ಚೌ ಚೌ ಕಂಗ್‌ ನೀಲ್ಡಾ! ಆಹಾ,

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಕಂಗ್‌ ನೀಲ್ಡಾ ಹಿಮಪರ್ವತ ಸುಂದರಿ ಮತ್ತು ಇತರ ಕಥೆಗಳು!

ಸ್ಪಿತಿಯ ಅತ್ಯಂತ ಹಿಂದುಳಿದ, ಬೆರಳೆಣಿಕೆಯ ಮನೆಗಳಿರುವ ಲಾಂಗ್ಝಾವೆಂಬ ಆ ಹಳ್ಳಿ ದೂರದಿಂದ ಕಾಣುತ್ತಿದ್ದಾಗಲೇ ತಶಿ ಜೀಪು ನಿಲ್ಲಿಸಿ ಹೇಳಿದ. ʻಅದೇ ನೋಡಿ ಚೌಚೌ ಕಂಗ್‌ ನೀಲ್ಡಾ. ಇದರ ತುದಿ ಮುಟ್ಟುವ ಧೈರ್ಯ ಯಾರಿಗೂ ಇಲ್ಲ!ʼ

ಇಂಥದ್ದೊಂದು ವಾಕ್ಯ ಸೇರಿಸಿಬಿಟ್ಟರೆ ಯಾರಿಗೇ ಆದರೂ ಕುತೂಹಲ ಜಾಸ್ತಿಯೇ! ಮಾನವ ಸಹಜ ಕುತೂಹಲ. ಅಲ್ಲಿ ನೋಡಬೇಡ, ಇದನ್ನು ಮಾಡಬೇಡ, ಅಟ್ಟ ಹತ್ತಬೇಡ, ಮಧ್ಯರಾತ್ರಿ ಅಲ್ಲಿ ತಿರುಗಬೇಡ, ಹೀಗೆ, ಈ ʻಬೇಡʼಗಳೇ ಮನುಷ್ಯನ ಕಾಂತೀಯ ಶಕ್ತಿ. ನಿನ್ನೆ ಮೊನ್ನೆ ಹುಟ್ಟಿದ ಪುಟಾಣಿ ಮಗುವಿಗೇ ಇಂಥ ಕುತೂಹಲ ಇದ್ದ ಮೇಲೆ ಕೆಜಿಗಟ್ಟಲೆ ಅಡ್ಡಡ್ಡ ಉದ್ದುದ್ದ ಬೆಳೆದ ನಾವೆಲ್ಲ ಯಾವ ಲೆಕ್ಕ. ನನಗೂ ಸಹಜವಾಗಿಯೇ ಕುತೂಹಲ ಹುಟ್ಟಿತು.

ʻಇಷ್ಟು ಅದ್ಭುತ ಶಿಖರಕ್ಕೆ ಯಾಕೆ ಯಾರೂ ಹತ್ತುವ ಸಾಹಸ ಮಾಡಿಲ್ಲ? ಕಥೆಯೊಂದು ಇರಲೇಬೇಕಲ್ಲ.ʼ ಎಂದೆ.

ಇತ್ತು ಖಂಡಿತವಾಗಿ. ಜೀಪಿನಲ್ಲಿ ಕಳೆದೊಂದು ಗಂಟೆಯಿಂದ ಬರುತ್ತಿದ್ದ, ನಿದಿರೆ ಹತ್ತಿಸಲು ಹೇಳಿ ಮಾಡಿಸಿದಂತಹ ಜೋಗುಳದಂತಹ ಒಂದೇ ರಾಗದ ಮಂದ್ರದಿಂದ ಮೇಲಕ್ಕೇರದ ಆ ಪಕ್ಕಾ ಲೋಕಲ್‌ ಸ್ಪಿತಿ ಹಾಡಿನ ವಾಲ್ಯೂಮನ್ನು ಇನ್ನೂ ತಗ್ಗಿಸಿ ಕಥೆ ಶುರು ಮಾಡುತ್ತಾ ತಶಿ ಕಥೆಯ ಜೊತೆಗೆ ನಿಧಾನಕ್ಕೆ ಜೀಪನ್ನೂ ಸ್ಟಾರ್ಟ್‌ ಮಾಡಿದ.

ಬಹಳ ಹಿಂದೆ ಅಂದರೆ ಬಹಳ ಹಿಂದೆ, ಈ ಹಳ್ಳಿಯಲ್ಲೊಬ್ಬ ಸೋಮಾರಿ. ಕೆಲಸ ಮಾಡಿ ಹೆಂಡತಿ ಮಕ್ಕಳ ಹೊಟ್ಟೆ ಹೊರೆಯದ ಕಾರಣ ಸೋಮಾರಿ ಬಿರುದು. ಆದರೆ ಆತ ಅತ್ಯದ್ಭುತ ಸಂಗೀತಗಾರ. ಹಳ್ಳಿಯ ಜಾನಪದ ವಾದ್ಯ ಲೂಟ್‌ ನುಡಿಸುವುದರಲ್ಲಿ ಪರಿಣಿತ. ದಿನ ಬೆಳಗಾದರೆ ಎದ್ದು ಪ್ರಕೃತಿ ಸೌಂದರ್ಯ ನೋಡುತ್ತಾ ಲೂಟ್‌ ನುಡಿಸುತ್ತಿದ್ದರೆ ಆತ ಈ ಲೋಕದಲ್ಲಿರುತ್ತಿರಲಿಲ್ಲ.

ಇಂಥ ಕಲಾಕಾರನಿಗೆ ಊರವರು ಒಂದೇ ಒಂದು ಕೆಲಸ ಕೊಟ್ಟಿದ್ದರು. ಅಂಥ ದೊಡ್ಡ ಕೆಲಸವೇನಲ್ಲ. ಈ ಮೈಗಳ್ಳ ಇಷ್ಟು ಮಾಡಿದರೆ ಸಾಕು, ಅದೇ ಪರಮ ಉಪಕಾರ ಎಂದು ಊರವರೇ ನಿರ್ಧರಿಸಿದಂತಿತ್ತು. ಪ್ರತಿ ಬೇಸಿಗೆಯಲ್ಲೂ ಈ ಹಿಮ ಪರ್ವತದಿಂದ ಹರಿದುಬರುವ ನೀರನ್ನು ಸರಿಯಾಗಿ ಹಳ್ಳಿಯ ಗದ್ದೆಗಳಿಗೆ ಹರಿದು ಬರುವಂತೆ ಮಾಡಬೇಕು. ದಾರಿ ಮಧ್ಯೆ ಅಡೆತಡೆಗಳಿದ್ದರೆ ಸರಿಸಬೇಕು. ಅದಕ್ಕಾಗಿ ಪರ್ವತ ಹತ್ತಬೇಕು.

ಹಿಮ ಸುರಿವ ಚಳಿಗಾಲದಲ್ಲಿ ಐದಾರು ತಿಂಗಳು ನೆಮ್ಮದಿಯಾಗಿ ಹಳ್ಳಿಗರೆಲ್ಲರೂ ಬೆಚ್ಚಗೆ ಮನೆಯೊಳಗೆ ಕೂರಬೇಕೆಂದರೆ, ಬೇಸಗೆಯಲ್ಲಿ ಈ ಕಾರ್ಯ ಚೊಕ್ಕವಾಗಿ ನಡೆದು ಹಳ್ಳಿಯಲ್ಲಿ ಕೃಷಿಕಾರ್ಯ ಚಟುವಟಿಕೆಗಳಿಗೆ ಅಡ್ಡ ಬರಬಾರದು. ಹಳ್ಳಿಗಾಗಿ ಆತ ಈ ಕೆಲಸವೊಂದನ್ನು ಚಾಚೂ ತಪ್ಪದೆ ಮಾಡುತ್ತಿದ್ದ.

ಅದೊಂದು ದಿನ ಹೀಗೆ ನೀಲ್ಡಾ ಪರ್ವತವೇರತೊಡಗಿದ ಈತ ಲೂಟ್‌ ನುಡಿಸುತ್ತಾ ನುಡಿಸುತ್ತಾ ಕಳೆದುಹೋದ. ಮತ್ತೆ ವಾಸ್ತವಕ್ಕೆ ಮರಳಿದಾಗ ಅವನೆದುರು ಅಪ್ರತಿಮ ಸುಂದರಿ! ʻನನಗಾಗಿ ಮತ್ತೊಮ್ಮೆ ನುಡಿಸುವೆಯಾ?ʼ ಎಂದಳು. ಅವಳ ಮಾಧುರ್ಯ ತುಂಬಿದ ನುಡಿಗೆ ಮಾರುಹೋದ ಆತ ನುಡಿಸಿದ.

ಮತ್ತೆ ಮತ್ತೆ ನುಡಿಸಿದ. ಆಕೆಯೂ ಕೂತು ಕೇಳಿಯೇ ಕೇಳಿದಳು. ಹೋಗುವಾಗ ನಾನು ಚೌ ಚೌ ಕಂಗ್‌ ನೀಲ್ಡಾ ದೇವತೆಯೆಂದೂ, ನನ್ನ ಬಗ್ಗೆ ಹಳ್ಳಿಯಲ್ಲಿ ಯಾರಿಗೂ ಹೇಳಬೇಡವೆಂದೂ ಭಾಷೆ ತೆಗೆದುಕೊಂಡಳು. ತನಗಾಗಿ ಆಗಾಗ ಹೀಗೆ ಪ್ರತಿ ಬೇಸಿಗೆಯಲ್ಲಿ ಬಂದು ಲೂಟ್‌ ನುಡಿಸಬೇಕೆಂದೂ ಹೇಳಲೂ ಮರೆಯಲಿಲ್ಲ.

ವರುಷಗಳೂ ಉರುಳಿದವು. ನೀಲ್ಢಾಳ ಚೆಲುವಿನಲ್ಲಿ, ಪ್ರೀತಿಯಲ್ಲಿ ಕಳೆದು ಹೋದ ಆತನ ಬೇಸಿಗೆಗಳೆಲ್ಲವೂ ಪರ್ವತದಲ್ಲೇ ಕಳೆಯತೊಡಗಿದವು. ಮೊದಲೇ ಬೇಜವಾಬ್ದಾರಿ ಗಂಡಸೆಂದು ಹೆಂಡತಿಯಿಂದ ಉಗಿಸಿಕೊಳ್ಳುತ್ತಿದ್ದ ಆತ ಈ ಬಾರಿ ಸರಿಯಾಗಿ ಹೆಂಡತಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ತಪ್ಪಿಸಿಕೊಳ್ಳಲು, ಕುಡಿದ ಅಮಲಿನಲ್ಲಿದ್ದ ಆತ, ತಾನಿತ್ತ ಭಾಷೆಯನ್ನು ಮರೆತು ನೀಲ್ಡಾ ಬಗ್ಗೆ ಬಾಯಿಬಿಟ್ಟ. ʻನಿನಗಿಂತ ನೀಲ್ಡಾಳೇ ವಾಸಿ.

ನೀ ಕೆಲಸ ಮಾಡೆಂದು ಆಕೆ ಒಂದು ದಿನವೂ ಹೇಳಲಿಲ್ಲ. ಆಕೆಗೆ ನನ್ನ ಸಂಗೀತದ ಬೆಲೆ ಗೊತ್ತುʼ ಎಂದ. ಇಷ್ಟು ಸಾಕಿತ್ತು. ಹೇಳಬಾರದ್ದು ಹೇಳಿ ಬಿಟ್ಟಿದ್ದ. ಆಗಬಾರದ್ದೂ ಆಯಿತು. ಚಂದದ ಮುಖ ವಿಕಾರವಾಯಿತು. ಮೈಯೆಲ್ಲಾ ಗುಳ್ಳೆ. ತಪ್ಪಿನ ಅರಿವಾಗಿ ಕೂಡಲೇ ಪರ್ವತದೆಡೆಗೆ ಹೊರಟ. ಅರ್ಧ ಹತ್ತುವಾಗಲೇ ಹಿಮಪಾತ. ಹತ್ತಲು ಸಾಧ್ಯವಾಗಲಿಲ್ಲ. ಮರಳಿದ. ಮತ್ತೆ ಮತ್ತೆ ಪ್ರಯತ್ನಪಟ್ಟ. ಯಾವತ್ತೂ ಆಗಲಿಲ್ಲ.

ಪರ್ವತವೇರಲು ಯಾರೇ ಪ್ರಯತ್ನಪಟ್ಟರೂ ಪ್ರಕೃತಿ ಹಠಾತ್‌ ಮುನಿದು ಹವಾಮಾನದಲ್ಲಿ ಏರುಪೇರಾಗಿ ಹತ್ತಲಾಗದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಅಂದು ಮುನಿದ ಕಂಗ್‌ ನೀಲ್ಡಾ ದೇವತೆ ಇನ್ನೂ ಮುನಿದೇ ಇದ್ದಾಳೆ ಎಂಬ ನಂಬಿಕೆ. ಹಾಗಾಗಿಯೇ ಇಂದಿಗೂ ನೀಲ್ಡಾಳನ್ನು ಜಯಿಸಲು ಯಾರಿಗೂ ಧೈರ್ಯವಿಲ್ಲ. ಊರ ಮಂದಿಗೆ ಭಯ ಭಕ್ತಿಯಿಂದ ಪೂಜಿಸುವುದಷ್ಟೇ ಗೊತ್ತು ಎನ್ನುತ್ತಾ ತಶಿ ಪೂರ್ಣವಿರಾಮ ಹಾಕಿದ.

ಬಹಳ ಕಾಲದ ನಂತರ ಮುದ್ದುಮುದ್ದಾದ ಜಾನಪದ ಕಥೆಯೊಂದನ್ನು ಕೇಳಿ ಖುಷಿಯಾಗಿತ್ತು. ಆತ ಇನ್ನೂ ಮುಂದುವರಿದು, ಇಲ್ಲಿನ ಬೋಟಿ ಭಾಷೆಯಲ್ಲಿ, ಚೌ ಚೌ ಎಂದರೆ ರಾಜಕುಮಾರಿ, ಕಂಗ್‌ ಎಂದರೆ ಹಿಮಚ್ಛಾದಿತ ಪರ್ವತ, ನೀ ಅಂದರೆ ಸೂರ್ಯ, ದಾ ಎಂದರೆ ಚಂದ್ರ. ಹಾಗಾಗಿ ಸದಾ ಸೂರ್ಯಚಂದ್ರದ ಬೆಳಕಿನಲ್ಲಿ ಹೊಳೆವ ಹಿಮಚ್ಛಾದಿತ ಪರ್ವತ ರಾಜಕುಮಾರಿ ಈ ಚೌ ಚೌ ಕಂಗ್‌ ನೀಲ್ಡಾ! ಆಹಾ, ಒಂದು ಮಧುರಾನುಭವದ ಕಥೆ ಕೇಳಿದ ಖುಷಿ ನನ್ನಲ್ಲಿ.

ಅಂದೊಮ್ಮೆ, ಚಂದ್ರನಹಾನಿಗೆ ಚಾರಣ ಹೊರಟಾಗಲೂ ಜಾಂಗ್ಲಿಕ್‌ ಹಳ್ಳಿಗರು ಹೀಗೆಯೇ ಒಂದು ಕಥೆ ಹೇಳಿದ್ದರು. ಚಂದ್ರನಹಾನಿನ ೭ ಸರೋವರಗಳಲ್ಲಿ ಏಳನ್ನೂ ನೋಡಿಯೇವೆಂಬ ಕನಸು ಮಾತ್ರ ಕಾಣಬೇಡಿ, ಹಠವೂ ಬೇಡ, ಎಷ್ಟಾದೀತೋ ಅಷ್ಟು ನೋಡಿಕೊಂಡು ಬಂದರೆ ಸಾಕು ಎಂದು. ಯಾಕೆ ಕಾಣಬಾರದು ಎಂಬುದಕ್ಕೊಂದು ಕಥೆಯ ವಿವರಣೆಯೂ ಬೆನ್ನಿಗಿತ್ತು.

ಪಬ್ಬರ್‌ ನದಿಯ ಉಗಮಸ್ಥಾನವಾದ ಚಂದ್ರನಹಾನ್‌ನ ಈ ಏಳು ಸರೋವರಗಳು ಹಿಮಾಚಲದ ಜಾಂಗ್ಲಿಕ್‌, ತಂಗನು, ಚಿಡ್ಗಾಂವ್‌ ಮತ್ತಿತರ ಸುತ್ತಮುತ್ತಲ ಹಳ್ಳಿಗಳಿಗೆ ಪೂಜನೀಯ. ಕಾಳೀ ಮಾತೆಯ ವಾಸಸ್ಥಾನ. ತನ್ನ ಬಳಿಗೆ ಯಾರು ಬರಬೇಕೆಂದು ಆಕೆ ಬಯಸುತ್ತಾಳೋ ಅವರನ್ನು ಆಕೆ ಕರೆಸಿಕೊಂಡೇ ಕರೆಸಿಕೊಳ್ಳುತ್ತಾಳೆ.

ಆಕೆಯೆಡೆಗಿನ ಪಯಣದಲ್ಲಿ ಏನೇ ಪ್ರಾಕೃತಿಕ ಅಡೆತಡೆಗಳು ಬಂದರೂ ಅದು ಬರಬಾರದೆಂಬ ಸೂಚನೆ ಎಂದು ಅರ್ಥಮಾಡಿಕೊಳ್ಳಬೇಕು ಎಂಬುದು ಅಲ್ಲಿನವರ ನಂಬಿಕೆ. ಏಳನೆಯದರವರೆಗೂ ಹೋದವರು ಅತಿ ಕಡಿಮೆ. ಗ್ರಾಮಸ್ಥರಲ್ಲನೇಕರೂ ಇನ್ನೂ ಹೋಗಿಲ್ಲ. ನಮ್ಮನ್ನಿನ್ನೂ ದೇವಿ ಕರೆಸಿಕೊಂಡಿಲ್ಲ, ಕಾಯುತ್ತೇವೆ, ಆಕೆ ಕರೆಯುವವರೆಗೆ ಎಂಬ ಭಕ್ತಿಯೊಂದಿಗೆ ಮಿಳಿತವಾದ ದೈನ್ಯ ಭಾವನೆ.

ಹಳ್ಳಿಗರ ಆರಾಧ್ಯ ದೇವರು ಶಿಕ್ರು ಮಹಾರಾಜರ ಹುಟ್ಟೂರು ಇದೆಂದೂ, ಇಲ್ಲಿನ ಸರೋವರದಲ್ಲಿ ವರ್ಷಕ್ಕೊಮ್ಮೆ ಸ್ನಾನಕ್ಕೆ ಬರುತ್ತಾನೆಂದೂ ನಂಬಿಕೆ. ಕಾಳಿ ಮಾತೆ ಈ ಇಡೀ ಪರಿಸರದ ಅಧಿಪತಿಯೆಂದೂ, ಯಾರೇ ಅಲ್ಲಿಗೆ ಆಕೆಗೆ ಇಷ್ಟವಿಲ್ಲದಾಗ ಹೋಗಲು ಪ್ರಯತ್ನಪಟ್ಟರೆ, ಮಳೆಯೋ, ಹಿಮಪಾತವೋ ಏನಾದರೊಂದು ಅವಘಡವಾಗಿಬಿಡುತ್ತದೆ. ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ ಎಂಬುದು ಜನಪದ ನಂಬಿಕೆ.

ಚಂದ್ರನಹಾನ್‌ ಚಾರಣದಲ್ಲಿ ಮೊದಲೆರಡು ದಿನ ಮುಗಿದರೆ, ಮೂರನೇ ದಿನ ನಿರ್ಣಾಯಕವಾದದ್ದು. ಏಳು ಸರೋವರಗಳೆಡೆಗೆ ಪಯಣವದು. ಏರುಹಾದಿ, ಇನ್ನೇನು ಹತ್ತೇ ಬಿಟ್ಟೆವು ಅಂದುಕೊಳ್ಳುವಾಗಲೇ ಗೊತ್ತಾಗುವುದು ಈಗಷ್ಟೇ ಶುರುವಾಗಿದೆ ಎಂದು. ನಮಗೂ ಹಾಗೆಯೇ ಆಗಿತ್ತು. ನಾವು ಒಂದನೇ ಸರೋವರ, ಎರಡನೇಯದು, ಮೂರನೇಯದು ಎಂದು ಲೆಕ್ಕ ಹಾಕುತ್ತಾ ಏದುಸಿರು ಬಿಡುತ್ತಾ ನಡೆಯುತ್ತಿದ್ದರೆ, ನಮ್ಮ ಗೈಡ್‌ ಮಾತ್ರ ನಿರ್ಲಿಪ್ತವಾಗಿದ್ದ.

ಇನ್ನು ಮುಂದೆ ಅಸಾಧ್ಯ ಎಂದು ಅವನಿಗೆ ಮೊದಲೇ ಗೊತ್ತಿದ್ದ ಹಾಗೆ! ಮೂರನೆಯದು ದಾಟುವ ಮೊದಲೇ ಆಗಸ ಕಪ್ಪಿಡಲು ಶುರುವಾಗಿತ್ತು. ಅರೆ, ಇಷ್ಟರವರೆಗೆ ಬಿಸಿಲಿನ ಝಳಕ್ಕೆ ಹಠಾತ್‌ ಆಗಿದ್ದೇನು ಎಂದು ನಮಗೆ ಆಶ್ಚರ್ಯವಾಗುತ್ತಿದ್ದರೆ, ಮಕ್ಕಳು ಮಾತ್ರ ಒಂದೇ ಸಮನೆ ಕೈಮುಗಿದು ಪರ್ವತ ದೇವತೆಯೇ ಹಿಮದ ಮಳೆ ಸುರಿಸು ಎಂದು ಇನ್ನಿಲ್ಲದಂತೆ ಪ್ರಾರ್ಥಿಸುತ್ತಿದ್ದರು. ಮಕ್ಕಳ ಈ ಆಟ ನಮಗೆ ತಮಾಷೆಯಾಗಿ ಕಂಡಿತು.

ಆದರೆ, ಅದೇನು ಮಾಯೆಯೋ! ಅರ್ಧ ಗಂಟೆಯಷ್ಟೇ, ಧೋ ಎಂದು ಹಿಮ ಸುರಿಯತೊಡಗಿತ್ತು. ಮೊದಲು ಹತ್ತಿಯಂತೆ ಹಗುರವಾಗಿ ಬಿದ್ದ ಹಿಮ ಹತ್ತೇ ನಿಮಿಷದಲ್ಲಿ ಭೋರ್ಗರೆದಿತ್ತು. ಮಕ್ಕಳ ಮೊರೆ ಕೇಳಿ ದೇವತೆಗೂ ಪ್ರೀತಿಯಾಯಿತೋ ಗೊತ್ತಿಲ್ಲ, ಅಥವಾ ನಾವು ಬರುವುದು ಆಕೆಗೆ ಇಷ್ಟವಾಗಲಿಲ್ಲವೋ! ನಾವು ಮೊದಲನೆಯದ್ದೆಂದೇ ತಿಳಿದು ಖುಷಿಪಟ್ಟು ಹಿಮವನ್ನು ಸಂಭ್ರಮಿಸಿದೆವು.

ಗೈಡ್‌ ಮುಂದೆ ಹೋಗುವುದು ಬೇಡ ಎಂದು ಸ್ಪಷ್ಟವಾಗಿ ಹೇಳಿಬಿಟ್ಟ. ಅವನ ಮಾತಿಗೆ ಗೌರವ ಕೊಟ್ಟು, ನಾವು ಮುಂದಿನ ಆಸೆ ಕೈಬಿಟ್ಟು ವಾಪಾಸಾಗಲೇಬೇಕಾಯಿತು. ಕೆಳಗೆ ಬಂದರೆ ಹಿಮದ ಕುರುಹೇ ಇಲ್ಲ.  ವಿಸ್ಮಯವೆನಿಸಿದ್ದು ಸುಳ್ಳಲ್ಲ! ಈ ಪ್ರಕೃತಿಯೇ ಮಾಯೆ. ಮನುಷ್ಯನದ್ದೇನಿದ್ದರೂ ಶೂನ್ಯ ಸಂಪಾದನೆ.

ನಮ್ಮ ದೇಶದಲ್ಲಿ ಸುತ್ತಾಡುವ ಮಜಾವೇ ಇದು. ಒಂದೊಂದು ಊರಿಗೂ ಒಂದೊಂದು ಕಥೆಯು ಹೊಸೆದುಕೊಂಡಿರುತ್ತದೆ. ನನ್ನೂರಿನ ಕಳಂಜಿಮಲೆ ಕಾಡಿನಿಂದ ಹಿಡಿದು ಕೈಲಾಸ ಪರ್ವತದವರೆಗೆ ಸಾವಿರಾರು ಕಥೆಗಳು. ಮನುಷ್ಯ ಎಷ್ಟೇ ಮುಂದುವರಿದರೂ ಕೆಲವೊಂದು ವಿಚಾರಗಳು ಇನ್ನೂ ಪ್ರಶ್ನಾತೀತವೇ, ಪ್ರಕೃತಿಯ ಮುಂದೆ ಸಣ್ಣ ಚುಕ್ಕೆಯೇ!

ಪುಟಾಣಿಯಾಗಿದ್ದಾಗಿನಿಂದ ವರುಷಕ್ಕೆರಡು ಸಾರಿ ಅಜಕ್ಕಳದ ಕಾಡಿನಲ್ಲಿ ಅಪ್ಪನ ಕೈಹಿಡಿದು ಮೈಲುಗಟ್ಟಲೆ ನಡೆಯುತ್ತಿದ್ದಾಗಿನಿಂದಲೇ ಅಪ್ಪ ಹೇಳುತ್ತಿದ್ದ ಇಂತಹ ಕುತೂಹಲಕಾರೀ ಕಥೆಗಳ ಬಗ್ಗೆ ಒಂಥರಾ ಸೆಳೆತ. ಬಹುಶಃ ಕಾಡಹಾದಿಯ ನಡಿಗೆಯನ್ನು ಇನ್ನೂ ರೋಚಕವಾಗಿಸಲು ಅಪ್ಪ ೧೦೦ಕ್ಕೆ ೭೦ರಷ್ಟು ಕಥೆಗಳನ್ನು ಕಟ್ಟಿ ಹೇಳುತ್ತಿದ್ದರೇನೋ, ಆದರೆ ಅದನ್ನು ನೆನೆಸಿದರೆ ಈಗಲೂ ಪುಳಕವೇ.

ಅದು ಹಾಗೆ ಬೆಳೆಯುತ್ತಾ ಬೆಳೆಯುತ್ತಾ, ಎಲ್ಲಿಗೆ ಹೋಯಿತೆಂದರೆ ಸಿಕ್ಕ ಸಿಕ್ಕ ಭಾನುವಾರದ ಮ್ಯಾಗಜಿನ್ನುಗಳಲ್ಲಿ ಆಗಾಗ ಪ್ರಕಟವಾಗುತ್ತಿದ್ದ ಪ್ರವಾಸ ಕಥನಗಳಲ್ಲಿರುವ ಚಿತ್ರಗಳೆಲ್ಲ ಕತ್ತರಿ ಪ್ರಯೋಗಕ್ಕೆ ಒಳಗಾಗಿ ನನ್ನ ಹಳೇ ನೋಟ್‌ ಬುಕ್ಕಿನಲ್ಲಿ ಅಂಟಿ ಕೂರುತ್ತಿದ್ದವು. ಆಗೀಗ ಅವನ್ನು ಸವರುತ್ತಾ ಕನಸು ಕಾಣುವುದಷ್ಟೆ ಗೊತ್ತಿತ್ತು.

ಭೀಮ- ಬಕಾಸುರರು ಯುದ್ಧ ಮಾಡಿದ್ದು ಇದೇ ನನ್ನೂರಿನ ಕಳಂಜಿಮಲೆ ಕಾಡಿನಲ್ಲೇ ಎಂದು ಶತಾಯಗತಾಯವಾಗಿ ನಂಬಿದ್ದ ನಾನು ಆಗ, ಬಕಾಸುರನ ಗುಹೆಯನ್ನು ನೋಡಿಯೇ ತೀರುವೆ ಎಂದು ಕಾಡಿನೊಳಗೆ ಹೋಗಿ ಅದೊಂದು ಹೆಗ್ಗಣದ ಮಾಟೆಯಂತಿದ್ದ ಗುಂಡಿಯನ್ನು ನೋಡಿ ಬಂದಿದ್ದೆ. ಆದರೂ ಈಗಲೂ ಕಳಂಜಿಮಲೆಯೆಡೆಗೆ ಅದೇ ಸೆಳೆತ.

ಇಂಥ ನನಗೆ ಬಹುಶಃ ಹಿಮಾಲಯದ ಹುಚ್ಚು ಹತ್ತಿದ್ದು, ಅಪ್ಪನ ಸಂಗ್ರಹದಲ್ಲಿದ್ದ ನಮ್ಮೂರಿನವರೇ ಆದ ಶಿರಂಕಲ್ಲು ಈಶ್ವರ ಭಟ್ಟರ ಹಿಮಾಲಯ ಪ್ರವಾಸ ಕಥನಗಳು. ಅವರ ʻಮುಕ್ತಿನಾಥನ ಪಥದಲ್ಲಿʼ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಬಹಳವಾಗಿ ಕಾಡಿದ್ದ ಕೃತಿ.

ನಾಲ್ಕನೆಯೋ ಐದನೆಯೋ ಕ್ಲಾಸಿನಲ್ಲಿದ್ದಾಗ ಗೆಳತಿಯೊಬ್ಬಳು ತನ್ನ ನೋಟ್‌ ಬುಕ್ಕಿಗೆ ಹಾಕಿದ್ದ ಬೈಂಡಿನಲ್ಲಿ ಯಾರೋ ಸ್ವರ್ಗಾರೋಹಣ ಚಾರಣದ ಬಗ್ಗೆ ಬರೆದಿದ್ದು ನೋಡಿ, ಓದಿ ಸತೋಪಂಥ್‌ ಸರೋವರದ ಬಗ್ಗೆ ಹುಚ್ಚೆದ್ದು ಅವಳ ಬೈಂಡ್‌ ಪೇಪರ್‌ ಎಗರಿಸಿ ಬೇರೆ ಬೈಂಡ್‌ ಹಾಕಿ  ಕೊಟ್ಟುಬಿಟ್ಟಿದ್ದೆ. ಆ ಸ್ಪಟಿಕ ಶುದ್ಧ ತಿಳಿನೀರಿನ ಸರೋವರ ಆಗಾಗ ನನ್ನ ಕನಸಿನಲ್ಲಿ ಬರುತ್ತಿತ್ತು!

ಧಾರ್ಮಿಕ ಪೂಜ್ಯ ಭಾವನೆಗಳಿಂದಲೋ, ಸ್ಥಳೀಯ ಜನರ ಬಲವಾದ ನಂಬಿಕೆಗಳಿಂದಲೋ, ಪ್ರತಿ ಬಾರಿಯೂ ಲೆಕ್ಕಾಚಾರ ತಲೆಕೆಳಗಾದಾಗ ಇದಕ್ಕೂ ಮೀರಿದ ಲೆಕ್ಕಾಚಾರವೇನೋ ಎಂದು ಸ್ವತಃ ಮನುಷ್ಯ ಪ್ರಾಣಿಗೆ ಅರಿವಾಗಿದ್ದರಿಂದಲೋ ಮನುಷ್ಯ ಎಷ್ಟೇ ಮುಂದುವರಿದರೂ, ಬಾಹ್ಯಾಕಾಶದಲ್ಲೆಲ್ಲ ಬದುಕಲು ಕಲಿತರೂ, ಕಣ್ಣಮುಂದಿನ ಸಾವಿರಾರು ಪರ್ವತಗಳನ್ನು ಇನ್ನೂ ಏರಲಾಗಿಲ್ಲ. ನೂರಾರು ಹಿಮ ಪರ್ವತಗಳು ಇಂದಿಗೂ ದೈವತ್ವವನ್ನು ಆವಾಹಿಸಿಕೊಂಡು ಹುಲುಮಾನವನನ್ನು ಅಣಕಿಸಿಬಿಡುತ್ತದೆ.

ಹತ್ತಿರ ಹತ್ತಿರ ಶತಮಾನದ ಹಿಂದೆ ವಿದೇಶೀ ತಂಡವೊಂದು ಕೈಲಾಸವನ್ನು ಯಾವ ಮಾರ್ಗವಾಗಿ ಹತ್ತಬಹುದೆಂದು ಸಾಕಷ್ಟು ಅಧ್ಯಯನ ನಡೆಸಿ, ಇದು ಹತ್ತಲಾಗಲಾರದಂತ ಆಕಾರದಲ್ಲಿದೆ ಎಂದಿದ್ದರಂತೆ. ಕೊನೆಗೂ ಸುಲಭದ ದಾರಿಯೊಂದು ಸಿಕ್ಕಿದೆ ಎಂದು ಹೊರಟವರು, ಹತ್ತಲಾಗದೆ, ಹಿಮಪಾತವಾಗಿ ಕೈಚೆಲ್ಲಿ ವಾಪಾಸಾಗಿದ್ದರು.

ಟಿಬೆಟಿನ ಧಾರ್ಮಿಕ ಮುಖಂಡರೊಬ್ಬರು, ʻಪಾಪವೇ ಮಾಡದಂತ ಮನುಷ್ಯನಿದ್ದರೆ ಆತನಿಗೆ ಮಾತ್ರ ಈ ಕೈಲಾಸ ಪರ್ವತವೇರಲು ಸಾಧ್ಯ. ಅದಕ್ಕಾಗಿ ಆತ ಕೈಲಾಸ ಪರ್ವತದ ಕಡಿದಾದ ಹಿಮದ ಗೋಡೆಯನ್ನು ಸವರಿ ಏರಬೇಕಾಗಿಲ್ಲ. ಹಕ್ಕಿಯಾಗಿ ಹಾರಿ ಸೀದಾ ಪರ್ವತದ ತುದಿ ಮುಟ್ಟಬಹುದು!ʼ ಎಂದಿದ್ದರಂತೆ.

ಹಿಂದೂ, ಬೌದ್ಧ, ಜೈನ ಧರ್ಮದ ಜನರ ನಂಬಿಕೆಗಳ ಗೋಡೆಯನ್ನು ಅಲುಗಾಡಿಸಿ ಈ ಪರ್ವತವೇರಲು ಅನುಮತಿ ನೀಡುವ ಸಾಮರ್ಥ್ಯ ರಾಜಕೀಯ ಶಕ್ತಿಗಳಿಗೂ ಇಲ್ಲ. ಹಾಗಾಗಿಯೇ ವಿದೇಶೀ ಚಾರಣಿಗರ ಸತತ ಪ್ರಯತ್ವಗಳೂ ಫಲ ಕೊಟ್ಟಿಲ್ಲ. ಇದ್ಯಾಕೆ ಹೀಗೆ ಎಂದು ಕೆದಕಹೊರಟು ದಿನಗಟ್ಟಲೆ ಪರ್ವತದ ಬುಡದಲ್ಲಿ ಟೆಂಟು ಹಾಕಿ ಕೂತು, ಟಿಬೆಟಿಯನ್‌ ಲಾಮಾಗಳನ್ನೆಲ್ಲ ಮಾತಾಡಿಸಿ, ಸ್ವತಃ ಅನುಭವಿಸಿದ ರಷ್ಯಾದ ನೇತ್ರತಜ್ಞರೊಬ್ಬರು ಈ ಜಾಗದಲ್ಲಿ ಅದೇನೋ ಅತೀಂದ್ರೀಯ ಶಕ್ತಿಯಿರುವುದೇನೋ ಹೌದು ಎಂದು ಬರೆದಿದ್ದರು.

ಮಾನವ ನಿರ್ಮಿತ ಪಿರಮಿಡ್ಡಿನ ಆಕಾರದಲ್ಲಿರುವ ಈ ಪರ್ವತದ ಒಳಗೇ ಬೇರೇನೋ ಸಾಮ್ರಾಜ್ಯವಿದೆಯೆನಿಸಿದ್ದು ಸುಳ್ಳಲ್ಲ. ಇದು ವಿಜ್ಞಾನವನ್ನೂ ಮೀರಿದ್ದು ಎಂದಿದ್ದರು. ಹೀಗೆ ಪರ್ವತದ ಒಡಲನ್ನು ಬಗೆಯ ಹೊರಟರೆ ನೂರಾರು ಕಥೆಗಳು.

ಯಾವುದೇ ಪರ್ವತವೂ ಕೇವಲ ಕಲ್ಲುಮಣ್ಣುಗಳ ರಾಶಿಯಲ್ಲ. ಅದೊಂದು ಭಾವನೆ. ಅಕೌಂಟಿನಲ್ಲಿ ಭರ್ಜರಿ ದುಡ್ಡಿದ್ದರೆ ಸಾಕು, ಈಗ ಮೌಂಟ್‌ ಎವರೆಸ್ಟ್‌ ಹತ್ತುವುದೇನೂ ಕಷ್ಟವಲ್ಲ. ಆದರೆ, ಗಳನ್ನು ಜನರ ನಂಬಿಕೆ/ಭಾವನೆಗಳನ್ನು ಮೆಟ್ಟಿ ನಿಂತು ಪರ್ವತವೇರುವುದು ಸುಲಭವಲ್ಲ. ಇದಕ್ಕಾಗಿಯೇ ಇಂದಿಗೂ ಪ್ರಪಂಚದಲ್ಲಿ ಹತ್ತಲಾರದ ಪರ್ವತಗಳೆಷ್ಟೋ! ಹಿಮಾಲಯವೆಂಬ ಬೃಹತ್‌ ಗೋಡೆ ಯಾಕೆ ಇಂದಿಗೂ ವಿಸ್ಮಯಗಳ ಕಣಜವೆಂಬ ಕುತೂಹಲ ಕೇವಲ ಭಾರತೀಯರಿಗಷ್ಟೆ ಅಲ್ಲ, ಪ್ರಪಂಚದಾದ್ಯಂತ ದೇಶ ಭಾಷೆಗಳ ಗಡಿ ಮೀರಿದ ಸೂಜಿಗಲ್ಲು!

ಈ ಹಿಮಾಲಯ ಹಾಗೆಯೇ ಇರಲಿ, ಮುಟ್ಟಿಯೂ ಮುಟ್ಟಲಾಗದ ಹಾಗೆ! ಕುರುಡರು ಆನೆ ಮುಟ್ಟಿದ ಹಾಗೆ!

‍ಲೇಖಕರು ರಾಧಿಕ ವಿಟ್ಲ

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: