‘ರಾಮಾಯಣ ದರ್ಶನಂ’ನಲ್ಲಿ ಸೀತಾ ಮೌಲ್ಯಗಳು

ಸುಮಾ ವೀಣಾ

ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು ಯಾವ ಮಾದರಿಯೂ ಇಲ್ಲದೆ ಇರುವಾಗ ತಾನೆ ಶಾಶ್ವತ ಮಾದರಿಯಾಗಿ ಹೋಗಿರುವವಳು. ರಾಮಾಯಣದ ಹುಟ್ಟಿಗೂ ಹೆಣ್ಣಿನ ದನಿಗೂ ನೇರ ನಂಟಿದೆ. 

ಗಂಡು ಕ್ರೌಂಚವನ್ನು ಹೊಡೆದು ಉರುಳಿಸಿ ವಾಲ್ಮೀಕಿ ಕಾರಣವಾಗುವುದು ಹೆಣ್ಣಿನ ನೋವಿಗೆ. ಆ ಹೆಣ್ಣಿನ ಆರ್ತನಾದವೇ ಕಾವ್ಯದ ಉದ್ದಕ್ಕೂ ಸ್ಥಿತವಾಗಿದೆ. ಒಂದರ್ಥದಲ್ಲಿ ಹೆಣ್ಣಿನ ಶೋಕವೇ ರಾಮಾಯಣ ಕಾವ್ಯಕ್ಕೆ ಆಧಾರ ಶೃತಿಯಾಗಿದೆ ಎನ್ನಬಹುದು. ಕುವೆಂಪುರವರು ಸೂಕ್ಷ್ಮವಾಗಿ ಅತ್ಯಂತ ಗೌಣವಾಗಿದ್ದ ಪಾತ್ರಗಳನ್ನೂ ಹೇಗೆ ದರ್ಶಿಸಿದ್ದಾರೆ ಎಂಬುದನ್ನು ಇಲ್ಲಿ ಚುರುಕಾಗಿ ನೋಡುವ ಕಿರುಪ್ರಯತ್ನವಿದೆ. 

ಆ ನೋವು ನಮ್ಮೆಲ್ಲರ ಬದುಕಲ್ಲಿ ಬಂದು ಹೋಗುವ ನೋವಿನ ಮೂಲವೇ ಆಗಿದೆ. ಒಬ್ಬ ವ್ಯಕ್ತಿ ಅನುಭವಿಸಬೇಕಾದ ಕಷ್ಟ ಕೋಟಲೆಗಳನ್ನೇ  ರಾಮನೂ ಅನುಭವಿಸಿರುವುದು. ಕೌಟುಂಬಿಕ ಕಲಹ, ಆಸ್ತಿಯ ಕಿತ್ತಾಟ, ದುರ್ಬಲ ತಂದೆ, ಸಣ್ಣ ವಯಸ್ಸಿನ ಮಲತಾಯಿ, ಚಾಡಿಮಾತು, ಅದಕ್ಕೆ ಕಾರಣಗಳು ಏನೇ ಇರಲಿ ಅನುಭವಿಸಿದ್ದು ಮಾತ್ರ ಸೀತೆ ಅಲ್ಲವೇ.

‘ಅಗಣಿತ ಗುಣಗಣ ಭೂಷಿತರಾಮ ಪಿತೃವಾಕ್ಯಾ ಪರಿಪಾಲನ ರಾಮ’ ಎಂಬ ಮೌಲ್ಯಗಳಲ್ಲೇ ಕಳೆದು ಹೋದನೇ ರಾಮ? ಎಂದು ಅವನ ಕುರಿತಾದ ನೋವೂ ಇದೆ. ಸರಿಯಾದ ನಿರ್ಧಾರಕ್ಕೆ ರಾಮ ಬರಲಾಗಲಿಲ್ಲವೇ ಅವನಿಗೆ? ತಾನೇ ಗೆದ್ದು ತಂದ ಸೀತೆಯ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಅದು ಹೇಗೆ ಸಾಧ್ಯ? ಅನ್ನುವ ಹತ್ತೆಂಟು ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಈಗ ಪರಿಸ್ಥಿತಿಯೇ ಭಿನ್ನ! ರಾಮನ ಎಲ್ಲಾ ಆದರ್ಶಗಳು ಸಮಾಜದಲ್ಲಿ ಲೀನವಾಗಿವೆ. ಆದರೆ ಹೆಣ್ಣು ಮಕ್ಕಳಿಗೆ ಪಾತ್ರಿವ್ರತ್ಯ ಅನ್ನುವ ಹೇರಿಕೆ ಮುಂದುವರಿದಿದೆ. ‘ಶೀಲ’ ಅನ್ನುವುದು ಕೇವಲ ಹೆಣ್ಣು ಮಕ್ಕಳ ‘ಆಭರಣವೆ?’ ಗಂಡಿಗೆ ಆ ತೊಡುಗೆ ಬೇಡವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ವೈದೇಹಿಯವರ ‘ಶಿವನ ಮೀಸುವ’ ಹಾಡು ಪದ್ಯವನ್ನು ಇಲ್ಲಿ ಉಲ್ಲೇಖಿಸಬಹುದು.

ಭರವಸೆಯ ಬೆಳಕಾಗಿ ಸೀತಾಮಾತೆ

ಶಿವಧನಸ್ಸು ಮುರಿದುಬಿದ್ದಂತೆ ಇಲ್ಲಿ ಸೀತೆಯ ಬದುಕು ಮುರಿದು ಬಿತ್ತೆ ಎನ್ನುವ ವಿಷಾದ ಇಲ್ಲಿ ಕಾಡುತ್ತದೆ. ಧ್ಯಾನಮಾಲಿನಿ ಇಲ್ಲಿ ಬರುವ ಮತ್ತೊಬ್ಬ ಹೆಣ್ಣು ಇಲ್ಲಿ ಅಸಹಾಯಕಳು, ಆದರೆ ಅವಳಂತೆಯೇ ಅಪಹರಣವಾಗಿ ಬಂದ ಸೀತೆ ಇಲ್ಲಿ ಇನ್ನಷ್ಟು ಬೆಳಗಿದ್ದಾಳೆ. ರಾವಣ ಮಲಿನ ವಸನೆಯಾದ ಸೀತೆಯನ್ನು ಕಂಡು  ಪುಟ.ಸಂ.496 ‘ಸಿತೆಯೋ ಪ್ರೇತವೋ ಪೇಳ್, ತ್ರಿಜಟೆ? ನಿದ್ದೆ ಪಾಸುಣಿಸು ಮೀಹಂಗಳಂ ಕಾಣದೀ ಪೆಣ್ ಪೆಣ್ಣೊ?’ ಎಂದು ಇದು ಸೀತೆಯಲ್ಲ ಸೀತೆಯ ಪ್ರೇತ ಎನ್ನುತ್ತಾನೆ. ಆದರೆ ಇಲ್ಲಿ ಸೀತೆಯೂ ರಾವಣನ ಮನಃಪರಿವರ್ತನೆ (ನಾನಕ್ಕನೆನ್ ನಿನಗೆ ತಂಗೆ!) (ಪುಟ ಸಂಖ್ಯೆ.347)  ಮಾಡಲು  ಪ್ರಯತ್ನಿಸುತ್ತಾಳೆ. 

ಸೀತೆ ರಾವಣನನ್ನು ಕುರಿತು ‘ಬಿದಿಯ ಬೇಳ್ವೆಗೆ ಬಂದ ಪಶು ನೀಂ, ದಶಗ್ರೀವ. ಮರುಗುವೆ ನಿನಗೆ, ತಾಯ್ ಕೇಡಾಡಿ ಕಂದಂಗೆ ಮರುಗುವೋಲ್. ನನ್ನ ಕಲ್ಲೆರ್ದೆ ಕರಗುತಿದೊ’ ಎನ್ನುತ್ತಾಳೆ. ಇಲ್ಲಿ ರಾವಣನಿಗೆ ಹೆದರದೆ ದೃಷ್ಟಿಗೆ ದೃಷ್ಟಿ ಕೊಟ್ಟು ಮುಖಕ್ಕೆ ಮುಖ ಕೊಟ್ಟು ಇಲ್ಲಿ ಸೀತೆ ಮಾತನ್ನಾಡುತ್ತಾಳೆ. ಯಾವುದೇ ತಪ್ಪನ್ನು ಮಾಡದವರಿಗೆ ಮಾತ್ರ  ಇದು ಸಾಧ್ಯ. ದುಷ್ಟನಿಗೂ ತಾಯಿಯಾಗಿ ಬುದ್ಧಿ ಹೇಳುವುದು ಇಲ್ಲಿ ಅದ್ಭುತ ಚಲನೆಯಾಗಿ ಮೂಡಿ ಬಂದಿದೆ. ‘ಪಿರಿಯನಹುದಯ್ ನೀಂ, ದಶಗ್ರೀವ: ಪಿರಿತನಂಕೆಡದವೋಲ್ ಎಸಗಿ ಬಾಳ್. ಧರ್ಮ ಕೆಂಡವ ಕೆಣಕಿ ಪಾಳ್ಗೆಯ್ಯದಿರ್ ಲಂಕೆಯಂ’ ಎನ್ನುತ್ತಾ ಕೇಡು ಬುದ್ಧಿಗೆ ಲಂಕೆಯನ್ನು ಆಹುತಿ ಕೊಡಬೇಡ ಎಂದೇ ಸೀತೆ  ನೇರವಾಗಿ ಎಚ್ಚರಿಸುತ್ತಾಳೆ.

ಕುವೆಂಪುರವರು‌ ‘ರಾಮಾಯಣದರ್ಶನಂ’ನ ಉದ್ದೇಶವನ್ನು ‘ಪಾಪಿಗಳುಗುದ್ದರವಿಹುದೌ ಸೃಷ್ಟಿಯ ಮಹದ್ವ್ಯೂಹರಚನೆಯೊಳ್’ ಎಂಬಂತೆ ರಾವಣನ ಮನಸ್ಸನ್ನು ಕಡೆಗೆ ಪರಿವರ್ತನೆಯ ಕಡೆಗೆ ವಾಲಿಸುತ್ತಾರೆ. (ಪುಟ ಸಂ. 783) ‘ಸೀತೆ ತೊಡೆಯನೇರಿಸಿದಳೆರ್ದೆಗಪ್ಪಿ ಲಲ್ಲಿಯ್ಸಿದಳ್ ತನ್ನವಳಿಮಕ್ಕಳಂ, ತಮ್ಮನಂ ಕುಂಭಕರ್ಣನನಂತೆ ತನ್ನನುಂ!’ ನಾನು ಮತ್ತು ಮಡಿದ ಕುಂಭಕರ್ಣ ಇಬ್ಬರೂ ಸೀತೆಯ ಮಡಿಲ ಮಕ್ಕಳಾಗಿ ಆಡುತ್ತಿದ್ದೆವು ಎನ್ನುತ್ತಾನೆ.

ರಾಮ ಗೆದ್ದೆನೆಂದು ಸೋಲುವ ರಾಮ ಮುಖ್ಯ ಅಲ್ಲ! ಸೊತೆನೆಂದು ಗೆಲ್ಲುವ ರಾವಣ ಇಲ್ಲಿ ಅತೀ ಮುಖ್ಯ! (ದಶಾನನ ಸ್ವಪ್ನ ಸಿದ್ಧಿ) (ಪುಟ. ಸಂ 787) ಸ್ವತಃ ರಾವಣನೂ ಕೂಡ ಸೋಲನ್ನಪ್ಪಿಕೊಳ್ಳುವ  ರೀತಿ  ಸೀತೆ ನನ್ನನ್ನ ಗೆಲ್ದಳ್ ದರೊಂದೆ ರಾಮನಂ ತಂದು ಕಪ್ಪಂಗುಡುವೆನಾತನಂ ಕದನ ಮುಖದೊಳ್ ಗೆಲ್ದು!’ ಎನ್ನುತ್ತಾ  ಪರಿವರ್ತನೆಯಾದ ರಾಮನನ್ನು ಇಲ್ಲಿ ಕುವೆಂಪು ಚಿತ್ರಿಸುತ್ತಾರೆ. ನಾಗಚಂದ್ರನೂ ‘ಸೌಮಿತ್ರಿಯಂ ರಾಮನಂ ವಿರಥರ್ಮಾಡಿ ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆ ಸೀತೆಯಂ’ ಎನ್ನುತ್ತಾನೆ.

‘ಶಿಲಾತಪಸ್ವಿನಿ’ ಎಂಬ ಭಾಗದಲ್ಲಿ ಸಂಭವಿಸುವ  ಘಟನೆಯನ್ನು ಇಲ್ಲಿ ಉದಾಹರಿಸಬಹುದು.. ಗುರು ಹೇಳಿದ ಅನ್ನುವ ಕಾರಣಕ್ಕೆ ಮಾರೀಚನ ತಾಯಿ ತಾಟಕಿಯನ್ನು ಕೊಲ್ಲಬಹುದೇ?  ಹಾಗಿದ್ದರೆ ರಾಮ ಸ್ವಂತ ಆಲೋಚನೆ ಮಾಡಲಿಲ್ಲವೆ? ಎಂಬ ಪ್ರಶ್ನೆಯನೆತ್ತಿಕೊಂಡು. (ತಾಟಕಿತ್ತಿ ಅನ್ನುವ ಪ್ರಯೋಗ ಹೀನಾರ್ಥದಲ್ಲಿ ಬಳಕೆಯಲ್ಲಿದೆ).  ಕುವೆಂಪುರವರೇ ಬೆರಳ್ಗೆ ಪ್ರತಿಯಾಗಿ ಕೊರಳ್ ತೆರಬೇಕಾಯಿತು ಎಂಬಂತೆ ಇಲ್ಲಿ ರಾಮ ರಾವಣರ ಯುದ್ಧದ ಸಂದರ್ಭದಲ್ಲಿ ತಾಟಕಿಯ ಪ್ರೇತ ಕಳೆ ಬಂದು ‘ಗುರುವಿನಾಜ್ಞೆಗೆ  ಹೆಣ್ಣ ಕೊಂದವನಿಗೆ ಗೆಲುವಿಲ್ಲ’ ಎನ್ನುವುದು ಸ್ವತಃ ರಾಮನ ಬಯಕೆಯೇ ಹೌದು! ಅವನದೇ ಮಾನಸಿಕ ಸ್ಥಿತಿ ಅದಾಗಿತ್ತು. ಅವನ ತುಮುಲ, ತಲ್ಲಣಗಳು ಸ್ವಗತದಲ್ಲಿ ಸಂಭಾಷಣೆಯಾಗಿದೆ. ಮತ್ತದೇ  ರಾಮ ಅಹಲ್ಯೆಯನ್ನೂ ಉದ್ಧರಿಸುತ್ತಾನೆ. ಅವನ ಮನಸ್ಸನ್ನು ಅವನೇ ಅರ್ಥ ಮಾಡಿಕೊಂಡಿರಲಿಲ್ಲವೇನೋ ಅನ್ನಿಸುತ್ತದೆ ಒಮ್ಮೊಮ್ಮೆ. ಪರಿಣಾಮ ಸೀತೆಯ ಮೇಲೆ ಉಂಟಾಯಿತಲ್ಲ ಅನ್ನುವ ವ್ಯಥೆಯಿದೆ.

ಮಂಡೋದರಿ ಮತ್ತು ರಾವಣನಲ್ಲಿ ನಡೆಯುವ ಸಂವಾದದಲ್ಲಿ ರಾವಣ  ಈ ಜಗದಲ್ಲಿ   ಪತಿವ್ರತೆಯರು ಅನ್ನುವ ಹೆಣ್ಣುಗಳಿಲ್ಲ ಅನ್ನುವ ಮಾತುಗಳನ್ನಾಡಿದಾಗ  ಕೈಕಸಿ, ಮಂಡೋದರಿ ಅನ್ನುವ ಹೆಣ್ಣುಗಳನ್ನು ಇರಿಸಿಕೊಂಡೂ ಕೂಡ ಮಂಡೋದರೆ  ನೋವಿನಿಂದ ಹತಾಶೆಯಿಂದ (ಸಂಸ್ಕೃತಿ ಲಂಕಾ) ( ಪುಟ.ಸಂ. 342) ಹದಿಬದೆಯ  ಹೃದಯದುರಿ  ಲಂಕೆಯಂ ದಹಿಸದೆ?. ‘ಪ್ರಾಣೇಶ, ದ್ಯೆತ್ಯೇಂದ್ರ, ಮತ್ತೋರ್ವನಿದ್ದಿದ್ದರೀ ತೆರನ ರಾವಣಂ ತೋರಉತಿರ್ದಳ್ ನಿನಗೆ ಹದಿಬದೆಯರಿರ್ಪುದಂ, ಹದಿಬದೆತನದ ಹಿರಿಮೆಯಂ, ನಿನ್ನ ಈ ಮಯನ ಮಗಳಬಲೆ!’ ಎಂದು ಇನ್ನೊಬ್ಬ ರಾವಣ ಅನ್ನುವನು ಇದ್ದಿದ್ದರೆ ನಿನಗಾಗ ತಿಳಿಯುತ್ತಿತ್ತು ಎನ್ನುತ್ತಾಳೆ.

ರಾವಣ ‘ಮಿಥಿಲೇಶನ ಮಗಳು ತೋರಬಲ್ಲಳು ನಿನಗೆ ಹದಿಬದೆಯ ಧರ್ಮವನು’ ಎನ್ನುತ್ತಾಳೆ. ಮಂಡೋದರಿ ಸಿತೆಯನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಾಳೆ. ‘ಸತಿಯನಾರುಪಸೇವಿಪರ್?’ ‘ಸೊಸೆಯನಾದೊಡಮದಕೆ ನೇಮಿಸಿರ್ದೊಡೆ’ ಎಂದು ಇಂದ್ರಜಿತುವಿನ ಹೆಂಡತಿ ತಾರಾಕ್ಷಿಯನ್ನು ಸಿತೆಯ ಯೋಗಕ್ಷೇಮ ನೋಡಲು ನೇಮಿಸುತ್ತಾಳೆ ಇಲ್ಲಿ ಮನೋಬಲ ತುಂಬುವ ಕೆಲಸವನ್ನು ಸೀತೆ ಮಾಡಿದ್ದಾಳೆ ಎನ್ನಬಹುದು.

 ಧಾನ್ಯ ಮಾಲಿನಿ ಶೋಕವನ್ನು ಅನುಭವಿಸುತ್ತರುವವರಲ್ಲಿ ನಾನು ಮೊದಲಿಗಳು ನಾನು ನಿನ್ನ ಅಕ್ಕ ಎಂದು  ಹೇಳುತ್ತಾಳೆ. ಧ್ಯಾನಮಾಲಿನಿ ತನ್ನ ಮಗ ಅತಿಕಾಯ ಪ್ರಸಂಗ ಆತನಿಗೆ ಗೊತ್ತಿರುತ್ತದೆ ನನ್ನ ತಂದೆ ರಾವಣ ಆದರೆ ನನ್ನ ತಾಯಿಯ ನಿಜ ಗಂಡ ಬೇರೆ ಇದ್ದಾನೆ ಎಂದು ಆತ ಚಿಂತಿಸುವುದು. ಬೇಸತ್ತು ಬಿಡುಗಡೆ  ಬಯಸುತ್ತಾನೆ ಅದು ಅವನ ಮರಣವೇ ಆಗಿರುತ್ತದೆ. ಸತ್ತ ಮಗನ ಕಾರಣಕ್ಕೆ ಮೂರ್ಛಾವಸ್ಥೆಗೆ ಜಾರಿದಾಗ ಅವಳು ತನ್ನ ಗಂಡನ ಸಂಗಡ  ಮಾತನಾಡುತ್ತಿರುತ್ತಾಳೆ. ಪುಟ.ಸ. 745 ‘ಕಣ್ದೆರೆದಳ್ ಆರನೂ ಗುರುತಿಸದ’ ಅಮದರೆ ಮಗನ ಮೇಲೆ ಪ್ರಾಣ ಹೋದ ನಂತರ  ತಾನೂ ಪ್ರಾಣ ತ್ಯಜಿಸಲು ತಯಾರಾಗಿರುತ್ತಾಳೆ. 

ರಾವಣನನ್ನು ಕುರಿತು ‘ಮುನಿಯದಿರ್, ಸ್ವಾಮಿ. ಮೆಯ್ ಸೋಲ್ತುದು ದಿಟಂ, ಮನಂ ಸುಡುತ್ತರಿರ್ದುದದನೇಗಳುಂ, ಮೆಯ್ಯನಲ್ಲದದೇಂ ಮನವನಿತ್ತೆನೆ ರಾಕ್ಷಸಂಗೆ?… ಮನವನಲ್ಲದೆ ತನುವ ನೋಡುವನೆ ಜಗದೀಶ್ವರಂ?’ ದೇವರು ದೇಹವನ್ನು ನೋಡುವುದಿಲ್ಲ ಮನಸ್ಸನ್ನು ನೋಡುತ್ತಾನೆ.  ಹಾಗಾಗಿ ದೇಹ ರಾವಣನ ವಶವಾಗಿದೆಯೇ ವಿನಃ  ಮನಸ್ಸಲ್ಲ, ಮನಸ್ಸನ್ನು ಆತ ವಶಪಡಿಸಿಕೊಳ್ಲಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮಾತು ಮತ್ತೆ ಮತ್ತೆ ಅನುರಣನಗೊಳ್ಳುವುದು. ಸೀತೆಯ ವಿಚಾರವೂ ಹಾಗೆ ಮನದ ಮುಂದೆ ತನು ಶೂನ್ಯ ಎಮಬುದನ್ನು ಕುವೆಂಪುರವರು ಅರ್ಥಗರ್ಭಿತವಾಗಿ ಹೇಳಿದ್ದಾರೆ.

ತ್ರಿಜಟೆಯ ಸಂಬಂದಧ (ಕಂಡನಾ ಹದಿಬದಿಯರಧಿದೇವಿಯನು) ಪುಟ ಸಂ. 462-505 ನಿರ್ಭಾಗ್ಯೆಯನ್ ಮರಳಿ ಪತಿಯೆಡೆಗೆ ಕಳುಹದಿರೆ, ಲಂಕೆಗಿನ್ ಸುಖಮೆಲ್ಲಿ? ಲಂಕೆಗಿನ್ ಶುಭಮೆಲ್ಲಿ? ಲಂಕಿಗರ್ ನಮಗೆ ನೆಮ್ಮದಿಯೆಲ್ಲಿ ? ಎನ್ನುವ ಮಾತುಗಳು (ಪುಟ ಸಂ 708) ನನ್ನಯ್ಯನಾಜಿರಂಗದಿ ಮರಳದಿರಲೆನ್ನ ಆತನ ಕಳೇಬರವನ್ನು ವಶ  ಮಾಡಿಕೊಳ್ಳಲಾಗಿದೆ. ಪಿರಿಯನಂ ತನ್ನಣ್ಣನಂ ಪುಡುಕಿ ಪಡೆದು, ಮನೆಗೆ ತಂದನ್, ಗಂಡನೂ ಅಸ್ವಸ್ಥ ನಾಳೆ ಇನ್ ನನಗೇನೋ? ಎಂದು ತೀಕ್ಷ್ಣವಾಗಿಯೇ ಕೇಳುತ್ತಾಳೆ. ಇಲ್ಲಿ ಯುದ್ಧಭೀಕರತೆಯೂ ಚಿತ್ರಿಸಿದೆ.

ಅನಲೆ  ದೂರದರ್ಶಿತ್ವದ ಯುವ ಮನಸ್ಸಾಗಿ 

ಅನಲೆ ತನ್ನ ಚಿಂತನೆಯಿಂದ ಈಗಿನ ಯುವ  ಮನಸ್ಸುಗಳನ್ನು ಜಾಗೃತಗೊಳಿಸುವ ಶಕ್ತಿಯಾಗಿ ಇಲ್ಲಿ ಚಿತ್ರಿತಳಾಗಿದ್ದಾಳೆ.  ಅನಲೆ ವಿಭೀಷಣನ ಮಗಳು. ‘ಕಾಳಗದ ಕಣಕಿಂ ಮಿಗಿಲ್ ದೊಡ್ಡಯ್ಯನರಮನೆ’ ಎಂದು ಸೀತೆಯ ಬಳಿ ಓಡಿ ಬರುವುದು.  ಅಲ್ಲಿ ‘ಸೀತೆ, ತಾಯ್ ಮಗಳನೆಂತಂತೆವೋಲ್ ಕಂಬನಿಯೊರೆಸುದಳ್ ಮೊಗವ ಮುಂಡಾಡಿದಳ್’ ಎಂಬಲ್ಲಿ ಹೆಣ್ಣು ಹೆಣ್ಣಿಗೆ ಮರುಗುವ ರೀತಿಯನ್ನು ಕಾಣಬಹುದು. (ದೂರಮಿರದಿನ್ ಸುಗತಿ) (ಪುಟ. ಸಂ 711) ಅನಲೆ ತನ್ನ ತಂದೆಯನ್ನು ನೆನೆಯುವುದು ದೊಡ್ಡಪ್ಪ ಕುಂಭಕರ್ಣನನ್ನು ನೆನೆದು ‘ಕಳ್ಳರಾಟದಲಿ ನಾನ್ ಮುಟ್ಟೆ, ನನ್ನಂಬರಕೆತ್ತಿ ಮೇಲೆಸೆದು ಪಿಡಿದು ‘ನೀನೊಂದು ಪೂವಿನ ಚೆಂಡು’ ಎನುತೆನ್ನ ಮುದ್ದಾಡುತಿರ್ದನ್’ ಚೆಂಡುವೂ ಚೆಂಡುವೂ’ ಎನ್ನುತ್ತಾ ಆಟವಾಡಿಸುತ್ತಿದ್ದ. ಅವನಿಲ್ಲ ಈಗ ಗಂಧ ಚಿತೆಯಲ್ಲಿ  ಬೆಂದು ಹೋಗಿದ್ದಾನೆ. ಈಗಿರುವುದು ದೊಡ್ಡಪ್ಪ ಅವನು ಹೆಣ್ಣು ಹೆರದ ತಂದೆ ಯುದ್ಧ ಬೇಕೆ? ಇಲ್ಲಿಗೆ ನಿಲ್ಲಿಸೋಣ! ಎನ್ನುವುದು ಯುದ್ಧವನ್ನು ತಡೆಯುವ ಲೋಕೋಪಕಾರಿ ನೀತಿಯನ್ನು ಬಿಂಬಿಸುತ್ತದೆ. 

ಚಂದ್ರನಖಿ ಕೂಡ ಬದಲಾಗಿದ್ದಾಳೆ ಯುದ್ಧ ಬೇಡವೆಂದೇ ಅನಲೆ ಉಪವಾಸ  ಮಾಡುತ್ತಿದ್ದಾಳೆ. ಯುದ್ಧ ಬೇಡ ಎಂದೂ ತ್ರಿಜಟೆಯೂ ಅನಲೆಯೊಂದಿಗೆ ಸೇರಿ ವಾದಿಸುತ್ತಾಳೆ. ಅನಲೆಯ ತುಡಿತ ಲಂಕೆಯನ್ನು ಆಳಲು ಪ್ರಯತ್ನಿಸುತ್ತದೆ ಆದರೆ ಯುದ್ಧ ಆಗಿಯೇ ಆಗುತ್ತದೆ. ಶೋಕ ಮಾತ್ರ ಹಾಗೆ ಉಳಿಯುತ್ತದೆ. ಯುದ್ದ ಬೇಕೇ ಮತ್ತೆ ಈ ಲೋಕಕ್ಕೆ ನ್ಯಾಯ ಬೇಡವೇ ಅನ್ನುವ ಭಾವ ಕಾಡುತ್ತದೆ.

ಮೌನಿ  ಸೀತೆ

ರಾಮನ ಸಂಗಡ ತೆರಳಿದ ಸೀತೆಯ ಮಾತುಗಳು ಮನದ ನೆಲೆ ಬಿಟ್ಟು ಆಚೆ ಬರುವುದೇ ಇಲ್ಲ. ಪಟ್ಟಾಭಿರಾಮನಾಗುವ ಮೊದಲು ತಾಯೆ ಕೌಸಲ್ಯೆ ಮಿಥಿಲೇಶನನ್ನು ನೋಡಿ ಬರಲೆ ಎನ್ನುವಲ್ಲಿಗೆ ಆಕೆ ದಗ್ಧವಾಗಿ ಹೋಗಿರುತ್ತಾಳೆ. ಯಾವ ರೀತಿ ಸೀತೆ ಆ ನೋವನ್ನು ಸಹಿಸಿರಬಹುದು ಅಲ್ಲವೆ!

ಕುವೆಂಪುರವರು ಇಲ್ಲಿ ಮಂಡೋದರಿ, ಸೀತೆ ಮತ್ತು ಅನಲೆಯರ ಮೂಲಕ ಅಪ್ಪಂದಿರ ಪ್ರೀತಿಯ ಕನವರಿಕೆಗಳ ಕುರಿತಾಗಿಯೂ ಅನನ್ಯವಾಗಿ ಚಿತ್ರಿಸಿದ್ದಾರೆ. (ಪುಟ. ಸಂ 708) ತ್ರಿಜಟೆಯನ್ನುದ್ದೇಶಿಸಿ ಸೀತೆ ‘ಜನಕ ಭೂಮಿಪಂ ಭೂಮಿಗರ್ಭದಿನ್ನೆನಲ್ತು ಲೋಕದ ಸಕಲ ಶೋಕಮಂ ಪಡೆದು ರಾಮಂಗಿತ್ತು, ಲಂಕೆಯಿಂ ತೊಟ್ಟಯೋಧ್ಯೆಯ ವರೆಗೆ ದುಃಖ ಕುಯ್ಯಾಲೆಯಾಡೆ ತೂಗು ಮಂಚವನಿಕ್ಕಿದನ್!’ ಎಂದು ಹೇಳುವುದು ಭಾವುಕರಲ್ಲಿ ಶೋಕವನ್ನುಕ್ಕಿಸಿ, ಚಿಂತನಾಶಿಲರಲ್ಲಿ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಬೇಡ

ಹಿಂದು ಮುಂದು ಆಡಲು ಬೇಡ, ಸಂದೇಹಗೊಳ್ಳಬೇಡ

ದ್ವಂಧ್ವ ಬುದ್ದಿಯ ಕಳೆದು ನಿಂದ

ಬಸವ ಪ್ರಿಯ ಕೂಡಲ ಚೆನ್ನ ಸಂಗಯ್ಯ

ಇದು ಶರಣೆ ಅಕ್ಕನಾಗಮ್ಮನವರು ಆತ್ಮವಿಶ್ವಾಸದ ಕುರಿತು ಹೇಳಿರುವ ವಚನ. ಸ್ತ್ರೀ ಸಬಲೀಕರಣದ ಬಗ್ಗೆ ಯಾರೆ ಮಾತನಾಡಿದರೂ ಈ ನೀತಿಯನ್ನು ಹೇಳಿಯೇ ಹೇಳುತ್ತಾರೆ. ಆತ್ಮವಿಶ್ವಾಸವೇ ಟಾನಿಕ್, ನಂಬಿಕೆ, ಧೃಡಸಂಕಲ್ಪವೇ ವಿಟಮಿನ್ಸ್ ಎಂಬ ನೀತಿಯ ಮಾತುಗಳನ್ನು ಅಕ್ಕನಾಗಮ್ಮ ಪ್ರಸ್ತುತ ವಚನದಿಂದ ತಿಳಿಯಬಹುದಾಗಿದೆ. ಈ ಬರಹದಲ್ಲಿ ಬಹುವಾಗಿ ಕಂಡು ಬರುವ ಗುಣವೇ ಅದು. ಲಂಕೆಯ ಯುದ್ಧ ಮುಕ್ತಾಯವಾಗಿದೆ. ಆದರೆ ಇನ್ನೂ ಶಂಕೆಯ ಯುದ್ಧ ಮುಂದುವರೆಯುತ್ತಲೇ ಇದೆ. ಕುವೆಂಪುರವರು ‘ರಾಮಾಯಣದರ್ಶನಂ’ ನಲ್ಲಿ ‘ಭಗವತಿಯ ಪೂವಡಿಯ ಕನ್ನಡದ ಸಿರಿಗುಡಿಯ ನುಡಿಯ ಕಣ್ಪಡಿಮೆಯೊಳ್ ಕಡೆದು ಮೂಡಿರುವುದು ರಾಮನ ಜೊತೆಗೆ   ಸೀತೆಯೂ’ ಎನ್ನಬಹುದು.

‍ಲೇಖಕರು Avadhi

March 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: