ರಾಜೇಶ್ವರಿ ತೇಜಸ್ವಿ ಅವರು ಈಗಲೂ ನನ್ನ ಕಣ್ಣ ಮುಂದೆ ಇದ್ದಾರೆ…

ಬಿ ಎ ವಿವೇಕ ರೈ

ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ಇನ್ನಿಲ್ಲ ಎನ್ನುವಾಗ ತೇಜಸ್ವಿ ಅವರ ಜೊತೆಗೆ ನಿರುತ್ತರಾದಲ್ಲಿ, ಕುಪ್ಪಳಿಯಲ್ಲಿ, ಒಮ್ಮೆ ಉದಯರವಿಯಲ್ಲಿ ಕಂಡ ನೆನಪುಗಳ ಬೆನ್ನಿಗೇ ಹೆಚ್ಚು ಸಾಂದ್ರವಾಗಿ ನೆನಪಿನ‌ ಆಪ್ತತೆಯಲ್ಲಿ ಉಳಿದದ್ದು ತೇಜಸ್ವಿ ಕಾದಂಬರಿ ‘ಕರ್ವಾಲೋ’ದ ನಮ್ಮ ಜರ್ಮನ್ ಅನುವಾದದ ಬಿಡುಗಡೆಯ ಸಮಾರಂಭ.

ನಾನು ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕನಾಗಿ ೨೦೦೯ ರಲ್ಲಿ ಹೋದ ಬಳಿಕ ಅಲ್ಲಿ ಕಂಡ ಒಂದು ಸಂಗತಿ ಎಂದರೆ ಭಾರತದ ಆಧುನಿಕ ಸಾಹಿತ್ಯ ಕೃತಿಗಳು ಜರ್ಮನ್ ಭಾಷೆಗೆ ಹೆಚ್ಚು ಅನುವಾದ ಆಗುತ್ತಿರುವುದು ಹಿಂದಿ ಕೃತಿಗಳು. ಜರ್ಮನಿಯ ಹೈಡಲ್ ಬರ್ಗ್ ನಲ್ಲಿ ಇರುವ ವಾಯಿಸ್ ಎನ್ನುವವರು ಭಾರತೀಯ ಕೃತಿಗಳ ಅನುವಾದಕ್ಕಾಗಿಯೇ ‘ದ್ರೌಪದಿ ವೆರ್ಲಾಗ್’ ಎನ್ನುವ ಪ್ರಕಾಶನ‌ ಸಂಸ್ಥೆಯನ್ನು ನಡೆಸುತ್ತಿದ್ದರು. ಒಮ್ಮೆ ಅವರನ್ನು ಭೇಟಿ ಆದಾಗ ಕನ್ನಡದ ಒಂದು ಆಧುನಿಕ ಕೃತಿಯನ್ನು ನೀವು ಯಾಕೆ ಅನುವಾದ ಮಾಡಿಸಿ ಪ್ರಕಟಿಸಬಾರದು ಎಂದು ಕೇಳಿದೆ.

ಕನ್ನಡದ ಬಗ್ಗೆ ಏನೂ ಗೊತ್ತಿಲ್ಲದ ಅವರು ಆಧುನಿಕ ಕನ್ನಡದಲ್ಲಿ ಅಂತಹ ಮಹತ್ವದ ಕೃತಿಗಳು ಇವೆಯೇ ಎಂದು ಕೇಳಿದರು. ಸಾಕಷ್ಟು ಇವೆ ಎಂದು ನಾನು ಹೇಳಿದೆ. ಮತ್ತು ಅಲ್ಲಿನ‌ ಹಿಂದಿ ಪ್ರಾಧ್ಯಾಪಕಿ ಡಾ.ಬಾರ್ಬರಾ ಲೊಟ್ಸ್ ಮೂಲಕ ಪ್ರಭಾವ ಬೀರಿದೆ. ಅವರು ಒಪ್ಪಿಕೊಂಡರು. ಕೆಲವು ಷರತ್ತು ಹಾಕಿದರು. ಅದು ಕಾದಂಬರಿ ಆಗಿರಬೇಕು, ಬಹಳ ದೀರ್ಘ ಆಗಿರಬಾರದು, ಅದು ವಿದೇಶಿ ಕೃತಿಗಳ ಪ್ರಭಾವಕ್ಕೆ ಒಳಗಾಗಿರಬಾರದು, ಅದು ಭಾರತದ ಸ್ಥಳೀಯ ಅನನ್ಯ ಚಹರೆಗಳನ್ನು ಹೊಂದಿರಬೇಕು.ಅದರ ಇಂಗ್ಲಿಷ್ ಅನುವಾದ ಆಗಿದ್ದರೆ ನೋಡಬಹುದು. ಆದರೆ ಜರ್ಮನ್ ಅನುವಾದದ ಅನುವಾದ ಆಗಬಾರದು. ತತ್ ಕ್ಷಣ ನನಗೆ ಹೊಳೆದದ್ದು ತೇಜಸ್ವಿ ಅವರ ‘ಕರ್ವಾಲೋ’. ಅದನ್ನು ನಾನು ಎಂಎ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೆ.ಅದರ ಬಗ್ಗೆ ಇಂಗ್ಲಿಷ್ ನಲ್ಲಿ ಒಂದು ಸೆಮಿನಾರ್ ನಲ್ಲಿ ಪ್ರಬಂಧ ಮಂಡಿಸಿದ್ದೆ. ಅದು ತಾತ್ವಿಕವಾಗಿ ನನಗೆ ಇಷ್ಟವಾದ ಕೃತಿ.

ಅವರಿಗೆ ಡಿ ಎ ಶಂಕರ್ ಮಾಡಿದ ‘ಕರ್ವಾಲೋ’ ಇಂಗ್ಲಿಷ್ ಅನುವಾದದ ಪುಸ್ತಕ ಕೊಟ್ಟೆ. ಅವರು ಓದಿ ತೃಪ್ತರಾಗಿ ಒಪ್ಪಿಗೆ ಕೊಟ್ಟರು.
ಮುಂದಿನ‌ ದೊಡ್ಡ ಸವಾಲು ಕನ್ನಡದಿಂದ ನೇರವಾಗಿ ಜರ್ಮನ್ ಭಾಷೆಗೆ ಅನುವಾದ ಮಾಡುವುದು ಯಾರು ಎಂಬುದು. ಹೇಗಾದರೂ ಇದನ್ನು ಮಾಡಲೇ ಬೇಕು ಎನ್ನುವುದು ನನ್ನ ಚಲವಾಗಿತ್ತು. ಈ ಪ್ರಸ್ತಾಪವನ್ನು ಅಲ್ಲಿ ಕನ್ನಡ ಶಿಬಿರಗಳಲ್ಲಿ ನನ್ನ ಸಹೋದ್ಯೋಗಿ ಆಗಿದ್ದ ಡಾ. ಕತ್ರಿನ್ ಬಿಂದರ್ ಅವರ ಜೊತೆಗೆ ಮಾಡಿದೆ.

ಕತ್ರಿನ್ ಕರ್ನಾಟಕಕ್ಕೆ ಸಾಕಷ್ಟು ಬಾರಿ ಬಂದು ಬನ್ನಂಜೆ ಸಂಜೀವ ಸುವರ್ಣರಲ್ಲಿ ಯಕ್ಷಗಾನ ಕಲಿತು, ಕಲಾವಿದೆಯಾಗಿ ಮತ್ತು ಸಂಶೋಧಕಿಯಾಗಿ ಪರಿಣತಿ ಪಡೆದಿದ್ದರು. ಅವರ ಪಿಎಚ್ ಡಿ ನಿಬಂಧ ಯಕ್ಷಗಾನದ ಬಗ್ಗೆ. ಕನ್ನಡ ಓದಲು ಬರೆಯಲು ಕಲಿತಿದ್ದರು. ಅವರ ಮಾತೃಭಾಷೆ ಜರ್ಮನ್. ಆದರೆ ಅನುವಾದದ ವಿಷಯ ಬಂದಾಗ ನಾನು ಒಟ್ಟಿಗೆ ಇದ್ದು ಜಂಟಿಯಾಗಿ ಮಾಡೋಣ ಎಂದು ಸಲಹೆ ನೀಡಿದಳು. ನನ್ನ ಜರ್ಮನ್ ಭಾಷೆಯ ಜ್ಞಾನ ಸಾಮಾನ್ಯ ವ್ಯವಹಾರಕ್ಕಿಂತ ಆಚೆಗೆ ಇರಲಿಲ್ಲ. ಸಾಹಿತ್ಯಕ ಭಾಷೆಯಂತೂ ಗೊತ್ತೇ ಇರಲಿಲ್ಲ. ಆದರೆ ಈ ಸಹಯೋಗದ ಪ್ರಯೋಜನ ಮುಂದೆ ನಮಗೆ ಚೆನ್ನಾಗಿ ಮನವರಿಕೆ ಆಯಿತು.

ಆ ಸಂದರ್ಭದಲ್ಲಿ ನಾನು ರಾಜೇಶ್ವರಿ ತೇಜಸ್ವಿ ಅವರಿಗೆ ಫೋನ್ ಮೂಲಕ ಸಂಪರ್ಕಿಸಿ ವಿಷಯ ಪ್ರಸ್ತಾವಿಸಿ ಅನುಮತಿ ಕೇಳಿದೆ. ಇದು ಸುಮಾರು ೨೦೧೫ ರಲ್ಲಿ. ರಾಜೇಶ್ವರಿ ಅವರು ಬಹಳ ಸಂತೋಷದಿಂದ ಕೂಡಲೇ ಒಪ್ಪಿಕೊಂಡರು.

ನಾನು ಜರ್ಮನಿಗೆ ಪ್ರತೀ ವರ್ಷ ಕನ್ನಡ ಬೇಸಿಗೆ ಶಿಬಿರ ನಡೆಸಲು ಹೋಗುತ್ತಿದ್ದೆ. ಅಲ್ಲಿಗೆ ಕತ್ರಿನ್ ಬಿಂದರ್ ಬರುತ್ತಿದ್ದರು. ಅಲ್ಲಿ ನಾವು ಅನುವಾದದ ಕೆಲಸ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ಇಂಗ್ಲಿಷ್ ಅನುವಾದವನ್ನು ನೋಡುತ್ತಿರಲಿಲ್ಲ. ತೇಜಸ್ವಿ ಅವರ ಕನ್ನಡ ಭಾಷೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಗೊತ್ತಾದದ್ದು ನಾವು ಜರ್ಮನ್ ಅನುವಾದ ಮಾಡುವಾಗಲೇ. ವ್ಯಂಗ್ಯದ ಭಾಷೆಯ ಅನುವಾದದ ವೇಳೆಗೆ ಗಂಟೆಗಟ್ಟಲೆ ಚರ್ಚೆ ನಡೆಸುತ್ತಿದ್ದೆವು. ಬಯ್ಗುಳಗಳ ಅನುವಾದ ದೊಡ್ಡ ಸವಾಲಾಗಿತ್ತು.

ಹೀಗೆ ಸುಮಾರು ವರ್ಷಗಳ ಕಾಲ ಜರ್ಮನಿಯಲ್ಲಿ ಪರಸ್ಪರ ಭೇಟಿಯಾಗಿ, ಒಂದು ಬಾರಿ ನಾನು ಇಂಗ್ಲೆಂಡ್ ನಲ್ಲಿ ನನ್ನ ಮಗಳ ಮನೆಯಲ್ಲಿ ಇದ್ದಾಗ ಒಟ್ಟುಸೇರಿ, ಬಹಳ ಬಾರಿ ಇಮೇಲ್ ಮತ್ತು ವೀಡಿಯೋ ಕಾಲ್ ಗಳ ಮೂಲಕ ಸಮಾಲೋಚಿಸಿ, ಅನುವಾದದ ಕರಡುಪ್ರತಿ ಸಿದ್ಧಪಡಿಸಿದೆವು. ಆದರೆ ಜರ್ಮನ್ ಓದುಗರ ಓದುವಿಕೆಯ ಮಟ್ಟದಲ್ಲಿ ಇದನ್ನು ಪರಿಷ್ಕರಿಸಲು ಜರ್ಮನ್ ಸಾಹಿತ್ಯದ ಇಬ್ಬರು ತಜ್ಞರಿಗೆ ಓದಲು ಕೊಟ್ಟೆವು. ಪ್ರೊ.ಹೈಡ್ರೂನ್ ಬ್ರೂಕ್ನರ್ ಮತ್ತು ಊರ್ಸುಲಾ ಅಕ್ರಿಲ್ ಅವರು ಹಸ್ತಪ್ರತಿಯನ್ನು ಪ್ರತ್ಯೇಕವಾಗಿ ಓದಿ ಅನೇಕ ಸಲಹೆಗಳನ್ನು ಕೊಟ್ಟರು. ಅವನ್ನು ಅಳವಡಿಸಿ ಕೊಟ್ಟ ಬಳಿಕ ದ್ರೌಪದಿ ವೆರ್ಲಾಗ್ ನಿಂದ ಇದು ೨೦೧೮ ರಲ್ಲಿ ಜರ್ಮನಿಯಲ್ಲಿ ಪ್ರಕಟವಾಯಿತು.

ಕರ್ವಾಲೋ ಜರ್ಮನ್ ಅನುವಾದವನ್ನು ಕರ್ನಾಟಕದಲ್ಲಿ ರಾಜೇಶ್ವರಿ ತೇಜಸ್ವಿ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎನ್ನುವ ಬಯಕೆಯನ್ನು ಗೆಳೆಯ ಜಿ ಎನ್ ಮೋಹನ್ ಮೂಲಕ ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಇದ್ದ ವಿಶುಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಸಂಭ್ರಮಪಟ್ಟು ಎಲ್ಲ ವ್ಯವಸ್ಥೆ ಮಾಡಿದರು. ನಾನು ರಾಜೇಶ್ವರಿ ಅವರಿಗೆ ಫೋನ್ ಮಾಡಿ, ಪುಸ್ತಕ ಬಿಡುಗಡೆ ಮಾಡಲು ಕೇಳಿಕೊಂಡೆ. ಅವರು ಸಂತಸಪಟ್ಟು ಮಕ್ಕಳಿಗೆ ಎಲ್ಲಾ ತಿಳಿಸಿದರು.

ಆ ವೇಳೆಗೆ ಉಡುಪಿಯ ಕಾರ್ಯಕ್ರಮಕ್ಕೆ ಡಾ‌.ಕತ್ರಿನ್ ಬಿಂದರ್ ಬಂದವರನ್ನು ಈ ಬಿಡುಗಡೆ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡುವ ಪೂರ್ವ ಯೋಜನೆಯಂತೆ ೨೦೧೮ ಜುಲೈ ೨೦ ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಬಿ ಎಲ್ ಶಂಕರ್ ಆದ್ಯಕ್ಷತೆ ವಹಿಸಿದರು. ಬೆಂಗಳೂರು ಮ್ಯಾಕ್ಸ್ ಮುಲ್ಲರ್ ಭವನದ ನಿರ್ದೇಶಕರಾಗಿದ್ದ ಡಾ. ಕ್ಲಾಸ್ ಹೆಮಿಸ್ ಅವರನ್ನು ನಾನು ಮುಂಚಿತವಾಗಿ ಕಂಡು, ಜರ್ಮನ್ ಅನುವಾದದ ಪ್ರತಿ ಕೊಟ್ಟು ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದೆ.

ರಾಜೇಶ್ವರಿ ಅವರು ಮಗಳು ಈಶಾನ್ಯೆ ಜೊತೆಗೆ ಕನ್ನಡ ಭವನಕ್ಕೆ ಮುಂಚಿತವಾಗಿ ಬಂದಿದ್ದರು. ವಿಶುಕುಮಾರ್ ಅವರ ಕಚೇರಿಯಲ್ಲಿ ನಾವು – ರಾಜೇಶ್ವರಿ, ಈಶಾನ್ಯೆ, ಪ್ರೊ.ಸಿ ಎನ್ ರಾಮಚಂದ್ರನ್, ವಿಶುಕುಮಾರ್, ಜಿ ಎನ್ ಮೋಹನ್, ಎಚ್ ಆರ್ ಸುಜಾತಾ ಮತ್ತು ನಾನು ಹರಟೆ ಹೊಡೆದ, ತಮಾಷೆ ಮಾತಾಡಿದ ಕ್ಷಣಗಳು ಬಹಳ ಆಹ್ಲಾದಕರವಾಗಿದ್ದವು.

ಕಾರ್ಯಕ್ರಮದಲ್ಲಿ ರಾಜೇಶ್ವರಿ ಅವರು ಪ್ರೀತಿಯಿಂದ ಮತ್ತು ಸಂತೃಪ್ತಿಯಿಂದ ಮಾತಾಡಿದ್ದು ನನ್ನ ಬದುಕಿನ ಧನ್ಯತೆಯ ಕ್ಷಣಗಳು.ಅದೇ ನಗುಮುಖದ ರಾಜೇಶ್ವರಿ ತೇಜಸ್ವಿ ಅವರು ಈಗಲೂ ನನ್ನ ಕಣ್ಣ ಮುಂದೆ ಇದ್ದಾರೆ.

ಆ ದಿನದ ಕಾರ್ಯಕ್ರಮದ ಕೆಲವು ಫೊಟೊಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

‍ಲೇಖಕರು Admin

December 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: