’ಸಾವನ್ನ ಪ್ರಕಾಶನ’ದಿಂದ ಜೋಗಿ ಪುಸ್ತಕ

’ಸಾವನ್ನ ಪ್ರಕಾಶನ’ದಿಂದ ಜೋಗಿಯವರ ಹೊಸ ಪುಸ್ತಕ ಬರ್ತಾ ಇದೆ

ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ

ಪುಸ್ತಕದ ಮುಖಪುಟ ಮತ್ತು ಮುನ್ನುಡಿ ’ಅವಧಿ’ ಓದುಗರಿಗಾಗಿ

ದಯವಿಟ್ಟು ಈ ಪುಸ್ತಕ ಓದಬೇಡಿ

ಇದು ನನ್ನ ವಿನಂತಿ. ಹೀಗೆ ನಿಮ್ಮಲ್ಲಿ ವಿನಂತಿಸಿಕೊಳ್ಳಲು ಕಾರಣಗಳಿವೆ. ನನಗೆ ನಿಮ್ಮ ಜೊತೆ ತುಂಬ ಹೊತ್ತು ಮಾತಾಡುವ ಆಸೆ. ನಿಮಗೆ ಕತೆ ಹೇಳುವ ಆಸೆ. ನಿಮ್ಮ ಹಾಗೆ ಇದ್ದ ನನ್ನ ಅನುಭವಗಳನ್ನು ಹಂಚಿಕೊಳ್ಳುವ ಆಸೆ. ಒಂದು ವಯಸ್ಸಿನಲ್ಲಿ ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾಗುತ್ತದೆ. ಸಂಜೆ ಮಧ್ಯಾಹ್ನ ಮುಂಜಾನೆಗಳು ಭಾರವಾದಂತೆ ಅನ್ನಿಸುತ್ತವೆ. ಹೀಗೇ ಬದುಕಬೇಕಾ, ಇದರಿಂದ ಬಿಡುಗಡೆ ಇದೆಯಾ ಅಂತ ಅನ್ನಿಸತೊಡಗುತ್ತದೆ.
ಅಂಥ ಹೊತ್ತಲ್ಲಿ ನಾನು ಪುಸ್ತಕಗಳ ಮೊರೆ ಹೋದೆ. ಪತ್ತೇದಾರಿ ಕಾದಂಬರಿಗಳಿಂದ ಪ್ರೇಮಕಾದಂಬರಿಗಳಿಗೆ ಪ್ರೇಮಕಾದಂಬರಿಗಳಿಂದ ಥ್ರಿಲ್ಲರುಗಳಿಗೆ ವರ್ಗಾಂತರ ಹೊಂದುತ್ತಾ ಬಂದೆ. ಕೊನೆಗೆ ಬೇರೆಯೇ ಥರದ ಪುಸ್ತಕಗಳನ್ನು ಓದಲು ಆರಂಭಿಸಿದೆ. ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ.
ನೀವು ಓದುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ. ಓದುತ್ತೀರಿ ಎಂದು ನಂಬಿಕೊಂಡೇ ಬರೆಯುತ್ತೇನೆ. ಯಾರೋ ಪ್ರೇಮಿಗಳು ಬಂದು ಕೊಂಡುಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಕಲಾವಿದೆಯೊಬ್ಬಳು ಚೆಂದದ ಗ್ರೀಟಿಂಗು ಕಾರ್ಡುಗಳನ್ನು ತಯಾರು ಮಾಡುವ ಹಾಗೆ, ಬರೆಯುವುದನ್ನೇ ವೃತ್ತಿಯಾಗಿಸಿಕೊಂಡ ನಮ್ಮಂಥವರು ಬರೆಯುತ್ತಲೇ ಹೋಗುತ್ತೇವೆ. ನಿಮಗೆ ಅವು ಇಷ್ಚವಾದರೆ ಓದುತ್ತೀರಿ, ಇಲ್ಲವಾದರೆ, ಕಲ್ಲಿಗೊಂದು ಹೂವಿಟ್ಟು ಮುಂದೆ ಹೋಗುತ್ತೀರಿ.
ಒಂದೇ ಒಂದು ವಿನಂತಿ:
ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.
ಈ ಕೃತಿ ನಿಮಗಾಗಿ ಅಲ್ಲ, ನಿಮ್ಮ ಸಂತೋಷಗಳು ಬೇರೆಯೇ ಇವೆ ಎಂದು ನನಗೂ ಗೊತ್ತು. ನೀವು ಅದರಲ್ಲೇ ಸಂತೋಷಪಟ್ಟುಕೊಂಡಿರಿ. ಆದರೆ, ಅದರಿಂದಾಚೆಗೂ ಸಂತೋಷ ಹುಡುಕುವ ಅಸಂಖ್ಯಾತರಿದ್ದಾರೆ. ಈಗಷ್ಟೇ ಓದಲು ಆರಂಭಿಸುವ ಮಿತ್ರರಿದ್ದಾರೆ. ನಾನು ಏನು ಓದಬೇಕು ಅಂತ ಕೇಳುವ ತರುಣ ತರುಣಿಯರಿದ್ದಾರೆ. ಓದುವ ಹುಮ್ಮಸ್ಸು, ಹುರುಪು ತುಂಬುವಂಥ ಪುಸ್ತಕಗಳು ಬೇಕು ಎಂದು ಕೇಳುವವರಿದ್ದಾರೆ.
ಓದಿನ ರುಚಿ ಬಲ್ಲವರಿಗಾಗಿ ಕೃತಿ ಬರೆಯುವುದು ಸುಲಭ. ಓದಲು ಶುರುಮಾಡಬೇಕು ಅಂದುಕೊಂಡಿರುವ ಗೆಳೆಯರಿಗೋಸ್ಕರ ಬರೆಯುವುದು ಅನಿವಾರ್ಯ ಕರ್ಮ. ಈ ಪುಸ್ತಕ ಈಗಷ್ಟೇ ಓದು ಆರಂಭಿಸುತ್ತಿರುವ, ಮತ್ತಷ್ಟು ಓದಬೇಕು ಎಂದು ಆಸೆಪಡುತ್ತಿರುವ, ಓದದೇ ಜೀವನದ ಬಹುಮುಖ್ಯ ಸಂತೋಷವನ್ನು ಕಳಕೊಂಡಿದ್ದೇನೆ ಎಂದುಕೊಂಡಿರುವ ಅಕ್ಷರಪ್ರೇಮಿಗಳಿಗೋಸ್ಕರ. ಈ ಮೊದಲ ಹೆಜ್ಜೆ ನಿಮ್ಮನ್ನು ಮತ್ತಷ್ಟು ಗಾಢವಾದ, ಕನ್ನಡ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನು ಓದುವುದಕ್ಕೆ ಪ್ರೇರಣೆಯಾಗುತ್ತದೆ ಎಂಬುದು ನನ್ನ ನಂಬಿಕೆ.
ನಿಮ್ಮ ಓದು ಸರಾಗವಾಗಲಿ. ಪ್ರೇಮದಂತೆ ಅದು ಫಲಿಸಲಿ. ಅಮಲಿನಂತೆ ಅದು ಓಲೈಸಲಿ. ಮುಂಜಾವದ ನಿದ್ರೆಯಂತೆ ನಿಮ್ಮನ್ನು ಮುದಗೊಳಿಸಲಿ. ಹ್ಯಾಪಿ ರೀಡಿಂಗ್.
 

‍ಲೇಖಕರು G

January 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಅದೆಂಥಾ ಪುಸ್ತಕವೋ ಏನು ಕತೆಯೋ ಒಂದ್ಸಲ ನೋಡೇ ಬಿಡ್ತೀನಿ ಬೇಗ್ ಕೊಡಿ.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಬಹಳ ಸರಿಯಾದ ಮಾತು, ಮಹಾನ್ ಚುರುಕಿನ ಇಂದಿನ ನವಯುವ ಸಮೂಹವನ್ನು ಕನ್ನಡದಂಗಡಿಗೇ ಬರಬೇಕೆನ್ನುವಂತೆ ಮಾಡುವುದೇನೂ ಸುಲಭದ ಮಾತಲ್ಲ. ಕನ್ನಡ ಲೇಖಕರ ಮುಂದಿರುವ ಸವಾಲ್ ಇದು. ಜೋಗಿಯಂಥವರು ಇದಕ್ಕೊಂದು ಮಾರ್ಗ ಹುಡುಕುತ್ತಾರೆಂದರೆ ಅದು ಯಶಸ್ವಿಯಾಗಲಿ ಅಂಥ ಒಳಗೊಳಗೆ ಕೈ ಮುಗಿಯದೆ ಅನ್ಯ ಮಾರ್ಗವಿಲ್ಲ.

    ಪ್ರತಿಕ್ರಿಯೆ
  3. RAMASWAMY D S

    Interesting lines curious about the book. Jogi ಬೆಳಗೊಳದ ಸಾಹಿತ್ಯ ಸಮ್ಮೇಳನಕ್ಕೆ ಹಾರ್ದಿಕ ಸ್ವಾಗತ.

    ಪ್ರತಿಕ್ರಿಯೆ
  4. ಅಮರದೀಪ್.ಪಿ.ಎಸ್.

    ಸರ್, ನಾನು ನಾಲ್ಕೂ ಪ್ರಕಾರದಿಂದ ದೂರವೇ….ಪುಸ್ತಕ ಓದೇ ಓದುತ್ತೇನೆ……

    ಪ್ರತಿಕ್ರಿಯೆ
  5. M A Sriranga

    Life is beautiful and jogi’s books are wonderful. I have already read about six books of Jogi. I am waiting for this new book in book shops.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: