ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ಪಯಣದ ಆರಂಭ ಡೆಲ್ಲಿ ಚಲೋ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

30

ಬಾಗಿಲಲ್ಲಿ ನಿಂತಿದ್ದ ಅನಂತನಾಗ್ ಅವರನ್ನು ಕಂಡು ಒಂದು ಕ್ಷಣ ನನಗೆ ಮಾತೇ ಹೊರಡಲಿಲ್ಲ. ಆ ವೇಳೆಗಾಗಲೇ ಅನಂತನಾಗ್ ಅವರು ಪ್ರತಿಭಾವಂತ ನಟರೆಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದವರು. ಶ್ರೇಷ್ಠ ನಿರ್ದೇಶಕ ಶ್ಯಾಂ ಬೆನಗಲ್ ಅವರ ಅಂಕುರ್, ನಿಶಾಂತ್, ಮಂಥನ್ ಮೊದಲಾದ ಚಿತ್ರಗಳಲ್ಲಿ ತಮ್ಮ ಪ್ರೌಢ ಅಭಿನಯದಿಂದ ಗಮನ ಸೆಳೆದಿದ್ದವರು. ಕನ್ನಡದಲ್ಲೂ ಅದಾಗಲೇ ಭರವಸೆಯ ನಾಯಕ ನಟನಾಗಿ ತಮ್ಮ ಛಾಪೊತ್ತಿದ್ದವರು. ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ ಚಿತ್ರದಲ್ಲಿನ ಅವರ ಅಸಾಧಾರಣ ಅಭಿನಯಕ್ಕೆ ನಾನು ಮಾರುಹೋಗಿದ್ದೆ. ಅಂತಹ ನನ್ನ ಮೆಚ್ಚಿನ ನಟ ಅತ್ಯಂತ ಆಕಸ್ಮಿಕವಾಗಿ ಈಗ ಕಣ್ಣೆದುರಿಗೇ ನಿಂತಿದ್ದಾರೆ! ತಡಬಡಾಯಿಸುತ್ತಲೇ ಅವರನ್ನು ಒಳಗೆ ಆಹ್ವಾನಿಸಿದೆ.

ಆ ವೇಳೆಗೆ ಅಲ್ಲಿಗೆ ಬಂದ ಶ್ರೀಪತಿ ಅನಂತ್ ಅವರಿಗೆ YNK ಊರಿಗೆ ಹೋಗಿರುವ ವಿಷಯ ತಿಳಿಸಿದ. ಒಂದು ಕ್ಷಣ ಏನೋ ಚಿಂತಿಸಿದ ಅನಂತ್ ನಂತರ ನನಗೆ, ‘ನಾನಿಲ್ಲಿ ಸ್ವಲ್ಪ ಹೊತ್ತು ಕೂತಿದ್ದು ಹೋಗಬಹುದೇ?’ ಎಂದರು. ನಾನು ಸಂತೋಷದಿಂದಲೇ ‘ಅಗತ್ಯವಾಗಿ ಸರ್!’ ಎಂದು ನುಡಿದು ಕಾರ್ಪೆಟ್ ಮೇಲೆ ಹರಡಿದ್ದ ನನ್ನ ಹಸ್ತಪ್ರತಿ-ರಂಗವಿನ್ಯಾಸದ ಹಾಳೆಗಳನ್ನು ಒಂದು ಬದಿಗೆ ಸರಿಸಿ ಅವರಿಗೆ ಜಾಗ ಮಾಡಿಕೊಟ್ಟೆ. ಚಕ್ಕಲಮಕ್ಕಲ ಹಾಕಿಕೊಂಡು ಕಾರ್ಪೆಟ್ ಮೇಲೆ ಕುಳಿತ ಅನಂತ್ ಅವರು ನನ್ನ ಬಗ್ಗೆ ವಿಚಾರಿಸಿಕೊಂಡರು.

ನಾನು ರಂಗಭೂಮಿಯವನು, NSD ಯಲ್ಲಿ ವ್ಯಾಸಂಗ ಮಾಡುತ್ತಿರುವವನು ಎಂಬ ವಿಷಯ ತಿಳಿಯುತ್ತಿದ್ದಂತೆ ಅವರ ಕಣ್ಣುಗಳು ಮಿನುಗಿದವು. ಮಾತು ತನ್ನಿಂತಾನೇ ರಂಗಭೂಮಿ-ಸಿನೆಮಾಗಳತ್ತ ಹೊರಳಿತು. ಶ್ರೀಪತಿ ಅವರಿಗೆ ಗುಂಡು,ಗ್ಲಾಸ್, ನೀರು, ಐಸ್ ಎಲ್ಲವನ್ನೂ ಅಣಿ ಮಾಡಿಕೊಟ್ಟ. ಅನಂತ್ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ ನೋಡಿದರು. ‘ಆಗಬಹುದು’ ಎಂದು ಸೂಚನೆ ಕೊಡುವಂತೆ ನನ್ನದೊಂದು ದೇಶಾವರಿ ನಗು! YNK ಅವರನ್ನುವಂತೆ ‘ತೀರ್ಥಯಾತ್ರೆ’ಯೊಂದಿಗೆ ನಮ್ಮ ಮಾತುಕತೆ ಮತ್ತಷ್ಟು ರಂಗಿನಿಂದ ಮುಂದುವರೆಯಿತು. ಅವರು ತಮ್ಮ ರಂಗಭೂಮಿಯ ಹಾಗೂ ಚಿತ್ರರಂಗದ ಅನೇಕ ಅನುಭವಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ನನ್ನೊಂದಿಗೆ ಹಂಚಿಕೊಂಡರು.

ತುಸುಹೊತ್ತಿನ ಬಳಿಕ ನನ್ನ ಸ್ವಭಾವಜನ್ಯ ಸಂಕೋಚವೂ ದೂರವಾಗಿ ನಾನೂ ಮೈಚಳಿ ಬಿಟ್ಟು ನನ್ನ ಅನುಭವಗಳನ್ನು ಹೇಳತೊಡಗಿದೆ. ನಡುವೆ ಹಾಗೇ ಅವರ ದೃಷ್ಟಿ ನನ್ನ ಹಸ್ತಪ್ರತಿಯತ್ತ ಹೊರಳಿತು. ಅವರು ಅದನ್ನು ಕೈಗೆತ್ತಿಕೊಂಡು ಪುಟಗಳನ್ನು ತಿರುವಿ ಹಾಕಿದರು. ನಾನು ಅವರಿಗೆ “ಬೆಳ್ಳಿಗುಂಡು” ನಾಟಕದ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿದೆ. ಏನೂ ಮಾತಾಡದೆ ಅವರು ಹಸ್ತಪ್ರತಿಯ ಮತ್ತೂ ಕೆಲ ಪುಟಗಳನ್ನು ತಿರುವಿ ಹಾಕಿದರು. ನಡುನಡುವೆ ಒಮ್ಮೊಮ್ಮೆ ತಲೆಯೆತ್ತಿ ನನ್ನನ್ನು ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದರು. ತುಸು ಹೊತ್ತಾದ ಮೇಲೆ ಇದ್ದಕ್ಕಿದ್ದಂತೆ ಕೇಳಿದರು: “ಶ್ರೀನಿವಾಸ್, if you permit me, ಇವತ್ತು ನಿಮ್ಮ ಈ script ನಾನು ಒಯ್ತೇನೆ. ಇದನ್ನ ಪೂರ್ತಿ ಓದಬೇಕು ಅನ್ನಿಸ್ತಿದೆ ನನಗೆ”. ಒಂದು ಕ್ಷಣ ನನಗೆ ಏನು ಹೇಳಲೂ ತೋಚಲಿಲ್ಲ.

ನನ್ನ ಯೋಚನೆ-ಗೊಂದಲಗಳನ್ನು ನೋಡಿ ಅವರೇ, “ಚಿಂತೆ ಮಾಡಬೇಡಿ! ನಿಮ್ಮ manuscript ಜೋಪಾನವಾಗಿರುತ್ತೆ! ನೀವು ಒಂದು ಕೆಲಸ ಮಾಡಬಹುದು: ನಾನಿಲ್ಲೇ ಮಿನರ್ವ ಸರ್ಕಲ್ ಬಳಿ ಇರೋ ಕಾಮತ್ ಹೋಟಲ್ ನಲ್ಲಿ ಉಳಕೊಂಡಿದೇನೆ. ಬೆಳಿಗ್ಗೆ ನೀವು ಅಲ್ಲೇ ಬಂದುಬಿಡಿ. ಅಲ್ಲೇ ಒಟ್ಟಿಗೆ breakfast ಮಾಡೋಣ. you can collect your script as well.. ಏನಂತೀರಿ?” ಎಂದರು. ಹೇಳುವುದಾದರೂ ಏನಿದೆ? ಅವರು ನನ್ನ ನಾಟಕವನ್ನು ಓದಲು ಆಸಕ್ತಿ ತೋರಿಸಿದ್ದೇ ನನಗೆ ಬಲು ಖುಷಿಯ ಹಾಗೂ ಹೆಮ್ಮೆಯ ವಿಷಯವಾಗಿತ್ತಲ್ಲಾ! ಆಮೇಲೂ ಸಾಕಷ್ಟು ಸಮಯ ಮಾತಾಡಿಕೊಂಡಿದ್ದು ಶ್ರೀಪತಿ ರುಚಿಕಟ್ಟಾಗಿ ಮಾಡಿದ್ದ ಅವರೆಕಾಳು ಸಾಂಬಾರ್—ಅನ್ನದ ರಸಭೋಜನ ಮುಗಿಸಿ ಅನಂತ್ ನಮ್ಮಿಂದ ಬೀಳ್ಕೊಂಡು ಹೊರಟರು. ನಾನೂ ಸಹಾ ನನ್ನ ಮೆಚ್ಚಿನ ನಟನೊಂದಿಗೆ ಕಳೆದ ಅಮೂಲ್ಯ ಸಮಯವನ್ನು ಮತ್ತೆ ಮತ್ತೆ ಮೆಲುಕುಹಾಕುತ್ತಾ ಮಲಗಿದೆ.

ಬೆಳಗಿನ ಜಾವವೇ ಇರಬೇಕು..ನನಗೋ ಗಾಢನಿದ್ದೆ. ಮನೆಯ ಫೋನ್ ರಿಂಗಣಿಸಿತು. YNK ಅವರ ಕರೆ ಇರಬಹುದೆಂದುಕೊಂಡು ರಿಸೀವರ್ ಎತ್ತಿಕೊಂಡು ನಿದ್ದೆಗಣ್ಣಲ್ಲೇ ‘ಹಲೋ’ ಎಂದೆ. ಆ ಬದಿಯಿಂದ ಧ್ವನಿ:”ಶ್ರೀನಿವಾಸ್, ನಾನು ಅನಂತ್”. ಒಂದೇ ಕ್ಷಣಕ್ಕೆ ನಿದ್ದೆ ಹಾರಿಹೋಯಿತು. “good morning ಸರ್..ಹೇಳಿ ಸರ್..” ಸಾವರಿಸಿಕೊಂಡು ಹೇಳಿದೆ. ಅನಂತ್ ಹೇಳಿದರು: “ಶ್ರೀನಿವಾಸ್.. ನಿಮ್ಮ ನಾಟಕ ಓದಿದೆ..not once but 3-4 times…brilliant ಆಗಿದೆ”..ಮಾತಿನ ನಡುವೆ ಚಿಕ್ಕ ಮೌನ. ಅವರ ಮೊದಲ ಮಾತಿಗಾಗಲೇ ನನ್ನ ಖುಷಿ ಮೇರೆ ಮೀರಿಯಾಗಿತ್ತು.ಅನಂತ್ ಮೌನ ಮುರಿದು ಮುಂದುವರಿಸಿದರು: “ಶ್ರೀನಿವಾಸ್ , ಆ ‘ನಾಯಕ’ನ ಪಾತ್ರವನ್ನ ನಾನು ಮಾಡಬಹುದೇ?”. ನನಗೆ ಅಕ್ಷರಶಃ ಉಸಿರೇ ನಿಂತಂತಾಗಿ ಗರಬಡಿದವನಂತೆ ಕುಳಿತುಬಿಟ್ಟೆ. ಮುಜುಗರ ಹುಟ್ಟಿಸುವಷ್ಟು ಹೊತ್ತು ನಿರುತ್ತರನಾಗಿದ್ದ ನನ್ನ ದಿಗ್ಭ್ರಮೆಯ ಸ್ಥಿತಿ ಅವರಿಗಾದರೂ ಹೇಗೆ ಅರ್ಥವಾಗಬೇಕು? “ಶ್ರೀನಿವಾಸ್ , are you there? ನೋಡಿ..ಒತ್ತಾಯ ಏನಿಲ್ಲ.. ನಿಮಗೆ ನಾನು ಆ ಪಾತ್ರ ಮಾಡೋದಕ್ಕೆ ಏನೂ objection ಇಲ್ಲದೇ ಇದ್ದರೆ ನಾನು act ಮಾಡೋದಕ್ಕೆ ಸಿದ್ಧವಾಗಿದೇನೆ.. otherwise,no problem…frank ಆಗಿ ಹೇಳಿ..”ಎಂದರು ಅನಂತ್. “ಅಯ್ಯಯ್ಯೋ…objection ಏನಿರುತ್ತೆ ಸರ್ ಮಣ್ಣು?! ನೀವು ಹೇಳಿದ ಮಾತನ್ನ ಪೂರ್ತಿ ಜೀರ್ಣಿಸಿಕೊಳ್ಳೋಕೆ ನನಗೆ ಸ್ವಲ್ಪ ಸಮಯ ಆಗ್ತಿದೆ ಅಷ್ಟೇ” ಎಂದು ಕಷ್ಟಪಟ್ಟು ಮಾತುಗಳನ್ನು ಜೋಡಿಸಿಕೊಂಡು ಹೇಳಿದೆ. “ಸರಿ ಹಾಗಾದ್ರೆ ..ನೀವು ರೆಡಿಯಾಗಿ ಇಲ್ಲಿಗೇ ಬಂದುಬಿಡಿ.. ಆರಾಮಾಗಿ ಕೂತ್ಕೊಂಡು ಮಾತಾಡೋಣ” ಎಂದು ಹೇಳಿ ಅನಂತ್ ಫೋನ್ ಇಟ್ಟರು. ಅವರು ನೀಡಿದ ಆ ಖುಷಿ-ಸಂಭ್ರಮಗಳ ಷಾಕ್ ನಿಂದ ಚೇತರಿಸಿಕೊಳ್ಳಲು ಸುಮಾರು ಸಮಯವೇ ಬೇಕಾಯಿತು ನನಗೆ.

ನಾನು ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಇಡುತ್ತಿರುವ ಮೊಟ್ಟಮೊದಲ ದೊಡ್ಡ ಹೆಜ್ಜೆ ಇದು.. ನನ್ನ ಚೊಚ್ಚಲು ನಿರ್ದೇಶನದ ನಾಟಕ ಇದು..ಅದರಲ್ಲಿಅನಂತ್ ನಾಗ್ ರಂಥ ಶ್ರೇಷ್ಠ—ಪ್ರಸಿದ್ಧ ನಟರು ಪಾತ್ರ ಮಾಡಲು ಆಸಕ್ತರಾಗಿದ್ದಾರೆ! ಇದಲ್ಲವೇ ಯೋಗಾಯೋಗ!
ಆದಷ್ಟು ಬೇಗ ಸಿದ್ಧನಾಗಿ ಅನಂತ್ ಉಳಿದುಕೊಂಡಿದ್ದ ಹೋಟಲ್ ಗೆ ಹೋಗಿ ಅವರೊಂದಿಗೆ ಮತ್ತೊಮ್ಮೆ ವಿವರವಾಗಿ ಮಾತಾಡಿದೆ. ‘ನಾಟಕ ಓದಿದ ತಕ್ಷಣದಲ್ಲಿ ಉತ್ಸಾಹದಿಂದ ಹಾಗೊಂದು ಪ್ರತಿಕ್ರಿಯೆ ಅವರಿಂದ ಬಂದಿರಬಹುದು.. ಅವರ ಕೆಲಸಗಳ ಒತ್ತಡದ ನಡುವೆ ರಿಹರ್ಸಲ್ ಗಳಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವೆನಿಸಿ ಬಹುಶಃ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬಹುದು’ ಎಂದೂ ಸಹಾ ನನ್ನ ಆಲೋಚನಾ ಲಹರಿ ಸಾಗಿತ್ತು. ಆದರೆ ಅನಂತ್ ಅವರ ತೀರ್ಮಾನ ಅಚಲವಾಗಿತ್ತು! ಶೂಟಿಂಗ್ ಇಲ್ಲದ ದಿನಗಳಲ್ಲಿ ಇಡೀ ದಿನ ರಿಹರ್ಸಲ್ ಮಾಡಿಕೊಳ್ಳುವ ಮಟ್ಟಿಗೆ ಅವರು ಸಿದ್ಧರಾಗಿಬಿಟ್ಟಿದ್ದರು!

ಅಂದು ಸಂಜೆ ಕಲಾಕ್ಷೇತ್ರದಲ್ಲಿ ತಂಡದ ಎಲ್ಲರೊಂದಿಗೆ ಈ ವಿಚಾರ ಹಂಚಿಕೊಂಡೆ. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ! ಒಂದೆಡೆ ಸೋಜಿಗ..ಇನ್ನೊಂದೆಡೆ ಅಂತಹ ದೊಡ್ಡ ನಟರನ್ನು ಸರಿಯಾಗಿ ನೋಡಿಕೊಳ್ಳಲು ನಮ್ಮ ಚಿಕ್ಕ-ಬಡ ತಂಡಕ್ಕೆ ಸಾಧ್ಯವೇ ಎಂಬ ಸಂಶಯ—ಆತಂಕ.ಇದರ ಜತೆಗೆ ಈಗಾಗಲೇ ರಾಜಾರಾಂನನ್ನು ಆ ಪಾತ್ರಕ್ಕೆ ಆರಿಸಿಕೊಂಡು ರಿಹರ್ಸಲ್ ಆರಂಭಿಸಿಯಾಗಿದೆ!

ಕೊನೆಗೆ ಎಲ್ಲಾ ಸಾಧಕ ಬಾಧಕಗಳನ್ನೂ ಚರ್ಚಿಸಿ ವಿಮರ್ಶೆ ಮಾಡಿ ಒಂದು ತೀರ್ಮಾನಕ್ಕೆ ಬಂದೆವು: ಅನಂತ್ ನಾಗ್ ಹಾಗೂ ರಾಜಾರಾಂ-ಇಬ್ಬರೂ ಮುಖ್ಯ ಪಾತ್ರವನ್ನು ಪ್ರದರ್ಶನಗಳನ್ನು ಹಂಚಿಕೊಂಡು ನಿರ್ವಹಿಸುವುದು(double casting). ‘ಬೆಳ್ಳಿಗುಂಡು’ ಕೇವಲ ಒಂದು ಗಂಟೆ ಹತ್ತು ನಿಮಿಷದ ನಾಟಕವಾದ್ದರಿಂದ ಅದರ ಜತೆಗೆ ಕಂಬಾರರ ‘ಖರೋಖರ’ ನಾಟಕವನ್ನೂ ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡೆವು. ಆ ನಾಟಕವನ್ನು ಅಬ್ಬೂರು ಜಯತೀರ್ಥ ಅವರು ನಿರ್ದೇಶಿಸಿದ್ದರು. ಪ್ರತಿ ದಿನ ಸಂಜೆ ಕಲಾಕ್ಷೇತ್ರದಲ್ಲೇ ರಿಹರ್ಸಲ್ಸ್ ನಡೆಯುತ್ತಿತ್ತು. ಅನಂತ್ ಅವರು ಶೂಟಿಂಗ್ ಮುಗಿಸಿಕೊಂಡು ಸೀದಾ ಕಲಾಕ್ಷೇತ್ರಕ್ಕೆ ಬರುತ್ತಿದ್ದರು. ಅವರು ಬರುವ ತನಕ ರಾಜಾರಾಂನೊಂದಿಗೆ ರಿಹರ್ಸಲ್ ಮಾಡಿ ನಂತರ ಅವರೊಂದಿಗೆ ರಿಹರ್ಸಲ್ ನಡೆಸುತ್ತಿದ್ದೆ.

ಅನಂತ್ ಅವರ ಜೊತೆ ರಿಹರ್ಸಲ್ ಮಾಡುವಾಗ ಪ್ರಾರಂಭದಲ್ಲಿ ಕೊಂಚ ಹಿಂಜರಿಕೆಯಾಗುತ್ತಿದ್ದರೂ 2—3 ದಿನದಲ್ಲೇ ಅದೆಲ್ಲಾ ಮಾಯವಾಗಿ ಹೋಯಿತು. ಒಬ್ಬ ಸ್ಟಾರ್ ನಟನೊಂದಿಗೆ ನಾಟಕ ಮಾಡುತ್ತಿದ್ದರೂ ಆ ‘ಸ್ಟಾರ್ ಗಿರಿ’ ಕ್ಷಣಮಾತ್ರಕ್ಕೂ ರಿಹರ್ಸಲ್ ನಲ್ಲಿ ಸುಳಿಯುತ್ತಿರಲಿಲ್ಲ. ಅಂತಹ ಸರಳತೆ ಅನಂತ್ ಅವರದು.ಅಷ್ಟೇ ಅಲ್ಲ,ನಾನು ರಾಜಾರಾಂ ನೊಂದಿಗೆ ರಿಹರ್ಸಲ್ ನಡೆಸುತ್ತಿದ್ದ ವೇಳೆಯಲ್ಲಿ ಅವರು ಅಲ್ಲೇ ಮೆಟ್ಟಿಲ ಮೇಲೆ ಕುಳಿತು ನಾಟಕದ ಹಿನ್ನೆಲೆಯಾಗಿ ನಾನು ಬಳಸುತ್ತಿದ್ದ ತಮಟೆವಾದ್ಯವನ್ನು ತಾವೇ ನುಡಿಸುತ್ತಿದ್ದರು! ಅವರ ಬಿಡುವಿನ ಸಮಯದಲ್ಲಿ ಹೋಟಲ್ ಗೇ ಹೋಗಿ ಅವರಿಗೆ ತಯಾರಿ —ವಿಶೇಷವಾಗಿ ಭಾಷೆಗೆ ಸಂಬಂಧಪಟ್ಟಹಾಗೆ—ನೀಡುತ್ತಿದ್ದೆ.

ಡಿಸೆಂಬರ್ ಮಾಸಾಂತ್ಯಕ್ಕೆ ಪ್ರದರ್ಶನಗಳು ನಿಗದಿಯಾಗಿದ್ದವು. ನನಗಂತೂ ಅಗ್ನಿ ಪರೀಕ್ಷೆಯ ದಿನಗಳವು. ಮೊದಲ ಪ್ರದರ್ಶನದಲ್ಲಿ ರಾಜಾರಾಂ ಅಭಿನಯಿಸಿದರೆ ಎರಡನೆಯ ಪ್ರದರ್ಶನದಲ್ಲಿ ಅನಂತ್ ಅಭಿನಯಿಸಿದರು. ಈ ಇಬ್ಬರೂ ನಾಯಕ ನಟರು ತಮ್ಮ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಅದ್ಭುತವಾಗಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮತ್ತೊಂದು ಮುಖ್ಯಪಾತ್ರದಲ್ಲಿ ಸತ್ಯನಾರಾಯಣ ಭಟ್ ಅವರೂ ಸಹಾ ಗಮನ ಸೆಳೆದರು. ನನ್ನ ನಿರ್ದೇಶನದ ಪ್ರಪ್ರಥಮ ನಾಟಕ ‘ಬೆಳ್ಳಿಗುಂಡು’ ಪ್ರಚಂಡ ಯಶಸ್ಸನ್ನು ಗಳಿಸಿತೆನ್ನಲಾಗದಿದ್ದರೂ ಅವಿಸ್ಮರಣೀಯ ಅನುಭವವನ್ನು ನನಗೆ ನೀಡಿದ್ದಂತೂ ಸತ್ಯ.ಅನಂತ್ ಅವರ ಸರಳತೆ-ಬದ್ಧತೆ-ಅಭಿನಯ ಪ್ರಬುದ್ಧತೆ-ಪಾತ್ರದ ಅಂತರಂಗವನ್ನು ಶೋಧಿಸಿ ಒಳಗಿಳಿಯುವ ತಲ್ಲೀನತೆಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ! ಅವರಿಗೂ ಸಹಾ ನಮ್ಮ ತಂಡದೊಂದಿಗೆ ನಾಟಕ ಮಾಡಿದ್ದು ಖುಷಿ ನೀಡಿತು ಅನ್ನುವುದು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ ಸಂಗತಿ.

ಹೊಸ ನಾಟಕ ಮಾಡಿದ ಗುಂಗಿನಲ್ಲಿ ತೇಲುತ್ತಿದ್ದ ಸಮಯದಲ್ಲೇ ಎರಡು ಒಳ್ಳೆಯ ಸುದ್ದಿಗಳು ಬಂದು ನನ್ನ ಸಂತಸ ಇಮ್ಮಡಿಸಿತು. ಮೊದಲನೆಯ ಸುದ್ದಿ-ಕಾರಂತರು ನಮ್ಮನಾಟಕಶಾಲೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಅನ್ನುವುದು;ಎರಡನೆಯದು ಅಷ್ಟೇ ಕರ್ಣಾನಂದಕರವಾದ ಸುದ್ದಿ—ನಮ್ಮ ಸ್ಕಾಲರ್ ಶಿಪ್ ಸಂಬಂಧವಾಗಿ ಇದ್ದ ತೊಡಕುಗಳೆಲ್ಲಾ ನಿವಾರಣೆಯಾಗಿ ಹಣ ಮಂಜೂರಾಗಿದೆ ಅನ್ನುವುದು! ಅಬ್ಬಾ! ಇನ್ನು ನಿಶ್ಚಿಂತೆಯಾಗಿ ಓದು ಮುಂದುವರಿಸಬಹುದು ಅನ್ನುವ ಸಂಗತಿಯೇ ಮನಸ್ಸನ್ನು ಹಗುರಗೊಳಿಸಿಬಿಟ್ಟಿತು. ಅದೇ ವೇಳೆಗೆ ದೆಹಲಿಯ ಶಾಲೆಯಿಂದಲೂ, “ಸ್ಕಾಲರ್ ಶಿಪ್ ಹಣ ಮಂಜೂರಾಗಿ ಬಂದಿದೆ;ತರಗತಿಗಳು ಪ್ರಾರಂಭವಾಗಿವೆ; ಈ ಕೂಡಲೇ ಹೊರಟುಬನ್ನಿ” ಎಂದು ಟೆಲಿಗ್ರಾಂ ಬಂದು ನಾನು ಸಂಭ್ರಮದಿಂದ ದೆಹಲಿ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ಆಗಲೇ ಎದುರಾದದ್ದು ನನ್ನನ್ನು ಕವಲುದಾರಿಯಲ್ಲಿ ನಿಲ್ಲಿಸಿದ ಒಂದು ಅತ್ಯಂತ ಮಹತ್ವದ ಹಾಗೂ ಕ್ಲಿಷ್ಟಕರ ಸನ್ನಿವೇಶ. ಆ ಮಟ್ಟಿಗೆ ನನ್ನೆದುರಿಗೆ ಪ್ರಶ್ನೆಗಳನ್ನು ಒಡ್ಡಿದ ಮತ್ತೊಂದು ಸಂದರ್ಭ ನನ್ನ ಬದುಕಿನಲ್ಲಿ ಎದುರಾಗಿಯೇ ಇಲ್ಲವೆಂದರೂ ಅತಿಶಯೋಕ್ತಿಯೇನಲ್ಲ.

ದೆಹಲಿಗೆ ಹೊರಡಲು ಬಹುಶಃ ಒಂದೆರಡು ದಿನಗಳಷ್ಟೇ ಉಳಿದಿವೆ.. ಅನಿರೀಕ್ಷಿತವಾಗಿ YNK ಅವರಿಂದ ಪತ್ರವೊಂದು ಬಂದು ನನ್ನ ನಿರ್ಧಾರಗಳ ಬಗ್ಗೆ ಮತ್ತೊಮ್ಮೆಚಿಂತಿಸುವ ಸ್ಥಿತಿ ತಂದುಬಿಟ್ಟಿತು: “Prajavani Hubli edition is round the corner..ಬಿಡುವಾದಾಗ ಮನೆಗೆ ಬನ್ನಿ..ಮಾತಾಡೋಣ”!! ಅಣ್ಣ-ಅಮ್ಮನಿಗಂತೂ ಈ ಸುದ್ದಿ ಕೇಳಿ ಪರಮ ಸಂತೋಷವಾಗಿಹೋಯಿತು. ‘ಇಷ್ಟು ದಿನಗಳು ಡೆಲ್ಲೀಲಿ ಬವಣೆ ಪಟ್ಟಿದ್ದು ಸಾಕು..ಇನ್ನು ಒಂದು ಯೋಚನೇನೂ ಮಾಡದೆ ಸುಮ್ಮನೆ ಕೆಲಸಕ್ಕೆ ಸೇರಿಕೋ’ ಎಂದು ಅಮ್ಮ ಒಂದೇ ಸಮನೆ ಅಲವತ್ತುಕೊಳ್ಳತೊಡಗಿದರು.

ಅಣ್ಣನಿಗೂ ಸಹಾ ನಾನು ಕೆಲಸಕ್ಕೆ ಸೇರಿ ಅಣ್ಣಯ್ಯನ ಜೊತೆ ಮನೆಯ ಜವಾಬ್ದಾರಿಯನ್ನು ಹಂಚಿಕೊಂಡು ನಡೆಸಿಕೊಂಡು ಹೋಗಬೇಕೆಂಬ ಅಭಿಪ್ರಾಯವೇ ಇತ್ತು. ಆಗ ನಾನು ಯಾವ ಚರ್ಚೆಗೂ ಇಳಿಯದೆ ಅಂದೇ ಸಂಜೆ YNK ಅವರ ಮನೆಗೆ ಹೋದೆ. YNK ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು: “ಸಧ್ಯದಲ್ಲೇ ಹುಬ್ಬಳ್ಳಿಯ ಪ್ರಜಾವಾಣಿ ಕಛೇರಿ ಕಾರ್ಯಾರಂಭ ಮಾಡುತ್ತಿದೆ..ಉಪ ಸಂಪಾದಕನ ಒಂದು ಹುದ್ದೆ ನಿನಗೆ ಮೀಸಲಾಗಿದೆ. ದೆಹಲಿಯ ಶಾಲೆಯೋ—ಹುಬ್ಬಳ್ಳಿಯ ಪ್ರಜಾವಾಣಿ ಶಾಖೆಯೋ: ತೀರ್ಮಾನ ನಿನಗೆ ಬಿಟ್ಟಿದ್ದು.” “ನಿಮ್ಮ ಅಭಿಪ್ರಾಯ ಏನು ಸರ್? ನಾನೇನು ಮಾಡಲಿ? ” ಎಂದೆ ನಾನು.

ಒಂದು ಕ್ಷಣ YNK ಮೌನವಾದರು. ನನ್ನ ಅದುವರೆಗಿನ ಬವಣೆಗಳು.. ನಮ್ಮ ಮನೆಯ ಪರಿಸ್ಥಿತಿ ಎಲ್ಲವನ್ನೂ ಅವರು ಬಲ್ಲವರೇ ಆದ್ದರಿಂದ ಅವರು ನೀಡುವ ಸಲಹೆ ಹಾಗೂ ಮಾರ್ಗದರ್ಶನ ಆ ವೇಳೆಯಲ್ಲಿ ನನಗೆ ತೀರಾ ಅಗತ್ಯವಾಗಿತ್ತು.YNK ನಿಧಾನವಾಗಿ ಹೇಳತೊಡಗಿದರು: “ಇದು ಎಂಥವರಿಗೂ ಒಂದು ಸಂದಿಗ್ಧ ಪರಿಸ್ಥಿತಿಯೇ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಲ್ಲಿ ಸರಿ-ತಪ್ಪಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ.. ನೀನು ಏನೇ ತೀರ್ಮಾನ ತೆಗೆದುಕೊಂಡರೂ ಅದು ಅದರದೇ ಮಗ್ಗುಲಿನಿಂದ ಸಮರ್ಥನೀಯವಾಗಿಯೇ ಇರುತ್ತದೆ. ನಾನು ಹೇಳುವುದು ಒಂದೇ ಮಾತು:ಈಗ ನೀನು ಏನೇ ನಿರ್ಧಾರ ತೆಗೆದುಕೊಂಡರೂ ಮುಂದೆಂದೂ ಅದಕ್ಕಾಗಿ ಪಶ್ಚಾತ್ತಾಪ ಪಡಬಾರದು ಅಷ್ಟೇ.” “ಸರಿ ಸರ್..ನನಗೆ ಸ್ವಲ್ಪ ಸಮಯಾವಕಾಶ ಕೊಡಿ..ಮನೆಯವರೊಂದಿಗೆ ಮಾತಾಡಿ ಆದಷ್ಟು ಬೇಗ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟೆ.

ಮನೆಯಲ್ಲಿ ನಳಿನಿ ಅಕ್ಕ-ಮೂರ್ತಿ ಭಾವರೊಂದಿಗೆ ಈ ಕುರಿತಾಗಿ ಚರ್ಚೆ ಮಾಡಿದೆ. “ಕನಸಿನ ಹಿಂದೆ ಹೊರಟಿದ್ದೀಯ..ಹೆಜ್ಜೆ ಹಿಂದಿಡಬೇಡ..ಇದ್ದ ತೊಡಕುಗಳೆಲ್ಲಾ ನಿವಾರಣೆಯಾಗಿವೆ…ನೀನೇನೂ ಒಂಟಿಯಲ್ಲ..ನಾವೆಲ್ಲರೂ ನಿನ್ನ ಜೊತೆಗಿದ್ದೇವೆ..ಇಷ್ಟರಮೇಲೆ ನಿನಗೇ ‘ನಾಟಕ ಸಾಕು..ನೆಮ್ಮದಿಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ನೆಲೆ ಕಂಡುಕೊಳ್ಳುತ್ತೇನೆ’ ಅನ್ನಿಸಿಬಿಟ್ಟಿದ್ದರೆ ಅದಕ್ಕೂ ನಮ್ಮ ಅಭ್ಯಂತರವಿಲ್ಲ.. ಯಾವುದಕ್ಕೂ ಚೆನ್ನಾಗಿ ಯೋಚನೆ ಮಾಡಿ ನಿರ್ಧಾರ ಮಾಡು.. ಎಲ್ಲಕ್ಕಿಂತ ಮುಖ್ಯವಾಗಿ ಕುಮಾರಣ್ಣಯ್ಯನ ಜೊತೆ ಮಾತಾಡು..ಇಲ್ಲಿ ನಮ್ಮೆಲ್ಲರಿಗಿಂತ ಅವನ ಅಭಿಪ್ರಾಯ ಮುಖ್ಯ.. ಮನೆಯ ಜವಾಬ್ದಾರಿ ಹೊರಲು ನೀನೂ ನೆರವಾಗಬೇಕು ಅನ್ನುವುದು ಅವನ ಅಭಿಪ್ರಾಯವಾಗಿದ್ದರೆ ನೀನು ಯೋಚಿಸಲೇ ಬೇಕಾಗುತ್ತದೆ” ಎಂದು ಅಕ್ಕ-ಭಾವ ನುಡಿದರು.

ಕುಮಾರಣ್ಣಯ್ಯನ ಜೊತೆ ಅಂದೇ ಸಂಜೆ ಮಾತಾಡಿದೆ.ಅಣ್ಣಯ್ಯ ಯಾವತ್ತೂ ಭಾವಾವೇಶಕ್ಕೆ ಒಳಗಾಗುವವನಲ್ಲ..ದುಡುಕಿ ಮಾತಾಡುವವನೂ ಅಲ್ಲ..ದ್ವಂದ್ವಗಳಲ್ಲಿ ತೊಳಲುವವನೂ ಅಲ್ಲ. ಅವನ ಸಮಚಿತ್ತ-ಸ್ಥಿತಪ್ರಜ್ಞ ಧೋರಣೆಗಳನ್ನು ಕಂಡು ನಾನು ಎಷ್ಟೋ ಸಲ ಬೆರಗಾಗಿದ್ದೇನೆ. ಅಂದೂ ಅಣ್ಣಯ್ಯ ನನ್ನೊಂದಿಗೆ ಮಾತಾಡುವಾಗಲೂ ಅದೇ ಧೋರಣೆಯಲ್ಲಿ ಖಚಿತ ಶಬ್ದಗಳಲ್ಲಿ ಹೇಳಿದ: “ಪ್ರಭೂ..ಮನೆಯ ಜವಾಬ್ದಾರಿಯನ್ನು ಹಂಚಿಕೊಳ್ಳುವ ಒಂದೇ ವಿಚಾರ ನಿನ್ನ ಕನಸಿನ ಹಾದಿಯಲ್ಲಿ ತೊಡಕಾಗಿ ನಿಂತಿದ್ದರೆ ನೀನು ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ..ಮನೆಯ ಜವಾಬ್ದಾರಿ ನನ್ನ ಹೆಗಲಿಗಿರಲಿ.

ಮಿಂಚಿಯ (ನನ್ನ ತಂಗಿ) ಮದುವೆಯ ಬಗ್ಗೆಯಾಗಲೀ ಮನೆ ನಡೆಸಿಕೊಂಡು ಹೋಗುವುದರ ಬಗ್ಗೆಯಾಗಲೀ ನೀನು ತಲೆ ಕೆಡಿಸಿಕೊಳ್ಳಬೇಡ..ಮಿಂಚಿ ಜಾಣೆ..ಮೆರಿಟ್ ನಿಂದಲೇ ಮೆಡಿಕಲ್ ನಲ್ಲಿ ಓದುವ ಅವಕಾಶ ಗಳಿಸಿಕೊಂಡಿದ್ದಾಳೆ..ಅವಳಿಗೂ ಸ್ಕಾಲರ್ ಶಿಪ್ ಬರುತ್ತಿದೆ..ಅವಳ ಭವಿಷ್ಯವೂ ಉಜ್ವಲವಾಗಿದೆ..ಮತ್ತೆ ಮನೆಗೆ ನೆರವಾಗುತ್ತಿಲ್ಲ ಅನ್ನುವ ಕಾರಣಕ್ಕೆ ನಿನ್ನನ್ನು ಯಾವ ಗಿಲ್ಟ್ ಕೂಡಾ ಬಾಧಿಸಬೇಕಾಗಿಲ್ಲ.ನನಗನ್ನಿಸುವ ಮಟ್ಟಿಗೆ ನಿನಗೆ ಸಿಕ್ಕಿರುವ ಈ ಅವಕಾಶ ಅಪರೂಪದ್ದು..ಬಹಳ ಜನಕ್ಕೆ ದೊರೆಯುವಂಥದ್ದಲ್ಲ..ಧೈರ್ಯವಾಗಿ ಮುಂದೆಹೋಗು..ನಿನ್ನ ಕನಸುಗಳನ್ನೆಲ್ಲಾ ಸಾಕಾರ ಮಾಡಿಕೋ..ಅಣ್ಣ-ಅಮ್ಮನ ಜೊತೆಯೂ ನಾನು ಮಾತಾಡಿ ಅವರಿಗೆ ಸಮಾಧಾನ ಹೇಳುತ್ತೇನೆ.All the best!”

ಅಣ್ಣಯ್ಯನ ತುಂಬು ಭರವಸೆಯ ಸ್ಪಷ್ಟ ನುಡಿಗಳನ್ನು ಕೇಳಿ ಹೃದಯ ತುಂಬಿ ಬಂದಿತು. ಕಣ್ಣು ಮಂಜಾಯಿತು. ಅದುವರೆಗೆ ಡೋಲಾಯಮಾನವಾಗಿ ಹೊಯ್ದಾಡುತ್ತಿದ್ದ ಮನಸ್ಸು ಒಂದು ನಿಲುಗಡೆಗೆ ಬಂದು ಮುಟ್ಟಿತು. ದೆಹಲಿಯ ನಾಟಕ ಶಾಲೆಗೆ ಮರಳುವ ನಿರ್ಧಾರ ಪ್ರಶ್ನಾತೀತವಾಗಿ—ದ್ವಂದ್ವಾತೀತವಾಗಿ ಹರಳುಗಟ್ಟಿಕೊಂಡಿತು. YNK ಅವರಿಗೂ ಫೋನ್ ಮಾಡಿ ನನ್ನ ನಿರ್ಧಾರ ತಿಳಿಸಿ ಅವರ ಶುಭ ಹಾರೈಕೆಗಳನ್ನು ಪಡೆದುಕೊಂಡೆ. ಆ ವೇಳೆಗಾಗಲೇ ಅಶೋಕನೂ ದೆಹಲಿಗೆ ಹೊರಡಲು ಸಿದ್ಧನಾಗಿ ಬಿಜಾಪುರದಿಂದ ಬೆಂಗಳೂರಿಗೆ ಬಂದಿಳಿದಿದ್ದ. ಹೊಸ ಹುರುಪು-ಉತ್ಸಾಹಗಳೊಂದಿಗೆ, ಹೊಚ್ಚ ಹೊಸ ಕನಸುಗಳೊಂದಿಗೆ ಮನೆಯವರೆಲ್ಲರ ಶುಭ ಹಾರೈಕೆಗಳನ್ನು ಪಡೆದುಕೊಂಡು ಇಬ್ಬರೂ ಜಿ.ಟಿ. ಎಕ್ಸ್ ಪ್ರೆಸ್ ಹತ್ತಿದೆವು. ಅಲ್ಲಿಂದ ಮತ್ತೊಂದು ಪಯಣದ ಆರಂಭ:

‘ಡೆಲ್ಲಿ ಚಲೋ!!’

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: