ನಂದಿನಿ ಹೆದ್ದುರ್ಗ
ವಿಧಿಯ ನಿಕಷದಲ್ಲಿ
ಹಕ್ಕಿನ
ಪಾಲು ತಪ್ಪಿದವಳು
ನಾನು
ನಿನ್ನ ಭೆಟ್ಟಿಯಾಗುವ ವೇಳೆ
ನನ್ನ
ಕಾಲ ಗುಲಾಬಿ
ಉಸಿರು ನೀಲಿ
ಜೀವ ಅತ್ತರು
ಹಾದಿ ಆರೋಹಣ
ಕೊರಳಲ್ಲಿ ಬಿಳಿ ಬೆಳಕು
ಬೆಣ್ಣೆ ಹಚ್ಚಿದ ರೊಟ್ಟಿ
ಕಣ್ಣು
ತಿದ್ದುವ ಚಿತ್ರ ತ್ರಿಕೋನ
ಹೆಜ್ಜೆ ಬಂಡೆದ್ದ ಮಂದಿ
ಹರಿವ ನದಿ ನೆಲ
ಹೂವು ಪುಟ್ಟಾಣಿ ದೇವರು
ನನ್ನ ಬೆಳ್ಳಾನೆ ಬಿಳಿ
ಬೆಕ್ಕೆ
ಮಣ್ಣು ಮತ್ತು ಮರವೂ
ಓಡಿಹೋಗಿ ಮದುವೆ
ಮಾಡಿಕೊಳ್ಳುತ್ತಾರಂತೆ
ಆ ಊರಿನಲ್ಲಿ
ಒಂದು ಹಿಡಿ ಮಣ್ಣಿಗೆ
ಎಷ್ಟೊಂದು ಹೆಂಡಿರು
ಒಂದು ಹಿಡಿ ಮಣ್ಣಿಗೆ
ಭೂಲೋಕ ಭರ್ತಿ ಮಕ್ಕಳು
ಹಿಡಿದು ಜಪ್ಪಿಸಿ
ದಬಾಯಿಸುವ ಎನಿಸುತ್ತದೆ
‘ಕೊಡಿಸು ನನ್ನ ಬೆಕ್ಕನ್ನು
ಒಂದು ಬಟ್ಟಲು
ಬೆಚ್ಚನೆ ಹಾಲಿಟ್ಟು
ಮುರುಮುರು ಗುರುಗುಡುವ
ಅದರೆದೆಯ ಕಚ್ಚಿ
ಕೊಲ್ಲುವ ಹುಚ್ಚು
ನನಗೆ
ದಮ್ಮಯ್ಯ ದೇವರೆ
‘ಕರೆಸು ನನ್ನ ಬೆಕ್ಕನ್ನು..
ಕೊಡಿಸು ನನ್ನ ಹಕ್ಕನ್ನು..’
0 ಪ್ರತಿಕ್ರಿಯೆಗಳು