ದರ್ಶನ್ ಜಯಣ್ಣಸರಣಿ- ಕೇಬಲ್ ವೈರ್ !

ದರ್ಶನ್ ಜಯಣ್ಣ

ನನ್ನ ಮತ್ತು ಅಮ್ಮನದು ಕರುಳ ಬಳ್ಳಿಯ ಸಂಬಂಧವಾದರೆ, ನನ್ನ ಮತ್ತು ಅಪ್ಪನದ್ದು ಕೇಬಲ್ ವೈರಿನ ಸಂಬಂಧ. ಚಿಕ್ಕವನಾಗಿದ್ದಾಗ ನಾನು ಭಯಂಕರ ಉಡಾಳನಾಗಿದ್ದೆ. ಮನೆಯ ತಾರಸಿಯಿಂದ ತಾರಸಿಗೆ ಎಗರುತ್ತಿದ್ದೆ. ಸಿಕ್ಕ ಸಿಕ್ಕ ಮರ ಏರುತ್ತಿದ್ದೆ. ಒಂದು ಚರಂಡಿಯ ಒಳಗೆ ನುಗ್ಗಿ ಮತ್ತೊಂದು ಕಡೆಯಿಂದ ಆಚೆ ಬರುತ್ತಿದ್ದೆ. ಬೆಳಿಗ್ಗೆ ಏಳಕ್ಕೆ ಮನೆಬಿಟ್ಟರೆ ಕ್ರಿಕೆಟ್ಟು, ಚಿನ್ನಿದಾಂಡು, ಗೋಲಿ, ಮ್ಯಾಚಸ್ಸು ಎಲ್ಲಾ ಆಡಿ ಹಿoದಿರುಗುವಾಗ ಗಂಟೆ ಹನ್ನೊಂದಾಗಿರುತ್ತಿತ್ತು. ಆಗ ಸ್ನಾನ ತಿಂಡಿ ಇತ್ಯಾದಿ. 

ಅಂಗಡಿ ಮನೆಯವರಾದ ನಮ್ಮ ಮನೆಯಲ್ಲಿ ಸದಾ ಕೆಲಸ ಇರುತ್ತಿತ್ತು. ಒಂದಿಬ್ಬರು ಕೆಲಸದವರು ಇದ್ದರಾದರೂ ಅವರು ಅವರ ಕೆಲಸ ಮುಗಿಸಿ ಹೋಗಿಬಿಡುತ್ತಿದ್ದರಾದ್ದರಿಂದ ಅಪ್ಪ ಮತ್ತು ಅಮ್ಮನ ಮೇಲೆ ಸದಾ ಬೆಟ್ಟದಷ್ಟು ಕೆಲಸ ಬೀಳುತ್ತಿತ್ತು. ಇಂಥದರಲ್ಲಿ ನಾನು ಊರೂರು ಅಲೆದರೆ ಸುಮ್ಮನಿರುತ್ತಾರೆಯೇ? ಅದಕ್ಕೆ ನಾನು ಬರುವ ಹಾದಿಯನ್ನೇ ಕಾಯುತ್ತಾ ಬಂದೊಡನೆ ಅಂದಿನ ತನ್ನ ಸಿಟ್ಟಿನನುಸಾರ, ನನ್ನ ವೇಷಾನುಸಾರ ಅಥವಾ ನಾನು ಹೋದ ಮತ್ತು ಮರಳಿ ಬಂದ  ಸಮಯಾನುಸಾರ ಅಪ್ಪ ಚೆಚ್ಚುತ್ತಿದ್ದರು ! 

ಶುರುವಿನಲ್ಲಿ ನನಗೆ ಬಹಳಾ ಹೆದರಿಕೆಯಾಗುತ್ತಿತ್ತು. ಅಪ್ಪ ಹೊಡೆಯುವಾಗ ಹಿಂದೂ ಮುಂದೂ ನೋಡುತ್ತಿರಲಿಲ್ಲ. ತಲೆಗೆ, ಬೆನ್ನಿಗೆ, ಕುಂಡೆಗೆ, ಕಾಲಿಗೆ, ಕೈಯ್ಯಿಗೆ, ಕೆನ್ನೆಗೆ ಆಹಾ ! “ತಡಕ್ ಮುಟ್ಟಿಕೊಳ್ಳೋದು ” ಅಂತಾರಲ್ಲ ಹಾಗೆ. 

ಮನೆಯಲ್ಲಿ ಅಮ್ಮನಿಗೆ ನನ್ನ ಉಡಾಳತನ ಗೊತ್ತಿದ್ದರಿಂದ ಅಮ್ಮಾ ಇದನ್ನು ವಿರೋಧಿಸುತ್ತಿರಲಿಲ್ಲ. ನನ್ನ ಬೆಂಬಲಕ್ಕೆ ಬರುತ್ತಿದ್ದವಳು ಅಜ್ಜಿ ಮಾತ್ರ. 

“ಇರೋನೊಬ್ಬ ಮಗಂಗೆ ಹಿಂಗೇ ಹೊಡಿತೀಯಲ್ಲ ಹೆಂಗಾರ ಮನಸು ಬತ್ತದೋ ನಿಂಗೆ ” ಅಂತ ಅಪ್ಪನನ್ನು ಜಾಡಿಸಿಕೊಳ್ಳುತ್ತಿದ್ದಳು. 

ಆಗೆಲ್ಲಾ ಅಪ್ಪ “ನಂಗೆ ನಮ್ಮಪ ಹೊಡಿವಾಗಲೆಲ್ಲ ಸುಮ್ಮನೆ ಇರ್ತಾ ಇದ್ದೆ ಈಗೇನು ಮೊಮ್ಮಗ ಅಂತಾನಾ?” ಅಂತ ಕಿಚಾಯಿಸುತ್ತಿದ್ದರು. 

ಅಜ್ಜಿ ಅದಕ್ಕೆ ಪ್ರತಿಕ್ರಿಯಿಸುತ್ತಾ “ನೀನು ಇವನಿಗಿಂತಾ ನೂರರಷ್ಟು ಕೆಟ್ಟಿದ್ದೆ  ಈಗ ಇವನನ್ನು ಹೊಡಿತೀಯಾ?” ಅನ್ನುತ್ತಿದ್ದಳು. 

ನನಗೆ ಆಗ ಸಮಾಧಾನವಾಗುತ್ತಿತ್ತಾದರೂ ಅಪ್ಪ ತನ್ನಪ್ಪನ ಮೇಲಿದ್ದ ಸಿಟ್ಟನ್ನೆಲ್ಲಾ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾನಾ ಎಂಬ ಗುಮಾನಿ ಯಾವಾಗಲೂ ಇತ್ತು. 

ಅಜ್ಜಿ ಮನೆಯಲ್ಲಿದ್ದಾಗ ಹೇಗೋ ಸ್ವಲ್ಪ ಒದೆ ತಿಂದು ಬಚಾವಾಗುತ್ತಿದ್ದೆನಾದರೂ ಅವಳು ತನ್ನ ಹೆಣ್ಣುಮಕ್ಕಳ ಮನೆಗೋ ಅಥವಾ ಅಕ್ಕತಂಗಿಯರ ಮನೆಗೋ ಹೋದಾಗ ಅಪ್ಪ ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರು. ನಾನಾದರೂ ಮಾಡುವ ಆಟಾಟೋಪವನ್ನು ಕಡಿಮೆ ಮಾಡುತ್ತಿರಲಿಲ್ಲ. ಕಾರಣ ಸಿಗುವುದೊಮ್ಮೆ ಬೇಸಿಗೆ ರಜಾ, ಅಪ್ಪನ ಹೊಡೆತಕ್ಕೆ ಅಂಜಿದರೆ ನಷ್ಟ ನನಗೇ ಆಲ್ಲವೇ? 

ಬರಬರುತ್ತಾ ನಾನು ಎಷ್ಟು ಜಡವಾಗಿಬಿಟ್ಟೆನೆಂದರೆ ಮನೆಗೆ ಬಂದೊಡನೆ ಅಮ್ಮಾ ಬೈಯ್ಯುತ್ತಿದ್ದಳು. ಅಪ್ಪ ಹೊಡೆಯುತ್ತಿದ್ದರು. ನಾನು ಮಾತ್ರ ಅದನ್ನು ಒಂದು ಪ್ರಕ್ರಿಯೆಯೋ ಎಂಬಂತೆ ಸಹಿಸುತ್ತಿದ್ದೆ. ಶುರುಶುರುವಿನಲ್ಲಿ ತಪ್ಪಿಸಿಕೊಳ್ಳುವ ಕಳ್ಳಾಟವನ್ನು ಆಡುತ್ತಿದ್ದೆನಾದರೂ ಅದರಿಂದಾ ಹೆಚ್ಚು ಪೆಟ್ಟು ಬೀಳುತ್ತಿದ್ದರಿಂದ ಸುಮ್ಮನೆ ಒದೆ ತಿನ್ನುತ್ತಿದ್ದೆ. ತಿಂದೂ ತಿಂದೂ ಮೊಂಡಾಗಿ ಹೋಗಿದ್ದೆ. ಬಹುಷಃ ಇದೇ ಅಪ್ಪನ ಚಿಂತೆಗೆ ಕಾರಣವಾಗಿದ್ದು. 

ಒಂದು ದಿನ ಅಪ್ಪ ಒಂದು ಮಾರು ಹಳೆಯ ಕೇಬಲ್ ವೈರನ್ನು ಕಟ್ ಮಾಡಿ ಅದನ್ನು ಎರಡು ಭಾಗವಾಗಿ ಮಡಿಚಿ ನನ್ನ ಕೈಲಿ ಕೊಟ್ಟು ” ತಗೋ ಅಲ್ಲಿ ಸಜ್ಜೆಯ ಮೇಲೆ ಇಡು ” ಎಂದರು. 

ನಾನು “ಏಕಿದು ಅಪ್ಪಾಜಿ” ಎಂದು ಕೇಳಿದಾಗ “ನಿಂಗ್ಯಾಕೆ ಅಲ್ಲಿಡು ಸುಮ್ಮನೆ” ಎಂದರು. 

ನಾನು ಹಾಗೆಯೇ ಮಾಡಿ ಆಟಕ್ಕೆ ಹೊರಟುಬಿಟ್ಟೆ. 

ಇದಾದ ಕೆಲವು ದಿನಗಳ ನಂತರ ಕ್ರಿಕೆಟ್ ಟೂರ್ನಮೆಂಟ್ ನ ಸಲುವಾಗಿ ಒಂದಿಡೀ ದಿನ ಮನೆಯಿಂದ ಹೊರಗೆ ಇದ್ದು ಸಂಜೆ ಮನೆಗೆ ಬಂದಾಗ ಅಪ್ಪ ಅಂಗಡಿಗೆ ಹೊರಡುವ ಧಾವಂತದಲ್ಲಿದ್ದರು. ನನ್ನನ್ನು ನೋಡಿದೊಡನೆಯೇ ಕೆಂಡಾಮಂಡಲವಾಗಿ “ಎಲ್ಲಿ ಹೋಗಿದ್ದೋ ಬೇವರ್ಸಿ ನನ್ನ ಮಗನೆ ” ಎನ್ನುತ್ತಲೇ ಸಜ್ಜೆಯ ಮೇಲಿದ್ದ ಕೇಬಲ್ ವೈರನ್ನು ತೆಗೆದುಕೊಂಡು ಹಿಗ್ಗಾಮುಗ್ಗಾ ಕೈಗೆ, ಕಾಲಿಗೆ, ಬೆನ್ನಿಗೆ, ಕುಂಡೆಗೆ ಹೊಡೆದರು. ನಾನು ಎಷ್ಟು ಚೀರಿದೆನೆಂದರೆ (ನಿಜವಾದ ನೋವಾಗಿತ್ತು !) ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಅಪ್ಪ ಸಾಕುಮಾಡಲಿಲ್ಲ. 

“ಹೋಗ್ತೀಯ ಇನ್ನಮೇಲೆ ಆಡೋಕೆ? ಹೋಗ್ತೀಯ ಬಾಂಚದ್ ನನ್ನ ಮಗನೇ” ಎನ್ನುತ್ತಾ, ನಾನು “ಇಲ್ಲಾ ಹೋಗಲ್ಲ” ಎಂದರೂ ಹೊಡೆಯುತ್ತಿದ್ದರು. ಕಡೆಗೆ ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಅಥವಾ ನನ್ನನ್ನು ಹೊಡೆದು ಹೊಡೆದು ದಣಿದು ಕೈಚೆಲ್ಲಿದಾಗ ನಾನು ಮೆತ್ತಗಾಗಿದ್ದೆ. ಮೈಮೇಲೆಲ್ಲಾ ಬರೆ ಎದ್ದಿದ್ದವು. ಅಪ್ಪನಿಗೆ ಅಂಗಡಿಗೆ ಲೇಟಾದ್ದರಿಂದ ಹೊರಟರು. ನಾನು ಮೂಲೆಯಲ್ಲಿ ಕುಂತು ಅಳುತ್ತಿದ್ದೆ. 

ಅಮ್ಮ ಬಂದವಳು “ಯಾಕೋ ಇಂತಾ ಆಟ ಆಡ್ತೀಯ? ಅವ್ರು ಹೊಡೀತಾರೆ ಅಂತ ಗೊತ್ತಿದ್ದೂ ಗೊತ್ತಿದ್ದೂ… ಥೂ, ನನಗೆ ಎಂಥಾ ಸಂಕಟವಾಗುತ್ತೆ ಗೊತ್ತಾ? ” ಅನ್ನುತ್ತಿದ್ದಳು. ನನಗೋ ಸಂಕಟವಾದರೆ ಮತ್ತೇಕೆ ಅಮ್ಮ ಬಿಡಿಸಿಕೊಳ್ಳಲು ಬರುತ್ತಿರಲಿಲ್ಲ ಎಂಬುದೇ ತಿಳಿಯುತ್ತಿರಲಿಲ್ಲ. ನಾನೂ ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. ಅದರಿಂದ ಆಗಬೇಕಾದ್ದು ಏನಿದೆ? 

ಆದರೆ ಅವತ್ತು ನನ್ನ ಕೈಮೇಲಿನ ಬರೆಯನ್ನು ನೋಡಿದ ಅಮ್ಮ ನಿಜಕ್ಕೂ ಕಂಗಾಲಾಗಿದ್ದಳು. ಪೂರ್ತಿ ಬಟ್ಟೆ ಬಿಚ್ಚಿಸಿ ನೋಡಿದರೆ ಮೈಯೆಲ್ಲಾ ಬರೆಗಳು. ಅದನ್ನು ನೋಡಿ ಅತ್ತುಬಿಟ್ಟಳು. ನಾನು ನಡುಗುತ್ತಿದ್ದೆ. ಇದನ್ನು ಅಪ್ಪನಿಗೆ ಅಂಗಡಿಯಲ್ಲಿ ಹೇಳಿದಳೆಂದು ಕಾಣುತ್ತದೆ. ಸಂಜೆ ಎಂಟರ ಸುಮಾರಿಗೆ ಅಪ್ಪ ಅಮ್ಮನನ್ನು ಅಂಗಡಿಯಲ್ಲಿ ಬಿಟ್ಟು ಮನೆಗೆ ಬಂದರು. ನಾನು ಮತ್ತೆ ಒದೆ ಬೀಳದಿರಲಿ ದೇವರೇ ಎಂದು ಪ್ರಾರ್ಥಿಸುವಾಗಲೇ “ಹೋಗಿ ಅರಳೆ ಎಣ್ಣೆ ತೆಗೆದುಕೊಂಡು ಬಾ” ಎಂದರು. ನಾನು ತಂದೆ. ಬಟ್ಟೆ ಬಿಚ್ಚು ಅಂದರು. ಬಿಚ್ಚಿದೆ.

ಅಪ್ಪ ಅದನ್ನು ನೋಡಿ ಬೆಚ್ಚಿದರು. ಎರಡು ಸೆಕೆಂಡಿಗೆ ಕಣ್ಣು ತುಂಬಿತು. ಆದರೂ ತನ್ನ ಎಂದಿನ ಗತ್ತಿನಲ್ಲಿಯೇ ಬರೆಯಿದ್ದಲ್ಲೆಲ್ಲಾ ಹರಳೆಣ್ಣೆ ಹಚ್ಚಿ, ಫ್ಯಾನು ಹಾಕಿ “ಯಾಕೋ ಹಿಂಗೆ ಹೊಟ್ಟೆ ಉರಿಸ್ತೀಯ? ನಮ್ಮಪ್ಪ ನನ್ನನ್ನು ಹೊಡೆಯುತ್ತಿದ್ದ ನಾನು ಸುಧಾರಿಸಿದೆ. ನೀನ್ಯಾಕೆ ಹಿಂಗೆ ಮಾಡ್ತೀಯಾ? ನನ್ನ ಜೊತೆಯಲ್ಲಿ ಅಂಗಡಿಯಲ್ಲಿ ಯಾವಾಗ್ಲೂ ಇರಬಾರ್ದ? ” ಎಂದಾಗ ನನಗೂ ಅಳು ಬಂತು. ಅದರ ಜೊತೆಗೇ ಒಂದು ಆಲೋಚನೆ “ಹಂಗಾದರೆ ಇನ್ನು ಮೇಲೆ ಅಂಗಡಿ ಮನೆಯಲ್ಲಿ ಮಾತ್ರ ಇರಬೇಕಾ ” ಅಪ್ಪ ಎದ್ದು ಹೋಗಿದ್ದರು. 

ಅಂದು ತಿಂದ ಏಟು ನನ್ನನ್ನು ಬಲುಬೇಗನೆ ನಿದ್ರೆಗೆ ಜಾರಿಸಿತ್ತು. ಇದಾದ ನಂತರ ಹಲವುಬಾರಿ ಅಪ್ಪನಿಂದ ಒದೆ ತಿಂದಿರುವೆನಾದರೂ ಅಪ್ಪ ಅಂದಿನಂತೆ ಮತ್ತೆಂದೂ ಚೆಚ್ಚಿ ಕೆಡವಲಿಲ್ಲ. ಹಾಗೆಯೇ ಕೇಬಲ್ ಹೊಡೆತಕ್ಕೆ ನನ್ನ ಮೈಮೇಲೆ ಮೂಡಿದ ಬರೆಗಳನ್ನು ಹರಳೆಣ್ಣೆ ಹಚ್ಚಿ ಕೊಂಚ ತಂಪಾಗಿಸುವುದ ಯಾವತ್ತೂ ಮರೆಯುತ್ತಿರಲಿಲ್ಲ ! 

‍ಲೇಖಕರು Avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: