ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಶ್ರೀ ಟಿ ರೈ ಪೆರ್ಲ ಕವಿತೆ – ಸಂಕ್ರಮಣದ ಬಿಕ್ಕಳಿಕೆ…

ರಾಜಶ್ರೀ ಟಿ ರೈ ಪೆರ್ಲ

ಎಡ ಬಲಕ್ಕೆ ಖಾಲಿತನವಿದೆಯೆಂಬ ಅರಿವು ಹಡೆದವರಿಗೂ ಮತ್ತಿವರಿಗೂ ಇತ್ತು.
ಆವರಿಸಿ ಸ್ವಂತ ಆಕಾರವಿಲ್ಲದ ದ್ರವ
ಪೂರ್ತಿಯಾಗಿ ತುಂಬಿಕೊಳ್ಳಬೇಕು
ಮತ್ತೆ ತುಳುಕಬೇಕು ಜೀವನದಿ.

ಕತ್ತರಿಸಿ ಇತ್ತವರು ಅತ್ತರಿನ ಪರಿಮಳದ
ನಡುವೆಯೂ ಬಿಕ್ಕಳಿಸಿ ಅತ್ತರು.
ಮಣ್ಣು ನೆರಳು ನೋಡಿಟ್ಟು ರಂಗಲ್ಲಿ
ಅದ್ದಿ ಅಲ್ಲಿಟ್ಟು ಇದೇ ಲೋಕರೂಢಿ ಎಂದು
ಕರ ತೊಳೆದುಕೊಂಡರು.

ಹೂತಲ್ಲಿ ಸೋತು ತಗ್ಗಿ ಬಗ್ಗಿ
ಹಳತರ ನಡುವೆ ಹೊಸತು ಆದಷ್ಟು ಬೇಗ ತೇಯಬೇಕೆಂಬ ಹವಣಿಕೆ.
ಬುಡಕೆ ಅಂಟಿಕೊಂಡ ಅಪರಿಚಿತ ಮಣ್ಣು.
ಒಣಗುವ ಮೊದಲು ತೇವ ತೇಪೆಗೆ ಜೀವಂತಿಕೆ.

ಆ ಗಿಡಕೆ ಮೂಲ ಹಿತ್ತಿಲ ಹೆಸರು.
ಇಲ್ಲಿಯ ನೀರು, ಕೆಸರು
ಒಳಸೆಲೆಗೆ ಹಸಿರು, ಬಸಿರ ಹೊಣೆ.
ಉಸಿರೊಳಗೆ ಉಸಿರ ಸೃಷ್ಟಿ. ಒಡಲು ಗೀರಿ,
ಹಣ್ಣು, ಕಾಯಿ ಹೂ ಎಸಳು, ಪ್ರತ್ಯುತ್ಪಾದನೆ.

ಹಸ್ತಾಂತರಿಸಬೇಕು ಹೊಸ ಹುಟ್ಟನ್ನು.
ಹರೆಯದ ನಡು ಬಳುಕಿದಂತೆ
ಉಬ್ಬು ತಗ್ಗುಗಳು ಸೆಟೆದು ಬಲಿತಂತೆ.
ಬೇರ್ಪಡಿಸಿ ಮತ್ತೆಲ್ಲೋ ಊರುವಾಗ
ಭಾರ ಉಸಿರಿನ ನೀರಸ ದುಮ್ಮಿಕ್ಕುವಿಕೆ.

ಪಲ್ಲಟದ ಹಾದಿಯಲಿ
ಕೆಂಪು ಶ್ರವಿಸಿ ಒಣಗಿ ಮತ್ತೆ ಮತ್ತೆ
ಹೊಸ ಬೇರು ಹುಟ್ಟಿಕೊಳುತ್ತದೆ
ಇತಿಹಾಸದ ಮರುಕಳಿಕೆ.
ಅದೇ ತಣ್ಣನೆಯ ಚಡಪಡಿಕೆ

ಕಳೆತು ಮೊಳೆತು ಎತ್ತರೆತ್ತರ ಬೆಳೆದು
ರೆಂಬೆ ಕೊಂಬೆ ಚಾಚಿದ ಪ್ರೌಢ ಕ್ಷಣ
ಉಸಿರ ಹುದುಗಿಸಿದಲ್ಲಿಗೆ ಮರಳಬೇಕೆಂದರೂ
ಬೇರುಗಳು ಬಿಡುವುದಿಲ್ಲ
ಕಿತ್ತ ರೆಂಬೆಯೂ ಸ್ವಂತವಲ್ಲ
ಭೂತ ಕಾಡಿದೆ, ಭವಿಷ್ಯ ಕಾಣಿಸದೆ
ವರ್ತಮಾನ ಮೆಲ್ಲ ಸಾಯುತ್ತದೆ.

ಬೇರು ಅಂಟಿಸುವಾತನಿಗೆ ದೂರು ಹೇಳಬೇಕು
ಆತ್ಮ ಕಳಚಿಡುವ ಪೋಷಾಕಿನ ಒಳಗಿಂದ
ಮತ್ತದೇ ಕ್ಷೀಣ ಸ್ವರ
ಸಂಕ್ರಮಣದ ಬಿಕ್ಕಳಿಕೆ

‍ಲೇಖಕರು Admin

23 January, 2022

1 Comment

  1. nandini Heddurga

    ಬ್ಯೂಟಿಫುಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading