ಗಂಗಮ್ಮಜ್ಜಿಯ ಆಡೂ ದೌಲತ್‌ಳ ಪಾಡೂ

ಶ್ಯಾಮಲಾ ಮಾಧವ

ಗಂಗ ನಿವಾಸ್ ನಮ್ಮ ಗಂಗಮ್ಮಜ್ಜಿಯ ಮನೆ. ಮಂಗಳೂರ ಬೆಂದೂರ್ ವೆಲ್ ಬಳಿಯಲ್ಲಿ ನಮ್ಮ ಬಂಧು ನಿವಾಸಗಳಾದ ತುಳಸೀ ವಿಲಾಸ, ಲೇನ್ ಕಾಟೇಜ್‍ಗಳ ನಡುವೆ ಇದ್ದ ಗಂಗ ನಿವಾಸಕ್ಕೆ ಗಂಗಮ್ಮಜ್ಜಿ ಸಂಸಾರ ಬಂದುದು ಧಾರವಾಡದಿಂದ. ರಸ್ತೆಯ ಪಕ್ಕಕ್ಕಿದ್ದ ಈ ನಿವಾಸದ ಔಟ್‍ಹೌಸ್‍ಗೆ ನಾವು ವಾಸಕ್ಕೆ ಬಂದಾಗ ನಾನು ನೈನ್ತ್ ಸ್ಟಾಂಡರ್ಡ್‍ನಲ್ಲಿದ್ದೆ.

ಗೇಟ್ ಹೊಕ್ಕರೆ ಬಲಕ್ಕೆ ದಿನ್ನೆಯ ಮೇಲೆ ವಿಶಾಲವಾದ, ಸಾಕಷ್ಟು ಹಣ್ಣುಗಳನ್ನು ಕರುಣಿಸುತ್ತಿದ್ದ ಬಳ್ಳಾರಿ ಮಾವಿನ ಮರ. ಎಡಕ್ಕೆ ನಮ್ಮ ಆವಾಸ. ಎದುರಿಗೆ ಬಲಕ್ಕೆ ಗಂಗಮ್ಮಜ್ಜಿಯ ಮನೆ. ಮನೆಯೆದುರಿಗೆ ದೊಡ್ಡದೊಂದು ಚಕ್ಕೋತ್ರ ಹಣ್ಣಿನ ಮರ. ಅದರ ಕೆಳಗೆ ಫ್ಯಾಶನ್ ಫ್ರೂಟ್ ಬಳ್ಳಿ. ಅಂಗಣದಂಚಿಗೆ ಹೂಗಿಡಗಳು. ಎದುರಿಗೆ ಆಳವಾದ ರಾಟೆ ಬಾವಿ. ಅದರಾಚೆ ದನ, ಆಡುಗಳ ಕೊಟ್ಟಿಗೆ. ಅದರಾಚೆ ತಗ್ಗಿನಲ್ಲಿ ಹಿತ್ತಿಲು.

ಇಕ್ಕೆಡೆಯಲ್ಲೂ ಜಾರುಕಟ್ಟೆಯಿದ್ದ ಮೆಟ್ಟಲುಗಳನ್ನೇರಿ ಮೇಲೆ ಬಂದರೆ ಜಾಲರಿಯ ಚಿತ್ತಾರದ ಉದ್ದದ ವೆರಾಂಡಾ. ಅಲ್ಲೆಲ್ಲ ಚಂದದ ಕುರ್ಚಿ, ಬೆಂಚುಗಳು. ಒಳಗೆ ಚಾವಡಿಯಲ್ಲಿ ಚೆಲುವಿನ ಪೀಠೋಪಕರಣಗಳು. ಬಲಕ್ಕೆ ಮಲಗುವ ಕೋಣೆ, ಎಡಕ್ಕೆ ಊಟದ ಕೋಣೆ, ಇತ್ತ ಉಗ್ರಾಣ. ಅತ್ತ ಅಡಿಗೆ ಕೋಣೆ.

ಕೊಟ್ಟಿಗೆಯಲ್ಲಿ ಆಕಳು “ಅಂಬಾ” ಎಂದರೆ, ಆಡು “ಮೇ… ಮೇ…” ಎಂದರೆ, ಅವು ತಮ್ಮ ಸಂಗವನ್ನು ಬಯಸುತ್ತವೆ ಎಂದುಕೊಂಡು ಗಂಗಮ್ಮಜ್ಜಿ, ಅವನ್ನು ತಂದು ಅಂಗಳದಲ್ಲಿ ವೆರಾಂಡಾದ ಕೆಳಗೆ ಜಾಲಂಧ್ರಕ್ಕೆ ಕಟ್ಟುತ್ತಿದ್ದರು. ಒಳಗಿನಿಂದ ಸಂವಾದ ನಡೆಸಿರುತ್ತಿದ್ದರು. ಮತ್ತೂ ಮೂಕಭಾಷೆ ಮುಂದುವರಿದರೆ, ಈ ಪ್ರೀತಿಯ ಸಾಕುಪ್ರಾಣಿಗಳಿಗೆ ಮನೆಯೊಳಗೇ ಪ್ರವೇಶವೊದಗುತ್ತಿತ್ತು. ಜೊತೆಗೆ ಬೆಕ್ಕುಗಳ ಸಂಸಾರ.

ಗಂಗಮ್ಮಜ್ಜಿಯ ಮಗಳು ನಮ್ಮ ದೊಡ್ಡ ದೊಡ್ಡಪ್ಪನ ಪತ್ನಿ ಗೋಪಿ ದೊಡ್ಡಮ್ಮ ಮುಂಬೈಯಿಂದ ಬಂದು ಅಲ್ಲಿ ಅಮ್ಮನೊಡನೆ ನೆಲೆಯಾದಾಗ, ಮಗಳೂ ಅಮ್ಮನಂತೆಯೇ ಈ ಜಾನುವಾರು ಪ್ರೀತಿಯ, ಸಾಕಣೆಯ ಸಾಕಾರ ರೂಪ! ನಾವು ದೊಡ್ಡಮ್ಮನನ್ನು ಸಿಗಲು ಹೋದಾಗ ಮನೆಯೊಳಗೇ ಒಂದಾದರೂ ಕರು ಇರದಿರುತ್ತಿರಲಿಲ್ಲ. ಪ್ಲಾಟ್‍ಫಾರ್ಮ್, ಸ್ಟವ್ ಇದ್ದರೂ, ಕರುವಿನ ಬಳಿಯೇ ಗ್ಯಾಸ್ ಸ್ಟವ್ ಇರಿಸಿಕೊಂಡು, ಅಡಿಗೆ, ಬಗೆ ಬಗೆ ತಿಂಡಿ ಮಾಡುತ್ತಿದ್ದರು, ದೊಡ್ಡಮ್ಮ.

ಧಾರವಾಡದ ಸಂಸ್ಕಾರವೋ ಏನೋ, ಮನೆಗೆ ಬಂದವರಿಗೆ ಸದಾ ದೊಡ್ಡ ಲೋಟ ತುಂಬ ನೊರೆಹಾಲಿನ ಉಪಚಾರವಿರುತ್ತಿತ್ತು. ಕಾಫಿರುಚಿಯ ನನ್ನ ನಾಲಿಗೆಗೆ ಇದು ಇಷ್ಟವಿರದಿದ್ದರೂ ಕುಡಿಯಲೇ ಬೇಕಾಗುತ್ತಿತ್ತು.

ಬೆಂಗಳೂರಿಂದ ಬಂಧುವೂ, ಗೆಳತಿಯೂ ಆಗಿದ್ದ ಸ್ವರ್ಣಲತಾ ಬಂದಿದ್ದಳು. ಪುಸ್ತಕಗಳಲ್ಲಿ ಸಮಾನಾಭಿರುಚಿ ಹೊಂದಿದ್ದ ನಾವು ಗೆಳತಿಯರು ಸದಾ ಮಾತಿನಲ್ಲಿ ಮಗ್ನರಾಗಿರುತ್ತಿದ್ದೆವು. ಸೇಂಟ್ ಆಗ್ನಿಸ್ ವಿದ್ಯಾಥಿರ್üಯಾಗಿದ್ದ ನನಗೆ ಕ್ರಿಸ್ಮಸ್ ರಜೆಯಿದ್ದುದರಿಂದ ನಾನು ಮನೆಯಲ್ಲಿದ್ದೆ. ಬೆಸೆಂಟ್ ಶಾಲೆಯ ನಮ್ಮಮ್ಮ ಶಾಲೆಗೆ ಹೋಗಿದ್ದರು.

ನಮಗೆ ಉಪಪಠ್ಯವಾಗಿದ್ದ ದೌಲತ್ ನನ್ನೊಳಗನ್ನೆಲ್ಲ ವ್ಯಾಪಿಸಿಕೊಂಡಿದ್ದು ಸ್ವರ್ಣಳೊಡನೆ ಮಾತುಕತೆಯಲ್ಲಿ ಆ ಸಾಮ್ರಾಜ್ಯದಲ್ಲಿ ನಾನು ಕಳೆದುಹೋಗಿದ್ದೆ. ಕಂಡಿರದ ಶ್ರೀರಂಗಪಟ್ಟಣದಲ್ಲಿ, ದರಿಯಾ ದೌಲತ್‍ನಲ್ಲಿ ನಾನೇ ನಾನಾಗಿ ವಿಹರಿಸುತ್ತಿದ್ದೆ. ಬಟ್ಟೆ ಒಗೆಯುವಾಗಲೂ ಬಳಿಯಲ್ಲೇ ಕಟ್ಟೆಯ ಮೇಲೆ ಆಸೀನಳಾಗಿದ್ದ ದೌಲತ್, ಬಾವಿಯಿಂದ ನೀರೆಳೆಯುವಾಗ ಬಾವಿಕಟ್ಟೆಯ ಮೇಲೇ ಒರಗಿದ್ದಳು. ನಾನೂ, ಸ್ವರ್ಣ ರಾಟೆಯ ಕೈಗಳನ್ನು ಹಿಡಿದು ಮಾತಾಡುತ್ತಾ ನೀರೆಳೆದು ಕೊಡವನ್ನು ಎಳೆದು ಕಟ್ಟೆಯ ಮೇಲಿಡುವಾಗ ಕೈ ತಾಗಿ ದೌಲತ್ ಬಾವಿಯೊಳಗೆ ಬಿದ್ದುಬಿಟ್ಟಳು! ನನಗೆ ನನ್ನ ಜೀವವೇ ಹೋದಂತಾಯ್ತು.

ನಮ್ಮ ಗಲಭೆ ಕೇಳಿ ಹೊರ ಬಂದ ಗಂಗಮ್ಮಜ್ಜಿ, “ಮತ್ತೆ ಎಷ್ಟು ಮಾತು, ಮಾತು? ನೀರೆಳೆಯುವಾಗಲೂ ಪುಸ್ತಕ ಕೈಯಲ್ಲೇ ಇರಬೇಕಾ?” ಎಂದು ಗದರಿದರು. ಮತ್ತೆ ಬುಟ್ಟಿಯೊಂದನ್ನಿತ್ತು, ಅದಕ್ಕೆ ಹಗ್ಗ ಕಟ್ಟಿ, ನೀರಲ್ಲಿ ಮುಳುಗುವಂತೆ ಬುಟ್ಟಿಯಲ್ಲಿ ಕಲ್ಲನ್ನಿರಿಸಿ, ಕೆಳಗಿಳಿಸಿ ತೇಲುತ್ತಿದ್ದ ದೌಲತ್‍ಳನ್ನೆತ್ತುವಂತೆ ಮಾಡಿದರು. ಸಾಕಷ್ಟು ಪ್ರಯತ್ನದ ಬಳಿಕ ಬುಟ್ಟಿಯಲ್ಲಿ ಆಸೀನಳಾಗಿ ದೌಲತ್ ಮೇಲೆ ಬಂದು ಕೈಗೆಟುಕಿದಾಗ ನನಗೆ ಹೋದ ಜೀವ ಬಂದಂತಾಯ್ತು.

ಗಂಗಮ್ಮಜ್ಜಿ ಊಟಕ್ಕೆಂದು ಮನೆಯೊಳಗೆ ಹೋದರು. ಒದ್ದೆಮುದ್ದೆಯಾಗಿದ್ದ ದೌಲತ್‍ಳನ್ನು ಬಿಸಿಲು ಬೀಳುತ್ತಿದ್ದ ಅಜ್ಜಿಯ ಮನೆ ಮೆಟ್ಟಲಲ್ಲಿ ಬಿಡಿಸಿ ಒಣಗಲೆಂದು ಇಟ್ಟು, ನಾವೂ ಊಟಕ್ಕೆಂದು ಮನೆಯೊಳಗೆ ಹೋದೆವು. ನಮ್ಮ ಊಟ ನಡೆದಿದ್ದಾಗ, ಹೊರಗೆ ಅಂಗಣದಿಂದ “ಮೇ …ಮೇ ….” ಎಂದು ಆಡಿನ ಆಲಾಪ ಕೇಳಿಸಿತು. ಮೆಟ್ಟಲ ಬಳಿಯೇ ವೆರಾಂಡಾದ ಜಾಲಂಧ್ರಕ್ಕೆ ಕಟ್ಟಿದ್ದ ಆಡು! ನಾನೂ, ಸ್ವರ್ಣ ಮುಖ, ಮುಖ ನೋಡಿಕೊಂಡೆವು. “ಆಡು ಪುಸ್ತಕ ಮುಟ್ಟಲಿಕ್ಕಿಲ್ಲವಲ್ಲಾ?” ಎಂದಳು, ಸ್ವರ್ಣ. ನಾನು ಒಂದೇ ಉಸಿರಿಗೆ ಎದ್ದು ಓಡಿದೆ. ನೋಡುವುದೇನು? ಜಳಕ ಮುಗಿಸಿ ಶುಚಿರ್ಭೂತಳಾಗಿದ್ದ ದೌಲತ್, ಅರ್ಧಾಂಶ ಆಡಿನ ಹೊಟ್ಟೆ ಸೇರಿ ಛಿದ್ರ ವಿಚ್ಛಿದ್ರವಾಗಿದ್ದಳು!

ನನ್ನ ಮನದಲ್ಲಿ ಎದ್ದ ವಿಪ್ಲವ, ಕಳವಳವನ್ನೇನು ವರ್ಣಿಸಲಿ? ಸಾಕಷ್ಟು ಹೊಟ್ಟೆ ತುಂಬಿಯೇ ಇರುತ್ತಿದ್ದ, ಸದಾ ಮೆಲುಕಾಡುತ್ತಿದ್ದ, ನಾನೂ ಕೈಯಾರೆ ಎಲೆಗಳನ್ನು ತಿನಿಸುತ್ತಿದ್ದ ಈ ಆಡು ಹೀಗೆ ನನ್ನ ಪರಮಪ್ರಿಯ ದೌಲತ್‍ಳನ್ನೂ ಭುಂಜಿಸಬೇಕೇ? ತಪ್ಪು ನಿನ್ನದೇ; ಬಾವಿಗೆ ಬೀಳಿಸಿದೆಯೇಕೆ? ಎಂದು ಒಳಮನಸು ಹೇಳುತ್ತಿದ್ದರೂ, ಪುಸ್ತಕದ ಇನ್ನೊಂದು ಪ್ರತಿ ಕೈ ಸೇರುವವರೆಗೆ ನನ್ನ ಮನ ಕೊರಗಿನ ಬೀಡಾಗಿತ್ತು.

ಐದು ವರ್ಷಗಳ ಹಿಂದೆ ಅನುವಾದ ಅಕಡೆಮಿ ಗೌರವ ಪ್ರಶಸ್ತಿ ಸ್ವೀಕರಿಸಲು ಮೈಸೂರಿಗೆ ಹೋದಾಗ ಶ್ರೀರಂಗಪಟ್ಟಣ, ದರಿಯಾದೌಲತ್‍ಗಳಲ್ಲಿ ಮಕ್ಕಳೊಡನೆ ಸುತ್ತಾಡುವಾಗ ನಾನು ಟೀಪೂ ಸ್ಮಾರಕದ ಸೊಬಗು, ಮಹತ್ತಿನಲ್ಲಿ ತಳೆದು ಹೋಗಿದ್ದೆ. ಪುನಃ ನನ್ನ ಪ್ರಿಯ ದೌಲತ್‍ಳನ್ನು ಆವಾಹಿಸಿ ಕೊಂಡಿದ್ದೆ!

‍ಲೇಖಕರು Avadhi

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಥ್ಯಾಂಕ್ಯೂ ಅವಧಿ, ನನ್ನ ದೌಲತ್ ಳ ಪಾಡನ್ನು ಪ್ರಕಟಿಸಿ ಓದುಗರ ಕೈಗಿತ್ತು ದಕ್ಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: