ಮುದ್ರಕರಿಗೂ ಪ್ರಶಸ್ತಿ ಕೊಡಿ….

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಒಂದು ದಿನ ಬೆಳಗ್ಗೆ ಕಛೇರಿಯಲ್ಲಿ ಕುಳಿತು ಪತ್ರಿಕೆ ತಿರುವಿ ಹಾಕುತ್ತಿರುವಾಗ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೪ರ ವಾರ್ಷಿಕ ಪ್ರಶಸ್ತಿಯ ಪಟ್ಟಿ ಕಣ್ಣಿಗೆ ಬಿತ್ತು. ಅದರಲ್ಲಿ ‘ಪುಸ್ತಕ ಸೊಗಸು’ ಬಹುಮಾನ ಪಡೆದ ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಾಶಕರ ಹೆಸರು, ಹಾಗೆಯೇ ಮುಖಪುಟ ಚಿತ್ರಕಲೆ ಬಹುಮಾನ ಪಡೆದ ಪುಸ್ತಕದ ಹೆಸರು, ಅದರ ಲೇಖಕರ ಹೆಸರು, ಜೊತೆಗೆ ಕಲಾವಿದರ ಹೆಸರು ಇತ್ತು.

`ಪುಸ್ತಕವೊಂದು ಅತ್ಯುತ್ತಮವಾಗಿ ರೂಪುಗೊಳ್ಳುವಲ್ಲಿ ಲೇಖಕರು, ಕಲಾವಿದರು, ಪ್ರಕಾಶಕರ ಶ್ರಮ ಮತ್ತು ತೊಡಗಿಸಿಕೊಳ್ಳುವಿಕೆ ಏನಿರುತ್ತದೋ ಅಷ್ಟೇ ಪ್ರಮಾಣದ ಶ್ರಮ, ತೊಡಗಿಸಿಕೊಳ್ಳುವಿಕೆ ಮುದ್ರಕರದ್ದೂ ಆಗಿರುತ್ತದೆ ಅಲ್ಲವೇ..?

ಈ ಮೇಲಿನ ಎಲ್ಲರ ಹೆಸರು ಜೊತೆ ಮುದ್ರಕರ ಹೆಸರು ಇರಬೇಕಲ್ಲವೇ..?’ ಎನಿಸಿದ್ದರಿಂದ ಬೈರಮಂಗಲ ರಾಮೇಗೌಡರು ಹಾಗೂ ಪ್ರಕಾಶ್ ಕಂಬತ್ತಳ್ಳಿ ಅವರ ಜೊತೆ ಚರ್ಚೆ ಮಾಡಿದೆ. ಅವರುಗಳ ಸಲಹೆ ಮೇರೆಗೆ, ಪುಸ್ತಕ ಪ್ರಾಧಿಕಾರಕ್ಕೆ ಒಂದು ಪತ್ರವನ್ನು ಬರೆದೆ.

ಅದರಲ್ಲಿ, “ಕನ್ನಡ ಪುಸ್ತಕೋದ್ಯಮವನ್ನು ವೈವಿಧ್ಯಮಯವಾಗಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸಲು ಕರ್ನಾಟಕ ಸರ್ಕಾರವು  ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸ್ಥಾಪಿಸಿದೆ. ಪುಸ್ತಕೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರಾಧಿಕಾರವು ‘ಪುಸ್ತಕ ಸೊಗಸು’ ಪ್ರಶಸ್ತಿಯನ್ನು ಪ್ರಾರಂಭಿಸಿ, ಕಾಲಾನಂತರದಲ್ಲಿ ಅದನ್ನು ವಿಸ್ತರಿಸಿ ಅತ್ಯುತ್ತಮ ಪ್ರಕಾಶಕರಿಗೆ, ಲೇಖಕರಿಗೆ, ಕಲಾವಿದರಿಗೆ ಪ್ರಶಸ್ತಿ ಕೊಡುತ್ತಾ ಬಂದಿದೆ. ಇದು ಮೆಚ್ಚಬೇಕಾದ ಸಂಗತಿ. ಆದರೆ ಪುಸ್ತಕ ಅತ್ಯುತ್ತಮವಾಗಿ ರೂಪುಗೊಳ್ಳಲು ಇವರೆಲ್ಲರ ಜೊತೆ ಮುದ್ರಕರ ಪಾತ್ರವೂ ಬಹಳ ಮುಖ್ಯ.

ಅನೇಕ ಸಂಘ ಸಂಸ್ಥೆಗಳು ಇವರೆಲ್ಲರಿಗೂ ಹಲವು ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿವೆ. ಇವರ ಜೊತೆ ಮುದ್ರಕರನ್ನು ಗುರುತಿಸುವ ಪ್ರಯತ್ನ ಯಾವ ಸಂಸ್ಥೆಯಿಂದಲೂ ನಡೆಯುತ್ತಿಲ್ಲ. `ಮುದ್ರಕರನ್ನು ಹೊರತುಪಡಿಸಿ ಪುಸ್ತಕೋದ್ಯಮ’ ಎನ್ನುವುದಕ್ಕೆ ಅರ್ಥವಾಗಲೀ ಮೌಲ್ಯವಾಗಲೀ ಇರುವುದಿಲ್ಲ.

ಈ ನಿಟ್ಟಿನಲ್ಲಿ ಮುದ್ರಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ ಗಮನಹರಿಸಿ, ಪ್ರಶಸ್ತಿ ಬಹುಮಾನಗಳಲ್ಲಿ ಮುದ್ರಕರನ್ನು ಪರಿಗಣಿಸಬೇಕು” ಎಂದು ಒಂದು ಪತ್ರದ ಮುಖಾಂತರ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡೆ…. ಆದರೆ ಆ ಪತ್ರ ನೆನೆಗುದಿಗೆ ಬಿತ್ತು.

ಮತ್ತೆ ೨೦೧೫ರಲ್ಲಿ ವಾರ್ಷಿಕ ಪ್ರಶಸ್ತಿಯ ಪಟ್ಟಿ ಪತ್ರಿಕೆಯಲ್ಲಿ ಬಂತು. ಆಗಲೂ ಮತ್ತೆ ಪತ್ರ ಹಿಡಿದು ಪ್ರಾಧಿಕಾರಕ್ಕೆ ಹೋದೆ. ಆದರೆ ಈ ಬಾರಿ ಮುದ್ರಕರ, ಲೇಖಕರ, ಪ್ರಕಾಶಕರ ಹಾಗೂ ಎಲ್ಲರ ಗಮನ ಸೆಳೆಯಲಿ ಎಂದು ಪತ್ರದ ಒಂದು ನಕಲು ಪ್ರತಿಯನ್ನು ಪ್ರಜಾವಾಣಿ ಪತ್ರಿಕೆ ವಿಳಾಸಕ್ಕೂ ಕೂಡ ಅಂಚೆ ಮುಖಾಂತರ ಕಳಿಸಿಕೊಟ್ಟೆ. ದಿನಾಂಕ ೭ ಜುಲೈ ೨೦೧೫ ರಂದು ಪತ್ರಿಕೆಯು ‘ವಾಚಕರ ವಾಣಿ’ಯಲ್ಲಿ ಆ ಪತ್ರವನ್ನು ಯಥಾವತ್ತು ಪ್ರಕಟಿಸಿದ್ದು ನಮಗೆ ಆನೆಬಲ ಬಂದಂತಾಯಿತು.

ಆಗ ಪತ್ರಿಕೆ ಓದಿದ ಹಿರಿಯ ಕಿರಿಯ ಸಾಹಿತಿಗಳು, ಪ್ರಕಾಶಕರು, ಕಲಾವಿದರು ನಮಗೆ ಬೆಂಬಲ ಸೂಚಿಸಿದರು. ಹೀಗೆ ಪ್ರತಿ ವರ್ಷವೂ ಪ್ರಯತ್ನ ನಡೆಯುತ್ತಲೇ ಇತ್ತು.

೨೦೧೭ರಲ್ಲಿ ಬರೀ ನನ್ನ ಪತ್ರ ಒಂದೇ ಕೊಟ್ಟರೆ ತೂಕ ಇರುವುದಿಲ್ಲ ಎಂಬುದನ್ನು ಮನಗಂಡು, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷರಾದ ಬಿ.ಆರ್. ಅಶೋಕ್‌ಕುಮಾರ್, ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ, ಹಲವು ಸಾಹಿತಿಗಳು, ಕಲಾವಿದರು ಮುದ್ರಕರ ಪರವಾಗಿ ಬರೆದ ಪತ್ರಗಳನ್ನು ಒಟ್ಟಿಗೆ ಸೇರಿಸಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ಶ್ರೀಮತಿ ವಸುಂಧರಾ ಭೂಪತಿ ಮೇಡಂ ಅವರಿಗೆ ಕೊಟ್ಟು, ಮುದ್ರಕರನ್ನು ಪ್ರಾಧಿಕಾರದ ಪ್ರಶಸ್ತಿ ಬಹುಮಾನಗಳಿಗೆ ಪರಿಗಣಿಸುವಂತೆ ಮನವಿ ಮಾಡಿಕೊಂಡೆವು.

ಸ್ವಲ್ಪ ದಿನಗಳ ನಂತರ ಆಗ ಆಡಳಿತಾಧಿಕಾರಿಯಾಗಿದ್ದ ಶ್ರೀಮತಿ ಸೌಭಾಗ್ಯ ಮೇಡಂ ಕರೆಮಾಡಿ ಬರಹೇಳಿದರು. ನಮ್ಮ ಮನವಿಗೆ ಸ್ವಲ್ಪ ಜೀವ ಬಂತು ಎಂಬ ಉತ್ಸಾಹದಿಂದ ಹೋದೆ. ಅಲ್ಲಿ ಅಧ್ಯಕ್ಷರು “ಮುದ್ರಕರಿಗೆ ದೊಡ್ಡಮೊತ್ತದ ಬಹುಮಾನ ಕೊಡಲು ನಾವೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ, ಮಂತ್ರಿಗಳಿಗೆ ಕಡತ ಕಳುಹಿಸಿ ಅವರಿಂದಲೇ ಅನುಮೋದನೆ ಪಡೆಯಬೇಕು.

ಈಗಿನ ಒತ್ತಡದಲ್ಲಿ ಅದು ಸ್ವಲ್ಪ ಕಷ್ಟ. ಆದರೆ ಅಲ್ಪಮೊತ್ತದ ಪ್ರಶಸ್ತಿಯಾದರೆ ನಾವು ನಮ್ಮ ಸದಸ್ಯರ ಸಭೆಯಲ್ಲಿಯೇ ತೀರ್ಮಾನಿಸಬಹುದು” ಎಂದು ಒಂದು ಸಲಹೆಯನ್ನು ಕೊಟ್ಟರು. ನಾವು – ‘ಪರವಾಗಿಲ್ಲ ನಮಗೆ ಪ್ರಶಸ್ತಿ ಮೊತ್ತ ಮುಖ್ಯವಲ್ಲ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಮುಖ್ಯ’ ಎಂದು ಅವರ ಸಲಹೆಯನ್ನು ಒಪ್ಪಿಕೊಂಡೆವು.

ಮುಂದೆ ಆಗಸ್ಟ್ ೬, ೨೦೧೮ರಂದು ‘ಮುದ್ರಣ ತಂತ್ರಜ್ಞಾನ ಒಂದು ಅವಲೋಕನ’ ಎಂಬ ಕಾರ್ಯಕ್ರಮದಲ್ಲಿ, “ಕನ್ನಡ ಪುಸ್ತಕ ಪ್ರಾಧಿಕಾರವು ಈ ವರ್ಷ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ, ಈ ವಿಶೇಷ ಸಂದರ್ಭದಲ್ಲಿ ಪ್ರಸಕ್ತ ವರ್ಷದಿಂದಲೇ ಮುದ್ರಣಕಾರರಿಗೂ ‘ಮುದ್ರಣ ಸೊಗಸು’ ಪ್ರಶಸ್ತಿ ಕೊಡಲಾಗುತ್ತದೆ” ಎಂದು ಅಧ್ಯಕ್ಷರು  ಪ್ರಕಟಿಸಿಯೇ ಬಿಟ್ಟರು.

ಶ್ರೀಮತಿ ವಸುಂಧರ ಭೂಪತಿ ಅವರಿಗೆ ಮುದ್ರಕರ ಶ್ರಮದ ಅರಿವಿದ್ದುದ್ದರಿಂದ `ಮುದ್ರಕರಿಗೂ ಪ್ರಶಸ್ತಿ ಕೊಡಿ’ ಎನ್ನುವ ಸಂಘಟಿತ ಹೋರಾಟಕ್ಕೆ ಹಲವು ವರ್ಷಗಳ ನಂತರ ಫಲ ಸಿಕ್ಕಂತಾಯಿತು.

ಕೆಲವು ದಿನಗಳ ನಂತರ ದಿನಪತ್ರಿಕೆಗಳ ಮುಖಾಂತರ ‘ಮುದ್ರಣ ಸೊಗಸು’ ಪ್ರಶಸ್ತಿಗೆ ಪುಸ್ತಕ ಆಯ್ಕೆಗಾಗಿ ಮುದ್ರಕರು ತಮ್ಮ ಮುದ್ರಣಾಲಯದಲ್ಲಿ ೨೦೧೭ರಲ್ಲಿ ಮುದ್ರಣವಾದ ಉತ್ತಮ ಪುಸ್ತಕಗಳನ್ನು ನೀಡಬೇಕಾಗಿ ಪ್ರಕಟಣೆ ಕೊಟ್ಟಿದ್ದರು. ಎಲ್ಲರಂತೆ ನಮ್ಮ ಮುದ್ರಣಾಲಯದಲ್ಲಿ ಮುದ್ರಣವಾದ ಅತ್ಯುತ್ತಮ ಎನಿಸುವ ಕೆಲವು ಪುಸ್ತಕಗಳನ್ನು ಕಳಿಸಿಕೊಟ್ಟೆವು. ಮುಂದೊಂದು ದಿನ ಪ್ರಾಧಿಕಾರದ ಅಧ್ಯಕ್ಷರಿಂದ ದೂರವಾಣಿ ಕರೆಬಂತು.

ಕರೆ ಸ್ವೀಕರಿಸಿದಾಗ ಒಮ್ಮೆಲೆ `ಅಭಿನಂದನೆಗಳು’ ಎಂಬ ಶಬ್ದ, ತೇಲಿ ಬಂತು. ಅದು ನನ್ನಲ್ಲಿ ಗಾಬರಿ ಅಚ್ಚರಿ ಮೂಡಿಸಿತು.  ಅಭಿನಂದನೆಗಳ್ಯಾಕೆ ಎಂಬುದು ತಿಳಿಯಲಿಲ್ಲ ಎನ್ನುವಷ್ಟರಲ್ಲಿ, “೨೦೧೭ರ ಮುದ್ರಣ ಸೊಗಸು ಆಯ್ಕೆಯಲ್ಲಿ ನಿಮ್ಮ ಮುದ್ರಣದ ‘ವಚನ ಮಾರ್ಗ’ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ” ಎಂದಾಗ, ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅದು ನನ್ನನ್ನು ಸಾಕಿ ಸಲಹಿದ ಮುರುಘಾಮಠದ ಪ್ರಕಟಣೆ. ಜೊತೆಗೆ ನನ್ನನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಡಾ. ಶಿವಮೂರ್ತಿ ಮುರುಘಾ ಶರಣರು ಸಂಪಾದಿಸಿದ ಪುಸ್ತಕಕ್ಕೆ ಮೊದಲ ಮುದ್ರಣ ಸೊಗಸು ಪ್ರಶಸ್ತಿ ನಮ್ಮ ಸ್ವ್ಯಾನ್ ಮುದ್ರಣಾಲಯಕ್ಕೆ ಬಂದಿದ್ದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತ್ತು.

ಲೇಖಕರಿಗೆ, ಪ್ರಕಾಶಕರಿಗೆ, ಕಲಾವಿದರಿಗೆ ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸರ್ಕಾರದ ವಿವಿಧ ಅಧೀನ ಸಂಸ್ಥೆಗಳು ಹಾಗೂ ಅನೇಕ ಖಾಸಗಿ ಸಂಘ ಸಂಸ್ಥೆಗಳು ಪ್ರಶಸ್ತಿ ಬಹುಮಾನ ನೀಡಿ ಪ್ರೋತ್ಸಾಹ ನೀಡುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾದರಿಯಂತೆ ಮುದ್ರಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಉಲ್ಲೇಖಿತ ಸಂಘ ಸಂಸ್ಥೆಗಳಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

ಸಾಹಿತ್ಯಕ್ಕೂ ಮುದ್ರಣಕಲೆಗೂ ಅತ್ಯಂತ ನಿಕಟ ಸಂಬಂಧ.  ಸಾಹಿತ್ಯ ಇಷ್ಟೊಂದು ವ್ಯಾಪಕವಾಗಿ ಹರಡುವುದಕ್ಕೆ  ಮುದ್ರಣವೇ ಕಾರಣ.  ಅವೆರಡು ಒಂದನ್ನೊಂದು ಬಳಸಿಕೊಂಡೇ ಏಕಕಾಲಕ್ಕೆ ಮುಂದೆ ಸಾಗಿವೆ… (ಶ್ರೀ ಎಂ. ಎ. ರಾಮಾನುಜಯ್ಯಂಗಾರ್ ವಿರಚಿತ ಒಂದು ಪ್ರಬಂಧದಲ್ಲಿ ಮುದ್ರಣದ ಮಹತ್ವವನ್ನು ಒಂದು ರೂಪಕದಿಂದ ಮನಂಬುಗುವಂತೆ ಬಣ್ಣಿಸಿದ್ದಾರೆ.)

ಲೇಖನಿಯು ಸದಾಕಾಲ ಗೋಳಾಡುತ್ತಿತ್ತಂತೆ.! “ಅಯ್ಯೋ ನನ್ನ ಜೀವಾಶ್ರಯ(ಎಂದರೆ ಹಸ್ತ ಪ್ರತಿ)ವನ್ನೇ ಮುಟ್ಟಿದರೆ ಸಾಯುವ ಗೆದ್ದಲು ಹುಳುವೂ ತಿಂದುಬಿಡುವುದು. ಬಡಿದರೆ ಚದುರುವ ನೀರು ತಾರಿಸಿಬಿಡುವುದು. ಉರುಬಿದರೆ ನಂದುವ ದೀಪವು ಸುಟ್ಟು ಬಿಡುವುದು.  ನಾನು ಇಷ್ಟು ಉಪಕಾರಿ ಆದರೂ ನನ್ನ ಬಾಳು ಇಷ್ಟೇ. ನನ್ನನ್ನು ಕಾಪಾಡುವವರಿಲ್ಲ”.

ಅದನ್ನು ಕೇಳಿ ಅನುತಾಪಬಟ್ಟು ಅಚ್ಚು (ಮುದ್ರಣ) ಹೀಗೆ ಹೇಳಿತಂತೆ “ಏಕೆ ಈ ಗೋಳು? ರಾಜನನ್ನು ಭಟರು ಕಾಪಾಡುವಂತೆ ನಿನಗೆ ಸದೃಶರಾದ ಹೊಸ ಹೊಸ ಭಟರನ್ನು ಸೃಷ್ಟಿಸಿ ಕಾಪಾಡುತ್ತಿರುವೆನು. ಒಬ್ಬ ಭಟನು ಸತ್ತರೆ ಅನೇಕ ಭಟರು ನಿನಗೆ ಬೆಂಬಲವಾಗಿ ನಿಂತೇ ಇರುವರು. ಈ ಭಟರಿಂದ ಪ್ರಪಂಚವೆಲ್ಲಾ ನಿನ್ನ ರಾಜ್ಯವಾಗಿ ಆಗುವುದು. ಅವರು ಜ್ಞಾನದ ಬೆಳಕು ಬೀಳುವ ಕಡೆಯಲ್ಲೆಲ್ಲ ನಿನ್ನ ಪ್ರಾಬಲ್ಯವನ್ನು ಹೊಗಳುತ್ತಾ ಬರುವರು. ನಿನ್ನ ಆಜ್ಞೆಗೆ ಎಲ್ಲೂ ತಡೆಯಿಲ್ಲದಂತೆ ಆಗುವುದು”.

ಪುಸ್ತಕವೊಂದು ಅತ್ಯುತ್ತಮವಾಗಿ ರೂಪುಗೊಳ್ಳುವಲ್ಲಿ ಲೇಖಕ, ಕಲಾವಿದ, ಪ್ರಕಾಶಕರ ಶ್ರಮ ಮತ್ತು ತೊಡಗಿಸಿಕೊಳ್ಳುವಿಕೆ ಏನಿರುತ್ತದೋ ಅಷ್ಟೇ ಪ್ರಮಾಣದ ಶ್ರಮ, ತೊಡಗಿಸಿಕೊಳ್ಳುವಿಕೆ ಮುದ್ರಕರದ್ದೂ ಆಗಿರುತ್ತದೆ ಅಲ್ಲವೇ..? ಆದ್ದರಿಂದ ಪುಸ್ತಕ ಬಿಡುಗಡೆ ಸಭೆ ಸಮಾರಂಭಗಳಲ್ಲಿ ಹಾಗೂ ಜಾಲತಾಣಗಳಲ್ಲಿ ತಮ್ಮ ಪುಸ್ತಕವನ್ನು ಪರಿಚಯಿಸುವಾಗ ಲೇಖಕ, ಕಲಾವಿದ, ಪ್ರಕಾಶಕರನ್ನು ಸ್ಮರಿಸುವಂತೆ ನಿಮ್ಮ ಪುಸ್ತಕದ ಮುದ್ರಕರನ್ನೂ ಸ್ಮರಿಸಲು ಮನವಿ.

October 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: