ತಮ್ಮಣ್ಣ ಬೀಗಾರ ಕಥೆ – ಅಪ್ಪನ ಕಾರು ಮತ್ತು ರಾಜು…

ತಮ್ಮಣ್ಣ ಬೀಗಾರ

 ರಾಜು ಹತ್ತಿರ ನಾಲ್ಕು ಕಾರುಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ಅವನ ಹತ್ತಿರ ನಾಲ್ಕು ಕಾರುಗಳಿವೆ. ಅವನು ನಾಲ್ಕು ಕಾರುಗಳ ಒಡೆಯ. ಇನ್ನೊಂದು ಕಾರು ಮೊನ್ನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅದನ್ನು ಅಪ್ಪ ತೆಗೆಸಿಕೊಡಲೇ ಇಲ್ಲ. ಈಗ ನಿಮಗೆ ಗೊತ್ತಾಯಿತು ರಾಜವಿನ ಹತ್ತಿರವಿರುವುದೆಲ್ಲ ಅಪ್ಪ ತೆಗೆಸಿಕೊಟ್ಟಿರುವ ಕಾರೂ ಅಂತ. ಆದರೆ ಅದರಲ್ಲಿ ಎರಡು ಮಾತ್ರ ಅಪ್ಪತಗೆಯಿಸಿಕೊಟ್ಟದ್ದು, ಇನ್ನೆರಡು ಅವನ ಹುಟ್ಟುಹಬ್ಬಕ್ಕೆ ನಿಂಗು ಮಾಮ ಮತ್ತು ಸುವರ್ಣ ಅತ್ತೆ ಕೊಟ್ಟಿದ್ದು. ಹಾಗಾದರೆ ಹುಟ್ಟುಹಬ್ಬಕ್ಕೆ ಮತ್ತೇನೂ ಉಡುಗೊರೆ ರಾಜುವಿಗೆ ಬಂದಿಲ್ವಾ ಎಂದು ನೀವು ಕೇಳಬಹುದು. ಅವನಿಗೆ ತುಂಬಾ ಉಡುಗೊರೆಗಳು ಬಂದಿವೆ. ಆದರೆ ಅವನಿಗೆ ಎಲ್ಲಿಲ್ಲದ ಪ್ರೀತಿ ಕಾರುಗಳ ಮೇಲೆಯೇ.  “ಯಾಕೋ, ನಿನಗೆ ಕಾರಿನ ಮೇಲೆ ಅಷ್ಟು ಪ್ರೀತಿ… ಮುಂದೆ ನೀನು ಕಾರ್ ಡ್ರೈವರ್ ಆಗ್ತೀಯಾ?” ಎಂದು ಕೇಳಿದಾಗ… “ಇಲ್ಲ ಇಲ್ಲ ಈಗಾಗಲೇ ಡ್ರೈವರ್ ಇಲ್ಲದ ಕಾರುಗಳು ಬಂದಿವೆಯಂತೆ,  ಮುಂದಿನ ದಿನಗಳಲ್ಲಿ ಕಾರುಗಳಿಗೆ  ಡ್ರೈವರ್ ಗಳೇ ಇರುವುದಿಲ್ವಂತೆ”  ಎಂದು ರಾಜು ಹೇಳಿದಾಗ ಪ್ರಶ್ನೆ ಕೇಳಿದ್ದ ದೇಸಾಯಿ ಅಂಕಲ್ ರಾಜು ತುಂಬಾ ತಿಳಿದುಕೊಂಡಿದ್ದಾನೆ ಎಂದು ಆಶ್ಚರ್ಯಪಟ್ಟಿದ್ದರು.

 ಇರಲಿ, ಈಗ ರಾಜು ಏನು ಮಾಡುತ್ತಾ ಇದ್ದಾನೆ ಅಂತೀರಾ? ಅದೇ, ಕಾರಿನ ಚಿತ್ರ ಬರೆಯಲಿಕ್ಕೆ ಶುರು ಮಾಡಿದ್ದಾನೆ. ನಾಲ್ಕು ಕಾರು ಇಟ್ಟುಕೊಂಡು ಆಡುವ ಬದಲು ಚಿತ್ರ ಬರೆಯಲಿಕ್ಕೆ ಶುರು ಮಾಡಿದ್ದಾನಾ ಅಂತ ನಿಮಗೆ ಅನಿಸಬಹುದು. ಆದರೆ ರಾಜು ತುಂಬಾ ಚೆನ್ನಾಗಿ ಚಿತ್ರ ಬರೆಯುತ್ತಾನೆ. ಅವನು ಬರೆಯುವ ಅರ್ಧದಷ್ಟು ಚಿತ್ರಗಳಲ್ಲಿ ಕಾರೇ ತುಂಬಿರುತ್ತದೆ.

 ಟಪ್ಟಪ್ ಅಂತ ಅಪ್ಪನ ಹೆಜ್ಜೆ ಸದ್ದು ಕೇಳಿಸಿತು. ತನ್ನ ಸ್ಕೂಟರ್ ನಿಲ್ಲಿಸಿಟ್ಟು ಪಟಪಟನೆ ನಡೆದುಕೊಂಡು ಅಪ್ಪ ಒಳಗೆ ಬರುತ್ತಿದ್ದ.  ಒಳಗೆ ಬಂದವನೇ ಶೂ ಕಳಚಿಟ್ಟು ರಾಜವಿನ ಹತ್ತಿರ ಬಂದು ನಿಂತ. ರಾಜು ಅಪ್ಪನ ಮುಖವನ್ನೊಮ್ಮೆ ತಾನು ಬಿಡಿಸಿದ ಕಾರನ್ನೊಮ್ಮೆ ನೋಡುತ್ತಿದ್ದ. ಅಪ್ಪ ಕಾರಿನ ಚಿತ್ರವನ್ನು ತನ್ನ ಕೈಯಲ್ಲಿ ತೆಗೆದುಕೊಂಡು “ಅರೆರೆರೆ… ಎಷ್ಟು ಚಂದದ ಕಾರು ಬಿಡಿಸಿದ್ದೀಯ!  ಕಾರು ಕಾರು ಕಾರು ಎಲ್ಲಿ ನೋಡಿ ಕಾರು… ಎನ್ನುವ ಹಾಡು ನೆನಪಾಯಿತು. ರಾಜು ನಾನು ಮುಂದಿನ ವಾರ ನಮಗೆಲ್ಲ ಓಡಾಡಲು ಒಂದು ದೊಡ್ಡ ಕಾರು ತರಬೇಕು ಅಂತ ಇದ್ದೇನೆ. ಪುಟ್ಟ ಪುಟ್ಟ ಆಟಿಕೆ ಕಾರನ್ನು ನೀನು ಆಡುವುದನ್ನು ನೋಡಿ ನನಗೂ ಆಸೆಯಾಯಿತು.  ಒಂದಿಷ್ಟು ಬ್ಯಾಂಕ್ ಸಾಲ ತೆಗೆದುಕೊಂಡು ಕೆಂಪು ಬಣ್ಣದ ಕಾರು ತೆಗೆದುಕೊಳ್ಳುತ್ತಾ ಇದ್ದೇನೆ, ಇರಲಿ, ನೀನು ಚಿತ್ರ ಬರೆಯುವುದನ್ನು ಮುಂದುವರಿಸು…  ಹಾಗೆ ಹೋಂವರ್ಕ್ ಕೊಟ್ಟಿದ್ದರೆ ಮಾಡುವುದನ್ನು ಮರೆಯಬೇಡ” ಎನ್ನುತ್ತಾ ಒಳಗೆ ಹೋದ.

 ರಾಜವಿಗೆ ಅಪ್ಪ ಸಾಲಗೀಲ ಅಂದದ್ದೆಲ್ಲ ಅಷ್ಟೊಂದು ಅರ್ಥವಾಗಲಿಲ್ಲ. ಆದರೆ ಅಪ್ಪ ಮುಂದಿನ ವಾರ ಹೊಸ ಕಾರು ತರುತ್ತಿದ್ದಾನೆ… ಅದು ಆಟಿಕೆ ಕಾರು ಅಲ್ಲ. ನಿಜವಾದ ಕಾರು! ನಾವೆಲ್ಲ ಅದರಲ್ಲಿ ಕುಳಿತು ಊರೆಲ್ಲಾ ಸುತ್ತಾಡಬಹುದು. ನಾನು ನನ್ನ ಈ ಪುಟ್ಟ ಕಾರುಗಳನ್ನು ಬಿಟ್ಟು ಇರುವುದಿಲ್ಲ. ಈ ಕಾರುಗಳನ್ನೆಲ್ಲ ಆ ದೊಡ್ಡ ಕಾರಿನಲ್ಲಿ ಹಾಕಿಕೊಂಡು ತಿರುಗಾಡಲು ಹೋಗುತ್ತೇನೆ. ಕಾರಿನ ಒಳಗೆ ಕುಳಿತೆ ಕಾರಿನ ಆಟ ಆಡಬಹುದು. ಎಷ್ಟು ಮಜಾ ಎಂದುಕೊಳ್ಳುತ್ತಾ ತನ್ನ ಒಂದು ಕಾರನ್ನು ಎತ್ತಿ ನೆಲದ ಮೇಲಿಟ್ಟು ದೂಡಿದ. ಅದು ಸುಂಯ್ ಅಂತ ಓಡುತ್ತಾ ಹೋಗಿ ಗೋಡೆಗೆ ಡಿಕ್ಕಿ ಹೊಡೆದು ನಿಂತಿತು. ಇನ್ನೊಂದು ಕಾರನ್ನು ಇನ್ನೊಂದು ದಿಕ್ಕಿಗೆ ದೂಡಿದ. ಅದು ವೇಗವಾಗಿ ಹೋಗಿ ಮಧ್ಯದಲ್ಲಿ ಇದ್ದ ರಾಜುವಿನ ಡಿಕ್ಷನರಿ ಹತ್ತಿ ಆಚೆ ಓಡಿ ಪಲ್ಟಿ ಹೊಡೆದು ಬಿತ್ತು. ಇನ್ನೊಂದು ಟಿಪಾಯಿ ಅಡಿಗೆ ಸೇರಿಕೊಂಡರೆ ಮತ್ತೊಂದು ಬಾಗಿಲು ದಾಟಿ ಅಂಗಳಕ್ಕೆ ಇಳಿಯಿತು. ಅಲ್ಲೆಲ್ಲೋ ಇದ್ದ ಪುಟ್ಟ ಮ್ಯಾಮಿ ಬೆಕ್ಕು ಕಾರಿನ ಹಿಂದೆ ಓಡಿತು. ಆಗಲೇ ಅಂಗಳದಲ್ಲಿ ಓಡಾಡುತ್ತಿದ್ದ ಕಾಡು ಗುಬ್ಬಿ ಮ್ಯಾಮಿತನ್ನನ್ನು ಹಿಡಿಯಲು ಬಂತು ಎಂದು ಭಾವಿಸಿ ರೆಕ್ಕೆ ಬಡ ಬಡ ಬಡಿಯುತ್ತಾ ಮರಗಳ ಎಲೆಯ ಸಂದಿನಲ್ಲಿ ಹೊಕ್ಕು ಮಾಯವಾಯಿತು. ರಾಜು ಓಡಿಬಂದು ಕಾರು ಎತ್ತಿಕೊಂಡ. ಮ್ಯಾಮಿಏನೂ ನಡೆದಿಲ್ಲ ಎನ್ನುವ ಹಾಗೆ ಸದ್ದಿಲ್ಲದೆ ಹೆಜ್ಜೆ ಹಾಕುತ್ತ ಓಡಿ ಹೋಗಿ ಅಟ್ಟದ ಕಂಬ ಹತ್ತಿ ಮೇಲೆ ಹೋಯಿತು.

 ರಾಜು ತನ್ನ ಕಾರುಗಳನ್ನೆಲ್ಲ ಎತ್ತಿಕೊಂಡು ಬಂದು ಬ್ಯಾಗಿನಲ್ಲಿ ತುಂಬಿಟ್ಟು ಅಮ್ಮನಿದ್ದಲ್ಲಿಗೆ ಓಡಿದ. ಅಮ್ಮ ನಾನು ಬಿಡಿಸಿದ ಕಾರಿನ ಚಿತ್ರ ನೋಡು ಎಂದು ಅಮ್ಮನ ಮುಂದೆ ಹಿಡಿದ. “ರಾಜು ನಿನಗೆ ಕಾರಿನದೇ ಮಳ್ಳು, ಎಷ್ಟು ಕಾರುಗಳ ಚಿತ್ರ ಬಿಡಿಸಿದ್ದೀಯಾ? ಈಗ ನಿನ್ನಪ್ಪನಿಗೂ ಅದೇ ಮಳ್ಳು ಹಿಡಿಸಿದ್ದೀಯ. ಅಪ್ಪ  ಹೊಸ ಕಾರು ತರುತ್ತಾರಂತೆ…”  ಎಂದಾಗ ರಾಜವಿಗೆ ಮತ್ತಷ್ಟು ಖುಷಿಯಾಯಿತು. ಅವನು ಬುರ್ ಬುರ್ ಎಂದು ಸದ್ದು ಮಾಡುತ್ತ ತಾನು ಹೊಸ ಕಾರಿನಲ್ಲಿ ಕುಳಿತಿದ್ದೇನೆ ಎನ್ನುವ ಹಾಗೆ ತಿರುಗಿ ಜೋರಾಗಿ ಓಡಿದ.

 ಹೌದು, ಆ ದಿನ ಅಪ್ಪ ಹೊಸ ಕಾರು ತಂದು ಮನೆಯಂಗಳದಲ್ಲಿ ನಿಲ್ಲಿಸಿದ್ದ. ರಾಜವಿಗೆ ಖುಷಿಯೋ ಖುಷಿ. ಕಾರನ್ನು ಎಷ್ಟು ನೋಡಿದರೂ ಸಮಾಧಾನವಿಲ್ಲ. ಅಪ್ಪ ಕಾರಿನ ಬಾಗಿಲು ತೆಗೆದು ಅಮ್ಮನಿಗೆ ಹಾಗೂ ರಾಜವಿಗೆ ಕಾರು ತೋರಿಸಲು ತೊಡಗಿದ. ರಾಜವಿನ ಹತ್ತಿರ ಒಳಗೆ ಹೋಗಿ ಸೀಟಿನಲ್ಲಿ ಕುಳಿತುಕೊಳ್ಳಲು ಹೇಳಿದ. ರಾಜು ತಕ್ಷಣ ಒಳಗೆ ಹೋಗಿ ಕುಳಿತು ಸೀಟಿನಲ್ಲಿ ಒರಗಿಕೊಂಡ. ಅಮ್ಮ ಅಪ್ಪ ಈಗ ಸಾಕು ಹೊರಗೆ ಬಾ ಅಂದರೂ ನಾನು ಇನ್ನೊಂದಿಷ್ಟು ಹೊತ್ತು ಇಲ್ಲಿಯೇ ಇರುತ್ತೇನೆ ಎಂದ. ಸರಿ ಎಂದು ಅವರು ತಿರುಗಿ ಮನೆಯ ಒಳಗೆ ಹೋದರು.

 ರಾಜು ಕಾರಿನ ಸೀಟ್ ಅನ್ನು ಒತ್ತಿ ಒತ್ತಿ ನೋಡಿದ. ಎಷ್ಟು ಮೆತ್ತಗೆ ಇದೆ ಅಂದುಕೊಂಡ. ಸೀಟಿನ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರು. ಹೊಸ ಕಾರಿನ ಸೀಟಿನ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿರುತ್ತಾರೆ. ರಾಜವಿಗೆ ಈ ಪ್ಲಾಸ್ಟಿಕ್ ಹೊದಿಕೆ ಬೇಡ ಅನಿಸಿತು. ತಕ್ಷಣ ಎಲ್ಲ ಸೀಟುಗಳ ಮೇಲೆ ಇದ್ದ ಪ್ಲಾಸ್ಟಿಕ್ ಹೊದಿಕೆಯನ್ನು ಜಗ್ಗಿ ಹರಿದು ತೆಗೆದ. ಅವನ್ನೆಲ್ಲ ಮುದ್ದೆ ಕಟ್ಟಿ ಹೊರಗೆ ಹಾಕಿದ. ಪ್ಲಾಸ್ಟಿಕ್ ಇಲ್ಲದ ನುಣುಪಾದ ಸೀಟನ್ನು ಮುಟ್ಟಿ ಮುಟ್ಟಿ ನೋಡಿ ಆನಂದಿಸಿದ. ಅಪ್ಪನಿಗೂ ಮುಟ್ಟಿ ನೋಡಲು ಹೇಳಬೇಕೆಂದು ಅಪ್ಪನನ್ನು ಕರೆದ. ತಾನು ಮಾಡಿದ ಕೆಲಸಕ್ಕೆ ಖುಷಿ ಆಗುತ್ತಾರೆಂದು ಅಪ್ಪನನ್ನು ನಗುಮುಖದಿಂದ ನೋಡುತ್ತಿದ್ದ…  ಅಪ್ಪ ಬಂದ. ಇದೆಲ್ಲಾ ಏನು ಎನ್ನುತ್ತಲೆ ಹತ್ತಿರ ಬಂದವನೇ”ಹೊಸ ಗಾಡಿ, ಸೀಟಿಗೆ ಧೂಳು ಮೆತ್ತದಂತೆ ಪ್ಲಾಸ್ಟಿಕ್  ಹೊದಿಕೆ ಇತ್ತು. ಅಲ್ಲದೆ ಹೊಸದು ಅಂತ ಎಲ್ಲರಿಗೂ ತಿಳಿಯುವ ಹಾಗೆ ಇತ್ತು. ನಿನಗೆ ತೆಗೆಯಲು ಯಾರು ಹೇಳಿದ್ದು. ನಿನ್ನ ಆಟಿಕೆ ಕಾರಲ್ಲ ಇದು, ಲಕ್ಷ ಲಕ್ಷ ಕೊಟ್ಟು ತಂದಿದ್ದೇನೆ. ನಡಿ ನಡಿ ನನ್ನ ಕಾರು ಇನ್ನು ಮೇಲೆ ನೀನು ಮುಟ್ಟುವ ಹಾಗೆ ಇಲ್ಲ” ಎಂದೆಲ್ಲಾ ಉದ್ದಕ್ಕೆ ಹೇಳಿ ಬೈಯ್ದು ಮನೆಗೆ ಕಳಿಸಿದ. ಅಪ್ಪನ ಮುಖದಲ್ಲಿನ ಸಿಟ್ಟನ್ನು ನೋಡಿ ರಾಜುವಿಗೆ ತಾನು ಮಾಡಿದ್ದು ದೊಡ್ಡ ಅಪರಾಧವಾಯಿತು ಎನಿಸಿ ಕಣ್ಣಿನಲ್ಲಿ ನೀರು ಬಂತು. ಹೌದು, ನಾನು ತಿಳಿಯದೆ ತಪ್ಪು ಮಾಡಿಬಿಟ್ಟೆ ಅಂದುಕೊಂಡು ಸುಮ್ಮನಾದ.

 ಮರುದಿನ ಮನೆಯ ಮುಂದಿನ ಪೇರಲೆ ಗಿಡಕ್ಕೆ ಹತ್ತಿ ಪೇರಲೆ ಹಣ್ಣು ಕೀಳುತ್ತಿದ್ದ. ಅಪ್ಪ ವರಾಂಡದಲ್ಲಿ ಕುಳಿತು ಪೇಪರ್ ಓದುತ್ತಿದ್ದ. ಪೇರಲೆ ಹಣ್ಣು ಕೊಂಬೆಯ ತುದಿಯಲ್ಲಿತ್ತು. ರಾಜು ನಿಧಾನವಾಗಿ ಕೊಂಬೆಯ ಮೇಲೆ ಸ್ವಲ್ಪ ಮುಂದೆ ಹೋಗಿ ಬಗ್ಗಿಸಿದ. ತುದಿಯಲ್ಲಿದ್ದ ಪುಟ್ಟ ಒಣಗಿದ ಕೊಂಬೆಯೊಂದು ಪಟ್ ಎಂದು ಮುರಿಯಿತು.  ಅದು ಕೆಳಗಿನ ಕೊಂಬೆಯ ಮೇಲೆ ಬಿದ್ದು ಸಿಡಿದ ಹಾಗೆ ಆಗಿ ಸ್ವಲ್ಪ ದೂರದಲ್ಲಿ ನೆಲದ ಮೇಲೆ ನಿಂತಿದ್ದ ಹೊಸ ಕಾರಿನ ಮೇಲೆ ಬಿತ್ತು. ಅದು ಸಣ್ಣ ಕೊಂಬೆ.  ಪೇಪರ್ ಓದುತ್ತಿದ್ದ ಅಪ್ಪನಿಗೆ ಹೇಗೆ ಗೊತ್ತಾಯಿತೋ ಗೊತ್ತಿಲ್ಲ. “ಏ… ನಿನ್ನ ಉಪಟಳ ಹೆಚ್ಚಾಯಿತು. ನನ್ನ ಕಾರನ್ನು ನೀನು ಉಳಿಸುವುದಿಲ್ಲ. ಮರದಿಂದ ಇಳಿ ಮೊದಲು” ಎಂದು ಕೂಗಿದ. ಅಪ್ಪ ಎಷ್ಟು ಪ್ರೀತಿಯಿಂದ ನನ್ನ ಜೊತೆಗೆ ಆಡುತ್ತಿದ್ದ.  ಒಂದು ದಿನವೂ ಸಿಟ್ಟು ಮಾಡುತ್ತಿರಲಿಲ್ಲ. ಅವನು ನನಗೆ ಬೈಯುವುದೂ ಕಡಿಮೆಯೇ. ಈಗ ಈ ಹೊಸ ಕಾರಿಗೆ ಸಣ್ಣ ಕೊಂಬೆ ಬಿದ್ದುದ್ದಕ್ಕೇ ಬೈಯುತ್ತಿದ್ದಾನೆ… ಎಂದುಕೊಳ್ಳುತ್ತಾ ಕೆಳಗೆ ಇಳಿದು ಬಂದ.

“ಕಾರು ನಿಂತಿದ್ದು ನಿನಗೆ ಕಾಣುವುದಿಲ್ಲ. ಹೊಸ ಕಾರು. ಕೊಂಬೆ ಬಿದ್ದು ಗೀರಾದರೆ ನೋಡಲು ಆಗುತ್ತಾ?”  ಎಂದು ಜೋರಾಗಿ ಹೇಳುತ್ತಾ ಅದೇ ಒಣಗಿದ ಕೊಂಬೆಯಿಂದ ರಾಜುವಿಗೆ ಎರಡು ಹೊಡೆದೇ ಬಿಟ್ಟ ಅಪ್ಪ.  ರಾಜುಗೆ ಒಮ್ಮೆಲೇ ಆಘಾತ ಆದಂತೆ ಆಯಿತು. ಅಪ್ಪನ ಈ ರೀತಿಯ ಸಿಟ್ಟು ಅವನು ನೋಡಿಯೇ ಇರಲಿಲ್ಲ. ಅಳುತ್ತಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. ಹೊಸ ಕಾರಿನೊಂದಿಗೆ ಅಪ್ಪ ಬದಲಾಗಿಬಿಟ್ಟಿದ್ದಾನೆ. ನನ್ನ ಮೇಲೆ ಅವನಿಗೆ ಪ್ರೀತಿಯೇ ಇಲ್ಲ. ಈಗ ಅವನಿಗೆ ಅವನ ಕಾರೇ ಮುಖ್ಯವಾಗಿದೆ. ನನಗೆ ಎಷ್ಟೆಲ್ಲಾ ಆಟಿಕೆ ಕಾರು ತಂದು ಕೊಡುತ್ತಿದ್ದ…ನನ್ನೊಂದಿಗೆ ತುಂಬಾ ಹೊತ್ತು ಆಡುತ್ತಾ ಇರುತ್ತಿದ್ದ…  ಈಗೇನಾಯಿತು ಅಪ್ಪನಿಗೆ ಎಂದುಕೊಳ್ಳುತ್ತಾ ತನ್ನ ಕೋಣೆಯಲ್ಲಿದ್ದ ಆಟಿಕೆ ಕಾರುಗಳನ್ನು ಒದ್ದು ಮೂಲೆಗೆ ದೂಡಿದ. ಇನ್ನು ನಾನು ಅಪ್ಪನ ಕಾರಿನ ಕಡೆಗೇ ಹೋಗುವುದಿಲ್ಲ ಎಂದೆಲ್ಲ ಯೋಚಿಸಿದ.

 ಮತ್ತೆರಡು ದಿನ ಕಳೆಯಿತು. ಅಪ್ಪ ಬಕೇಟಿನಲ್ಲಿ ನೀರು ತುಂಬಿಕೊಂಡು “ರಾಜು, ಕಾರು ತೊಳೆಯೋಣಬಾರೋ” ಎಂದು ಕರೆದ. ಅಪ್ಪನ ಪ್ರೀತಿಯ ಕರೆ ಕೇಳಿ ರಾಜು ಸುಮ್ಮನಿರಲು ಸಾಧ್ಯವೇ… ಅಪ್ಪ ಬಕೇಟಿನ ನೀರಿಗೆ ಶಾಂಪೂ ಹಾಕಿ ನೊರೆ ಬರಿಸಿ ಕಾರನ್ನು ಬಟ್ಟೆಯಿಂದ ಉಜ್ಜಿ ತೊಳೆಯಲು ತೊಡಗಿದ. ರಾಜುವಿಗೂ ಒಂದು ಬಟ್ಟೆ ಕೊಟ್ಟು ಉಜ್ಜಿ ತೊಳೆಯಲು ಹೇಳಿದ. ರಾಜು ತೊಳೆಯುತ್ತಿರುವಾಗ ಒಂದು ಕಪ್ಪು ಕಲೆ ಕಾರಿಗೆ ಅಂಟಿಕೊಂಡಿದ್ದನ್ನು ಕಂಡ. ಬಟ್ಟೆಯಿಂದ ತಿಕ್ಕಿದರೂ ಹೋಗಲಿಲ್ಲ. ಕೂಡಲೇ ಒಂದು ಉಪಾಯ ಮಾಡಿದ. ಮನೆಯ ಒಳಗೆ ಓಡಿ ಹೋಗಿ ಹಳೆಯ ಟೂತ್ ಬ್ರಷ್ ಒಂದನ್ನು ತಂದು ಅದರಿಂದ ಉಜ್ಜಿ ಕಲೆ ತೆಗೆಯಲು ಪ್ರಯತ್ನಿಸತೊಡಗಿದ. ಅದನ್ನು ನೋಡಿದ ಅಪ್ಪ “ರಾಜು,  ಏನು ಮಾಡ್ತಾ ಇದ್ದೀಯಾ?” ಅಂದ. “ಅಪ್ಪ ಕಪ್ಪು ಕಲೆ ಇದೆ ತೆಗೆಯುತ್ತಾ ಇದ್ದೇನೆ” ಅಂದರಾಜು. “ನಿನಗೆ ಬುದ್ಧಿ ಇಲ್ಲ, ಆ ಬ್ರಶ್ ನಿಂದ ತಿಕ್ಕಿದರೆ ಕಾರಿನ ಮೇಲೆ ಗೆರೆ ಬೀಳುತ್ತದೆ. ನೀನು ತೊಳೆದದ್ದು ಸಾಕು’ ಎಂದು ಬೈದ. ಈಗ ರಾಜುಗೆ ಮತ್ತೆ ಬೇಜಾರಾಯಿತು.  ಏನೂ ಹೇಳದೆ ಸುಮ್ಮನೆ ಮನೆಗೆ ನಡೆದ.

 ಮಧ್ಯಾಹ್ನ ಅಪ್ಪ ಊರ ಹೊರಗಿನ ಗಾರ್ಡನಿಗೆ ಹೋಗಿ ಬರೋಣ ಎಂದು ಹೇಳಿದ. ರಾಜುಗೆ ಕಾರನ್ನು ಕಂಡರೆ ಸಿಟ್ಟು ಬರುವಂತೆ ಆಗಿತ್ತು. ಅಪ್ಪನಿಗೆ ನನ್ನ ಮೇಲೆ ಪ್ರೀತಿ ಇಲ್ಲ. ಅವನಿಗೆ ಅವನ ಕಾರಿನ ಮೇಲೇ ಪ್ರೀತಿ. ಅವನ ಕಾರು ನನಗೆ ಬೇಡ. ಅದರಲ್ಲಿ ಕುಳಿತು ನಾನು ಎಲ್ಲಿಗೂ ಹೋಗುವುದಿಲ್ಲ… ಎಂದೆಲ್ಲಾ ಮನಸ್ಸಿನಲ್ಲಿಯೇ ಯೋಚಿಸಿಕೊಂಡಿದ್ದ. ನಾನು ಬರುವುದಿಲ್ಲ ಎಂದು ರಾಜು ಗಂಟು ಮೋರೆ ಹಾಕಿಕೊಂಡು ಹೇಳಿದ. “ರಾಜಪುಟ್ಟ, ಹಾಗೆಲ್ಲ ಸಿಟ್ಟಾಗಬಾರದು. ಬಾ ಬಾ. ನಿನ್ನ ಆಟಿಕೆ ಕಾರುಗಳನ್ನು ಇಟ್ಟುಕೊಂಡು ಹಿಂದಿನ ದೊಡ್ಡ ಸೀಟಿನಲ್ಲಿ ಕುಳಿತುಕೊ. ನಾನು ಅಮ್ಮ ಮುಂದೆ ಕುಳಿತುಕೊಳ್ಳುತ್ತೇವೆ. ಗಾರ್ಡನ್ ಸುತ್ತಾಡಿಕೊಂಡು ಹಾಗೆ ಐಸ್ ಕ್ರೀಮ್ ತಿಂದುಕೊಂಡು ಬರೋಣ… ಎಂದ ಅಪ್ಪ. ಅಮ್ಮನೂ ಒತ್ತಾಯ ಮಾಡಿದಳು. ಈಗ ರಾಜು ಮನಸ್ಸಿನಲ್ಲಿ ಬೇಜಾರು ಇದ್ದರೂ  ಒಪ್ಪಿಕೊಂಡು ಕಾರು ಹತ್ತಿದ.

 ರಾಜು ತನ್ನ ಎರಡು ಪುಟ್ಟ ಕಾರುಗಳನ್ನು ಇಟ್ಟುಕೊಂಡು ಹಿಂದೆ ಕುಳಿತಿದ್ದ. ಮೆತ್ತನೆಯ ಸೀಟಿನಲ್ಲಿ ಆರಾಮಾಗಿ ಕುಳಿತು ಕಾರುಗಳೊಂದಿಗೆ ಆಡುತ್ತಿದ್ದ. ಅವರು ಗಾರ್ಡನ್ ಹತ್ತಿರ ಬಂದರು. ಮುಖ್ಯ ರಸ್ತೆಯಿಂದ ಸರ್ವಿಸ್ ರಸ್ತೆಯ ಕಡೆ ಕಾರು ಹೊರಳಿಸಿ ಅಲ್ಲಿ ಯಾವುದೋ ವಾಹನ ಬರುತ್ತಿರುವುದರಿಂದ ಅಪ್ಪ ಒಂದು ಕ್ಷಣ ಕಾರು ನಿಲ್ಲಿಸಿದ್ದ… ಒಮ್ಮೆಲೇ ಬಡ್ ಎಂಬ ಧ್ವನಿ ಬಂತು!  ಹಿಂದಿನಿಂದ ಯಾವುದೋ ವಾಹನ ಬಂದು ಕಾರಿಗೆ ಬಡಿದಿತ್ತು. ರಾಜವಿನ ತಲೆ ಒಮ್ಮೆಲೇ ಮುಂದಿನ ಸೀಟಿಗೆ ಬಡಿದು ಸ್ವಲ್ಪ ನೋವಾಯಿತು. ಅದು ಅವನಿಗೆ ಹೆಚ್ಚು ನೋವು ಅನ್ನಿಸಲಿಲ್ಲ. ಕಾರಿಗೆ ಏನಾಯಿತೇನೋ…  ಅಪ್ಪನಿಗೆ ಬಹಳ ಬೇಜಾರಾಗುತ್ತದೆ ಎಂದೆಲ್ಲಾ ಆಲೋಚನೆ ಬಂತು. ಅಪ್ಪ ಬಾಗಿಲು ತೆಗೆದು ಇಳಿದು ಓಡಿ ಬಂದು ಕಾರಿನ ಹಿಂದಿನ ಬಾಗಿಲನ್ನು ತೆರೆದು  ರಾಜವನ್ನು ಎತ್ತಿಕೊಂಡ.  ಅಪ್ಪ ನನಗೇನೂ ಆಗಿಲ್ಲ… ಕಾರು ಹಾಳಾಯಿತೇನೋ…ಅಂದ ರಾಜು. ಕಾರಿಗೆ ಏನಾದರೂ ಚಿಂತೆ ಇಲ್ಲ ನಮ್ಮ ರಾಜವಿಗೆ ಏನೂ ಆಗಬಾರದು ಎನ್ನುತ್ತ ಅಪ್ಪ ರಾಜುವನ್ನು ಗಟ್ಟಿಯಾಗಿ ತಬ್ಬಿಕೊಂಡಾಗ… ರಾಜವಿಗೆ ಸಿಟ್ಟೆಲ್ಲ ಕರಗಿ ಕಣ್ಣೀರು ಹರಿಯಿತು.

‍ಲೇಖಕರು avadhi

February 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: