'ರಾಮನಗುಳಿಯ ವನದೇವತೆ'ಗೆ ಪದ್ಮಶ್ರೀ ಗರಿ

“ರಾಮನಗುಳಿಯ ವನದೇವತೆ” ಮತ್ತು ಎಲ್ಲಪ್ಪ ರೆಡ್ಡಿ
ನಾಗೇಶ್ ಹೆಗಡೆ 
ಹಾಲಕ್ಕಿ ಅಜ್ಜಿ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ ನೀಡಿ ಕೇಂದ್ರ ಸರಕಾರ ಉತ್ತಮ ಕೆಲಸ ಮಾಡಿದೆ.
ಮೂವತ್ತು ವರ್ಷಗಳ ಹಿಂದೆ “ರಾಮನಗುಳಿಯ ವನದೇವತೆ” ಎಂಬ ಹೆಸರಿನಲ್ಲಿ ‘ಸುಧಾ’ದಲ್ಲಿ ಅವಳ ಬಗ್ಗೆ ಮೊದಲ ಲೇಖನ ಪ್ರಕಟವಾಯಿತು.
ಇದಕ್ಕೆ ಮೂಲ ಕಾರಣ ಎಂದರೆ ಅರಣ್ಯಾಧಿಕಾರಿ ಶ್ರೀ ಎಲ್ಲಪ್ಪ ರೆಡ್ಡಿ.
ಅವರು ಕೆನರಾ ವೃತ್ತದ ಕನ್ಸರ್ವೇಟರ್ ಆಗಿದ್ದಾಗ ಈ ನಿರಕ್ಷರಿ ಗೌಡ್ತಿಯ ಕೆಲಸವನ್ನು ಇನ್ನಿಲ್ಲದಷ್ಟು ಶ್ಲಾಘಿಸಿದ್ದರು.
“ಏನ್ ಚುರುಕು ಅಂತೀರಿ ಆ ಹೆಣ್ಮಗಳು! ಅರಣ್ಯದ ಮಧ್ಯೆ ಅಂಕೋಲಾದ ರಾಮನಗುಳಿ ನರ್ಸರಿಯಲ್ಲಿ ದಿನಗೂಲಿ ಮಾಡ್ತಾಳೆ, ಯಾವ ಸಸಿಗೆ ಎಷ್ಟು ನೀರು ಹಾಕಬೇಕು, ಯಾವ ಮರದ ಬೀಜ ಎಷ್ಟು ದಿನಕ್ಕೆ ಮೊಳಕೆ ಬರುತ್ತದೆ, ಯಾವುದನ್ನು ಹೇಗೆ ನಾಟಿ ಮಾಡಬೇಕು – ನಮಗಿಂತ ಚೆನ್ನಾಗಿ ಗೊತ್ತಿದೆ ಅವಳಿಗೆ!” ಎಂದು ಭಾವುಕರಾಗಿ ಬಣ್ಣಿಸಿದ್ದರು.
“ಅಧಿಕಾರಿಗಳು ಅಂದರೆ ಅವಳಿಗೆ ಕ್ಯಾರೇ ಇಲ್ಲ, ಯಾರು ತಪ್ಪು ಮಾಡಿದ್ರೂ ದಬಾಯಿಸ್ತಾಳೆ! ಹ್ಞೂ, ನಾನೂ ಬೈಸ್ಕಂಡಿದೀನಿ ಅವಳಿಂದ” ಎಂದು ಹೇಳಿ ಹೆಮ್ಮೆಯಿಂದ ನಕ್ಕಿದ್ದರು.

ಅವಳ ಬಗ್ಗೆ ‘ಚಿತ್ರ ಲೇಖನ ಬರೆದು ಕೊಡಿ’ ಎಂದು ನಾನು ಆಗಿನ ಯುವ ಪತ್ರಕರ್ತ ಶ್ರೀಧರ್ ದೀಕ್ಷಿತ್ ರನ್ನು ಓಡಿಸಿದ್ದೆನೆಂದು ನೆನಪು (ಸುಧಾದಲ್ಲಿ ನನ್ನ ಕಿರಿಯ ಸಹೋದ್ಯೋಗಿಯಾಗಿದ್ದ ಈ ಪ್ರತಿಭಾವಂತ ನಂತರ ಅಕಾಲ ಮರಣಕ್ಕೆ ತುತ್ತಾದರು, ಅದು ಬೇರೆ ಕತೆ ) .
ಎಲ್ಲಪ್ಪ ರೆಡ್ಡಿಯಂಥ ಉನ್ನತ ಅಧಿಕಾರಿ (ಅವರ ಕೈಕೆಳಗೆ ಕೆಲವು DFOಗಳು, ಅಂಥ ಪ್ರತಿ DFO ಕೈಕೆಳಗೆ ಕೆಲವು RFOಗಳು, ಅವರ ಕೈಕೆಳಗೆ ಅದೆಷ್ಟೋ Foresterಗಳು ಅವನ ಕೈಕೆಳಗೆ ಫಾರೆಸ್ಟ್ Guard. ಆತನ ಕೈಕೆಳಗೆ ಅನೇಕಾನೇಕ ದಿನಗೂಲಿಗಳು) ಇಷ್ಟೆಲ್ಲಾ ಸೈನ್ಯವೇ ಇದ್ದರೂ ಖುದ್ದಾಗಿ ಇವರೇ ನರ್ಸರಿಗಳಲ್ಲಿ ಓಡಾಡಿ, ಯಾರಿಗೆ ಹೇಗೆ ಬಯ್ಯಬೇಕು, ಹೇಗೆ ಪ್ರೋತ್ಸಾಹ ಕೊಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು.
ಅಂಥ ಮನೋಧರ್ಮ ಅರಣ್ಯ ಇಲಾಖೆಯಲ್ಲಿ ಎಷ್ಟು ಜನರಿಗಿದೆ?
ಕತೆ ಅಷ್ಟಕ್ಕೇ ಮುಗಿದಿಲ್ಲ.
ತುಳಸೀ ಗೌಡ್ತಿಯ ಈ ಮುದ್ರಿತ ಕತೆಯನ್ನು ಹಿಡಿದು ಎಲ್ಲಪ್ಪ ರೆಡ್ಡಿ ತಮ್ಮ ಮೇಲಧಿಕಾರಿಗಳಿಗೆ ಹೇಳಿ (ಇವರ ಮೇಲೆ ಚೀಫ್ ಕನ್ಸರ್ವೇಟರ್, ಅವರ ಮೇಲೆ ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್) ಮುಂದೆ ಅವಳಿಗೆ ‘ಇಂದಿರಾಗಾಂಧಿ ವೃಕ್ಷಮಿತ್ರ ಪ್ರಶಸ್ತಿ’ಯನ್ನೂ ಕೊಡಿಸುತ್ತಾರೆ.
ರೈಲನ್ನೇ ನೋಡಿರದ ಅವಳನ್ನು ತಾವೇ ದಿಲ್ಲಿಗೆ ಕರೆದುಕೊಂಡು ಹೋದಾಗಿನ ರಂಜನೀಯ ಕತೆಯನ್ನು ರೆಡ್ಡಿಯವರ ಆತ್ಮಕಥೆ ‘ಹಸಿರು ಹಾದಿ’ಯಲ್ಲಿ (ನಿರೂಪಣೆ: ಸತೀಶ್ ಚಪ್ಪರಿಕೆ) ಓದಬಹುದು.
ಈ ಅರಣ್ಯಾಧಿಕಾರಿ ತಮ್ಮ ಇಲಾಖೆಯಲ್ಲಿ ಇನ್ನೂ ಎತ್ತರೆತ್ತರಕ್ಕೆ ಏರಿ ಬೆಂಗಳೂರಿನ ಅರಣ್ಯಭವನದಲ್ಲಿ ಪೀಠಸ್ಥರಾದ ನಂತರವೂ ‘ತುಳಸಿಯನ್ನು ನೋಡಿ ಕಲಿಯಿರಿ’ ಎಂದು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ.
ಯಾರಿಗೂ ಸಲಾಂ ಹೊಡೆಯದ ಖಡಕ್ ಅಧಿಕಾರಿಯಾಗಿ, ತಮ್ಮ ನೇರ ನಿರ್ಭಿಡೆಯ ಮಾತಿನಿಂದಾಗಿ ಅಂದಿನ ಮುಖ್ಯಮಂತ್ರಿ ದೇವೇಗೌಡರ ಕೋಪಕ್ಕೆ ಗುರಿಯಾಗಿ ರಾಜೀನಾಮೆ ಕೊಟ್ಟು ಹೊರಬಂದ ‘ಗಟ್ಟಿ ನಾರು’ ಅದು.
ಆ ನಾರಿನಿಂದಾಗಿ ಅರಣ್ಯದ ಒಂದು ಹೂವು ಇಂದು ಖ್ಯಾತಿಯ ಉತ್ತುಂಗಕ್ಕೇರಿತು.

‍ಲೇಖಕರು avadhi

January 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: