ನಾಮದೇವ ಕಾಗದಗಾರ ಓದಿದ ‘ನನ್ನೊಡೆಯ ಬುದ್ಧಪ್ರಿಯಾ’

ನಾಮದೇವ ಕಾಗದಗಾರ

ಬಾಗಲಕೋಟೆ ಜಿಲ್ಲೆಯ ಹುನಗುಂದದ, ಉಪನ್ಯಾಸಕಿ ಡಾ.ನಾಗರತ್ನಾ ಭಾವಿಕಟ್ಟಿಯವರ ಕವಿತೆಗಳ ಮೊದಲ ಈ ಗುಚ್ಛವನ್ನು ಕೈಗೆತ್ತಿಕೊಂಡಾಗ ಒಂದು ಮುಗ್ಧ ಹೃದಯದೊಳಗೆ ಪಿಸುಗುಟ್ಟುವ ಕವಿತೆಯ ಡವಡವ ಸದ್ದು! ಸದ್ದಿಲ್ಲದೇ ಕರ್ಣಪಟಲದಿಂದ ಹೃದಯದ ಕದ ತಳ್ಳಿ ನುಸುಳಿತು. ಹಗರಿಮೊಮ್ಮನಹಳ್ಳಿಯ ಪ್ರಜಾವಾಣಿ ಪತ್ರಕರ್ತ ಮಿತ್ರ ಸಿ.ಶಿವಾನಂದರವರು ಒಂದು ತಿಂಗಳ ಹಿಂದೆ ಈ ಸಂಕಲನದ ಮುಖಪುಟ ವಿನ್ಯಾಸಕ್ಕಾಗಿ ಹಸ್ತ ಪ್ರತಿ ಕಳಿಸಿದ್ದರು.

ಸೂಕ್ತ ಚಿತ್ರ ವಿನ್ಯಾಸ ಮಾಡಲು ಈ ಸಂಕಲನದ ಹಸ್ತಪ್ರತಿಯಲ್ಲಿಯ ಪ್ರತಿಪುಟವನ್ನೂ ತಿರಿವಿ ಹಾಕಿದ್ದೆ. ಆಗಲೇ ಈ ಕವಿತೆಗಳನ್ನು ಓದಿ ಪುಳಕಗೊಂಡಿದ್ದೆ. ಈಗ ಮುದ್ರಣಗೊಂಡು ನಾಡಿನ ಓದುಗರ ಕೈ ಸೇರಿದೆ. ಅಲ್ಲದೇ ನನ್ನ ಕೈ ಸೇರಿ ಮತ್ತೆ.. ಮತ್ತೇ.. ಓದಿಸಿಕೊಂಡು ಹೋಗುತ್ತಿದ್ದಂತೆ ನಾನು ‘ಬುದ್ಧಪ್ರಿಯ’ ನಾದೆ.

ಪ್ರತಿಯೊಬ್ಬರ ಬದುಕಿನಲ್ಲಿ ಪ್ರಥಮ ಎಂಬುದು ಯಾವಾಗಲೂ ಸಂಭ್ರಮ. ಸಂತೋಷ, ರೋಮಾಂಚನ ಇರುವುದು ಸಹಜ. ಅವರ ಅನುಭೂತಿಯೇ ಅತ್ಯಂತ ಶ್ರೇಷ್ಠವಾದದ್ದು. ಕವಯತ್ರಿ ನಾಗರತ್ನಾ ಸದ್ದುಗದ್ದಲವಿಲ್ಲದೇ ಕಾವ್ಯಲೋಕಕ್ಕೆ ಹೆಜ್ಜೆ ಇಡುತ್ತಿರುವರು. ಈ ಸಂಕಲನದಲ್ಲಿ ಕಾವ್ಯ ಕುಸುಮದ ಮೊಗ್ಗು ಸದ್ದಿಲ್ಲದೇ ಅರಳುತ್ತಿರುವುದು ಖುಷಿ ವಿಷಯ.

ಲೋಕದ ಜಂಜಡಗಳ ಬಿಸಿ ತಾಗದಂತೆ ಕವಿತೆಯ ಬಿಸುಪು ಆರದಂತೆ ಕಾವ್ಯಾಗ್ನಿಯ ಕುಲುಮೆಯಲ್ಲಿ ಕಾವ್ಯ ಕುಸುಮ ಅರಳಿ ಪರಿಮಳ ಚೆಲ್ಲುತ್ತಿದೆ. ಆ ನಿಟ್ಟಿನಲ್ಲಿ ಕವಯತ್ರಿ ತಮ್ಮ ಭಾವಬೀಜ ಬಿತ್ತಿ ಕವಿತೆಗಳ ಫಸಲು ಬೆಳೆದು “ನನ್ನೊಡೆಯ ಬುದ್ಧಪ್ರಿಯಾ” ಎಂಬ ಶೀರ್ಷೀಕೆಯಡಿ ತಮ್ಮ ಭಾವನೆಗಳನ್ನು ಬಂಧಿಸಿ ಕಾವ್ಯ ಸಂಕಲನ ಹೊರ ತರುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.

ಸಂಕಲನದ ಮೊದಲನೇ ಕವಿತೆ ‘ಬುದ್ಧಪ್ರಿಯಾ’ ಬುದ್ಧನನ್ನು ಮೆಚ್ಚಿದಾತನ, ಆತನ ಆದರ್ಶಕ್ಕೆ ಶರಣು ಹೋದಾತನ, ಬೌದ್ಧಧರ್ಮಕ್ಕೆ ಮಾರುಹೋದ ಸಾಮ್ರಾಟ ಅಶೋಕನ ಚಿತ್ರಣವನ್ನು ಕಣ್ಣುಮುಂದೆ ತರುವುದಲ್ಲದೇ ಕವಯತ್ರಿ ತನ್ನ ಹೃದಯ ಸಾಮ್ರಾಟ ಪತಿದೇವನ ಗುಣಗಳನ್ನು ಓದುಗರ ಮುಂದೆ ಈ ಕವಿತೆಯ ಮೂಲಕ ತಂದು ನಿಲ್ಲಿಸಿದ್ದಾರೆ. ಕವಯತ್ರಿ ಬಾಹ್ಯಲೋಕ, ಮನೋಲೋಕಗಳನ್ನು ಅನುಸಂದಾನಗೊಳಿಸುವ ಮಾಂತ್ರಿಕರಾಗಿದ್ದಾರೆ.

ಬಾಹ್ಯಲೋಕದಲ್ಲಿ ಕಾಣಿಸುವ ಸರಕುಗಳಿಗೆ ಮನೋಲೋಕದಲ್ಲಿ ಉದ್ಭವಿಸುವ ಭಾವಗಳಿಗೆ ಅನುಸಂದಾನಗೊಳಿಸುವಾಗ ಅವುಗಳನ್ನು ಸಾಂಕೇತಿಸಿ, ರೂಪಿಸಿ ಪ್ರಕಟಿಸುವುದೇನು ಸಾಮಾನ್ಯವಾದ ಕೆಲಸವಲ್ಲ. ಇಂದಿನ ಉಸಿರುಗಟ್ಟುವ ವಾತಾವರಣದಲ್ಲಿ, ಜಿಡ್ಡುಗಟ್ಟುತ್ತಿರುವ ಮನಗಳಲ್ಲಿ ‘ಕೊರೋನ ಕಾಲ ಘಟ್ಟದಲ್ಲಿ’ ಹುಟ್ಟಿಕೊಂಡ ಕವಿತೆಗಳಿವು ಎಂದು ಕವಯತ್ರಿಯೇ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಸಮಯ ಸದುಪಯೋಗದಿಂದ ತಮ್ಮಲ್ಲಿಯ ಕ್ರಿಯಾಶೀಲತೆಯನ್ನು ಸಕಾರಾತ್ಮಕ ಚಿಂತನೆಗೆ ಒಗ್ಗಿಸಿಕೊಂಡು ಒಬ್ಬ ಕವಯತ್ರಿಯಾಗಿ ಹೊರಬಂದಿರುವುದು ಹೆಮ್ಮೆ ಪಡಬೇಕಾದ ವಿಷಯವೇ. ಈ ಹಿನ್ನಲೆಯಲ್ಲಿ ಹುಟ್ಟಿಕೊಂಡ ಇಲ್ಲಿಯ ಕವಿತೆಗಳು ಸ್ನೇಹ, ಪ್ರೀತಿಗಾಗಿ ಜೊತೆಗೆ ಚಿಂತನೆಗೆ ತುಡಿದಿವೆ. ಕೆಲವುಗಳು ವ್ಯಂಗ್ಯ ಮತ್ತು ವಿಡಂಬನೆಗೆ ನಿದರ್ಶನವಾಗಿದೆ.

ಸಮಾನತೆ, ಅನಾಚಾರ, ಪುರೋಹಿತಶಾಹಿ ಕ್ರೌರ್ಯ, ಸಾಮ್ಯತೆ, ಬುದ್ಧ-ಅಂಬೇಡ್ಕರ್,ಬಸವರ ವಿಚಾರಗಳಿಂದ ಸಂಕಲನದ ಬಹುತೇಕ ಕವಿತೆಗಳು ಆಪ್ತವಾಗಿವೆ. ಒಳಮನಸ್ಸಿನ ಭಾವ ತುಡಿತಗಳಿಗೆ ದನಿಯಾಗಿವೆ. ಸಂಸಾರ ಜೀವನದಲ್ಲಿ ಅನುಭವಿಸಿದ ಸ್ನೇಹ,ಪ್ರೀತಿ, ದಾಂಪತ್ಯ, ಸಂತೋಷ, ದುಃಖ, ಸಾವು, ಮೈತ್ರಿ, ಕನಸು,ಬದುಕು, ಜಾಗೃತಿ, ಕೃಷಿ, ಜನಜೀವನ, ವಾಸ್ತವತೆ ಹಲವು ಬಗೆಯ ಭಾವಗಳಿಗೆ ಕನ್ನಡಿಯಾಗಿವೆ. ತನ್ಮಯತೆ ಅವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುತ್ತವೆ.

ಭಾವನೆಗಳೊಂದಿಗೆ ಭಾಷೆಯೊಂದಿಗೆ ತಾನು ಕಟ್ಟಿಕೊಂಡ ಸೇತುವೆಯ ಭರವಸೆ ಮೂಡಿಸುತ್ತದೆ. ಕಲಾತ್ಮಕತೆ, ಸೃಜನ ಶೀಲತೆ ಶೈಲಿಗಳಿಗೆ ಜೋತು ಬೀಳದೆ ಸಾಮಾಜಿಕ ಎಚ್ಚರದ ಬಹು ಬೆಲೆಯುಳ್ಳ ಬರವಣಿಗೆ ಕೊಟ್ಟಿರುವ ಕವಯತ್ರಿ, ಕಾವ್ಯದ ಬಹುಮಖತೆಯೆಡೆಗೆ ಸಾಗುವ ದಾರಿಯನ್ನು ಇಲ್ಲಿನ ಹಲವಾರು ಕವಿತೆಗಳಲ್ಲಿ ಕಾಣಿಸಿದ್ದಾರೆ.

ವ್ಯಕ್ತಿಗತ ಅನುಭವದ ಜೊತೆ ಜೊತೆಗೆ ಸಾಮಾಜಿಕ ಅನುಭವವನ್ನೂ ಸಂಕರಿಸಿ, ಬದುಕಿನ ಅನುಭವವನ್ನು ಕವಿತೆ ಕಟ್ಟುವಿಕೆ ಮೂಲಕ ಟೀಕಿಸುತ್ತಾರೆ. ಕಾವ್ಯ ರಚನೆಯೊಂದು ಕಲೆ, ಧ್ಯಾನಸ್ಥಿತಿ. ತಪಸ್ಸು. ವಿನೂತನ ಭಾವಗಳು ಮನದಾಳದಲ್ಲಿ ಅರಳುವಾಗ ಅವುಗಳನ್ನು ಒಂದೆಡೆ ಪೋಣಿಸಿ ಕವಿತೆಯಾಗಿಸುವ ಕ್ರಿಯೆ ಅದ್ಭುತವಾದದು. ಈ ನವುರು ಭಾವನೆಯನ್ನೂ ಕವಿತೆಯಾಗಿಸುವಲ್ಲಿ ಕವಯತ್ರಿ ಯಶಸ್ವಿಯಾಗಿದ್ದಾರೆ.

ಕವಯತ್ರಿಗೆ ಇಲ್ಲಿ ಕವಿತೆ ಒಲಿದಿದ್ದಾಳೆ. ಜೀವನ ಪ್ರಸಂಗಗಳನ್ನು ಕಾವ್ಯವಾಗಿಸುವ ಕಲೆ ಸರಾಗವಾಗಿದೆ. ಹೀಗೇ ನಾಗರತ್ನಾರವರ ಕವಿತೆಗಳು ತಮ್ಮ ತಮ್ಮ ವಲಯದಲ್ಲಿ ತಮ್ಮದೇ ಆದ ಭಾವ ಸಿಂಚನ ಗೈದಿವೆ. ವೈವಿಧ್ಯಮಯ ವಿಷಯಗಳು ಕವಿತೆಗೆ ವಸ್ತುವಾಗಿವೆ. ಈ ಎಲ್ಲಾ ಹಿನ್ನಲೆಯನ್ನು ಗಮನಿಸಿದಾಗ ಸಾಹಿತ್ಯ ವಲಯದಲ್ಲಿ ಕವಿಗೆ ಉಜ್ವಲ ಭವಿಷ್ಯವಿದೆ ಎನ್ನಬಹುದು.

ಪತ್ರಕರ್ತ, ಲೇಖಕ ಸಿ.ಶಿವಾನಂದರ ಆಶಯ ನುಡಿ, ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನ ಡಾ.ಅಶೋಕ ನರೋಡೆ ರವರು ಮುನ್ನುಡಿ ಹಾಗೂ ಲಲಿತಾ.ಕೆ.ಹೊಸಪ್ಯಾಟಿ ರವರು ಬೆನ್ನುಡಿ ಬರೆದ ಈ ಕವನ ಸಂಕಲನದಲ್ಲಿ ಒಟ್ಟು 51 ಕವಿತೆಗಳಿವೆ. ನಾಗರತ್ನಾರವರ ಪ್ರಥಮ ಕವನ ಸಂಕಲನ ‘ನನ್ನೊಡೆಯ ಬುದ್ಧಪ್ರಿಯಾ’, ಹುನುಗುಂದದ ಅಶೋಕ ಪ್ರಕಾಶನದ ಮೂಲಕ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಹೃದಯರ ಮನದಂಗಳಕ್ಕೆ ಕಿಲಕಿಲನೆ ನಗುನಗುತ್ತಾ ಬುದ್ಧಪ್ರಿಯನ್ನಾಗಿಸಲು ಬಂದಿದೆ.

ತೊದಲ್ನುಡಿಯ ಕಂದನ ಸವಿ ಮಾತಿನ ಲಲ್ಲೆಯ ಮಾತುಗಳು ಮನಕೆ ಮುದಗೊಳಿಸುವಂತೆ ಈ ಸಂಕಲನವು ಓದುಗ ವಲಯವನ್ನು ಮುದಗೊಳಿಸುತ್ತದೆ ಎಂಬ ಭರವಸೆ ನನಗಿದೆ. ನಾಗರತ್ನಾರವರ ಪ್ರಥಮದ ಸಂಭ್ರಮ, ಪುಳಕ, ಖುಷಿಯೊಂದಿಗೆ ನಾವು ಜೊತೆಯಾಗೋಣ ಅಲ್ಲವೇ…! ಮುಂದಿನ ಮುಂಬೆಳಕಿನಲ್ಲಿ ನಾಗರತ್ನಾರವರ ಕಾವ್ಯದೆತ್ತರ ಇನ್ನಷ್ಟು ಎತ್ತರವಾಗಿ ಬೆಳೆಯಲಿ. ಅವರೆದೆಗೆ ಬಿದ್ದ ಅಕ್ಷರವೆಲ್ಲ ಕಾವ್ಯ ಕುಸುಮಗಳಾಗಿ ಅರಳಲಿ ಎಂದು ಹಾರೈಸೋಣ…

‍ಲೇಖಕರು Admin

January 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: