ಶಬ್ದಶಿಲ್ಪ

ಗೀತಯೋಗಿ

ಹಕ್ಕಿಯ ರೆಕ್ಕೆಯಂತಹ ಮರದ ರೆಂಬೆಗೆ
ತೂಗುವ ಬಾಗಿಲಿರದ ಗೂಡೊಂದು ಕಡೆ;
ಗಡಿಯಿಲ್ಲದ ಪ್ರಜ್ಞೆಗೆ ಗುಡಿಕಟ್ಟಿ
ಮುಚ್ಚಿದ ಬಾಗಿಲೊಂದು ಕಡೆ;
ನಡುವೆ ನಾನೊಬ್ಬ
ಒಮ್ಮೆ ಅತ್ತ …..
ಒಮ್ಮೆ ಇತ್ತ …..
ಹೊಯ್ದಾಡುತಿದ್ದೆ.
ನಿತ್ಯವೂ ಅಸಂಖ್ಯ ಇಬ್ಬದಿಯ
ಇಕ್ಕಟ್ಟಿನಲಿ
ತೆವಳುವ ನನಗೆ
ಸೋಜಿಗವಾಗಿತ್ತು, ಆ ಸಂಜೆ!
ಮಂಪರು ಕಣ್ಣಾಲಿದುಂಬಿ
ಮಾಲ್ಗಂಬ ಮೇಲೆ ಮುಕುರಿದ
ಹಣತೆಗಳ ಹೂಬೆಳಕಿಗೆಳೆಸುವಾಗ-
ಮನಸಿದ್ದೂ ಹಾರದ ಮರದಿಂದ
ಹಾರಿ ಬಂದ ಹಕ್ಕಿಯ ಹಚ್ಚಿಕೊಂಡೆ.

ಹಕ್ಕಿಯ ಸಮಕ್ಷಮದಲಿ-
ಹೊರಗೂ, ಒಳಗೂ ತಕ್ಕಡಿ ತೂಗಿ
ಹಗುರು ಹಗುರೆ, ಒಜ್ಜೆಯೂ ಹಗುರೇ!
ಅಗ್ಗದ ಮಾತು ಕಗ್ಗ,
ಅಡಿ ಹಾಕಿದರೂ ಹಣ್ಣಾಗದ
ತಾಳ ಮೇಳವಿರದ ಸಂವಹನ;
ಹಿತ್ತಲದ ಬಚ್ಚಲ ನೀರು ಹೆಪ್ಪುಗಟ್ಟಿ
ಉಚ್ಚೆಯಲಿ ಮೀನು ಹಿಡಿಯುವ ವಿದ್ಯೆಗೆ
ಮೂಕವಾದವು ಮಿಕ್ಕಮಾತು.
ಶಬ್ದ ಸೋಪಾನ
ಏರಿಬಂದ ನನಗೆ
ಶಬ್ದವೂ ಶೂಲವಾಯಿತು;
ಉತ್ತಬಾರದ ಕಡೆ
ಬಿತ್ತಿ ಬೆಳೆದ ತೆನೆ
ಕುಟ್ಟಿ ತೂರಿದರೆ – ಹೊಟ್ಟು, ಮುಕ್ಕೇ ಕಾಳು.
ಹಿಡಿ ಅನುಭವಕೆ ಹಿಗ್ಗಿ ಕೆಂಪಾದ
ಸಂಜೆ ಮುಗಿಲಿನ ಇಡಿ ಮುಖ ಕಪ್ಪಿಟ್ಟಿತು.

ಮಣ್ಣು ಗರ್ಭ ಕಟ್ಟಿದ ದಿನ
ಬೇರಿಗೂ ನೀರಿಗೂ ಮಾತಾಗಿದ್ದವಂತೆ:
“ಮರದ ತಲೆ ತುಂಬಾ ಚಿಗುರುವ ಚಿಂತನೆ
ಮರದ ಬಡ್ಡೆಗೇ ಬಿದ್ದು ಮಣ್ಣಾಗಬೇಕು;
ಗಂಗೆಗೆ ಉಡಿ ತುಂಬಿ
ರೆಂಬೆಗೆ ಎಡೆ ಹಿಡಿಯಬೇಕು ;
ಗೂಡನು ಹೆಣೆದ ‘ಪ್ರತಿಭೆ’ಯು
ಪಂಜರದೊಳಿದ್ದೂ ಸ್ವತಂತ್ರವಾಗಿರಬೇಕು;
ಗುಡಿಗೆ ಗರ್ಭವಿದ್ದೂ ಕಟ್ಟದ ಕಾರಣ
ನಡವಿದ್ದೂ ಬೀಜವಾಗದ ಕಾರಣ
ಮೂಲಕ್ಕೇನೆ ಹೊಸರೆಂಬೆ ಮೂಡಬೇಕು.”

ಮೂಡುವ ಹೊಸ ರೆಂಬೆ ಮೂಲದರ್ಥದ ವಾಕ್ಕು:
ನಾಮಾತೀತ ಧರ್ಮ-ರೂಪಾತೀತ ದೈವ
ನಾಮರೂಪಗಳಾದಾಗ-ಶೃತಿಯು ಗತಿಗೂಡಿ ಸ್ಮೃತಿ;
ಇಲ್ಲದಾ ರೂಪ ಇದೆಯೆಂಬೀ ಭ್ರಾಂತಿಗೆ ಆಕೃತಿ;
ಕರ್ತೃವಿನ ಕಾಲಕ್ರಿಯಾಯೋಜನೆಯ ವ್ಯಾಕರಣಕೆ
ಆಖ್ಯಾನ : ಬಿಂದುವಿನೊಳ-ಸಿಂಧುವಿನ ಹೊರ ಕರ್ಮ;
ಸೂರ್ಯ ತಾಯಿ ಕೋಳಿ ಚಂದ್ರತತ್ತಿಯ ಮೇಲೆ ಕಾವು
ಕುಂತಾಗ ಮೈತಳೆವ ಬೆಳದಿಂಗಳ ಮರಿಯು ಧರ್ಮ.

ಧರ್ಮಾನುಸಾರ ಕರ್ಮಫಲ ಉಂಡು
ಹಣ್ಣಾದ ಕಣ್ಣಿನ,
ಹೂವಾದ ಕೊಕ್ಕಿನ ಹಕ್ಕಿ
ಗೂಡು – ಗುಡಿಯ ನಡು ಕುಂತ
ನನ್ನ ಅಂಗ – ಲಿಂಗ- ಜಂಗಮ ಹೆಕ್ಕಿ,
ಅಂಗೈ ಇಷ್ಟಲಿಂಗವಾದಾಗ-
ಗುಡಿಯ ಗುಟ್ಟೊಡೆದು
ಸರಿದ ಗೊಡೆಯ ಕಲ್ಲು;
ದಿಕ್ಕೆಟ್ಟ ಶಿವದೇವರೆದುರಿನ ನಂದಿ;
ಮೆಲಕಾಡಿಸುವುದು ಮರೆತು ಶತಪಥಿಸುವ
ನಂದಿಯನೇರಿ ಪ್ರಜ್ಞೆ ಪಾರಾಗುತಲೇ-
ಶಬ್ದಶಿಲ್ಪಗಳಲಿ ಸೋಪಾನ ಮತ್ತೆ ಕಟ್ಟಿಕೊಂಡೆ.

‍ಲೇಖಕರು Avadhi

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: