ಸುಂದರವಾದ ‘ಯಂಗ್’ ಪುಟ್ಟಮ್ಮತ್ತೆ ಸಿಕ್ಕಿಬಿಟ್ಟರು…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಬಹುಶಃ ಅದು 2002, ರಂಗ ಗೆಳೆಯ ಸೀನಾ (ಶ್ರೀನಿವಾಸ್) ನಾವೆಲ್ಲಾ ಏಕೆ ಒಂದು ಫೋಟೋ ಸೆಷನ್ ಮಾಡಬಾರದು ಹೇಗೂ ನನ್ನ ಗೆಳೆಯ “ನವೀನ್” ಒಳ್ಳೇ ಫೊಟೋಗ್ರಾಫರ್ ಅಂತಾ ಕೇಳಿದಾಗ, ನಾವೆಲ್ಲಾ ರಂಗ ಮಿತ್ರರು ಬಹಳ ಖುಷಿಯಾಗಿ , ಕೂಡಲೇ ದಿನವನ್ನೂ ನಿಗದಿಪಡಿಸಿದೆವು..

ಆದರೆ ಸಮಸ್ಯೆಯಾದದ್ದು ಬೆಳಿಗ್ಗೆ 6 ಗಂಟೆಯ ಒಳಗೇ ತಯಾರಾಗಿ ಹೊರಡಬೇಕು ಅಂದಾಗ, ಅದು ನವೀನ್ ಅವರ ಸೂಚನೆಯಾಗಿತ್ತು ಹೇಗೋ ಕಷ್ಟಪಟ್ಟು ಹೊರಟೇಬಿಟ್ಟೆವು…. ಹುಡುಗರಿಗಂತೂ ಶರ್ಟ್, ಗಾಗಲ್ಸ್ ಕೂಡಾ ಸೀನನದೇ….

ನಾನು ಒಂದೆರಡು ಸೀರೆ ತೆಗೆದುಕೊಂಡು, ಇನ್ನೂ ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಕರೆದೊಯ್ದದ್ದು ಸೀದಾ ಕಬ್ಬನ್ ಪಾರ್ಕಿಗೆ. ಅಂದು ಅಲ್ಲಿ ನವೀನ್ ಅವರು ತೆಗೆದ ಫೋಟೋಗಳನ್ನು ನೋಡಿದ ಮೇಲೆ ಗೊತ್ತಾದದ್ದು ಬೆಳಗಿನ ಬೆಳಕಿನ ಫೋಟೋಗ್ರಫಿಯ ಮಹಿಮೆ.., ಅಂದು ನವೀನ್ ಅವರು ತೆಗೆದ ನಮ್ಮೆಲ್ಲರ ಅದ್ಭುತ ಫೋಟೋಗಳು ಮುಂದೆ ನಾವು ಮಾಡಬಹುದಾದ ಸಿನೆಮಾದ ಮುನ್ನುಡಿಯಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ.. ..

ಹೌದು, ನಾನು ಹೇಳಹೊರಟಿರುವುದು ಮತ್ಯಾರೂ ಅಲ್ಲ ನಮ್ಮ ಸಿನಿಮಾಟೋಗ್ರಾಫರ್ ಅಥವಾ ಡಿ. ಓ‌. ಪಿ. “ನವೀನ್ ಕುಮಾರ್ ಐ” ಅವರ ಬಗ್ಗೆ…. ಅಮ್ಮಚ್ಚಿಗೆ ತಂತ್ರಜ್ಞರನ್ನು ಹುಡುಕುವ ಸಂದರ್ಭದಲ್ಲಿ ಹಲವಾರು ಛಾಯಾಗ್ರಾಹಕರನ್ನು ಪಟ್ಟಿ ಮಾಡುತ್ತಾ ಹೋಗುವಾಗ ಇದ್ದಕ್ಕಿದ್ದಂತೆ, ಅರೆ, ಬೇರೆ ಯಾರೋ ಏಕೆ ನಮ್ಮ ನವೀನ್ ಅವರೇ ಇದ್ದಾರಲ್ಲ! ಅವರು ಈಗಾಗಲೇ ಎರಡು ಸಿನೆಮಾಗೆ ಡಿ .ಓ. ಪಿ. ಆಗಿ ಕೆಲಸ ಮಾಡಿದ್ದಾರಂತೆ ಅಂತಾ ನಮ್ಮಲ್ಲೇ ಮಾತುಕತೆಯಾಗಿ ಕೂಡಲೇ , ನರೇಂದ್ರಬಾಬು (ಕಬ್ಬಡ್ಡಿ) ಮತ್ತು ಗೆಳೆಯ ಸೀನನ ಮೂಲಕ ನವೀನ್ ಅವರ ಸಂಪರ್ಕ ಪಡೆದು ಭೇಟಿಯಾಗೇಬಿಟ್ಟೆವು..,

ಅವರಾಗಲೇ ಎರಡು ಸಿನೆಮಾ ಮುಗಿಸಿ “ಮಫ್ತಿ” ಸಿನೆಮಾದ ಶೂಟಿಂಗ್ನಲ್ಲಿದ್ದರು…. ಆದರೆ ನಾವು ನಮ್ಮ ಸಿನೆಮಾದ ಬಗ್ಗೆ ಹೇಳಿದ ಕೂಡಲೇ ಹಳೆಯ ಪರಿಚಯದ ಕಾರಣವಾಗಿ ಕೂಡಲೇ ಒಪ್ಪಿಕೊಂಡು, ಸಿನೆಮಾದ ಚರ್ಚೆಗಾಗಿ ಎಡಿಟಿಂಗ್ ರೂಮ್ ಗೆ ಆಹ್ವಾನಿಸಿದ್ದರು… ಅಲ್ಲಿ ಸಿಕ್ಕಿದ್ದು ನಮಗೆ ಡಬಲ್ ದಮಾಕ…

ಡಿ ಓ ಪಿ ಜೊತೆಗೆ ಅವರ ಗೆಳೆಯರೇ ಆದ ಎಡಿಟರ್ “ಹರೀಶ್ ಕೊಮ್ಮೆ” ಯವರನ್ನು ನಮಗೆ ಪರಿಚಯಿಸಿದರು .. ನಮ್ಮವರೇ ಆದ ಛಾಯಾಗ್ರಾಹಕ ನವೀನ್ ಜೊತೆ ಕ್ಷಣದಲ್ಲೇ ನಮ್ಮವರಾದ” ಹರೀಶ್” ಅಮ್ಮಚ್ಚಿ ತಂಡ ಸೇರಿಬಿಟ್ಟರು….

ಅಮ್ಮಚ್ಚಿ ಸಿನೆಮಾ ನೋಡಿದವರೆಲ್ಲಾ ಸಿನೆಮಾಟೋಗ್ರಫಿ ಬಗ್ಗೆ ಹೇಳದಿರುವುದಿಲ್ಲ . ಸಾಮಾನ್ಯ ನೋಡುಗನೂ ಕೂಡಾ ಸಿನೆಮಾಟೋಗ್ರಫಿ ಬಗ್ಗೆ ಮಾತನಾಡುವಂತೆ ಮಾಡಿದ್ದು “ನವೀನ್” ಅವರ ಕೈಚಳಕ…

ಹದಿನೈದು ವರ್ಷದ ಹಿಂದೆ ಇದ್ದ ಬೆಳಿಗ್ಗೆ 6 00 ಗಂಟೆ ಒಳಗೆ ಶೂಟ್ ಸ್ಟಾರ್ಟ್ ಮಾಡುವ ನವೀನ್ ಅವರ ಪದ್ದತಿ ಸ್ವಲ್ಪ ಬದಲಾಗಿ ಈಗ ಬೆಳಿಗ್ಗೆ 5 00 ಗಂಟೆಯಾಗಿಬಿಟ್ಟಿತ್ತು….ಅಂದು ಆರು ಗಂಟೆಗೆ ಹೊರಡಲು ಕಷ್ಟಪಟ್ಟ, ನಾನು ಈಗ 4 00 ಗಂಟೆಗೇ ಎದ್ದು ಖುಷಿಯಿಂದ ತಯಾರಾಗಿ ಹೊರಡುವಂತೆ ಮಾಡಿದವಳು ‘ಅಮ್ಮಚ್ಚಿ’ … ನವೀನ್ ಅವರು ದಿನವೂ ನಸುಕಿನಲ್ಲೇ ಜಾಗ್ ಮಾಡುವಾಗ ಇಡೀ ಕರ್ನಿರೆ ಗ್ರಾಮವನ್ನು ಸ್ಕ್ಯಾನ್ ಮಾಡಿ ಶೂಟಿಂಗ್ ಗೆ ಸೂಕ್ತವಾದ ಜಾಗಗಳನ್ನೆಲ್ಲಾ ಗುರುತು ಮಾಡಿಕೊಳ್ಳುತ್ತಿದ್ದರು….

ಪ್ರತಿದಿನ ಬೆಳಗಿನ ಜಾವ “ಹೊಳೆವ ಹೊಳೆಯಾಚೆಗೆ” ಹಾಡಿನ ಮಾಂಟೇಜಸ್ ಶೂಟಿಂಗ್ ಆಗುತ್ತಿತ್ತು ಒಂದು, ನಾನು shot ಹೇಳುವಾಗ ನವೀನ್ ಅವರು ಅದಕ್ಕೆ ತಕ್ಕ ಜಾಗ ಹೇಳುವುದು, ಇಲ್ಲ ಅವರು ಕರೆದುಕೊಂಡು ಹೋದ ಜಾಗಕ್ಕೆ ಸರಿಯಾಗಿ ನಾನು shot compose ಮಾಡುವುದು… ಹೀಗೆ ಚಿತ್ರೀಕರಣವಾದದ್ದು ಚಿತ್ರದ ಮೊದಲ ಹಾಡು….

ಸಿನೆಮಾ ರಿಲೀಸ್ ಆಗಿ, ಹಾಡಿನ ಪ್ರತಿಯೊಂದು shot ಗಳೂ ಒಂದೊಂದು ಪೈಟಿಂಗ್ ನಂತೆ ಎನ್ನುವ ಪ್ರತಿಕ್ರಿಯೆ ಅನೇಕರಿಂದ ಬಂದಾಗ, ದಿನವೂ ಬೆಳಗಿನ ಜಾವ ಸೂರ್ಯ ಹುಟ್ಟುವ ಮೊದಲೇ ಕ್ಯಾಮರಾ ಹಿಡಿದು ಹೊರಡುತ್ತಿದ್ದ ಇಡೀ ತಂಡದ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತೆನಿಸಿತ್ತು…

ಇಂತಹ ಅನೇಕ ಶೂಟಿಂಗ್ ಅನುಭವಗಳನ್ನು ಮೆಲುಕು ಹಾಕುವ ಮುನ್ನ ಹೇಳಲೇಬೇಕಾದ ಮತ್ತೊಂದು ಹೆಸರು “ಹರೀಶ್ ಕೊಮ್ಮೆ” ನವೀನ್ ಅವರಿಂದಲೇ ಪರಿಚಯವಾದ ಎಡಿಟರ್ ‘ಹರೀಶ್,’ ಕೇವಲ ಎಡಿಟರ್ ಆಗಿ ಉಳಿಯದೇ ನಮ್ಮ ತಂಡದ ಟೆಕ್ನಿಕಲ್ ಸಪೋರ್ಟರ್ ಆಗಿಬಿಟ್ಟರು…. ಲೊಕೇಶನ್ ನೋಡುವಾಗಿನಿಂದ ಶುರುವಾಗಿ , ಸಿನೆಮಾ ರಿಲೀಸ್ ಆಗಿ ಎರಡು ವರ್ಷವಾದರೂ, ಈಗಲೂ ಏನೇ ಡೌಟ್ ಬಂದರೂ, ಏನೇ ಸಹಾಯ ಬೇಕಿದ್ದರೂ ನಮ್ಮ ಕೈಗಳು ತನಗೆ ತಾನೇ ಫೋನ್ ನಲ್ಲಿರುವ ಹರೀಶ್ ನಂಬರ್ ಕಡೆಗೆ ಹೋಗಿ ಬಿಡುತ್ತದೆ..

ಹರೀಶ್ ಮತ್ತು ನಮ್ಮ ತಂಡದ ಅನುಭವಗಳನ್ನು ಹೇಳುತ್ತಾ ಹೋದರೆ ಬಹುಶಃ ಇನ್ನೊಂದಾರು ಎಪಿಸೋಡ್ ಅದೇ ಬರೆಯಬೇಕೆನಿಸುವಷ್ಟು ಆತ್ಮೀಯ ಸಂಬಂಧ ಹರೀಶ್ ಮತ್ತು ಅಮ್ಮಚ್ವಿ ತಂಡದ್ದು… ಹಾಗೇ ನವೀನ್ ಜೊತೆ ಬಂದ ಅವರ ಸಹಾಯಕರು, ಕ್ಯಾಮೆರಾ ಜೊತೆಗೆ ಬಂದ ಸಹಾಯಕರ ತಂಡ . ಅಲ್ಲಿನವರೇ ಆದ ಯುನಿಟ್ ನವರು ಬೆಂಗಳೂರಿನಿಂದ ಬಂದ ಪ್ರೊಡಕ್ಷನ್ ನವರು ಎಲ್ಲರೂ ಬಹುಬೇಗ ಅಮ್ಮಚ್ಚಿಗೆ ಹೊಂದಿಕೊಂಡುಬಿಟ್ಟರು…

ಎಪ್ಪತ್ತು ಎಂಬತ್ತರ ದಶಕದ ಕತೆಯಾದ್ದರಿಂದ ವಸ್ತ್ರವಿನ್ಯಾಸ ಕೂಡ ಆ ಕಾಲದ್ದೇ ಇರಬೇಕು. ನಮ್ಮ ಪುಟ್ಟಮ್ಮತ್ತೆ, ಉರಾಳರ ಅಮ್ಮ “ರಮಾದೇವಿ” ಬಹುಶಃ ಅಮ್ಮಚ್ಚಿಯ ಸಮಕಾಲೀನರು. ಜೊತೆಗೆ ಅವರಿಗೆ ಯಕ್ಷಗಾನಕ್ಕೆ ಕಾಸ್ಟ್ಯೂಮ್ಸ್ ಗಳನ್ನು ಹೊಲೆದುಕೊಡುವ ಹವ್ಯಾಸವೂ ಇದ್ದುದರಿಂದ ನಾಟಕ ಮತ್ತು ಸಿನೆಮಾದ ವಸ್ತ್ರವಿನ್ಯಾಸದ ಜಾವಾಬ್ದಾರಿಯೂ ಅವರದ್ದೇ ಆಯಿತು. ಶೇಶಮ್ಮನ ‘ಹೊರನೆರಿಗೆ ಸೀರೆಯ ಶೈಲಿ’ ಮತ್ತು ಅಮ್ಮಚ್ಚಿಯ ಕನಸಿನ ‘ಲಂಗದಾವಣಿ’ಗಳು ರಮಾದೇವಿಯವರ ಕನಸು ಮತ್ತು ಅನುಭವಗಳ ಸಮಾಗಮದಿಂದ ಮೂಡಿದ ವಿನ್ಯಾಸ…

ಸೀರೆಗಳು ಹೊಸದಾದರೆ ಸಹಜತೆ ಇರುವುದಿಲ್ಲವೆಂಬ ಕಾರಣಕ್ಕೆ ನನ್ನ ಅತ್ತಿಗೆಯ ಅಮ್ಮ, ಶೇಷಮ್ಮನಿಗಾಗಿ ಅವರಲ್ಲಿದ್ದ ಹಲವಾರು ಒಂಭತ್ತು ಗಜದ ಸೀರೆಗಳನ್ನು ಕೊಟ್ಟರೆ, ನಾದಿನಿಯ ಅಮ್ಮನ ಬಣ್ಣ ಬಣ್ಣದ ಸೀರೆಗಳು ಅಮ್ಮಚ್ಚಿಗೆ ಲಂಗಗಳಾದವು.. ಉಳಿದ ಕಾಸ್ಟ್ಯೂಮ್ಸ್ ಮತ್ತು ಆಭರಣಗಳಿಗಾಗಿ ನಮ್ಮ ತಂಡ (ರೇಖಾ ಭಾರತಿ, ಕಶ್ಯಪ್, ವೇಣು) ಗಾಂಧಿಬಜಾರ್ , ಚಿಕ್ಕಪೇಟೆ ಗಳಿಗೆ ಹೋಗಿ purchase ಮಾಡಿ ಮನೆಗೆ ತಂದು ಅವುಗಳನ್ನು ತೆಗೆದು ನೋಡಿ ಹರಡಿಕೊಂಡು, ಜೋಡಿಸುತ್ತಿದ್ದ ರೀತಿಗೆ , ನಮ್ಮ ಸಡಗರಗಳಿಗೆ ವೇಣು” ಇದು ಮಗಳ ಮದುವೆ purchase ತರಹ ಇದೆಯಲ್ಲಮ್ಮ ” ಅಂದಿದ್ದು, ಪ್ರತಿಬಾರಿ ಸಿನೆಮಾದಲ್ಲಿನ ವೇಷ ಭೂಷಣಗಳನ್ನು ನೋಡಿದಾಗ ನೆನಪಾಗುತ್ತದೆ…

ಮೊನ್ನೆಯಷ್ಟೇ, ವಸ್ತ್ರವಿನ್ಯಾಸಕಿ‌, ‘ಮಾನಸಾ’ ಕಾಲ್ ಮಾಡಿ ತುಂಬಾ ಎಕ್ಸೈಟ್ ಆಗಿ “ಚಂಪಾ ನಿಮಗೊಂದು ವಿಷಯ ಹೇಳಬೇಕು, ಚಾನೆಲ್ ನಿಂದ ಒಬ್ಬರು ಕಾಲ್ ಮಾಡಿದ್ದರು ಅವರ ಒಂದು ಧಾರಾವಾಹಿಗೆ ಅಮ್ಮಚ್ಚಿಯೆಂಬ ನೆನಪು ಸಿನೆಮಾ ನೋಡಿದ್ದೀರಲ್ಲಾ ಅಂತಹುದೇ ಕಾಸ್ಟ್ಯೂಮ್ಸ್ ಬೇಕು ಅಂತ ಹೇಳಿದರು” ಅಂದಾಗ ಎಕ್ಸೈಟ್ ಆಗುವ ಸರದಿ ನಮ್ಮದು. ಅಂದಿನ ಆ ನಮ್ಮೆಲ್ಲಾ ಸಂಭ್ರಮ, ಸಡಗರಗಳಿಗೆ ಬೆಲೆ ಸಿಕ್ಕಿತು ಅನಿಸಿತ್ತು…..

ಕಪ್ಪಣ್ಣ ಸರ್, ಒಮ್ಮೆ ನನಗೆ ಚಾಲೆಂಜ್ ಮಾಡಿದ್ದು, “ನಾವು ಕಾಕನ ಕೋಟೆ ಸಿನೆಮಾ ಮಾಡುವಾಗ ಬಹುತೇಕ ಕಲಾವಿದರೆಲ್ಲಾ ರಂಗಭೂಮಿಯವರೇ, ನೋಡೋಣ ನೀವು ಹೇಗೆ ಮಾಡುತ್ತೀರಾ ” ಅಂತಾ. ಅವರು ಆ ಚಾಲೆಂಜ್ ಮಾಡುವ ಹೊತ್ತಿಗಾಗಲೇ ಸಿನೆಮಾದ ಕಲಾವಿದರ ಆಯ್ಕೆ ಆಗಿಹೋಗಿತ್ತು. ಕೆಲವು ಟೆಕ್ನಿಕಲ್ ಕಾರಣಗಳಿಗಾಗಿ ಒಂದಿಬ್ಬರನ್ನು ಬಿಟ್ಟು ಉಳಿದಂತೆ ಎಲ್ಲ ಕಲಾವಿದರೂ ನಾಟಕದಲ್ಲಿ ಅಭಿನಯಿಸಿದವರೇ , ಸಿನೆಮಾದಲ್ಲೂ ಅಭಿನಯಿಸಬೇಕೆಂದು ನಿರ್ಧಾರವಾಗಿತ್ತು.

ಆದರೆ ಪುಟ್ಟಮ್ಮತ್ತೆಯ ಪಾತ್ರಕ್ಕೆ ಉರಾಳರೇ ಬೇಕಾ ಬೇಡವಾ ಎಂಬ ನಿರ್ಧಾರದ ಬಗ್ಗೆ ತಂಡದಲ್ಲಿ ಗೊಂದಲ ಶುರುವಾಗಿತ್ತು ನಾಟಕಕ್ಕೆ ಸರಿ, ಸಿನೆಮಾಗೆ ಸರಿಯಾಗುವುದಿಲ್ಲ ಎಂಬುದು ಉರಾಳರೂ ಸೇರಿದಂತೆ ಕೆಲವರ ಅಭಿಪ್ರಾಯವಾಗಿತ್ತು … ಗೊಂದಲ ಕೇವಲ ತಂಡದ್ದು.. ವಯಕ್ತಿಕವಾಗಿ, ಆ ಪಾತ್ರ ಉರಾಳದ್ದೇ ಎಂಬುದು ನನ್ನ ನಿಲುವಾಗಿತ್ತು.

ನನ್ನ ನಿಲುವಿಗೆ ಜೊತೆಯಾದವರು ವೈದೇಹಿ ಮೇಡಂ ” ನೀನು ಯಾವ ಪಾತ್ರ ಬದಲು ಮಾಡಿದರೂ ಅಡ್ಡಿಯಿಲ್ಲ ಪುಟ್ಟಮ್ಮತ್ತೆ ಮಾತ್ರ ಉರಾಳರೇ ಮಾಡಬೇಕು ” ಎಂಬಲ್ಲಿಗೆ ತಂಡದ ಗೊಂದಲಕ್ಕೆ ಮುಕ್ತಿ ಸಿಕ್ಕಿತ್ತು..

ಉರಾಳರೇ ಪುಟ್ಟಮತ್ತೆ ಎಂದು ಗಟ್ಟಿಯಾಗಿ ಹೇಳಿಬಿಟ್ಟಿದ್ದು ಹೌದು,. ಆದರೆ ನನ್ನ ಆತಂಕವಿದ್ದದ್ದು ಅವರ ಮೇಕಪ್ ಬಗ್ಗೆ.. ಸಿನೆಮಾದಲ್ಲಿ ಕಲಾವಿದರಿಗೆ ಮೇಕಪ್ ಬೇಡವೇ ಬೇಡವೆಂದು ನಿರ್ಧರಿಸಿಯಾಗಿತ್ತು. ಆದರೆ ‘ಉರಾಳ’ರನ್ನು ‘ಪುಟ್ಟಮ್ಮತ್ತೆ’ಯಾಗಿಸಬೇಕಲ್ಲಾ.! ಕೆಲವು ಪ್ರೊಫೆಷನಲ್ ಮೇಕಪ್ ಕಲಾವಿದರನ್ನು ಭೇಟಿಯಾದಾಗ ಒಬ್ಬರು, ಇದು ಖಂಡಿತ ಸರಿಯಾಗುವುದಿಲ್ಲ ಮಾಡಲೇಬೇಡಿ ಎಂದರೆ, ಮತ್ತೊಬ್ಬರು ದಿನಕ್ಕೆ ಹದಿನೆಂಟು ಸಾವಿರ, ಜೊತೆಗೆ ಕಾರವಾನ್ ಬೇಕು ಅಂತ ಹೇಳಿ ನಮ್ಮನ್ನು ಬೆಚ್ಚಿಬೀಳಿಸಿದ್ದರು.

( ಮುಂದೆ, ಶೂಟಿಂಗ್ ಮನೆಯ ಅಂಗಳದಲ್ಲಿ ಮುರುಕು ಸೋಫಾವನ್ನೇ ಕಾರವಾನ್ ಅಂತ ಕರೆಯುತ್ತಾ ಆದರ ಮೇಲೆ ಮಲಗಲು ಜಗಳವಾಡುತ್ತಿದ್ದ ಕಲಾವಿದರನ್ನು ಕಂಡಾಗ ಇವರು ಹೇಳಿದ್ದು ನೆನಪಾಗಿ, ಒಳಗೇ ನಗುತ್ತದ್ದೆವು. ) ಮತ್ತೊಮ್ಮೆ, ಯಾರೋ ಹೇಳಿದರು ಅಂತಾ ಪಾಪ ಉರಾಳರ ಮುಖಕ್ಕೆ ವ್ಯಾಕ್ಸ್ ಮಾಡುವ ಪ್ರಯತ್ನವೂ ಆಯಿತು.

ಉರಾಳರ ಮುಖ ಕೆಂಪಗಾಗಿ ಭಯಂಕರ ಉರಿಯಾದದ್ದು ಬಿಟ್ಟರೆ, ಯಾವ ಪ್ರಯೋಜನವೂ ಆಗಲಿಲ್ಲ. ಆತಂಕದಲ್ಲಿದ್ದ ನನಗೆ, ತಕ್ಷಣ ನೆನಪಾದದ್ದು ‘ಹರಿಕತಾಪ್ರಸಂಗ’ ಸಿನೆಮಾದ ‘ಶೃಂಗ’..

ಚೂರೂ ಗಡ್ಡ ಕಾಣದ ಹಾಗೆ ನೀನು ಹೇಗೆ ಮೇಕಪ್ ಮಾಡಿಕೊಂಡೆ ಎಂಬ ನನ್ನ ಪ್ರಶ್ನೆಗೆ ಅವನು ಕಳುಹಿಸಿದ್ದು ನಟಿ ‘ಉಜ್ವಲಾ’ ಹತ್ತಿರ…. ಅವರು, ತಾವು ಕಲಿತ ರೀತಿ, ಉರಾಳರಿಗೆ ಮೇಕಪ್ ಮಾಡಿ ತೋರಿಸಿದರು, ಪ್ರಕಾಶ್ ಶೆಟ್ರು, ಅದನ್ನು ಕಲಿತು ಒಮ್ಮೆ ಪ್ರಯತ್ನಿಸಿ, ನಮ್ಮ ಹಿತೈಶಿಗಳಾದ ನಿರ್ದೇಶಕ ಗೋಪಿ ಪೀಣ್ಯ ಅವರ ಸಹಾಯದಿಂದ ಟೆಸ್ಟ್ ಶೂಟ್ ಮಾಡಿದಾಗ, ಸುಂದರವಾದ ‘ಯಂಗ್ ‘ ಪುಟ್ಟಮ್ಮತ್ತೆ ಸಿಕ್ಕಿಬಿಟ್ಟರು…

ಹೇಗೋ ಪುಟ್ಟಮ್ಮತ್ತೆ ಸಿಕ್ಕರಲ್ಲ ಕಡೆಗೆ ಮೇಕಪ್ ಆರ್ಟಿಸ್ಟ್ ಬಿಳಿ ರಾಮಕೃಷ್ಣ ಅವರ ಸಹಾಯದಿಂದ ಅವರನ್ನು ಮುದುಕಿ‌ಮಾಡಲು ಕಲಿತು ಪ್ರಕಾಶ್ ಶೆಟ್ಟಿ ಮೇಕಪ್ ಆರ್ಟಿಸ್ಟ್ ಆಗಿ ಬಡ್ತಿ ಪಡೆದರು…..

ಸಿನೆಮಾ ಶೂಟಿಂಗ್ ಸಮಯದಲ್ಲಿ ಯಾರಿಗೂ ಮೇಕಪ್ ಇಲ್ಲದಿದ್ದರೂ, ದುಬಾರಿ ಮೇಕಪ್ ಸೆಟ್ ನ ಕಿಟ್ ಒಂದನ್ನು ಹಿಡಿದು ರೆಡಿಯಾಗುತ್ತಿದ್ದ ಪುಟ್ಟಮ್ಮತ್ತೆ ಯನ್ನು ನೋಡಿದ ಎಲ್ಲರೂ, ಒಮ್ಮೆ “ಆಹಾ ಶೋಕಿ ಮುದುಕಿ”! ಅನ್ನುತ್ತಿದ್ದುದು, ಉರಾಳರು ನಾಚುತ್ತಾ ನಗಾಡುತ್ತಿದ್ದುದು ಸುಳ್ಳಲ್ಲ…

ಕೆಂಪು ಹೊರನೆರಿಗೆ ಸೀರೆ ಉಟ್ಟಕೂಡಲೇ ಬೆನ್ನು ಬಾಗಿಸಿ, ಥೇಟ್ ಪುಟ್ಟಮ್ಮತ್ತೆಯೇ ಆಗಿಬಿಡುತ್ತಿದ್ದ ಉರಾಳರು , ಕಟ್ ಹೇಳಿದ‌ ಕೂಡಲೇ ಸೀರೆ ಎತ್ತಿ ನಿಂತಾಗ, ಢಿ. ಓ ಪಿ. ನವೀನ್ ಜೊತೆಗೆ, ಇಡೀ ತಂಡ ನಗೆಗಡಲಲ್ಲಿ ಮುಳುಗುತ್ತಿದ್ದುದು ….ಎಲ್ಲಾ ನೆನಪುಗಳೂ ಇಡೀ ತಂಡವನ್ನು ಆವರಿಸಿಕೊಂಡುಬಿಟ್ಟಿದೆ…..

। ಮುಂದಿನ ವಾರಕ್ಕೆ ।

‍ಲೇಖಕರು ಚಂಪಾ ಶೆಟ್ಟಿ

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಹಹ್ಹಾ ,, ಸೊಗಸಾಗಿದೆ. ಒಂದು ಒಳ್ಳೆಯ ಸಿನಿಮಾದ ಹಿಂದೆ ಅದೆಷ್ಟು ಶ್ರಮ , ಒದ್ದಾಟ,,,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: