ಆಗಿದ್ದ ಜೋಗಿ ಅವರ ಅಮ್ಮನಿಗೆ ನಮಿಸುತ್ತಾ; ನಿಮ್ಮ 56ನೇ ಜನ್ಮದಿನ ನಿಮಿತ್ತ ನಿಮ್ಮಮ್ಮನ ಕುರಿತು ಪುಸ್ತಕ ಬರೆಯಲೇಬೇಕು ಎಂದು ಹಠತೊಟ್ಟು, ಜೋಗಿ ಬೆನ್ನುಹತ್ತಿ ಬರೆಯಿಸಿ ಈ ಕೃತಿಯನ್ನು ನಮ್ಮ ಕೈಗಿಟ್ಟ ಸಾವಣ್ಣ ಪ್ರಕಾಶನದ ಜಮೀಲ್ ಅವರ ಅಮ್ಮನಿಗೂ ಈ ಮೂಲಕ ನಮಸ್ಕಾರಗಳು ಸಲ್ಲುತ್ತವೆ.

‍ಲೇಖಕರು Avadhi

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: