ರಾಜಶ್ರೀ ಪೆರ್ಲ ಓದಿದ ‘ದೆಂಗ’

ಭಾಷೆ ಭಾವ ಪಲ್ಲಟ ತಲ್ಲಣಗಳ ಲಹರಿ ಅಕ್ಷಯ ಆರ್ ಶೆಟ್ಟಿಯವರ ‘ದೆಂಗ’ ತುಳು ಕಾದಂಬರಿ

ರಾಜಶ್ರೀ ಪೆರ್ಲ

ಸಾಹಿತ್ಯ ಲೋಕದಲ್ಲಿ ಕಥನದ ಹಾದಿಯದ್ದು ಕಾಲಕಾಲಕ್ಕೆ ತಿರುವುಗಳನ್ನು ಹೊಂದುತ್ತಾ, ಅಲ್ಲಲ್ಲಿ ಮಡುಗಟ್ಟಿ ನಂತರ ಒಮ್ಮೆಗೆ ಪ್ರವಹಿಸಿ ಬೇರೆ ಬೇರೆ ಕವಲುಗಳಾಗಿ ದುಮ್ಮಿಕ್ಕಿ ಹರಿಯುವ ನಿತ್ಯ ನೂತನ ಪ್ರವಹಿಸುವಿಕೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡಿನ ತುಳು ಮಾತೃಭಾಷೆಯ ಕಥೆಗಾರರು ಕನ್ನಡದ ಕನ್ನಡಿಯಲ್ಲಿ ತುಳು ಭಾಷೆಯ ಬಿಂಬ ನೋಡುತ್ತಾ ಸ್ವಂತಿಕೆಯ ಗುಂಗಿನ ಸಾಂಸ್ಕೃತಿಕ ಆಪ್ತತೆಯ ಆಲಂಗಿಸುವಿಕೆಯೊಳಗೆ ಬೆಚ್ಚಗಾಗುವುದನ್ನು ನಾವು ಆಗಾಗ ಗಮನಿಸಬಹುದು. ಬೆರಳೆಣಿಕೆಯ ಸಂಸ್ಥೆಗಳು, ಪ್ರಕಾಶನಗಳು ಇಂಥಹಾ ಬರಹಗಾರರನ್ನು ಗುರುತಿಸಿ ಅವರ ಕೃತಿಗಳನ್ನು ಜನಮುಖವಾಗಿಸುತ್ತಾ ತುಳು ಭಾಷೆಗೆ ವೈಯಕ್ತಿಕವಾಗಿ ಕೈಲಾದಷ್ಟು ಕೊಡುಗೆ ನೀಡುತ್ತಾ ಬಂದಿವೆ. ಈ ನೆಲೆಯಲ್ಲಿ ಪಣಿಯಾಡಿ ‘ಕಾದಂಬರಿ ಪ್ರಶಸ್ತಿ’ ಒಂದು ಹೆಮ್ಮೆ ಯ ಗುರುತಿಸುವಿಕೆಯಾದರೆ ಇನ್ನೊಂದು ಕಡೆ ತುಳು ಭಾಷೆಯ ಮತ್ತು ಕಾದಂಬರಿಯ ಗಾಂಭೀರ್ಯವನ್ನು ಗುರುತಿಸಿ ಕೃತಿಯ ಪ್ರಕಟಣೆ ಹೊತ್ತ ‘ಬಹುರೂಪಿ’ ಇಲ್ಲಿ ಅಭಿನಂದಾರ್ಹ.

ಅಕ್ಷಯ ಆರ್ ಶೆಟ್ಟಿ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾದ ಹಿನ್ನಲೆಯಿಂದ ಬಂದ ಕಾರಣ ಕಾದಂಬರಿಯಲ್ಲಿ ವಸ್ತು ವಿಷಯ ಎರಡೂ ಕೂಡ ಪ್ರೌಢ ಚಿಂತನೆಯ ಮೂಲಕ ಸಹಜವಾಗಿಯೇ ಸಶಕ್ತವಾಗಿ ಬಳಸಲ್ಪಟ್ಟಿವೆ. ಕಥಾ ಹಂದರದ ಆಯ್ಕೆ ಮತ್ತು ಕಥಾ ಪಾತ್ರಗಳು ಹಳತು ಹೊಸತಾಗುವ ಹೊಸತರೊಳಗೆ ಮತ್ತೆ ಹಳತು ನುಸುಳುವ ಸ್ವಗತದ ಹಾದಿ ಹಿಡಿಯುತ್ತಾ ಪಲ್ಲಟದ ನಡುವೆ ಕಥನ ಕುತೂಹಲ ಹುಟ್ಟಿಸುತ್ತಾ ಓದಿಸಿಕೊಂಡು ಹೋಗುತ್ತದೆ. ದೆಂಗವೆಂದರೆ ಅದೇ ತಾನೇ! ಇಲ್ಲಿ ಹಳತೊಂದು ಬೆಚ್ಚಗೆ ಮುಚ್ಚಟೆಯಲ್ಲಿ ಮರೆಯಾಗಿ ಹೊಸತನವ ಕಳಕೊಳ್ಳದೆ ಉಳಿದು ಮರುಗಟ್ಟಿ, ಯಾವುದೋ ಅನಿವಾರ್ಯತೆಗೂ ಆಕಸ್ಮಿಕತೆಗೋ ಪಕ್ಕನೆ ಹೊರಬಂದು ಹೊಸತರೊಂದಿಗೆ ಹೊಸತರಂತಿರುವ ಹಳತು ಕಾಣಿಸಿಕೊಳ್ಳಲು ಅವಕಾಶ ಕೊಡುವ ತುಳುವ ಅಡುಗೆ ಮನೆಯ ಅದ್ಭುತ ವಾಸ್ತು ಶೈಲಿಯ ಬೊಕ್ಕಸ!

ತುಳು ಜನಪದ ಬದುಕಿನಲ್ಲಿಯೂ ದೈವಾರಾಧನೆಯ ಮತ್ತು ಸಾಂಸ್ಕೃತಿಕ ವೀರರ ಕಥನಗಳನ್ನು ಹಳೇಯ ತಲೆಮಾರು ಹೇಳುವ ಶೈಲಿಗೆ ಒಂದು ವಶೀಕರಣದ ಗುಂಗಿನ ಸೆಳೆತವಿದೆ. ಮಾಯಾ ಮತ್ತು ಜೋಗಗಳನ್ನು ಸಂಧಿಸುವಂತೆ ಮಾಡುವ ಲಯ ಲೇಪಿತ ಏರಿಳಿತ! ಇಲ್ಲಿ ಒಂದು ಸೂಕ್ಷ್ಮ ಎಚ್ಚರಿಕೆಯನ್ನು ಬಹಳ ಮಂದಿ ವಹಿಸುತ್ತಾರೆ. ಈ ಬದುಕಿನ ನೇರ ಸಂಪರ್ಕ ಪಡೆದ ಮಂದಿ, ಎಂಕಮ್ಮನಂಥಹಾ ವ್ಯಕ್ತಿಗಳು ಎದುರಾದಾಗ ತಮ್ಮ ಮಕ್ಕಳಿಗೆ ಮರಿಮಕ್ಕಳಿಗೆ ಅವರ ಮಾತುಗಳನ್ನು ಅರಳು ಮರುಳು ಎಂಬ ತಾತ್ಸಾರದ ಹೆಸರಿಸುವಿಕೆಯನ್ನು ನೀಡಿ ಸಾರಾಸಗಟಾಗಿ ದೂರ ತಳ್ಳುವ, ಅಂತರವಿರಿಸುವ ಪ್ರಯತ್ನದ ಮೂಲಕ ಹೊಸತು ಹಳತರತ್ತ ಆಕರ್ಷಣೆಗೊಂಡು ವಾಲದಂತೆ ಪ್ರಜ್ಜಾಪೂರ್ವಕ ಎಚ್ಚರಿಕೆಯನ್ನು ತೆಗೆದುಕೊಳ್ಳುತ್ತಾರೆ.

ಒಂದು ವೇಳೆ ಅವರ ತಡೆಯನ್ನು ಮೀರಿ ಕುತೂಹಲ ಪ್ರವಹಿಸಿದರೆ ಅಲ್ಲೊಂದು ಅಯೋಮಯ ಸ್ಥಿತಿ ಖಂಡಿತ ಎಂದು ಅವರಿಗೆ ಗೊತ್ತು. ಯಾಕೆಂದರೆ ಅವರು ಕ್ರಮಿಸಿದ ದೂರವನ್ನು ನೆನೆಪಿಸಿಕೊಂಡರೆ ಮರಳುವ ಮಾತೇ ಇಲ್ಲ . ಆದರೆ ಆಧುನಿಕ ಬದುಕಿನ ಒತ್ತಡದಲ್ಲಿ ಯುವ ಮನಸ್ಸುಗಳು ಅನಿರೀಕ್ಷಿತವಾಗಿ ಇದಕ್ಕೆ ಮುಖಾಮುಖಿಯಾದಾಗ ಅವರಿಗೆ ಈ ವರ್ಣನೆಯ ವೈಭವೀಕರಣದ ನಶೆ ಏರಿ ಒಂದು ಭ್ರಮಾತ್ಮಕ ಸುಖ ಆವರಿಸಿ ನೀರಿನ ಸುಳಿಯೊಳಗೆ ಎಳೆದೊಯ್ದಂತೆ ಮನಸ್ಸು ವಾಸ್ತವದ ಗುಂಗಿನಿಂದ ಕಳಚಿಕೊಂಡು ಹಿಡಿತಕ್ಕೆ ಸಿಗದೆ ಹೋಗುವ ಪರಿ ಸೂಕ್ಷ್ಮವಾಗಿ ಗಮನಿಸಿದರೆ ಸಹಜ ಸಂಗತಿ.

ನೀರ ಸುಳಿಯೊಳಗೆ ನುಸುಳಿ ಯಾವುದೊ ಕಾಲದ ನಂತರ ನಜ್ಜು ಗುಜ್ಜಾಗಿ ಹೊರಬರುವ ಬಿಂದಿಗೆಯ ಸ್ಥಿತಿ ಹಳ್ಳಿಗರಿಗೆ ಚಿರಪರಿಚಿತ. ಇಲ್ಲಿ ಸಿರಿಮಾ ಸುಳಿಯೊಳಗೆ ಕಳೆದು ಹೋಗುವ ಸೂಕ್ಷ್ಮ ಮನಸ್ಸಿನ ಬಾಲೆ. ಯಾವುದೊ ಒಂದು ಕಾಲ ಘಟ್ಟದಲ್ಲಿ ತನ್ನಂತೆ ಭೌತಿಕ ರೂಪರೇಷೆಯನ್ನು ಹೊಂದಿದ ಹೆಣ್ಣನ್ನು ಮಾನಸಿಕವಾಗಿ ಹಂತಹಂತವಾಗಿ ಆವಾಹಿಸಿಕೊಳ್ಳುವ ಮತ್ತು ಅದರಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಳ್ಳುವ ಮನೋ ತಲ್ಲಣವನ್ನು ವೈಜ್ಞಾನಿಕವಾಗಿ ಕಾದಂಬರಿಗಾರ್ತಿ ಸಶಕ್ತವಾಗಿ ನಿರೂಪಿಸುತ್ತಾ ಹೋಗುತ್ತಾರೆ. ತುಳು ನೆಲದ ದೊಡ್ಡ ಮನೆತನದ ನೂರು ಇನ್ನೂರು ಜನರ ಕೂಡು ಕುಟುಂಬದ ಮನೆಗಳಲ್ಲಿ ಹೊರ ಜಗತ್ತಿಗೆ ತೆರೆದುಕೊಳ್ಳದ ಹಲವಾರು ಕರುಣಾಜನಕ ಕಥೆಗಳು ಇದ್ದವು.

ಆ ಕಾಲ ಘಟ್ಟದ ದಬ್ಬಾಳಿಕೆಯ ಕೊಡುಗೆಗಳು. ಆದರೆ ಅವು ಇಂದಿನ ಯುವ ತಲೆಮಾರಿನ ಎದುರು ಬತ್ತಲಾದರೆ ಅವರಿಗೆ ಅರಗಿಸಿಕೊಳ್ಳುವುದಕ್ಕೆ ಬಹಳ ಕಷ್ಟ. ಇದೇ ಇಲ್ಲಿ ಸಂಭವಿಸುವುದು. ಈ ವಿವರಣೆಯ ಹಾದಿಯಲ್ಲಿ ತುಳು ನೆಲದ ಭಾಷೆ ಬದುಕು ಹೆಣ್ಣಿನ ಮೃದು ಮನಸ್ಸಿನ ಭಾವಗಳ ಪಲ್ಲಟ ಚಿತ್ರಿಸಲ್ಪಡುತ್ತಾ ಹೋಗುತ್ತದೆ. ಪಾಳು ಬಿದ್ದು ಹೋಗುತ್ತಿರುವ ರಾಜ ಗಾಂಭೀರ್ಯದಿ ಮೆರೆದ ಮನೆತನಗಳು, ಪಳೆಯುಳಿಕೆಗಳಂತೆ ಬದುಕುವ ಬಲ್ಲಾಳ್ತಿಯಂಥಹಾ ಅಜ್ಜಿಯಂದಿರು ಕಾಲದ ಪ್ರವಾಹದಲ್ಲಿ ಬದಲಾವಣೆಯ ಹೊಡೆತಕ್ಕೆ ನಲುಗುತ್ತಾ ಯಾವುದೊ ನಿರೀಕ್ಷೆಯಲ್ಲಿ ಕಾಯುವ ಆರಲಾದಾಗ ಅರಳಿ ಉರಿಯುವ ದೀಪದಂತೆ ರೂಪಕಗಳಾಗಿ ಗೋಚರಿಸುತ್ತಾ ಅಣಕಿಸುತ್ತಾರೆ. ಹೀಗಾಗಿ ಕಥೆಯ ವಿಷಯ ಮತ್ತು ಘಟನೆಗಳಲ್ಲಿ ಕಲ್ಪನೆಗಿಂತ ವಾಸ್ತವವೇ ಎದುರಾಗುತ್ತವೆ.

ಎಲ್ಲೆಲ್ಲೋ ಚದುರಿ ಹೋಗಿರುವ ತುಳುವ ಜನರು ಬದಲಾದ ಜೀವನ ಶೈಲಿ , ಭಾಷೆಯಲ್ಲಿ ಸ್ವಂತ ನೆಲದ ಸ್ವಂತಿಕೆಯ ತುಣುಕನ್ನು ಅಷ್ಟಿಷ್ಟು ಉಳಿಸಿಕೊಂಡು ಸಂಭ್ರಮಿಸಿ ಆನಂದಿಸುವುದಕ್ಕೆ ಕಾರಣ, ಆಂತರಿಕವಾಗಿ ಬೇರ್ಪಡದ ತಾಯ್ನೆಲದ ತುಡಿತ. ಇಲ್ಲಿ ಇಲ್ಲದ ಭಾಗದಿಂದ ನಾವು ನೋಡಿದರೆ ಭಾಷೆಯ ಪೂರ್ಣತ್ವ ಎಲ್ಲಿ ಎನ್ನಬಹುದು. ಆದರೆ ಇರುವ ಭಾಗದಿಂದ ನೋಡಿದರೆ, ಇರುವ ಭಾಗ್ಯವ ನೆನೆದು…. ಎಂಬ ಹಾಗೆ ಕಳೆದು ಹೋದ ಹಾದಿಗೆ ಅದು ಗಾಢಾಂಧಕಾರದ ಮಿಣುಕು ಹುಳು. ಸಂದರ್ಭೋಚಿತವಾಗಿ ಸ್ಥಳ ಸನ್ನಿವೇಶಕ್ಕೆ ಹೊಂದಿಕೊಂಡು ಗ್ರಾಮ್ಯ ತುಳುವಿನ ಬಳಕೆಯೂ ಇಲ್ಲಿ ನೈಜತೆಯನ್ನು ನೀಡಿದೆ. ಇತ್ತೀಚೆಗೆ ತುಳು ಜನಪದ ಶೈಲಿಯ ಹೊಸ ಬರವಣಿಗೆಯಲ್ಲಿ ಕಂಡರಿಯದ, ಬರಿ ಕೇಳಿ ಅರಿತ ನೆಲದ ಘಮ ಮಾತ್ರ ಕಾಣಿಸುತ್ತದೆ. ಕಾರಣವೆಂದರೆ ಹಳತರಲ್ಲಿ ಒಂದಾಗಿ ಬಾಳಿದ ಒಂದು ತಲೆಮಾರು ತೆರೆಮರೆಗೆ ಸರಿದಾಗಿದೆ. ಅದರ ವರ್ಣನೆಗೆ ಇನ್ನೆಷ್ಟರ ಕಲ್ಪನೆಯ ರಂಗು ಸವರಬಹುದು. ಆಗ ಈ ರೀತಿಯ ಬರವಣಿಗೆ ಅನಿವಾರ್ಯ.

ಹಳತನ್ನು ಆಧಾರವಾಗಿ ಇರಿಸುತ್ತಾ ಹೊಸತನ್ನು ಅಳವಡಿಸಿಕೊಳ್ಳುತ್ತಾ ಭಾಷೆಯನ್ನು ಪಳಗಿಸಿಕೊಂಡ ಒಂದು ಹೊಸ ಆವಿಷ್ಕಾರ. ತುಳುವಿನಲ್ಲಿ ಇತ್ತೀಚೆಗೆ ಈ ರೀತಿಯ ಪ್ರಯೋಗಳು ಪ್ರಾರಂಭವಾಗಿದೆ. ಈ ಕಾದಂಬರಿಯನ್ನು ಸಮಕಾಲೀನರು ಓದುವಾಗ ತುಳು ಡಿಕ್ಷನರಿಯನ್ನು ಇರಿಸಿಕೊಳ್ಳುವ ಆವಶ್ಯಕತೆ ಇಲ್ಲ. ಯಾಕೆಂದರೆ ತುಳುನಾಡಿನ ಪ್ರತೀ ಮನೆಯ ಕೊನೆ ಪಕ್ಷ ಒರ್ವ ಸದಸ್ಯನಾದರೂ ದೇಶ ಭಾಷೆಯ ಗಡಿ ದಾಟಿ ಬದುಕು ಕಟ್ಟುವ ಧಾವಂತದ ಹೆಜ್ಜೆಯಲ್ಲಿ ಪರಿವರ್ತನೆಗೆ ಒಡ್ಡಿಕೊಂಡು ಆಗಿದೆ. ಇದನ್ನು ಕಾದಂಬರಿಯ ಕೊನೆಯಲ್ಲಿ ಕಥಾಪಾತ್ರ ಬಲ್ಲಾಳ್ತಿಯು ಒಪ್ಪಿಕೊಂಡ ಹಾಗೆ ಕಾಣುತ್ತದೆ. ಬೆಣ್ಣೆಯಿಂದ ಕೂದಲು ಹೊರತೆಗೆದಂತೆ ಹೆಣ್ಣ ಮನಸ್ಸು ಘಾಸಿಕೊಳ್ಳದಂತೆ ಆ ಸಿಕ್ಕಿನಿಂದ ಹೊರ ತರುವ ಯುವ ಸಂಶೋಧಕ ಮನಸ್ಸುಗಳ ಒಳಗೊಳ್ಳುವಿಕೆ ಕಥೆಗೆ ಗಟ್ಟಿ ಚೌಕಟ್ಟನ್ನು ನೀಡುತ್ತಾ ಪ್ರತೀ ಕ್ಷಣ ಸನ್ನಿವೇಶದ ಜೊತೆ ಓದುಗನ ಕೌತುಕದ ಮನೋ ಸಂಪರ್ಕವನ್ನು ಚಾಲ್ತಿಯಲ್ಲಿ ಇರಿಸುತ್ತದೆ. ಮುಂದೇನು ಎಂಬ ಕಾತರದ ಜೊತೆ ಕಥಾ ನಾಯಕಿ ಸಿಕ್ಕುಗಳಿಂದ ಹೊರಬರುವಳೇ ಎಂಬ ಕಕ್ಕುಲತೆ ಕಾಡುತ್ತದೆ. ‘ರಾವೊ ರಾವು ಕೊರೊಂಗೊ’ ಎನ್ನುವಲ್ಲಿಗೆ ಪರಿವರ್ತನೆ ಜಗದ ನಿಯಮ ಎಂಬುದನ್ನು ಒಪ್ಪಿಕೊಳ್ಳದೆ ನಿರ್ವಾಹವಿಲ್ಲ ಎನ್ನುವುದು ನಿರೂಪಿತವಾಗುತ್ತದೆ.

ತುಳು ಸಂಸ್ಕೃತಿ ಮತ್ತು ಭಾಷೆಯ ಪಲ್ಲಟದ ಭಾವವನ್ನು, ಕುಟುಂಬದ ಭಾವನಾತ್ಮಕ ತಲ್ಲಣಗಳನ್ನು ಸಮರ್ಥವಾಗಿ ತೆರೆದಿಡುತ್ತಾ ಕಾದಂಬರಿ ಮನೋ ವೈಜ್ಞಾನಿಕ ಮತ್ತು ಸಾಮಾಜಿಕ ಚಿಂತನೆಯತ್ತ ನಮ್ಮನ್ನು ಒಯ್ಯುವುದರಲ್ಲಿ ಯಶಸ್ವೀ ಆಗಿದೆ. ಭಾಷಾ ಪ್ರಯೋಗದ ದೃಷ್ಟಿಯಲ್ಲಿ ದೇಶ ವಿದೇಶಗಳಲ್ಲಿ ನೆಲೆಯಾಗಿರುವ ಹೊಸ ತಲೆಮಾರಿಗೆ ಸುಲಲಿತವಾಗಿ ಓದಿಸಿಕೊಂಡು ಹೋಗಬಲ್ಲ ಸೊಗಸಾದ ಕಾದಂಬರಿ. ಬರವಣಿಗೆಯಲ್ಲಿನ ಪ್ರೌಢತೆ, ಭಾಷೆಯ ಪಳಗಿಸುವಿಕೆ ಮತ್ತು ಕಥಾವಸ್ತುವಿನ ಆಯ್ಕೆ ಯಲ್ಲಿ ಕಂಡುಬರುವ ಜಾಣ್ಮೆಯನ್ನು ಗಮನಿಸಿದರೆ ಮುಂದೆಯೂ ತುಳು ಕಾದಂಬರಿ ಲೋಕ ಈ ಲೇಖಕಿಯಿಂದ ಬಹಳಷ್ಟು ನಿರೀಕ್ಷೆ ಖಂಡಿತಾ ಮಾಡಬಹುದು. ಶುಭಾಶಯಗಳೊಂದಿಗೆ.

ಪುಸ್ತಕ : ‘ದೆಂಗ’
ಬೆಲೆ : ರೂ.300
ಪ್ರಕಟಣೆ : ಬಹುರೂಪಿ
ಸಂಪರ್ಕಿಸಿ 70191 82729

ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ : https://bit.ly/3WPbFlx

‍ಲೇಖಕರು avadhi

January 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: