‘ಪುಸ್ತಕಗಳ ಹಬ್ಬ’ದ ರೂಪಿನಲ್ಲಿ ವಿವೇಕ ರೈ ಹುಟ್ಟುಹಬ್ಬ…

ಲಕ್ಷ್ಮೀನಾರಾಯಣ ಭಟ್ ಪಿ

ಡಿಸೆಂಬರ್ 12, 2021 ರ ಪೂರ್ವಾಹ್ನ 10 ಗಂಟೆಗೆ ಕೊಡಿಯಾಲಬೈಲ್ ನಲ್ಲಿರುವ ಕರ್ನಾಟಕ ಬ್ಯಾಂಕಿನ ನಾಲ್ಕನೇ ಮಹಡಿಯಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಐದು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಆತ್ಮೀಯ ವಾತಾವರಣದಲ್ಲಿ ಜರುಗಿತು. ನಿಜಾರ್ಥದಲ್ಲಿ ಪ್ರೊ. ವಿವೇಕ ರೈ ಅವರಿಗೆ 75 ವಸಂತಗಳ ಸಂಭ್ರಮ. ಆದರೆ ಪ್ರೊ. ರೈ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮನೋಭಾವದವರಲ್ಲ!

ಅಂತೆಯೇ ‘ಅಭಿನಂದನಾ ಗ್ರಂಥ’ ರೂಪೀ ಹೊಗಳಿಕೆಯ ಹೊನ್ನಶೂಲದಿಂದಲೂ ಮಾರು ದೂರವಿರುವವರು. ಆದರೆ ಅವರ ನಿಡುಗಾಲದ ಒಡನಾಡಿಗಳು, ಶಿಷ್ಯವೃಂದ, ಸಾಹಿತ್ಯಾಸಕ್ತ ಸನ್ಮಿತ್ರರು ಪ್ರೊ. ರೈ ಅವರ ಶೈಕ್ಷಣಿಕ ಸಾಧನೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು 75 ರ ಹುಟ್ಟುಹಬ್ಬವನ್ನು ಅವರ ‘ಪುಸ್ತಕಗಳ ಹಬ್ಬ’ದ ರೂಪಿನಲ್ಲಿ ಆಚರಿಸಿ ಸಂಭ್ರಮಿಸಿದ್ದು ಒಂದು ಅಪರೂಪದ ಆತ್ಮೀಯ ಘಟನೆಯೇ ಸರಿ.
ಬಿಡುಗಡೆಯಾದ ಪುಸ್ತಕಗಳ ವಿವರಣೆ ಹೀಗಿದೆ:

  1. ಬಿ. ಎ. ವಿವೇಕ ರೈ ಒಡನಾಟದ ನೆನಪುಗಳು -ಪ್ರೊ. ಸಿ. ಎನ್. ರಾಮಚಂದ್ರನ್ ಅವರ ಸಂಪಾದಕತ್ವದಲ್ಲಿ – ಅಂಕಿತ ಪ್ರಕಾಶನ ಬೆಂಗಳೂರು
  2. ಕ್ಯಾಮೆರಾ ಕಣ್ಣಿಂದ ಜರ್ಮನಿ – ಬಹುರೂಪಿ, ಬೆಂಗಳೂರು
  3. ಹೊತ್ತಗೆಗಳ ಹೊಸ್ತಿಲಲ್ಲಿ – ಸಪ್ನ ಬುಕ್ ಹೌಸ್, ಬೆಂಗಳೂರು
  4. ಸ್ಲಾವೋಮೀರ್ ಮ್ರೋಜೆಕ್ ಕತೆಗಳು – ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
  5. A Handbook of Kannada Prosoday – Central University of Karnataka, Gulbarga

ಬಹು ಅಚ್ಚರಿ ಹಾಗೂ ಸಂತೋಷದ ವಿಷಯವೆಂದರೆ ಕೊನೆಯ ಎರಡು ಪುಸ್ತಕಗಳು ಊಟದ ವಿರಾಮಕ್ಕೂ ಮೊದಲೇ ಮಾರಾಟವಾಗಿ ಪ್ರತಿಗಳು ಅಲಭ್ಯವಾದದ್ದು!! ನನಗೆ ತಿಳಿದಂತೆ ಯಾವ ಪುಸ್ತಕಗಳ ಲೋಕಾರ್ಪಣೆಯ ದಿನದಂದೇ ಎಲ್ಲಾ ಪ್ರತಿಗಳು ಪೂರ್ತಿ ಖಾಲಿಯಾದದ್ದು ವಿರಳಾತಿ ವಿರಳ ಸಂಗತಿ.

ಪ್ರೊ. ಬಿ. ಎ. ವಿವೇಕ ರೈ ಅವರ ಐದು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪ್ರೊ. ರೈ ಅವರು ಒಂದರೆಕ್ಷಣ ಅವರ ಸಾಮಾನ್ಯ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಭಾವುಕರಾದರೇನೋ ಎಂದು ನನಗಂತೂ ಅನಿಸಿದ್ದು ನಿಜ!

ಅದು ಹೌದೇ ಆಗಿದ್ದರೂ ಅದು ಅಲ್ಲಿ ನೆರೆದಿದ್ದ ಅಭಿಮಾನೀ ಸಂದೋಹದ ಮತ್ತು ಕೊರೊನಾ ಮಹಾಮಾರಿಗೆ ಬಲಿಯಾಗಿ ಹಠಾತ್ ಕಣ್ಮರೆಯಾದ ಅವರ ಆಪ್ತವಲಯದ ಕೆಲ ಒಡನಾಡಿಗಳ ನಿರ್ವ್ಯಾಜ ಪ್ರೀತಿಗೆ ಸಂದ ಪ್ರತಿಸ್ಪಂದನ ಎಂದೇ ಗ್ರಹಿಸಬೇಕು. ಪ್ರೀತಿ, ವಿಶ್ವಾಸವನ್ನು ದೌರ್ಬಲ್ಯ ಎಂದು ಯಾರು ತಾನೇ ಹೇಳಿಯಾರು!!

ಪುಸ್ತಕ ಲೋಕಾರ್ಪಣೆ ಎಂಬುದು ಪುಸ್ತಕ ಹಬ್ಬವಾಗಿ ಪರಿವರ್ತಿತವಾದ ಅಪರೂಪದ ಕ್ಷಣ ಅದು. ವೇದಿಕೆಯಲ್ಲಿದ್ದ ಎಲ್ಲರೂ ಪುಸ್ತಕಗಳನ್ನು ನೆಪವಾಗಿಟ್ಟುಕೊಂಡು ಅನಾವರಣಗೊಳಿಸಿದ್ದು ಪ್ರೊ. ರೈ ಅವರ ವಿದ್ವತ್ ಹಾಗೂ ವಿನಯ ಸಮ್ಮಿಳಿತಗೊಂಡ ವ್ಯಕ್ತಿತ್ವವನ್ನೇ. ಇದಕ್ಕೆ ಪ್ರೊ. ರೈ ಅವರು ಪ್ರತಿಕ್ರಿಯಿಸಿದ ರೀತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಕೊನೆಯ ಭಾಗ ‘ಪ್ರೊಫೆಸರ್ ಜೊತೆ ಸಂವಾದ’.

ಇಲ್ಲಿ ನಾನು ಸಂವಾದಕ್ಕೆ ಪೂರ್ವಭಾವಿಯಾಗಿ ಪ್ರಸ್ತಾಪಿತ ಪ್ರಶ್ನೆಗಳಿಗೆ ಪ್ರೊ. ವಿವೇಕ ರೈ ಅವರು ನವಿರು ಹಾಸ್ಯಭರಿತ ಶೈಲಿಯಲ್ಲಿ ಉತ್ತರಿಸಿದ್ದನ್ನು ಮಾತ್ರ ಆರು ವೀಡಿಯೋ ತುಣುಕುಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಗಮನಿಸಬೇಕಾದ ಎರಡು ಮಹತ್ವದ ಅಂಶಗಳ ಬಗ್ಗೆ ನಿಮ್ಮ ಗಮನ ಸೆಳೆಯುತ್ತಿದ್ದೇನೆ:

೧. ಮೊತ್ತಮೊದಲಾಗಿ ‘ಸ್ತ್ರೀ ವಾದ”ವನ್ನು ಒಂದು ಶೈಕ್ಷಣಿಕ ವಿಷಯವಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬೋಧಿಸಲು ಆರಂಭ ಮಾಡಿದವರು ಪ್ರೊ. ಬಿ. ಎ. ವಿವೇಕ ರೈ ಅವರು. ಇದಕ್ಕೆ ಖ್ಯಾತ ಸ್ತ್ರೀವಾದೀ ಚಿಂತಕಿ ಸೀಮೊನ್ ದಿ ಬೋವಾ ಹಾಗೂ ಮತ್ತಿತರರ ಬರಹಗಳು ಪ್ರೇರಣೆ ನೀಡಿದರೂ ಮೊದಲ ಸ್ತ್ರೀವಾದೀ ನೆಲೆಯನ್ನು ಪ್ರೊ. ರೈ ಅವರು ಕಂಡುಕೊಂಡದ್ದು ಕುವೆಂಪು ಅವರ ಕಾದಂಬರಿಗಳಲ್ಲಿ. ಪ್ರೊ. ರೈ ಅವರ ಜೊತೆಗೆ ಕೈಗೂಡಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದನ್ನು ಬೋಧನೆಗೆ ಅಳವಡಿಸಿದವರು ಡಿ. ಆರ್. ನಾಗರಾಜ್.

೨. ಪ್ರೊ. ರೈ ಅವರ ಬದುಕು ಬರೆಹಗಳ ಬಗ್ಗೆ ಸಂಶೋಧನೆ ಮಾಡಿ ಸಂಪ್ರಬಂಧ ಬರೆದ ಸಂಶೋಧನಾ ವಿದ್ಯಾರ್ಥಿ ಕೇಳಿದ ಒಂದು ಪ್ರಶ್ನೆ: “ಪ್ರೊ. ರೈ ಅವರು ಸೃಜನಶೀಲ ಕೃತಿಗಳನ್ನು ಬರೆದಿಲ್ಲ” ಎಂಬ ಅಂಶ. ಅನುವಾದವೂ ಒಂದು ಸೃಜನಶೀಲ ಕೃತಿಯೇ ಎಂಬ ಅಂಶವನ್ನು ಇವರು ಗಮನಿಸಿಲ್ಲ ಮತ್ತು ಇದು ಅನುವಾದಗಳ ಬಗ್ಗೆ ಇಂದಿಗೂ ಇರುವ ಒಂದು ಪೂರ್ವಾಗ್ರಹ ಎಂಬುದನ್ನು ಇಲ್ಲಿ ಹೇಳದೇ ಇರುವುದು ಈ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಮಾಡಿದ ನನಗೆ ಅನಿವಾರ್ಯವಾಗಿದೆ. ಇದಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಪ್ರೊ. ರೈ ಅವರದು: “ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾದಂಬರಿ ಬರೆಯುವ ಮನಸ್ಸು ಮಾಡಿದ್ದೇನೆ.”

ಡಿಸೆಂಬರ್ ತಿಂಗಳು ಪ್ರೊ. ರೈ ಅವರ ಮಟ್ಟಿಗೆ ಪುಸ್ತಕ ಲೋಕಾರ್ಪಣೆಗೆ ಒಂದು ಪರ್ಯಾಯ ಹೆಸರು ಎಂದರೆ ತಪ್ಪಾಗಲಾರದು. ಇದನ್ನು ಪ್ರೊ. ರೈ ಅವರು ‘Changing the Constituency’ ಎಂಬ ರೂಪಕವನ್ನು ಬಳಸಿ ಹೇಳಿದ್ದು ವಿಶಿಷ್ಟವಾಗಿತ್ತು. ಇದರ ವಿವರಣೆ ಅವರ ಮಾತುಗಳಲ್ಲೇ ಕೇಳಬೇಕು. ಮುಂದಿನ ಡಿಸೆಂಬರ್ ತಿಂಗಳಲ್ಲಿ ಈ ಕಾದಂಬರಿಯ ನಿರೀಕ್ಷೆಯಲ್ಲಿ ಇರೋಣ, ಆಗದೆ?

ಇದರ ಜೊತೆಗೆ ಅನುಷಂಗಿಕವಾಗಿಯಾದರೂ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನದ ಬಗ್ಗೆ ಹೇಳದಿದ್ದರೆ ನನ್ನ ಈ ಲೇಖನ ಅಪೂರ್ಣವೇ ಸರಿ! ಕೊಟ್ಟಿಗೆ/ಮೂಡೆ ಜೊತೆಗೆ ಚಟ್ನಿ, ಸಾಂಬಾರು, ಕ್ಷೀರ (ಕೇಸರೀಬಾತು) ಕಾಫೀ/ಚಹಾ ಪೂರ್ವಾಹ್ನದ ದೀರ್ಘ ಕಲಾಪಕ್ಕೆ ಬೇಕಾದ ಶಕ್ತಿವರ್ಧನೆ ಮಾಡಿತು.

ನಿರೂಪಕರ ಹೇಳಿಕೆಯಂತೆ ಊಟದ ಮೆನ್ಯು ಪ್ರೊ. ರೈ ಅವರ ಖುದ್ದು ಖಾಯಸ್ಸು ಅಂತೆ! ಒತ್ತು ಶ್ಯಾವಿಗೆ (ಸೇಮಿಗೆ) ಬಾಳೆಹಣ್ಣು ರಸಾಯನ, ಪುಲಾವ್ – ಸಲಾಡ್, ಮೊಸರನ್ನ, ಖರ್ಜೂರ ಪಾಯಸ, ಹೋಳಿಗೆ, ಕೊನೆಗೆ ಮಸಾಲೆ ಮಜ್ಜಿಗೆ –

ವಾಡಿಕೆಯ ಮಾತಿನಲ್ಲಿ ಒಳ್ಳೆಯ ಪಚನಕ್ರಿಯೆಗೆ – ಭೋಜನಾಂತೇ ತಕ್ರಮ್! ಬುದ್ಧಿಗೂ ಜಠರಕ್ಕೂ ಒಳ್ಳೆಯ ಗ್ರಾಸ! ಇನ್ನೇನು ಬೇಕು ಹೇಳಿ!

‍ಲೇಖಕರು Admin

December 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: