ದರ್ಶನ್‌ ಜಯಣ್ಣ ಸರಣಿ -ಆ ಅರಣ್ಯದೊಳಗೆ..

ದರ್ಶನ್ ಜಯಣ್ಣ 

ತುಮಕೂರು ನಗರದಿಂದ ಕೆಲವೇ ಕಿಲೋಮೀಟರು ದಾಟಿದರೆ ನಾಮಚಿಲುಮೆ ದೇವರಾಯನದುರ್ಗ ಕಾಡುಗಳಿವೆ. ಶ್ರೀ ರಾಮಚಂದ್ರನು ವನವಾಸದಲ್ಲಿದ್ದಾಗ ಸೀತೆ ಲಕ್ಷ್ಮಣರೊಟ್ಟಿಗೆ ಇಲ್ಲಿಗೆ ಬಂದಿದ್ದನಂತೆ. ಆಗೊಮ್ಮೆ ಸೀತೆಗೆ ತಿಲಕವಿಡಲು ನೀರು ಬೇಕಾಯ್ತು. ಸುತ್ತ ಮುತ್ತ ನೋಡಿದರೆ ದಟ್ಟ ಕಾಡು.

ಏನು ಮಾಡುವುದು? ತಕ್ಷಣವೇ ಬಾಣ ತೆಗೆದುಕೊಂಡು ತಾನು ನಿಂತಿದ್ದ ಬಂಡೆಯಮೇಲೆ ಬಿಟ್ಟ. ನೀರು ಜಿನುಗಿತು. ಅದೇ ನೀರಿನಲ್ಲಿ ಸೀತೆಗೆ ತಿಲಕವಿಟ್ಟ. ಕಾಲಾಂತರದಲ್ಲಿ ಹೀಗೆ ಜಿನುಗಿದ ನೀರಿದ್ದ ಕಾಡು ಅಥವಾ ಪ್ರದೇಶ ನಾಮದಚಿಲುಮೆಯಾಯಿತು. ಅಂದು ಶುರುವಿಟ್ಟ ನೀರು ಇಂದೂ ಜಿನುಗುತ್ತಲೇ ಇದೆ.

ಹಾಗೆಯೇ ಹಿರಣ್ಯಾಕ್ಷನನ್ನು ಕೊಂದ ಉಗ್ರ ನರಸಿಂಹ ಕೊಂಚ ಕಾಲ ಬಂದು ಇಲ್ಲಿಯ ಬೆಟ್ಟದ ಮೇಲಿನ ಕಾಡಿನಲ್ಲಿ ತಪಸ್ಸು ಮಾಡಿದ್ದನಂತೆ ಅಲ್ಲಿ ಈಗ ಯೋಗಾ ನರಸಿಂಹ – ಭೋಗಾ ನರಸಿಂಹ ನೆಲೆಗೊಂಡಿದ್ದಾನೆ. ಈ ಪ್ರದೇಶ ಶ್ರೀ ಕೃಷ್ಣದೇವರಾಯನ ಆಳ್ವಿಕೆಯಡಿ ಇದ್ದದ್ದರಿಂದ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂದಿದೆ. ಶಿಖರದ ತುತ್ತತುದಿಗೆ ಚಾರಣ ಮಾಡಿದರೆ ಅಲ್ಲೊಂದು ಶಿಥಿಲವಾದ ಕೋಟೆಯೂ ಕಾಣಸಿಗುತ್ತದೆ.

ಈ ಅರಣ್ಯ ಪ್ರದೇಶ ಈಗ ಸರ್ಕಾರದ ಸಂರಕ್ಷಿತ ಅರಣ್ಯ ಆದ್ದರಿಂದ ಅದನ್ನು ನಾಡಭಾಷೆಯಲ್ಲಿ ” ಮನ್ನಾ ಜಂಗ್ಲಿ ” ಎನ್ನುತ್ತಾರೆ. ಅಂದರೆ ಇಲ್ಲಿ ಮರಕಡಿಯುವುದು, ಬೇಟೆಯಾಡುವುದು ಮನ್ನಾ, ಇವನ್ನು ಮಾಡಿದರೆ ಸರ್ಕಾರ ಕೊಡುವುದು ಗುನ್ನಾ ಎಂದು ಚಿಕ್ಕಂದಿನಲ್ಲಿ ನಾವು ಆಡಿಕೊಳ್ಳುತ್ತಿದ್ದೆವು.

ಅಪ್ಪನ ಪ್ರಕಾರ ಈ ಪ್ರದೇಶದಲ್ಲಿ ಈಗಿರುವ ಜಿಂಕೆ, ಕೋತಿ, ಕಾಡೆಮ್ಮೆ ಮತ್ತು ಕಾಡುಹಂದಿಗಳ ಜೊತೆಗೇ ಕಿರುಬಗಳೂ ಇದ್ದವಂತೆ. ಈಗಲೂ ಕೆಲವೊಮ್ಮೆ ಚಿರತೆಗಳು, ಆನೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ರಾತ್ರಿಯ ಹೊತ್ತಿನಲ್ಲಿ ಸೈಕಲ್ ಅಥವಾ ದ್ವಿಚಕ್ರ ವಾಹನದಲ್ಲಿ ಒಡಾಡುವುದು ಸಲ್ಲ. ಆದರೂ ಯಾರೂ ಇದನ್ನು ಪಾಲಿಸೋಲ್ಲ !

ಈ ಭಾಗದ ಕಾಡುಗಳಲ್ಲಿ ಹೆಚ್ಚಾಗಿ ತೇಗ, ಹೊನ್ನೆ, ಬೀಟೆ, ಅತ್ತಿ, ಆಲ, ಭೂರುಗದ ಮರ, ತಾಳೆಯ ಮರಗಳೂ ಯಥೇಚ್ಛವಾಗಿವೆ. ಎಲ್ಲವೂ ಫಾರೆಸ್ಟ್ ಆಫೀಸಿನ ಕಣ್ಗಾವಲಿನಲ್ಲಿದೆ. ಹಳೆಯ ಮರಗಳನ್ನು ಉರುಳಿಸಿ ನಾಟವಾಗಿಸಲು ಕಾಂಟ್ರಾಕ್ಟ್ ಕೊಡುತ್ತಾರೆ. ಹೆಚ್ಚು ಕೂಗಿದವನಿಗೆ ಮರ ದಕ್ಕುತ್ತದೆ. ಕಾಂಟ್ರಾಕ್ಟ್ ಹೊರತಾದ ಯಾವುದೇ ಮರವನ್ನು ಮುಟ್ಟುವಂತಿಲ್ಲವಾದರೂ ಅದಾಗೇ ಕೆಳಗೆ ಬಿದ್ದ ಪುಳ್ಳೆ, ಎಲೆ, ಕಾಯಿ, ಕೊಂಬೆಯನ್ನು ಸ್ಥಳೀಯರು ಉಪಯೋಗಿಸಲು ಅಡ್ಡಿ ಇಲ್ಲ.

ಅಪ್ಪ ಒಂದುಕಾಲದಲ್ಲಿ ಸೌದೆ ಕಂಟ್ರಾಕ್ಟರ್ ಆಗಿದ್ದರಿಂದ ಅವರಿಗೆ ಇಲ್ಲಿಯ ಕಾಡು, ಕಣಿವೆ, ಶಿಖರ ಒಳದಾರಿಗಳೆಲ್ಲ ತಿಳಿದಿದ್ದವು. ಅದರ ಜೊತೆಗೆ ಬೆಟ್ಟದ ತಪ್ಪಲಿನ ದುರ್ಗದ ಹಳ್ಳಿ ಯಲ್ಲಿ ನಮ್ಮ ಜಮೀನಿದ್ದುದರಿಂದ ಹಳ್ಳಿಯವರೊಡನೆಯೂ ಒಳ್ಳೆಯ ಒಡನಾಟವಿತ್ತು.

ನಮ್ಮ ಗ್ರಂಥಿಗೆ ಅಂಗಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ನಾವು ಮಾರುತ್ತಿದ್ದುದರಿಂದ ಕೆಲವು ಹೋಮ ಹವನಗಳಿಗೆ ಬೇಕಾದ ಸಮಿತ್ತುಗಳನ್ನು ತರಲು ಅಪ್ಪ ನನ್ನನ್ನು ಕರೆದುಕೊಂಡು ಹೊರಡುತ್ತಿದ್ದರು. ನಾವಲ್ಲಿ ಅತ್ತಿ, ಆಲದ ಪುಳ್ಳೆಗಳನ್ನು ಆಯುತ್ತಿದ್ದೆವು. ಉತ್ತರಾಣಿ, ತುಳಸಿ ಕೀಳುತ್ತಿದ್ದೆವು.

ಅಪ್ಪ ಇನ್ನೂ ಬಗೆಬಗೆಯ ಸಮಿತ್ತುಗಳನ್ನು ಒಟ್ಟುಮಾಡುತ್ತಿದ್ದರೂ ನನಗೆ ಅವುಗಳ ಹೆಸರುಗಳು ನೆನಪಿಲ್ಲ ! ಹೀಗೆ ಸಂಗ್ರಹಿಸಿದ ಸಮಿತ್ತುಗಳನ್ನು ಬೇರೆಬೇರೆಯಾಗಿ ಕಟ್ಟಿ ಬ್ಯಾಗುಗಳಲ್ಲಿರಿಸಿ ನಮ್ಮ ಕಿನಿಟಿಕ್ನ ಮುಂದಿರಿಸಿ ಕಾಡಿನಲ್ಲೊಂದು ರೌಂಡು ಹೊಡೆದು ಅಲ್ಲಿದ್ದ ಶನಿಮಹಾತ್ಮನ ಗುಡಿಯಲ್ಲಿ ಇಣುಕಿ ನಮಿಸಿ ಮನೆಗೆ ಹೊರಡುತ್ತಿದ್ದೆವು.

ಹೀಗುರುವಾಗ ಒಂದು ದಿನ ಅಪ್ಪ ಪುಳ್ಳೆ ಆಯುತ್ತಾ ಆಯುತ್ತಾ ಮುಂದೆ ಮುಂದೆ ಹೋಗಿಬಿಟ್ಟರು. ನಾನು ಉತ್ತರಾಣಿ ಕೀಳುತ್ತಾ ಅದನ್ನು ಬಡಿದು ಕಟ್ಟುತ್ತಿದ್ದೆ. ಏನೋ ಶಬ್ಧವಾದಂತಾಯಿತು. ಸೆಕೆಂಡುಗಳೊಳಗೆ ಶಬ್ದ ಹೆಚ್ಚಾಗತೊಡಗಿತು. ನನಗ್ಯಾಕೋ ಅದು ಘರ್ಜನೆಯಂತೆನಿಸಿ ಬೆಚ್ಚಿದೆ. ಶಬ್ದ ತೀವ್ರವಾದಾಗ ಅಕ್ಕ ಪಕ್ಕ ಭಯದಿಂದ ಕಣ್ಣಾಡಿಸಿದೆ. ಅಪ್ಪ ಇರಲಿಲ್ಲವಾದ್ದರಿಂದ ಒಮ್ಮೆಲೇ ಭಯವಾಗಿ ಜೋರಾಗಿ ಕಿರುಚಿದೆ. ಅಷ್ಟೇ ! ಅಪ್ಪ ಎಲ್ಲಿದ್ದರೋ ‘ಅಯ್ಯೋ ‘ ಎನ್ನುತ್ತಾ ಪುಳ್ಳೆ ಆಯುವ ಬ್ಯಾಗನ್ನು ಎಸೆದು ಭಯ ಮತ್ತು ಆತಂಕದಿಂದ ನನ್ನತ್ತ ಓಡಿ ಬಂದರು. ನಾನು ನಡುಗುತ್ತಿದ್ದೆ. ಅಪ್ಪನೂ ಸಹ !

ಶಬ್ದ ಕ್ಷೀಣವಾಗತೊಡಗಿತು. ಅಪ್ಪ ನಿರಾಳನಾಗಿ ಹೇಳಿದರು.

“ದಚ್ಚು, ಅದು ಮೋಡದ ಒಳಗೆ ವಿಮಾನ ಹೋಗುತ್ತಿರೋ ಸದ್ದು ಕಣೋ. ಒಂದು ನಿಮಿಷ ನನ್ನ ಜಂಘಾಬಲವೇ ಉಡುಗಿಹೋಯ್ತು ಗೊತ್ತಾ
ನಾನು ನನ್ನ ಮೂರ್ಖತನಕ್ಕೆ, ಅಸಹಾಯಕತೆಗೆ, ಭಯಕ್ಕೆ, ಪುಕ್ಕಲುತನಕ್ಕೆ ತಲೆ ತಗ್ಗಿಸಿದೆ. ಅವತ್ತಿನಿಂದ ಅಪ್ಪ ನನ್ನನ್ನು ಒಬ್ಬನನ್ನೇ ಬಿಟ್ಟು ಪುಳ್ಳೆ ಆಯುತ್ತಿರಲಿಲ್ಲ ಮತ್ತು ನಾನೂ ಅಪ್ಪನ ಬೆನ್ನು ಬಿಡುತ್ತಿರಲಿಲ್ಲ.

‍ಲೇಖಕರು Avadhi

October 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಸೊಗಸಾಗಿದೆ. ಮುಂದಿನ ಸರಣಿಗೆ ಕಾಯುವಂತಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: