ಸುಧಾಮನ ‘ಅವಲಕ್ಕಿ’

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನಮ್ಕಡೆ ಯಾರರೆ ಅವಲಕ್ಕಿ ತಿನ್ನಾಕ ಬರ್ರಿ ಅಂದ್ರ, ಯಾರೊಬ್ಬರೂ ಒಲ್ಲೆ ಅನ್ನೂದಿಲ್ಲ. ಅವಲಕ್ಕಿ ಒಲ್ಲೆಯಂದ್ರ ದಾರಿದ್ರ್ಯ ಅಂಟ್ತದ ಅನ್ನೂದೊಂದು ನಂಬಿಕಿ ಇಲ್ಲಿ ಬೇರೂರೇದ.

ಕೃಷ್ಣ ಸುಧಾಮನ ಅವಲಕ್ಕಿಯ ಕಥಿ ಇದರ ಹಿಂದಿನ ಕಾರಣ ಇರಬಹುದು. ನಮ್ಮಲ್ಲಿ ಮನಿಯಂಗಳ, ತಾರಸಿ ಮೇಲೆ ಪೇಪರ್‌ ಹಾಸಿ, ಅದರ ಮ್ಯಾಲೆ ಅವಲಕ್ಕಿ ಹರಡಿ, ಮ್ಯಾಲೊಂದು ತೆಳು ದುಪಟ್ಟಾ ಹಾಕ್ತಾರ..  ಮೂರರಿಂದ ನಾಲ್ಕು ತಾಸು ಬಿಟ್ರ ಸಾಕು.. ಅವಲಕ್ಕಿ ಕುರುಕುರು ಅಂತಾವ. ಮುಟ್ಟಿದ್ರ ಮುರೀತಾವ, ಬಾಯಾಗಿಟ್ರ ಕರಗ್ತಾವ. ಇಂಥ ಅವಲಕ್ಕಿಗೆ ಇಷ್ಟಕ್ಕ ಬಿಡೂದಿಲ್ಲ ನಾವು.

ಒಗ್ಗರಣಿ ಕೊಡ್ತೀವಿ. ಒಗ್ಗರಣಿ ಕೊಡೂಮುಂದ ಎಲ್ಲಾರಿಗೆ ಒಮ್ಮೆ ಕೇಳೂದಾಗ್ತದ… ಹಚ್ಚಿದವಲಕ್ಕಿ, ಕೆಂಪು ಬೇಕೋ ಹಳದಿ ಬೇಕೊ… ಅಂತ. ಅಗ್ದಿ ಮನಿಮಂದಿಯೆಲ್ಲ ಚರ್ಚಾ ಮಾಡಿ ಒಂದು ನಿರ್ಧಾರಕ್ಕ ಬರ್ತಾರ. ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಳದಿ.. ಕೆಲವೊಮ್ಮೆ ಎರಡೂ ಬೇಕು ಅಂತನೂ ಹೇಳ್ತಾರ.

ಹೆಂಗಿದ್ರೂ ಮಾಡೂದ ಮಾಡ್ತಿ, ಇವಿಷ್ಟು ಅವಿಷ್ಟು ಮಾಡು… ಅವರಿಗೆ ಬೇಕಾದ್ದು ಅವರು ತಿನ್ನಲಿ, ಇವರಿಗೆ ಬೇಕಾದ್ದು ಇವರು ತಿನ್ನಲಿ ಅಂತ ಮನ್ಯಾಗ ಅಪ್ಪ ಹೇಳಿದ್ರಂತೂ ಮುಗೀತು…

ಒಗ್ಗರಣಿ ಹಾಕೋರು.. ಅಪ್ಪನ ತಲಿಮ್ಯಾಲೆ ಮೊಟಕುವಷ್ಟೆ ಸಿಟ್ಟಿನಿಂದ ಕೊಬ್ಬರಿ ಕಟ್‌ ಮಾಡ್ತಾರ. ಟಕ್‌, ಟಕ್‌ ಅಂತ.. ಅಗ್ದಿ ಚೊಲೊ ಕೊಬ್ಬರಿ ಇದ್ರ, ಎಣ್ಣಿ ಪಕ್ಕಕ್ಕ ಸಿಡೀತಿರ್ತದ. ತಿಳುವಗೆ ಕತ್ತರಿಸಿದ ಕೊಬ್ಬರಿ ಪಕ್ಕ, ಬಿಳಿ ಎಳ್ಳು, ಧನಿಯಾಕಾಳು, ಕರಿಬೇವು, ಕೊತ್ತಂಬರಿ, ಸೇಂಗಾ, ಪುಠಾಣಿ ಎಲ್ಲಾ ಕಲರ್‌ಕಲರ್‌ ಕಾಣೂಹಂಗ ಜೋಡಿಸಿ ಇಟ್ಕೊತಾರ. ಹಳದಿ ಬೇಕಿದ್ರ ಒಣಮೆಣಸಿನಕಾಯಿ, ಮೆಂತ್ಯ ಮೆಣಸಿನಕಾಯಿನೂ ಇದೇ ಪ್ಲೇಟ್‌ನಾಗ ಜಾಗ ಮಾಡ್ಕೊಂಡು ಅಡ್ಡಡ್ಡ ಮಲಗಿರ್ತಾವ..

ಇವೆಲ್ಲ ತಂದು ಕಟ್ಟಿ ಮ್ಯಾಲಿಟ್ಕೊತಾರ. ಬಾಣಲಿಯೊಳಗ ಎಣ್ಣಿ ಕಾಯಾಕ ಇಡ್ತಾರ. ಮೊದಲು ಸೇಂಗಾ, ಪುಠಾಣಿ, ಆಮೇಲೆ ಮೆಣಸಿನಕಾಯಿ ಹಾಕ್ತಾರ. ಇವೆಲ್ಲ ಕೆಂಪು ಬಣ್ಣಕ್ಕ ಬರೂಮುಂದ,,, ಸಾಸಿವಿ ಜೀರಗಿ ಹಾಕಿ, ಎಳ್ಳೂ ಸಿಡಸ್ತಾರ. ಧನಿಯಾ ಹಾಕ್ತಾರ. ಎಣ್ಣಿ ಚೂರು ಕಾಯ್ದದ ಅನಸೂಮುಂದ ಕರಿಬೇವು ಹಾಕಿ ಒಲಿ ಆರಸ್ತಾರ.

ಆಮೇಲೆ ಅದಕ್ಕ ಉಪ್ಪು, ಹಳದಿ ಬೇಕಾದ್ರ ಅರಿಶಿಣ, ಇಲ್ಲಾಂದ್ರ ಮಸಾಲಿ ಖಾರ ಹಾಕ್ತಾರ. ಇಡೀ ಒಗ್ಗರಣಿಯನ್ನು ಅವಲಕ್ಕಿ ಜೊತಿಗೆ ಕಲಸೂಮುಂದ ಕೆಳಗ ಇಳಸ್ಕೊಂಡಿರ್ತಾರ. ಕೆಲವರು ರುಚಿಯ ಹದಗಾರರು, ಆಮ್‌ಚೂರ್‌ ಪೌಡರ್‌ ಹಾಕ್ತಾರ. ಒಪ್ಪತ್ತಿಗೆ ಆಸರಿ ಆಗಲಿ ಅಂತ ತಿನ್ನೋರು ಮೆಂತ್ಯಹಿಟ್ಟು ಕಲಸ್ತಾರ. ಒಟ್ನಾಗ ಟಾಪಿಂಗ್ಸು ಅವರವರ ಆಸಕ್ತಿ, ಅಭಿರುಚಿ ಮ್ಯಾಲೆ ಹೋಗ್ತಾವ್ರಿ.

ಹಿಂಗ ಹಚ್ಚಿಟ್ಟ ಅವಲಕ್ಕಿ ಒಂದು ಜರ್ಮನ್‌ ಸಿಲ್ವರ್‌ ಡಬ್ಬಿಯೊಳಗ ತುಂಬಿಸಿಟ್ರಂದ್ರ ಅಗ್ದಿ ಆಪದ್ಧನ ಇದ್ದಂಗ ಅವಲಕ್ಕಿ. ಯಾರರೆ ಹೇಳದೆ, ಕೇಳದೆ ಮನಿಗೆ ಬರುವ ಅತಿಥಿಗಳು, ಮತ್ತ ಹೋಗಾಕನೂ ಅವಸರ ಮಾಡಿದಾಗ, ಒಂದು ಪ್ಲೇಟ್‌ನಾಗ ಅವಲಕ್ಕಿ ಹಾಕಿ ಕೊಡ್ತಾರ. ಅವರು ಬಾಯಾಡಿಸೂದ್ರೊಳಗ ಚಾ ರೆಡಿ.

ಟೈಮಿಟ್ಕೊಂಡು ಬಂದ್ರ, ಇಲ್ಲಾಂದ್ರ ಸಂಜೀಹೊತ್ತು ಹಸಿವು ಆದ್ರ , ಏನರೆ ಮಾಡ್ಕೊಳ್ಳಾಕ ದಣಿವು ಆದ್ರ, ಇದೇ ಅವಲಕ್ಕಿ ಮ್ಯಾಲೆ ಸೌತಿಕಾಯಿ, ಗಜ್ಜರಿ ತುರುದು, ಹಸಿಕೊಬ್ಬರಿ ಹೆರದು, ಉಳ್ಳಾಗಡ್ಡಿ ಕೊಚ್ಚಿ, ಕೊತ್ತಂಬರಿ ಜೊತಿಗೆ ಉದುರಿಸಿಕೊಂಡ್ರ… ಆಹಹಾ.. ಹಲ್ಲಿರಲಾರದವರೂ ನುರೀತಾರ.. ಇವನ್ನು.

ಇನ್ನೂ ರುಚಿ ಮಾಡ್ಕೊಬೇಕಂದ್ರ ಇದರ ಮ್ಯಾಲೆ ಖಾರಾ ಶೇವುನು ಉದರಸ್ಕೊತಾರ. ಇನ್ನ ಉಪವಾಸ ಇರೋರಿಗೆ ಅವಲಕ್ಕಿ ಯಾವತ್ತಿದ್ದರೂ ಆಸರ ಆಗ್ತದ. ಹಿಂಗ ಹಚ್ಚಿದವಲಕ್ಕಿಗೆ ಮೊಸರು ಕಲಿಸ್ಕೊಂಡು ತಿಂದ್ರ ಹೊಟ್ಟಿ ಸಮಾಧಾನ ಇರ್ತದ. ಆ್ಯಸಿಡಿಟಿನೂ ಆಗೂದಿಲ್ಲ. 

ಇಲ್ಲಾಂದ್ರ ಅವಲಕ್ಕಿ ನೆನಸಿ, ಕೆನಿಮೊಸರು, ಒಂಚೂರು ಹಾಲು ಕಲಿಸಿ, ಮೆಂತ್ಯ ಮೆಣಸಿನಕಾಯಿ ಒಗ್ಗರಣಿ ಕೊಟ್ರ ಮಸ್ತ್‌ ಮೊಸರವಲಕ್ಕಿ ರೆಡಿ. ಇನ್ನ ಇತ್ತಿತ್ಲಾಗ ಇದಕ್ಕ ಗೋಡಂಬಿ, ದ್ರಾಕ್ಷಿ, ದಾಳಿಮಭೆ ಕಾಳು ಹಾಗಕಿ ವ್ಯಾಲ್ಯು ಎಡಿಷನ್‌ ಮಾಡ್ತಾರ.

ಇರಲಿ ಅವರವರ ಆಯ್ಕೆಗೆ ಬಿಟ್ಟಿದ್ದು. ನನಗ ಅವಲಕ್ಕಿಯ ಈ ಗುಣಾನ ಸೇರೂದು. ಹುರುದ್ರೂ, ಕರದ್ರೂ, ತೊಯ್ಸಿದ್ರೂ, ನೆನಸಿದ್ರೂ, ಒಗ್ಗರಣಿ ಹಾಕಿದ್ರೂ, ಹಾಕದಿದ್ರೂ ಒಟ್ನಾಗ ನಮಗ ಆಸರಿ ಆಗ್ತದ. ಅದಕ್ಕೇ ಬುತ್ತಿಗೆ ಕಟ್ಟಿಕೊಡಾಕೂ ಅವಲಕ್ಕಿ. ಮನ್ಯಾಗ ಕೂಡಿಡಾಕೂ ಅವಲಕ್ಕಿ.
ಸುಧಾಮ ತಂದ ಅವಲಕ್ಕಿಯಿಂದ ಅವನ ದಾರಿದ್ರ್ಯ ದೂರ ಆಯ್ತಂತ. ಹಂಗಾಗಿ ಅವಲಕ್ಕಿ ಆತಿಥ್ಯ ಕೊಟ್ರ ಬಾಂಧವ್ಯ ಗಟ್ಟಿಯಾಗ್ತದಂತ ಅಂತಾರ. ಮತ್ತ ಸಮೃದ್ಧಿನೂ ಇರ್ತದ ಅಂತಾರ.

ಮತ್ತ ಬಂದೋರಿಗೆ ಕರದು ರುಚಿರುಚಿ ಅವಲಕ್ಕಿ ಕೊಟ್ರ, ಯಾರು ಮುಖ ಸುಟ್ಕೊತಾರ ಹೇಳ್ರಿ? ಹಚ್ಚಿದವಲಕ್ಕಿ ಮನ್ಯಾಗಿದ್ರ ಯಾರಿಗರೆ ಉಪವಾಸ ಇರಾಕ ಸಾಧ್ಯ ಐತೇನು? ಉಪವಾಸ ಕಳಸಾಕ ಸಾಧ್ಯ ಐತೇನು? ಹಿಂಗಾಗಿಯೇ ಅವಲಕ್ಕಿ ಇದ್ರ, ಅವ.. ಲಕ್ಕಿ ಅಂತ ಹೇಳಿರಬಹುದು. 

ನಮ್ಮಲ್ಲಿ ಗೊಜ್ಜವಲಕ್ಕಿ ಮಾಡೂದಿಲ್ಲ. ಆದ್ರ ಬಾಳೆಹಣ್ಣು, ಬೆಲ್ಲ, ಹಸಿಕೊಬ್ರಿ ಜೊತಿ ಕಲಿಸಿದಾಗ ಆಹಹಾ.. ಮನುಷಾರೇನು ದೇವರೇ ಪ್ರಸನ್ನ ಆಗ್ತಾರಲ್ಲ.. ಇನ್ನ ನಮ್ಮ ನಿಮ್ಮ ಮಾತೇನು..?

‍ಲೇಖಕರು ಅನಾಮಿಕಾ

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: