‘ರೇಪ್ ಕ್ಯಾಪಿಟಲ್’ ಎಂಬ ಕಪ್ಪುಚುಕ್ಕೆ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

2012. ಡಿಸೆಂಬರ್ ತಿಂಗಳ ಮೂರನೇ ವಾರ.

ತುರ್ತು ಮೀಟಿಂಗ್ ನಿಮಿತ್ತ ದೆಹಲಿಯ ಸರಕಾರಿ ಕಾರ್ಯಾಲಯವೊಂದಕ್ಕೆ ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸಫ್ದರ್ ಜಂಗ್ ಆಸ್ಪತ್ರೆಯ ಮೂಲಕ ಹಾದು ಹೋಗುವಾಗ ಹಿಂದೆಂದೂ ಕಾಣದಷ್ಟಿನ ಸಂಖ್ಯೆಯಲ್ಲಿ ಮಾಧ್ಯಮದ ವ್ಯಾನ್ ಗಳು ಅಂದು ಸೇರಿಕೊಂಡಿದ್ದವು.

ದೇಶದ ರಾಜಕೀಯ ಶಕ್ತಿಕೇಂದ್ರವಾದ ದೆಹಲಿಯ ಆಯಕಟ್ಟಿನ ಕಾರ್ಯಾಲಯಗಳ ಅಂಗಳದಲ್ಲಿ ಹೀಗೆ ಟಿ.ವಿ ಚಾನೆಲ್ ಗಳ ವ್ಯಾನ್ ಗಳು ನಿಂತಿರುವುದು ಇಲ್ಲಿಯ ಸಾಮಾನ್ಯ ದೃಶ್ಯಗಳಲ್ಲೊಂದು.

ಪ್ರಮುಖ ರಾಷ್ಟ್ರೀಯ ಪಕ್ಷಗಳ ಕಾರ್ಯಾಲಯಗಳಲ್ಲಾಗುವ ತುರ್ತು ಸಭೆಗಳು, ವಿದೇಶಿ ಗಣ್ಯರ ಆಗಮನದ ಅವಧಿ, ಯಾವುದೋ ವಿ.ವಿ.ಐ.ಪಿ ಸಭೆ… ಇಂತಹ ಸಂದರ್ಭಗಳಲ್ಲಿ ಪಾರ್ಕ್ ಮಾಡಿರುವ ಟಿ.ವಿ. ಚಾನೆಲ್ ಗಳ ವಾಹನಗಳು, ಕ್ಯಾಮೆರಾ ಮುಂದೆ ವರದಿ ಮಾಡುತ್ತಿರುವ ರಿರ್ಪೋಟರುಗಳ ಗಡಿಬಿಡಿ, ಹಡಗಿನಂತಹ ಕಾರುಗಳಲ್ಲಿ ಜುಮ್ಮನೆ ಓಡಾಡುತ್ತಿರುವ ವ್ಯಕ್ತಿಗಳ ಆಗಮನ-ನಿಗರ್ಮನಗಳು ನಡೆಯುತ್ತಲಿರುತ್ತವೆ. ರಾಷ್ಟ್ರ ರಾಜಧಾನಿಗಿದು ಹೊಸತಲ್ಲ. 

ಅಂಥದ್ದರಲ್ಲಿ ಸಫ್ದರ್ ಜಂಗ್ ಆಸ್ಪತ್ರೆಯ ಹೊರಾಂಗಣದಲ್ಲಿ ಗುಂಪುಗಟ್ಟಿದ್ದ ಮಾಧ್ಯಮಗಳ ಭರಾಟೆಯು ನನಗಂದು ಅರ್ಥವಾಗಿರಲಿಲ್ಲ. ಏನಾಯಿತಪ್ಪಾ ಎಂದು ಎಂದಿನಂತೆ ಕ್ಯಾಬ್ ಚಾಲಕನನ್ನೇ ಮಾತಿಗೆಳೆದೆ. ಏನ್ಸಾರ್, ಟಿ.ವಿ ನೋಡಿಲ್ವಾ ಎಂದ ಆತ. ಟಿ.ವಿ. ಯನ್ನು ಮನೆಯೊಳಗೆ ಬಿಟ್ಟು ಹಲವು ವರ್ಷಗಳೇ ಆಯಿತಪ್ಪಾ ಎಂದೆ. ನಾನು ಶಿಲಾಯುಗದವನೇನೋ ಎಂಬಂತೆ ವಿಚಿತ್ರವಾಗಿ ನೋಡಿದ ಆತ ದಿನದ ಹಿಂದಷ್ಟೇ ಆದ ಬರ್ಬರ ಅತ್ಯಾಚಾರದ ಕತೆಯೊಂದನ್ನು ಹೇಳಿದ್ದ.

ನಾನು ಕೂತಲ್ಲೇ ಸಣ್ಣಗೆ ಕಂಪಿಸಿದೆ. ಇಂತಹ ಭಯಾನಕ ಕತೆಯೊಂದನ್ನು ಹಿಂದೆ ಕೇಳಿರಲಿಲ್ಲ ಅಂತಲ್ಲ. ಆದರೆ ಇಂತಹ ಅಮಾನುಷ ಕ್ರೌರ್ಯವೊಂದು ನಾವಿರುವ ಪ್ರದೇಶದಲ್ಲೇ ನಡೆಯಬಹುದು ಎಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಅದು ಇಡೀ ದೇಶವನ್ನೇ ನಡುಗಿಸಿದ ನಿರ್ಭಯಾ ಪ್ರಕರಣ. 

ದಿಲ್ಲಿಯಲ್ಲಿ ಡಿಸೆಂಬರ್ ಮತ್ತು ಜನವರಿ ಎಂದರೆ ರಾಕ್ಷಸಚಳಿಯ ಕಾಲ. ಮೇಲಿಂದ ಮೇಲೆ ಬಟ್ಟೆಗಳನ್ನು ತೊಟ್ಟು, ನೋಡಲು ಬೆರ್ಚಪ್ಪನಂತೆ ಕಂಡರೂ ಹೀಗಿರದೆ ವಿಧಿಯಿಲ್ಲವೆಂಬಂತಿನ ಪರಿಸ್ಥಿತಿ. ಅಷ್ಟಿದ್ದೂ ದಪ್ಪಗಿನ ಕಂಬಳಿ ಹೊದ್ದು ಮುದುಡಿ ಕೂತರಷ್ಟೇ ನಮಗೆ ಬೆಚ್ಚನೆಯ ಅನುಭವ.

ಅಂಥದ್ದರಲ್ಲಿ ಓರ್ವ ತರುಣಿ ಮತ್ತು ಆಕೆಯ ಮಿತ್ರನಿಗೆ ಚಿತ್ರಹಿಂಸೆ ನೀಡಿ, ಸಾವಿನ ಕದ ತಟ್ಟುತ್ತಾ ಒದ್ದಾಡುತ್ತಿದ್ದ ಅವರಿಬ್ಬರನ್ನು ರಾತ್ರಿಯ ರಾಕ್ಷಸಚಳಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಕಸದಂತೆ ಎಸೆದರೆಂಬ ಸುದ್ದಿಯನ್ನು ಕೇಳಿ ನನಗೆ ಆಘಾತವಾಗಿತ್ತು. ದೆಹಲಿಯ ಮೈಕೊರೆಯುವ ಚಳಿಯನ್ನು ಅನುಭವಿಸಿ ಗೊತ್ತಿರುವವರಿಗೆ ಇಂತಹ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುವುದೂ ಭಯಾನಕ.

ಬರ್ಬರತೆಯ ಸಾಕ್ಷಾತ್ ಪ್ರತಿರೂಪವೇನೋ ಎಂಬಂತಿದ್ದ ಈ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ಅಷ್ಟೂ ದಶಕಗಳ ಕಾಲ ಎದೆಯಾಳದಲ್ಲಿ ಹುದುಗಿದ್ದ ನೋವು ಈಗ ಏಕಾಏಕಿ ಸ್ಫೋಟಿಸಿತೋ ಎಂಬಂತೆ ದೇಶದಾದ್ಯಂತ ರೋಷದ ಮಾತುಗಳು ಕೇಳಿಬಂದಿದ್ದವು. ಇನ್ನು   ಬೀದಿಗಿಳಿದಿದ್ದ ಜೆ.ಎನ್.ಯು ವಿದ್ಯಾರ್ಥಿಗಳ ಪ್ರತಿಭಟನೆಗಂತೂ ಖುದ್ದು ದಿಲ್ಲಿಯ ಶಕ್ತಿಕೇಂದ್ರವೇ ಗಡಗಡ ನಡುಗಿಬಿಟ್ಟಿತ್ತು.

ದಿಲ್ಲಿಯ ಇಂಡಿಯಾ ಗೇಟ್ ಬಳಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯು ಸುತ್ತಮುತ್ತಲ ಪ್ರದೇಶದ ಜನಸಾಮಾನ್ಯರನ್ನು ಯಾವ ರೀತಿಯಲ್ಲಿ ಬಡಿದೆಬ್ಬಿಸಿತ್ತೆಂದರೆ ಕ್ರಮೇಣ ಗೃಹಿಣಿಯರು, ಉದ್ಯೋಗಿಗಳು, ವಿದ್ಯಾರ್ಥಿಗಳೆಂಬ ಭೇದವಿಲ್ಲದೆ ಸಾವಿರಾರು ಮಂದಿಯನ್ನು ಅಲ್ಲಿ ಕರೆತಂದಿತ್ತು.

ಇತ್ತ ಹಿಗ್ಗುತ್ತಲೇ ಸಾಗಿದ ಪ್ರತಿಭಟನಾಕಾರರ ಸಂಖ್ಯೆಯನ್ನು ನಿಭಾಯಿಸುವುದು ಕಷ್ಟವೆಂದು ಮನವರಿಕೆಯಾಗಿ   ನಿಯೋಜಿಸಲಾಗಿದ್ದ ಪೋಲೀಸ್ ಪಡೆಯು ಪ್ರತಿರೋಧಕ್ಕಿಳಿದಾಗ, ಶಾಂತಿಯುತ ಮಾರ್ಗದಲ್ಲೇ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸೆಯ ರೂಪವನ್ನು ತಾಳಿತ್ತು. ಡಿಸೆಂಬರ್ ಮಾಸದ ತೀವ್ರ ಚಳಿಯಿಂದ ನಡುಗುತ್ತಿದ್ದ ದಿಲ್ಲಿಯಲ್ಲಿ ಆಗ ಜನಾಕ್ರೋಶದ ಧಗಧಗ.

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹಿಂದೆ ನಡೆದಿಲ್ಲವೆಂದಲ್ಲ. ಆದರೆ ನಿರ್ಭಯಾ ಪ್ರಕರಣವು ಈ ಮಟ್ಟಿಗೆ ಸುದ್ದಿಯಾದ ಹಿಂದೆ ಕಾರಣಗಳೂ ಇವೆ. ಮೊದಲ ಕಾರಣವೆಂದರೆ ಈ ಬರ್ಬರ ಅತ್ಯಾಚಾರವು ರಾಷ್ಟ್ರ ರಾಜಧಾನಿಯಲ್ಲಿ ನಡೆದಿತ್ತು. ಎರಡನೆಯ ಅಂಶವೆಂದರೆ ಈ ಘಟನೆಯು ರಾತ್ರಿ ಒಂಭತ್ತರಿಂದ ಒಂಭತ್ತೂವರೆಯ ನಡುವಿನ ಬಸ್ ಪ್ರಯಾಣವೊಂದರಲ್ಲಿ ನಡೆದಿತ್ತು ಎಂಬುದು. 

ಹಾಗೆ ನೋಡಿದರೆ ಮಹಾನಗರಗಳಲ್ಲಿ ಇದು ಅಪಾಯಕಾರಿಯಾದ ಸಮಯವೇನಲ್ಲ. ರಾತ್ರಿ ಒಂಭತ್ತರ ಆಸುಪಾಸೆಂದರೆ ಎಲ್ಲರೂ ಸಾಮಾನ್ಯವಾಗಿ ಓಡಾಡುವ ಸಮಯ. ದೈನಂದಿನ ಜಂಜಾಟಗಳನ್ನು ಮುಗಿಸಿ ಮಾರ್ಕೆಟ್ಟಿನಲ್ಲಿ ಪಾನಿಪುರಿ ಮೆಲ್ಲುವವರು, ಸಂಜೆಯ ಸಿನೆಮಾ ಶೋ ನೋಡಲು ಹೋಗುವವರು, ದೂರದಲ್ಲಿರುವ ಆಫೀಸು ಮುಗಿಸಿ ಡ್ರೈವ್ ಮಾಡುತ್ತಲೋ, ಮೆಟ್ರೋದಲ್ಲೋ ಮನೆಗೆ ಮರಳುತ್ತಿರುವವರು…

ಹೀಗೆ ಎಲ್ಲರೂ ನಿತ್ಯದ ದಿನಚರಿಯೆಂಬಂತೆ ಓಡಾಡುವ, ಎಲ್ಲೆಲ್ಲೂ ಜನಜಂಗುಳಿಯು ಕಾಣಸಿಗುವ ಸಮಯ. ಹೀಗಿರುವಾಗ ನಿರ್ಭಯಾ ಪ್ರಕರಣವು ಶಹರದ ನಾಗರಿಕರಲ್ಲಿ ಅವ್ಯಕ್ತ ಭಯವನ್ನು ಹುಟ್ಟಿಸಿದ್ದು ಸುಳ್ಳಲ್ಲ. 

ಮುಂದೆ 2015 ರ ಹೊತ್ತಿಗೆ ನಿರ್ಭಯಾ ಪ್ರಕರಣದ ಬಗ್ಗೆ ‘ಇಂಡಿಯಾಸ್ ಡಾಟರ್’ (ಭಾರತದ ಮಗಳು) ಎಂಬ ಸಾಕ್ಷ್ಯಚಿತ್ರವು ಬಿಡುಗಡೆಯಾಗುತ್ತಿದೆ ಎಂದಾಗ ತೆರೆಮರೆಗೆ ಸರಿದಿದ್ದ ಪ್ರಕರಣವು ಮತ್ತೆ ಜೀವತಾಳಿತ್ತು. ಬಿ.ಬಿ.ಸಿ ಟಿವಿ ಸೀರೀಸ್ ನ ಭಾಗವಾಗಿದ್ದ ಈ ಡಾಕ್ಯುಮೆಂಟರಿಯನ್ನು ಇಸ್ರೇಲ್ ಮೂಲದ ಖ್ಯಾತ ಚಿತ್ರ ನಿರ್ದೇಶಕಿಯಾಗಿದ್ದ ಲೆಸ್ಲೀ ಉಡ್ವಿನ್ ನಿರ್ದೇಶಿಸಿದ್ದರು.

ಈ ನಡುವೆ ನ್ಯಾಯಾಲಯದ ತಡೆಯಾಜ್ಞೆ ಮತ್ತು ಇತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಸಾಕ್ಷ್ಯಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ನಿಷೇಧವನ್ನು ಹೇರಲಾಗಿತ್ತು. ದೇಶದ ಗೌರವಕ್ಕೆ ಚ್ಯುತಿ ತರುವ ಹಲವು ಅಂಶಗಳು ಈ ಡಾಕ್ಯುಮೆಂಟರಿಯಲ್ಲಿವೆ ಎಂಬ ವಾದಗಳು ಈ ಅವಧಿಯಲ್ಲಿ ಹಲವು ಮೂಲಗಳಿಂದ ಕೇಳಿಬಂದಿದ್ದವು. 

2016 ರಲ್ಲಿ ನಾನು ಆಫ್ರಿಕಾದ ರಿಪಬ್ಲಿಕ್ ಆಫ್ ಅಂಗೋಲಾವನ್ನು ತಲುಪಿದ್ದೆ. ಅಲ್ಲಿ ‘ಇಂಡಿಯಾಸ್ ಡಾಟರ್’ ಡಾಕ್ಯುಮೆಂಟರಿಯು ನನಗೆ ಆಕಸ್ಮಿಕವಾಗಿ ಎದುರಾಗಿತ್ತು. ಡಾಕ್ಯುಮೆಂಟರಿಯು ಅಧಿಕೃತವಾಗಿ ಬ್ಯಾನ್ ಬೇರೆ ಆಗಿದ್ದರಿಂದ ಇದರಲ್ಲಿ ಅಂಥದ್ದೇನಿದೆಯೆಂಬ ಕುತೂಹಲವೂ ಇದ್ದಿದ್ದು ಸಹಜ.

ಒಟ್ಟಿನಲ್ಲಿ ಉಡ್ವಿನ್ ನಿರ್ದೇಶನದ ಒಂದು ತಾಸಿನ ಡಾಕ್ಯುಮೆಂಟರಿಯನ್ನು ವೀಕ್ಷಿಸಿದ ನಂತರ ಅದ್ಯಾವುದೋ ಬಗೆಯ ನಿರ್ಲಿಪ್ತತೆಯು ಆವರಿಸಿಕೊಂಡು ಮನದಲ್ಲಿ ಗಾಢವಾದ ವಿಷಾದವು ಮಡುಗಟ್ಟಿದ್ದು ಸತ್ಯ.

ಎಂಥಾ ಕಲ್ಲುಹೃದಯವರಿಗೂ ಮೈನಡುಗಿಸಬಲ್ಲ ಆ ರಾತ್ರಿ ನಡೆದಿದ್ದ ಚಿತ್ರಹಿಂಸೆ, ಕ್ಯಾಮೆರಾ ಎದುರು ಮಾತನಾಡುತ್ತಿದ್ದ ಅಪರಾಧಿಯೊಬ್ಬನ ಉಡಾಫೆತನ, ಅಪರಾಧಿಗಳ ಪರ ವಾದಿಸುತ್ತಿದ್ದ ವಕೀಲರ ಮಾತುಗಳಲ್ಲಿ ಎದ್ದು ಕಾಣುತ್ತಿದ್ದ ಮಹಿಳೆಯರ ಬಗೆಗಿನ ಕೀಳು ಮನೋಭಾವ… ಹೀಗೆ ಹತ್ತಾರು ಅಂಶಗಳು ಈ ದೇಶವು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ವೀಕ್ಷಕರಲ್ಲಿ ಕೇಳುತ್ತಿತ್ತು. ಕನ್ನಡಿಯೊಂದನ್ನು ನಮ್ಮ ಮುಖಕ್ಕೆ ಹಿಡಿದು ‘ಇದೋ ನೋಡಿ ನೀವಿರುವ ಸಮಾಜ.

ಒಂದು ವ್ಯವಸ್ಥೆಯಾಗಿ, ಓರ್ವ ನಾಗರಿಕನಾಗಿ ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಒಂದೇ ಒಂದು ಜವಾಬ್ದಾರಿಯುತ ಹೆಜ್ಜೆಯನ್ನಾದರೂ ನೀವು ಇಟ್ಟಿದ್ದೀರಾ?’ ಎಂದು ಕಪಾಳಕ್ಕೆ ಬಾರಿಸುವಂತೆ ಆ ಕಾರ್ಯಕ್ರಮವು ಕೇಳುತ್ತಿತ್ತು. ಕತ್ತಿನ ಪಟ್ಟಿಯನ್ನು ಹಿಡಿದು ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದಾಗ ಅದಕ್ಕೆ ಮುಖಭಂಗವಾಗುವುದು ಸಹಜ. ಹೀಗಾಗಿ ಈ ಸಾಕ್ಷ್ಯಚಿತ್ರವು ಬ್ಯಾನ್ ಆಗಿದ್ದು ಅಚ್ಚರಿಯ ಮಾತಾಗಿರಲಿಲ್ಲ.

ನಿಸ್ಸಂದೇಹವಾಗಿ ಈ ಡಾಕ್ಯುಮೆಂಟರಿಯ ಕೆಲ ಭಾಗಗಳು ಬೆಚ್ಚಿಬೀಳಿಸುವಂತಿದ್ದವು. ಉದಾಹರಣೆಗೆ ”ಯಾಕೆ ಹೀಗೆ ಮಾಡಿದೆ?” ಎಂದು ಅಪರಾಧಿಗಳಲ್ಲೊಬ್ಬನಾದ ಮುಕೇಶನನ್ನು ಕೇಳಿದಾಗ, ”ಆ ಹುಡುಗಿ ನಮ್ಮ ವಿರುದ್ಧ ತಿರುಗಿಬಿದ್ದಳು. ಅವಳಿಗೆ ಪಾಠ ಕಳಿಸಬೇಕೆಂದೇ ಹೀಗೆ ಮಾಡಿದೆವು. ಉಳಿದ ಹೆಣ್ಣುಮಕ್ಕಳಿಗೂ ಈ ಘಟನೆಯು ಪಾಠವಾಗಬೇಕು” ಎನ್ನುತ್ತಾನೆ ಆತ.

ಮಾತುಮಾತಿಗೂ ಉಗುಳು ನುಂಗುವ ಮುಕೇಶನ ಕಣ್ಣಿನಲ್ಲಿ ಸಾವಿನ ನಿರೀಕ್ಷೆಯು ತಾಂಡವವಾಡುತ್ತಿರುವುದು ಯಾರಿಗಾದರೂ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಕ್ಯಾಮೆರಾ ಫ್ರೇಮಿನಲ್ಲಿ ಅಷ್ಟೇ ಸ್ಪಷ್ಟವಾಗಿ ಕಾಣುವುದು ಅವನಲ್ಲಿರುವ ಕೆಲಸಕ್ಕೆ ಬಾರದ ಭಂಡಧೈರ್ಯ ಮತ್ತು ಕೊಂಚವೂ ಇಲ್ಲದ ಪಶ್ಚಾತ್ತಾಪ. ದುರುಳ ಅತ್ಯಾಚಾರಿಯೊಬ್ಬ ನಮ್ಮ ಅಕ್ಕಪಕ್ಕದಲ್ಲೇ ಇರಬಹುದು ಎಂಬ ಮಾತಿಗೆ   ಸಾಕ್ಷಿಯೆಂಬಂತಿದ್ದ ಈತ.

ಈ ಸಾಕ್ಷ್ಯಚಿತ್ರದಲ್ಲಿ ಕಾಣಸಿಗುವ ಮತ್ತೊಂದು ಆಘಾತಕಾರಿ ಅಂಶವೆಂದರೆ ಅಪರಾಧಿಗಳ ಪರ ವಾದಿಸುತ್ತಿದ್ದ ವಕೀಲರು ನೀಡುವ ಹೇಳಿಕೆಗಳು. ಭಾರತದ ಶ್ರೀಮಂತ ಸಂಸ್ಕøತಿಯನ್ನು ಕೊಂಡಾಡುತ್ತಲೇ ಮಾತನ್ನಾರಂಭಿಸುವ ವಕೀಲನೊಬ್ಬ ಇಲ್ಲಿ ದಾಖಲಿಸಲೂ ಆಗದಂತಹ ಮಾತುಗಳನ್ನು (ಮಹಿಳೆಯರ ಬಗ್ಗೆ) ನಿರ್ಭಿಡೆಯಿಂದ ಹೇಳುತ್ತಾನೆ. ಅಕ್ಷರಜ್ಞಾನವಿಲ್ಲದ, ಬದುಕನ್ನು ಅರಿಯದ ಅಪರಾಧಿಗಳು ಅಸಂಬದ್ಧ ಮಾತನಾಡುವುದು ಒಂದೆಡೆ.

ಆದರೆ ಸಮಾಜದ ಉನ್ನತ ಹುದ್ದೆಯಲ್ಲಿರುವ, ಅಕ್ಷರಸ್ಥ ಮಂದಿಯ ಮಾತುಗಳನ್ನು ಕೇಳಿದರೆ ಯಾರಿಗಾದರೂ ಮಾನವಜನಾಂಗದ ಬಗ್ಗೆ ಉಳಿದಿರುವ ಒಂದಷ್ಟು ಭರವಸೆಯ ಬೆಳಕೂ ನಂದಿಹೋಗುವುದು ಸಹಜ. ಇವರು ಸುಭಗರ ಮುಖವಾಡವನ್ನು ಹಾಕಿಕೊಂಡು, ನೀಚತನದ ವಿಷಸಾಗರವನ್ನೇ ತನ್ನೊಳಗೆ ಇಟ್ಟುಕೊಂಡಿರುವವರು.

ಇಪ್ಪತ್ತೊಂದನೇ ಶತಮಾನದಲ್ಲೂ ಮಹಿಳೆಯರನ್ನು ಮೂರನೇ ದರ್ಜೆಯ ನಾಗರಿಕರಂತೆ, ಕೇವಲ ಒಂದು ಭೋಗದ ವಸ್ತುವಂತೆ ಕಾಣುವ ಮತ್ತು ನಡೆಸಿಕೊಳ್ಳುವ ಇಂತಹ ವರ್ಗವು ಭಾರತೀಯ ಸಮಾಜಕ್ಕೊಂದು ಶಾಪವೇ ಸರಿ.

ಇನ್ನು ಈ ಬಗೆಯ ಪ್ರಕರಣಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಮನೋವೈದ್ಯರು ಸಾಮಾನ್ಯವಾಗಿ ಹೇಳುವಂತೆ ಇಂತಹ ಅಪರಾಧಿಗಳು ಲೆಕ್ಕವಿಲ್ಲದಷ್ಟು ಅತ್ಯಾಚಾರಗಳನ್ನು ಮಾಡುತ್ತಲೇ ಬಂದಿರುತ್ತಾರೆ. ಆದರೆ ಅವುಗಳಲ್ಲಿ ಬೆರಳೆಣಿಕೆಯಷ್ಟೇ ಬೆಳಕಿಗೆ ಬಂದು, ಇವರಿಗೆ ತಕ್ಕಮಟ್ಟಿನ ಶಿಕ್ಷೆಯಾಗಿರುತ್ತದೆ. ಹೀಗಾಗಿ ‘ಸಿಕ್ಕಿಬೀಳುವವರೆಗೂ ತಾನು ಕಳ್ಳನಲ್ಲ’ ಎಂಬ ಹುಂಬತನದಲ್ಲಿ ಅಪರಾಧಿಯೊಬ್ಬ ತನಗೆ ಮನಬಂದಂತೆ, ಸುತ್ತಮುತ್ತಲಿರುವ ಹೆಣ್ಣುಮಕ್ಕಳನ್ನು ತನ್ನ ವಿಕೃತಿಗಾಗಿ ಬಳಸಿಕೊಳ್ಳುತ್ತಾ ಸಾಗುತ್ತಾನೆ.

ಅಸಲಿಗೆ ಮನೆಗಳಲ್ಲಿ ಕುಟುಂಬದ ಸದಸ್ಯರು-ಸಂಬಂಧಿಕರಿಂದಾಗುವ ಅತ್ಯಾಚಾರಗಳಿಂದ ಹಿಡಿದು, ಕ್ರಿಮಿನಲ್ ಹಿನ್ನೆಲೆಯುಳ್ಳ ಅಪರಾಧಿಗಳಿಂದಾಗುವ ಅತ್ಯಾಚಾರಗಳವರೆಗೂ ಬಹಳಷ್ಟು ಪ್ರಕರಣಗಳು ಅಧಿಕೃತವಾಗಿ ವರದಿಯಾಗುವುದೇ ಇಲ್ಲ. ಅತ್ಯಾಚಾರಕ್ಕೊಳಗಾದ ಹೆಣ್ಣನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಸಾಮಾನ್ಯ ಲೋಕರೂಢಿಯು ನಿಲ್ಲುವವರೆಗೂ ಇದು ಸುಧಾರಿಸುವುದು ಕಷ್ಟ.

ಈ ಹಿನ್ನೆಲೆಯಲ್ಲೇ ನನಗೆ ನೆನಪಾಗುವ ಮತ್ತು ತೀವ್ರವಾಗಿ ಮತ್ತೊಂದು ಪ್ರಕರಣವೆಂದರೆ ಬಂತ್ ಸಿಂಗ್ ನದ್ದು. ಪಂಜಾಬಿನ ಝಬರ್ ಹಳ್ಳಿಯ ಮೂಲದವನಾದ ಬಂತ್ ಓರ್ವ ಕೂಲಿ ಕಾರ್ಮಿಕ ಮತ್ತು ಸಾಮಾಜಿಕ ಕಾರ್ಯಕರ್ತ. ಧೈರ್ಯವು ಅವನ ನರನಾಡಿಯಲ್ಲಿದ್ದರೆ, ಕ್ರಾಂತಿಯ ಹಾಡುಗಳು ಆತನ ಉಸಿರು. ಇಂತಿಪ್ಪ ಬಂತನ ಮಗಳನ್ನು ಉಚ್ಚ ಜಾತಿಯ ಕೆಲ ಸಿರಿವಂತ ಯುವಕರು ಸೇರಿ ಗ್ಯಾಂಗ್ ರೇಪ್ ಮಾಡುತ್ತಾರೆ.

ಬಂತ್ ದಲಿತನಾಗಿದ್ದರಿಂದ ಮತ್ತು ಅತ್ಯಾಚಾರ ನಡೆಸಿದ್ದ ದುರುಳರು ಮೇಲ್ವರ್ಗದ ಜಾತಿಯವರಾದ್ದರಿಂದ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಪ್ರಯತ್ನಗಳಾಗುತ್ತವೆ. ಆದರೆ ಛಲಬಿಡದ ಬಂತ್ ಎಲ್ಲರನ್ನೂ ನ್ಯಾಯಾಲಯದ ಕಟಕಟೆಗೆ ಎಳೆದು ತರುತ್ತಾನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ.

ದುರಾದೃಷ್ಟವಶಾತ್ ಕತೆಯು ಇಲ್ಲಿ ಸುಖಾಂತ್ಯವಾಗುವುದಿಲ್ಲ. ಹಳ್ಳಿಯಲ್ಲಿ ಮೇಲ್ವರ್ಗದ ವಿರೋಧವನ್ನು ಕಟ್ಟಿಕೊಂಡಿದ್ದ ಬಂತ್ ಸಿಂಗ್ ಕುಟುಂಬದ ಬದುಕು ಶಾಶ್ವತವಾಗಿ ಭಯದ ನೆರಳಿನಲ್ಲೇ ನರಳುವಂತಾಗುತ್ತದೆ. ಆದರೆ ಇತ್ತ ಭಯಕ್ಕೂ ಬಂತ್ ಸಿಂಗ್ ನಿಗೂ ದೂರದ ಸಂಬಂಧ. ಪ್ರಾಯಶಃ ಅಲ್ಲಿದ್ದ ಮೇಲ್ಜಾತಿಯ ಜಾಟ್ ವರ್ಗದ ಪುಂಡರನ್ನು ಕೆರಳಿಸುತ್ತಿದ್ದಿದ್ದೇ ಇದು. ‘ಎಲಾ ಇವನಾ… ಕೆಳಜಾತಿಯವನಾದರೂ ಕ್ರಾಂತಿಯ ಹಾಡು ಹಾಡುತ್ತಾ ಎದೆಯುಬ್ಬಿಸಿ ನಡೆಯುತ್ತಾನಲ್ವಾ’ ಎಂಬ ಅಸಮಾಧಾನ.

ಇಂತಹ ಶೀತಲ ಸಮರದ ಮಧ್ಯದಲ್ಲೇ ಒಂದು ದಿನ ಬಂತ್ ಸಿಂಗ್ ನ ಮೇಲೆ ಭೀಕರ ದಾಳಿಯಾಗುತ್ತದೆ. ದಾಳಿ ನಡೆಸಿದವರು ಇದೇ ಹಳ್ಳಿಯ ಜಾಟ್ ವರ್ಗದ ಪುಂಡರು. ಹಳೆಯ ದ್ವೇಷವೇ ಕಾರಣ. ‘ದಲಿತ ಹೆಣ್ಣೊಬ್ಬಳ ಮೇಲೆ ಅತ್ಯಾಚಾರ ನಡೆಸುವುದು ನಮ್ಮ ಮೇಲ್ಜಾತಿಯು ನಮಗೆ ನೀಡಿರುವ ಹಕ್ಕು, ಇದನ್ನೆಲ್ಲಾ ಕೇಳಲು ನೀನ್ಯಾವನಯ್ಯಾ’ ಎಂಬ ದುರಹಂಕಾರ.

ಆ ಕರಾಳ ದಿನದಂದು ಬಂತ್ ನ ಎರಡೂ ಕೈಗಳನ್ನು ನಿರ್ದಯವಾಗಿ ಕತ್ತರಿಸಲಾಯಿತು. ಆತನ ಒಂದು ಕಾಲನ್ನೂ ಕೊಚ್ಚಿಹಾಕಲಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಂತ್ ನನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗೋಣವೆಂದರೆ ಕೊಚ್ಚಿಹಾಕಿದ್ದ ಅವನ ಕೈಕಾಲುಗಳು ದೇಹದಿಂದ ಇನ್ನೇನು ಬೇರ್ಪಡಲಿದ್ದ ತೆಳು ದಾರದಂತೆ ನೇತಾಡುತ್ತಿದ್ದವಂತೆ.

ಬಟ್ಟೆಯೊಂದರಲ್ಲಿ ನಾಲ್ಕೈದು ಕಟ್ಟಿಗೆಗಳನ್ನು ಹಾಕಿ ಹೊತ್ತೊಯ್ಯುವಂತೆ ಬಂತ್ ನನ್ನು ಅಂದು ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಮಾನವೀಯತೆಯ ಬದುಕನ್ನು ಸಾರಿದ್ದ ಗುರುನಾನಕರ ನೆಲದ ಮಣ್ಣು ಆಗ ಅಮಾಯಕನೊಬ್ಬನ ನೆತ್ತರಿನ ಕಲೆಗಳಿಂದ ಒದ್ದೆಯಾಗುತ್ತಿತ್ತು.  

ಖ್ಯಾತ ಪತ್ರಕರ್ತೆ ಮತ್ತು ಲೇಖಕಿಯಾಗಿರುವ ನಿರುಪಮಾ ದತ್ ಬರೆದಿರುವ ‘ದ ಬಲಾಡ್ ಆಫ್ ಬಂತ್ ಸಿಂಗ್’ ಕೃತಿಯಲ್ಲಿ ಬಂತ್ ನ ಕತೆಯನ್ನು ಓದುತ್ತಿದ್ದರೆ, ಯಾರಿಗಾದರೂ ಈ ಹುಟ್ಟಾ ಹೋರಾಟಗಾರನ ಜೀವನಪ್ರೀತಿಯು ರೋಮಾಂಚನವನ್ನು ತರುವುದು ಸತ್ಯ. ಅಷ್ಟಿದ್ದೂ ‘ಬಂತ್ ನನ್ನು ನಾವು ಕೇವಲ ಒಂದು ಮಾಂಸದ ಮುದ್ದೆಯಾಗಿ ಪರಿವರ್ತಿಸಿದೆವು’ ಎಂದು ಯಾರೂ ಹೇಳುವ ಹಾಗಿಲ್ಲ.

ಏಕೆಂದರೆ ಇಂದಿಗೂ ಬಂತ್ ಸಿಂಗ್ ನಲ್ಲಿರುವ ಜೀವನಪ್ರೀತಿಯು ಕೊನೆಯುಸಿರೆಳೆದಿಲ್ಲ. ಬದಲಾಗಿ ಇಂದು ಆತನ ಕ್ರಾಂತಿಯ ಹಾಡುಗಳು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ. ಯಾವ ಉಚ್ಚ ಸಾಮಾಜಿಕ ವರ್ಗವೂ, ಮುಗಿಯದ ಸಿರಿವಂತಿಕೆಯೂ ನೀಡಲಾರದ ಅಸಾಮಾನ್ಯ ನೈತಿಕ ಬಲವೆಂದರೆ ಸತ್ಯದ್ದು.

ಇಂದು ಭಾರತದಲ್ಲಿ ಕೇವಲ ಅತ್ಯಾಚಾರವೆಂದಲ್ಲ. ಅಸಲಿಗೆ ಛೇಡಿಸುವಿಕೆ, ಹಿಂಬಾಲಿಸುವಿಕೆ, ಹೆಣ್ಣೊಬ್ಬಳ ಖಾಸಗಿತನಕ್ಕೆ ಧಕ್ಕೆ ತರುವ ಪ್ರಯತ್ನ, ಲೈಂಗಿಕ ಆಮಿಷ-ಬೆದರಿಕೆ-ದೌರ್ಜನ್ಯಗಳು… ಇವೆಲ್ಲವುಗಳ ವಿರುದ್ಧವೂ ದೊಡ್ಡ ಮಟ್ಟಿನ ಯುದ್ಧವನ್ನು ಸಾರಬೇಕಿದೆ. ಮಹಿಳೆಯೊಬ್ಬಳು ತನ್ನದೇ ನೆಲದಲ್ಲಿ, ತೆರೆದ ಜೈಲೊಂದರಲ್ಲಿ ಬಂಧಿಯಾಗಿರುವ ಅಪರಾಧಿಯಂತೆ ಉಸಿರುಗಟ್ಟಿ ಬದುಕುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.

ಈಚೆಗೆ ಉತ್ತರಪ್ರದೇಶದ ಹತ್ರಾಸಿನಲ್ಲಿ ನಡೆದ ಅತ್ಯಾಚಾರದ ಪ್ರಕರಣ, ಅಲ್ಲಿ ಕಾಣಸಿಕ್ಕ ಬರ್ಬರತೆ, ವ್ಯವಸ್ಥೆಯು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದುಕೊಂಡ ಅಕ್ಷಮ್ಯ ರೀತಿ… ಇವೆಲ್ಲವೂ ಲಿಂಗ ಸಮಾನತೆ, ಮಹಿಳಾ ಸಬಲೀಕರಣದಂತಹ ಭಾರೀ ಪದಗಳ ಹಿಂದಿರುವ ಪೊಳ್ಳುತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ಹೆಣ್ಣಾಗಲಿ, ಗಂಡಾಗಲಿ! ವ್ಯಕ್ತಿಯೊಬ್ಬನ ಬದುಕಿಗೆ ನೀಡಬೇಕಾಗಿರುವ ಘನತೆಯು, ಕೊನೆಗೆ ಸಾವಿನಲ್ಲೂ ಕಾಣದೆ ಹೋಗಿದ್ದು ಘೋರ ವಿಪರ್ಯಾಸ.

ನಿರ್ಭಯಾ ಪ್ರಕರಣವು ನಡೆದು ಇಂದಿಗೆ ಬರೋಬ್ಬರಿ ಎಂಟು ವರ್ಷ. ಆದರೆ ಈ ಎಂಟು ವರ್ಷಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳಿಗೆ ಸಂಬಂಧಪಟ್ಟಂತೆ ಹೇಳಿಕೊಳ್ಳುವಂತಹ ಬದಲಾವಣೆಗಳಾಗಿಲ್ಲ ಎಂಬುದು ಸ್ಪಷ್ಟ. ಇಂದಿಗೂ ನಮ್ಮ ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ವರದಿಯಾಗುವ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವ ಶೇಕಡಾವಾರು ಪ್ರಮಾಣವು ಅಷ್ಟಕ್ಕಷ್ಟೇ ಇದೆ.

ಜವಾಬ್ದಾರಿಯುತ ನಾಗರಿಕರಾಗಿರುವ ನೆಲೆಯಲ್ಲಿ ನಮಗೂ, ಒಂದು ವ್ಯವಸ್ಥೆಯ ನೆಲೆಯಲ್ಲಿ ದೇಶಕ್ಕೂ ಇದು ನಿಶ್ಚಯವಾಗಿ ಎಚ್ಚೆತ್ತುಕೊಳ್ಳಬೇಕಾದ ಕಾಲ!

*********

ಈ ಹಿನ್ನೆಲೆಯಲ್ಲಿ ಹಿಂದಿ ಕವಯತ್ರಿ ಮೀನಾಕ್ಷಿ ಜೀಜಿವಿಷಾರ ಕಾಡುವ ಕವಿತೆಯೊಂದು ನನಗೀಗ ನೆನಪಾಗುತ್ತಿದೆ.

”ಒಳ್ಳೆಯದೇ ಆಯಿತು”

”ಒಳ್ಳೆಯದೇ ಆಯಿತು”
ಈ ಜಗತ್ತಿನ ಯಾವುದೋ ಪಟ್ಟಣದ
ಯಾವುದೋ ಗಲ್ಲಿಯ, ಯಾವುದೋ ಕಟ್ಟಡವೊಂದರಲ್ಲಿ,
ಕೂತ ಓರ್ವ ಹೆಣ್ಣುಮಗಳು ದಿನಪತ್ರಿಕೆಯನ್ನು ಓದುತ್ತಿದ್ದಾಳೆ…

ಕಿಲಾಡಿ ಪ್ರೇಮಿಯೊಬ್ಬ ತನ್ನ ಮುಗ್ಧೆ ಪ್ರಿಯತಮೆಯೊಬ್ಬಳನ್ನು ವಂಚಿಸಿದನಂತೆ…
ಭಯಪಟ್ಟು ಯೋಚಿಸುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಯಾರನ್ನೂ ಪ್ರೀತಿಸಲಿಲ್ಲ…
ಯಾರಿಂದಲೂ ಮೋಸ ಹೋಗಲಿಲ್ಲ…

ಇವಳಿಗೆ ಸುದ್ದಿ ಸಿಕ್ಕಿತು,
ಮಾರುಕಟ್ಟೆಯಲ್ಲಿ, ನಾಲ್ಕು ರಸ್ತೆಗಳು ಕೂಡುವಲ್ಲಿ,
ನಿನ್ನೆ ರಾತ್ರಿ ಯಾವುದೋ ಹೆಣ್ಣೊಬ್ಬಳ ಮೇಲೆ ಅತ್ಯಾಚಾರವಾಯಿತಂತೆ…
ಭಯಪಟ್ಟು ತನ್ನನ್ನು ತಾನೇ ಸಂತೈಸುವಂತೆ ಹೇಳುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಈ ಮನೆಯ ಗೋಡೆಗಳನ್ನು ದಾಟಲಿಲ್ಲ…

ಓಣಿಯ ಹೆಂಗಸರಿಂದ, ತನ್ನ ಗೆಳತಿಯರಿಂದ ಮಾತುಗಳು ಕೇಳುತ್ತವೆ,
ಧನದಾಹದಿಂದ ಗಂಡಿನ ಮನೆಯವರು
ಸುಂದರ-ಸುಶೀಲ ಸೊಸೆಯೊಬ್ಬಳನ್ನು ಸುಟ್ಟುಬಿಟ್ಟರೆಂದು…
ಬದುಕಿಕೊಂಡೆ ಎಂಬಂತೆ ಸಮಾಧಾನದ ನಿಟ್ಟುಸಿರಿಡುತ್ತಾಳೆ ಇವಳು,
ಒಳ್ಳೆಯದೇ ಆಯಿತು,
ತಾನೆಂದೂ ಸುಳ್ಳು ಸಂಬಂಧಗಳ ಹಸಿದಾರದಿಂದ ಬಂಧಿಸಲ್ಪಟ್ಟಿಲ್ಲವೆಂದು…

ಹಿರಿಯರ, ಸಂಬಂಧಿಗಳ ಕತೆಗಳಂತಿರುವ ಮಾತುಗಳು ಅವಳಿಗೆ ಕೇಳುತ್ತಿವೆ,
ತಮ್ಮವರದ್ದೇ ಸುಳ್ಳು ಮತ್ತು ವಂಚನೆಗಳ ಬಗ್ಗೆ…
ಒಳಗೊಳಗೇ ಖುಷಿಯಾಗುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಯಾರನ್ನೂ ನಂಬಲಿಲ್ಲವೆಂದು…

ಹೀಗಂದುಕೊಳ್ಳುತ್ತಲೇ,
ಮನೆಯ ಉಸಿರುಗಟ್ಟಿಸುವ ನಾಲ್ಕು ಗೋಡೆಗಳ ನಡುವೆ,
ವ್ಯರ್ಥವಾಯಿತೊಂದು ಜೀವನ…
ನಿರುದ್ದೇಶದ್ದು, ನಿರುಪಾಯದ್ದು, ನಿರರ್ಥಕ…

ಅದೆಷ್ಟೋ ಸಾಧ್ಯತೆಗಳಿದ್ದ ಬದುಕಾಗಿತ್ತದು,
ಈ ಬಗ್ಗೆಯೂ ನೀನು ಹೇಳುತ್ತೀಯಾ,
ಸದ್ಯ ಒಳ್ಳೆಯದೇ ಆಯಿತು, ಎಂದೆಲ್ಲಾ…

October 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಪ್ರಸಾದ್, ದುರ್ಭರವಾದ ಇಂದಿನ ದಿನಗಳ ಈ ವಸ್ತುಸ್ಥಿತಿಯ ಚಿತ್ರ ಮನವನ್ನು ತೀವ್ರವಾಗಿ ಕಾಡಿದೆ. ಏನು ಹೇಳಲಿ?

    ಪ್ರತಿಕ್ರಿಯೆ
  2. ಮಮತ

    ತುಂಬಾ ಸೊಗಸಾದ ವಿಶ್ಲೇಷಣಾಯುಕ್ತ ಬರಹ
    ವಿವೇಚನೆ ವಿವೇಕದ ವಿಷಯವನ್ನೊಳಗೊಂಡ ಆಲೋಚನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: