ಪ್ರಥಮ ಪ್ರಧಾನಿ ಹುದ್ದೆಗೆ ಗಾಂಧೀಜಿ ಕ್ಯಾಂಡಿಡೇಟುಗಳು ಎಂತೆಂಥವರು ಗೊತ್ತಾ?

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ವಿಠ್ಠಲಮೂರ್ತಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಮಹಾನುಭಾವ ಕುರುಡಾಮಿರಿಡಿಯಾಗಿ ಅಂತಹದೊಂದು ನಿರ್ಧಾರವನ್ನು ತೆಗೆದುಕೊಂಡರು ಅಂತ ನಿಮಗನ್ನಿಸುತ್ತದಾ?

ಹಾಗಂತ ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡರು ಕೇಳಿದಾಗ ಅವರ ಮಾತಿನಲ್ಲಿದ್ದ ಗಂಭೀರತೆಯನ್ನು ಗ್ರಹಿಸಿ ನಾನು ಕುಳಿತಲ್ಲೇ ಮಿಸುಕಾಡಿದೆ.

ಆ ಮರದ ಸುತ್ತ ಆವರಿಸಿಕೊಂಡಿದ್ದ ಕಟ್ಟೆಯ ಮೇಲೆ ಕುಳಿತು,ಕಾವಿ ಬಣ್ಣದ ನೆಲದ ಹಿತವನ್ನು ಆಸ್ವಾದಿಸುತ್ತಾ ಕುಳಿತಿದ್ದ ನನಗೆ ಅವರ ಮಾತು ಕೇಳಿದ್ದೇ ತಡ,ಒಂದು ದೊಡ್ಡ ವಿಷಯಕ್ಕೆ ಮುಖಾಮುಖಿಯಾಗುವ ಭಾವ ಮೂಡತೊಡಗಿತು.

ಹಾಗಂತಲೇ: ನನಗೆ ಹಾಗನ್ನಿಸುತ್ತಿಲ್ಲ ಸಾರ್‌, ಆದರೆ ಈ ನೆಲದ ಬಹುತೇಕರು ಅಂತಹದೊಂದು ಗ್ರಹಿಕೆಯಲ್ಲಿ ಮೀಯುತ್ತಿದ್ದಾರೆ. ಹೀಗಾಗಿ ಮಾತು,ಮಾತು ಮಥಿಸಿ ಅಮೃತವಾಗಲಿ ಎಂಬ ಕಾರಣಕ್ಕಾಗಿ ಆ ಕುರಿತು ನಿಮಗೆ ಕೇಳಿದೆ ಎಂದೆ.

ನಿಮ್ಮ ಪ್ರಶ್ನೆ ಏನು ವಿಠ್ಠಲಮೂರ್ತಿ? ಈ ದೇಶದ ಪ್ರಧಾನಿ ಯಾರಾಗಬೇಕು? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿ ಅವಸರದ ನಿರ್ಧಾರವನ್ನು ತೆಗೆದುಕೊಂಡರು. ನೆಹರೂ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲು ಆತುರ ತೋರಿದರು ಎಂದು ತಾನೇ?

ಈ ಪ್ರಶ್ನೆ ಏಳಲು ಇನ್ನೊಂದು ಕಾರಣವಿದೆ ವಿಠ್ಠಲಮೂರ್ತಿ.ಈಗಿನ ರಾಜಕೀಯದ ಹಾಲಾಹಲ ಅದಕ್ಕೆ ಕಾರಣ. ನೆಹರೂ ಅವರ ಬದಲು ಪಟೇಲರು ಪ್ರಧಾನಿ ಆಗಿದ್ದರೆ ಈ ದೇಶದ ಭವಿಷ್ಯ ಉಜ್ವಲವಾಗಿರುತ್ತಿತ್ತು ಅನ್ನುವುದು ಈ ಹಾಲಾಹಲದ ನಡುವೆ ಮೇಲೆದ್ದ ಮಾತು.

ಆದರೆ ಇತಿಹಾಸವನ್ನು ಅರಿತವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತದೆ. ಈ ದೇಶದ ಭವಿಷ್ಯದ ನಾಯಕ ಯಾರಾಗಬೇಕು? ಎಂಬ ವಿಷಯ ಮುನ್ನೆಲೆಗೆ ಬಂದಾಗ ಗಾಂಧೀಜಿಯವರ ಜತೆಗೂಡಿ ಹುಡುಕಾಟ ಆರಂಭಿಸಿದವರಲ್ಲಿ ಸರ್ದಾರ್‌ ಪಟೇಲ್‌ ಕೂಡಾ ಮುಖ್ಯರಾದವರು.

ಹಾಗೆಯೇ ನಾಯಕತ್ವದ ವಿಷಯ ಬಂದಾಗ ತಾವಾಗಿಯೇ ಹಿಂದೆ ಸರಿದು: ನನಗೆ ವಯಸ್ಸಾಗಿದೆ. ಹೀಗಾಗಿ ಆ ಜಾಗಕ್ಕೆ ಬಂದು ಕೂರಲು ನಾನು ತಯಾರಿಲ್ಲ ಎಂದವರು ಪಟೇಲ್.‌

ಹೀಗಿರುವಾಗ ಪಟೇಲರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿತ್ತು ಎಂದು ಹೇಳುವವರೇನಿದ್ದಾರೆ? ಅವರದು ಒಂದು ಅಭಿಪ್ರಾಯ ಅಷ್ಟೇ. ಯಾಕೆಂದರೆ ಪಟೇಲರು ಆ ಹುದ್ದೆಯ ರೇಸಿನಲ್ಲಿ ಯಾವತ್ತೂ ಇರಲೇ ಇಲ್ಲವಲ್ಲ?

ಕುತೂಹಲದ ವಿಷಯ ಅದಷ್ಟೇ ಅಲ್ಲ ವಿಠ್ಠಲಮೂರ್ತಿ, ಈ ದೇಶಕ್ಕೆ ಸ್ವಾತಂತ್ರ್ಯ ಕೊಡಬೇಕು ಎಂದು ಬ್ರಿಟಿಷರು ಬಯಸಿದರಲ್ಲ? ಅಲ್ಲಿಂದ ಶುರುವಾದ ಭವಿಷ್ಯದ ನಾಯಕನ ಹುಡುಕಾಟದಲ್ಲಿ ಹತ್ತಕ್ಕೂ ಹೆಚ್ಚು ನಾಯಕರನ್ನು ಗಾಂಧಿ ಪರಿಗಣಿಸಿದ್ದರು. ಮತ್ತು ಇಂತಹ ಹುಡುಕಾಟಕ್ಕೆ ಪಟೇಲರೂ ಸಾಥ್‌ ನೀಡಿದ್ದರು.

ಹಾಗಂತ ನಾಡಗೌಡರು ಹೇಳುತ್ತಿದ್ದಂತೆ ನಾನು ಕುತೂಹಲದಿಂದ: ಆ ಸಂದರ್ಭದಲ್ಲಿ ಪ್ರಧಾನಿ ಪಟ್ಟಕ್ಕೆ ಪರಿಗಣಿತರಾದ ನಾಯಕರು ಯಾರ್ಯಾರು ಸಾರ್? ಅಂತ ಕೇಳಿದೆ. ನನಗೆ ಕೆಲ ನಾಯಕರ ಹೆಸರು ಗೊತ್ತಿತ್ತು. ಆದರೆ ಯಾವ ಕಾರಣಕ್ಕಾಗಿ ಅವರ ಹೆಸರುಗಳು ಪರಿಗಣಿತವಾಗಲಿಲ್ಲ ಎಂಬ ವಿಷಯದಲ್ಲಿ ಸ್ಪಷ್ಟತೆ ಇರಲಿಲ್ಲ.

ನಾನು ಕೇಳಿದ ಮಾತಿಗೆ ಅರೆಕ್ಷಣ ಅವರು ಪ್ರತಿಕ್ರಿಯಿಸಲಿಲ್ಲ. ಬದಲಿಗೆ ಕಾವಿ ಬಣ್ಣದ ಆ ಕಟ್ಟೆಯ ಮೇಲೆ ಕೂತು ಅದರ ತಂಪನ್ನು ಸ್ವಾದಿಸತೊಡಗಿದರು. ಏನೇ ಹೇಳಿ,ಈ ಟೈಲ್ಸು,ಗ್ರಾನೈಟುಗಳ ನೆಲಕ್ಕಿಂತ ಕಾವಿ ನೆಲವೇ ತುಂಬ ಬೆಸ್ಟು ನೋಡಿ ವಿಠ್ಠಲಮೂರ್ತಿ ಎಂದರು.

ನಾನು ಅವರ ಮಾತಿಗೆ ಕಣ್ಣಲ್ಲೇ ಸಹಮತಿ ವ್ಯಕ್ತಪಡಿಸುತ್ತಿದ್ದಂತೆಯೇ: ವಿಠ್ಠಲಮೂರ್ತಿ,ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಈ ದೇಶದ ಪ್ರಧಾನಿ ಹುದ್ದೆಗೆ ನೆಹರೂ ಅವರನ್ನು ಮಾತ್ರವಲ್ಲ, ಮಹಮದಾಲಿ ಜಿನ್ನಾ ಅವರ ಹೆಸರನ್ನೂ ಗಾಂಧಿ ಪರಿಗಣಿಸಿದ್ದರು.

ಜಿನ್ನಾ ಕೂಡಾ ದೊಡ್ಡ ನಾಯಕ. ಹಾಗೆಯೇ ಈ ನೆಲದ ಹಿಂದೂ,ಮುಸ್ಲಿಮರು ಒಗ್ಗೂಡಿ ನೆಮ್ಮದಿಯಿಂದ ಬಾಳಬೇಕೆಂದರೆ ಜಿನ್ನಾ ಅವರನ್ನು ಪ್ರಧಾನಿ ಹುದ್ದೆಗೇರಿಸುವುದು ಒಳ್ಳೆಯದು ಎಂಬ ಭಾವನೆ ಗಾಂಧಿ ಅವರಿಗಿತ್ತು.

ಆದರೆ ಮಹಮದಾಲಿ ಜಿನ್ನಾ ಇದ್ದಕ್ಕಿದ್ದಂತೆ ತಮ್ಮ ಮಿದುಳಿಗೆ ಧಾರ್ಮಿಕತೆಯ ಡ್ರೆಸ್ಸು ಹೊಲಿಸಿಕೊಂಡರು. ಆ ಡ್ರೆಸ್ಸಿನ ಘಮಕ್ಕೆ ಮರುಳಾದವರಂತೆ ಮುಸ್ಲಿಮರ ಹಿತ ಕಾಯುವ ಮಾತನಾಡತೊಡಗಿದರು. ಯಾವಾಗ ಅವರು ಒಂದು ಧರ್ಮದ ಜತೆ ನಿಲ್ಲಲು ಹವಣಿಸತೊಡಗಿದರೋ? ಆಗ ಗಾಂಧೀಜಿಯವರ ಅಭಿಪ್ರಾಯವನ್ನು ಪಟೇಲರೂ ಒಪ್ಪಲಿಲ್ಲ, ನೆಹರೂ ಕೂಡಾ ಒಪ್ಪಲಿಲ್ಲ.

ಇದೇ ಕಾರಣಕ್ಕಾಗಿ ಅವರು ಗಾಂಧಿಯವರಿಗೆ ನೇರವಾಗಿಯೇ: ಭಾರತದ ಪ್ರಧಾನಿ ಹುದ್ದೆಗೆ ಜಿನ್ನಾ ಹೆಸರನ್ನು ಪರಿಗಣಿಸಿದರೆ ಯಾರೂ ಒಪ್ಪುವುದಿಲ್ಲ ಎಂದು ಬಿಟ್ಟರು. ಅವರಿಬ್ಬರ ಅಭಿಪ್ರಾಯವನ್ನು ಕೇಳಿದ ಮೇಲೆ ಗಾಂಧೀಜಿಯವರ ಪಟ್ಟಿಯಿಂದ ಜಿನ್ನಾ ಹೊರಬಿದ್ದರು.

ಇದರ ನಡುವೆ ಗಾಂಧಿ ಹಾಗೂ ಪಟೇಲರ ಜೋಡಿ ಗಂಭೀರವಾಗಿ ಪರಿಗಣಿಸಿದ್ದ ಹೆಸರು ಡಾ.ಬಿ.ಆರ್.ಅಂಬೇಡ್ಕರ್. ಅವರಿಗೆ ಈ ನೆಲದ ಇತಿಹಾಸ ಗೊತ್ತಿತ್ತುಇತಿಹಾಸದಲ್ಲಿ ನಡೆದ ಪ್ರಮಾದಗಳು ಗೊತ್ತಿದ್ದವು. ಅದೆಲ್ಲದರ ಜತೆಗೆ ಭಾರತವನ್ನು ಜಗತ್ತಿನ ಮುಂದೆ ಹೇಗೆ ನಿಲ್ಲಿಸಬೇಕು? ಎಂಬ ವಿಷಯದಲ್ಲಿ ಒಂದು ಗುರಿ ಇತ್ತು.

ಆದರೆ ತಮ್ಮ ಅನುಭವದ ಮೂಲಕ ಅವರು ಕಂಡುಕೊಂಡ ಸತ್ಯವೇನಿತ್ತು? ಈ ಸತ್ಯದ ಆಧಾರದ ಮೇಲೆ ಭವಿಷ್ಯವನ್ನು ದಕ್ಕಿಸಿಕೊಳ್ಳಲು ಸಮಯ ಬೇಕಿತ್ತು. ಯಾಕೆಂದರೆ ಅಂಬೇಡ್ಕರ್‌ ದಲಿತ ಸಮುದಾಯದ ನೋವಿನ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡಿದ್ದರು.

ಇದೇ ಕಾರಣಕ್ಕಾಗಿ ಈ ದೇಶದಲ್ಲಿ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರಗಳು ಬೇಕು ಎಂದು ಬಯಸಿದ್ದರು. ಅದು ತಪ್ಪು ಅಂತ ಹೇಳಲು ಸಾಧ್ಯವಿಲ್ಲ ವಿಠ್ಠಲೂರ್ತಿ,ಶತ,ಶತಮಾನಗಳ ಕಾಲದಿಂದ ತುಳಿತಕ್ಕೊಳಗಾದ ಒಂದು ಸಮುದಾಯವನ್ನು ವ್ಯವಸ್ಥೆಯ ಮುಖ್ಯ ವಾಹಿನಿಗೆ ತರದೆ ಬೇರೆ ದಾರಿಯೇ ಇರಲಿಲ್ಲ.

ಹೀಗಾಗಿ ಅಂಬೇಡ್ಕರ್‌ ಚಿಂತನೆ ಏನಿತ್ತು? ಅದು ಪವರ್‌ಫುಲ್‌ ಥಾಟ್. ಆದರೆ ಇದನ್ನು ಈ ನೆಲದ ಪ್ರಭಾವಿ ಜನ ಒಪ್ಪಲು ತಯಾರಿರಲಿಲ್ಲ. ಹೀಗಾಗಿ ಅಂಬೇಡ್ಕರ್‌ ಅವರನ್ನು ಈ ದೇಶದ ಪ್ರಧಾನಿ ಹುದ್ದೆಗೆ ತರುವ ಗಾಂಧಿ ಹಾಗೂ ಪಟೇಲರು ಸ್ಪಷ್ಟ ನಿಲುವು ತಳೆದಿದ್ದರೆ ದೇಶದ ತುಂಬ ಗಲಭೆಗಳು ಮೇಲೇಳುವ ಸಾಧ್ಯತೆಗಳು ಸ್ಪಷ್ಟವಾಗಿದ್ದವು.

ಹೀಗಾಗಿ ಬೇರೆ ದಾರಿ ಕಾಣದೆ ಅಂಬೇಡ್ಕರ್‌ ಅವರ ಹೆಸರನ್ನು ಭವಿಷ್ಯದ ಪ್ರಧಾನಿ ಹುದ್ದೆಯ ಗಾದಿಗೆ ಪರಿಗಣಿಸದೆ ಮೌನವಾಗಿರಲು ಈ ಜೋಡಿ ಬಯಸಿತು.

ಇದೇ ರೀತಿ ಪ್ರಧಾನಿ ಹುದ್ದೆಗೆ ಗಾಂಧಿ ಬಹು ಕುತೂಹಲದಿಂದ ಪರಿಗಣಿಸಿದ ಹೆಸರುಗಳಲ್ಲಿ ಸುಭಾಷ್‌ ಚಂದ್ರ ಭೋಸ್‌ ಅವರ ಹೆಸರು ಕೂಡಾ ಒಂದು. ಜಡಗೊಂಡ ಈ ದೇಶದ ರಕ್ತನಾಳಗಳಲ್ಲಿ ಮಿಂಚಿನ ಸಂಚಾರ ಉಂಟು ಮಾಡುವ ಶಕ್ತಿ ಅವರಿಗಿತ್ತು ಎಂಬುದು ಈ ಜೋಡಿಗೆ ಗೊತ್ತಿತ್ತು.

ಹೀಗಾಗಿ ಸುಭಾಷ್‌ ಚಂದ್ರ ಭೋಸರ ಹೆಸರನ್ನೂ ಭವಿಷ್ಯದ ನಾಯಕತ್ವಕ್ಕಾಗಿ ಅವರು ಪರಿಗಣಿಸಿದ್ದರು. ಆದರೆ ಸನ್ನಿವೇಶಗಳು ಬದಲಾದವು. ಸುಭಾಷ್‌ ಚಂದ್ರ ಭೋಸರು ಶಸ್ತ್ರ ಕ್ರಾಂತಿಯ ಮೂಲಕವೇ ಈ ದೇಶಕ್ಕೆ ಸ್ವಾತಂತ್ರ್ಯ ಪಡೆಯಬೇಕು ಎಂದು ಬಯಸಿದರು.

ಇದೇ ಕಾರಣಕ್ಕಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ ಜತೆ ಕೈ ಜೋಡಿಸಿದರು. ಆಗ ಜಪಾನ್‌ ಚಕ್ರವರ್ತಿಯಾಗಿದ್ದವನು ಅರಿಹಿಟೋ. ಈ ಅರಿಹಿಟೋ ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ಜತೆಗಿದ್ದ. ಇವರೆಲ್ಲ ಬ್ರಿಟಿಷರ ವಿರುದ್ದ ತಿರುಗಿ ಬಿದ್ದ ಕಾಲದಲ್ಲಿ ಸುಭಾಷ್‌ ಚಂದ್ರ ಭೋಸ್‌ ಅವರ ಜತೆ ಕೈ ಜೋಡಿಸಿದರು.

ಅಂದ ಹಾಗೆ ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಬ್ರಿಟಿಷರಿಗೆ ಬೆಂಬಲ ಕೊಡುವುದು ಗಾಂಧಿಗೆ ಇಷ್ಟವಿರಲಿಲ್ಲ. ಆದರೆ ಅವರ ವಿರುದ್ಧ ಸರ್ವಾಧಿಕಾರಿ ರಾಷ್ಟ್ರಗಳಿಗೆ ಬೆಂಬಲ ನೀಡುವುದಂತೂ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಅದೇ ರೀತಿ ಶಿಷ್ಟಾಚಾರಕ್ಕಾಗಿ ಭಾರತ ಬ್ರಿಟಿಷರ ಪರವಾಗಿ ನಿಲ್ಲಬೇಕು ಎಂದವರು ಬಯಸಿದರು.

ಸಹಜವಾಗಿ ಸುಭಾಷ್‌ ಚಂದ್ರ ಭೋಸರ ಲೆಕ್ಕಾಚಾರಕ್ಕೂ,ಗಾಂಧೀಜಿಯವರ ಲೆಕ್ಕಾಚಾರಕ್ಕೂ ವ್ಯತ್ಯಾಸವಿತ್ತು ಬೇರೆಯಾಗಿತ್ತು. ಗಮನಿಸಬೇಕಾದ ಸಂಗತಿ ಎಂದರೆ ಮುಂದಿನ ದಿನಗಳಲ್ಲಿ ಅವರು ದೇಶದ ಕಣ್ಣಿನಿಂದಲೇ ದೂರವಾದರು. ಹೀಗಾಗಿ ಭವಿಷ್ಯದ ನಾಯಕನ ಹುದ್ದೆಯಿಂದ ಮುಂಚಿತವಾಗಿಯೇ ಅವರು ನಿರ್ಗಮಿಸಿದಂತಾಯಿತು.

ಈ ಮಧ್ಯೆ ಗಾಂಧಿ ಹಾಗೂ ಪಟೇಲರ ಜೋಡಿ ಪ್ರಧಾನಿ ಹುದ್ದೆಗೆ ಗಂಭೀರವಾಗಿ ಪರಿಗಣಿಸಿದ ಹೆಸರುಗಳಲ್ಲಿ ಮೌಲಾನಾ ಆಜಾದ್‌ ಅವರ ಹೆಸರು ಒಂದು.

ಅಂದ ಹಾಗೆ ಮೌಲಾನಾ ಆಜಾದ್‌ ನಿಜಕ್ಕೂ ಮಹಾನ್‌ ಜ್ಞಾನಿ. ಈ ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಪರಿಣಾಮಕಾರಿ ಚಿಂತನೆಗಳಿದ್ದ ನಾಯಕ. ಆದರೆ ಅವರಿಗೊಂದು ಡ್ರಾ ಬ್ಯಾಕ್‌ ಇತ್ತು.

ಅದೆಂದರೆ, ಅವರು ಜನರ ಮುಂದೆ ಹೋಗಿ ನಿಲ್ಲಲು ಹಿಂಜರಿಯುತ್ತಿದ್ದರು. ಈ ನೆಲದ ನಾಯಕನಾದವನು ಜನರ ಮುಂದೆ ನಿಲ್ಲದೆ ಹೋದರೆ ಗತಿಯೇನು? ದೇಶದ ನಾಯಕನಾದವನು ಪದೇ ಪದೇ ಜನರ ಮುಂದೆ ನಿಲ್ಲಬೇಕಾಗುತ್ತದೆ. ಆದರೆ ಮೌಲಾನಾ ಆಜಾದ್‌ ಅವರಲ್ಲಿ ಈ ಗುಣದ ಕೊರತೆ ಇತ್ತು.

ಹೀಗಾಗಿ ಗಾಂಧಿ ಹಿಂಜರಿದರು. ಒಂದು ಹಂತದಲ್ಲಿ ಹಿರಿಯ ನಾಯಕರೊಬ್ಬರು ಬಂದು, ಮೌಲಾನಾ ಆಜಾದ್‌ ಅವರನ್ನು ಪ್ರಧಾನಿ ಹುದ್ದೆಗೆ ಪರಿಗಣಿಸಿದರೆ ಬಹಳ ಒಳ್ಳೆಯ ಆಯ್ಕೆ ಆಗಲಿದೆ ಎಂದಾಗ ಗಾಂಧಿ ಹಾಗೂ ಪಟೇಲರಿಬ್ಬರೂ: ಅವರನ್ನು ಪ್ರಧಾನಿ ಮಾಡಿದರೆ ಜನರ ಮುಂದೆ ಹೋಗಿ ನಾವು ನಿಲ್ಲಬೇಕಾಗುತ್ತದೆ. ಹಾಗಾಗುವುದು ಸೂಕ್ತವಲ್ಲ ಎಂದುಬಿಟ್ಟರು.

ಇದಾದ ನಂತರ ಈ ನಾಯಕರ ಮುಂದೆ ಪರಿಗಣಿತವಾದ ಬಹುಮುಖ್ಯ ಹೆಸರುಗಳಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಹೆಸರು ಕೂಡಾ ಒಂದು. ರಾಜಗೋಪಾಲಾಚಾರಿ ಕೂಡಾ ಬಹುದೊಡ್ಡ ನಾಯಕ.

ಆದರೆ ಅವರ ಹಿಂದಿದ್ದುದು ಈ ದೇಶದ ರಾಜ-ಮಹಾರಾಜರು, ಜಮೀನ್ದಾರರು. ಹೀಗಾಗಿ ಅವರನ್ನು ಪ್ರಧಾನಿ ಹುದ್ದೆಗೆ ತಂದರೆ ಈ ದೇಶದ ಸಾಮಾನ್ಯ ಜನರ ಗತಿಯೇನಾಗಬಹುದು?ಏಂಬ ಪ್ರಶ್ನೆ ಈ ನಾಯಕರನ್ನು ಕಾಡತೊಡಗಿತು.

ಹೀಗಾಗಿ ಪ್ರಧಾನಿ ಹುದ್ದೆಯ ರೇಸಿನಿಂದ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಹೆಸರು ಹೊರಬಿತ್ತು. ಹೀಗೆ ಹಲವು ಹೆಸರುಗಳ ನಡುವೆ ರೇಸಿನಲ್ಲಿ ಉಳಿದ ಪ್ರಮುಖ ಹೆಸರೆಂದರೆ ಜವಾಹಲರಾಲ್‌ ನೆಹರೂ.

ಅಂದ ಹಾಗೆ ನೆಹರೂ ಅವರಿಗೆ ಬಂಡವಾಳಷಾಹಿ ವ್ಯವಸ್ಥೆ ಹಾಗೂ ಕಮ್ಯೂನಿಸ್ಟ್‌ ವಿಚಾರಧಾರೆಗಳ ಬಗ್ಗೆ ತಮ್ಮದೇ ವಿಶಿಷ್ಟ ನಿಲುವಿತ್ತು. ಯಾರನ್ನೇ ಆಗಲಿ, ಸಾರಾಸಗಟಾಗಿ ಒಪ್ಪಿಕೊಂಡರೆ ಜನ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂಬ ಅರಿವಿತ್ತು. ಬಂಡವಾಳಷಾಹಿಗಳ ಬಲ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಅದೇ ರೀತಿ ಕಮ್ಯೂನಿಸಂನ ಬಿಗಿ ಮನುಷ್ಯನ ಬದುಕು ಉಸಿರುಕಟ್ಟುವಂತೆ ಮಾಡುತ್ತದೆ ಎಂಬ ನಿಲುವು ಇತ್ತು.

ಹೀಗಾಗಿ ಅವರು ಎರಡೂ ವ್ಯವಸ್ಥೆಗಳನ್ನು ಮಿಶ್ರಣ ಮಾಡಿ ಸಮಾಜವಾದಿ ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಲು ಬಯಸಿದ್ದರು. ಅವರಿಗೆ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಕೈಗಾರಿಕೀಕರಣದ ಅಗತ್ಯವಿದೆ ಎಂಬುದು ಗೊತ್ತಿತ್ತು. ಹಾಗೆಯೇ ಸಮಾಜವಾದಿ ನೆಲೆಯಲ್ಲಿ ದೇಶವನ್ನು ಮುನ್ನಡೆಸದಿದ್ದರೆ ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತದೆ ಎಂಬುದೂ ಗೊತ್ತಿತ್ತು.

ಹೀಗಾಗಿ ಅವರು ಬಂಡವಾಳಷಾಹಿಗಳನ್ನಾಗಲೀ,ಕಮ್ಯೂನಿಸ್ಟರನ್ನಾಗಲಿ ಸಾರಾಸಗಟಾಗಿ ಒಪ್ಪದೆ ಆ ವ್ಯವಸ್ಥೆಗಳಲ್ಲಿದ್ದ ಒಳ್ಳೆಯದನ್ನು ಗ್ರಹಿಸಿ ತಮ್ಮದೇ ಮಾರ್ಗ ಹಿಡಿದರು. ಅವರ ಈ ನಿಲುವು ಗೊತ್ತಿದ್ದುದರಿಂದಲೇ ಗಾಂಧಿ ಹಾಗೂ ಪಟೇಲರಿಗೆ ಈ ದೇಶವನ್ನು ಮುನ್ನಡೆಸುವ ಸೂಕ್ತ ವ್ಯಕ್ತಿಯಾಗಿ ಅವರು ಕಂಡರು.

ಅವರು ಮಾತ್ರ ಅಂತಲ್ಲ, ಆಗಿನ ದೊಡ್ಡ, ದೊಡ್ಡ ನಾಯಕರಿಗೂ ನೆಹರೂ ಅವರನ್ನು ದೇಶದ ಪ್ರಧಾನಿ ಹುದ್ದೆಯ ಮೇಲೆ ಕೂರಿಸುವುದು ಸೂಕ್ತ ಎಂಬ ಬಾವನೆಯಿತ್ತು. ಉತ್ತರ ಭಾರತೀಯರಲ್ಲದೆ ದಕ್ಷಿಣ ಭಾರತೀಯರಿಗೂ ನೆಹರೂ ಒಪ್ಪಿತ ನಾಯಕ ಎಂಬುದು ಅರ್ಥವಾಗಿತ್ತು. ಹೀಗಾಗಿ ಈ ಎಲ್ಲವೂ ಒಗ್ಗೂಡಿ ನೆಹರೂ ಈ ದೇಶದ ಮೊದಲ ಪ್ರಧಾನಿಯಾದರು.

ಅಂದ ಹಾಗೆ ಅವರು ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಮುನ್ನ ನಡೆದ ಸುಧೀರ್ಘ ಹುಡುಕಾಟ ಸಣ್ಣದಲ್ಲ. ಹೀಗಾಗಿ ಯಾವುದೇ ಮಾತನಾಡುವಾಗ ಏಕಾಏಕಿಯಾಗಿ ಒಂದು ತೀರ್ಮಾನಕ್ಕೆ ಬಂದು ಮಾತನಾಡಬಾರದು ವಿಠ್ಠಲಮೂರ್ತಿ.

ಅದರಲ್ಲೂ ಮುಖ್ಯವಾಗಿ ಪ್ರಧಾನಿ ಹುದ್ದೆಯ ರೇಸಿನಿಂದ ದೂರವೇ ಇದ್ದ ಪಟೇಲರನ್ನು ಎಳೆದುಕೊಂಡು ಬರುವ ಮುನ್ನ ಇತಿಹಾಸದ ಗರ್ಭದಲ್ಲಿ ಅಡಗಿರುವ ಇಂತಹ ಸಂಗತಿಗಳನ್ನು ಗ್ರಹಿಸಬೇಕು. ಇಲ್ಲದಿದ್ದರೆ ಇಂತಹ ವಿಷಯಗಳಲ್ಲಿ ಅನಗತ್ಯ ಕಿತ್ತಾಟಗಳಿಗೆ ಕಾರಣವಾಗುತ್ತಾ,ಮನಸ್ಸುಗಳನ್ನು ಮಂಕುಗೊಳಿಸುತ್ತಾ, ದೇಶದ ಮುಖದ ತುಂಬ ಕಪ್ಪು ಚುಕ್ಕೆಗಳು ಕೂರುವಂತೆ ಮಾಡುತ್ತವೆ.

ಅಷ್ಟು ಹೇಳಿದ ಎಂ.ಪಿ.ನಾಡಗೌಡರು ಮತ್ತೆ ಮರದ ಕಟ್ಟೆಯ ನೆಲವನ್ನು ಸವರುತ್ತಾ ಅದರ ತಂಪನ್ನು ಆಸ್ವಾದಿಸತೊಡಗಿದರು. ನಾನು ಅವರನ್ನೇ ಬಹುಹೊತ್ತು ನೋಡುತ್ತಾ ಕುಳಿತಿದ್ದೆ.

October 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಗಾಂಧಿಯ ತಲೆ ಕಂಡರಾಗದ ಹಾಗೆ ಮಾತನಾಡುವವರು ಅದಕ್ಕೆ ಪೂರಕವಾಗಿ ಸದಾ ಉಲ್ಲೇಖಿಸುವ ಮೂರು ಅಂಶಗಳಲ್ಲಿ ಈ ಮೊಮ್ಮೊದಲ ಪ್ರಧಾನಿಯ ಆಯ್ಕೆಯೂ ಒಂದು. ಇಲ್ಲಿ ನಾಡಗೌಡರು ಹೇಳಿದ್ದೆಂದು ವಿಠಲಮೂರ್ತಿಯವರು ಬರೆದಿರುವ ಲೇಖನ ಈ ಆಕ್ಷೇಪಣೆಗೆ ಉತ್ತರವೇನೋ ‌ಹೌದು. ‌ ಆದರೆ ತಕತಕ ಕುಣಿಯುತ್ತಿರುವವರು ನಂಬರು. ಮಹಾತ್ಮರ ಕೈಯಲ್ಲಿ ‌ಒಂದಲ್ಲ ಎರಡು ಮೂರು ಪತ್ರಿಕೆಗಳಿದ್ದುವು. ಅವರು ಈ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಜನರ ಜೊತೆ ಹಂಚಿಕೊಳ್ಳ ಬಹುದಾಗಿತ್ತಲ್ಲವೇ? ಸತ್ಯ ಹೇಳಲು ಗಾಂಧಿಯವರಿಗೆ ಹಿಂಜರಿಕೆಯೆಂಬುದು ಇರಲೇ ಇಲ್ಲ. ಅವರು ಇಲ್ಲಿ ಬರೆದಂತೆ ಚರ್ಚಿತ ವಾಗಿದ್ದರೆ , ಅದನ್ನು ಜನತೆಯ ಮುಂದಿಡುವುದರಲ್ಲಿ ತೊಂದರೆಯೆ ಇರಲಿಲ್ಲ. ನನಗೆ ಹೀಗನ್ನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: