ರಾಜೇಂದ್ರ ಚೆನ್ನಿ ಕಂಡಂತೆ ‘ಸುಪಾರಿ’

ಪ್ರೊ ರಾಜೇಂದ್ರ ಚೆನ್ನಿ

‘ಸುಪಾರಿ’ ಕುಂವೀ ಅವರ ಹೊಸ ಕಾದಂಬರಿ. ಬರಹಗಾರರಾಗಿ ಕುಂವೀ ತಮಗೆ ಆಗಿರುವ ಅನುಭವಗಳು ಐತಿಹ್ಯ, ಪುರಾಣ, ಮಾಂತ್ರಿಕತೆ, ವಾಸ್ತವತೆ ಇವೇ ಮುಂತಾದ ಬಗೆಯವು. ಅವು ಅನಿರೀಕ್ಷಿತವೂ ಮೇಲುನೋಟಕ್ಕೆ ಅಸಂಭವವೂ ಎಂದು ಕಾಣುವಂಥವು. ಆದರೆ ಅವುಗಳಲ್ಲಿ ಬಹುಪಾಲು ನಡೆದಿರುವಂಥವು, ಅಥವಾ ನಡೆದಿದ್ದನ್ನು ಉತ್ಪ್ರೇಕ್ಷಿತ ಶೈಲಿಯಲ್ಲಿ ನಿರೂಪಿಸಿದಂಥವು. ಇವರು ಕೆಲಸ ಮಾಡಿದ ವಾಗಿಲಿಯಂಥ ಊರುಗಳ ವಿಚಿತ್ರ ಜಗತ್ತುಗಳ. ಇಂಥ ಅನುಭವಗಳ ಒಂದು ವಿಶಿಷ್ಟ ಭಾಗವೆಂದರೆ ಅಪರಾಧಿಗಳು, ಹಂತಕರು ಮತ್ತು ಸುಪಾರಿ ಹಂತಕರ ಜೊತೆಗೆ ಅವರಿಗಾದ ಅನುಭವಗಳು. ಇವು ಈಗಾಗಲೆ ಇವರ ಕಥೆಗಳಲ್ಲಿ ವಸ್ತುವಾಗಿ ಬಂದಿವೆ.

ಸುಪಾರಿ ಕಾದಂಬರಿಯಲ್ಲಿ ನಿರೂಪಕ ಕುಂವೀ ಅವರ ಈ ವ್ಯಕ್ತಿತ್ವದ ಮೂರ್ತರೂಪಿಯಾಗಿದ್ದಾನೆ. ಅವನು ಇಂಗ್ಲೀಷಿನಲ್ಲಿ ಬರೆಯುವ ವಿಶ್ವಪ್ರಸಿದ್ಧ ಲೇಖಕ. ಬಹುದೊಡ್ಡ ಪ್ರಕಾಶನ ಸಂಸ್ಥೆಯ ಸುಪಾರಿ ಹಂತಕನೊಬ್ಬನ್ನನ್ನು ಭೇಟಿಯಾಗಿ ಒಂದು ಕಾದಂಬರಿ ಬರೆಯಲು ಮುಂಗಡ ಹಣ ಕೊಟ್ಟಿದೆ. ಇದು ಒಂದು ಬಗೆಯ ಸುಪಾರಿಯೆ. ಏಕೆಂದರೆ ಬರೆಯುವ ಒಪ್ಪಂದವಾದಾಗನಿಂದಲೇ ಗೃಹೀತವಾಗಿರುವುದೆಂದರೆ ಕಥೆ ಹೇಳುವವ, ಅಥವಾ ಅದನ್ನು ಕೇಳಿ ಬರೆಯುವವ ಈ ಇಬ್ಬರಲ್ಲಿ ಒಬ್ಬರು ಸಾಯುತ್ತಾರೆ. ಹೀಗಾಗಿ ಇಂಥ ಕಾದಂಬರಿ ಬರೆಯುವುದೆಂದರೆ ಒಂದು ಸುಪಾರಿ ಒಪ್ಪಂದಕ್ಕೆ ಬಂದ ಹಾಗೆ. ಹೀಗಾಗಿ ತಯ್ಯಾರಿ

ಮಾಡಿಕೊಂಡೆ ಸಿದ್ದಾರ್ಥ ಹೊರಡುತ್ತಾನೆ. ಈ ತಯ್ಯಾರಿಯ ಹಿಂದೆ ಬಲವಾದ ವೈಯಕ್ತಿಕ ಕಾರಣವೂ ಇದೆ. ಸ್ವತಃ ಅವನು ವಕೀಲನು ಎಡಪಂಥೀಯ ಹೋರಾಟಗಾರನು ಆಗಿದ್ದ ತಂದೆಯನ್ನು ತನ್ನ ಕುಟುಂಬದ ಇತರರನ್ನು ಸುಪಾರಿ ಹತ್ಯೆಯಲ್ಲಿ ಕಳೆದುಕೊಂಡು ಅನಾಥನಾಗಿದ್ದಾನೆ. ತಾನು ಭೇಟಿಯಾಗಲು ಹೊರಟಿರುವ ಹಂತಕ (ಮಾಜಿ ಹಂತಕ) ತನ್ನ ತಂದೆಯ ಕೊಲೆಗಾರನಾಗಿರಬಹುದು ಎಂದು ಶಂಕಿಸಲು ಆಧಾರಗಳಿವೆ. ಅವಸರದಲ್ಲೆ ತನ್ನ ಪ್ರಯಾಣ ಆರಂಭಿಸಿದ ಸಿದ್ಧಾರ್ಥ ಅನೇಕ ವಿಚಿತ್ರವಾದ ಅನುಭವಗಳನ್ನ ಅದುರಿಸುತ್ತ ಆ ವ್ಯಕ್ತಿ ಇರುವ ತಾಣವನ್ನು ತಲುಪುತ್ತಾನೆ.

ಕಾದಂಬರಿಯ ವಸ್ತು ಮತ್ತು ಕತೆಯ ಹಂದರವು ಅಪಾರವಾದ ಸಾತತ್ಯೆಯನ್ನು ಹೊಂದಿದೆ. ಏಕೆಂದರೆ ಇಲ್ಲಿ ಕತೆ ಹುಟ್ಟುವ ಪ್ರಕ್ರಿಯೇಯೂ ಕೃತಿ ವಾಸ್ತವಾಗಿದೆ. ಟಿಪ್ಪಣಿ ಮಾಡುವಾಗಲೆ ಅನೇಕ ಪಾತ್ರಗಳು ಬರಹಗಾರನ ಮನಸ್ಸಿನಲ್ಲಿ ಸಂತೆಯನ್ನೇ ಹೂಡುತ್ತವೆ. ತಮ್ಮ ಸ್ವಭಾವದ ನಿರೂಪಣೆ ಹೀಗಿರಲಿ ಎಂದು ವಾದಿಸುತ್ತವೆ. ಇತರೆ ಪತ್ರಗಳೊಂದಿಗೆ ಅವರ ನೇರ ಜಗಳಕ್ಕೆ ಇಳಿಯುತ್ತವೆ. ಈ ವಸ್ತು ಆಧಾರ ನಿಕೋತ್ತರ ಶೈಲಿ metafiction ನ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇದೇ ಶೈಲಿಯ ಇನ್ನೊಂದು ಲಕ್ಷಣದಂತೆ ಈಗ ಮಾಜಿ ಹಂತಕನಾಗಿರುವ ವ್ಯಕ್ತಿಗೆ ಒಂದು ಸ್ವ- ಅಥವಾ self ಎನ್ನುವುದು ಇಲ್ಲ. ಅವನು ಸಂಸ್ಕೃತದಲ್ಲಿ ಕಾವ್ಯ ಬರೆದಿದ್ದಾನೆ, ಕಾಳಿದಾಸನ ಭಕ್ತನಾಗಿದ್ದಾನೆ. ಇದು ಸಾಲದೆಂಬಂತೆ ಗರುಡ ಪುರಾಣ ಪಾರಾಯಣ ಮಾಡುವ ಸಾಧಕನಾಗಿದ್ದಾನೆ, ಅಪರ ಕರ್ಮಗಳಲ್ಲಿ ಪರಿಣಿತನಾಗಿದ್ದಾನೆ, ಸಂಗೀತಗಾರನೂ ಆಗಿದ್ದಾನೆ. ಅವನ ಈ ಹಲವು ವ್ಯಕ್ತಿತ್ವಗಳ, ಪಾತ್ರಗಳ ಮೂಲಕ ಅವನ ನೈಜ ಕತೆಯನ್ನು ಹುಡುಕುವ ಜವಾಬ್ದಾರಿ ಸಿದ್ದಾರ್ಥನಿಗಿದೆ. ಅತ್ಯಂತ ಅನಿರೀಕ್ಷಿತವಾಗಿ ಆ ವ್ಯಕ್ತಿ ಮತ್ತು ಅವನ ಮೂಕಿ ಹೆಂಡತಿ ಸಿದ್ಧಾರ್ಥನನ್ನು ತಮ್ಮ ಪುತ್ರನೆಂದು ಮಾನಸಿಕವಾಗಿ ಒಪ್ಪಿಕೊಂಡು ಬಿಡುತ್ತಾರೆ. ಅವನು ಕೂಡ ಆ ವ್ಯಕ್ತಿಯನ್ನು ‘ಅಪ್ಪಾಜಿ’ ಎಂದೇ ಕರೆಯುತ್ತಾನೆ.

ಪೋಲಿಸ್ ಅಧಿಕಾರಿ ಚವ್ಹಾಣ್ ಮತ್ತು ಪ್ರಕಾಶನ ಸಂಸ್ಥೆಯ ಜೋ ಇವರಿಬ್ಬರು ಕಾದಂಬರಿ ಹೇಗೆ ಬರೆಯಬೇಕೆಂದು ಪ್ರತಿ ದಿನ ಸೂಚನೆಗಳನ್ನು ಕೊಡುತ್ತಾರೆ.  ಹೀಗಾಗಿ ಈ ವಸ್ತುವನ್ನು ಒಂದು ಗಂಭೀರವಾದ ತಾತ್ವಿಕ ಪ್ರಶ್ನೆಯನ್ನಾಗಿ ಕುಂವೀ ನಿರೂಪಿಸಬಹುದಾಗಿತ್ತು. ಕಲ್ಪನೆ, ವಾಸ್ತವ, ನಿರೂಪಣೆ, ಕಲೆ ಇವುಗಳ ಸಂಬಂಧದ ಬಗ್ಗೆ ಈ ಕೃತಿಯು ಆಳವಾದ ಜಿಜ್ಞಾಸೆಯಾಗಬಹುದಿತ್ತು. ಆದರೆ ತುಂಬಾ ನಿರೀಕ್ಷೆ ಹುಟ್ಟಿಸುವ ಈ ಹೊಳವುಗಳು ಕೃತಿಯಲ್ಲಿ ಇದ್ದರೂ ಅವುಗಳ ಸಾಧ್ಯತೆಯನ್ನು ಕುಂವೀ ಮೊಟಕುಗೊಳಿಸುತ್ತಾರೆ. ಹೀಗಾಗಿ ಕಾದಂಬರಿಯ ದೊಡ್ಡ ಭಾಗವೊಂದು ವಸ್ತುವಿನ ಸುತ್ತ ಸುತ್ತಿಕೊಂಡು ಕೃತಿಯ ಪ್ರಧಾನ ಭಾಗಕ್ಕೆ ಬರುವುದು ತಡವಾಗುತ್ತದೆ. ಆದರೆ ಕಾದಂಬರಿಯ ತಿರುಳಾಗಿರುವ ಈ ಭಾಗವು ಅಂದರೆ ಮಾಜಿ ಸುಪಾರಿ ಹಂತಕನು ತನ್ನ ಕತೆಯನ್ನು ನಿರೂಪಿಸುವ ಭಾಗವು ಅಪ್ಪಟ ಕುಂವೀ ಪ್ರತಿಭೆಯ ದ್ಯೋತಕವಾಗಿದೆ. ಗಳಿಗೆಗೊಮ್ಮೆ ಹೊಸ ತಿರುವು  ತಿರುವು ಪಡೆಯುತ್ತಾ ಅವನ ಕತೆಯು ತಲ್ಲಣ ಹುಟ್ಟಿಸುತ್ತದೆ. ಮನುಷ್ಯನ ಸ್ವಭಾವ ಹಾಗು ಜಗತ್ತಿನ ವಿಕ್ಷಿಪ್ತತೆ ಹಾಗೂ ಅನಿರೀಕ್ಷಿತ ಮಜುಲುಗಳನ್ನು ನಮ್ಮೆದುರಿಗೆ ತೆರೆದಿಡುತ್ತದೆ. ಪ್ರಕಾಶಕರ ಜನಪ್ರಿಯ ನಿರಿಕ್ಷೆಗಳನ್ನು ಮೀರಿ ಬದುಕಿನ ಸತ್ಯಗಳನ್ನು ಕೃತಿ ಅನಾವರಣಗೊಳಿಸುತ್ತದೆ. ಈ ಭಾಗದಲ್ಲಿ ಏನಾಗುತ್ತದೆ ಎನ್ನುವುದನ್ನು ಇಲ್ಲಿ ನಾನು ಹೇಳುವುದಿಲ್ಲ. ಕಥೆ ಮತ್ತು ಕತೆಯೊಳಗಿನ ಕತೆಗಳು ಒಂದು ಮುಕ್ತಾಯವನ್ನು ತಲುಪುತ್ತವೆ. ಆದರೆ ಮುಕ್ತಾಯವೆನ್ನುವುದು ಬರೀ ಒಂದು ನಿರೀಕ್ಷೆ ಅಥವಾ ಒಂದು ಭ್ರಮೆ.

ಕೃತಿ ಸ್ವರೂಪವು ಒಂದು ರಹಸ್ಯಮಯ ಕೋಟೆಯ ಸ್ವರೂಪವನ್ನು ಹೋಲುತ್ತದೆ. ಅಲ್ಲದೆ ಕಾದಂಬರಿ ಪ್ರಕಾರದ  ಜನಪ್ರಿಯ ಬಗೆಗಳಲ್ಲಿ ಒಂದಾದ crime thriller ನ ಕೆಲವು ಅಂಶಗಳನ್ನು ಕುಂವೀ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸುಪಾರಿ ಹಂತಕರಿಲ್ಲದ ಜಮೀನ್ದಾರಿ ಮತ್ತು ರಾಜಕೀಯ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಗಳು ಬದುಕಲಾರವು ಎನ್ನುವ ಕರಾಣ ಸತ್ಯವು ಈ ಕೃತಿಯ ಉದ್ದಕ್ಕೂ ಅರಣಿತವಾಗಿದೆ.  ಇದು ಅಂಚಿನ ಬದಲು ಕೃತಿಯ ಕೇಂದ್ರದಲ್ಲಿದ್ದಿದ್ದರೆ ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು.

ಕುಂವೀ ಅವರು ದಣಿವರಿಯದ ಪ್ರಯೋಗಶೀಲತೆಯ ಇನ್ನೊಂದು ಫಲವಾಗಿ ಈ ಕೃತಿಯಿದೆ. ಇದನ್ನು ಓದಲು ತೊಡಗುವುದೂ ಒಂದು ರೀತಿಯ ಸುಪಾರಿ ಸ್ವೀಕರಿಸಿದಂತೆ! ಆದರೆ ಅದು ಕುತೂಹಲಕಾರಿ ಪ್ರಯಾಣವಾಗಿದೆ.

‍ಲೇಖಕರು avadhi

February 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: