ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಘಾಟ್ ಒಡಲೊಳಗಿಂದ…

ನಾ ದಿವಾಕರ್


ಸಂತಾಪ ಶ್ರದ್ದಾಂಜಲಿ ಶೋಕಗೀತೆ
ಭಕ್ತಿಪೂರಿತ ಪ್ರಾರ್ಥನೆ
ಎಲ್ಲವೂ ಮೊಳಗುತ್ತವೆ ರಾಜಘಾಟದ
ಒಡಲಿನಲಿ ಮೃತ ಮಹಾತ್ಮನ ಮಡಿಲಿನಲಿ ;
ಹಾರ ತುರಾಯಿ ಪುಷ್ಪಗುಚ್ಚಗಳು
ವಿಜೃಂಭಿಸುತ್ತವೆ ಅಮೃತಶಿಲೆಯ
ಸೆರಗಿನಲಿ ಗರ್ಭದಲ್ಲಿನ
ಜೀವಾತ್ಮವ ಮರೆತು
ಭಾವ ಮೆರವಣಿಗೆಯಲಿ !
 
ಆತ್ಮಕ್ಕೆ ಸಾವಿಲ್ಲ
ಜೀವವೂ ಇಲ್ಲ ಅಲ್ಪ-ಮಹಾನ್ಗಳ
ಪರಿವೆಯಿಲ್ಲ ; ಜೀವಗಳಿಗೆ
ಆತ್ಮವಿದೆ ಆಂತರ್ಯದಲ್ಲಿ
ಒಡಲಾಳದಲ್ಲಿ
ಇತಿಹಾಸದ ಸ್ಮೃತಿಯಲ್ಲಿ ;
ನಿಸ್ಪೃಹ ಜೀವಗಳಲ್ಲಿ
ದೈವತ್ವವನು ಕಂಡ ಮಹಾನ್
ಆತ್ಮವೊಂದು ಉಸಿರಾಡುತಿದೆ
ರಾಜಘಾಟಿನಲ್ಲಿ ನೆನಪಿನ
ಸರಳುಗಳ ನಡುವೆ !
 
ಶೋಷಿತರ ಅಳಲು
ದಮನಿತರ ಆಕ್ರಂದನದ ಕೊಳಲು
ಮಾತೆಯ ಮಡಿಲಲಿ
ಮಾರ್ದನಿಸಿದಾಗ ನುಡಿದುದೊಂದೇ
ದನಿ ಶಾಂತಿ ಅಹಿಂಸೆಯ
ಗಣಿ ; ತನುಮನಗಳನರ್ಪಿಸಿದ
ಸರಳ ಮೂರ್ತಿಯ
ತನುವ ಭೇಧಿಸಿದ ಮದ್ದು
ಸದ್ದಡಗಿಸಲಿಲ್ಲ
ತತ್ವಗಳ ಹುಟ್ಟಡಗಿಸಿತು !
 
ಅಜಾತ ಶತ್ರುವಿಗೆ ಮಿತ್ರರೇ
ಶತ್ರುಗಳಲ್ಲವೇ ?
ಎತ್ತ ಹೊರಳಿದರೇನು
ಎನಿತು ನರಳಿದರೇನು
ಜೀವ ತೊರೆದ ಆತ್ಮ
ಚಿರನಿದ್ರೆಯಲಿ ಅಮರ ;
ಮಾನಸ ಪುತ್ರರೋ
ಔರಸ ಪುತ್ರರೋ
ದನಿಯಡಗಿಸಿ ಮರೆಯಾಗಿಹರು
ಮಾತೆಯ ಗರ್ಭವ ಕೊರೆದು !
 
ದೈವತ್ವದೆಡೆ ಸಾಗಿರುವ
ಚೇತನಕೆ ವೈಭವದ
ಚರಮಗೀತೆ
ಗುನುಗುನಿಸಲಾದೀತೇ ?
ಮುಚ್ಚಿದ ಕಂಗಳು ತೆರೆದ
ಹೃದಯ ಕರಗಿದ ಭಾವ
ನಲುಗಿದ ಜೀವ
ಕಮರುತಿದೆ ಶಿಲೆಯ
ಪಂಜರದೊಳು !
 

‍ಲೇಖಕರು G

30 January, 2015

3 Comments

  1. ashwini rao.k.n.

    Kavithe chennaagide saar..

  2. manjula

    Tumba chennagide – manada kannadiyantide

  3. Anonymous

    wonderful

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading