ಮುಂಬೈ ಆಕಾಶವಾಣಿಯಿಂದ ಕನ್ನಡ ಕಾರ್ಯಕ್ರಮಗಳು ‘ಔಟ್!’

ಶ್ರೀನಿವಾಸ ಜೋಕಟ್ಟೆ

ಮುಂಬೈ ಆಕಾಶವಾಣಿ ಸಂವಾದಿತ ವಾಹಿನಿ ‘ಎ’ ಯಲ್ಲಿ ಪ್ರತಿ ಶನಿವಾರ 12:30 ರಿಂದ 1.00 ಗಂಟೆಯ ತನಕ ವಾರಕ್ಕೆ ಅರ್ಧಗಂಟೆ ಸಮಯ  ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮವನ್ನೂ ನವೆಂಬರ್ 2020 ರಿಂದ  ನಿಲ್ಲಿಸಲಾಗಿದೆ. ಕೊರೊನಾ ಲಾಕ್ ಡೌನ್ ಘೋಷಿಸಿದ (ಏಪ್ರಿಲ್ ತಿಂಗಳಿನಿಂದ) ನಂತರ ಆಕಾಶವಾಣಿಯ ಸಂವಾದಿತ ವಾಹಿನಿಯ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿತ್ತು.

ಇದೇ ನವೆಂಬರ್ ಎರಡರಿಂದ ಮತ್ತೆ ಆರಂಭಿಸಲಾದರೂ ಅದರಲ್ಲಿ ಕನ್ನಡ ಮತ್ತು  ಸಿಂಧಿ ಭಾಷೆಯ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿರುವ ಸೂಚನೆ ಸಿಕ್ಕಿದೆ. ಆಕಾಶವಾಣಿಯ ಕನ್ನಡ ವಿಭಾಗದ ಕಾರ್ಯಕ್ರಮಗಳ ನಿರೂಪಕಿಯಾಗಿರುವ ಸುಶೀಲಾ ದೇವಾಡಿಗ ಅವರಿಗೆ ಆಕಾಶವಾಣಿಯ ಎಡಿಪಿ ಅವರಿಂದ ಈ ಮಾಹಿತಿ ದೊರೆತಿದೆ. 

ಮುಂಬೈ ಮತ್ತು ಕಲ್ಕತ್ತಾದಲ್ಲಿ 1927ರಲ್ಲಿ ಆಕಾಶವಾಣಿ ಆರಂಭವಾಗಿತ್ತು. 1957 ರಲ್ಲಿ ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಎಂದಿದ್ದದ್ದು ಆಕಾಶವಾಣಿ ಎಂದು ಕರೆಯಲಾಯಿತು. ಮುಂಬೈ ಆಕಾಶವಾಣಿ ಎಂದಕೂಡಲೇ ಮೊದಲಿಗೆ ನೆನಪಾಗುವುದು ಪ್ರಖ್ಯಾತ ಕವಿ ಬಿ.ಎ. ಸನದಿ ಅವರು. ಮುಂಬೈ  ಆಕಾಶವಾಣಿಗೆ  ಸನದಿಯವರು ಬಂದದ್ದು 1972 ರಲ್ಲಿ. ಅವರಿಗೆ ಸ್ವಲ್ಪಮಟ್ಟಿಗೆ ಮರಾಠಿ ಭಾಷೆಯ ಜ್ಞಾನ ಇತ್ತು. ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಆಕಾಶವಾಣಿಯಲ್ಲಿದ್ದರು.

“ಮುಂಬಯಿ ಆಕಾಶವಾಣಿ ನನ್ನ ಎರಡನೇ ಮನೆ” ಎಂದು  ಅವರು ಹೇಳಿದ್ದೂ ಇದೆ. ಆದರೆ ಬಿ.ಎ. ಸನದಿ ಅವರ ಮುಖ್ಯ ಕೆಲಸ ಮರಾಠಿ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದು ಆಗಿತ್ತು. ಅವರು ಆರಂಭಿಸಿದ  ಸ್ವಾಸ್ಥ್ಯ ಸಾಪ್ತಾಹಿಕ ಆರೋಗ್ಯ ಸೇವಾ ಮಾಲಿಕೆ, 1985ರಲ್ಲಿ ಕಹಾನಿ ಮನುಷ್ಯ ಜನ್ಮಾಚಿ…. ಅಂತಾರಾಷ್ಟ್ರೀಯ ಯುವಜನ ವರ್ಷದಲ್ಲಿ ಪ್ರಸಾರ ಮಾಡಿದ್ದರು.

1985ರ ನಂತರ ಪರಿವಾರ ಕಲ್ಯಾಣ ಪ್ರಸಾರ ಅವರ ಪ್ರಮುಖ ಕಾರ್ಯಕ್ರಮಗಳು ಆಗಿತ್ತು. ಸನದಿಯವರು ಆಕಾಶವಾಣಿಗೆ ಬಂದ ನಂತರ ಕನ್ನಡ ಕಾರ್ಯಕ್ರಮ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ ಎಸ್. ಆರ್ .ಕುಲಕರ್ಣಿ ನಿವೃತ್ತರಾದ ಬಳಿಕ ಆ ಕೆಲಸವನ್ನೂ ಸಹ  ನೋಡಿಕೊಳ್ಳುವುದು ಸನದಿಯವರ ಪಾಲಿಗೆ ಬಂತು. ಸನದಿ ಅವರು ಹೇಳಿದ ಹಾಗೆ ಹಸಿದವನಿಗೆ ಹಾಲುಣಿಸಿದಷ್ಟು ಸಂತೋಷವಾಯಿತು, ಕನ್ನಡ ಕಾರ್ಯಕ್ರಮ ನೋಡಿಕೊಳ್ಳುವುದಕ್ಕೆ ಎಂದಿದ್ದರು ಸಂದರ್ಶನದಲ್ಲಿ.

ಇದನ್ನು ಗಮನಿಸಿದರೆ 1972ರ ಮೊದಲು ಕೂಡ ಕನ್ನಡ ಕಾರ್ಯಕ್ರಮ ಮುಂಬಯಿ ಆಕಾಶವಾಣಿಯಲ್ಲಿ ಇತ್ತು ಹಾಗೂ ಎಸ್.ಆರ್. ಕುಲಕರ್ಣಿ ಅವರು ಕನ್ನಡ ವಿಭಾಗದ ಅಧಿಕಾರಿಯಾಗಿದ್ದರೆಂದು  ತಿಳಿದುಬರುತ್ತದೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಪುರಸ್ಕೃತ  ಸಾಹಿತಿ ಡಾ. ಸುನೀತಾ ಶೆಟ್ಟಿ ಅವರು ಹೇಳಿದ ಹಾಗೆ ಅರುವತ್ತರ ದಶಕದಲ್ಲಿ ಅವರು ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಕೇಳುತ್ತಿದ್ದರಂತೆ.  ಬಿ.ಎ. ಸನದಿ ಅವರಿಗೆ ಕೆಲಸದ ಒತ್ತಡ ಹೆಚ್ಚಾದಾಗ ಅವರ ನೆರವಿಗೆ ಬಂದವರು ಕನ್ನಡ ರಂಗಭೂಮಿಯಲ್ಲಿ ಹೆಸರು ಮಾಡಿದ ಕುಂದಾರೇಗೆ, ಅನಂತರ ಆಶಾ ನಾಥ ಅವರು .

ಈ ಮಾತನ್ನು  ಸನದಿಯವರೇ ಹೇಳಿದ್ದಿದೆ. ಮುಂಬೈ ಆಕಾಶವಾಣಿಯಲ್ಲಿ ಕನ್ನಡ ಯಕ್ಷಗಾನವನ್ನು ಸನದಿಯವರೇ ಬದುಕಿಸಿದವರು ಎಂಬ ಪ್ರಶಂಸೆಗೂ ಸನದಿಯವರು ಪಾತ್ರರಾಗಿದ್ದರು. ಆನಂತರ 2003ರ ತನಕ ಹೇಗೋ ಕುಂಟುತ್ತಾ ಮುಂಬೈ ಆಕಾಶವಾಣಿಯ ಕನ್ನಡ ವಿಭಾಗ  ಸಾಗುತ್ತಿತ್ತು.( ಜ್ಯೋತಿ ಭಟ್ ಮೊದಲಾದವರಿದ್ದರು). 2003ರಲ್ಲಿ ಸುಶೀಲಾ ದೇವಾಡಿಗರು ಬಂದ ನಂತರ ಕಳೆದ ಹದಿನೇಳು ವರ್ಷಗಳಿಂದ ಅವರೇ ಮುಂಬೈ ಆಕಾಶವಾಣಿಯ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಾಹಕಿಯಾಗಿದ್ದಾರೆ.

ಕಳೆದ 17 ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರಮುಖ  ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸಾರ ಮಾಡಿದ್ದಾರೆ. ಕನ್ನಡ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿರುವ ಸುಶೀಲಾ ದೇವಾಡಿಗ ಅವರು ಆಕಾಶವಾಣಿಯ ಎಡಿಪಿ ಅವರಲ್ಲಿ ನವೆಂಬರ್ ಎರಡರಂದು ವಿಚಾರಿಸಿದರೆ “ಕನ್ನಡ ಭಾಷೆಯ ಅಧಿಕಾರಿಗಳು ಇಲ್ಲದ್ದರಿಂದ ಮುಂಬೈ ಆಕಾಶವಾಣಿಯಲ್ಲಿ ಕನ್ನಡ ವಿಭಾಗವನ್ನು ಮುಚ್ಚಲಾಗಿದೆ” ಎಂಬ ಉತ್ತರ ಬಂದಿದೆ. 

ಕಳೆದ ಒಂದೂವರೆ ದಶಕದ ಇತಿಹಾಸ ನೋಡಿದರೆ ಕನ್ನಡ ವಿಭಾಗವನ್ನು ನೋಡಿಕೊಳ್ಳುತ್ತಿದ್ದವರು ಕನ್ನಡ ಬಾರದ ಹೊರಗಿನವರೇ  ಹೆಚ್ಚು. ಸುಜಾತ ಪರಾಂಜಪೆ, ರೆಜಿನಾ ಜೇಕಬ್, ಪ್ರಜ್ಞಾ ದೇವಸ್ಥಳೆ, ಮಾಲತಿ ಮಾನೆ, ಆನ್ ಫೆರ್ನಾಂಡಿಸ್, ವೀಣಾ ರಾಯ್ ಸಿಂಘಾನಿ ಕೇಳುಸ್ಕರ್, ಲಿಯಾಕತ್ ಆಲಿ, ಸಂಜಯ್….. ಹೀಗೆ ಕನ್ನಡೇತರರೇ ಕನ್ನಡ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಈಗ ಏಕಾಏಕಿ ಕನ್ನಡ ವಿಭಾಗ ನೋಡಿಕೊಳ್ಳಲು ಅಧಿಕಾರಿಗಳಿಲ್ಲ, ಹಾಗಾಗಿ ಮುಚ್ಚಲಾಗಿದೆ….  ಎಂಬ ಉತ್ತರ ಆಶ್ಚರ್ಯ ಹುಟ್ಟಿಸಿದೆ.

ಒಂದೊಮ್ಮೆ ಕನ್ನಡ ಕಾರ್ಯಕ್ರಮಗಳು ವಾರವಿಡೀ ಬರುತ್ತಿದ್ದದ್ದು, ಅನಂತರ ಮೂರು ದಿನಕ್ಕೆ ಇಳಿಯಿತು. ನಂತರ ಅದು ಒಂದು ದಿನಕ್ಕೆ ಆಯ್ತು. ಮುಂದೆ ಒಂದು ಗಂಟೆಗೆ  ಇಳಿಯಿತು. ಈಗ ವಾರಕ್ಕೆ ಕೇವಲ ಅರ್ಧ ಗಂಟೆ ಮಾತ್ರ! ಅದೂ ಈಗ ನವೆಂಬರ್ ನಿಂದ ಪೂರ್ತಿ ನಿಂತುಹೋಗಿದೆ. ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯಪ್ರಕಾಶ್ ಅವರು ಕನ್ನಡಿಗರು. ಆದರೂ ಹೀಗೇಕಾಯ್ತು! ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಗಮನಿಸುವಂತೆ ಬರಗೂರು ಸಹಿತ ಅನೇಕ ಗಣ್ಯರು ಈ ಕುರಿತು ಗಮನ ಹರಿಸಲು  ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಮುಂಬೈ ಆಕಾಶವಾಣಿಯಿಂದ ಕನ್ನಡ ವಿಭಾಗವನ್ನು ನಿಲ್ಲಿಸುವ ಬಗ್ಗೆ ದೆಹಲಿಗೆ ಇಲ್ಲಿಂದಲೇ ಪತ್ರ ಹೋಗದೆ ದೆಹಲಿಯಿಂದ ಒಮ್ಮೆಲೇ ಕನ್ನಡ ವಿಭಾಗ ಮುಚ್ಚುವ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತಿದೆ.  ಹಾಗಾಗಿ ಇಲ್ಲಿಂದ ಯಾರೋ ಅಧಿಕಾರಿಗಳು ಕನ್ನಡ ವಿಭಾಗವನ್ನು ನಿಲ್ಲಿಸಲು ಸೂಚನೆ ಕಳುಹಿಸಿರಬಹುದೇನೋ. ಆದರೆ ಪ್ರಸಾರ ಭಾರತಿ ಅಧ್ಯಕ್ಷ ಕನ್ನಡಿಗರೇ ಇದ್ದಾರೆ ಎಂದ ನಂತರ ಅವರಾದ್ರೂ ಸ್ವಲ್ಪ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು.

ಕನ್ನಡ ವಿಭಾಗ ಮುಚ್ಚುವ ಸೂಚನೆ ಈ ವರ್ಷದ ಆರಂಭದಲ್ಲಿ ಬಂದಿದ್ದರೂ ಮಾರ್ಚ್ ವರೆಗೆ  ಕಾರ್ಯಕ್ರಮಗಳು ಸೆಟ್ ಆಗಿದ್ದ ಕಾರಣ ಸರಿಯಾದ ಪ್ರಕಟಣೆ ಬಾರದೆ ಮುಂದುವರಿಯುವುದು ಬೇಡ ಎಂದು ನಿಶ್ಚಯಿಸಿದ್ದೆವು. ಈ ನಡುವೆ  ಕೊರೊನಾ ಬಂದು ಎಲ್ಲವನ್ನೂ ಮುಂದೂಡಲ್ಪಟ್ಟಿತು. ಆದರೆ ನವಂಬರ್ ನಲ್ಲಿ ಸಂವಾದಿತ ವಾಹಿನಿ ಆರಂಭವಾದರೂ ಅದರಲ್ಲಿ ಕನ್ನಡ- ಸಿಂಧಿ ನಾಪತ್ತೆಯಾಗಿದೆ. ಹಾಗೆ ನೋಡಿದರೆ ಮುಂಬಯಿ ಆಕಾಶವಾಣಿಯಲ್ಲಿ ಪ್ರತೀ ಶನಿವಾರ ಮಧ್ಯಾಹ್ನ ಕನ್ನಡ ಪ್ರಸಾರ ಅರ್ಧ ಗಂಟೆ ಇದೆ ಎನ್ನುವುದು ಕೂಡ ಅನೇಕರಿಗೆ ಮುಂಬೈಯಲ್ಲಿ ತಿಳಿದಿರಲಾರದು.

ಕಾರ್ಯಕ್ರಮ  ನೀಡಿದವರಿಗೂ  ಕೆಲವೊಮ್ಮೆ ಕೇಳಲು ಸಾಧ್ಯವಾಗುತ್ತಿರಲಿಲ್ಲ ಮಧ್ಯಾಹ್ನ 12:30ಕ್ಕೆ ಇರುವುದರಿಂದ. ಆದರೂ ಕನ್ನಡದ ಪ್ರೀತಿಯಿಂದ ಸಾಧ್ಯವಾದಷ್ಟು ಜನ ಕೇಳುತ್ತಿದ್ದರು. ನಾನು ಆಕಾಶವಾಣಿಯ ಕಾರ್ಯಕ್ರಮ ಕೇಳಲೆಂದೇ ಚಿಕ್ಕ ರೇಡಿಯೋವನ್ನು ಖರೀದಿಸಿದ್ದೂ ಇದೆ (ಈಗ ಮೊಬೈಲ್ ನಲ್ಲಿ ವ್ಯವಸ್ಥೆ ಇದೆ). 1988 ರಲ್ಲಿ ಡಾ. ಜಿ.ಡಿ. ಜೋಶಿಯವರ ಹನ್ನೆರಡು ಹರಟೆಗಳು ಕೃತಿಯನ್ನು ಮುಂಬೈ ಆಕಾಶವಾಣಿಗೆ ವಿಮರ್ಶಿಸಲು ಸನದಿಯವರು ನನ್ನನ್ನು ಕರೆದಿದ್ದರು. ಅದೇ ಆಕಾಶವಾಣಿಗೆ ನಾನು ಮೊದಲು ಕಾಲಿಟ್ಟದ್ದು. ಅಲ್ಲಿಂದೀಚೆಗೆ ಹತ್ತಾರು ಬಾರಿ ಆಕಾಶವಾಣಿಗೆ ಹೋಗಿ ಕಾರ್ಯಕ್ರಮಗಳನ್ನು ನೀಡಿದ್ದಿದೆ. ಸಂದರ್ಶನಗಳನ್ನು ಮಾಡಿದ್ದೇನೆ. 

ಮುಂಬೈ ಆಕಾಶವಾಣಿಯಲ್ಲಿ ಖ್ಯಾತ ನಾಲ್ವರ ಬದುಕು ಬರಹಗಳನ್ನು ಮುಂದಿಟ್ಟು ಸಂದರ್ಶನದ ಆರ್ಕೈವ್ ದಾಖಲೆ ಮಾಡಿ ಇಡಲಾಗಿದೆ. ಸದಾನಂದ ಸುವರ್ಣ, ಡಾ. ರಂಗನಾಥ ಭಾರದ್ವಾಜ್, ಡಾ. ವ್ಯಾಸರಾವ್ ನಿಂಜೂರ್,  ಡಾ. ಸುನೀತಾ ಎಂ.ಶೆಟ್ಟಿ ಈ ನಾಲ್ವರು. ಈ ಆರ್ಕೈವ್ ಸಂದರ್ಶನ  ದೆಹಲಿ ಕೇಂದ್ರದಲ್ಲಿ ಸುಮಾರು 50 ವರ್ಷಗಳ ಕಾಲ ಇಡುತ್ತಾರೆ. ದಿನವಿಡೀ ಜರಗಿದ  ಈ ಸಂದರ್ಶನದಲ್ಲಿ ನಾನು ಡಾ. ಸುನೀತಾ ಶೆಟ್ಟಿ ಅವರ  ಆರ್ಕೈವ್   (ದಿನವಿಡಿ ಸಂದರ್ಶನ) ಮಾಡಿದ್ದ ಸಂತೋಷ ನನ್ನದು..

ಇಂದು ಎಫ್ಎಂ ಮತ್ತು ಖಾಸಗಿ ಚಾನಲ್ ಗಳು ಸಾಕಷ್ಟು ಇರಬಹುದು. ಒಂದೊಮ್ಮೆ ಸಮಾಚಾರ ಮತ್ತು ಮನೋರಂಜನೆಗಾಗಿ ಏಕಮಾತ್ರ ಸಾಧನ ರೇಡಿಯೋ ಆಗಿತ್ತು. ಮುಂಬೈ ಪರಿಸರದಲ್ಲಿ 20 ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ವಾರಕ್ಕೆ ಅರ್ಧಗಂಟೆ ಕನ್ನಡ ಕಾರ್ಯಕ್ರಮ ಏನೇನೂ ಅಲ್ಲ. ಆದರೆ ಇದ್ದ ಅರ್ಧಗಂಟೆಯ ಕಾರ್ಯಕ್ರಮವನ್ನೂ ರದ್ದುಗೊಳಿಸಿರುವುದು ಕನ್ನಡಿಗರ ಅಸ್ಮಿತೆಗೆ ಬಿದ್ದ ಹೊಡೆತವಾಗಿದೆ. 

ಇದು ಲೇಖನಗಳಿಂದ ಅಂತಹ ಪರಿಹಾರ ಕಾಣುವುದೆಂಬ ಧೈರ್ಯ ಕಷ್ಟವೇನೋ. ಮುಂಬೈ ಆಕಾಶವಾಣಿಗೆ ಪತ್ರಗಳನ್ನು ಬರೆಯುವ ಮೂಲಕ, ಫೋನ್ ಮಾಡುವ ಮೂಲಕ ಕನ್ನಡಿಗರ ಪ್ರತಿಭಟನೆಯನ್ನು ಕಾಣಿಸಬೇಕಾಗಿದೆ. ಎಷ್ಟು ಕನ್ನಡಿಗ ಸಂಸದರಿದ್ದಾರೆಯೋ ಅವರೂ ಈ ಬಗ್ಗೆ ಧ್ವನಿ ಎತ್ತಬೇಕು. ಪ್ರಸಾರ ಭಾರತಿಯಲ್ಲಿ ಕನ್ನಡಿಗ ಮುಖ್ಯಸ್ಥರಿದ್ದೂ ಹೀಗೇಕಾಯಿತೋ ಅನ್ನುವುದು ಕೇಳಬೇಕಾಗಿದೆ. ಪತ್ರಗಳಿಂದ ಎಲ್ಲ ಪರಿಹಾರ ಕಾಣುವುದು  ಸುಲಭವಿಲ್ಲ, ರಾಜಕೀಯ ಒತ್ತಡವೂ ಬೇಕು ಎನ್ನುವುದೂ ನಮಗೆ ಗೊತ್ತಿರಬೇಕು.

ಕರ್ನಾಟಕ ಸರಕಾರವೂ ಇತ್ತ ಗಮನ ಹರಿಸಬೇಕಾಗಿದೆ. ಮುಂಬೈ ಆಕಾಶವಾಣಿ ಪ್ರಧಾನ ನಿರ್ದೇಶಕರಿಗೆ ಈ ಬಗ್ಗೆ ಸಂಘ ಸಂಸ್ಥೆಗಳು ಪತ್ರ ಬರೆದು ” ಸಂವಾದಿತ ವಾಹಿನಿ  ‘ಎ’ ಯಲ್ಲಿ ಕನ್ನಡ ನಿಲ್ಲಿಸಲಾಗಿರುವ ಸುದ್ದಿ ಕೇಳಿದ್ದೇವೆ. ಇದು ನಿಜವೇ? ನಿಜ  ಆಗಿದ್ದರೆ  ದಯವಿಟ್ಟು ನಿಲ್ಲಿಸಬೇಡಿ……” ಹೀಗೆ ಬರೆದು ಮುಂಬಯಿಯ ಸಶಕ್ತ  ಕನ್ನಡದ ಕುರಿತಂತೆ ಒಂದಿಷ್ಟು ವಿವರಗಳನ್ನು ಒಳಗೊಂಡು ಪತ್ರ ಬರೆಯಬಹುದೇನೋ. ಸಂಘ ಸಂಸ್ಥೆಗಳು ಈ ಬಗ್ಗೆ ವಿಚಾರ ವಿಮರ್ಶೆ ಮಾಡುವಂತಾಗಲಿ.

‍ಲೇಖಕರು Avadhi

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸುಮತಿ

    ಹಿಂದೆ ಸಂಸ್ಕೃತಿ ವಿನಿಮಯ, ಮತ್ತು ಭಾಷಾವಾರು ಪ್ರದೇಶ ಗಳ ಗಣನೆ , ಸಂಖ್ಯೆ ತಲುಪಿಸುವಿಕೆ ದೃಷ್ಟಿಯಿಂದ ಇವು ಅಗತ್ಯ ಇದ್ದವು.
    ಬದಲಾದ ಪರಿಸ್ಥಿತಿಯಲ್ಲಿ , ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ವನ್ನು ಮುಂಬೈ ನವರು ಕೇಳಬಹುದು. ವಿಶ್ವದ ಯಾವುದೇ ಮೂಲೆ ಇಂದ ಕನ್ನಡ ಕಾರ್ಯಕ್ರಮ ಮತ್ತು ಕನ್ನಡ ಆಕಾಶವಾಣಿ .. 13 ಕೇಂದ್ರಗಳೂ ಲಭ್ಯವಿದೆ.
    ಕೇಳುವವರು ಯಾರು?
    ಜಾಹೀರಾತು ನೀಡುವವರು ಯಾರು?
    ಈಗಾಗಲೇ ಆಕಾಶವಾಣಿ ,ದೂರದರ್ಶನ ತಮ್ಮ ಆದಾಯ ತಾವೇ ಗಳಿಸಿಕೊಳ್ಳಬೇಕು ಎಂಬುದೂ ಜಾರಿಗೆ ಬರುತ್ತಿದ್ದೆ ಎಂದು ಹೇಳಬಹುದಾದ ಹಿನ್ನೆಲೆಯಲ್ಲಿ..
    ಏನು ಮಾಡಲು ಸಾಧ್ಯ?
    ಕನ್ನಡ ಶಾಲೆ ಮುಚ್ಚುತ್ತದೆ, ಕನ್ನಡಿಗರು ಮಕ್ಕಳಿಗೆ ಕನ್ನಡ ಕೇಳಲು ಪ್ರೋತ್ಸಾಹ ಮಾಡುವುದಿಲ್ಲ.
    ರೇಡಿಯೋ ಕೇಳಿ ವಿಮರ್ಶೆ ಮಾಡಿ ಕಾರ್ಯಕ್ರಮದ ಬಗ್ಗೆ ನಾಲ್ಕು ಮಾತಾಡುವುದಿಲ್ಲ.
    ಯಾರೂ ಕೇಳುವುದಿಲ್ಲ ಎಂದಾದರೆ ಅದಕ್ಕೆ ವಿಭಾಗ ಏಕೆ .
    ಪ್ರಸಾರ ಏಕೆ ನೀವೇ ಹೇಳಿ.
    ರೇಡಿಯೋ ಕೇಳೋದೇ ಜನ ಬಿಟ್ಟುಬಿಟ್ಟಿದ್ದಾರೆ ಎಂಬ ಅರ್ಥದಲ್ಲಿ ಕೊಂಕು ಮಾತಾಡುವ, ರೇಗಿಸುವ ಜನ ಇದ್ದಾರೆ.
    ಅಂತಹದರಲ್ಲಿ ಮುಂಬೈನಲ್ಲಿ ಕನ್ನಡ ಕಾರ್ಯಕ್ರಮ ನೀವು ನಿಜವಾಗಿ ನಿತ್ಯ ಕೇಳಿ ಪ್ರತಿಕ್ರಿಯೆ ಕೊಡುತ್ತೀರಾ..
    ನಿಮಗೆ ನನ್ನ ನಮನ ಮತ್ತು ಪ್ರಾರ್ಥನೆ. ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳನ್ನೂ ನೀವು ಕೇಳಬಹುದು.
    ಕನ್ನಡದ ಕೆಲಸ ಮುಂದುವರೆಸೋಣ.

    ಪ್ರತಿಕ್ರಿಯೆ
  2. ಸುಮತಿ

    http://prasarbharati.gov.in/playersource.php?channel=103
    ಈ link ಮೂಲಕ ಕನ್ನಡದ ಯಾವ ಆಕಾಶವಾಣಿ ಕೇಂದ್ರವನ್ನೂ ಕೇಳಬಹುದು.
    News on air ಆಕಾಶವಾಣಿಯ ಅಧಿಕೃತ app.
    24 ಗಂಟೆ ಕನ್ನಡ ಆಕಾಶವಾಣಿ ಪ್ರಸಾರ ಇದೆ ಕೇಳಲು ಸಾಧ್ಯವಿದೆ. ಕೇಳಿ ಪ್ರತಿಕ್ರಿಯೆ ಹೇಳಿ.
    ಕರ್ನಾಟಕದ ಆಕಾಶವಾಣಿ ಉಳಿಸಿ.

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ಸುಮತಿ ಮೇಡಂ ನಾವೆಲ್ಲ ಆಕಾಶವಾಣಿ ಕೇಳಿಕೊಂಡು ಬೆಳೆದವರು. ಇವತ್ತಿಗೂ ಆಕಾಶವಾಣಿ ಕೇಳುವುದನ್ನು ಬಿಟ್ಟಿಲ್ಲ. ತರಗತಿಯಲ್ಲಿ ಮಕ್ಕಳಿಗೆ ಕೂಡ ಆಕಾಶವಾಣಿ ಕೇಳುವ ಬಗ್ಗೆ ಹೇಳುತ್ತೇನೆ. ಶ್ರೀನಿವಾಸ್ ಸರ್ ಸನದಿ ಸರ್ ನ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾಗಿದ್ದೆ ಅವರೊಂದು ಪುಸ್ತಕ ಕೂಡ ಕೊಟ್ಟಿದ್ದರು ನಗಾಗ. ನಾ. ಕಸ್ತೂರಿ ಯವರು ಆಕಾಶವಾಣಿ ಎಂದು ಬಾನುಲಿ ಕೇಂದ್ರವನ್ನು ಮೊದಲಿಗೆ ಕರೆದದ್ದು…. ಎಷ್ಟೆಲ್ಲ ನೆನಪಾದವು. ಒಳ್ಳೆಯ ಲೇಖನ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: